Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಕಾಂಗ್ರೆಸ್ ಮಲಗಿದ್ದೇ ತಡ, ಪವಾರ್ ಮೇಲೆದ್ದು ನಿಂತರು ನೋಡಿ

ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಈ ದೇಶದ ರಾಜಕೀಯ ಚಿತ್ರ ಬದಲಾಗಲಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಯಂತೆ ಕಾಣುತ್ತಿದೆ. ಅಂದ ಹಾಗೆ ಕಳೆದ ಒಂಭತ್ತೂವರೆ ವರ್ಷಗಳಿಂದ ರಾಷ್ಟ್ರದ ಅಧಿಕಾರ ಚುಕ್ಕಾಣಿ ಹಿಡಿದಿರುವ ಯುಪಿಎ ಮೈತ್ರಿಕೂಟ ಜನರ ವಿಶ್ವಾಸ ಕಳೆದುಕೊಂಡಿರುವುದಕ್ಕೆ ಹಲವು ಕಾರಣಗಳಿವೆ. ೨೦೦೪ರಲ್ಲಿ ದೇಶದ ಅಧಿಕಾರ ಸೂತ್ರ ಹಿಡಿದ ಸಂದರ್ಭದಲ್ಲಿ ಯುಪಿಎ ಸರ್ಕಾರ ಜನರಲ್ಲಿ ಒಂದು ರೀತಿಯ ವಿಶ್ವಾಸ ಮೂಡಿಸಿದ್ದು ನಿಜ. ಜಾಗತೀಕರಣದ ಸವಾಲನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗಲು ಪ್ರಧಾನಿ ಮನಮೋಹನ್‌ಸಿಂಗ್ ಸಮರ್ಥ ಎಂಬ ಭಾವನೆ ಮೂಡಿದ್ದೂ ನಿಜ. ಒಬ್ಬ ಆರ್ಥಿಕ ತಜ್ಞರೂ ಆಗಿ ಮನಮೋಹನ್‌ಸಿಂಗ್ ಅಂತಹದೊಂದು ವಿಶ್ವಾಸ ಮೂಡಿಸುವಂತಹ ಹಲವು ಕೆಲಸಗಳನ್ನು ಮಾಡಿದರು. ಆದರೆ ಅಂತಹ ಕೆಲಸ ನಿರಂತರವಾಗಿ ಮುಂದುವರಿಯಲು ಯುಪಿಎ ಮೈತ್ರಿಕೂಟದ ನೇತಾರರು, ಅಂಗಪಕ್ಷಗಳು ಬಿಡಲಿಲ್ಲ ಎಂಬುದು ಕೂಡ ಸ್ಪಷ್ಟ.
ಹೀಗಾಗಿಯೇ ಯುಪಿಎ-೨ ಸರ್ಕಾರದ ಅವಧಿಯಲ್ಲಿ ಹಲವು ಹಗರಣಗಳು ನಡೆದವು. ಕಾಮನ್ವೆಲ್ತ್ ಕ್ರೀಡಾಕೂಟದ ತಯಾರಿಯ ನೆಪದಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ನುಂಗಿ ನೊಣೆಯುವ ಕೆಲಸ ನಡೆಯಿತು. ಅದೇ ರೀತಿ ೨ಜಿ ಸ್ಪೆಕ್ಟ್ರಮ್ ಹಗರಣ ನಡೆಯಿತು. ಇದರ ಬಾಬತ್ತು ಲಕ್ಷ, ಕೋಟಿ ರುಪಾಯಿಗಳ ಲೆಕ್ಕ ದಾಟಿತು. ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆ ವಿಷಯದಲ್ಲೂ ಅದೇ ರೀತಿಯ ತಪ್ಪುಗಳು ನಡೆದವು. ತಮಗೆ ಬೇಕು ಬೇಕಾದವರಿಗೆ, ಇಷ್ಟ ಬಂದ ದರದಲ್ಲಿ ಹಂಚಿಕೆ ಮಾಡುವ ಕೆಲಸಗಳಾದವು. ಇಂತಹ ಹಗರಣಗಳ ವಿಷಯ ಒಂದು ಕಡೆಗಾಯಿತು. ಆದರೆ ಕೇಂದ್ರದ ಯುಪಿಎ ಸರ್ಕಾರದ ಮೇಲೆ ಜನಾಕ್ರೋಶ ಎಂಬುದು ನಿಜಕ್ಕೂ ಭುಗಿಲೆದ್ದಿದ್ದು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ವಿಷಯದಲ್ಲಿ. ಡೀಸೆಲ್, ಪೆಟ್ರೋಲ್ ದರ ಒಂದೇ ಸಮನೆ ಏರಿಕೆಯಾಗುತ್ತಾ ಹೋಯಿತು. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳು ಕಾರಣವಾದರೂ, ಒಂದು ಸರ್ಕಾರ ಇಂತಹ ಸಂದರ್ಭದಲ್ಲಿ ಜನರ ರಕ್ಷಣೆಗೆ ಧಾವಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ಅಂತಹ ಕೆಲಸವನ್ನೇ ಕೇಂದ್ರದ ಯುಪಿಎ ಸರ್ಕಾರ ಮಾಡಲಿಲ್ಲ.

ಯಾವಾಗ ಅದು ಜನರ ರಕ್ಷಣೆಗೆ ಧಾವಿಸಲಿಲ್ಲವೋ ಆಗ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರತೊಡಗಿತು. ನೋಡ ನೋಡುತ್ತಿದ್ದಂತೆಯೇ ಬಡ-ಮಧ್ಯಮ ವರ್ಗದ ಜನ ಸುಸ್ತಾಗಿ ಹೋದರು. ಕೊನೆ ಕೊನೆಗೆ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನೂ ಕಟ್ ಮಾಡುತ್ತೇವೆ ಅಂತ ಯಾವಾಗ ಅದು ಹೇಳಿತೋ ಆಗ ಬಡ-ಮಧ್ಯಮ ವರ್ಗದ ಜನ ಆಕ್ರೋಶದಿಂದ ಕುದಿಯತೊಡಗಿದರು. ಇವತ್ತು ಸರಾಸರಿ ನಾಲ್ಕು ನೂರಾ ಐವತ್ತು ರುಪಾಯಿಗಳಷ್ಟಿರುವ ಅಡುಗೆ ಅನಿಲದ ಬೆಲೆ ಒಂಭೈನೂರು ರುಪಾಯಿಗಳ ಲೆಕ್ಕಕ್ಕೆ ತಲುಪಿದರೆ ತಾವು ಬದುಕುವುದು ಹೇಗೆ? ಎಂಬ ಆಕ್ರೋಶ ದೊಡ್ಡ ಮಟ್ಟದಲ್ಲೇ ಭುಗಿಲೆದ್ದು ಬಿಟ್ಟಿತು. ಇದಕ್ಕೆ ಮಣಿದ ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ ಇಲ್ಲ, ಇಲ್ಲ ಒಂಭತ್ತು ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ಕೊಡುತ್ತೇವೆ. ಅದಕ್ಕಿಂತ ಹೆಚ್ಚು ಸಿಲಿಂಡರ್ ತೆಗೆದುಕೊಂಡರೆ ಮಾತ್ರ ಪೂರ್ತಿ ಬೆಲೆ ಕೊಡಬೇಕಾಗುತ್ತದೆ ಅಂತ ಹೇಳಿತು.

ಹೀಗೆ ಸಣ್ಣದೊಂದು ರಿಯಾಯಿತಿ ತೋರಿದಂತೆ ಮಾಡಿದರೂ ಮತ್ತೆ ಅದರ ವರಸೆ ಶುರುವಾಗಿದ್ದು ಆಧಾರ್ ಕಾರ್ಡ್ ಹೆಸರಿನಲ್ಲಿ. ನಿಮಗೆ ಕೊಡುವ ಒಂಭತ್ತು ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲೇ ಕೊಡುತ್ತೇವೆ. ಆದರೆ ಇದಕ್ಕಾಗಿ ನೀವು ಆಧಾರ್ ಕಾರ್ಡ್‌ನ್ನು ಕಡ್ಡಾಯವಾಗಿ ಕೊಡಬೇಕು. ಅದರಲ್ಲಿ ನಮೂದಾಗಿರುವ ಬ್ಯಾಂಕ್ ಖಾತೆಗೆ ನಾವು ಹಣ ಜಮಾ ಮಾಡುತ್ತೇವೆ ಅಂತ ಅದು ಹೇಳತೊಡಗಿತು. ಈ ಹೊಸ ವರಸೆಯ ವಿರುದ್ಧ ಸ್ವತಃ ಸುಪ್ರೀಂಕೋರ್ಟ್ ಕೆಂಡಾಮಂಡಲವಾಯಿತು. ಗ್ಯಾಸ್ ಸಿಲಿಂಡರ್ ಕೊಡಲು ಆಧಾರ್ ಕಾರ್ಡ್ ಯಾಕೆ ಕಡ್ಡಾಯ ಮಾಡಬೇಕು? ನೋ ಚಾನ್ಸ್, ಇದೆಲ್ಲ ಸರಿಯಲ್ಲ ಅಂತ ಎಚ್ಚರಿಕೆ ನೀಡಿತು. ಆಗ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ, ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಕೊಡುವುದು ಕಡ್ಡಾಯವೇನಲ್ಲ ಅಂತ ಹೇಳಿದರಾದರೂ ರಾಜಾರೋಷವಾಗಿಯೇ ಅದನ್ನು ಕಡ್ಡಾಯಗೊಳಿಸುವ ಕಾರ್ಯ ಮುಂದುವರಿದಿದೆ.

ನಿಜ, ಅಡುಗೆ ಅನಿಲ ವ್ಯವಹಾರದಲ್ಲಿ ಅಕ್ರಮಗಳು ನಡೆಯುತ್ತವೆ. ಕಾಳಸಂತೆಯಲ್ಲಿ ಅವು ಮಾರಾಟವಾಗುತ್ತವೆ. ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂಬುದೆಲ್ಲ ನಿಜವೇ. ಆದರೆ ಇದಕ್ಕಾಗಿ ಒಂದು ಪ್ರತ್ಯೇಕ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಮೂಲಕ ಆ ಕೆಲಸ ಮಾಡಬೇಕೇ ಹೊರತು ಜನಸಾಮಾನ್ಯರಿಗೆ ಕಿರಿಕಿರಿಯಾಗುವ ಮಾದರಿಯಲ್ಲಿ ಅದನ್ನು ಮಾಡಲು ಹೊರಟರೆ ಹೇಗೆ? ಇವತ್ತು ಗ್ಯಾಸ್ ಸಿಲಿಂಡರಿನ ಸಬ್ಸಿಡಿ ಪಡೆಯಬೇಕೆಂದರೆ ಮೊದಲು ಒಂಭೈನೂರು ರುಪಾಯಿಗಳನ್ನು ಗ್ರಾಹಕ ಪಾವತಿಸಬೇಕು. ಒಂದು ವರ್ಷದ ನಂತರವೋ, ಇನ್ಯಾವಾಗಲೋ ಆ ಸಬ್ಸಿಡಿ ಹಣ ಬಂದು ಆತನ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಸಮಸ್ಯೆ ಇರುವುದು ಎಲ್ಲಿ ಅಂದರೆ, ಮೊದಲು ಆ ಪ್ರಮಾಣದ ಹಣವನ್ನು ಗ್ಯಾಸ್ ಸಿಲಿಂಡರ್ ಪೂರೈಸುವವರಿಗೆ ನೀಡಬೇಕಲ್ಲ? ಅಲ್ಲಿ ಸಮಸ್ಯೆ ಇದೆ. ಯಾಕೆಂದರೆ ಬಡ-ಮಧ್ಯಮ ವರ್ಗದ ಗ್ರಾಹಕ ತನ್ನ ದಿನನಿತ್ಯದ ಅಗತ್ಯಗಳಿಗೇ ತಡಕಾಡುವ ಸ್ಥಿತಿ ಇದ್ದಾಗ ಈ ಪ್ರಮಾಣದ ಹಣವನ್ನು ಹೇಗೆ ಕೊಡುತ್ತಾನೆ. ಇಂತಹ ಹಲವಾರು ಸಂಗತಿಗಳು ಬಡ-ಮಧ್ಯಮ ವರ್ಗದ ಜನರಿಗೆ ಕೇಂದ್ರದ ಯುಪಿಎ ಸರ್ಕಾರದ ಮೇಲೆ ಅಸಹನೆ ಹುಟ್ಟಿಸಿದ್ದಷ್ಟೇ ಅಲ್ಲ, ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆದಾಗ ನಾಲ್ಕು ರಾಜ್ಯಗಳಲ್ಲಿ ಎಗಾದಿಗಾ ಬಾರಿಸುವಂತೆ ಮಾಡಿಬಿಟ್ಟವು.

ಇವತ್ತು ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‌ಗಡ್‌ದಲ್ಲಿ ಬಿಜೆಪಿ ಬಂಪರ್ ಗೆಲುವು ಗಳಿಸಿದ್ದರೆ, ದೆಹಲಿಯಲ್ಲಿ ಬಿಜೆಪಿ ಮತ್ತು ಅರವಿಂದ್ ಕೇಜ್ರೀವಾಲ್‌ರ ಅಮ್ ಆದ್ಮಿ ಪಕ್ಷಗಳಿಗೆ ಜನ ಮಣೆ ಹಾಕಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ಸನ್ನಂತೂ ಅಡ್ಡಡ್ಡ ಮಲಗಿಸಿಬಿಟ್ಟಿದ್ದಾರೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ನಾಯಕರಿಗೆ ಎರಡು ವಿಷಯಗಳು ಸ್ಪಷ್ಟವಾಗಿವೆ. ಒಂದು ಕೇಂದ್ರದ ಯುಪಿಎ ಸರ್ಕಾರದ ವಿಷಯದಲ್ಲಿ ಬಡ, ಮಧ್ಯಮ ವರ್ಗದ ಜನ ಅಸಹನೆ ತಳೆದಿದ್ದಾರೆ. ಹೀಗಾಗಿ ತಿರುಗಿ ಬಿದ್ದಿದ್ದಾರೆ ಎಂಬುದು. ಮತ್ತೊಂದು, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪರವಾದ ಅಲೆ ದೇಶದುದ್ದಗಲ ಹರಡುತ್ತಿದೆ ಎಂಬುದು. ಈ ಎರಡು ಅಂಶಗಳ ತಳದಿಂದಲೇ ಕಾಂಗ್ರೆಸ್ ಪಾಲಿಗೆ ಮತ್ತೊಂದು ತಲೆನೋವು ಶುರುವಾಗಿದೆ. ಅದೆಂದರೆ, ಕಾಂಗ್ರೆಸ್ ನಾಯಕತ್ವ ದುರ್ಬಲವಾಗಿದೆ. ಅದರ ಪರಿಣಾಮವಾಗಿಯೇ ನಾಲ್ಕು ರಾಜ್ಯಗಳಲ್ಲಿ ಅದು ನೆಲ ಕಚ್ಚಿದೆ ಎಂದು ಯುಪಿಎ ಮೈತ್ರಿಕೂಟದ ಅಂಗಪಕ್ಷವಾಗಿರುವ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ ನೇತಾರ ಶರದ್ ಪವಾರ್ ಹೇಳಿರುವುದು.

ಅರ್ಥಾತ್, ದೇಶದ ಅಧಿಕಾರ ಸೂತ್ರವನ್ನು ಹಿಡಿಯಲು, ಅದಕ್ಕಿಂತ ಮುಖ್ಯವಾಗಿ ಯುಪಿಎ ಮೈತ್ರಿಕೂಟದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ನಿಂದ ಇನ್ನು ಸಾಧ್ಯವಿಲ್ಲ ಎಂಬುದು ಈ ಮೆಸೇಜು. ಹೀಗೆ ಮೆಸೇಜು ಕೊಟ್ಟ ಶರದ್ ಪವಾರ್ ತೃತೀಯ ರಂಗದ ನೇತಾರರಾಗಿ ಹೊರಹೊಮ್ಮಲು ಬಯಸುತ್ತಿದ್ದಾರೆ ಎಂಬುದು ರಹಸ್ಯದ ವಿಷಯವೇನೂ ಅಲ್ಲ. ಒಂದು ವೇಳೆ ಕಾಂಗ್ರೆಸ್ ಕನಿಷ್ಠ ಎರಡು ರಾಜ್ಯಗಳಲ್ಲಿ ಅಧಿಕಾರ ಸೂತ್ರ ಹಿಡಿದು, ಇನ್ನೆರಡು ರಾಜ್ಯಗಳಲ್ಲಿ ಪ್ರಬಲ ಸ್ಪರ್ಧೆ ನೀಡಿದ್ದರೆ ಶರದ್ ಪವಾರ್ ಬಾಯಿಂದ ಇಂತಹ ಮಾತುಗಳು ಹೊರಬರಲು ಸಾಧ್ಯವಿರಲಿಲ್ಲ. ಆದರೆ ಇಂತಹ ಮಾತುಗಳು ಅವರ ಬಾಯಿಂದ ಹೊರಬಿದ್ದಿವೆ ಎಂದರೆ ಇನ್ನು ಕೇಂದ್ರದಲ್ಲಿ ಯುಪಿಎ ಮೈತ್ರಿಕೂಟದ ದೊಡ್ಡಣ್ಣನಾಗಿರಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ. ಅದರ ಫಲವಾಗಿಯೇ ಅವರ ಬಾಯಿಂದ ಇಂತಹ ಮಾತುಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ಇದು ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ತಿರುಗುಬಾಣವಾಗಲಿದೆ. ಅಷ್ಟೇ ಅಲ್ಲ, ಮುಂಬರುವ ಸಂಸತ್ ಚುನಾವಣೆಯಲ್ಲಿ ಹೇಗಾದರೂ ಮಾಡಿ ಅಧಿಕಾರದಲ್ಲಿ ಉಳಿಯಲೇಬೇಕು ಎಂಬ ಕಾರಣಕ್ಕಾಗಿ ಅದು ತೃತೀಯರಂಗದ ಹೆಗಲ ಮೇಲೆ ಸ್ನೇಹದ ಹಸ್ತ ಇಡುವುದು ಅನಿವಾರ್ಯವಾಗಲಿದೆ.

ಮೊನ್ನೆ ಮೊನ್ನೆಯ ತನಕ ತೃತೀಯ ರಂಗ ತಲೆ ಎತ್ತದಂತೆ ನೋಡಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ಏನೆಲ್ಲ ಮಾಡಿದರು ಎಂಬುದು ಇದೀಗ ಇತಿಹಾಸ. ಮುಲಾಯಂಸಿಂಗ್ ಯಾದವ್ ಅವರಿಂದ ಹಿಡಿದು ತೃತೀಯ ರಂಗದಲ್ಲಿ ಗುರುತಿಸಿಕೊಳ್ಳ ಬಯಸಿದ ಹಲವು ನಾಯಕರನ್ನು ಅವರು ಹೆದರಿಸುತ್ತಲೇ ಇದ್ದರು. ಇದೇ ಕಾರಣಕ್ಕಾಗಿ ಮುಲಾಯಂಸಿಂಗ್ ಯಾದವ್ ಅವರಿಂದ ಹಿಡಿದು ಹಲವು ನಾಯಕರು ತೃತೀಯ ಶಕ್ತಿಯ ಬಗ್ಗೆ ನೇರವಾಗಿ ಮಾತನಾಡಲೂ ಹಿಂಜರಿಯುತ್ತಿದ್ದರು. ಆದರೆ ಈಗ ಹಾಗಲ್ಲ. ಎನ್‌ಸಿಪಿ ನಾಯಕ ಶರದ್ ಪವಾರ್ ಅವರೇ ಬಹಿರಂಗವಾಗಿ ಕಾಂಗ್ರೆಸ್ ಪಕ್ಷದ ನಾಯಕತ್ವ ದುರ್ಬಲ ಎಂದಿದ್ದಾರೆ. ಅದರರ್ಥ ಬೇರೇನೂ ಅಲ್ಲ. ಮುಂಬರುವ ಸಂಸತ್ ಚುನಾವಣೆಯ ನಂತರ ಅಧಿಕಾರದಲ್ಲಿ ಪಾಲುದಾರನಾಗಬೇಕಾದರೆ ಕಾಂಗ್ರೆಸ್ ಪಕ್ಷ ತೃತೀಯ ರಂಗಕ್ಕೆ ಬೆಂಬಲ ನೀಡಲೇಬೇಕು ಎಂಬುದು ಅವರ ಮಾತಿನ ಇಂಗಿತ.

ಶರದ್ ಪವಾರ್ ಅವರ ಮಾತಿನ ಇಂಗಿತ ಏನು ಅನ್ನುವುದು ಕಾಂಗ್ರೆಸ್‌ಗೂ ಗೊತ್ತು. ಹೀಗಾಗಿ ಅದು ಇಷ್ಟವೋ, ಕಷ್ಟವೋ ಮುಂದಿನ ದಿನಗಳಲ್ಲಿ ತೃತೀಯ ರಂಗದ ನಾಯಕರನ್ನು ತಡಕಲು ಹೋಗುವುದಿಲ್ಲ. ಯಾಕೆಂದರೆ ಈ ನಾಯಕರನ್ನು ದುರ್ಬಲಗೊಳಿಸಿದರೆ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ತಾವೂ ಸೋಲುತ್ತೇವೆ. ತೃತೀಯ ರಂಗವೂ ತಲೆ ಎತ್ತದಂತಹ ಸ್ಥಿತಿಗೆ ಬರುತ್ತದೆ. ಇದಕ್ಕೇಕೆ ಅವಕಾಶ ನೀಡಬೇಕು. ಬದಲಿಗೆ ತಣ್ಣಗೆ ಹೊಂದಿಕೊಂಡು ಹೋಗಬೇಕು ಎಂಬುದು ಅದಕ್ಕೆ ಅರ್ಥವಾಗಿದೆ. ಹೀಗಾಗಿ ಶರದ್ ಪವಾರ್ ಇಷ್ಟು ನೇರಾ ನೇರವಾಗಿ ಕಾಂಗ್ರೆಸ್ ನಾಯಕತ್ವ ದುರ್ಬಲ ಎಂದರೂ ಅದು ಮಾತನಾಡುತ್ತಿಲ್ಲ. ಹಾಗೆ ಮಾತನಾಡುವಂತಹ ಸನ್ನಿವೇಶವೂ ಇದಲ್ಲ. ಪರಿಣಾಮವಾಗಿ ಸೆಮಿ ಫೈನಲ್ ಮುಗಿಯುತ್ತಿದ್ದಂತೆಯೇ ಪಾರ್ಲಿಮೆಂಟ್ ಚುನಾವಣೆ ಎಂಬ ಫೈನಲ್‌ಗೆ ನುಗ್ಗಲು ಕಾಂಗ್ರೆಸ್‌ಗೀಗ ತೃತೀಯ ರಂಗದ ಬೆಂಬಲ ಅನಿವಾರ್ಯವಾಗಿದೆ. ಈ ಬೆಳವಣಿಗೆ ಪಾರ್ಲಿಮೆಂಟ್ ಚುನಾವಣೆಯ ನಂತರ ಪ್ರಧಾನಿ ಹುದ್ದೆಯ ರೇಸಿನಲ್ಲಿ ಮೋದಿ ವರ್ಸಸ್ ರಾಹುಲ್ ಎಂಬುದಕ್ಕಿಂತ ಮೋದಿ ವರ್ಸಸ್ ಶರದ್ ಪವಾರ್ ಎಂಬ ವಿಷಯವನ್ನು ನಿಕ್ಕಿ ಮಾಡುತ್ತಿರುವಂತೆ ಕಾಣುತ್ತಿದೆ. ನಿಜಕ್ಕೂ ಇದು ಕುತೂಹಲಕಾರಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 21 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books