Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಸಿಇಟಿ ರದ್ದಾದರೆ ಬಡ ಮಕ್ಕಳ ಗತಿ ಏನು ಸಿದ್ದು?

ಮುಂದಿನ ವರ್ಷ ವೃತ್ತಿಪರ ಶಿಕ್ಷಣ ಕೋರ್ಸುಗಳಿಗೆ ಸೇರಲು ಬಡ, ಮಧ್ಯಮ ಕುಟುಂಬದ ಮಕ್ಕಳಿಗೆ ಸಾಧ್ಯವೇ? ಜಾಗತೀಕರಣದ ಈ ಕಾಲಘಟ್ಟದಲ್ಲಿ, ಕೃಷಿ ವ್ಯವಸ್ಥೆಯನ್ನು ಅದು ಬಡಿದು ಹಾಕುತ್ತಾ ನಡೆದಿರುವ ಕಾಲಘಟ್ಟದಲ್ಲಿ ನಮ್ಮ ಮಕ್ಕಳು ಹೆಚ್ಚೆಚ್ಚು ಅವಲಂಬನೆಗೆ ಒಳಗಾಗುತ್ತಿರುವುದು ಕೈಗಾರಿಕಾ ವಲಯಕ್ಕೆ ಮತ್ತು ಸೇವಾ ವಲಯಕ್ಕೆ ಎಂಬುದು ರಹಸ್ಯದ ವಿಷಯವೇನಲ್ಲ. ಒಂದು ಕಾಲದಲ್ಲಿ ಈ ದೇಶದ ಶೇಕಡಾ ಎಂಭತ್ತರಷ್ಟು ಜನ ಕೃಷಿ ವ್ಯವಸ್ಥೆಯನ್ನು ನೆಚ್ಚಿಕೊಂಡಿದ್ದರು. ಕಾಲ ಕ್ರಮೇಣ ಇದು ಇಳಿಮುಖವಾಗುತ್ತಾ, ಜಾಗತೀಕರಣ ಎಂಬ ಭೂತ ಪ್ರವೇಶಿಸಿದ ಮೇಲೆ ಶೇಕಡಾ ಐವತ್ತೈದಕ್ಕಿಂತ ಕಡಿಮೆಯಾಗಿ ಹೋಗಿದೆ. ಈಗಿರುವ ಐವತ್ತೈದರಷ್ಟು ಪರ್ಸೆಂಟಿನಲ್ಲೂ ಎಷ್ಟು ಜನ ಕೃಷಿಯನ್ನು ಸಂಪೂರ್ಣವಾಗಿ ಅವಲಂಬಿಸಿದ್ದಾರೆ ಎಂಬುದು ಅನುಮಾನ. ಯಾಕೆಂದರೆ ಬೆಳೆದ ಬೆಳೆಗೆ ವೈಜ್ಞಾನಿಕ ದರ ಸಿಗದೇ ಇರುವ ಕಾರಣ ರೈತರ ಸಂಕಷ್ಟ ಜಾಸ್ತಿಯಾಗುತ್ತಲೇ ಇದೆ. ಬದುಕುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ.
ಮೊನ್ನೆ ಬೆಳಗಾವಿಯ ಸುವರ್ಣಸೌಧದ ಎದುರು ವಿಠ್ಠಲ ಅರಭಾವಿ ಎಂಬ ರೈತ ಸಾವನ್ನಪ್ಪಿದ್ದು ಒಂದು ಪ್ರಕರಣ ಮಾತ್ರ. ಉಳಿದಂತೆ ಸುದ್ದಿಯೇ ಆಗದೇ ಕಾಲಗರ್ಭಕ್ಕೆ ಸೇರುವ ಅದೆಷ್ಟೋ ಪ್ರಕರಣಗಳು ನಡೆದಿವೆ. ನಡೆಯುತ್ತಲೇ ಇವೆ. ಇವತ್ತು ಕಬ್ಬು ಬೆಳೆದ ರೈತ ಸರಿಯಾದ ಲಾಭ ಪಡೆಯುವುದು ಕಷ್ಟದ ಕೆಲಸ. ಬರೀ ಕಬ್ಬು ಅಂತಲ್ಲ, ಅಡಿಕೆ, ತೆಂಗು, ಬತ್ತ, ದಾಳಿಂಬೆ ಹೀಗೆ ಏನೇ ಬೆಳೆದರೂ ರೈತನ ರಟ್ಟೆಗೆ ಬಲ ಬರುತ್ತಿಲ್ಲ. ಹೊಟ್ಟೆ ತುಂಬುತ್ತಿಲ್ಲ. ಹೀಗಾಗಿ ರೈತರ ಮಕ್ಕಳು ಉದ್ಯೋಗ ಹುಡುಕಿಕೊಂಡು ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದರೆ, ವ್ಯವಸಾಯವನ್ನು ನೆಚ್ಚಿಕೊಂಡ ರೈತ ಅಸಹಾಯಕನಾಗಿ ಕುಳಿತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳ ಕಣ್ಣಿಗೆ ಭರವಸೆಯಂತೆ ಕಾಣುತ್ತಿರುವುದು ಶಿಕ್ಷಣ ಮಾತ್ರ. ಅದರಲ್ಲೂ ಉನ್ನತ ಶಿಕ್ಷಣ ಪಡೆದರೆ ನೆಮ್ಮದಿಯಿಂದ ಬದುಕಬಹುದು ಎಂಬ ಲೆಕ್ಕಾಚಾರ ಇರುವುದರಿಂದ ಸೆಕೆಂಡ್ ಇಯರ್ ಪಿಯುಸಿ ಮುಗಿಸಿದ ಕೂಡಲೇ ಮಕ್ಕಳು ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನೀರಿಂಗ್ ತರದ ಕೋರ್ಸುಗಳಿಗೆ ಸೇರುತ್ತಾರೆ. ಹೀಗೆ ಸೇರುವ ಮಕ್ಕಳ ಕುಟುಂಬಕ್ಕೆ ಭಾರವೂ ಆಗಬಾರದು, ಸೀಟೂ ಸಿಗಬೇಕು ಎಂಬ ಲೆಕ್ಕಾಚಾರದಿಂದ ವೀರಪ್ಪ ಮೊಯ್ಲಿ ಈ ವ್ಯವಸ್ಥೆಗೆ ಒಂದು ಕಾಯಕಲ್ಪ ಕೊಟ್ಟರು. ಸಿಇಟಿ ಎಂಬ ಈ ವ್ಯವಸ್ಥೆ ಬಡ, ಮಧ್ಯಮ ವರ್ಗದ ಮಕ್ಕಳ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡಿದ್ದೂ ನಿಜ.

ಆದರೆ ಕಾಲ ಕ್ರಮೇಣ ಈ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕೆಲಸ ಶುರುವಾಯಿತು. ಇಂತಹ ಕೆಲಸಕ್ಕೆ ಕುಮ್ಮಕ್ಕು ನೀಡುವವರೂ ಇದ್ದರು. ಎಲ್ಲಕ್ಕಿಂತ ಮುಖ್ಯವಾಗಿ ವೃತ್ತಿಪರ ಶಿಕ್ಷಣ ಕೋರ್ಸುಗಳನ್ನು ನಡೆಸುವ ಕಾಲೇಜುಗಳ ಮೇಲೆ ಹಿಡಿತ ಇರುವುದು ರಾಜಕಾರಣಿಗಳಿಗೇ. ಹೀಗಾಗಿ ಅವರ ಲಾಬಿ ತುಂಬ ವ್ಯವಸ್ಥಿತವಾಗಿ ಹೆಜ್ಜೆಗಳನ್ನಿಡುತ್ತಾ ಬಂತು. ಶುರುವಿನಲ್ಲಿ ಸೀಟು ಹಂಚಿಕೆ ವಿವಾದ ಆರಂಭವಾಯಿತು. ನೋಡ ನೋಡುತ್ತಿದ್ದಂತೆಯೇ ಸರ್ಕಾರ ತನ್ನ ಪಾಲಿನ ಕೋಟಾದಲ್ಲೂ ಒಂದಷ್ಟು ಸೀಟುಗಳನ್ನು ಖಾಸಗಿಯವರಿಗೆ ಬಿಟ್ಟು ಕೊಟ್ಟಿತು. ಇದೀಗ ಪರಿಸ್ಥಿತಿ ಯಾವ ಹಂತಕ್ಕೆ ಬಂದಿದೆ ಎಂದರೆ ವೃತ್ತಿಪರ ಶಿಕ್ಷಣ ಕೋರ್ಸುಗಳ ವಿಷಯದಲ್ಲಿ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ನಡೆದದ್ದೇ ಹಾದಿ ಎಂಬಂತಾಗಿದೆ. ಈ ವರ್ಷ ಸಿಇಟಿ ಪರೀಕ್ಷೆ ಬರೆದು ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆದ ವಿದ್ಯಾರ್ಥಿಗಳು ಎಷ್ಟು ಫೀಸು ಕೊಡಬೇಕು ಅಂತ ಸರ್ಕಾರ ನಿಖರವಾಗಿ ಹೇಳಲಿಲ್ಲ. ಶುಲ್ಕ ಪ್ರಮಾಣದಲ್ಲಿ ಯಾವ ಕಾರಣಕ್ಕೂ ಹೆಚ್ಚಳವಾಗಕೂಡದು ಎಂದು ಹೇಳಿದ್ದೇವೆ. ಆದ್ದರಿಂದ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿ ಕೈ ತೊಳೆದುಕೊಂಡು ಬಿಟ್ಟಿತು.

ಆದರೆ ಅದು ಹೇಳಿದ್ದೇ ಒಂದು, ಕಾಲೇಜುಗಳ ಮಟ್ಟದಲ್ಲಿ ಆಗಿದ್ದೇ ಇನ್ನೊಂದು. ಒಂದು ಕಡೆಯಿಂದ ಸಿಇಟಿ ಹೇಳಿದ ಫೀಸು ಕಟ್ಟಿದ ಮಕ್ಕಳು ಕಾಲೇಜಿಗೆ ಹೋಗಿ ಅವರು ಹೇಳಿದ ಪ್ರಮಾಣದ ಫೀಸು ಕಟ್ಟಿ ಸೇರಿಕೊಂಡರು. ಹಾಗೆ ಮಾಡದೆ ಪರ್ಯಾಯ ಮಾರ್ಗವೇ ಇರಲಿಲ್ಲ. ಇಂಜಿನೀರಿಂಗ್ ಸೀಟಿಗೆ ನಲವತ್ತು, ಐವತ್ತು ಸಾವಿರ ಕೊಟ್ಟರೆ ಮುಗಿಯಿತು ಎಂಬಂತೆ ಸರ್ಕಾರ ಮಾತನಾಡಿದರೆ ಎಷ್ಟೋ ಕಾಲೇಜುಗಳು ಅರವತ್ತು, ಅರವತ್ತೈದು ಸಾವಿರ ರುಪಾಯಿ ಕಿತ್ತುಕೊಂಡವು. ಹಾಗಂತ ದೂರು ಕೊಡುವುದು ಯಾರ ಬಳಿಗೆ? ಕೊಟ್ಟರೂ ತೆಗೆದುಕೊಳ್ಳುವವರು ಯಾರು? ಯಾವಾಗ ಈ ಪರಿಸ್ಥಿತಿ ಬಂತೋ, ಆಗಲೇ ಮುಂದಿನ ವರ್ಷದ ಕತೆ ಇನ್ನೇನಾಗಲಿದೆ ಅನ್ನುವ ಆತಂಕ ಕಾಡಲು ಶುರುವಾಯಿತು. ಈಗಿನ ಸ್ಥಿತಿ ನೋಡಿದರೆ ಈ ಆತಂಕವೂ ನಿಜವಾಗುವ ಸ್ಥಿತಿ ಬಂದು ಬಿಟ್ಟಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇನೋ ವೃತ್ತಿ ಶಿಕ್ಷಣ ಕೋರ್ಸುಗಳ ಪ್ರವೇಶ ಮತ್ತು ಶುಲ್ಕ ನಿಗದಿಗೆ ಸಂಬಂಧಿಸಿದಂತೆ ೨೦೦೬ರಲ್ಲಿ ರಚಿಸಲಾದ ಕಾಯ್ದೆಯ ಬಗ್ಗೆ ಮಾತನಾಡುತ್ತಾರೆ. ಈ ಕಾಯ್ದೆಯನ್ನು ಜಾರಿಗೊಳಿಸಿಬಿಡುತ್ತೇವೆ ಅನ್ನುತ್ತಾರೆ. ಕಾಯ್ದೆ ಜಾರಿಗೊಳ್ಳುತ್ತದೋ, ಇಲ್ಲವೋ ಅದು ಬೇರೆ ವಿಷಯ. ಆದರೆ ಆ ಮೂಲಕ ನಮ್ಮ ಬಡ, ಮಧ್ಯಮ ವರ್ಗದ ಮಕ್ಕಳ ಹಿತ ರಕ್ಷಣೆಯಾಗುತ್ತದೋ, ಇಲ್ಲವೋ ಅನ್ನುವುದಷ್ಟೇ ಮುಖ್ಯ ವಿಷಯ.

ಅಂದ ಹಾಗೆ ಇವತ್ತು ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಪ್ರವೇಶ ಒದಗಿಸುವ ಸಂಬಂಧ, ಶುಲ್ಕ ನಿಗದಿ ಮಾಡುವ ಸಂಬಂಧ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಒಂದೊಂದು ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ವರದಿ ಕೊಡುತ್ತದೆ. ಅದು ಮೊದಲು ವರದಿ ನೀಡಲಿ ಎನ್ನುತ್ತಾರೆ ಮುಖ್ಯಮಂತ್ರಿ ಸಿದ್ಧರಾಮಯ್ಯ. ಅದು ವರದಿ ಕೊಡುವ ಮೊದಲೇ ವೃತ್ತಿ ಶಿಕ್ಷಣ ಕೋರ್ಸುಗಳ ಪ್ರವೇಶ ಮತ್ತು ಶುಲ್ಕಕ್ಕೆ ಸಂಬಂಧಿಸಿದಂತೆ ಊಹಾಪೋಹ ಸರಿಯಲ್ಲ ಎಂದೂ ಹೇಳುತ್ತಾರೆ. ಆದರೆ ಈಗಿರುವ ಮಾಹಿತಿಯ ಪ್ರಕಾರ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳಿಗೆ ಎಂಟ್ರಿ ಪಡೆಯುವುದು ಹಾಗಿರಲಿ, ಇಂಜಿನೀರಿಂಗ್ ಕೋರ್ಸುಗಳಿಗೆ ಪ್ರವೇಶ ಪಡೆಯುವುದೂ ಕಷ್ಟ ಎಂಬ ಪರಿಸ್ಥಿತಿ ಇದೆ. ಈಗಿನ ಮಾಹಿತಿಯ ಪ್ರಕಾರ, ಒಂದು ಇಂಜಿನೀರಿಂಗ್ ಸೀಟು ಪಡೆಯಲು ಪಾವತಿಸಬೇಕಾದ ಶುಲ್ಕದ ಮೊತ್ತ ಒಂದೂಕಾಲು ಲಕ್ಷ ರುಪಾಯಿ. ಈ ಪ್ರಮಾಣದ ಮೊತ್ತವನ್ನು ಬಡವರು ಕಟ್ಟುವುದು ದೂರದ ಮಾತು. ಮಧ್ಯಮ ವರ್ಗದವರಾದರೂ ಹೇಗೆ ಕಟ್ಟುತ್ತಾರೆ. ಕಾಲೇಜಿಗೆ ಕಟ್ಟುವ ಶುಲ್ಕದ ಪ್ರಮಾಣವೇ ಒಂದೂಕಾಲು ಲಕ್ಷ ರುಪಾಯಿಗಳಾದರೆ ನಾಲ್ಕು ವರ್ಷದ ಅವಧಿಯಲ್ಲಿ ಅವರು ಕಟ್ಟಬೇಕಾದ ಫೀಸಿನ ಪ್ರಮಾಣವೇ ಐದು ಲಕ್ಷ ರುಪಾಯಿಗಳಾಗುತ್ತವೆ.

ಇದು ಒಂದು ಕಡೆಗಾದರೆ ಇನ್ನು ಕೋರ್ಸು ಮುಗಿಸುವ ಮುನ್ನ ಆಗುವ ಖರ್ಚು, ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡರೆ ಒಬ್ಬ ವಿದ್ಯಾರ್ಥಿಯ ಮೇಲೆ ವಾರ್ಷಿಕ ಕನಿಷ್ಠವೆಂದರೂ ಎರಡು ಲಕ್ಷ ರುಪಾಯಿ ಬಂಡವಾಳ ಹೂಡಬೇಕಾಗುತ್ತದೆ. ನಾಲ್ಕೆಕರೆ ಭೂಮಿ ಇಟ್ಟುಕೊಂಡು ಬೆಳೆ ಬೆಳೆಯುವ ರೈತನೇ ಒಂದು ವರ್ಷಕ್ಕೆ ಎರಡು ಲಕ್ಷ ರುಪಾಯಿ ದುಡಿಯಲು ಸಾಧ್ಯವಿಲ್ಲ ಎಂದ ಮೇಲೆ ತಿಂಗಳಿಗಿಂತಿಷ್ಟು ಅಂತ ಸಂಬಳ ಪಡೆಯುವ, ಆಟೋರಿಕ್ಷಾ ಓಡಿಸುವ, ಖಾಸಗಿ ಕಂಪನಿಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುವ ಜನ ತಮ್ಮ ಮಕ್ಕಳನ್ನು ಇಂಜಿನೀರ್ ಮಾಡಿಸಲು ಎರಡು ಲಕ್ಷ ರುಪಾಯಿ ಬಂಡವಾಳ ಎಲ್ಲಿಂದ ತಂದು ಸುರಿಯುತ್ತಾರೆ? ಸಹಜವಾಗಿಯೇ ಇಂತಹವರು ಏನು ಮಾಡಬೇಕು? ಒಂದೋ ಮಕ್ಕಳನ್ನು ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಸೇರಿಸುವ ಆಸೆ ಬಿಡಬೇಕು. ಇಲ್ಲವೇ ಸಾಲ ಸೋಲ ಮಾಡಿ ಓದಿಸಬೇಕು. ಇತ್ತೀಚಿನ ವರ್ಷಗಳಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ದಿನನಿತ್ಯದ ಜೀವನ ನಡೆಸುವುದೇ ಕಷ್ಟವಾಗಿ ಹೋಗಿದೆ.

ಹೀಗಿರುವಾಗ ಒಬ್ಬ ಬಡ, ಮಧ್ಯಮ ವರ್ಗದ ಕುಟುಂಬ ತಮ್ಮ ಮಕ್ಕಳನ್ನು ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಸೇರಿಸಿ ದಕ್ಕಿಸಿಕೊಳ್ಳುವುದು ಸಾಧ್ಯವೇ? ಹಾಗಂತ ಈಗ ಎದ್ದಿರುವ ಹಾಹಾಕಾರವನ್ನು ಸಿದ್ಧರಾಮಯ್ಯ ತುಂಬ ಸರಳವಾಗಿ ಪರಿಗಣಿಸಬಾರದು. ಇಲ್ಲ, ಇಲ್ಲ ಆ ಲೆವೆಲ್ಲಿನ ಫೀಸು ಫಿಕ್ಸ್ ಆಗುತ್ತೆ ಅಂತ ಈಗಲೇ ಹೇಳುವುದು ಸರಿಯಲ್ಲ. ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳೇ ಸಿಗುವುದಿಲ್ಲ ಎಂದು ಹುಯಿಲು ಎಬ್ಬಿಸುವುದೂ ಸರಿಯಲ್ಲ ಎಂದು ಹೇಳುವುದು ಸುಲಭ. ಅದೇ ರೀತಿ ಟೈಮು ನೋಡಿ ಮಧ್ಯೆ ಪ್ರವೇಶ ಮಾಡಿ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳನ್ನು ಕೊಡಿಸಲೂಬಹುದು. ಶುಲ್ಕದ ಪ್ರಮಾಣವನ್ನು ಕಡಿಮೆ ಮಾಡಿಸಲೂಬಹುದು. ಆದರೆ ಇದು ಕೂಡ ಬೃಹತ್ ನಾಟಕದ ಒಂದು ಭಾಗ ಎಂಬುದನ್ನು ಮರೆಯದಿರೋಣ. ಯಾಕೆಂದರೆ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಪ್ರವೇಶ ಪಡೆಯಲು ಇಷ್ಟು ಫೀ ತುಂಬಬೇಕು ಅಂತ ಗಲಾಟೆ ಎದ್ದ ಕೂಡಲೇ ಸರ್ಕಾರ ಮಧ್ಯೆ ಪ್ರವೇಶ ಮಾಡುತ್ತದೆ. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಪ್ರಮುಖರ ಜತೆ ಚರ್ಚಿಸುತ್ತದೆ. ಫೈನಲಿ, ಉಭಯತ್ರರ ಮಧ್ಯೆ ಒಂದು ಸಂಧಾನ ನಡೆಯುತ್ತದೆ. ಈ ಸಂಧಾನದ ಪ್ರಕಾರ ಖಾಸಗಿ ಕಾಲೇಜುಗಳವರು ಹೇಳಿದ್ದೂ ಬೇಡ, ಸರ್ಕಾರ ಹೇಳಿದ್ದೂ ಬೇಡ. ಇದರ ಬದಲು ಮಧ್ಯಮ ಹಂತದ ಫೀಸು ಫಿಕ್ಸು ಮಾಡೋಣ ಎಂಬ ತೀರ್ಮಾನವಾಗುತ್ತದೆ.

ಆಗಲೂ ಮಕ್ಕಳು ಇಂಜಿನೀರಿಂಗ್ ಕೋರ್ಸಿಗೆ ಸೇರಿಕೊಳ್ಳಲು ಎಂಭತ್ತು ಸಾವಿರದಿಂದ ಒಂದು ಲಕ್ಷ ರುಪಾಯಿಗಳ ತನಕ ಫೀಸು ಕಟ್ಟಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಈ ವರ್ಷ ಕಟ್ಟಿರುವ ಫೀಸಿನ ಪ್ರಮಾಣವೇ ಮಕ್ಕಳ ಕುಟುಂಬಕ್ಕೆ ಹೊರೆ. ಇನ್ನು ಎಂಭತ್ತು ಸಾವಿರದಿಂದ ಒಂದು ಲಕ್ಷ ರುಪಾಯಿಗಳಷ್ಟು ಹೊರೆ ಬಿದ್ದರೆ ಸಹಿಸಿಕೊಳ್ಳಲು ಎಷ್ಟು ಮಂದಿಗೆ ಸಾಧ್ಯ? ಇದೇ ಸದ್ಯದ ಮುಖ್ಯ ಪ್ರಶ್ನೆ. ವಾಸ್ತವವಾಗಿ ಇಂತಹ ಸನ್ನಿವೇಶದಲ್ಲಿ ಸರ್ಕಾರಗಳು ವಹಿಸಬೇಕಾದ ಎಚ್ಚರವೆಂದರೆ ಬಡ, ಮಧ್ಯಮ ವರ್ಗದ ಮಕ್ಕಳಿಗಾಗಿ ತಾನೇ ಹೆಚ್ಚೆಚ್ಚು ಸರ್ಕಾರಿ ಕಾಲೇಜುಗಳನ್ನು ಸ್ಥಾಪಿಸುವುದು. ಆದರೆ ಇವತ್ತು ರಾಜ್ಯದಲ್ಲಿ ಅಳೆದು ಸುರಿದರೂ ಇರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪ್ರಮಾಣ ಹತ್ತರ ಗಡಿಯಲ್ಲಿದೆ. ಸರ್ಕಾರಿ ಮತ್ತು ಅನುದಾನಿತ ಇಂಜಿನೀರಿಂಗ್ ಕಾಲೇಜುಗಳ ಸಂಖ್ಯೆ ಇಪ್ಪತ್ತೊಂದರಷ್ಟಿದೆ. ಇಷ್ಟು ಕಾಲೇಜುಗಳಲ್ಲಿ ಎಷ್ಟು ಮಂದಿ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಸಾಧ್ಯ? ಕಡಿಮೆ ವೆಚ್ಚದಲ್ಲಿ ಓದಿಸಲು ಸಾಧ್ಯ? ಈ ಪ್ರಶ್ನೆಯನ್ನು ಕೇಳಿಕೊಂಡರೆ ನಿರಾಸೆ ಹುಟ್ಟುತ್ತದೆಯೇ ಹೊರತು ನಿಶ್ಚಿತವಾಗಿ ಭರವಸೆ ಮೂಡುವುದಿಲ್ಲ. ಸಹಜವಾಗಿ ಇದು ಒಂದು ಆತಂಕಕಾರಿ ವಾತಾವರಣವನ್ನು ಸೃಷ್ಟಿಸುತ್ತದೆ. ಯಾವ ರೀತಿ ಬದುಕಿನಲ್ಲಿ ಭರವಸೆ ಕಳೆದುಕೊಂಡ ರೈತರು ನೂರಾರು ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೋ, ಅದೇ ರೀತಿ ಬಡ, ಮಧ್ಯಮ ವರ್ಗದ ಜನರಲ್ಲೂ ಇಂತಹದೊಂದು ಟ್ರೆಂಡ್ ಬೆಳೆಯುತ್ತದೆ.

ಹುಟ್ಟಿಸಿದ ಮಕ್ಕಳನ್ನು ದಡ ಸೇರಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಮತ್ತು ಈ ಕೊರಗನ್ನು ನಿವಾರಿಸಿಕೊಳ್ಳಲು ಬೇರೆ ಯಾವುದೇ ಮಾರ್ಗ ಕಾಣದಿದ್ದಾಗ ಆತ್ಮಹತ್ಯೆಯಂತಹ ಟ್ರೆಂಡ್ ಶುರುವಾಗುತ್ತದೆ. ಇದನ್ನು ಒಂದು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಯಾಕೆಂದರೆ ಮೊದಲನೆಯದಾಗಿ ಇವತ್ತಿನ ಸಾಮಾಜಿಕ ವ್ಯವಸ್ಥೆಯೇ ಹದಗೆಟ್ಟು ಹೋಗಿದೆ. ಮನುಷ್ಯ ಮನುಷ್ಯರ ನಡುವಣ ಸಂಬಂಧಕ್ಕೆ ಬೆಲೆ ಕಡಿಮೆಯಾಗಿದೆ. ಎಲ್ಲವೂ ದುಡ್ಡಿನ ಆಧಾರದ ಮೇಲೆ ನಿಂತ ವ್ಯವಸ್ಥೆ ರೂಪುಗೊಂಡಿರುವಾಗ ಸಾಮಾಜಿಕ ವ್ಯವಸ್ಥೆ ಅತ್ಯುತ್ತಮವಾಗಿರಲು ಸಾಧ್ಯವೇ ಇಲ್ಲ. ಇಂತಹ ವಿಷಮ ಸನ್ನಿವೇಶದಲ್ಲಿ ಬದುಕುವ ಜನ ಪ್ರತಿಯೊಂದಕ್ಕೂ ಬಡಿದಾಡುವ ಸ್ಥಿತಿ ಬಂದರೆ ಹೇಗೆ? ಬಡಿದಾಡುತ್ತಾ, ಬಡಿದಾಡುತ್ತಾ ಒಂದು ದಿನ ಮಕ್ಕಳ ಪೋಷಕರ ಮನಸ್ಸಿನಲ್ಲೇ ಒಂದು ನಿರಾಸೆ ಕವಿಯುತ್ತದೆ. ಈ ಬದುಕಿಗೆ ಅರ್ಥವೇ ಇಲ್ಲ ಎಂಬಂತಹ ಭಾವನೆ ಮೂಡುತ್ತದೆ. ಅಂತಹ ಭಾವನೆಗೆ ಪುಷ್ಟಿ ನೀಡುವ ಎಲ್ಲ ಹಂತಗಳಲ್ಲಿ ನಡೆಯುತ್ತಾ ಹೋದರೆ ಗತಿಯೇನು? ಇದೇ ಮುಖ್ಯ ಪ್ರಶ್ನೆ.

ಇವತ್ತು ವೃತ್ತಿಪರ ಶಿಕ್ಷಣ ಕೋರ್ಸುಗಳಿಗೆ ಬಡ, ಮಧ್ಯಮ ವರ್ಗದ ಮಕ್ಕಳು ಎಂಟ್ರಿ ಪಡೆಯುವುದೇ ಕಷ್ಟ ಎಂಬಂತಾಗಿ ಹೋದರೆ ಪರಿಸ್ಥಿತಿ ತುಂಬ ವಿಕೋಪಕ್ಕೆ ಹೋಗಲಿದೆ. ಯಾವ ಕಾರಣಕ್ಕೂ ಇದನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಕೂಡದು. ಯಾಕೆಂದರೆ ನಾವಿರುವುದು ನಮ್ಮ ಮಕ್ಕಳ ಭವಿಷ್ಯ ರೂಪಿಸಲು. ಹೀಗಾಗಿ ಆ ಕೆಲಸವನ್ನು ತುಂಬ ಜತನದಿಂದ ಮಾಡಬೇಕು. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಇದನ್ನು ಮನದಟ್ಟು ಮಾಡಿಕೊಟ್ಟೇ ಸರ್ಕಾರ ಆ ಕೆಲಸ ಮಾಡಲಿ. ಬಡ, ಮಧ್ಯಮ ವರ್ಗದ ಮಕ್ಕಳಿಗೆ, ಅವರ ಪೋಷಕರಿಗೆ ನೆಮ್ಮದಿ ಸಿಗುವಂತೆ ಮಾಡಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 25 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books