Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಇದ್ದುದನ್ನೆಲ್ಲ ಕಳೆದುಕೊಂಡು ಮತ್ತೆ ಎದ್ದು ನಿಂತ ಘಳಿಗೆಗಳ ಬಗ್ಗೆ...

ಪದನುಗೊಂಡ ಮನಸ್ಸಿಗೆ, ಚೇತರಿಸಿಕೊಂಡ ಆರೋಗ್ಯಕ್ಕೆ ಇದೊಂದು booster dose ಬೇಕಾಗಿತ್ತು. ‘ಓ ಮನಸೇ...’ ಬಿಡುಗಡೆ, ಅದರ ದಿವ್ಯ ಪುನರಾರಂಭದ ಬಗ್ಗೆ ನಾನು ಮತ್ತು ಉದಯ ಮರಕಿಣಿ ದಿನಗಟ್ಟಲೆ, ನೂರಾರು ಗಂಟೆಗಳ ಚರ್ಚೆ ನಡೆಸಿ ಅದಕ್ಕೊಂದು ಹೊಸ ರೂಪು, final form ಕೊಡಲು ತೀರ್ಮಾನಿಸಿದ್ದೆವು. ಅದಕ್ಕೊಂದು ಸಮಾರಂಭ ಮಾಡಬೇಕಾ? ಯಾರನ್ನಾದರೂ ಅತಿಥಿಗಳನ್ನಾಗಿ ಕರೆಯಬೇಕಾ ಎಂದೆಲ್ಲ ಅಂದುಕೊಂಡಿದ್ದೆವು. ಅಷ್ಟರಲ್ಲಿ ಎದ್ದು ಕುಳಿತಿತಲ್ಲ ಬಂಗಾರದಂಥ ಹುಡುಗಿ ಆರುಷಿಯ ಆತ್ಮ? ನನ್ನೊಳಗಿನ ಪತ್ರಕರ್ತ, ಲೇಖಕ, ತಂದೆ-ಎಲ್ಲ ಒಟ್ಟಿಗೆ ಜಾಗೃತರಾದರು. ಆರೇಳು ತಿಂಗಳು ನಾನು ಬರಹಗಾರನೇ ಅಲ್ಲವೇನೋ ಎನ್ನಿಸಿ, ನನ್ನ form ಕಳೆದುಕೊಂಡಿದ್ದೆ. ಜನ್ಮತಃ ನನಗೆ ಬಂದಿರುವ ಕಲೆಗಳು ಮೂರು : ಬರವಣಿಗೆ, ಮಾತು, ಭಾವುಕತೆ. ಭಾವುಕತೆಗೆ ಯಾವತ್ತಿಗೂ ತೊಂದರೆಯಾಗಲಿಲ್ಲ. ಅಂಥ ಖಾಯಿಲೆಯಲ್ಲೂ ಯಾರದೋ ನೋವಿಗೆ ಅಳುತ್ತಿದ್ದೆ. ನನಗೆ ಚಿಕಿತ್ಸೆ ನೀಡಿದ ಡಾಕ್ಟರುಗಳೊಂದಿಗೆ, ಆರೈಕೆ ಮಾಡಿದ ದಾದಿಯರೊಂದಿಗೆ ನಗೆಯಾಡುತ್ತಿದ್ದೆ, ರೇಗಿಸುತ್ತಿದ್ದೆ, ಜಗಳವಾಡುತ್ತಿದ್ದೆ. ಕೆಲವೊಮ್ಮೆ ನನ್ನದೇ ಮನಸ್ಸಿನೊಂದಿಗೆ ಪಿಸುಮಾತಿಗಿಳಿದು ಅಂತರ್ಮುಖಿಯಾಗಿ ಹೋಗುತ್ತಿದ್ದೆ. ನನ್ನದೇ ಆದ ವಿಲಕ್ಷಣ silenceನಲ್ಲಿ ಕಣ್ಣೀರಿಡುತ್ತಿದ್ದೆ. ಔಷಧಿಗಳ ಪರಿಣಾಮವೋ ಏನೋ? ಚಿತ್ರವಿಚಿತ್ರದ ಕನಸು ಬೀಳುತ್ತಿದ್ದವು. ಕೆಲವೊಮ್ಮೆ ಎಚ್ಚೆತ್ತ ನಂತರ ಹಾಸಿಗೆಯ ಮೇಲೆ ಎದ್ದು ಕೂತು ಕಣ್ಣು ಬಿಟ್ಟರೆ ಇಡೀ ಕನಸು ಒಂದು ನಾಟಕದಂತೆ ಕಣ್ಣೆದುರು ಘಟಿಸುತ್ತಿತ್ತು. It was really strange.

ಆದರೆ ನನ್ನ ಸುದೀರ್ಘ ಖಾಯಿಲೆ ನನ್ನ ಉಳಿದೆರಡೂ positive ‘ವರ’ಗಳನ್ನು ಕಸಿದುಕೊಂಡು ಬಿಟ್ಟಿತ್ತು. ಅದರ ಬಗ್ಗೆ ನನಗೆ ಭಯ ಶುರುವಾದದ್ದು ನನ್ನ hand writing ನೋಡಿ. ನನ್ನ head writing ಬಗ್ಗೆ ನನಗೆ ಹೆಮ್ಮೆ ಕಡಿಮೆ ಇದೆಯಾದರೂ hand writing ಬಗ್ಗೆ ಇಡೀ ಜಯನಗರ-ಬನಶಂಕರಿಗಳಿಗೆ ಹಂಚಿ ಇನ್ನೂ ಉಳಿಯುವಷ್ಟು ಸೊಕ್ಕಿದೆ. “ರವಿ ಬರೆದದ್ದನ್ನು ಯಾಕೆ compose ಮಾಡ್ತೀರಿ. ಅದನ್ನು ಹಾಗೇ print ಮಾಡಬಹುದು" ಎಂದು ಮೆಚ್ಚುಗೆ ಸೂಚಿಸುತ್ತಿರುತ್ತಾರೆ ಡಾ.ಆನಂದ ಪಾಂಡುರಂಗಿ. ಆದರೆ ನನ್ನhand writing ಎಷ್ಟು ಹದಗೆಟ್ಟಿತು ಅಂದರೆ, ಒಂದು ಸಿಗ್ನೇಚರ್ ಮಾಡಲಿಕ್ಕೂ ಸರಿಯಾಗಿ ಆಗುತ್ತಿರಲಿಲ್ಲ. ಅದು ಕೆಟ್ಟ ತಕ್ಷಣ ನಾನು ಬರೆಯಬಲ್ಲೆ ಎಂಬ ಆತ್ಮವಿಶ್ವಾಸವೇ ಉಡುಗಿ ಹೋದಂತಾಗುತ್ತದೆ. ಹಾಗೆ ಬರಹ ನನ್ನ ಕೈ ಬಿಟ್ಟೇ ಬಿಟ್ಟಿತೇನೋ ಎಂಬ ಭಯಕ್ಕೆ ಬಿದ್ದೆ.
ಎರಡನೆಯದು ಮಾತು. ನನ್ನ ಮಾತು ಅಸ್ಪಷ್ಟವಾದವು. ತೊದಲತೊಡಗಿದೆ. ಊಟ ಮಾಡುವಾಗ ಒಂದು ಊಟ ಮುಗಿಯುವುದರೊಳಗಾಗಿ ನಲವತ್ತು ಐವತ್ತು ಸಲ ನಾಲಗೆ ಕಚ್ಚಿಕೊಳ್ಳುತ್ತಿದ್ದೆ. ಬಾಯ್ತುಂಬ ರಕ್ತ. ದವಡೆಗಳಲ್ಲಿ ಬಾಯಿ ಹುಣ್ಣು. ಡಾಕ್ಟರುಗಳಿಗೆ ಹೇಳಿದರೆ ‘ಆಯ್ತು ಆಯ್ತು’ ಅನ್ನುತ್ತಿದ್ದರೇ ಹೊರತು ಅದಕ್ಕೆ ಔಷಧಿ ಕೊಡುತ್ತಿರಲಿಲ್ಲ. ಏಕೆಂದರೆ ಅವುಗಳಿಗೆ specific ಆದ ಔಷಧಿಯೇ ಇಲ್ಲ. ಇವೆಲ್ಲವೂ ನಿಮ್ಮ ಖಾಯಿಲೆಯ ಪರಿಣಾಮಗಳು. ಇವು ಕೆಲವು ತಿಂಗಳುಗಳಲ್ಲಿ ತಂತಾನೇ ಹೋಗುತ್ತವೆ. Have ಸಹನೆ ಅಂದರು.

ಆ ಮಾತು ನಿಜವೂ ಆಯಿತು. ಮೊದಲು ನನ್ನ ತೊದಲುವಿಕೆ ನಿಂತು ಹೋಗಿ, ಮಾತು ಸ್ಪಷ್ಟವಾದವು. ಆಗಲೇ ನಾನು ‘ಜನಶ್ರೀ’ಗೆ ಕಾಲಿಟ್ಟು ತೆರೆಯ ಮೇಲೆ ಕಾಣಿಸಿಕೊಳ್ಳಲು ನಿರ್ಧರಿಸಿದ್ದು. ಆನಂತರ ನಿಧಾನವಾಗಿ ನನ್ನ ಕೈ ಬರಹ ಪಳಗತೊಡಗಿತು. ನೀವು ನಂಬಲಿಕ್ಕಿಲ್ಲ: ಕೈಲಿ ಪೆನ್ನು ಹಿಡಿದರೆ, ಅದು ‘ಹೌರಾ ಎಕ್ಸ್‌ಪ್ರೆಸ್’ ರೈಲಿನ ವೇಗದಲ್ಲಿ ಓಡುತ್ತದೆ. ಆದರೆ ಕೈ ಬರಹ ಅತಂತ್ರವಾದಾಗ ಅಂಗಡಿಯಿಂದ ಮಕ್ಕಳು ಬರೆಯುವ copy book ತರಿಸಿ ಒಂದೊಂದೇ ಸಾಲು ಬರೆದು ದಿನಗಟ್ಟಲೆ practice ಮಾಡಿ ಕೈ ಬರಹ ಸರಿಪಡಿಸಿಕೊಂಡೆ. ಅಲ್ಲಿಗೆ ಅನ್ನ ದುಡಿಯುವ ಎರಡೂ ಭಿಕ್ಷಾ ಪಾತ್ರೆಗಳೂ ತೂತಿಲ್ಲದೆ, ಶುಭ್ರವಾಗಿ ಕೈಗೆ ಬಂದಂತಾಯಿತು. ಆದರೆ ಮೊದಲಿನಂತೆ ನಾನು ದಿನಕ್ಕೆ ನಿರಂತರವಾಗಿ ಹದಿನೆಂಟು ಗಂಟೆ ಪಟ್ಟಾಗಿ ಕುಳಿತು ಬರೆಯಬಲ್ಲೆ ಎಂಬ ವಿಶ್ವಾಸ ನನ್ನಲ್ಲಿ ಮೂಡಿಸಿದ್ದು ಆರುಷಿ ಹತ್ಯೆ ಕೇಸಿನ ಜಡ್ಜ್‌ಮೆಂಟ್. ಅದ್ಯಾವ ಘಳಿಗೆಯಲ್ಲಿ ಆ ಕುರಿತು ಪುಸ್ತಕ ಬರೆಯಬೇಕು ಎಂದು ನಿರ್ಧರಿಸಿದೆನೋ ಕಾಣೆ : I just started writing. ಮೂರು ದಿನಗಳಲ್ಲಿ ಬರವಣಿಗೆ, ಅದಕ್ಕೂ ಮುಂಚೆ ಎರಡು ಮೂರು ಸಂದರ್ಶನಗಳು ಮತ್ತು ಕೊಂಚ ರಿಸರ್ಚು-ಎಲ್ಲ ಸೇರಿ ಮೂರು ದಿನದಲ್ಲಿ, ದಿನಕ್ಕೆ ತಲಾ ಹದಿನೆಂಟು ಗಂಟೆಯಷ್ಟು ಕೆಲಸ ಮಾಡಿ ಪುಸ್ತಕ ಮುಗಿಸಿ ಮೊನ್ನೆ ಡಿಸೆಂಬರ್ ೧೪ರಂದು BBCಯಲ್ಲಿ ‘ಓ ಮನಸೇ’ ಪಾಕ್ಷಿಕದ ಸಮೇತ ಬಿಡುಗಡೆ ಮಾಡಿಬಿಟ್ಟೆ.

ಎರಡು ದಿನಗಳಲ್ಲಿ ಎಂಬತ್ತೆಂಟು ಸಾವಿರ ರುಪಾಯಿ ಮೌಲ್ಯದ ಪುಸ್ತಕಗಳು ಕೇವಲ ಬಿ.ಬಿ.ಸಿಯಲ್ಲಿ ಮಾರಾಟವಾದವು ಅಂದರೆ ಅದರ ಧರತಿ ಹೇಗಿದ್ದಿರಬಹುದು, ಯೋಚಿಸಿ. ನನಗೆ ಗೊತ್ತು, I am a good pen pusher. ಏನೋ ಮಹತ್ತರವಾದುದನ್ನು ಬರೆಯುತ್ತೇನೆ ಅಂತ ನಾನಂದುಕೊಂಡಿಲ್ಲ. ಆದರೆ ಓದುಗನ ಹೃದಯಕ್ಕೆ ತಾಕುವಂತೆ, ಬುದ್ಧಿಗೆ ‘ಹೌದೆನ್ನಿಸುವಂತೆ’ ಬರೆಯುತ್ತೇನೆ. ಅದಕ್ಕಾಗಿ ಶ್ರಮ ಪಡುತ್ತೇನೆ. ಸಿದ್ಧತೆ, ಟಿಪ್ಪಣಿ, ಅಧ್ಯಯನ, ಮನೋ ಸಿದ್ಧತೆ ಇತ್ಯಾದಿಗಳನ್ನು ಮಾಡಿಕೊಳ್ಳದೆ ನಾನು ಬರೆಯಲು ಕೂಡುವುದಿಲ್ಲ. “ಇವತ್ತು mood ಇಲ್ಲ" ಎಂದು ಹೇಳಿ ಸುಮ್ಮನೆ ಕೂಡುವ ಇತರೆ ಬರಹಗಾರರಿಗೆ ಇರುವಂಥ luxury ನನಗೆ ಇಲ್ಲ. ಬರೆಯಲು ಬೇಕಾದ ವಾತಾವರಣ ಸೃಷ್ಟಿಸಿಕೊಳ್ಳಬಲ್ಲೆ. ನನಗೆ diturb ಆಗದಂತೆ ಕಾಯಲು ನನ್ನ ಸಿಬ್ಬಂದಿಯವರಿದ್ದಾರೆ. ಈಗ time ತಿನ್ನುವ ಅಭ್ಯಾಸಗಳೂ ಇಲ್ಲವಾದ್ದರಿಂದ ಬರವಣಿಗೆ ಎಂಬುದು ಮತ್ತೆ ಎಂದಿನಂತೆ ‘ಹೌರಾ ಎಕ್ಸ್‌ಪ್ರೆಸ್’. ಜೊತೆಯಲ್ಲಿ ನಿವೇದಿತಾ ಇಲ್ಲ ಎಂಬ ಚಡಪಡಿಕೆ ಸದಾ ಕಾಡುತ್ತದೆ. ಆದರೆ ನನ್ನೊಂದಿಗೆ ಹದಿನೆಂಟು ವರ್ಷ ಕಳೆದು, ಈ ಪುಟ್ಟ ಸಾಮ್ರಾಜ್ಯದ ಸಾವಿರ ಇಟ್ಟಿಗೆಗಳ ಪೈಕಿ ಕಡೆಯಪಕ್ಷ ಐನೂರು ಇಟ್ಟಿಗೆಗಳನ್ನು ತಂದಿಟ್ಟ ಹುಡುಗಿಯವಳು. ಈಗ ಸುಖವಾಗಿ ಗಂಡನೊಂದಿಗೆ ಆಂಧ್ರದ ತುದಿಯ ಗೂಡೂರಿನಲ್ಲಿ ಇದ್ದಾಳೆ. ಅದು ಚೆನ್ನೈಗೆ ಹತ್ತಿರವಿರುವ, ಶ್ರೀಹರಿ ಕೋಟಾ ಪಕ್ಕದ ಊರು. ದಂಪತಿಗಳು ಚೆನ್ನಾಗಿದ್ದಾರೆ. ಇರಲಿ, ಎಂಬುದು ನನ್ನ ಆಶಯ. ಅವಳಿಗೆ ಮಕ್ಕಳು ಬೇಡವಂತೆ. ‘ನಂಗೆ ರಾಜಿ ಇದ್ದಾಳೆ. ಅವಳೇ ನನ್ನ ಮಗು. ಅವಳನ್ನು ಚೆನ್ನಾಗಿ ನೋಡಿಕೊಳ್ತೇನೆ’ ಅಂತ ನಿವೇದಿತಾ ಅಂದಾಗ ನನ್ನ ಕಣ್ಣು ಹನಿಗೂಡಿದ್ದವು.
ರಾಜಿ, ನಿವೇದಿತಾಳ ಯಜಮಾನರ ತಂಗಿ, ವಯಸ್ಸು ಮೂವತ್ತರ ಮೇಲಿದೆ. ಬುದ್ಧಿ-ಮನಸ್ಸು ಆರೆಂಟು ವರ್ಷದ ಮಗುವಿನಂತಹುದು. ನನ್ನ ಪ್ರಕಾರ ಅದು ಮಾಂದ್ಯತೆಯೂ ಅಲ್ಲ. ಒಂದು ಹಂತದಲ್ಲಿ ಮಾನಸಿಕ ಸಮಸ್ಯೆ ಉಂಟಾದಾಗ ಸರಿಯಾದ ಚಿಕಿತ್ಸೆ ಮತ್ತು training ದೊರೆಯದಿದ್ದರೆ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆ ನಿಂತು ಹೋಗುತ್ತದೆ. ಆರಂಭದಲ್ಲಿ ಅದು ಗೊತ್ತಾಗುವುದಿಲ್ಲ. ಬೆಳೆಯುತ್ತ ಬೆಳೆಯುತ್ತ ಮಾಂದ್ಯತೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಿವೇದಿತಾ ಆ ಹುಡುಗಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾಳೆಂದರೆ, ಅವಳಿಗೆ ನಾನು ಮಗನಾಗಬಾರದಿತ್ತೆ ಅಂತ ಎಷ್ಟೋ ಸಲ ಅನ್ನಿಸಿದೆ. ಒಂದರ್ಥದಲ್ಲಿ ನಿವಿ ಶುದ್ಧ mother. ನನ್ನನ್ನು ನೋಡಿಕೊಂಡಳು, ನನ್ನ ಮಕ್ಕಳನ್ನೂ ನೋಡಿಕೊಂಡಳು. ತನ್ನ ತಂದೆ ತಾಯಿಯರನ್ನು ಈಗಲೂ ನೋಡಿಕೊಳ್ಳುತ್ತಿದ್ದಾಳೆ. ಅವಳ ಅತಿದೊಡ್ಡ ಹೋರಾಟವೆಂದರೆ, ತನ್ನ ಅಕ್ಕ ಗೀತಾಂಜಲಿಯನ್ನು ಕ್ಯಾನ್ಸರ್‌ನ ಬಾಯಿಂದ ಕಿತ್ತು ತಂದು ಮತ್ತೆ ಅದ್ಭುತವಾಗಿ ಬದುಕುವಂತೆ ಮಾಡಿದ್ದು. ಇವತ್ತು ಗೀತಕ್ಕ (ಆಕೆ ನಮ್ಮೆಲ್ಲರಿಗೂ ಅಕ್ಕ) ತುಂಬ ಆರೋಗ್ಯವಾಗಿ ಓಡಾಡಿಕೊಂಡಿರುವುದು. ಆಕೆಯ ಮಗ ‘ಚಿನ್ನು’ ಹಾಯ್ ಬೆಂಗಳೂರ್! ಹುಟ್ಟಿದಾಗಲೇ ಹುಟ್ಟಿದ್ದು. ಈಗ ಶುದ್ಧ ತಾಳೆಮರ.

ನನಗೆ ಇನ್ನೂ ನೆನಪಿದೆ.
“ರವೀ oncology ಅಂದರೆ ಏನು?" ಅಂತ ನಿವೇದಿತಾ ನನ್ನ ಛೇಂಬರಿಗೆ ಬಂದು ಕೇಳಿದ್ದಳು. ಅವತ್ತು ನಮ್ಮೆಲ್ಲರ ಪಾಲಿಗೆ ಖುಷಿಯ ದಿನ. ‘ಪ್ರಾರ್ಥನಾ ಸ್ಕೂಲ್’ನ registration ಆಗಿತ್ತು. ನಾನು, ನಿವಿ, ಪೂರ್ಣಿಮಾ, ಸೀನ, ಯಶೋಮತಿ-ಎಲ್ಲರೂ ಖುಷಿಯ moodನಲ್ಲಿ ವಿಪರೀತ ನಗುತ್ತ ವಿಜಯ ನಗರದಿಂದ ಗೆಳೆಯರೊಬ್ಬರ ಮದುವೆ attend ಮಾಡಿ ಹಿಂತಿರುಗಿದ್ದೆವು. ಅಂಥದರಲ್ಲಿ ನಿವಿ ಬಂದು ಆ ಪ್ರಶ್ನೆ ಕೇಳಿದಾಗ,
“ಯಾಕೆ ನಿವಿ? oncology ಅಂದರೆ ಕ್ಯಾನ್ಸರ್ ಅಥವಾ ಟ್ಯೂಮರ್ ತರಹದ ರೋಗಗಳಿಗೆ ಸಂಬಂಧಿಸಿದ ಶಬ್ದ. ಅದರ ಅರ್ಥ ನಿಂಗೇಕೆ ಬೇಕಿತ್ತು?" ಅಂದೆ. ನಿವಿಯ ಕನ್ನಡಕದ ಹಿಂದಿನ ಕಣ್ಣು ತಕ್ಷಣ ತುಂಬಿ ಬಂದವು.
“ಅಕ್ಕನಿಗೆ Bangalore institute of oncologyಯಲ್ಲಿ ತೋರಿಸುವಂತೆ ಹೇಳಿದ್ದಾರೆ...." ಅಂದವಳು ಅಳತೊಡಗಿದಳು. ಆನಂತರ ಆರಂಭವಾದದ್ದು ನಿಜವಾದ ಹೋರಾಟ. ಅದನ್ನು ಮಾಡಿದ್ದು ನಿವಿ. ಅವಳ ಬೆನ್ನಿಗೆ ನಿಂತದ್ದು ಇಡೀ ಆಫೀಸು. ಅವಳ ಕೆಲಸಗಳನ್ನೆಲ್ಲ ಹಂಚಿಕೊಂಡು, ಜವಾಬ್ದಾರಿ ಹೊತ್ತು,
“ನೀವು ಗೀತಕ್ಕನನ್ನು ನೋಡಿಕೊಳ್ಳಿ ಮೇಡಂ. ನಾವು ಈ ಕೋಟೆ ಕಾಯುತ್ತೇವೆ" ಎಂದು ‘ಪತ್ರಿಕೆ’ಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರೂ ಹೇಳಿದರು. They stood like a rock behind her. ಗೀತಕ್ಕ ಕಡಿಮೆ ತಾಕತ್ತಿನ ಹೆಣ್ಣುಮಗಳಲ್ಲ. She fought her battle and won it. ನನಗೆ ಇವತ್ತಿಗೂ ದೊರಕಿದ, ದೊರಕಿರುವ ಸಂತಸವೆಂದರೆ ‘ಹಾಯ್ ಬೆಂಗಳೂರ್!’ ಎಂಬುದು ಕೇವಲ ಒಂದು ಆಫೀಸಲ್ಲ. ಲಾಭ-ನಷ್ಟಗಳ ಖಾತೆ ಕಿರ್ದಿಯ ಪುಸ್ತಕವಲ್ಲ. ಇದೊಂದು ಕುಟುಂಬ. ಇವತ್ತಿಗೂ ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಪರಸ್ಪರರಿಗೆ ಆಪ್ತರು. ನನ್ನನ್ನು ಮನೆಯ ಹಿರಿಯನಂತೆ ಕಾಣುತ್ತಾರೆ. ನನ್ನ ಗೈರು ಹಾಜರಿಯಲ್ಲೂ ಅದೇ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಒಬ್ಬರನ್ನೊಬ್ಬರು ಗೌರವಿಸಿಕೊಳ್ಳುತ್ತಾರೆ. ಅತ್ತ ಇದು ಮಾಮೂಲಿ news paper ಆಫೀಸೂ ಅಲ್ಲ: ಇತ್ತ corporate ಸಂಸ್ಕೃತಿಯ ಕೂಸೂ ಅಲ್ಲ. ಒಬ್ಬರಿಗೆ ಅಥವಾ ಅವರ ಮನೆಯವರಿಗೆ ತೊಂದರೆಯಾಯಿತು ಅಂದರೆ, ಅಷ್ಟೂ ಜನ ಆ ಕಷ್ಟಕ್ಕೆ, ಸಂಕಟಕ್ಕೆ ಸ್ಪಂದಿಸುತ್ತಾರೆ. ನೆರವಿಗೆ ಹೋಗುತ್ತಾರೆ. ಸುಮ್ಮನೆ ಸಮಾಧಾನ ಹೇಳುವುದಿಲ್ಲ: ತಮ್ಮ ಜವಾಬ್ದಾರಿ ಅರಿತು ಅವರಿಗೆ ಸಹಾಯ ಮಾಡುತ್ತಾರೆ. ಇವತ್ತು ಮೊದಲಿನಂತೆ ಆಫೀಸಿನಲ್ಲಿ ದೊಡ್ಡ crowd ಇಲ್ಲ. ಖಾಯಿಲೆಯಿಂದ ಚೇತರಿಸಿಕೊಂಡ ಮೇಲೆ ನಾನೇ ಕೆಲವು ಸಿಬ್ಬಂದಿಯವರನ್ನು ಕೆಲಸದಿಂದ ತೆಗೆದೆ : ಅವರಿಗೆ ಕೊಡಬೇಕಾದುದನ್ನು ಕೊಟ್ಟು-ಪ್ರೀತಿಯಿಂದಲೇ ಕಳಿಸಿದೆ. ಅದಾದ ಮೇಲೆ ಕಚೇರಿಯಲ್ಲಿ ಚಿಕ್ಕ- ಆದರೆ ತುಂಬ ಸಮರ್ಥರಾದ ಗುಂಪು ಕೆಲಸ ಮಾಡುತ್ತಿದೆ. ಮೊದಲಿಗಿಂತಲೂ ಹೆಚ್ಚಿನ ಕೆಲಸವಾಗುತ್ತಿದೆ. ಅದಕ್ಕಿಂತ ಸಂತೋಷವೇನು? ಇಂಥ ಕ್ಷಣಗಳಲ್ಲಿ ನಿವಿ ತುಂಬ ತುಂಬ ನೆನಪಾಗುತ್ತಾಳೆ.

ಇದೆಲ್ಲದರ ಮಧ್ಯೆ ನಂದೊಂದು ವಿಶಿಷ್ಟ ಸಂತೋಷ. ನನ್ನನ್ನು ‘ಹಾಯ್ ಬೆಂಗಳೂರ್!’ ಮನೆಯಲ್ಲಿ ನೋಡಿಕೊಂಡಷ್ಟೇ ಜತನದಿಂದ ‘ಜನಶ್ರೀ’ ಸಿಬ್ಬಂದಿಯವರೂ ನೋಡಿಕೊಳ್ಳುತ್ತಾರೆ. ಅಲ್ಲಿ ಅನೇಕರ ಪಾಲಿಗೆ ನಾನು ಟೀ.ವಿ Icon. ಉಳಿದ ಅನೇಕರಿಗೆ ನಾನು ಅಣ್ಣ, ಚಿಕ್ಕಪ್ಪ, ತಂದೆ. ಬದುಕು ಯಾವಾಗಲೂ ಹಾಗೆಯೇ. ನಮ್ಮroleಗಳು ಬದಲಾಯಿಸುತ್ತಿರುತ್ತದೆ. ಬದಲಾದ roleಗಳಿಗೆ ತಕ್ಕಂತೆ ನಾವು ವರ್ತಿಸಬೇಕು. ಒಂದು ಕಾಲಕ್ಕೆ ಯಾರಿಗೆ ಯಾವಾಗ ಬೇಕಾದರೂ ಸಿಗುತ್ತಿದ್ದೆ. ಹಳೆಯ ಮಿತ್ರರೊಂದಿಗೆ ಕಾಕಾ ಹೊಟೇಲುಗಳಲ್ಲಿ ಕೂತು ಅರ್ಧರ್ಧ ಸಿಗರೇಟು ಸೇದಿ ಆಪ್ತವಾಗಿ ಹರಟುತ್ತಿದ್ದೆ. ಬಾರುಗಳಲ್ಲಿ ಗಂಟೆಗಟ್ಟಲೆ ಕೂಡುತ್ತಿದ್ದೆ. ಹುಡುಗಿಯರೊಂದಿಗೆ ಅನುದ್ದೇಶಿತವಾಗಿ, harmless ಆಗಿ ಮಾತನಾಡುತ್ತಿದ್ದೆ. ನಾನು flirt ಮಾಡುವವನಲ್ಲ. ನನ್ನನ್ನು ನಾನು ಎಂಥ ಹೆಂಗಸರನ್ನಾದರೂ ಪಳಗಿಸಿ(?)ಕೊಳ್ಳಬಲ್ಲ casanova ಅಂತ ಯಾವತ್ತೂ ಅಂದುಕೊಂಡಿಲ್ಲ. ಹೆಣ್ಣು ಮಕ್ಕಳು ನನ್ನನ್ನು ಪ್ರೀತಿಸುತ್ತಾರೆ. ನನ್ನ ಐವತ್ತನೆಯ ವಯಸ್ಸಿನಲ್ಲೂ ನನಗೆ ಪ್ರೇಮ ಪತ್ರಗಳು ಬರುತ್ತಿದ್ದುದು ನನಗೆ ನೆನಪಿದೆ. “ಮಗೂ, ನಿನಗೆ ನನಗಿಂತ ಒಳ್ಳೆಯboy friend, ಒಳ್ಳೆಯ ಗಂಡ, companion ಸಿಗುತ್ತಾನೆ. ''Why me? Be my kid" ಎಂದು ಉತ್ತರಿಸುತ್ತಿದ್ದೆ. ವಿಶ್ವೇಶ್ವರ ಭಟ್ಟನಂಥ ಸ್ನೇಹ ದ್ರೋಹಿಗಳು ನನ್ನನ್ನು lady killer ಅಂತ ಬಿಂಬಿಸಲು ಹರ ಸಾಹಸ ಮಾಡಿದರು. “ಯಾರಾದರೂ ರವಿ ಬೆಳಗೆರೆಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೆ ಅವರು ನಮ್ಮನ್ನು ಸಂಪರ್ಕಿಸಿ" ಅಂತಲೂ ತಮ್ಮ ಛಾನಲ್‌ನಲ್ಲಿ ಪ್ರಚುರ ಪಡಿಸಿದರು.Bull shit. ಲೈಂಗಿಕ ಕಿರುಕುಳ ಕೊಡುವ ಮನುಷ್ಯ ‘ಓ ಮನಸೇ’ ತರಹದ ಮ್ಯಾಗಝೀನ್ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ನನ್ನ ಎದುರಿಗೆ ಬಂದು ಕುಳಿತ ವ್ಯಕ್ತಿಯನ್ನು ನಾನು ಗಂಡಾ-ಹೆಣ್ಣಾ-ಲೈಂಗಿಕ ಅಲ್ಪ ಸಂಖ್ಯಾತನಾ-ಸಲಿಂಗಿಯಾ ಅಂತ ಯಾವತ್ತೂ ನೋಡುವುದಿಲ್ಲ. He or She is just a human being. ಅದು ಅವತ್ತಿಗೂ ಇವತ್ತಿಗೂ ನನ್ನ ಪಾಲಿಗೆ ಸತ್ಯ.

ನನ್ನ ವಿರುದ್ಧ ಅಕ್ಷರಶಃ ಯುದ್ಧ ಹೂಡಿದ ವಿಭಟ್ಟರು ಇವತ್ತು ಏನಾಗಿದ್ದಾರೆ? ‘ಕನ್ನಡ ಪ್ರಭ’ದ ಸರ್ಕುಲೇಶನ್ ನೆಲವೇನು, ಪಾತಾಳ ಕಚ್ಚಿದೆ. ಜೊತೆಗೆ ‘ಖುಷಿ’ ಎಂಬ ಸ್ವರುಡ ಮರ್ದನ. ಇವರು ಕರೆಸಿದ ‘ಸುವರ್ಣ ನ್ಯೂಸ್’ನಲ್ಲಿ ಇವತ್ತು ಇವರೇ ಇಲ್ಲ. ನನ್ನ ವಿರುದ್ಧ ಮಾತನಾಡಿದ ಸಿದ್ದೇಗೌಡ ಎಂಬ ಮೂರ್ಖ, “ನಾನು ರವಿ ಬೆಳಗೆರೇನ finish ಮಾಡುವಂಥ ಪತ್ರಿಕೆ ಮಾಡ್ತೀನಿ" ಎಂದು ಹೊರಟ. ಆ ಪತ್ರಿಕೆ ಅಲ್ಲಿ ಬಿಡುಗಡೆಯಾಗುತ್ತಿದ್ದರೆ, ಇಲ್ಲಿ ಅವನ ಮನೆಯಲ್ಲಿ ಅವನಿಂದ ನೊಂದ ಹೆಂಡತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋದರು. ಅವನು ಸಿಮ್ಮ. ಅವನನ್ನು ಆರೆಸ್ಸೆಸ್ಸಿನವರೂ ಓದುವುದಿಲ್ಲ : ಬಿಜೆಪಿಯವರು ಮೂಸುವುದೂ ಇಲ್ಲ. ಭಟ್ಟ ಮತ್ತು ಅವನ ವಂದಿಮಾಗಧರನ್ನ ದೂರವಿರಿಸಿದ ಸಂಕೇಶ್ವರರು ‘ವಿಜಯವಾಣಿ’ಗೆ ತಿಮ್ಮಪ್ಪ ಭಟ್ಟರನ್ನು ಸಂಪಾದಕರನ್ನಾಗಿ ಮಾಡಿದ್ದಾರೆ. ಬುದ್ಧಿವಂತಿಕೆ, ಕಷ್ಟ ಸಹಿಷ್ಣುತೆ, ಎರಡಕ್ಕಿಂತ ಹೆಚ್ಚಾಗಿ ಕೈ-ಬಾಯಿ ಕೆಡಿಸಿಕೊಳ್ಳದೆ ಅರ್ಧ ಆಯುಷ್ಯ ಕಳೆದಿರುವ ತಿಮ್ಮಪ್ಪ ಭಟ್ಟರ ಕೈ ಕೆಳಗೆ ‘ಕನ್ನಡ ಪ್ರಭ’ದಲ್ಲಿ ನಾನು ಕೆಲಸ ಮಾಡಿದ್ದೇನೆ. ಇವತ್ತು ‘ವಿಜಯ ವಾಣಿ’ ಕರ್ನಾಟಕದಲ್ಲಿ ನಂ.೨ ಸ್ಥಾನದಲ್ಲಿದೆ. ನಂ. ೧ ಸ್ಥಾನಕ್ಕೆ ಏರಲು ಬಹಳ ಕಾಲ ಬೇಕಾಗಿಲ್ಲ.

ಕಾಲ ಬದಲಾಗುತ್ತದೆ. ನಾನು ರಬ್ಬರ್ ಚೆಂಡಿನಂಥವನು. ನೀವು ಒಯ್ದು ನನ್ನನ್ನು ಬಾವಿಯ ಆಳಕ್ಕೆ ಅದುಮಿ ಅಲ್ಲೇ ಇರಲಿ ಎಂದು ಬಯಸಿದರೆ, ಬಾವಿಯ ಆಳದಿಂದ ನೀವು ಹೊರಕ್ಕೆ ಬರುವುದಕ್ಕೆ ಮುಂಚೆಯೇ ನಾನು ಪುಟಿದೆದ್ದು ಬಂದಿರುತ್ತೇನೆ. ಇದು ನನ್ನ ಮಾಜಿ ಮಿತ್ರರಿಗೆ ಗೊತ್ತಾಗಿದೆ. Life is good. ಎಂದಿನಂತೆ ನಿಮ್ಮ ನೋವಿಗೆ, ಸಮಸ್ಯೆಗೆ, ಒಬ್ಬಂಟಿತನಕ್ಕೆ ಉತ್ತರವಾಗಬಲ್ಲಂತಹ ‘ಓ ಮನಸೇ..’ ಪುನರಾರಂಭಿಸಿದ್ದೇನೆ. ಎಂದಿನಂತೆ ಸ್ವೀಕರಿಸಿ. ನನಗೆ ಒಳ್ಳೆಯದಾಗಲೆಂದು ಹಾರೈಸಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 27 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books