Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಬದುಕಿನ ಪ್ರತಿ ಕ್ಷಣವೂ ದಿವ್ಯ ಕ್ಷಣವೇ ಅಂದುಕೊಂಡರೆ...

ದೊಡ್ಡವರು ಸತ್ತು ಹೋಗುತ್ತಾರೆ.
ಎಂಥ ದೊಡ್ಡವರೇ ಆದರೂ ಸತ್ತು ಹೋಗಲೇಬೇಕು. ಗಾಂಧಿ, ನೆಹರೂ, ಇಂದಿರಾ, ರಾಜ್‌ಕುಮಾರ್, ಕುವೆಂಪು, ಬೇಂದ್ರೆ ಹೀಗೆ ಹಿರಿಯರೆನ್ನಿಸಿಕೊಂಡ ಯಾರೇ ತೀರಿ ಹೋದರೂ ಮನಸು ಮಂಕಾಗುತ್ತದೆ. ಪ್ರತಿಯೊಬ್ಬ ಹಿರಿಯನ ಸಾವೂ ಒಂದು ಶೂನ್ಯವನ್ನು ಸೃಷ್ಟಿಸುತ್ತದೆ. ಕವಿ ನರಸಿಂಹಸ್ವಾಮಿಗಳು ತೀರಿಕೊಂಡಾಗ ಮತ್ತೆ ಅಂಥ ಪ್ರೇಮಗೀತೆಗಳನ್ನು ಬರೆಯುವವರು ಯಾರು ಅಂತ ಪ್ರಶ್ನೆ ಕಾಡಿತ್ತು. ಪ್ರತಿ ಸಾವೂ ಇಂತಹುದೊಂದು ಪ್ರಶ್ನೆ ಬಿಟ್ಟು ಹೋಗುತ್ತದೆ. ಆದರೆ ಬದುಕಿನ ವಿಚಿತ್ರ ನೋಡಿ. ಪ್ರತಿ ಸಾವೂ ಬಿಟ್ಟು ಹೋಗುವ ಒಂದು ಶೂನ್ಯವನ್ನು ಅದು ತಂತಾನೆ ತುಂಬಿಕೊಳ್ಳುತ್ತ ಬರುತ್ತದೆ. ಗಾಂಧೀಜಿ ತೀರಿಕೊಂಡ ನೆಲದಲ್ಲೇ ಬಾಬಾ ಆಮ್ಟೆ ಹುಟ್ಟಿದರು. ಇದೇ ನೆಲದ ಮೇಲೆ ಮದರ್ ಥೆರೇಸಾ ಆವಿರ್ಭವಿಸಿದಳು. ಫೂಲನ್ ದೇವಿ ನೆಲಕ್ಕೆ ಬಿದ್ದ ಮೇಲೆ ಅದೇ ಚಂಬಲ್‌ನಲ್ಲಿ ನೂರು ಜನ ಹೊಸ ಡಕಾಯಿತರು ಹುಟ್ಟಿಕೊಂಡರು. ಒಳ್ಳೆಯದೂ ಅಷ್ಟೆ: ಕೆಟ್ಟದೂ ಅಷ್ಟೆ. ಒಳ್ಳೆಯದು ಕೊಂಚ ತಡವಾಗಿ replace ಆಗಬಹುದು. ಕೆಟ್ಟದ್ದಕ್ಕೆ ತಕ್ಷಣ alterenative ಹುಟ್ಟಿಕೊಳ್ಳುತ್ತದೆ.

ಈಗ ವೈಯಕ್ತಿಕ ವಿಷಯಕ್ಕೆ ಬನ್ನಿ. ಕಣ್ಣ ಗೊಂಬೆಯಂತೆ ನೋಡಿಕೊಳ್ಳುತ್ತಿದ್ದ ತಾಯಿ ಕೊನೆಯುಸಿರೆಳೆದುಬಿಡುತ್ತಾಳೆ. ಅಂಥ ಹೆಬ್ಬಂಡೆಯಂತಿದ್ದ ಅಪ್ಪ ಕೈ ಚೆಲ್ಲಿ ಬಿಡುತ್ತಾನೆ. ಬದುಕಿನ ಅರ್ಧಮುಕ್ಕಾಲು ಭಾಗ ಜೊತೆಗೆ ಹೆಜ್ಜೆ ಹಾಕಿದ ಗಂಡ, ಅದೊಂದು ಬೆಳಗಿನ ಜಾವ ಹೇಳದೆ ಹೊರಟು ಬಿಡುತ್ತಾನೆ. ಹೆಂಡತಿ ಗಕ್ಕನೆ ಎಲ್ಲೋ ನಿಂತು ಹೋಗುತ್ತಾಳೆ. ಸಾವಿಲ್ಲದ ಮನೆ ಯಾವುದಿದೆ ಹೇಳಿ? ಒಳ್ಳೆಯವರನ್ನು, ಕೆಟ್ಟವರನ್ನು, ಶ್ರೀಮಂತರನ್ನು, ಬಡವರನ್ನು ಏನೇನೂ ವ್ಯತ್ಯಾಸವಿಲ್ಲದೆ ಕರೆದೊಯ್ದುಬಿಡುವ ಸಾವಿಗೆ ವ್ಯತ್ಯಾಸವೆಂಬುದಿಲ್ಲ.

ವ್ಯತ್ಯಾಸವಿರುವುದು ಬದುಕಿಗೆ. ಸಾವು ಕೂಡ ವ್ಯತ್ಯಾಸ ಉಂಟು ಮಾಡುವುದು, ಉಳಿದು ಹೋದವರ ಬದುಕಿಗೆ. ತೀರ ಆತ್ಮೀಯರು ಸತ್ತು ಹೋದಾಗ ಇದ್ದಕ್ಕಿದ್ದಂತೆ ಶೂನ್ಯ ಆವರಿಸಿಕೊಳ್ಳುತ್ತದೆ. ನಮ್ಮ ಗತಿ ಏನು ಎಂಬಂಥ ಭಾವ ಕವಿಯುತ್ತದೆ. ನಾವೂ ಸತ್ತು ಬಿಡೋಣವೇ ಅಂತಲೂ ಒಂದೊಂದು ಸಲ ಅನ್ನಿಸುತ್ತದೆ. ‘ಈ ಮನುಷ್ಯ ಇಲ್ಲದೆ ಹೋಗಿದ್ದಿದ್ದರೆ ನಾವು ಹೇಗೆ ಬದುಕುತ್ತಿದ್ದೆವೋ?’ ಅಂತ ಒಂದು ಸಲ ಕೂಡ ಅಂದುಕೊಂಡಿರುವುದಿಲ್ಲ. ಆದರೆ ಆ ಮನುಷ್ಯ ಇದ್ದಕ್ಕಿದ್ದಂತೆ ಹೋಗಿ ಬಿಡುತ್ತಾನೆ. ಯಾವುದೋ ಬಸ್ಸು ಮಗುಚಿಕೊಳ್ಳುತ್ತದೆ, ರೈಲು ಹಳಿ ತಪ್ಪುತ್ತದೆ, ಕಾಲು ಜಾರುತ್ತದೆ, ಹೆಲಿಕಾಪ್ಟರು ಕಳಚಿ ಬೀಳುತ್ತದೆ. ಸಾವು ಸಾವಿರ ವಿಧ. ಅದು ಯಾವ ಹೊತ್ತಿಗೂ ಬರಬಹುದು. ಯಾರಿಗೆ ಬೇಕಾದರೂ ಬರಬಹುದು. ಸೀನಿಯಾರಿಟಿ ಎಂಬ ಪದಕ್ಕೆ ಅದರ ನಿಘಂಟಿನಲ್ಲಿ ಅರ್ಥವಿಲ್ಲ. ಮೊನ್ನೆ ನನ್ನ ಪರಿಚಯದ ಹುಡುಗಿಯೊಬ್ಬಳು ತನ್ನ ಮಗುವನ್ನು ಕಳೆದುಕೊಂಡಳು. ಆ ಮಗುವಿಗಿನ್ನೂ ಒಂದು ತಿಂಗಳೂ ತುಂಬಿರಲಿಲ್ಲ. ಕಣ್ತುಂಬ ನೀರಿಟ್ಟುಕೊಂಡು ನಿಂತಿದ್ದ ಹುಡುಗಿಗೆ “ಸಮಾಧಾನ ಮಾಡಿಕೊಳ್ಳಮ್ಮಾ, ಹೋದ ಮಗು ಹೊಟ್ಟೆಯಲ್ಲಿ ಅಂತಾರೆ. ಇದರ ಬೆನ್ನಲ್ಲೇ ಇನ್ನೊಂದು ಮಗುವಾಗುತ್ತದೆ. ಯಾಕೆ ನೊಂದುಕೋತೀಯ?" ಅಂತ ಸಮಾಧಾನ ಹೇಳಿದೆ.

ಹುಡುಗಿ ನಿಜಕ್ಕೂ ಸಮಾಧಾನಗೊಂಡಳೋ ಇಲ್ಲವೋ ಗೊತ್ತಿಲ್ಲ. ನನ್ನ ಮಾತುಗಳಲ್ಲಿ ಇಲ್ಲದ ತಾಕತ್ತು ಕಾಲವೆಂಬ ಮಹಾನ್ ಮಾಂತ್ರಿಕನಿಗೆ ಇದೆ. ಕಾಲವೆಂಬುದು ಎಲ್ಲ ದುಃಖಗಳಿಗೂ ಔಷಧಿ. ನನ್ನ ಮಾತು ಬಿಡಿ. ನಾನು ವಿಪರೀತ ಭಾವುಕ. ತಾಯಿ ಸತ್ತು ಹೋಗಿ ಇಪ್ಪತ್ತೆರಡು ವರ್ಷಗಳಾದರೂ ಆಕೆಯನ್ನು ನೆನೆಸಿಕೊಂಡು ಕಣ್ಣೀರಾಗುತ್ತೇನೆ. ಆದರೆ ಎಲ್ಲರೂ ಅಷ್ಟೂ ಭಾವುಕರಿರುವುದಿಲ್ಲ. ಕ್ರಮೇಣ ನೋವು ಕಡಿಮೆಯಾಗುತ್ತದೆ. ಹೇಗೆ ಸಂತೋಷವನ್ನು ಪೂರ್ತಿಯಾಗಿ ಅನುಭವಿಸಲು ಬಿಡದೆ ಇತರೆ ಸಂಗತಿಗಳು ನಮ್ಮನ್ನು distract ಮಾಡುತ್ತವೆಯೋ ಹಾಗೆಯೇ, ದುಃಖವನ್ನೂ ಈ ಬದುಕು ಪೂರ್ತಿಯಾಗಿ ಅನುಭವಿಸಲು ಬಿಡುವುದಿಲ್ಲ. ಒಂದು ಪುಟ್ಟ ಮಗುವಿನ ಜನನ, ಮನೆಯ ಹಿರಿಯನ ಸಾವನ್ನು ಮರೆಯಿಸಿಬಿಡುತ್ತದೆ. ನಮಗೇ ಗೊತ್ತಿಲ್ಲದೆ ಈ ಬದುಕು ಅದ್ಹೇಗೋ normal modeಗೆ ಬಂದು ಬಿಟ್ಟಿರುತ್ತದೆ.

ಇಷ್ಟೆಲ್ಲ ಗೊತ್ತು ಮಾಡಿಕೊಂಡ ನಾವು ನಮ್ಮ ಸಾವಿನ ಬಗ್ಗೆ ಯೋಚನೆಯೇ ಮಾಡಿರುವುದಿಲ್ಲ. ‘ನಾನುಂಟು ಮೂರು ಲೋಕವುಂಟು’ ಅಂತ ಬದುಕುತ್ತಿರುತ್ತೇವೆ. ಹಾಗೆ ಬದುಕುವುದು ಒಳ್ಳೆಯದೂ ಹೌದು. ‘ನನ್ನ ಕೈಯಲ್ಲಿ ಸಾಧ್ಯವಾಗದೆ ಇರುವುದು ಜಗತ್ತಿನಲ್ಲಿ ಅದ್ಯಾವುದಿದೆ?’ ಅಂದುಕೊಂಡೇ ಮನುಷ್ಯ ಹೊರಡಬೇಕು. ಜೀವನ್ಮುಖಿಯಾದವನಿಗೆ ಅಂಥ ಉತ್ಸಾಹವಿರುತ್ತದೆ. ನಲವತ್ತರ ಗಡಿ ದಾಟದ ಯುವಕ ‘ಈ ಜಗತ್ತನ್ನೇ ಬದಲಿಸಿ ಬಿಡುತ್ತೇನೆ’ ಎಂದು ಅಬ್ಬರಿಸುತ್ತಾನೆ. ಐವತ್ತನೇ ವರ್ಷ ಹೆಗಲು ಹತ್ತಿ ಕೂಡುವ ವೇಳೆಗೆ ‘ನನ್ನನ್ನು ನಾನು ಬದಲಿಸಿಕೊಳ್ಳುತ್ತೇನೆ’ ಅನ್ನತೊಡಗುತ್ತಾನೆ. ವಯಸ್ಸು ಕಳೆದಂತೆಲ್ಲ ಅಬ್ಬರ ಕಡಿಮೆಯಾಗಿ ಆತನ ಮಾತಿನಲ್ಲಿ, ನಿಲುವಿನಲ್ಲಿ ವ್ಯತ್ಯಾಸ ಕಾಣತೊಡಗುತ್ತದೆ. ಅದು ಸಾವು ಕಲಿಸುವ ವೇದಾಂತವಲ್ಲ. ಬದುಕು ರೂಪಿಸುವ ಸಿದ್ಧಾಂತ. ಅನುಭವ ರೂಪಿಸುವ ವ್ಯಕ್ತಿತ್ವ. “ಇದ್ದರೆ ಇನ್ನೆಷ್ಟು ಮಹಾ ವರ್ಷ ಇರ‍್ತೇನೆ? ಇದ್ದಷ್ಟು ದಿನ ಇನ್ನೊಬ್ಬರಿಗೆ ತೊಂದರೆ ಕೊಡದೆ, ಇನ್ನೊಬ್ಬರ ಮೇಲೆ ಆಧಾರ ಪಡದೆ ಇದ್ದು ಬಿಟ್ಟರೆ ಸಾಕು" ಅಂತ ಮಾತನಾಡುವ ವೃದ್ಧರನ್ನು ನೋಡಿರುತ್ತೀರಿ. ‘ಎಷ್ಟು ಮಹಾ ವರ್ಷ ಬದುಕಿರ್ತೀವಿ’ ಎಂಬ ಮಾತು ತಪ್ಪು. ಬದುಕಿರುವ ಪ್ರತಿ ವರ್ಷವೂ ಮಹಾನ್ ವರ್ಷವೇ. ಬದುಕಿರುವ ಪ್ರತಿ ನಿಮಿಷವೂ ದಿವ್ಯ ನಿಮಿಷವೇ. ಹಾಗೆ ಅಂದುಕೊಂಡು ಬದುಕಲಾರಂಭಿಸಿ? ನಿಜಕ್ಕೂ ಈ ಕ್ಷಣ ದಿವ್ಯವಾದದ್ದು ಅನ್ನಿಸತೊಡಗುತ್ತದೆ.

ಇವತ್ತು ಅರ್ಧ ಶತಮಾನ ದಾಟಿ, ಅರ್ಧ ಆಯುಷ್ಯ ಕಳೆದಿರುವ ನನಗೆ ಹೊಸ ಹುಚ್ಚು ಶುರುವಾಗಿದೆ. ಬದುಕಿನ ಮೊದಲ ಅರ್ಧದಲ್ಲಿ ಯಾವುದನ್ನು ಮಾಡಲಿಕ್ಕೆ, ಅಛೀವ್ ಮಾಡಲಿಕ್ಕೆ ಸಾಧ್ಯವಾಗಲಿಲ್ಲವೋ ಈಗ ಅದನ್ನೆಲ್ಲ ಸಾಧ್ಯವಾಗಿಸಿಕೊಳ್ಳಬೇಕು ಎಂಬ ಹಂಬಲ. ಈ ವಯಸ್ಸಿನಲ್ಲಿ ಅದೆಲ್ಲ ಸಾಧ್ಯವಾ ಎಂಬ ಪ್ರಶ್ನೆಯೇ ಇಲ್ಲ. ವಯಸ್ಸು ದೇಹಕ್ಕಾಗಿದೆಯೇ ಹೊರತು ಮನಸ್ಸಿಗೆ ಆಗಿಲ್ಲ. ಒಂದು ಪಿ.ಎಚ್‌ಡಿ ಪ್ರಬಂಧಕ್ಕೆ ಆಗುವಷ್ಟು ಸಾಮಗ್ರಿ ತಂದು ಗುಡ್ಡೆ ಹಾಕಿಕೊಂಡಿದ್ದೇನೆ. ಆದರೆ ಪಿ.ಎಚ್‌ಡಿ ಪ್ರಬಂಧವನ್ನು ಹೇಗೆ ಬರೆಯಬೇಕು? ಗೊತ್ತಿಲ್ಲ. ಗೊತ್ತಿಲ್ಲದಿದ್ದರೇನಂತೆ? ಗೊತ್ತು ಮಾಡಿಕೊಳ್ಳುತ್ತೇನೆ. ಒಬ್ಬ ಗುರುವನ್ನು ಹುಡುಕಿಕೊಳ್ಳುತ್ತೇನೆ. ನನ್ನ ತಾಯಿ ಹತ್ತತ್ತಿರ ಐವತ್ತನೇ ವರ್ಷದಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದು ಪಾಸಾದಳು. ನಾನು ಮನಸು ಮಾಡಿದರೆ ಡಾಕ್ಟರೇಟ್ ಪದವಿ ತಂದುಕೊಳ್ಳಲಾರೆನಾ? ಅದಕ್ಕಾಗಿ ಬದುಕಿನ ಎರಡ್ಮೂರು ವರ್ಷಗಳನ್ನು ಮೀಸಲಿಡಬೇಕು, ಅದು ವ್ಯರ್ಥವೇನಲ್ಲವಲ್ಲ?

ನನ್ನ ದೃಷ್ಟಿಯಲ್ಲಿ ‘ನಾನುಂಟು, ಮೂರು ಲೋಕವುಂಟು’ ಅಂತ ಬದುಕುವುದೆಂದರೆ ಇದೇ. ನಾಳೆ ನಾವು ಸತ್ತ ಮೇಲೆ ಅವರಿವರು ನಮ್ಮ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಕೊಂಚ ಪ್ರಮುಖ ವ್ಯಕ್ತಿಗಳೆನ್ನಿಸಿಕೊಂಡು ಸತ್ತರೆ, ನಮ್ಮ ಬಗ್ಗೆ ಗೊತ್ತಿದ್ದವರು ಇಲ್ಲದ್ದು ಸಲ್ಲದ್ದು ಸೇರಿಸಿ ಬರೆಯುತ್ತಾರೆ. ತುಂಬ ಶ್ರೀಮಂತರಾಗಿ ಸತ್ತರೆ ನಮ್ಮ ಫೊಟೋ ಹಾಕಿಸಿ, ನಾವು ನಡೆದ ಹಾದಿಯಲ್ಲೇ ತಾವೂ ನಡೆಯುವುದಾಗಿ ಬರೆಸಿ ಜಾಹೀರಾತು ಹಾಕಿಸುತ್ತಾರೆ. ತೀರ ವೈಯಕ್ತಿಕ ಮಟ್ಟದಲ್ಲಿ ಸಂಬಂಧ ಹೊಂದಿದವರು ತುಂಬ ದಿನ ವಿಷಣ್ಣರಾಗುತ್ತಾರೆ. ಅದಾದ ಮೇಲೆ ಮತ್ತೆ ಎಲ್ಲ ಮಾಮೂಲೇ. ಅಷ್ಟು ವರ್ಷ ನಾವು ಬದುಕಿದ್ದುದೇ ಸುಳ್ಳೇನೋ ಎಂಬಂತೆ ಈ ಪ್ರಪಂಚ, ಈ ಬದುಕು ಮುಂದುವರೆಯುತ್ತದೆ.

ಅಷ್ಟೇ ಅಲ್ಲವೆ, ಸಾವು ಅಂದರೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 24 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books