Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಮಗಳ ಮನದ ಹಿತ್ತಿಲಿಗೆ ಕಳ್ಳ ಬೆಳದಿಂಗಳು ಬಂದು ಬಿದ್ದಾಗ

ನನ್ನ ಇಬ್ಬರೂ ಹೆಣ್ಣು ಮಕ್ಕಳಿಗೆ ನಾನು ತುಂಬ ಹಿಂದೆ ಹೇಳಿದ್ದೆ : ನೀವೀಗ ದೊಡ್ಡವರಾಗತೊಡಗಿದ್ದೀರಿ. ಅದರರ್ಥ, ದೊಡ್ಡವರಾಗಿ ಬಿಟ್ಟಿದ್ದೀರಿ ಅಂತ ಅಲ್ಲ. ದೊಡ್ಡವರಾಗತೊಡಗುವ ಮತ್ತು ಪ್ರೌಢರಾಗಿ ಬಿಡುವ ನಡುವಿನ ಅಂತರ ಬರೀ ಎರಡು ವರ್ಷದ್ದಷ್ಟಾಗಿರುತ್ತದೆ. ಆದರೆ ನೂರು ವರ್ಷದ ತುಂಬು ಜೀವನದಲ್ಲಿ ಅತ್ಯಂತ ಸುನೀತ, ಆದರೆ ಆತಂಕಕಾರಿಯಾದ, ಮಧುರವಾದ, ಹೊಸ ಬದುಕಿನತ್ತ ಕಣ್ತೆರೆಯುವ ಮಹಾ ದಿವ್ಯಕಾಲ ಎಂದರೆ ಈ ಎರಡು ವರ್ಷಗಳದ್ದು : ನೀವು ಇಡೀ ಜೀವನವನ್ನು ಏನು ಮಾಡಿಕೊಳ್ಳ ಬಯಸುತ್ತೀರಿ, ಏನು ಮಾಡುತ್ತೀರಿ ಮತ್ತು ಬದುಕನ್ನು ಹೇಗೆ ನಿಭಾಯಿಸುತ್ತೀರಿ ಎಂಬುದಕ್ಕೆ ಈ ಎರಡು ವರ್ಷಗಳು ಮುನ್ನುಡಿಯಾಗುತ್ತವೆ. ಹೀಗಾಗಿ ಈ ಎರಡು ವರ್ಷಗಳಲ್ಲಿ ಇಡುವ ಪ್ರತಿ ಹೆಜ್ಜೆಯೂ ತುಂಬ ಎಚ್ಚರಿಕೆಯಿಂದ ಇಡಬೇಕು.

ಅಂದ ಹಾಗೆ, ಇನ್ನೊಂದು ವಿಷಯ. ನಿಮಗಿದು ಪ್ರೀತಿ ಪ್ರೇಮಕ್ಕೆ ಬೀಳುವ ವಯಸ್ಸು. But don't be in a hurry. ನೋಡಿದ ತಕ್ಷಣ ಕೆಲವರು ಇಷ್ಟವಾಗುತ್ತಾರೆ. ಹಾಗಂತ, ತಕ್ಷಣ ನಿಮ್ಮ ಇಷ್ಟ, ಬಯಕೆ, ನಿಮ್ಮ crush, ಅವರೆಡೆಗೆ ಮನಸ್ಸು ವಾಲುತ್ತಿದೆಯೆಂಬ ಸೂಚನೆ- ಇವ್ಯಾವುಗಳನ್ನೂ ವ್ಯಕ್ತ ಪಡಿಸಬೇಡಿ. ಪ್ರೀತಿ ಕೂಡ ಒಮ್ಮೆಲೇ ಘಟಿಸುವಂತಹುದಲ್ಲ. ಅದು ಮನಸ್ಸಿನಲ್ಲೇ ಮಾಗಬೇಕು. ಪಳಗಬೇಕು. ಕಾಯಿ ತಂದು ಅಡ ಹಾಕಿ, ಹುಲ್ಲಿನಲ್ಲಿ ಅಡಗಿಸಿಡುತ್ತೀವಲ್ಲ? ಹಾಗೆ ಪ್ರೀತಿಯೆಂಬ ಭಾವವನ್ನು ಕೂಡ ಮನದ ಹುಲ್ಲ ಮರೆಯಲ್ಲಿ ಅಡಗಿಸಿಟ್ಟುಕೊಂಡು, ಅದು ಮಾಗಿದೆ ಎಂಬುದನ್ನು ಖಚಿತ ಪಡಿಸಿಕೊಂಡ ನಂತರವೇ ಅದನ್ನು ವ್ಯಕ್ತಪಡಿಸಬೇಕು. ಈ ತೆರನಾಗಿ ಮಾಗಿದ ಪ್ರೀತಿಯನ್ನು ವ್ಯಕ್ತಪಡಿಸುವ ಹೊತ್ತಿಗೆ ಆ ಆತಂಕಕಾರಿ, ಮಧುರ ಮತ್ತು ಬದುಕಿನ foundationನಂತಹ ಎರಡು ವರ್ಷಗಳು ಕಳೆದು ನಿಮ್ಮ ಮನಸು ಪ್ರೌಢಗೊಂಡಿರುತ್ತದೆ. ಆನಂತರ ನೀವು ಏನೇ ಮಾಡಿದರೂ ಅದಕ್ಕೆ ನಿಮ್ಮ ಬುದ್ಧಿ, ನಿಮ್ಮ ಪ್ರಜ್ಞೆ ಮತ್ತು ನಿಮ್ಮ ಕ್ಯಾರೆಕ್ಟರ್ ಸಾಕ್ಷಿಗಳಾಗುತ್ತವೆ. ನಿಮ್ಮ ಪ್ರತಿಕ್ರಿಯೆಗೂ ಅವು ಜವಾಬ್ದಾರಿಯುತವಾಗಿರುತ್ತವೆ.

ಮೂರನೆಯ ಮಾತು : My dear kids... ನೀವು ಏನನ್ನೇ ಮಾಡಿರಿ. ಅದು ನನಗೆ ಮೊದಲು ಗೊತ್ತಾಗಬೇಕು. permission ತೆಗೆದುಕೊಂಡು ಮಾಡಿದರೆ ಒಳ್ಳೆಯದೇ. ಅದಾಗದಿದ್ದರೆ, ಏನನ್ನೇ ಮಾಡಿದರೂ ಅದನ್ನು ಮೊದಲು ಬಂದು ‘ನನಗೆ’ ಹೇಳಿ. ಮತ್ಯಾರದೋ ಮೂಲಕ ನಿಮ್ಮ ಬಗ್ಗೆ ನಾನು ‘ಹಾಗಂತೆ ಹೀಗಂತೆ’ ಅಂತ ಕೇಳಿಸಿಕೊಳ್ಳಲು ಇಷ್ಟ ಪಡುವುದಿಲ್ಲ. I will be hurt. “ಆ ವಿಷಯವಾ? ಅದು ನನಗೆ ಗೊತ್ತು ಬಿಡಿ ಎಂದು ನಿಮ್ಮನ್ನು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ನಾನಿರಬೇಕು" ಎಂದು ಹೇಳಿದ್ದೆ.
I think I was correct.

ನನ್ನ ಮಕ್ಕಳೂ ಅದರಂತೆಯೇ ನಡೆದುಕೊಂಡರು. ಚಿಕ್ಕ ಪುಟ್ಟ ತುಂಟತನಗಳಿದ್ದೇ ಇದ್ದವು. ಅವುಗಳನ್ನು ತಿದ್ದುವ ಹೊಣೆ ಪ್ರತಿ ತಾಯಂದಿರಿಗೂ ಇರುತ್ತದೆ. ನನ್ನ ಮನೆಯಲ್ಲಿ ಆದದ್ದೂ ಅದೇ. ಮದ್ರಾಸಿನಲ್ಲಿ, ಏಷಿಯಾದ ಅತ್ಯುತ್ತಮ ಪತ್ರಿಕೋದ್ಯಮದ ಕಾಲೇಜಿನಲ್ಲಿ ಓದಿ ಅಲ್ಲಿ ರ‍್ಯಾಂಕೂ ಪಡೆದ ನನ್ನ ಹಿರಿಯ ಮಗಳು ಚೇತನಾ, ತನ್ನ ರಿಜಲ್ಟ್ ಬಂದ ದಿನ ಕಳುಹಿಸಿದ e-mail ನೋಡಿ ನಿಜಕ್ಕೂ ಭಾವುಕತೆಯಿಂದ ಉಮ್ಮಳಿಸಿ ಅತ್ತುಬಿಟ್ಟೆ. ಅಷ್ಟು ಪ್ರೌಢವಾಗಿ ಅವಳು ಬರೆಯುತ್ತಾಳೆ ಅಂತ ಖಂಡಿತ ಗೊತ್ತಿರಲಿಲ್ಲ. ಅವಳು ತನ್ನ ಐದು ವರ್ಷಗಳ ಹಿಂದಿನ ಪ್ರೀತಿಯ ಬಗ್ಗೆ ಬರೆದಿದ್ದಳು. ನೀನು ಹೇಳಿದಂತೆ ಇಂಥದೊಂದು ಪ್ರಬುದ್ಧತೆ ಬರುವ ತನಕ ಈ ವಿಷಯದಲ್ಲಿ ಮುಂದುವರೆಯಬಾರದು, ಯಾರೊಂದಿಗೂ ಈ ಬಗ್ಗೆ ಮಾತನಾಡಬಾರದು, ನಾನು ಪ್ರೀತಿಸಿದ ಹುಡುಗನಲ್ಲೂ ಪ್ರಸ್ತಾಪಿಸಬಾರದು, ಕಮಿಟ್ ಆಗಬಾರದು ಎಂದು ಸುಮ್ಮನಿದ್ದೆ. ಈಗ, I think I am grown up, ಏನು ಮಾಡಲಿ ಅಂತ ಕೇಳಿದ್ದಳು.
“Love your honesty chinni, go ahead" ಅಂತ ಉತ್ತರ ಬರೆದೆ. ಅವಳು ಮತ್ತು ಅವಳ ಗಂಡ ನೆಮ್ಮದಿಯಾಗಿದ್ದಾರೆ. ಇಬ್ಬರು ಮಕ್ಕಳು.

ಇದನ್ನೆಲ್ಲ ಯಾಕೆ ಬರೆದೆ ಅಂದರೆ, ಮೊದಲು ‘ಹುಚ್ಚು ಖೋಡಿ ಮನಸು, ಹದಿನಾರರ ವಯಸು...’ ಅಂತ ಹಾಡುತ್ತಿದ್ದೆವು. ಈಗ ಅದು ತುಂಬ ಹಳೇ ಫ್ಯಾಷನ್ನು. ಹೆಣ್ಣು ಮಕ್ಕಳು ತುಂಬ ಬೇಗ ಮೈನೆರೆಯುತ್ತಾರೆ. ಅದಕ್ಕೆ ಕಾರಣ ಆಹಾರ, ವ್ಯಾಯಾಮವಿಲ್ಲದಿರುವಿಕೆ, ವಿಪರೀತ ಸುಖ, ಕೆಲವೊಮ್ಮೆ ಇದೆಲ್ಲಕ್ಕಿಂತ ವಿಭಿನ್ನವಾದ ಕಾರಣಗಳು ಈ ‘ಅಪ್ರಾಪ್ತ’ ಮೈನೆರೆಯುವಿಕೆಗೆ ಕಾರಣವಾಗುತ್ತದೆ. ಆದರೆ ಮನಸು ಬೆಳೆದಿರುವುದಿಲ್ಲ. ಸಾವಿರಾರು ಹೆಣ್ಣು ಮಕ್ಕಳು ಓದುವ ನಮ್ಮ ಶಾಲೆಯಲ್ಲಿ ಕೆಲವು ಹಿರಿಯ ಶಿಕ್ಷಕಿಯರು ಆ ಮಕ್ಕಳಿಗೆ ತಕ್ಕ ಮಟ್ಟಿಗಿನ, ಎಲ್ಲೂ ಅನವಶ್ಯಕ ಕುತೂಹಲ ಅಥವಾ ಭಯ ಮೂಡಿಸದ ರೀತಿಯಲ್ಲಿ ಲೈಂಗಿಕ ಶಿಕ್ಷಣ ನೀಡುತ್ತಾರೆ. ಇದನ್ನೊಂದು ವಿಶೇಷ ತರಬೇತಿ ಅಂತ ಘೋಷಿಸುವುದಿಲ್ಲ. ಮನೆಯಲ್ಲಿ ತಾಯಂದಿರು ಮಾಡುವುದನ್ನೇ ಇನ್ನಷ್ಟು ಕ್ರಮಬದ್ಧವಾಗಿ ನಮ್ಮ ಶಿಕ್ಷಕಿಯರು ಮಾಡುತ್ತಾರೆ. ಇದನ್ನು ಆರನೇ ಕ್ಲಾಸಿನಿಂದಲೇ ಮಾಡಲಾರಂಭಿಸುತ್ತಾರೆ. ಏಕೆಂದರೆ, ಆರನೇ ಕ್ಲಾಸಿಗೆ ಬರುವ ಹೊತ್ತಿಗೆ ಅನೇಕ ಹೆಣ್ಣು ಮಕ್ಕಳು ಋತುಮತಿಯಾಗಿರುತ್ತಾರೆ.

ಇದರಷ್ಟು ನಾಜೂಕಾದ, ಅಪಾಯಕಾರಿಯೂ ಆದ ಬದುಕಿನ ಹಂತ ಇನ್ನೊಂದಿಲ್ಲ. ಅವರಲ್ಲಿ ಆ ವಯಸ್ಸಿನಲ್ಲಿ ವಿಪರೀತವಾದ ಹಾರ್ಮೋನ್‌ಗಳ ಬಿಡುಗಡೆಯಾಗುತ್ತದೆ. ನಮ್ಮ ಮಕ್ಕಳು ನಮ್ಮ ಕಣ್ಣಿಗೆ ಇನ್ನೂ ಚಿಕ್ಕ ಹುಡುಗಿಯರು ಅನ್ನಿಸುತ್ತಿರುತ್ತಾರೆ. ಆದರೆ ನೆನಪಿರಲಿ, ಅವರ ಮನಸ್ಸಿನ ಹಿತ್ತಿಲೊಳಕ್ಕೆ ಆಗಲೇ ಯೌವ್ವನವೆಂಬುದು ಕಳ್ಳ ಬೆಳದಿಂಗಳಿನಂತೆ ಕಾಲಿಟ್ಟಿರುತ್ತದೆ. ಅವರ ಚಟುವಟಿಕೆಗಳು, ಸ್ನೇಹವಲಯ, ಮನೆಯಲ್ಲಿ ಕಳೆಯುವ ಸಮಯ, ಓದುವ ಪುಸ್ತಕಗಳು, ಇಂಟರ್‌ನೆಟ್‌ನ ಮೇಲೆ ಏನನ್ನು ಸರ್ಫ್ ಮಾಡುತ್ತಿದ್ದಾರೆ ಎಂಬುದು-ಹೀಗೆ ಪ್ರತಿಯೊಂದರಲ್ಲೂ ಚಿಕ್ಕ ಚಿಕ್ಕ ಬದಲಾವಣೆಗಳಾಗುತ್ತಿರುತ್ತವೆ. ಅಂಥ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ. Positive ಆದ ಬದಲಾವಣೆಗಳಿದ್ದರೆ ಗಾಬರಿಯಾಗಿ ಅವರನ್ನು ದಂಡಿಸಬೇಡಿ. ಆದರೆ ಹುಡುಗಿಯ ವರ್ತನೆಯಲ್ಲಿ ಅಪಸವ್ಯ ಎನ್ನಿಸುವಂತಹ ಬದಲಾವಣೆ ಕಂಡು ಬಂದಾಗ, ಆಗಲೂ ವಿಪರೀತವಾಗಿ ದಂಡಿಸದಂತೆ ಸುಮ್ಮನೆ ಅವರ ಮೇಲೆ, ಅವರ ಚಟುವಟಿಕೆಗಳ ಮೇಲೆ ನಿಗಾ ಇಡಿ. “ನೀನು ನೋಡ್ಕೋತೀಯ ಅಂತ ಬಿಟ್ಟು ನನ್ನ ಪಾಡಿಗೆ ನಾನು ದುಡಿಯಲು ಹೋಗ್ತಿದ್ದೆ. ಮಗಳನ್ನು ನೀನೇ ಹಾಳು ಮಾಡಿದೆ" ಅಂತ ಮುಂದೆಂದೋ ಬಯ್ಯುವುದರಲ್ಲಿ ಅರ್ಥವಿಲ್ಲ. ಬದಲಿಗೆ, ಮಗಳೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ನಿಜಕ್ಕೂ ಅಪ್ಪ ನನ್ನನ್ನು ಪ್ರೀತಿಸುತ್ತಾನೆ ಎಂಬ ಭರವಸೆಯನ್ನು ಮಗಳಲ್ಲಿ ಮೂಡಿಸಿರಿ. ಆ ವಯಸ್ಸಿನಲ್ಲಿ ಅವರಿಗೆ ಗಂಡಸಿನ ಸಾಹಚರ್ಯ ಬೇಕಾಗಿರುತ್ತದೆ : sex ಅಲ್ಲ. ಆ ಗಂಡಸು, ಮಗಳ ಪಾಲಿನ ಮೊದಲ hero ನೀವೇ ಆಗಿರಿ. ನಿಮ್ಮ ದಿನಚರಿ ಬದಲಾಯಿಸಿಕೊಂಡು ಮಗಳಿಗೆ ಅಂತಲೇ ಒಂದು ನಿಶ್ಚಿತ ಅವಧಿಯನ್ನು ಎತ್ತಿಡಿ. ಅವಳಿಗೆ ಗೊತ್ತಾಗದಂತೆ ಅವಳ school bag, note books, ಅವಳ ಫೇಸ್‌ಬುಕ್ ಅಕೌಂಟ್ ಇತ್ಯಾದಿಗಳನ್ನು ಆಗೊಮ್ಮೆ ಈಗೊಮ್ಮೆ ಸೋಸುತ್ತಿರಿ. ಮಗಳಿಗೆ ಅನುಮಾನ ಬಾರದಿರಲಿ. ಅವರು ಎಷ್ಟೇ ಬುದ್ಧಿವಂತಿಕೆಯಿಂದ ದಾರಿ ತಪ್ಪಿದರೂ ಅದನ್ನು ಸೂಕ್ಷ್ಮವಾಗಿ ಗಮನಿಸಿ, ಅವರನ್ನು ಕೂಡಿಸಿಕೊಂಡು ಅವರ ತಪ್ಪಿನ ಬಗ್ಗೆ ಮಾತನಾಡುತ್ತಾ, ಅವರು ಮಾಡುತ್ತಿರುವುದು ತಪ್ಪು ಎಂಬ ಸಂಗತಿಯನ್ನು ಮನವರಿಕೆ ಮಾಡಿಕೊಡಿ. ಆ ವಯಸ್ಸಿನಲ್ಲಿ ಕೌನ್ಸೆಲಿಂಗ್‌ನ ಅಗತ್ಯ ತುಂಬ ಇರುತ್ತದೆ. ನಿಮ್ಮ ಕೈಲಿ ಅದನ್ನು ಮಾಡಲಾಗುತ್ತಿಲ್ಲ ಅನ್ನಿಸಿದಾಗ ಸೂಕ್ತ ಮನೋ ವೈದ್ಯರ ಕೈಲಿ ಕೌನ್ಸೆಲ್ ಮಾಡಿಸಿ. ಚಿಕ್ಕವರಿದ್ದಾಗ ಹೆಣ್ಣು ಮಕ್ಕಳು ತಮ್ಮ ಶಿಕ್ಷಕರನ್ನೋ, ದೂರದ ಬಂಧುವನ್ನೋ, ನಿಮ್ಮ ಪರಿಚಿತರನ್ನೋ, ಪಕ್ಕದ ಮನೆಯ ಅಂಕಲ್‌ನನ್ನೋ ವಿಪರೀತ ಹಚ್ಚಿಕೊಂಡಿರುತ್ತಾರೆ. ಈ ಹಚ್ಚಿಕೊಂಡಿರುವಿಕೆ ಒಂದು ಹಂತದ ತನಕ ಸರಿ. ಆದರೆ ಬೆಳೆಯುತ್ತ ಬಂದಂತೆ ಅವರನ್ನು ತಬ್ಬಿಕೊಳ್ಳುವುದು, ಅವರ ಮೇಲೆ ವಾಲಿಕೊಂಡು ಕೂಡುವುದು, ಮಡಿಲಲ್ಲಿ ಕೂಡುವುದು ಮುಂತಾದವುಗಳನ್ನು ತಡೆಯುತ್ತ ಬನ್ನಿ. ಮಗು ಎಂಬ ಕಾರಣಕ್ಕೆ ನಾವು ಅವರಿವರ ಮಕ್ಕಳನ್ನು ಮುದ್ದಿಸಬಹುದು. ನಮಗೆ ಅದರಲ್ಲಿ ದುರುದ್ದೇಶವೂ ಇಲ್ಲದಿರಬಹುದು. ಆದರೆ ಅರಿಯದ ಮಕ್ಕಳಿಗೆ, ಅದರಲ್ಲೂ ಹಾರ್ಮೋನ್ಸ್‌ನ ಧಿಮಿಕಿಟ ಆರಂಭವಾಗಿರುವ ಮಕ್ಕಳಿಗೆ ಅದು wrong signal ಕಳಿಸುವ ಅಪಾಯವಿದೆ.
ಈ ಬಗ್ಗೆ ಎಚ್ಚರವಿರಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 28 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books