Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಆರುಷಿಯ ನೆತ್ತರು ಹರಿದ ಹಾದಿಯಗುಂಟ

ಹುಟ್ಟು ಎರಡೇ ವಿಧ. ಒಂದು through proper channel. ಅವರು ಯೋನಿ ಸಂಜಾತರು. ಜಗತ್ತಿನಲ್ಲಿ ಇವತ್ತಿನ ಮಟ್ಟಿಗೆ ಯಾರೂ ವೃಕ್ಷ ಸಂಜಾತರಿಲ್ಲ. ಎರಡನೆಯ ಹುಟ್ಟು ಸಿಝೇರಿಯನ್ ಸೆಕ್ಷನ್‌ನದು. ಈ ಮಧ್ಯೆ ಯೋನಿ ಸಂಜಾತರಿಗಿಂತ ಕತ್ತರಿ ಸಂಜಾತ ಮಕ್ಕಳೇ ಜಾಸ್ತಿ. Thanks to modrn nursing homes and docters.

ಆದರೆ ಹುಟ್ಟು ಎರಡೇ ವಿಧದ್ದಾದರೆ ಸಾವು ಸಾವಿರ ವಿಧದ್ದು. ಸಹಜ ಸಾವಿನಿಂದ ಹಿಡಿದು ಅಸಹಜ ಸಾವಿನ ತನಕ, ಅಪಘಾತಗಳ ತನಕ, ಆತ್ಮಹತ್ಯೆಗಳ ತನಕ, ಕೊಲೆಗಳ ತನಕ, ಹಸಿವಿನ ತನಕ, ಅವಮಾನದ ತನಕ, ರೋಗಗಳ ತನಕ, ಖಿನ್ನತೆಯ ತನಕ, ಬದುಕು ಬೋರಾಗುವ ತನಕ natural calamityಗಳ ತನಕ-ಹೀಗೆ ಸಾವಿರ ವಿಧದಲ್ಲಿ ಬರುತ್ತದೆ ಸಾವೆಂಬ ಮಾಯಾವಿ. ಬದುಕಿನ ಈ ಐವತ್ತೈದು ವರ್ಷಗಳಲ್ಲಿ ನಾನು ಜೀವನವನ್ನು ಎಷ್ಟು ಕಂಡಿದ್ದೇನೋ, ಅಷ್ಟೇ ಸಾವು-ಅಂತ್ಯಗಳನ್ನೂ ಕಂಡಿದ್ದೇನೆ. ಹೀಗಾಗಿ ಬದುಕು ನನ್ನಲ್ಲಿ ಉಂಟು ಮಾಡುವ ಕುತೂಹಲವನ್ನೇ ಸಾವೂ ಉಂಟು ಮಾಡುತ್ತದೆ. ಒಂದು ಹನಿ ಉತ್ಸಾಹವೆಂಬುದು ಊರು, ನಗರ, ಉದ್ಯಾನ, ಉನ್ಮಾದ, ಸಾಹಿತ್ಯ, ಸಂಗೀತ, ಸಿನೆಮಾಗಳನ್ನು ಸೃಷ್ಟಿ ಮಾಡಿದಂತೆಯೇ, ಸಾವು ಎಂಬ ನಿರ್ದಯಿ ಹಸ್ತ ಸಾವಿರ ಚಿತ್ರಗಳನ್ನು ಒಂದೇ ಒಂದು ಬೀಸಿನಲ್ಲಿ ಅಳಿಸಿ ನಿರ್ನಾಮ ಮಾಡಿ ಬಿಡುತ್ತದೆ. ಹೀಗಾಗಿ, ಸಾವು ನನ್ನ ಅಂತಿಮ ಆಸಕ್ತಿಯ ಸಂಗತಿ. ಉಳಿದ ಆಸಕ್ತಿಗಳೆಲ್ಲ ಬದುಕು ಮತ್ತು ಸಾಧನೆಯೊಂದಿಗಿನ ಚಿಲ್ಲರೆ pleasuresಗೆ ಸಂಬಂಧಿಸಿದಂಥವು.

ಪತ್ರಿಕೋದ್ಯಮದಲ್ಲಿ ಒಂದು ಮಾತಿದೆ. Reaching the right place at the right time ಅಂತ. ಅಂಥವು ನನ್ನ ಪತ್ರಿಕೋದ್ಯಮದ ಬದುಕಿನಲ್ಲಿ ಅನೇಕವು ಸಂಭವಿಸಿವೆ. ಪಾಕಿಸ್ತಾನದೊಂದಿಗೆ ಕದನ ಆರಂಭವಾದಾಗ ನಾನು ಮತ್ತು ನನ್ನ ವರದಿಗಾರ ವಿಠ್ಠಲಮೂರ್ತಿ ಕಾರ್ಗಿಲ್‌ನಲ್ಲಿದ್ದೆವು. Just two kannadigas. ಅಫಘನಿಸ್ತಾನವನ್ನು ಅಮೆರಿಕ ಕುಟ್ಟಿ ಪುಡಿ ಮಾಡಲಾರಂಭಿಸಿದಾಗ ೨೦೧೧ರಲ್ಲಿ ಅಫಘನಿಸ್ತಾನಲ್ಲಿ ಕೆಲಸ ಮಾಡುತ್ತಿದ್ದ ಮೂರು ಸಾವಿರ ಜನ ನಾನಾ ದೇಶ-ಭಾಷೆಗಳ ಪತ್ರಕರ್ತರಲ್ಲಿ ನಾನೊಬ್ಬನೇ ಕನ್ನಡಿಗ. ಗುಜರಾತದಲ್ಲಿ ಭೂಕಂಪನವಾಗಿ ಸಾವಿರಾರು ಜನ ಸತ್ತರು. ಆಗ ನಾನಿದ್ದೆ. ಜೊತೆಗೆ ನಿವೇದಿತಾ ಇದ್ದಳು. ಒರಿಸ್ಸಾದ ಚಂಡಮಾರುತಕ್ಕೆ ಜನ ಬೆನ್ನು ಕೊಟ್ಟು ನಿಂತಾಗ ಅವರ ಪಕ್ಕದಲ್ಲಿ ನಾನಿದ್ದೆ. ಕರ್ನಾಟಕದ ಅವಘಡಗಳ ಸಮಯದಲ್ಲಿ ಅದೆಷ್ಟು ಸಲ ನಾನು at the ritght place and at the right time ಇದ್ದೆನೋ : ಈಗ ನೆನಪಿಲ್ಲ.

ಮುಂಬಯಿಯಲ್ಲಿ ನನಗೊಬ್ಬ ಪತ್ರಕರ್ತ ಮಿತ್ರನಿದ್ದ ಜೆ.ಡೇ ಅಂತ. ಆತನ ಪೂರ್ತಿ ಹೆಸರು ಜ್ಯೋತಿರ್ಮಯ್ ಡೇ. ಕ್ಷುಲ್ಲಕ ಹೆಂಗಸಿನ ಚಿತಾವಣಿಯ ಮೇರೆಗೆ ಪರಮ ಮರುಳ ಛೋಟಾ ರಾಜನ್ ನನ್ನ ಮಿತ್ರನನ್ನು ಕೊಂದು ಹಾಕಿದ. ಕೊಂದವರೆಲ್ಲ ಸಿಕ್ಕಿ ಬಿದ್ದರು. ರಾಜನ್ ದೇಶದಲ್ಲಿರಲಿಲ್ಲ. ಆದರೆ ಕೊಲ್ಲಲು ಪ್ರೇರಣೆ ನೀಡಿದ್ದು ಯಾರು? none knew. ನಾನು ೨೦೧೧ರ ನವೆಂಬರ್ ಇಪ್ಪತ್ತೈದರಂದು ನನ್ನ ನಾಲ್ಕನೆಯ ಮಗ ಹಿಮವಂತ್ ಬೆಳಗೆರೆಯ ಹುಟ್ಟುಹಬ್ಬ ಆಚರಿಸಲು ಮುಂಬಯಿಗೆ ಹೋದಾಗ, ಸರಿಯಾಗಿ ಅವತ್ತಿನ ದಿನವೇ ಸುದ್ದಿ ಸ್ಫೋಟಗೊಂಡಿತ್ತು. ಛೋಟಾ ರಾಜನ್‌ಗೆ ಚಿತಾವಣಿ ನೀಡಿ, ಭಡಕಾಯಿಸಿ ಜ್ಯೋತಿರ್ಮಯ್ ಡೇ ಹತ್ಯೆಗೆ ಕಾರಣಳಾದ ಜಿಗ್ನಾ ವೊಹರಾ ಎಂಬುವವಳನ್ನು ಮುಂಬಯಿಯ ಪೊಲೀಸರು ಬಂಧಿಸಿದ್ದರು. ಕೆಲವು first hand ಮಾಹಿತಿಗಳು ನನಗೆ ಅವತ್ತು ಸಿಕ್ಕಿದ್ದವು.

ಮೊನ್ನೆ, once again ನವೆಂಬರ್ ಇಪ್ಪತ್ತೈದು, ೨೦೧೩ರಂದು ಹಿಮವಂತ್ ಬೆಳಗೆರೆಯ ಆರನೇ ಜನ್ಮದಿನ ಆಚರಿಸಲು ನಾನು, ಹಿಮ, ಯಶೋಮತಿ ದಿಲ್ಲಿಗೆ ಹೋಗಿದ್ದೆವು. ಕಾಕತಾಳೀಯವೆಂದರೆ ಅದೇ ದಿನದಂದು ದಿಲ್ಲಿ ಸಮೀಪದ, ಉತ್ತರ ಪ್ರದೇಶಕ್ಕೆ ಸೇರಿದ ಘಾಜಿಯಾಬಾದ್‌ನ ಸಿ.ಬಿ.ಐ ನ್ಯಾಯಾಲಯ ಡಾ.ರಾಜೇಶ್ ತಲವಾರ್ ಮತ್ತು ಡಾ.ನೂಪುರ್ ತಲವಾರ್‌ರನ್ನು ಆರುಷಿ-ಹೇಮರಾಜ್ ಹತ್ಯೆಯ ಆರೋಪಿಗಳೆಂದು ಘೋಷಿಸಿ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿ ದಸ್ನಾ ಜೈಲಿಗೆ ಕಳಿಸುವಂತೆ ತೀರ್ಪು ನೀಡಿತು. ದಿಲ್ಲಿಗೆ ಘಾಜಿಯಾಬಾದ್ ತುಂಬ ದೂರವೇನಿರಲಿಲ್ಲ. ಆದರೆ ಬೆಂಗಳೂರಿಗೆ ಹಿಂತಿರುಗುವ ನನ್ನ ವಿಮಾನದ ಟಿಕೆಟ್ ಬುಕ್ ಆಗಿತ್ತು. ನನ್ನೊಳಗಿನ ಪತ್ರಕರ್ತ ಚಡಪಡಿಸುತ್ತಿದ್ದ. ಮತ್ತೇನಲ್ಲದಿದ್ದರೂ ಕಡೆಯ ಪಕ್ಷ ನನಗೆ ಆರುಷಿ ಮರ್ಡರ್ ಕೇಸ್‌ನ ತೀರ್ಪಿನ ಪ್ರತಿ ಬೇಕಾಗಿತ್ತು. ಏಕೆಂದರೆ, ಸುಮಾರು ನಾಲ್ಕೂವರೆ ವರ್ಷದಿಂದ ನಾನು ಈ ಪ್ರಕರಣವನ್ನು ತುಂಬ ಗಂಭೀರವಾಗಿ follow ಮಾಡುತ್ತಿದ್ದೆ.

ಇನ್ನೇನು ಬೆಳಿಗ್ಗೆ ಎದ್ದು ವಿಮಾನ ಹತ್ತಬೇಕು : ಅಷ್ಟರಲ್ಲಿ ನನಗೆ ‘ಸಂತೆಯಲ್ಲಿ ಸೋದರ ಮಾವ ಸಿಕ್ಕಂತೆ’ ಸಿಕ್ಕವರು ಸುಪ್ರೀಂಕೋರ್ಟ್ ವಕೀಲರಾದ ಚಂದ್ರಕಾಂತ ಅಂಗಡಿಯವರು. ಅವರು ಉತ್ತರ ಕರ್ನಾಟಕದ ರಾಮದುರ್ಗದವರು. ಅವರ ಪತ್ನಿ ಶರ್ಮಿಳಾ. ಮಗುವಿನ ಹೆಸರು ನಿಧಿ. ರಾಮದುರ್ಗದಿಂದ ಒಂದು ಕರೀಕೋಟು ಹೊದ್ದು ದಿಲ್ಲಿಗೆ ಹೋಗಿ ಹದಿನೈದು ವರ್ಷ ಏನೇನು ಪಡಿಪಾಟಲು ಪಟ್ಟರೋ ಗೊತ್ತಿಲ್ಲ. ಈಗ ಸುಪ್ರೀಂಕೋರ್ಟ್‌ನಲ್ಲಿ busy ವಕೀಲರು. ಅವರು ನನ್ನ ಪ್ರತಿಯೊಂದು ವಿನಂತಿಯನ್ನೂ ಮನ್ನಿಸಿದ್ದಾರೆ. ಅನೇಕ ಪ್ರಕರಣಗಳ judgement ಪ್ರತಿಗಳನ್ನು ಕಳಿಸಿದ್ದಾರೆ. ನಾನು ಕಳಿಸುವ ನಿರ್ಗತಿಕರ ಕೇಸುಗಳನ್ನು ಸುಪ್ರೀಂಕೋರ್ಟಿನಲ್ಲಿ ಬಡಿದಾಡಿ ಬಡವರ ಕಣ್ಣೀರು ಒರೆಸಿದ್ದಾರೆ. ಕನ್ನಡಿಗರ ಮಟ್ಟಿಗೆ ಸುಪ್ರೀಂಕೋರ್ಟಿನಲ್ಲಿ ಚಂದ್ರಕಾಂತ ಅಂಗಡಿ (೦೯೪೪೮೦೮೨೨೩೩) ವಕೀಲರು ಆಶಾಕಿರಣ. ಅವರೊಂದಿಗೆ ನನ್ನ ಒಂದೇ ತಕರಾರೆಂದರೆ, ನನ್ನಿಂದ ಅವರು ಹಣ ತೆಗೆದುಕೊಳ್ಳುವುದಿಲ್ಲ. ನಾನೇ ಗಂಟುಬಿದ್ದು ಅವರ ಅಕೌಂಟ್ ನಂಬರ್ ತೆಗೆದುಕೊಂಡು ನನಗೆ ತೋಚಿದಷ್ಟು ಹಣ ಹಾಕುತ್ತೇನೆ.

ಅದಿರಲಿ, ಹೊರಡುವ ದಿನ ಹೊಟೆಲ್ ಅಶೋಕಾದಲ್ಲಿ ಭೇಟಿಯಾದ ಅಂಗಡಿ ವಕೀಲರು ನಾನು ಬೆಂಗಳೂರು ತಲುಪಿ ಒಂದು ನಿದ್ದೆ ತೆಗೆದು ಏಳುವ ಹೊತ್ತಿಗೆ ಇಡೀ ಆರುಷಿ ಪ್ರಕರಣದ ಜಾತಕ ಜಾಪತ್ರೆ ನನ್ನೆದುರಿಗೆ ಹರಡಿಕೊಂಡಿತ್ತು. Thanks to Advo.Angadi.

ಸಾಮಾನ್ಯವಾಗಿ ನ್ಯಾಯಾಲಯದ ತೀರ್ಪಿನ documentಗಳು ಒಂದು ಓದಿಗೆ, ಸುಲಭ ಪಟ್ಟಿಗೆ ಅರ್ಥವಾಗುವುದಿಲ್ಲ. ಸುದೀರ್ಘ ಖಾಯಿಲೆಯಿಂದ ಚೇತರಿಸಿಕೊಂಡು ಎದ್ದು ಕುಳಿತಿರುವ ನನಗೆ ಗಂಟೆಗಟ್ಟಲೆ ಓದುವ ಸಹನೆ, ಶಕ್ತಿ ಇನ್ನೂ ಮೈಗೂಡಿಲ್ಲ. ಪುಸ್ತಕ ಬರೆದು ಯಾವುದೋ ಕಾಲವಾಗಿದೆ. ಆದರೆ ಗಾಲಿಬ್ ಹೇಳುವಂತೆ “ಹಾಥ್ ಮೆ ಜುಂಬಿಷ್ ನಹೀ, ಆಂಖೋ ಮೆ ತೋ ದಮ್ ಹೈ... ರೆಹನೇ ದೋ ಸಾಗರೋ ಮೀನಾ ಮೇರೆ ಆಗೇ..." (ಕೈಯಲ್ಲಿ ತ್ರಾಣವಿಲ್ಲ. ಆದರೆ ಕಂಗಳಲ್ಲಿ ತಾಕತ್ತಿದೆ. ಇರಲಿ ಕಣ್ಣೆದುರಿಗೆ ಒಂದು ಪೆಗ್ಗು ಮತ್ತು ಅವಳ ಸಿಗ್ಗು!) ಎಂಬ ಪರಿಸ್ಥಿತಿ ನನ್ನದು. ಎದುರಿಗೆ ಸುಮಾರು ಮುನ್ನೂರು ಪುಟಗಳ judgement, C.B.I ಸಲ್ಲಿಸಿದ closure report ಹಾಗೂ ಮರಣೋತ್ತರ ಪರೀಕ್ಷೆಯ ದಾಖಲೆಗಳನ್ನಿಟ್ಟುಕೊಂಡು, ಭಗವಂತಾ ಇವುಗಳನ್ನು ಹೇಗೆ ಓದಿ ಮುಗಿಸಲಿ ಎಂದು ಯೋಚಿಸುತ್ತಿರುವಾಗ ಹೊಳೆದ ಹೆಸರುಗಳೇ ಹರ್ಷಿತಾ ಮತ್ತು ನರಸಿಂಹ ಆಚಾರ್ಯರು. ಹರ್ಷಿತಾ, ನನ್ನ ಎರಡನೇ ಮಗಳು ಭಾವನಾ ಬೆಳಗೆರೆಯ ಸಹಪಾಠಿ, ಗೆಳತಿ. ನರಸಿಂಹ ಆಚಾರ್ಯರು ನನ್ನ face book ಗೆಳೆಯರು. ಹಗಲು- ರಾತ್ರಿ ಎನ್ನದೆ ಇಬ್ಬರೂ ಕುಳಿತು ಎಲ್ಲವನ್ನೂ ಓದಿ ಹೇಳಿದರು. ಮಟ್ಟಸವಾಗಿ notes ಮಾಡಿಕೊಂಡೆ.

ಬರೆಯಲು ಕೂಡೋಣವೆಂದರೆ ಅಡ್ಡ ಬಂದದ್ದು ಮರಣೋತ್ತರ ಪರೀಕ್ಷೆ ಮತ್ತು ಕಾನೂನಿನ ಕೆಲವು ಪ್ರಶ್ನೆಗಳು. ಮರಣೋತ್ತರ ಪರೀಕ್ಷೆ ವಿಷಯಕ್ಕೆ ಬಂದರೆ ಇವತ್ತು ಕರ್ನಾಟಕವೊಂದೇ ಏಕೆ, ಇಡೀ ದೇಶದಲ್ಲೇ excellent Forensic expert ಅನ್ನಿಸಿಕೊಂಡವರು ವಿಕ್ಟೋರಿಯ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗದ ಮುಖ್ಯಸ್ಥರಾದ ಡಾ.ಪಿ.ಕೆ.ದೇವದಾಸ್. ಅವರ-ನನ್ನ ಸ್ನೇಹ ಸುಮಾರು ಮೂವತ್ತು ವರ್ಷಗಳಷ್ಟು ಹಳೆಯದು. ಎಲ್ಲ ಕೆಲಸ ಬಿಟ್ಟು ಬಂದು ನನ್ನೊಂದಿಗೆ ಗಂಟೆಗಟ್ಟಲೆ ಕುಳಿತು ಪೈಸೆಗೆ ಪೈಸೆ ಎಂಬಂತೆ ಆರುಷಿ ಹಾಗೂ ಹೇಮರಾಜ್‌ರ ಮೃತ ದೇಹಗಳ ಪರೀಕ್ಷೆಯ ವಿವರಗಳನ್ನು ನೀಡಿ, ಕೊಲೆಗಳು ಹೇಗಾಗಿರಬಹುದು ಎಂಬುದರ ವಿವರಣೆ ಕಣ್ಣಿಗೆ ಕಟ್ಟುವಂತೆ ಹೇಳಿದರು. ಅವರಿಗೆ thanks ಹೇಳಿದರೆ ಸಾಲದಾದೀತು. ಅಂತೆಯೇ ಆರುಷಿ-ಹೇಮರಾಜ್ ಕೊಲೆಗಳಿಗೆ ಬಳಕೆಯಾದ scalpel ಹೇಗಿರುತ್ತದೆ ಎಂಬ ಕಲ್ಪನೆ ಕೂಡ ನನಗೆ ಗೊತ್ತಿರಲಿಲ್ಲ. ಅದಕ್ಕೆ ವಿವರಣೆ ನೀಡಿ scalpel ತೋರಿಸಿ ಅದರ ಮೂರು ಸೈಜಿನ ಬ್ಲೇಡ್‌ಗಳನ್ನು ಕೊಡಿಸಿದ್ದು the beautiful smilly dentist Dr. ಆಶಾ.

ಇನ್ನು ಕಾನೂನಿನ ವಿವರ. ಇತ್ತೀಚೆಗೆ ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ (S.P.P.) ನೇಮಕಗೊಂಡಿರುವ ವಕೀಲ ಮಿತ್ರ ಬಿ.ಟಿ.ವೆಂಕಟೇಶ್. ಅವರು ಕಾನೂನಿನ ವಿಷಯದಲ್ಲಿ ಪ್ರಕಾಂಡ ಪಂಡಿತ. ನೇರವಂತ ವಕೀಲರು. ಕಡಿಮೆ ದುಡ್ಡಿನ ಆಸೆ ಮತ್ತು ಜ್ಞಾನದೆಡೆಗೆ ಅಪಾರ ಹಸಿವು ಇರುವ ಅವರು ಎಂಥ ಕಾನೂನಿನ ಕಗ್ಗಂಟನ್ನಾದರೂ ಅರೆದು ಕುಡಿಯಬಲ್ಲ ನಿಪುಣ. ಅವರೊಂದಿಗೆ ಎರಡು ತಾಸು ಮಾತನಾಡಿದರೆ ಒಂದು ಪುಸ್ತಕ ಓದಿದ ಅನುಭವವಾಗುತ್ತದೆ. ನನ್ನ ಅವರ ನಂಟು ಸುಮಾರು ನಲವತ್ತು ವರ್ಷದ್ದು.

ಹೀಗೆ ಸಂಬಂಧ ಪಟ್ಟ ಎಲ್ಲ ದಾಖಲೆ ಮತ್ತು ಎಲ್ಲ ವಿವರಣೆ ಕಲೆಹಾಕಿಕೊಂಡು ಕುಳಿತ ಮೇಲೆ ನನಗೆ ಮುಖ್ಯವಾಗಿ ಇದಿರಾದದ್ದು ಮಾನವ ಸಂಬಂಧಗಳ ಕುರಿತಾದ ಸಂಕೀರ್ಣತೆಯ ಸಂಗತಿ. ಅಪ್ಪ-ಮಗ, ಅಪ್ಪ-ಮಗಳು, ಗಂಡ-ಹೆಂಡತಿ, ಒಡೆಯ-ಆಳು, so called ಸುಸಂಸ್ಕೃತ ಸಮಾಜ ಮತ್ತು ಸೆಕ್ಸ್, ಪತ್ನಿಯರ (ಗಂಡಂದಿರ) ಅದಲು ಬದಲು ದೇಹ ಬಳಕೆ, ಮನುಷ್ಯನಿಗೆ ಕುಡಿದಾಗ ಬರುವ ಸಿಟ್ಟು, ಸಿಟ್ಟಿನ ಪರಿಣಾಮವಾಗಿ ಆಗುವ ಹತ್ಯೆ, ಹತ್ಯೆಯನ್ನು ಮುಚ್ಚಿಡುವ ಪರಿ, ತಪ್ಪಿಸಿಕೊಳ್ಳುವ ಹವಣಿಕೆ, ಒಂದು ತಪ್ಪು ಮುಚ್ಚಿಕೊಳ್ಳುವ ಭರದಲ್ಲಿ ನೂರು ತಪ್ಪು ಮಾಡಿ ಬಿಡುವ ಅಯೋಮಯ, ಕೊಲೆಯ ನಂತರ ಮನುಷ್ಯ ಅನುಭವಿಸುವ ತಳಮಳ, ಗಂಡನ ತಪ್ಪಿಗೆ ತಲೆ ಕೊಡಲು ಮುಂದಾಗುವ ಹೆಂಡತಿಯ ಮನಸ್ಸು, ಒಂದು ತುಂಡರಿಸಲಾಗದ ಮಮಕಾರ, ಸತ್ತ ನಂತರವೂ ಕಾಡುವ ಅಪ್ಪುಗೆ, ತೀರ ವ್ಯಕ್ತಿಗತ ಸಂಗತಿಗಳಿಗೆ ಕೈ ಹಾಕಿ ರಾಡಿ ಎಬ್ಬಿಸಿ ಬಿಡುವ ಮೀಡಿಯಾ, ಬೇಕಾ ಬಿಟ್ಟಿ ಬರೆಯುವ ಪತ್ರಿಕೆಗಳು-ಬ್ಲಾಗ್‌ಗಳು, ಪೆದ್ದ ಪೊಲೀಸರು, ದಡ್ಡ ಡಾಕ್ಟರುಗಳು, ಸಿಬಿಐನಂಥ so called ಗಟ್ಟಿ ಸಂಸ್ಥೆಯನ್ನೂ ಖರೀದಿಸಿ ಬಿಡುವ ಅಪರಾಧಿಗಳು, ಅವರ ಬೆನ್ನ ಹಿಂದಿನ ರಾಜಕಾರಣಿಗಳು... ಹೀಗೆ ಎಲ್ಲವುಗಳನ್ನೂ ಮನನ ಮಾಡಿಕೊಂಡು ಬರೆಯದಿದ್ದರೆ ಈ ಪುಸ್ತಕ ಒಂದು crime report ಆಗಿಬಿಡುವ ಅಪಾಯವಿದೆ ಎಂಬುದು ನನಗೆ ಗೊತ್ತಿತ್ತು.

ನಾವೇ ಹೆತ್ತ ಹೆಣ್ಣು ಮಗು ಯಾರನ್ನೋ ಪ್ರೀತಿಸಿದರೆ ಸಹಜವಾಗಿಯೇ ಧಾವಂತಗೊಳ್ಳುತ್ತೇವೆ, ಸಿಟ್ಟು ಮಾಡಿಕೊಳ್ಳುತ್ತೇವೆ, ಜೀವನ ಪರ್ಯಂತ ಮಾತು ಬಿಡುತ್ತೇವೆ. ಉತ್ತರ ಭಾರತದ ಮರ್ಯಾದಾ ಹತ್ಯೆ (?)ಗಳನ್ನು ನೋಡಿದಾಗ ಮನುಷ್ಯನ ಕ್ರೌರ್ಯ, stupidity, feudal ಮನಃಸ್ಸತ್ವ ಅರ್ಥವಾಗುತ್ತದೆ. ಅವು ಮರ್ಯಾದಾ ಹತ್ಯೆಗಳಲ್ಲ. ಮರ್ಯಾದೆ ಮತ್ತು ಮನುಷ್ಯತ್ವದ ಹತ್ಯೆಗಳು. ಆರುಷಿ ಪ್ರಕರಣ ಅದಕ್ಕಿಂತ ಭಿನ್ನ. ಹದಿನಾಲ್ಕು ತುಂಬಲಿರುವ ಮಗಳು ಮನೆಯ ಆಳಿನೊಂದಿಗೆ ಸುಖದ ಕ್ರೀಡೆಯಲ್ಲಿರುವುದನ್ನು ನೋಡಿದ ತಂದೆ ಭಯಂಕರ ರೀತಿಯಲ್ಲಿ ಇಬ್ಬರನ್ನೂ ಕೊಂದುಬಿಟ್ಟ. ಅದು ಸರಿಯಾ? ಆ ಕ್ಷಣದ ರಿಯಾಕ್ಷನ್ನಾ? ಈಗಿನ ಮಕ್ಕಳು ಕೆಟ್ಟು ಕೆರ ಹಿಡಿದಿದ್ದಾರಾದ್ದರಿಂದ ಅವರನ್ನು ಶಿಕ್ಷಿಸಲೇ ಬೇಕು ಎಂಬ ಸಿದ್ಧಾಂತದ ಫಲವಾ? What is this? ಆರುಷಿ ಪ್ರಕರಣದ ಬಗ್ಗೆ ಯಾರು ಬೇಕಾದರೂ ಪುಸ್ತಕ ಬರೆಯಬಹುದು, ಮಾತನಾಡಬಹುದು. ಆದರೆ ನನಗಿರುವ ಕೊಂಚ ಹೆಚ್ಚಿನ ಹಕ್ಕು ಅಂದರೆ, ನಾನು ಇಬ್ಬರು ಹೆಣ್ಣು ಮಕ್ಕಳ ತಂದೆ. ಇಬ್ಬರವೂ ಪ್ರೇಮ ವಿವಾಹಗಳು. ಅಂತರ್‌ಜಾತೀಯ ಮದುವೆಗಳು. ಅವರ ಪ್ರೇಮಗಳಿಗೆ ನಾನು ಸಾಕ್ಷಿ. ಅವರೊಂದಿಗಿನ ಸಲುಗೆ ನನಗೆ ಇವತ್ತಿಗೂ ಬೇರೆಯವರೊಂದಿಗೆ ಸಿಲುಕಿಲ್ಲ. ಪ್ರೇಮಿಸುವ ಕಾಲದಲ್ಲಿ, ಮದುವೆಯಾದ ನಂತರದ ದಿನಗಳಲ್ಲಿ ಅವರ ಮನಸ್ಸುಗಳ ಸ್ಥಿತ್ಯಂತರಗಳನ್ನು ನಾನು ಗಮನಿಸುತ್ತ ಬಂದಿದ್ದೇನೆ. ತುಂಬ ಅಲ್ಲದಿದ್ದರೂ, ಕೊಂಚ ಮಟ್ಟಿಗೆ ಕೆಲವು ಸಲ ಅವರ ಮೇಲೆ ಸಿಟ್ಟು ಮಾಡಿಕೊಂಡಿದ್ದೇನೆ. ಧಾರೆ ಎರೆದುಕೊಡುವಾಗ ದೇಹವೆಲ್ಲ ಕರಗಿ ಹೋಗುವಂತೆ ಅತ್ತಿದ್ದೇನೆ. ನನಗೆ ತಲವಾರ್ ದಂಪತಿಗಳು, ಅವರ ತಳಮಳ, fit of anger ಎಲ್ಲ ಅರ್ಥವಾಗುತ್ತವೆ.

ಆದರೆ ನನಗೆ ಆರುಷಿ ಹೆಚ್ಚು ಅರ್ಥವಾಗುತ್ತಾಳೆ.

ಆರುಷಿಯ ವಯಸ್ಸಿನ ಹುಡುಗಿಯರಿಗಾಗಿ, ಅದಕ್ಕಿಂತ ಹೆಚ್ಚು ಆ ವಯಸ್ಸಿನ ಮಕ್ಕಳಿರುವ ತಂದೆ-ತಾಯಂದಿರಿಗಾಗಿ, ನನ್ನ ಪತ್ರಕರ್ತ ಗೆಳೆಯರಿಗಾಗಿ ಮತ್ತು ನನ್ನದೇ ಅಂತರಂಗದ ಒಳಮಾತನ್ನು ಪೂರ್ತಿಗೊಳಿಸುವುದಕ್ಕಾಗಿ ಈ ಪುಸ್ತಕ ಬರೆದಿದ್ದೇನೆ. ಇದನ್ನೆಲ್ಲ ಅರ್ಥ ಮಾಡಿಕೊಂಡು ಈ ಪುಸ್ತಕ ಒಪ್ಪಿಸಿಕೊಳ್ಳಿ. ಇಂಥ ಪುಸ್ತಕಗಳನ್ನಲ್ಲದೆ ನಾನು ಬೇರೇನನ್ನು ಬರೆಯಲಿ? ಬರುವ ಒಂದು ಕೆಲಸವನ್ನು ನೆಟ್ಟಗೆ ಮಾಡಿಕೊಂಡು ಹೋದರೆ ಸಾಕಾಗಿದೆ, ಅಲ್ಲವೆ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 14 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books