Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ವಿಲ್ ಪವರ್ ಹುಟ್ಟುವುದು ಬೆಳೆಯುವುದು ಏಕೆ ಗೊತ್ತಾ?

ಅದೇನೇ ಹೇಳ್ರೀ, ಆ ಮನುಷ್ಯನ ವಿಲ್ ಪವರ್ ಮಾತ್ರ ಸಖತ್ತು ಕಣ್ರೀ ಅಂತ ನಮ್ಮ ಸುತ್ತಮುತ್ತ ಇರುವ ಕೆಲವರ ಬಗ್ಗೆ ನಾವು ಪ್ರಶಂಸೆ ವ್ಯಕ್ತಪಡಿಸುತ್ತಿರುತ್ತೇವೆ. ಹಾಗೆ ಗುರುತಿಸುವ ವ್ಯಕ್ತಿ ಬಡವನೇ ಆಗಿರಬಹುದು. ಅಥವಾ ದೊಡ್ಡ ಶ್ರೀಮಂತನೇ ಆಗಿರಬಹುದು. ಯಾವುದೇ ರಂಗದಲ್ಲಿ ಕೆಲಸ ಮಾಡುತ್ತಿರಬಹುದು. ಎಷ್ಟೋ ಸಲ ಅವರು ಸಿಲುಕಿಕೊಂಡಿರುವ ಸಮಸ್ಯೆಗಳ ಸುಳಿಯನ್ನು ಗಮನಿಸಿದಾಗ, ಹೀಗೆ ಸಮಸ್ಯೆಗಳ ಸುಳಿಯಲ್ಲಿ ಇದ್ದರೂ ಅವರು ಹೋರಾಡುವ ಪರಿಯನ್ನು ಕಂಡಾಗ ಇಂತಹ ಪ್ರಶಂಸೆಯ ಮಾತುಗಳು ಬರುತ್ತವೆ. ಕೆಲವರಲ್ಲಿ ಇಂತಹ ವಿಲ್ ಪವರ್ ಯಾಕೆ ಹೆಚ್ಚಾಗಿರುತ್ತದೆ? ಪ್ರತಿಯೊಬ್ಬರಲ್ಲೂ ಇದು ಯಾಕಿರುವುದಿಲ್ಲ? ಅಂತ ನನಗೆ ನಾನೇ ಕೇಳಿಕೊಂಡಿದ್ದೇನೆ. ತುಂಬ ಸಲ ಅದು ಒಬ್ಬ ವ್ಯಕ್ತಿಯ ಗುಣ ಸ್ವಭಾವವಾಗಿದ್ದರೆ, ಹಲವು ಸಲ ತುಂಬ ಜನ ನಮ್ಮನ್ನು ನಂಬಿಕೊಂಡು ಬದುಕುತ್ತಿದ್ದಾರೆ ಎಂಬ ಅರಿವು ಇಂತಹ ವಿಲ್ ಪವರ್ ಹುಟ್ಟಲು, ಬೆಳೆಯಲು, ಹೆಮ್ಮರವಾಗಲು ಕಾರಣವಾಗುತ್ತದೆ.

ಉದಾಹರಣೆಗೆ ದೇವೆಗೌಡರನ್ನೇ ತೆಗೆದುಕೊಳ್ಳಿ. ಎಂಭತ್ತೆರಡರ ಈ ಇಳಿವಯಸ್ಸಿನಲ್ಲಿ ಅವರು ತಮ್ಮ ಪಾಡಿಗೆ ತಾವು ಇದ್ದು ಬಿಡಬಹುದು. ಆದರೂ ಅವರು ಸುಮ್ಮನಿರುವುದಿಲ್ಲ. ಇಡೀ ರಾಜ್ಯವನ್ನು ಸುತ್ತುತ್ತಲೇ ಇರುತ್ತಾರೆ. ನಮ್ಮ ಪಕ್ಷವನ್ನು ಮುಗಿಸಲು ಕಾಂಗ್ರೆಸ್, ಬಿಜೆಪಿ ಸಂಚು ಮಾಡುತ್ತಿವೆ. ಆದರೆ ಯಾರೇನೇ ಪ್ರಯತ್ನಿಸಿದರೂ ನಮ್ಮ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಗುಡುಗುತ್ತಲೇ ಇರುತ್ತಾರೆ. ಈಗಲೂ ಅವರಿಗೆ ನಂಬಿಕೆಯಿದೆ, ಮಹತ್ವಾಕಾಂಕ್ಷೆ ಇದೆ. ಮುಂಬರುವ ಪಾರ್ಲಿಮೆಂಟ್ ಚುನಾವಣೆಯ ನಂತರ ಈ ದೇಶದಲ್ಲಿ ಯುಪಿಎ ಆಗಲೀ, ಎನ್‌ಡಿಎ ಆಗಲೀ ಸರ್ಕಾರ ರಚಿಸಬೇಕೆಂದರೆ ತೃತೀಯ ರಂಗದ ಬೆಂಬಲ ಬೇಕೇಬೇಕು. ಅಷ್ಟರೊಳಗೆ ನಮ್ಮ ಪಕ್ಷ ಬೆಳೆದು ಹೇಗೆ ಬಿಡುತ್ತೆ ನೋಡಿ ಎಂಬ ಆತ್ಮವಿಶ್ವಾಸ ಎದ್ದು ಕಾಣುತ್ತದೆ. ಇದು ನಿಜವಾದ ವಿಲ್ ಪವರ್. ಹಾಗಂತ ಇದು ಸುಖಾಸುಮ್ಮನೆ ಬೆಳೆದು ಬಂದದ್ದಲ್ಲ. ಅದು ಅವರ ಗುಣ ಸ್ವಭಾವವಾದರೂ ಅದನ್ನು ಪೋಷಿಸಿದ ಜನರ ಒಂದು ಪಡೆಯೇ ಇದೆ. ಎಂಭತ್ತರ ದಶಕದ ಆರಂಭದಲ್ಲೇ ದೇವೆಗೌಡರನ್ನು ತಮ್ಮ ಎದುರಾಳಿ ಅಂತ ಗುರುತಿಸಿದ ಹೆಗಡೆ ಹಲವು ಇಕ್ಕಳಗಳಲ್ಲಿ ಇವರನ್ನು ಸಿಲುಕಿಸುವ ಯತ್ನ ಮಾಡಿದರು.
ಸಾಮಾನ್ಯ ರಾಜಕಾರಣಿಯಾಗಿದ್ದರೆ ಈ ಹೊಡೆತಕ್ಕೆ ಫಿನಿಷ್ ಆಗಿ ಬಿಡುತ್ತಿದ್ದರು. ಆದರೆ ದೇವೆಗೌಡರು ಬಗ್ಗಲಿಲ್ಲ. ರಾಮಕೃಷ್ಣ ಹೆಗಡೆ ತಮ್ಮನ್ನು ಗದುಮಲು ಎಷ್ಟೆಷ್ಟು ಯತ್ನ ಮಾಡಿದರೋ ಅಷ್ಟು ಸ್ಟ್ರಾಂಗಾಗಿ ಬೆಳೆದು ನಿಂತರು. ಮುಂದೆ ದೇವೆಗೌಡರು ಯಾರ‍್ಯಾರ ಜತೆ ಹೋರಾಡಿದರು, ಹೇಗೆ ಬೆಳೆದರು ಎಂಬುದು ಇತಿಹಾಸ. ಆದರೆ ನನಗೆ ಇವತ್ತಿಗೂ ಅವರಲ್ಲಿ ಇಷ್ಟವಾಗುವ ಗುಣವೆಂದರೆ ಈ ವಯಸ್ಸಿನಲ್ಲೂ ನೋಡ್ತಾ ಇರ್ರೀ, ನಾಳೆ ತೃತೀಯ ರಂಗ ಮೇಲೆದ್ದು ನಿಲ್ಲಲಿ. ಆಮೇಲೆ ಬೇರೆ ಮಾತು ಅಂತ ಹೇಳುವಾಗ ಕಾಣುವ ವಿಶ್ವಾಸ. ಯಡಿಯೂರಪ್ಪನವರ ವಿಷಯ ಬಂದಾಗಲೂ ಅಷ್ಟೇ. ಅವರ ಬಗೆಗಿರುವ ಆರೋಪಗಳೇನೇ ಇರಲಿ, ಆದರೆ ಇವತ್ತಿಗೂ ಅವರ ತಾಕತ್ತು ದೊಡ್ಡದು. ಅವರು ಸಿಲುಕಿರುವ ಚಕ್ರಸುಳಿಗೆ ಬೇರೆ ಯಾರಾದರೂ ಸಿಲುಕಿಕೊಂಡಿದ್ದರೆ ಮನೆಯಿಂದ ಹೊರಗೆ ಬರುವುದಿರಲಿ, ಹಾಸಿಗೆ ಹಿಡಿದು ಬಿಡುತ್ತಿದ್ದರು.

ಅವರು ಎದುರಿಸುತ್ತಿರುವ ಒತ್ತಡಗಳ ಸಂಖ್ಯೆಯೇನು ಕಡಿಮೆಯೇ? ಅದನ್ನು ನಿಭಾಯಿಸುವುದು ನಿಜಕ್ಕೂ ಕಷ್ಟದ ಕೆಲಸವೇ. ಆದರೆ ಎಲ್ಲ ಒತ್ತಡಗಳ ನಡುವೆಯೂ ಯಡಿಯೂರಪ್ಪನವರ ಬೀದಿ ಹೋರಾಟ ನಿರಂತರ. ಶಾದಿ ಭಾಗ್ಯ ಯೋಜನೆಯ ಲಾಭ ಎಲ್ಲ ಬಡವರ್ಗಗಳ ಹೆಣ್ಣು ಮಕ್ಕಳಿಗೆ ತಲುಪುವಂತೆ ನೋಡಿಕೊಳ್ಳಿ ಎಂದವರು ನಡುಬೀದಿಯಲ್ಲಿ ಟೆಂಟು ಹಾಕಿಕೊಂಡು ಇಪ್ಪತ್ತು ದಿನ ಧರಣಿ ನಡೆಸಿದರು. ಇದನ್ನು ನೋಡುತ್ತಿದ್ದ ಎಷ್ಟೋ ಜನ ಅಯ್ಯೋ ಪಾಪ ಕಣ್ರೀ ಯಡಿಯೂರಪ್ಪ. ಇಷ್ಟೆಲ್ಲ ಸಿರಿ-ಸಂಪತ್ತಿದೆ, ಆದರೆ ಬೀದಿಯಲ್ಲಿ ಮಲಗುವ ಸ್ಥಿತಿ ಯಾಕೆ ಅಂತ ಹೇಳುತ್ತಿದ್ದರು. ಯಥಾಪ್ರಕಾರ ಇದು ಕೂಡ ವಿಲ್ ಪವರ್. ಅವರು ಎದುರಿಸುತ್ತಿರುವ ಸಂಕಷ್ಟಗಳ ಲೆಕ್ಕ ನೋಡಿದರೆ ಅವರು ಇಂತಹ ಹೋರಾಟಕ್ಕಿಳಿಯಲು ಸಾಧ್ಯವೇ ಇಲ್ಲ. ಯಾಕೆಂದರೆ ಬಹಳಷ್ಟು ಮಂದಿಯ ಬದುಕನ್ನು ಇಂತಹ ಸಂಕಷ್ಟಗಳೇ ನುಂಗಿ ನೊಣೆದು ಬಿಡುತ್ತವೆ. ಅವರ ಶಕ್ತಿಯನ್ನು ಕುಗ್ಗಿಸಿ ನೆಲ ಕಚ್ಚುವಂತೆ ಮಾಡಿ ಬಿಡುತ್ತವೆ. ಆದರೆ ಯಡಿಯೂರಪ್ಪ ಇವತ್ತಿಗೂ ಅದೇ ಯಡಿಯೂರಪ್ಪ. ಆಗಾಗ ನೋಡಲು ಸುಸ್ತಾದ ಥರ ಕಾಣುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಹಿಂದಿನ ಗೆಟಪ್ಪಿಗೆ ಮರಳಿರುತ್ತಾರೆ. ದಟ್ ಈಸ್ ವಿಲ್ ಪವರ್.

ಈ ಮಾತನ್ನು ದೇವೆಗೌಡ, ಯಡಿಯೂರಪ್ಪ ಅಂತಲ್ಲ ಹಲವು ರಾಜಕಾರಣಿಗಳ ಬಗ್ಗೆ ಹೇಳಬಹುದು. ಹಲವು ಉದ್ಯಮಿಗಳ ಬಗ್ಗೆ ಹೇಳಬಹುದು. ಸಂಘಟನೆಗಳನ್ನು ಕಟ್ಟಿ ಹೋರಾಡುವವರ ಬಗ್ಗೆ ಹೇಳಬಹುದು. ಶ್ರೀಮಂತಿಕೆಯ ಗೆರೆಯ ಹತ್ತಿರ ಹೋಗಲಾಗದಿದ್ದರೂ ಜಿದ್ದು ಹಿಡಿದು ಬದುಕುವ, ಹತ್ತು ಜನರನ್ನು ಬದುಕಿಸುವ ಜನರ ಬಗ್ಗೆ ಹೇಳಬಹುದು. ನನ್ನ ಪ್ರಕಾರ ಇಂತಹ ವಿಲ್ ಪವರ್‌ಗೆ ನೀರು ಎರೆಯುವ ಹಲವು ಸಂಗತಿಗಳಿವೆ. ಅದು ಮಹತ್ವಾಕಾಂಕ್ಷೆ ಇರಬಹುದು, ತಮ್ಮನ್ನು ನಂಬಿದವರಿಗಾಗಿ ಕೆಲಸ ಮಾಡಲೇಬೇಕು ಎಂಬ ಅಂಶವಿರಬಹುದು. ಹೀಗೆ ಹಲವಾರು ಅಂಶಗಳು ಈ ವಿಲ್ ಪವರ್‌ಗೆ ನೀರು ಎರೆಯುತ್ತವೆ. ವಿಲ್ ಪವರ್‌ನ ಮುಖ್ಯ ಗುಣ ಏನು ಅಂದರೆ ಯಾವುದಕ್ಕೂ ಅಂಜದೇ ಇರುವುದು, ಮನುಷ್ಯನಿಗೆ ಅಂಜಿಕೆ ಇರುವುದಿಲ್ಲ ಅಂತಲ್ಲ. ಅದು ಒಂಥರಾ ಗಡಿಯಾರದ ಪೆಂಡುಲಂ ಇದ್ದಂತೆ. ಒಂದು ಸಲ ಮನುಷ್ಯನಲ್ಲಿ ಅಪಾರ ಧೈರ್ಯ ಕಾಣುತ್ತದೆ. ಇನ್ನೊಂದು ಸಲ ಅಂಜಿಕೆಯ ಸರದಿ.

ಇಂತಹ ಅಂಜಿಕೆಯ ಕಾಲಘಟ್ಟ ಬಹಳ ಕಾಲ ಉಳಿಯದು. ಮತ್ತೆ ಧೈರ್ಯದ ಕಾಲ ಬಂದೇ ಬರುವುದು ಎಂಬ ನಂಬಿಕೆ ಇದ್ದರಷ್ಟೇ ವಿಲ್ ಪವರ್ ಬೆಳೆಯುತ್ತದೆ. ಹೀಗಾಗಿ ನಾವು ಯಾರನ್ನು ಅವರ ವಿಲ್ ಪವರ್‌ನ್ನು ಗಮನಿಸಿ ಹೊಗಳುತ್ತೇವೋ ಅವರೂ ಅಂಜಿಕೆ ಹುಟ್ಟುವ ಸಂದರ್ಭಗಳನ್ನು ಎದುರಿಸುತ್ತಲೇ ಇರುತ್ತಾರೆ. ಎಷ್ಟೆಷ್ಟು ಪ್ರಮಾಣದಲ್ಲಿ ಅವರು ಈ ಅಂಜಿಕೆಯನ್ನು ಎದುರಿಸುತ್ತಾರೋ ಅಷ್ಟಷ್ಟು ಗಟ್ಟಿಯಾಗುತ್ತಾ ಹೋಗುತ್ತಾರೆ. ಫೈನಲಿ, ಈ ಜೀವನದಲ್ಲಿ ನನಗೆ ಬೇಕಾಗಿರುವುದೇನು? ಅನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುತ್ತಾರೆ. ಆಗ ಸಹಜವಾಗಿಯೇ ವಿಲ್ ಪವರ್ ಹೆಚ್ಚಾಗುತ್ತದೆ. ಇದು ಎಷ್ಟರಮಟ್ಟಿಗೆ ಹೆಚ್ಚಾಗುತ್ತದೋ ಅಷ್ಟರ ಮಟ್ಟಿಗೆ ಅವರು ವ್ಯವಸ್ಥೆಯ ಗಮನ ಸೆಳೆಯತೊಡಗುತ್ತಾರೆ. ಹತ್ತು ಜನ ಅವರನ್ನು ಮುಕ್ತಕಂಠದಿಂದ ಪ್ರಶಂಸೆ ಮಾಡುತ್ತಾರೆ. ಅವರ ಬಗ್ಗೆ ಏನೇ ಟೀಕೆಗಳು ಕೇಳಿ ಬರಲಿ, ಆ ಮಾತು ಬೇರೆ. ಆದರೆ ಫೈನಲಿ, ಅವರಲ್ಲಿ ಬೆಳೆದಿರುವ ವಿಲ್ ಪವರ್‌ನ್ನು ಮಾತ್ರ ನಾವು ಮೆಚ್ಚಿಕೊಳ್ಳುತ್ತೇವೆ. ಯಾರೇನೇ ಹೇಳಲಿ ಬಿಡ್ರೀ, ಛಲ ಅಂದ್ರೆ ಅದು. ವಿಲ್ ಪವರ್ ಅಂದ್ರೆ ಇದು ಅನ್ನುತ್ತೇವೆ.

ಹೀಗಾಗಿ ನಿಮ್ಮಲ್ಲೂ ಅಂತಹ ವಿಲ್ ಪವರ್ ಬೆಳೆಯಬೇಕು ಅಂತ ನಿಮಗನ್ನಿಸಿದರೆ ಸವಾಲುಗಳನ್ನು ಎದುರಿಸಲು ಸಿದ್ಧರಾಗಿ. ಇದ್ದಲ್ಲೇ ಇರುತ್ತೇನೆ, ಇರುವುದರಲ್ಲೇ ನೆಮ್ಮದಿಯಿಂದ ಇರುತ್ತೇನೆ. ನಾನು ಯಾರ ಹತ್ತಿರವೂ ಹತ್ತು ಪೈಸೆ ಕೇಳುವುದಿಲ್ಲ, ನನ್ನ ಬಳಿ ಯಾರು ಬಂದು ಕೇಳಿದರೂ ಕೊಡುವುದಿಲ್ಲ ಎಂಬಂತೆ ಹಲವರು ಬದುಕಬಹುದು. ಅದು ಒಂದು ಮಟ್ಟದಲ್ಲಿ ರಿಸ್ಕ್ ಇಲ್ಲದ ಬದುಕು ಎಂಬುದು ನಿಜವೂ ಇರಬಹುದು. ಆದರೆ ಮನುಷ್ಯನಾಗಿ ಹುಟ್ಟಿದ ಮೇಲೆ ನಾಲ್ಕು ಜನರಿಗಾಗಿ ಬದುಕಬೇಕು ಎಂಬ ಗುರಿ ಇಲ್ಲದಿದ್ದರೆ ಏನು ಸ್ವಾರಸ್ಯ ಇರುತ್ತದೆ. ನಾವು ಹತ್ತು ಜನರಿಗಾಗಿ ಬದುಕುತ್ತೇವೆ ಎಂಬ ಹಟ ಇಲ್ಲದಿದ್ದರೆ ಬದುಕು ಟ್ಯಾಂಕಿನಿಂದ ಬಿದ್ದ ನೀರಿನ ಥರ ಆಗುತ್ತದೆ. ಎಷ್ಟು ಮೇಲಿಂದ ಬಿತ್ತು, ಹರಿಯಲು ಇರುವ ಜಾಗ ಹೇಗಿದೆ ಅನ್ನುವುದರ ಆಧಾರದ ಮೇಲೆ ಈ ನೀರಿನ ಗಮ್ಯ ತೀರ್ಮಾನವಾಗುತ್ತದೆ. ಇಂತಹ ಬದುಕಿಗೆ ತೊರೆಯೋ, ನದಿಯೋ, ಸಮುದ್ರವೋ ಗಮ್ಯವಾಗುವುದಿಲ್ಲ.

ನನ್ನ ಪ್ರಕಾರ ಇಂತಹ ಗಮ್ಯ ತಲುಪುವ ಗುರಿ ಇಲ್ಲದಿದ್ದರೆ ಬದುಕಿಗೆ ಸೌಂದರ್ಯ ಎಂಬುದು ಬರುವುದಿಲ್ಲ. ಹೀಗಾಗಿ ಮೊದಲು ಇಂತಹ ಗುರಿಯನ್ನು ಇಟ್ಟುಕೊಳ್ಳಿ. ವಿಲ್ ಪವರ್ ಎಂಬುದು ತಾನಾಗಿಯೇ ನಿಮ್ಮಲ್ಲಿ ನೆಲೆಸುತ್ತದೆ. ಆಗ ನೋಡುವ ಹತ್ತು ಜನ ನಿಮ್ಮ ಬಗ್ಗೆಯೂ ಇಂತಹದೇ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಹಾಗಾಗಲಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 17 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books