Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಓಡಿ ಹೋದ ಹಂತಕ ಅದೇ ಮನೆಯ ಟೆರೇಸಿನ ಮೇಲೆ ಅಂಗಾತ ಮಲಗಿದ್ದ

ಮೊಟ್ಟ ಮೊದಲ ತನಿಖಾಧಿಕಾರಿ, ಉತ್ತರ ಪ್ರದೇಶ್ ಪೊಲೀಸ್ ಪಡೆಯ ದಾತಾರಾಮ್ ನೌನಾರಿಯಾ ಕಿವಿಯಲ್ಲಿ ಅಧಿಕಾರಿಗಳು ಅದೇನು ಮಂತ್ರ ಹೇಳಿದ್ದರೋ ಗೊತ್ತಿಲ್ಲ : ಆತ ಅವಸರವಸರವಾಗಿ ಪಂಚನಾಮೆ ಮುಗಿಸಿ ಆರುಷಿಯ ಶವ ಸಾಗಿಸುವ ಮುನ್ನ ಅದೇಕೋ ಒಮ್ಮೆ ಮೆಟ್ಟಿಲು ಹತ್ತಿ ಮನೆಯ ಟೆರೇಸನ್ನು ನೋಡಿ ಬಿಡೋಣ ಎಂದು ಹೊರಡುತ್ತಾನೆ.

“ಟೆರೇಸ್‌ನ ಬಾಗಿಲಿಗೆ ಹಾಕಿದ ಬೀಗದ ಚಾವಿ ಕೊಡಿ" ಎಂದು ಡಾ.ರಾಜೇಶ್ ತಲವಾರ್‌ರನ್ನು ಕೇಳುತ್ತಾನೆ. ಆದರೆ ರಾಜೇಶ್ ತಲವಾರ್ ಕೊಡುವುದಿಲ್ಲ. ಅದರ ಬದಲಿಗೆ,
“ಟೆರೇಸ್ ಹತ್ತಿ ಏನು ಮಾಡುತ್ತೀರಿ? ಮೊದಲು ನನ್ನ ಮಗಳನ್ನು ಕೊಲೆ ಮಾಡಿರುವ ಹೇಮರಾಜ್‌ನನ್ನು ಹುಡುಕಿರಿ. ಅವನು ಪರಾರಿಯಾಗಿ ಒಂದು ಸಲ ಭಾರತದ ಗಡಿ ದಾಟಿ ನೇಪಾಳಕ್ಕೆ ಹೋಗಿಬಿಟ್ಟನೆಂದರೆ ಅಲ್ಲಿಗೆ ಕಥೆಯೇ ಮುಗಿದು ಹೋಯಿತು" ಎಂದು ಸಿಡುಕುತ್ತಾರೆ.
ಆ ಕ್ಷಣಕ್ಕೆ ದಾತಾರಾಮ್ ನೌನಾರಿಯಾ ಸುಮ್ಮನಾಗುತ್ತಾರಾದರೂ ಅವರ ಕಣ್ಣು ಟೆರೇಸಿಗೆ ಹೋಗುವ ಮೆಟ್ಟಿಲುಗಳ ಮೇಲಿನ ರಕ್ತದ ಕಲೆಗಳತ್ತ ಆ ಹೊತ್ತಿಗಾಗಲೇ ನೆಟ್ಟಿದ್ದವು. ಆದರೆ ಡಾ.ರಾಜೇಶ್ ತಲವಾರ್‌ರ ಸಿಡುಕು ಮತ್ತು ತಲವಾರ್‌ಗಳ ಪರವಾಗಿ ಹಿರಿಯ ಅಧಿಕಾರಿಗಳು ಕಿವಿಯಲ್ಲಿ ಊದಿದ ಗುಪ್ತ ಮಂತ್ರಗಳು ದಾತಾರಾಮ್ ಅವರನ್ನು ಸುಮ್ಮನಾಗಿಸಿದ್ದವು. ಬೇರೆ ದಾರಿ ಇಲ್ಲದೆ ಕೊಲೆ ನಡೆದ ಮನೆಯ ಸೈಟ್ ಪ್ಲಾನ್ ತರಹದ ಸ್ಕೆಚ್ ಸಿದ್ಧಪಡಿಸಿಕೊಂಡು ಅವರು ಹಿಂತಿರುಗಿಬಿಡುತ್ತಾರೆ.

ಅಷ್ಟರಲ್ಲಿ ಮಿಂಚಿನ ವೇಗದಲ್ಲಿ ಕಾರ್ಯಾಚರಣೆಗಳು ನಡೆದು ಹೋಗುತ್ತವೆ. ಆರುಷಿಯ ಶವ ಪರೀಕ್ಷೆ ಮುಗಿದ ಕೆಲವೇ ನಿಮಿಷಗಳಿಗೆ ಅವಳನ್ನು ನೊಯಿಡಾದ ವಿದ್ಯುತ್ ಚಿತಾಗಾರದಲ್ಲಿ ಸುಟ್ಟು ಬಿಡಲಾಗುತ್ತದೆ. ಅವಳ ಚಿತಾಭಸ್ಮವನ್ನು ಚಿತಾಗಾರದ ೯ನೇ ನಂಬರಿನ ಲಾಕರ್‌ನಲ್ಲಿ ಇರಿಸಿ, ಮಾರನೆಯ ಬೆಳಿಗ್ಗೆ ಮನೆಯ ಬಳಿಗೆ ಪೊಲೀಸರು ಬರುವ ಹತ್ತಿಗಾಗಲೇ ಸಂಗ್ರಹಿಸಿಕೊಂಡು ಹರದ್ವಾರದಲ್ಲಿ ಅಂತಿಮ ವಿಧಿ ವಿಧಾನಗಳ ಪ್ರಕಾರ ಗಂಗೆಯೊಳಕ್ಕೆ ಬೆರೆಸಲು ತಲವಾರ್ ದಂಪತಿಗಳು ಹೊರಟು ಬಿಟ್ಟಿರುತ್ತಾರೆ.

ಅವತ್ತು ಮೇ ೧೭, ೨೦೦೮ : ಶನಿವಾರ
ದಾತಾರಾಮ್ ನೌನಾರಿಯಾ ಎಂಬ ಟಿಪಿಕಲ್ ಪೊಲೀಸ್ ಅಧಿಕಾರಿಗೆ ಏನನ್ನಿಸಿತೋ ಏನೋ? ಹಿರಿಯ ಅಧಿಕಾರಿಗಳು ಕಿವಿಯಲ್ಲಿ ಊದಿದ ತಲವಾರ್ ಮಂತ್ರವನ್ನೆಲ್ಲ ಕಿವಿಯಿಂದ ಕೊಡವಿ ಮತ್ತೆ ಜಲ್‌ವಾಯು ವಿಹಾರ್‌ಗೆ ಹೋದರು. ‘ಅವರ ಪ್ರಕಾರ’ ಡಾ.ತಲವಾರ್ ಮನೆಯಲ್ಲಿ ಆರುಷಿ ಕೊಲೆಗೆ ಸಂಬಂಧಿಸಿದಂತೆ ಮತ್ತೇನನ್ನೂ ಹುಡುಕಬೇಕಿರಲಿಲ್ಲ: ಸಂಗ್ರಹಿಸಬೇಕಿರಲಿಲ್ಲ. ಆದರೆ ಮೆಟ್ಟಿಲ ಮೇಲಿನ ರಕ್ತದ ಕಲೆಗಳು ಅವರಿಗೆ ಹಿಂದಿನ ರಾತ್ರಿ ನಿದ್ರೆ ಕೊಟ್ಟಿರಲಿಲ್ಲ. ಒಬ್ಬ ದಾತಾರಾಂ ಅಷ್ಟೇ ಅಲ್ಲ, ಆ ಮನೆಯೊಳಕ್ಕೆ ಆರುಷಿಯ ಶವ ಸಿಕ್ಕ ದಿನ ಕಾಲಿಟ್ಟವರಲ್ಲಿ ಅನೇಕರ ಕಣ್ಣುಗಳು ಮೆಟ್ಟಿಲ ಮೇಲಿನ ರಕ್ತದ ಕಲೆಗಳ ಕಡೆಗೆ ಹೋಗಿದ್ದವು. ಅದನ್ನೊಬ್ಬ ಜವಾಬ್ದಾರಿಯುತ ಮ್ಯಾಜಿಸ್ಟ್ರೇಟ್ ಹುದ್ದೆಗೆ ಸಮಾನರಾದ ಅಧಿಕಾರಿಯೂ ನೋಡಿದ್ದರು. ಆದರೆ ಅವತ್ತು ಎಲ್ಲರನ್ನೂ ಕಲುಕಿದ್ದು ಆರುಷಿ ಎಂಬ ಹದಿನಾಲ್ಕರ ಬಾಲೆಯ ಹತ್ಯೆಯ ಸಂಗತಿ. ಅದು ನೊಯಿಡಾ ಮತ್ತು ದಿಲ್ಲಿ ಜನರ ಮನಸ್ಸನ್ನು ಯಾವ ಪರಿ disturb ಮಾಡಿತ್ತೆಂದರೆ, ಕೊಂಚ ಹೊತ್ತಿನ ನಂತರ ಟೀವಿ ನೋಡುವುದೇ ಭಯಾನಕ ಎಂಬ ನಿರ್ಧಾರಕ್ಕೆ ಅವರು ಬರುವಂತಾಗಿತ್ತು. ವಿಪರೀತ solid ಆದ ಸುದ್ದಿವಾಹಿನಿಗಳು “ನೋಡಿ, ಮನೆಗೆಲಸಕ್ಕೆ ಗಂಡಸರನ್ನು ಇಟ್ಟುಕೊಂಡರೆ ಹೀಗೇ ಆಗೋದು. ಅದರಲ್ಲೂ ನೇಪಾಳಿಗಳನ್ನು ಇಟ್ಟುಕೊಳ್ಳಲೇಬಾರದು. ಹೇಮರಾಜ್‌ನನ್ನು ನೇಮಿಸಿಕೊಳ್ಳುವಾಗ ಡಾ.ತಲವಾರ್ ದಂಪತಿಗಳು ಪೊಲೀಸ್ ವೆರಿಫಿಕೇಶನ್ ಕೂಡ ಮಾಡಿಸಿರಲಿಲ್ಲ. ಇನ್ನೂ ಇಂಥ ಅಮಾಯಕ ಹುಡುಗಿಯರ ಕೊಲೆಗಳು ಅವೆಷ್ಟು ನಡೆಯಲಿವೆಯೋ?" ಎಂದೆಲ್ಲ ದಿನವಿಡೀ ಗರ್ಜಿಸಿ ನಿಜಕ್ಕೂ ಭಯದ, ಗೊಂದಲದ ವಾತಾವರಣ ಉಂಟು ಮಾಡಿದ್ದವು. ತನ್ನ ಪಾಡಿಗೆ ಬಿಟ್ಟಿದ್ದಿದ್ದರೆ ಆರುಷಿ ಕೊಲೆ ಪ್ರಕರಣ ಇಷ್ಟೆಲ್ಲ ಜಟಿಲವಾಗದೆ ಕೆಲವೇ ಗಂಟೆಗಳಲ್ಲಿ ತಾರ್ಕಿಕ ಅಂತ್ಯ ಕಂಡು ಬಿಡುತ್ತಿತ್ತು. ಆದರೆ ಟೀವಿಗಳು ಪ್ರಕರಣವನ್ನು ಅನಗತ್ಯವಾಗಿ ವೈಭವೀಕರಿಸಿ ಚಿತ್ರಿಸಿದ್ದವು.

ಮರುದಿನದ ಹೊತ್ತಿಗೆ ದಾತಾರಾಮ್ ತಲವಾರ್ ದಂಪತಿಗಳ ಮನೆಗೆ ಹೋಗುವುದರೊಳಗಾಗಿ ದಂಪತಿಗಳು ತಮ್ಮ ಮಗಳ ಚಿತಾಭಸ್ಮ ತೆಗೆದುಕೊಂಡು ಕಾರಿನಲ್ಲಿ ಹರದ್ವಾರಕ್ಕೆ ಹೊರಟು ಬಿಟ್ಟಿದ್ದರು. ಮನೆಯಲ್ಲಿದ್ದವರು ರಾಜೇಶ್‌ರ ಅಣ್ಣ ಡಾ.ದಿನೇಶ್ ತಲವಾರ್.
“ಟೆರೇಸ್‌ಗೆ ಹಾಕಿದ ಬಾಗಿಲಿನ ಬೀಗದ ಕೈ ನನ್ನಲ್ಲಿ ಇಲ್ಲ" ಅಂದರು ಆತ. ಇಡೀ ಮನೆ ಹುಡುಕಿದರೂ ಸಿಗಲಿಲ್ಲ. “ಅದನ್ನು ಹೇಮರಾಜ್ ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದ" ಅಂದರು. ಆಗ ಅವರೊಂದಿಗೆ ನಿವೃತ್ತ ಡಿವೈ.ಎಸ್ಪಿ ಕೆ.ಕೆ.ಗೌತಮ್, ಡಾ.ಸುಶೀಲ್ ಚೌಧುರಿ ಮುಂತಾದವರಿದ್ದರು.

“ಚಾವಿಯನ್ನು ಬೇಕಾದರೆ ಹುಡುಕು, ಅದು ಸಿಗದಿದ್ದರೆ ಬಾಗಿಲಿನ ಚಿಲುಕ ಬಿಚ್ಚಿ ಬೀಗದ ಸಮೇತ ತಂದುಬಿಡು, ಆದರೆ ಬೀಗ ಒಡೆಯಬೇಡ" ಎಂದು ಹಿರಿಯ ಅಧಿಕಾರಿಯೊಬ್ಬರು ದಾತಾರಾಮ್‌ಗೆ ಹೇಳಿದ್ದರು.
ಅದ್ಯಾವುದನ್ನೂ ಲೆಕ್ಕಿಸದೆ ರಕ್ತದ ಕಲೆಗಳಿದ್ದ ಮೆಟ್ಟಿಲು ಹತ್ತಿ ಹಗಿ ಟೆರೇಸ್‌ನ ಬಾಗಿಲ ಬೀಗ ಒಡೆದೇ ಬಿಟ್ಟರು ದಾತಾರಾಮ್ ನೌನಾರಿಯಾ. ಆಗ ಬಂತು ಗಪ್ಪನೆ ಕೊಳೆತ ಹೆಣದ ವಾಸನೆ.

ಅಲ್ಲಿ ದೂರದಲ್ಲಿ ಮಲಗಿದ್ದ ಹೇಮರಾಜ್: ಹೆಣವಾಗಿ!
ಟೀವಿ ಛಾನಲ್‌ಗಳ ದನಿ ಛಕ್ಕನೆ ಬದಲಾಯಿತು. “ಇದ ಮರ್ಯಾದಾ ಹತ್ಯೆ!" ಎಂದು ಹೊಸ ಹುರುಪಿನೊಂದಿಗೆ ಅಬ್ಬರಿಸತೊಡಗಿದವು. ನೊಯಿಡಾದ ‘ಜಲ್‌ವಾಯು ವಿಹಾರ್’ನ ಎಲ್-೩೨ರಲ್ಲಿ ನಡೆದದ್ದು ಕೇವಲ ಆರುಷಿ ಎಂಬ ಹುಡುಗಿಯ ಕೊಲೆಯಾಗಿದ್ದರೆ, ಅದು ನೇಪಾಳಿಯೊಬ್ಬ ಮಾಡಿ ಓಡಿ ಹೋದ ಒಂದು ಸಾಮಾನ್ಯ ಮಟ್ಟದ sensational ಕಥೆಯಾಗಿರುತ್ತಿತ್ತು. ಆದರೆ ಹಂತಕನೆಂದು ಭಾವಿಸಲಾಗಿದ್ದ ಹೇಮರಾಜ್ ತಾನೇ ಶವವಾಗಿ ಅದೇ ಮನೆಯ ಟೆರೇಸಿನ ಮೇಲೆ ಸಿಕ್ಕಿದ್ದರಿಂದ ಸುದ್ದಿಯ ಧ್ವನಿಯೇ ಬದಲಾಯಿತು. ಅಷ್ಟೇ ಅಲ್ಲ, ನಿಜವಾಗಿಯೂ ಈ ಬಾರಿ ದೇಶಕ್ಕೆ ದೇಶ ಎಚ್ಚೆತ್ತು ಎದ್ದು ನಿಂತಿತ್ತು.
ಪರಿಣಾಮದ ಮಾತು ಒತ್ತಟ್ಟಿಗಿರಲಿ. ಪೊಲೀಸ್ ದೃಷ್ಟಿ ಹಾಗೂ ತನಿಖೆಯ ದೃಷ್ಟಿಯಿಂದ ಹೇಮರಾಜ್‌ನ ಶವ ಸಿಕ್ಕ ಘಳಿಗೆಯಿಂದ ಏನೇನಾಯಿತು ಎಂಬುದನ್ನು ವಿವರವಾಗಿ ನೋಡೋಣ.

ಮೇ ೧೭ನೇ ತಾರೀಕು ದಾತಾರಾಮ್ ಜಲ್‌ವಾಯು ವಿಹಾರ್‌ಗೆ ಹೋದಾಗ ಅಲ್ಲಿ ಡಾ.ರಾಜೇಶ್‌ರ ಅಣ್ಣ ಡಾ.ದಿನೇಶ್ ತಲವಾರ್ ಇದ್ದರು. ತಮ್ಮನ ಮಗಳ ಚಿತಾಭಸ್ಮವನ್ನು ಗಂಗೆಯಲ್ಲಿ ಬೆರೆಸುವುದೆಂದರೆ, ಅದು ಕೇವಲ ರಾಜೇಶ್ ಮತ್ತು ನೂಪುರ್ ಹೋಗಿ ಮಾಡಿ ಬರುವ ಸಂಗತಿಯಲ್ಲ. ಅದು ಮನುಷ್ಯ ಜನ್ಮಕ್ಕೆ ಒದಗಿ ಬರುವ ಹದಿನಾರು ಸಂಸ್ಕಾರಗಳ ಪೈಕಿ ಕೊನೆಯದು. ಅದಕ್ಕೆ ಹುಡುಗಿಯ ದೊಡ್ಡಪ್ಪ ಡಾ.ದಿನೇಶ್ ತಲವಾರ್ ಹೋಗದೆ ಇರುತ್ತಾನೆಯೇ? ದಾತಾರಾಮ್‌ಗೆ ಮೊದಲು ಮೂಡಿದ ಅನುಮಾನವೇ ಅದು. ಇವತ್ತು ಕಣ್ಣೆದುರಿಗೆ ಜೋಡಿ ಹತ್ಯೆಯ ತೀರ್ಪಿನ ಪುಟಗಳನ್ನು ಇಟ್ಟುಕೊಂಡು ನೋಡಿದಾಗ ಇನ್ನೂ ಒಂದು ಅನುಮಾನ ಮೂಡುತ್ತದೆ. ಆರುಷಿಯೊಂದಿಗೆ ಹೇಮರಾಜ್‌ನದೂ ಕೊಲೆಯಾಗಿದೆ ಮತ್ತು ಅವನ ಶವ ಅಲ್ಲೇ ಟೆರೇಸಿನ ಮೇಲೆ ಬಿದ್ದಿದೆ ಎಂಬ ಸಂಗತಿ ಡಾ.ದಿನೇಶ್ ತಲವಾರ್‌ಗೆ ಆ ಹೊತ್ತಿಗಾಗಲೇ ಗೊತ್ತಾಗಿತ್ತಾ? ಪೊಲೀಸರ ತನಿಖೆ ಯಾವ ಜಾಡು ಹಿಡಿಯುತ್ತದೆ ನೋಡೋಣ ಅಂದುಕೊಂಡೇ ಆತ ತಮ್ಮನ ಮನೆಯಲ್ಲಿ ಉಳಿದರಾ? ಸಾಮಾನ್ಯವಾಗಿ ಮನೆಯ ಮೆಟ್ಟಿಲ ಮೇಲೆ ರಕ್ತದ ಕಲೆ ಕಂಡರೆ, ಅದು ಟೆರೇಸ್‌ನತ್ತ ಹೋಗುತ್ತಿರುವುದು ಖಚಿತವಾದರೆ, ಕೊಲೆಯಾದ ಹುಡುಗಿಯ ತಂದೆ “ಬೀಗ ಸಿಗದಿದ್ದರೆ ಏನಾಯ್ತು ಬೀಗ ಒಡೆದು ಟೆರೇಸಿಗೆ ಹೋಗಿ ನೋಡಿ" ಅನ್ನುತ್ತಾನೆ. ಆದರೆ ಡಾ.ರಾಜೇಶ್ ತಲವಾರ್, “ಟೆರೇಸು ಹತ್ತಿ ಏನು ಮಾಡುತ್ತೀರಿ? ಯಾಕೆ ಟೈಮ್ ವೇಸ್ಟ್ ಮಾಡುತ್ತೀರಿ? ಮೊದಲು ಹೇಮರಾಜ್‌ನನ್ನು ಹುಡುಕಿ" ಅಂದು ಪೊಲೀಸರನ್ನು ದಿಕ್ಕಿಗೊಬ್ಬರಂತೆ ಓಡಿಸಿದರು. ಅವರ ಮಾತು ಹಾಗಿರಲಿ, ಸ್ವಂತ ತಮ್ಮನ ಮನೆಯ ಮೆಟ್ಟಿಲ ಮೇಲೆ ರಕ್ತದ ಕಲೆ ಬಿದ್ದಿದ್ದು ಅದು ಟೆರೇಸಿನ ಕಡೆಗೆ ದಾರಿ ತೋರುತ್ತಿದ್ದರೆ ಯಾವ ಅಣ್ಣ “ನನ್ನ ಬಳಿ ಟೆರೇಸಿನ ಬಾಗಿಲ ಬೀಗದ ಚಾವಿ ಇಲ್ಲ" ಅಂತ ನೆಪ ಹೇಳಿ ಕೂಡುತ್ತಾನೆ? ದಾತಾರಾಮ್‌ಗೆ ಆಗಲೇ ಅನುಮಾನ ಬಂದಿತ್ತು. ಈ ಮನುಷ್ಯ ಪೊಲೀಸರ ತನಿಖೆಯ ಜಾಡು ಅರಿಯಲು ಹೊಂಚಿ ಮನೆಯಲ್ಲೇ ಕುಳಿತಿದ್ದಾನೆ ಅಂತ. ಕಡೆಗೆ ಎಲ್ಲ ಅಡೆತಡೆಗಳನ್ನು ಮುರಿದು ಬಾಗಿಲ ಬೀಗ ಒಡೆದೇ ಬಿಟ್ಟರು ದಾತಾರಾಮ್. ಅವರಿಗೆ ಆ ಕ್ಷಣದಲ್ಲಿ ಬಹುಶಃ ಗೊತ್ತಿರಲಿಲ್ಲ: ತನಿಖೆಯ ಜಾಡು ತಪ್ಪಿಸಲಿಕ್ಕೆ ಅಲ್ಲಿ ಇನ್ನೂ ಒಬ್ಬ ವ್ಯಕ್ತಿ ಕುಳಿತಿದ್ದರು. ಅವರೊಬ್ಬ ನಿವೃತ್ತ ಪೊಲೀಸ್ ಅಧಿಕಾರಿ. ಆ ಕ್ಷಣದಲ್ಲಿ ಅವರು ದಾತಾರಾಮ್‌ರೊಂದಿಗೆ ಏನೂ ಮಾತನಾಡಲಿಲ್ಲ. ಆದರೆ ಮುಂದೆ ತನಿಖೆ ಜಾಡು ತಪ್ಪುವಲ್ಲಿ ಬಹುದೊಡ್ಡ ಪಾತ್ರ ವಹಿಸಿದರು.
ಟೆರೇಸ್‌ನ ಮೇಲೆ ರಕ್ತದ ಮಡುವಿನಲ್ಲಿ ಅಂಗಾತ ಮಲಗಿದ್ದ ಹೇಮರಾಜ್‌ನ ಶವವನ್ನು ಮೊದಲು ನೋಡಿದವರು ತನಿಖಾಧಿಕಾರಿ ದಾತಾರಾಮ್ ನೌನಾರಿಯಾ, ಡಾ.ದಿನೇಶ್ ತಲವಾರ್, ನಿವೃತ್ತ ಪೊಲೀಸ್ ಅಧಿಕಾರಿ ಕೆ.ಕೆ.ಗೌತಮ್, ಡಾ.ಸುಶೀಲ್ ಚೌಧುರಿ
ಮುಂತಾದವರು. ಅಂಗಾತ ಬಿದ್ದ ರಕ್ತ ಸಿಕ್ತ ಶವದ ಮೇಲೆ ಏರ್‌ಕಂಡೀಶನರ್‌ನ ಕೂಲರ್ ಯಂತ್ರದ ಪ್ಯಾನಲ್ ಇರಿಸಲಾಗಿತ್ತು. ಟೆರೇಸ್‌ನ ಬಾಗಿಲು ತೆರೆದ ತಕ್ಷಣ ಅಲ್ಲಿಂದ ಶವ ಬಿದ್ದಿದ್ದ ಜಾಗದ ತನಕ ಶವವನ್ನು ಎಳೆದುಕೊಂಡು ಹೋದ drag marks (ಎಳೆದೊಯ್ದ ರಕ್ತದ ಕಲೆಗಳು) ಬಿದ್ದಿದ್ದವು.

“ಈ ಶವ ಯಾರದೆಂದು ಗುರುತಿಸುತ್ತೀರಾ?" ದಾತಾರಾಮ್ ಕೇಳಿದರು.
“ಇಲ್ಲ. ಇದು ಕೊಳೆತಿದೆ. ನನಗೆ ಗುರುತು ಸಿಗುತ್ತಿಲ್ಲ" ಅಂದದ್ದು ಡಾ.ದಿನೇಶ್ ತಲವಾರ್. ತಮ್ಮನ ಮನೆಯಲ್ಲಿ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದ ಆಳನ್ನು ಗುರುತಿಸಲು ಸಾಧ್ಯವಿಲ್ಲ ಅಂದರೆ ಏನರ್ಥ? ಅದು ಗುರುತಿಸಲಾಗದಷ್ಟೇನೂ ಕೊಳೆತಿರಲಿಲ್ಲ. ಆದರೆ ಹೇಮರಾಜ್‌ನಂತೆಯೇ ಅವರಿವರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಜಲ್‌ವಾಯು ವಿಹಾರ್‌ನ ಆಸುಪಾಸಿನ, ಅವನಿಗೆ ಪರಿಚಿತರೂ ಆಗಿದ್ದ ರಾಮ್‌ಪ್ರಸಾದ್, ರುದ್ರಲಾಲ್ ಮುಂತಾದವರು ಟೆರೇಸಿಗೆ ಬಂದು ನೋಡಿದ ಕೂಡಲೆ ಹೇಮರಾಜ್‌ನ ಶವವನ್ನು ಗುರುತಿಸಿದರು. ಒಬ್ಬನಂತೂ ಅಳತೊಡಗಿದ. ಆದರೆ ಮನೆಯ ಯಜಮಾನ ಗುರುತಿಸಬೇಕಲ್ಲ?

“ಇಲ್ಲ, ಅವರಾಗಲೇ ಚಿತಾಭಸ್ಮ ತೆಗೆದುಕೊಂಡು ಹರದ್ವಾರಕ್ಕೆ ಹೊರಟು ಹೋಗಿದ್ದಾರೆ..." ತೊದಲಿದರು ಡಾ.ದಿನೇಶ್ ತಲವಾರ್.
“ಫೋನ್ ಮಾಡಿ ಹೇಳಿ. ಅವರು ಎಲ್ಲಿದ್ದರೂ ತಕ್ಷಣ ಹಿಂತಿರುಗಬೇಕು" ಈ ಬಾರಿ ದಾತಾರಾಮ್ ಅವರ ದನಿ ಗಡುಸಾಗಿತ್ತು. ಫೋನ್‌ನಲ್ಲಿ ದಿನೇಶ್ ತಲವಾರ್ ಅದೇನು ಹೇಳಿದರೋ ಗೊತ್ತಿಲ್ಲ. ಕೆಲವೇ ಹೊತ್ತಿನಲ್ಲಿ ಡಾ.ರಾಜೇಶ್ ತಲವಾರ್ ‘ಜಲ್‌ವಾಯು ವಿಹಾರ್’ಗೆ ಹಿಂತಿರುಗಿದ್ದರು. ಕಾರು ಅಪಾರ್ಟ್‌ಮೆಂಟಿನ ಮುಂದೆಯೇ ನಿಂತಿತ್ತು. ಹಿಂದಿನ ಸೀಟಿನಲ್ಲಿ ಡಾ.ನೂಪುರ್ ಕುಳಿತಿದ್ದರು. ಅವರ ಮನೆಯದೇ ಆಳು ಸತ್ತು ಹೋಗಿದ್ದ. ಅವನ ಕೈಲಿ ಒಂದೂವರೆ ವರ್ಷ ಅಡುಗೆ ಮಾಡಿಸಿಕೊಂಡು ತಿಂದವರು ಆಕೆ. ಕಡೆಯಪಕ್ಷ ಕಾರಿನಿಂದ ಇಳಿದು ಹೋಗಿ ಅವನ ಶವವನ್ನೂ ಆಕೆ ನೋಡಲಿಲ್ಲ. ಮುಖ ನಿರ್ಭಾವುಕವಾಗಿತ್ತು. ಗಡಸು ಗಡಸು. ಮೆಟ್ಟಿಲು ಹತ್ತಿ ಬಂದ ಡಾ.ರಾಜೇಶ್ ತಲವಾರ್ ಮೊದಲಿಗೆ “ಇದು ಯಾರ ಶವವೋ ಗೊತ್ತೇ ಇಲ್ಲ" ಅಂದರು. ಆನಂತರ ಕೊಂಚ ಹೊತ್ತಿನ ಮೇಲೆ “ಹ್ಞಾಂ, ಹೇಮರಾಜ್‌ನದೇ ಇದ್ದಂತಿದೆ" ಅಂದರು. ತನಿಖಾಧಿಕಾರಿ ದಾತಾರಾಮ್ ಅವರು ಯಾವ ಸುಳಿವನ್ನೂ ಬಿಟ್ಟುಕೊಡದೆ ಒಮ್ಮೆ ಡಾ.ತಲವಾರ್‌ರೆಡೆಗೆ ನೋಡಿದರು.

ಹಿಂದಿನ ದಿನ ಕೆಲಸ ಮಾಡಿದ ಅದೇ ಚುನ್ನೀಲಾಲ್ ಗೌತಮ್ ಹೇಮರಾಜ್ ಶವದ ಫೊಟೋಗಳನ್ನು ತೆಗೆದ. ಆನಂತರ ಮೆಟ್ಟಿಲು, ಅವುಗಳನ್ನು ಹತ್ತುವಾಗ ಹಿಡಿದುಕೊಳ್ಳಲು ಇದ್ದ railing (ಹಿಡಿಕೆ) ಬಾಗಿಲು, ಅದರ ಚಿಲಕ, ಬೀಗ, ಕೂಲರ್‌ನ ಪ್ಯಾನಲ್ ಮುಂತಾದವುಗಳ ಮೇಲಿಂದ ಬೆರಳಚ್ಚುಗಳನ್ನು ಸಂಗ್ರಹಿಸಿದ. ಪಂಚನಾಮೆಯ ಕಾಗದಗಳನ್ನು ಸಿದ್ಧ ಗೊಳಿಸಿ, ಶವ ಪರೀಕ್ಷೆ ಮಾಡುವಂತೆ ವೈದ್ಯರನ್ನು ವಿನಂತಿಸುವ ಅರ್ಜಿ ಸಿದ್ಧಪಡಿಸಿದ ಎಸ್.ಐ. ಬಚ್ಚೂ ಸಿಂಗ್ ಶವವನ್ನು ಪೋಸ್ಟ್ ಮಾರ್ಟಂ ಮಾಡುವಂತೆ ವೈದ್ಯರನ್ನು ವಿನಂತಿಸುವ inquest ಪತ್ರ ಸಿದ್ಧ ಪಡಿಸಿದರು. ಮಧ್ಯಾಹ್ನ ಹನ್ನೆರಡೂವರೆಯಿಂದ ಆರಂಭವಾಗಿ ಎರಡೂವರೆಯೊಳಗಾಗಿ ಇದೆಲ್ಲ ಮುಗಿದು ಪೇದೆಗಳಾದ ರಾಜಪಾಲ ಸಿಂಗ್ ಮತ್ತು ಪವನ್ ಕುಮಾರ್‌ರನ್ನು ಜೊತೆ ಮಾಡಿ ಶವವನ್ನು ಅದೇ ಸೆಕ್ಟರ್ ೨೫ರಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳಿಸಲಾಯಿತು.

ಹೇಮರಾಜ್‌ನ ಶವದ ಮರಣೋತ್ತರ ಪರೀಕ್ಷೆಯನ್ನು ಗೌತಮ್‌ಬುದ್ಧ್ ನಗರ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್‌ರ ಆಜ್ಞೆಯ ಪ್ರಕಾರ ಮೇ ೧೭, ೨೦೦೮ರ ರಾತ್ರಿ ೮ ಗಂಟೆಗೆ ಡಾ.ನರೇಶ್ ರಾಜ್ ಮಾಡಿದರು. ಅವರ ಗಮನಿಕೆಯ ಪ್ರಕಾರ ಹೇಮರಾಜ್ ನಲವತ್ತೈದು ವರ್ಷದವನಾಗಿದ್ದು, ಸಾಧಾರಣ ಮೈಕಟ್ಟಿನವನಾಗಿದ್ದ. ಮರಣದ ನಂತರ ಉಂಟಾಗುವ ಸೆಟೆಯುವಿಕೆ (rigor mortis) ಇಡೀ ದೇಹವನ್ನು ವ್ಯಾಪಿಸಿತ್ತು. ಎರಡೂ ಕಣ್ಣು ಹೊರಕ್ಕೆ ಉಬುಕಿಕೊಂಡಿದ್ದವು. ಮೂಗು- ಬಾಯಿಗಳಿಂದ ನೆತ್ತರು ಹರಿದಿತ್ತು. ಆತನ ಪುರುಷಾಂಗ ಮತ್ತು ವೃಷಣಗಳು ಬಾತುಕೊಂಡಿದ್ದವು. ಅವನ ಬಲಗೈಯ ಮೊಳಕೈ ಮೂಳೆಯ ಬಳಿ ಗಾಯವಿತ್ತು. ಅದೇ ರೀತಿಯ ಗಾಯ ಎಡ ಮೊಳಕೈ ಮೂಳೆಯಲ್ಲೂ ಇತ್ತು. ಅವನ ಕತ್ತು Adam's apple ಮೇಲೆ ಅಡ್ಡಡ್ಡಲಾಗಿ ಸಿಗಿಯಲಾಗಿತ್ತು. ಈ ಸಿಗಿತದ ಗಾಯ ಆರುಷಿಯ ಕೊರಳ ಸಿಗಿತದಂತೆ ಸಣ್ಣದಾಗಿರಲಿಲ್ಲ. ಅದು ಬಲಗಿವಿಯ ಕೆಳಗಿನಿಂದ ಆರಂಭವಾಗಿ ಸುಮಾರು ೩೦ ಸೆಂಟಿ ಮೀಟರಿನಷ್ಟು ಎಡಗಿವಿಯ ಕಡೆಗೆ ಹರಿದು ಆರಂಭದಿಂದ ಅಂತ್ಯದ ತನಕ ಅದೇ ತೀವ್ರತೆ ಮತ್ತು ಆಳ ಹೊಂದಿತ್ತು. ಆತನ ಉಸಿರ ನಾಳ (wind pipe) ಸಂಪೂರ್ಣವಾಗಿ ತುಂಡಾಗಿ ಹೋಗಿತ್ತು. ಆರುಷಿಗೆ ಆದಂತೆಯೇ ಎಡ ಹುಬ್ಬಿನ ಮೇಲು ಭಾಗದಲ್ಲಿ ಒಂದು ೩ಸೆಂಮೀ ೨ಸೆಂಮೀ ಗಾತ್ರದ ಗಾಯವಾಗಿತ್ತು. ಅದೇ ರೀತಿಯ ಗಾಯ ಮುಖದ ಎಡ ಭಾಗದಲ್ಲೂ ಆಗಿತ್ತು. ಆದರೆ ತುಂಬ ತೀವ್ರವಾದ ಹೊಡೆತ ತಲೆಯ ಹಿಂಬದಿಯಲ್ಲಿ, ಎಡಗಿವಿಯ ಮೇಲು ಭಾಗದಲ್ಲಿ ಆಗಿತ್ತು. ಅದಕ್ಕೆ ಕೊಂಚ ಕೆಳಗೆ ೮ಸೆಂಮೀ ೨ಸೆಂಮೀ ಗಾತ್ರದ ತೀವ್ರ ಗಾಯವಾಗಿ ಬುರುಡೆಯ ಎಡ ಭಾಗ ಫ್ರಾಕ್ಚರ್ ಆಗಿತ್ತು.

ಹೇಮರಾಜ್‌ನ ಹೃದಯದ ಕವಾಟದಲ್ಲಿ ನೆತ್ತರು ಇರಲಿಲ್ಲ. ಹೊಟ್ಟೆ ಬಾತುಕೊಂಡಿತ್ತು. ಅದರಲ್ಲಿ ಸುಮಾರು ೨೫ ಮಿಲಿ ಲೀಟರಿನಷ್ಟು ದ್ರವ ಪದಾರ್ಥವಿತ್ತು. ಅದು ಮದ್ಯವಾಗಿರಲಿಲ್ಲ. ಯಾವ ಕಾರಣಕ್ಕಾಗಿ ಆರುಷಿ ಸತ್ತಿದ್ದಳೋ, ಅದೇ ಕಾರಣಕ್ಕೆ ಹೇಮರಾಜ್ ಸತ್ತಿದ್ದ. ತೀವ್ರ ರಕ್ತಸ್ರಾವ: hypovolemia.

ನೋಡಿ, ರೈಗರ್ ಮಾರ್ಟಿಸ್ ಅಥವಾ ಶವದ ಸೆಟೆಯುವಿಕೆ ಎಂಬುದು ಮನುಷ್ಯ ಸತ್ತ ಮರುಕ್ಷಣದಿಂದ ಆರಂಭವಾಗುತ್ತದೆ. ಹೇಮರಾಜ್‌ನ ಶವ ಆರುಷಿಯ ಶವಕ್ಕಿಂತ ಹೆಚ್ಚು ಕೊಳೆತ್ತಿತ್ತು. ಏಕೆಂದರೆ ಅದು ಪತ್ತೆಯಾದದ್ದೇ ಮಾರನೆಯ ದಿನ. ಅಲ್ಲದೆ ಅದು ದಿಲ್ಲಿಯಲ್ಲಿ ದುರ್ಭರವೆನ್ನಿಸುವಂತಹ ಮೇ ತಿಂಗಳು. ಆ ಬಿಸಿಲಲ್ಲಿ ಯಾವುದೇ ನೆರಳಿಲ್ಲದ ಟೆರೇಸ್‌ನ ಮೇಲೆ ಬಿದ್ದುಕೊಂಡಿತ್ತಾದ್ದರಿಂದ ಕೊಳೆಯುವಿಕೆ ತುಂಬ ಶೀಘ್ರವಾಗಿ ಆಗುತ್ತದೆ. ಮನುಷ್ಯ ಸತ್ತ ತಕ್ಷಣ ಮೊದಲು ಮುಖದ ಮಾಂಸಖಂಡಗಳು ಬಿಗಿಯಲಾರಂಭಿಸುತ್ತವೆ. ಆಮೇಲೆ ಕತ್ತು, ಎದೆ, ಕೈಗಳು, ಹೊಟ್ಟೆ, ಕೆಳಭಾಗದ ಅಂಗಾಂಗಗಳು ಸೆಟೆಯ ತೊಡಗುತ್ತವೆ. ಈ ಪ್ರಕ್ರಿಯೆ ನಿರಂತರವಾಗಿ ಹನ್ನೆರಡು ಗಂಟೆಗಳ ಅವಧಿಯಲ್ಲಿ ಜರುಗಿ, ಅದೇ ಸೆಟೆದ ಸ್ಥಿತಿ ಮತ್ತೆ ಹನ್ನೆರಡು ಗಂಟೆಗಳ ಕಾಲ ಮುಂದುವರೆಯುತ್ತದೆ. ಆನಂತರ, ಅಂದರೆ ಇಪ್ಪತ್ನಾಲ್ಕು ಗಂಟೆಗಳ ತರುವಾಯ ಹೇಗೆ ಮುಖದ ಮಾಂಸಖಂಡಗಳಿಂದ ದೇಹ ಸೆಟೆಯಲಾರಂಭಿಸಿತ್ತೋ, ಹಾಗೆಯೇ ಅದೇ ಪ್ರಕಾರ ದೇಹದ ಅಂಗಾಂಗಗಳು ಸೆಟೆತ ಕಳೆದುಕೊಂಡು ದೇಹ ಯಥಾಸ್ಥಿತಿಗೆ ಬಂದು ತಲುಪುತ್ತದೆ. ಇದು rigor mortisನ ಕ್ರಮ, ವಿಧಾನ. ಈ ಬಗ್ಗೆ ವಿವರ ಗೊತ್ತಿದ್ದ ಫೊರೆನ್ಸಿಕ್ ವೈದ್ಯ ಶವ ಪರೀಕ್ಷೆ ಮಾಡಿದ್ದಿದ್ದರೆ ‘ನಾನು ಶವ ನೋಡಿದಾಗ ರೈಗರ್ ಮಾರ್ಟಿಸ್ set in ಆಗಿತ್ತು’ ಅಂತ ಷರಾ ಬರೆಯುತ್ತಿರಲಿಲ್ಲ. ಆದರೆ ಶವ ಪರೀಕ್ಷೆ ಮಾಡಿದವರು ಮೆಡಿಕಲ್ ಆಫೀಸರ್ ಡಾ.ನರೇಶ್ ರಾಜ್.

ನಿಮಗೆ ಗೊತ್ತಿರಲಿ, ಶವದ ಸೆಟೆತ ಮುಗಿದು ದೇಹ ಯಥಾಸ್ಥಿತಿಗೆ ಮರಳುವ ಹೊತ್ತಿಗೆ ಅದರ ಕೊಳೆತ ಆರಂಭವಾಗುತ್ತದೆ. ಅದರ ಮೊದಲ ಸೂಚನೆಯಾಗಿ ಕೆಳ ಹೊಟ್ಟೆಯ ಬಲಭಾಗದಲ್ಲಿ ಒಂದು ತಿಳಿ ಹಸಿರು ಪ್ಯಾಚ್ ಕಾಣಿಸುತ್ತದೆ. ಏಕೆಂದರೆ ಸತ್ತವನ ಮಲ ಇನ್ನೂ ಗಟ್ಟಿಯಾಗಿರುವುದಿಲ್ಲವಾದ್ದರಿಂದ ಮಲದ್ರವ ಅಲ್ಲಿಗೆ ಬಂದು ಶೇಖರಗೊಳ್ಳುತ್ತದೆ. ಕೊಳೆತ ಆರಂಭವಾಗುವುದು ಮುಖ್ಯವಾಗಿ ಬ್ಯಾಕ್ಟೀರಿಯಾಗಳಿಂದ. ದೇಹದಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಕೂಡ ಭಯಂಕರ ವೇಗದಲ್ಲಿ ಬೆಳೆಯಲಾರಂಭಿಸುತ್ತವೆ. ಅವು ಉತ್ಪನ್ನ ಮಾಡುವ ಹೈಡ್ರೋಜನ್ ಸಲ್‌ಫೈಡ್ ಗ್ಯಾಸ್ ಎಂಬುದು ಮನುಷ್ಯನ ರಕ್ತವನ್ನು ಕೆಂಪಿನಿಂದ ಹಸಿರು ಬಣ್ಣಕ್ಕೆ ತಿರುಗಿಸುತ್ತದೆ. ಸಾಮಾನ್ಯವಾಗಿ ಶವದ ಕೊಳೆಯುವಿಕೆ ಭಯಂಕರ ಕೆಟ್ಟ ವಾಸನೆ ಉಂಟು ಮಾಡಲಿಕ್ಕೆ ಕಾರಣವೇ ಬ್ಯಾಕ್ಟೀರಿಯಾಗಳು ಮತ್ತು ಅವು ಹೊರಡಿಸುವ ಹೈಡ್ರೋಜನ್ ಸಲ್‌ಫೈಡ್ ಗ್ಯಾಸ್. ಇದೇ ಗ್ಯಾಸ್ ದೇಹದೊಳಗಿನ ರಕ್ತನಾಳಗಳಿಗೆ ನುಗ್ಗಿ ರಕ್ತವನ್ನು ಮೂಗು ಬಾಯಿಗಳಿಂದ ಒಸರುವಂತೆ ಮಾಡುತ್ತದೆ. ಮುಖ್ಯವಾಗಿ ನಾಲಿಗೆ ಬಾತುಕೊಂಡು ಕೆಲವೊಮ್ಮೆ ಬಾಯಿಂದ ಹೊರ ಚಾಚಿಕೊಳ್ಳುವಂತೆ ಮಾಡುತ್ತದೆ. ಕಣ್ಣು ಉಬುಕಿ ಬರುತ್ತವೆ. ಹಾಗೆಯೇ ಗುಪ್ತಾಂಗಗಳು, ವೃಷಣ ಬಾತುಕೊಳ್ಳುತ್ತವೆ. ಗಮನಾರ್ಹ ಅಂಶವೆಂದರೆ ಬ್ಯಾಕ್ಟೀರಿಯಾಗಳಿಂದ ಹೊರ ಬೀಳುವ ಗ್ಯಾಸ್ ಮೊಟ್ಟ ಮೊದಲು ಊತ ತರುವುದೇ ಪುರುಷಾಂಗ ಹಾಗೂ ವೃಷಣಗಳಲ್ಲಿ.
ಇದನ್ನೆಲ್ಲ ವಿವರಿಸಲಿಕ್ಕೆ ಕಾರಣಗಳಿವೆ. ಹೇಮರಾಜ್‌ನ ಗುಪ್ತಾಂಗಗಳು ಬಾತುಕೊಂಡಿದ್ದವು ಅಂದ ಕೂಡಲೆ ಆ ಭಾಗಕ್ಕೆ ಒದ್ದು ಸಾಯಿಸಲಾಗಿದೆ ಎಂದು ಜನ ಮಾತನಾಡಿಕೊಂಡರು. ಆದರೆ ಹಾಗಾಗಿರಲಿಲ್ಲ. ಬಿದ್ದ ಹೊಡೆತಕ್ಕೆ ನೆಲಕ್ಕೆ ಬಿದ್ದ ಹೇಮರಾಜ್ ತನ್ನೆರಡೂ ಮೊಳಕೈಗಳನ್ನು ಮುರಿದುಕೊಂಡಿದ್ದ. ಕೊಲ್ಲುವಾತ ಎಷ್ಟು ಕ್ರುದ್ಧನಾಗಿದ್ದನೆಂದರೆ ಇದ್ದ ಸತುವನ್ನೆಲ್ಲ ಹಾಕಿ ೩೦ ಸೆಂ.ಮೀ ಉದ್ದಕ್ಕೆ ಬ್ಲೇಡ್ ಅಥವಾ ಇನ್ಯಾವುದೋ ಮೊನಚಾದ ಆಯುಧ ಹಾಕಿ ಕತ್ತು ಸೀಳಿದ್ದ. ಆರಂಭದ ಒತ್ತು, ಪ್ರೆಷರ್ ಮತ್ತು ತೀವ್ರತೆಯೇ ಸಿಗಿತದ ಕೊನೆಯ ಬಿಂದುವಿನ ತನಕ ಇತ್ತು. ಆರುಷಿಯ ದೇಹದ ಬಲ ಭಾಗಗಳಿಗೇ ಗಾಯಗಳಾಗಿದ್ದರೆ ಹೇಮರಾಜ್‌ನ ದೇಹದ ಹಿಂಭಾಗಕ್ಕೇ ಹೆಚ್ಚಿನ ಪೆಟ್ಟುಗಳು ಬಿದ್ದಿದ್ದವು. ಆರುಷಿಯ ಕತ್ತು ಸಿಗಿಯುವಿಕೆ ಅವಳ ಕೋಣೆಯಲ್ಲೇ ನಡೆದಿದ್ದರೆ, ಬಹುಶಃ ಹೇಮರಾಜ್‌ನ ಕತ್ತನ್ನು ಟೆರೇಸಿನ ಮೇಲೆ ಸಿಗಿಯಲಾಗಿತ್ತು. ಇದು ಹೀಗೇ ಆಗಿರಬೇಕು ಎಂಬುದನ್ನು ಮುಂದೆ ವಿವರಿಸುತ್ತೇನೆ. ಯಾವತ್ತಿಗೂ ಶವದ ಗುಪ್ತಾಂಗಗಳ ಸ್ಥಿತಿ ಅಥವಾ ಅವುಗಳ ವಿಚ್ಛಿದ್ರತೆ ಕಂಡು ಈ ಸಾವು ಲೈಂಗಿಕ ಸಂಬಂಧಿ ಕಾರಣಗಳಿಂದಾಗಿಯೇ ಆಗಿರಬೇಕು ಎಂದು ತೀರ್ಮಾನಿಸುವುದು ಜನಸಾಮಾನ್ಯರ ಮನಸ್ಥಿತಿ. ಆದರೆ, ವೈದ್ಯ ವಿಜ್ಞಾನದ ಭಾಷೆ ಮತ್ತು ಭಾಷ್ಯವೇ ಬೇರೆ.

ಹೇಮರಾಜ್‌ನ ಶವ ಸಿಕ್ಕ ತಕ್ಷಣ ದಾತಾರಾಮ್ ನೌನಾರಿಯಾ ಶುದ್ಧ ಪೊಲೀಸ್ ಅಧಿಕಾರಿಯಂತೆ ತಮ್ಮ ವಿಧಿ ವಿಧಾನಗಳನ್ನು ಪಕ್ಕಾ ರೀತಿಯಲ್ಲಿ ಪೂರೈಸಿದರು. ಡಾ.ತಲವಾರ್ ಸೋದರರಿಂದ ಹಿಡಿದು, ಹೇಮರಾಜ್‌ನ ಶವವನ್ನು ಗುರುತಿಸಿದವರ ತನಕ ಹಾಗೂ ಶವ ಸಿಕ್ಕಾಗ ಜೊತೆಗಿದ್ದವರನ್ನೂ ಮೊದಲುಗೊಂಡು ಎಲ್ಲರಿಂದಲೂ ಹೇಳಿಕೆ ಪಡೆಯತೊಡಗಿದರು. ಅಷ್ಟೇ ಅಲ್ಲ, ಎರಡನೆಯ ಶವ ಸಿಗುವ ತನಕ ಕೇವಲ ಐ.ಪಿ.ಸಿ ೩೦೨ (ಕೊಲೆ) ಕಲಮ್ ಹಾಕಿದ್ದು ಎರಡನೆಯ ಶವ ಪತ್ತೆಯಾಗುತ್ತಿದ್ದಂತೆಯೇ ಅದಕ್ಕೆ ಐ.ಪಿ.ಸಿ ೨೦೧ ಎಂಬ ಕಲಮ್ ಜೋಡಿಸಲಾಯಿತು. ಅದರ ಅರ್ಥ ಹಂತಕರು ಸಾಕ್ಷಿ ನಾಶ ಮಾಡಿದ್ದಾರೆ! ಯಾವಾಗ ಬೆಳವಣಿಗೆ ಈ ತಿರುವು ಪಡೆದುಕೊಂಡಿತೋ, ತಲವಾರ್ ಲಾಬಿ ಜಾಗೃತವಾಯಿತು. ಜೋಡಿ ಕೊಲೆಯ ತನಿಖೆಯನ್ನು ದಾತಾರಾಮ್ ನೌನಾರಿಯಾ ಅವರಿಂದ ಕಸಿದುಕೊಂಡು ಸೆಕ್ಟರ್ ೩೯ರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅನಿಲ್ ಸಾಮಾನ್ಯ ಅವರಿಗೆ ವಹಿಸಿ ಕೊಡಲಾಯಿತು. ಆದರೆ ದಾತಾರಾಮ್ ಎಷ್ಟು ಕರಾರುವಾಕ್ಕಾಗಿ, ಪಕಡ್ಬಂದಿಯಾಗಿ ತನಿಖೆ ಮಾಡಿದ್ದರು ಅಂದರೆ ತನಿಖೆ ವಹಿಸಿಕೊಂಡ ಅನಿಲ್ ಸಾಮಾನ್ಯ ತಕ್ಷಣ ತಲವಾರ್‌ಗಳಿಗೆ ಉಪಕಾರ ಮಾಡುವ, ವಿಷಯಗಳನ್ನು ಮುಚ್ಚಿ ಹಾಕುವ ಅವಕಾಶವನ್ನೇ ಹೊಂದಿರಲಿಲ್ಲ. ಯಾವುದು ಆಗಬಾರದೆಂದು ಡಾ.ತಲವಾರ್ ದಂಪತಿಗಳು ಬಯಸಿದ್ದರೋ ಅದು ಆಗಿಯೇ ಹೋಯಿತು.

ಆರುಷಿ-ಹೇಮರಾಜ್ ಕೊಲೆಯಾದದ್ದು ಮೇ ೧೫-೧೬ರ ರಾತ್ರಿಯಾದರೆ ಮೇ ೨೩, ೨೦೦೮ರಂದು ನೊಯಿಡಾ (ಉತ್ತರ ಪ್ರದೇಶದ) ಪೊಲೀಸರು ಡಾ.ರಾಜೇಶ್ ತಲವಾರ್‌ರನ್ನು ಬಂಧಿಸಿಯೇ ಬಿಟ್ಟರು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 23 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books