Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಸರ್ವಾಧಿಕಾರಿ ನಡೆಯೇ ಸಿದ್ಧರಾಮಯ್ಯನವರಿಗೆ ಮುಳುವಾಗಲಿದೆ


ಮುಖ್ಯಮಂತ್ರಿ ಸಿದ್ಧರಾಮಯ್ಯ ದಿನ ಕಳೆದಂತೆ ದುರ್ಬಲರಾಗುತ್ತಿದ್ದಾರೆ. ಕಬ್ಬು ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಓರ್ವ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಅದನ್ನು ಮತ್ತಷ್ಟು ನಿಚ್ಚಳಗೊಳಿಸಿದೆ. ಹಾಗಂತ ಈ ಬೆಳವಣಿಗೆಯೊಂದರಿಂದಲೇ ಸಿದ್ಧರಾಮಯ್ಯ ದುರ್ಬಲರಾಗಿದ್ದಾರೆ ಎಂದಲ್ಲ. ಯಾಕೆಂದರೆ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ಪ್ರತಿ ವರ್ಷ ನೂರಾರು ರೈತರು ಮಾಡಿಕೊಂಡ ಸಾಲವನ್ನು ತೀರಿಸಲಾಗದೆ ಅಥವಾ ಇನ್ನೇನೋ ಸಮಸ್ಯೆಗಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಇನ್ನು ಮುಂದೆಯೂ ನಡೆಯುತ್ತವೆ.
ಇವತ್ತು ರೈತರ ಪರ ಕೂಗು ಹಾಕುತ್ತಿರುವ ಯಡಿಯೂರಪ್ಪ ತಾವು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮಾಡಿದ್ದೇನು? ಅವರ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿರಲಿಲ್ಲವೇ? ಹಾವೇರಿಯಲ್ಲಿ ನಡೆದ ಈ ಗೋಲಿಬಾರ್ ಘಟನೆಯಲ್ಲಿ ಓರ್ವ ರೈತ ಮೃತಪಟ್ಟಾಗ ಇದೇ ಯಡಿಯೂರಪ್ಪ ಅಲ್ಲಿಗೆ ಹೋಗಿ ಕಣ್ಣೀರು ಹಾಕಿ ಬಂದಿರಲಿಲ್ಲವೇ? ಅರ್ಥಾತ್, ರೈತರ ಸಮಸ್ಯೆ ಎಂಬುದು ಕೇವಲ ಒಂದು ಸರ್ಕಾರದ ಅವಧಿಯಲ್ಲಿ ಸೃಷ್ಟಿಯಾಗಿದ್ದಲ್ಲ. ಹಸಿರು ಕ್ರಾಂತಿಯ ಕಾಲದಿಂದ ಹಿಡಿದು ಜಾಗತೀಕರಣದ ತನಕ ಹಲವು ಹಂತಗಳಲ್ಲಿ ರೈತ ಸಮುದಾಯ ನಿರಂತರವಾಗಿ ಸಂಕಷ್ಟದ ದಾರಿಯಲ್ಲೇ ನಡೆದುಕೊಂಡು ಬಂದಿದೆ. ಹಸಿರು ಕ್ರಾಂತಿಯ ದುಷ್ಪರಿಣಾಮಗಳಿಂದಾಗಿ ಕಂಗೆಟ್ಟ ರೈತರು ಗುಂಡೂರಾವ್ ಅಧಿಕಾರದಲ್ಲಿದ್ದ ಕಾಲದಲ್ಲಿ ರಾಜ್ಯಾದ್ಯಂತ ದಂಗೆ ಎದ್ದಿದ್ದರು. ಈ ದಂಗೆಯನ್ನು ನಿವಾರಿಸುವ ದಾರಿ ಗುಂಡೂರಾಯರಿಗೆ ಅರ್ಥವಾಗದೇ ಇದ್ದ ಪರಿಣಾಮವಾಗಿ ರೈತರ ಮೇಲೆ ಅವರ ಸರ್ಕಾರ ಗೋಲಿಬಾರ್ ಮಾಡುತ್ತಾ ಹೋಯಿತು. ಪರಿಣಾಮವಾಗಿ ನರಗುಂದ, ನವಲಗುಂದ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಗೋಲಿಬಾರ್‌ಗೆ ಸಿಕ್ಕು ಡಜನ್‌ಗಟ್ಟಲೆ ರೈತರು ತೀರಿಕೊಂಡರು. ರೈತ ಸಮುದಾಯದ ಪಾಲಿಗೆ ಅದೊಂದು ಕರಾಳ ಅಧ್ಯಾಯ. ಒಂದು ಸರ್ಕಾರವೇ ರೈತರ ಮೇಲೆ ಅಷ್ಟೊಂದು ಅಮಾನುಷವಾಗಿ ನಡೆದುಕೊಂಡ ಅಪರೂಪದ ಉದಾಹರಣೆ.
ಇವತ್ತು ಆ ರೀತಿ ಗೋಲಿಬಾರ್ ಮಾಡುವ ಕೆಲಸ ಸರ್ಕಾರಗಳಿಂದ ನಡೆಯುತ್ತಿಲ್ಲ. ಆದರೆ ರೈತರ ಸಮಸ್ಯೆಯನ್ನು ಪರಿಹರಿಸುವ ವಿಷಯದಲ್ಲಿ ಅವು ದಿನದಿಂದ ದಿನಕ್ಕೆ ಅಸಹಾಯಕವಾಗುತ್ತಾ ನಡೆದಿವೆ. ಗುಂಡೂರಾಯರ ಕಾಲದ್ದು ಹಸಿರು ಕ್ರಾಂತಿಯ ದುಷ್ಪರಿಣಾಮವಾದರೆ ಇದು ಜಾಗತೀಕರಣದ ದುಷ್ಪರಿಣಾಮ. ಹಸಿರು ಕ್ರಾಂತಿಯ ಭರಾಟೆಯಲ್ಲಿ ಅಧಿಕ ಬೆಳೆ ಬೆಳೆಯಲು ಹೆಚ್ಚು ರಾಸಾಯನಿಕವನ್ನು ಬಳಸಲಾಗಿತ್ತು. ಇದರ ಪರಿಣಾಮವಾಗಿ ರೈತನ ಭೂಮಿ ಬರಡಾಗತೊಡಗಿತ್ತು. ಅದೇ ಕಾಲಕ್ಕೆ ಬೆಳೆದ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಕೈಗೆ ದಕ್ಕದಂತಹ ಸ್ಥಿತಿ ಎದುರಾಯಿತು. ಅಷ್ಟೇ ಅಲ್ಲ, ಆತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆಯೂ ದಕ್ಕದಂತಾಗಿ ಹೋಯಿತು. ಹೀಗಾಗಿ ರೈತ ದಿನದಿಂದ ದಿನಕ್ಕೆ ದುರ್ಬಲನಾಗುತ್ತಾ ಹೋದ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಚಾಕಚಕ್ಯತೆ ಗುಂಡೂರಾಯರ ಸರ್ಕಾರಕ್ಕಿರಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಬೀದಿಗಿಳಿದರೆ ದಕ್ಕಿದ್ದು ಗುಂಡಿನ ಬಳುವಳಿ. ಇವತ್ತು ಸರ್ಕಾರಗಳು ಅಂತಹ ಬಳುವಳಿಯನ್ನೇನೂ ನೀಡುವುದಿಲ್ಲ. ಆದರೆ ರೈತರ ಸಮಸ್ಯೆಯನ್ನು ಪರಿಹರಿಸುವ ಶಕ್ತಿ ಕೂಡ ಅದಕ್ಕಿಲ್ಲ.

ಯಾಕೆಂದರೆ ಜಾಗತೀಕರಣದ ಹಿನ್ನೆಲೆಯಲ್ಲಿ ಈ ದೇಶದ ಬಜೆಟ್ ರೂಪುಗೊಳ್ಳುತ್ತಿರುವಾಗ, ಈ ರಾಜ್ಯದ ಬಜೆಟ್ ಅದನ್ನು ಮೀರಿ ಹೆಜ್ಜೆ ಇಡಲು ಸಾಧ್ಯವಿಲ್ಲ. ಹೀಗಾಗಿ ರೈತ ಬೆಳೆದ ಬೆಳೆಯ ಬೆಲೆ ಕುಸಿದಾಗ ಮಾರುಕಟ್ಟೆಗೆ ಮಧ್ಯೆ ಪ್ರವೇಶಿಸಿ ಬೆಲೆಯನ್ನು ಸ್ಥಿರಗೊಳಿಸುವುದು ಸರ್ಕಾರಕ್ಕೆ ಕಷ್ಟದ ಕೆಲಸ. ಉದಾಹರಣೆಗೆ ಮೆಕ್ಕೆ ಜೋಳವನ್ನೇ ತೆಗೆದುಕೊಳ್ಳಿ. ಮಾರುಕಟ್ಟೆಯಲ್ಲಿ ಅದರ ಬೆಲೆ ಕುಸಿದಾಗ ಬೆಂಬಲ ಬೆಲೆ ನೀಡಿ ಖರೀದಿ ಮಾಡುವುದಾಗಿ ಸರ್ಕಾರ ಘೋಷಿಸುತ್ತದೆ. ಆದರೆ ಖರೀದಿ ಪ್ರಕ್ರಿಯೆ ಆರಂಭವಾದ ವಾರದೊಳಗಾಗಿ ಸ್ಥಗಿತಗೊಳ್ಳುತ್ತದೆ. ಕಾರಣ, ಆ ಪ್ರಮಾಣದ ಬೆಂಬಲ ಬೆಲೆ ನೀಡಿ ಖರೀದಿಸಲು ಸರ್ಕಾರದ ಖಜಾನೆಯಲ್ಲಿ ದುಡ್ಡಿರುವುದಿಲ್ಲ. ಇದು ಕೇವಲ ಮೆಕ್ಕೆ ಜೋಳದ ಕತೆಯಲ್ಲ. ಸರ್ಕಾರ ಯಾವುದೇ ಬೆಳೆಯ ಬೆಲೆಯನ್ನು ಸ್ಥಿರಗೊಳಿಸಲು ಹೋದರೂ ಇದೇ ಪರಿಸ್ಥಿತಿ. ಹೀಗಾಗಿ ರೈತರು ಬೆಳೆದ ಬೆಳೆಯ ಬೆಲೆ ಕುಸಿದಾಗ ಸರ್ಕಾರ ಮಾರುಕಟ್ಟೆಗೆ ಪ್ರವೇಶ ಮಾಡಿ ಏನೇ ಸ್ಥಿರತೆ ತರಲು ಹೊರಟರೂ ಫೈನಲಿ, ರೈತರೇ ಅಸ್ಥಿರವಾಗುತ್ತಾರೆ. ಸರ್ಕಾರ ಸುಸ್ತಾಗುತ್ತದೆ. ಇದು ಅಸಲಿ ಕತೆ.

ಯಾಕೆ ಹೀಗಾಗುತ್ತದೆ ಎಂದರೆ ಜಾಗತೀಕರಣದ ಈ ಕಾಲಘಟ್ಟದಲ್ಲಿ ಸರ್ಕಾರಗಳು ತೆಗೆದುಕೊಳ್ಳುವ ಬಹುತೇಕ ನಿಲುವುಗಳು ಮತ್ತು ರೂಪಿಸುವ ಕಾನೂನುಗಳು ಕೈಗಾರಿಕೆಗಳ ಪರವಾಗಿವೆಯೇ ಹೊರತು ರೈತರ ಪರವಾಗಿಲ್ಲ. ಹೀಗಾಗಿ ಸಮಸ್ಯೆ ಎಂಬುದು ಪದೇಪದೇ ಮೇಲೆದ್ದು ಕಾಡುತ್ತದೆ. ಮುಂದೆಯೂ ಕಾಡುತ್ತದೆ. ಆದ್ದರಿಂದ ಇವತ್ತಿನ ಸ್ಥಿತಿಯಲ್ಲಿ ಒಂದು ಸರ್ಕಾರ ರೈತ ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡುವ ಆಯೋಗವನ್ನು ಸ್ಥಾಪಿಸುವುದು ಎಷ್ಟು ಮುಖ್ಯವೋ ಅದಕ್ಕಿಂತ ಮುಖ್ಯವಾದ್ದುದು ಈ ಆಯೋಗ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಡುವುದು. ಇದು ಒಂದು ಕಡೆಗಿರಲಿ. ಅಂದ ಹಾಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ದಿನದಿಂದ ದಿನಕ್ಕೆ ದುರ್ಬಲರಾಗುತ್ತಿರುವ ವಿಷಯಕ್ಕೆ ಬರೋಣ. ಕಳೆದ ಹಲವು ದಿನಗಳ ಅವಧಿಯಲ್ಲಿ ಸಿದ್ಧರಾಮಯ್ಯನವರ ಶಕ್ತಿ ಕುಗ್ಗುತ್ತಲೇ ಇದೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅವರು ತೆಗೆದುಕೊಳ್ಳುವ ತೀರ್ಮಾನಗಳು ವಿವಾದಕ್ಕೆ ಕಾರಣವಾಗುತ್ತಿವೆ. ಅಲ್ಪಸಂಖ್ಯಾತ ಕುಟುಂಬದ ಬಡ ಹೆಣ್ಣು ಮಕ್ಕಳ ಮದುವೆಗೆ ಐವತ್ತು ಸಾವಿರ ರುಪಾಯಿ ನೆರವು ನೀಡುವ ಶಾದಿ ಭಾಗ್ಯ ಯೋಜನೆ ಇರಬಹುದು, ಎರಡು ವರ್ಗಗಳ ಶಾಲಾ ಮಕ್ಕಳಿಗೆ ಸೀಮಿತವಾಗುವಂತೆ ರೂಪಿಸಿದ ಪ್ರವಾಸ ಭಾಗ್ಯ ಯೋಜನೆ ಇರಬಹುದು ಅಥವಾ ಮೂಢನಂಬಿಕೆಗಳ ನಿಷೇಧ ಕಾಯ್ದೆಯನ್ನು ಮಂಡಿಸುವ ಪ್ರಸ್ತಾಪ ಇರಬಹುದು.

ಈ ರೀತಿಯ ವಿಷಯಗಳಲ್ಲಿ ಅವರ ಪಕ್ಷದ ನಾಯಕರಾಗಲೀ, ಸರ್ಕಾರದಲ್ಲಿರುವ ನಾಯಕರಾಗಲೀ ದೊಡ್ಡ ಮಟ್ಟದಲ್ಲಿ ಸಿದ್ಧರಾಮಯ್ಯನವರ ಪರವಾಗಿ ಧ್ವನಿ ಎತ್ತಲಿಲ್ಲ. ಇದ್ದುದರಲ್ಲಿ ಜಯಚಂದ್ರ ಅವರಂತಹ ಕೆಲ ನಾಯಕರು ಮಾತನಾಡಿದರಾದರೂ ಅದು ಸಿದ್ಧರಾಮಯ್ಯನವರ ಶಕ್ತಿಯನ್ನು ಹೆಚ್ಚಿಸಲಿಲ್ಲ. ಈಗ ಬೆಳಗಾವಿಯ ಸುವರ್ಣಸೌಧದ ಮುಂದೆ ವಿಠ್ಠಲ ಅರಭಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೇ ಇರಬಹುದು. ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರ‍್ಯಾರೂ ದೊಡ್ಡ ಮಟ್ಟದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಜತೆ ನಿಲ್ಲಲಿಲ್ಲ. ಇದಕ್ಕಿರುವ ಕಾರಣವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಸಿದ್ಧರಾಮಯ್ಯನವರ ರಾಜಕೀಯ ನಡೆಗಳ ಕಡೆ ಗಮನ ಹರಿಸಬೇಕು. ಮುಖ್ಯಮಂತ್ರಿಯಾದ ನಂತರ ಸಿದ್ಧರಾಮಯ್ಯ ಸರ್ಕಾರದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಯತ್ನದಲ್ಲಿದ್ದಾರೆ. ಮೇಲ್ನೋಟಕ್ಕೇನೋ ಅವರು ಹೈಕಮಾಂಡ್ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತಾರೆ ಎಂಬಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆಯಾದರೂ ಆಳದಲ್ಲಿ ಸಿದ್ಧರಾಮಯ್ಯ ತಮ್ಮ ಲೆಕ್ಕಾಚಾರಕ್ಕೆ ಪೂರಕವಾಗಿ ಹೈಕಮಾಂಡ್‌ನ್ನು ಮಣಿಸುವ ಯತ್ನ ಮಾಡುತ್ತಿದ್ದಾರೆ.

ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ, ಒಕ್ಕಲಿಗ ನಾಯಕ ಡಿ.ಕೆ.ಶಿ ಹಾಗೂ ಅಲ್ಪಸಂಖ್ಯಾತ ನಾಯಕ ಬೇಗ್ ಅವರನ್ನು ತಕ್ಷಣವೇ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಿ ಎಂದು ಹೇಳಿತ್ತು. ಆದರೆ ಇದನ್ನು ಒಳಗಿಂದೊಳಗೇ ಸಹಿಸದ ಸಿದ್ಧರಾಮಯ್ಯ ಇದೇ ಕಾರಣಕ್ಕಾಗಿ ವಾರ್ತಾ ಸಚಿವ ಸಂತೋಷ್ ಲಾಡ್ ಅವರನ್ನು ಬಲಿ ತೆಗೆದುಕೊಂಡರು. ಪರಿಣಾಮವಾಗಿ ಕಾಂಗ್ರೆಸ್ ಪಾಳಯದಲ್ಲಿ ಸಿದ್ಧರಾಮಯ್ಯನವರ ಶತ್ರುಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ನಡೆದಿದೆ. ಇವತ್ತು ಡಿ.ಕೆ.ಶಿಯಂತಹ ನಾಯಕ ಸರ್ಕಾರದ ಸಂಕಷ್ಟಕ್ಕೆ ಸಿಲುಕಿದಾಗ ಅದನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ. ಅದಾಗಲೇ ಈ ಪಟ್ಟಿಗೆ ಕೆಪಿಸಿಸಿ ಅಧ್ಯಕ್ಷ ಡಾ||ಜಿ.ಪರಮೇಶ್ವರ್ ಕೂಡ ಸೇರಿರುವುದರಿಂದ ಸಿದ್ಧರಾಮಯ್ಯನವರ ಶಕ್ತಿ ಇನ್ನಷ್ಟು ಕುಗ್ಗಿದೆ.

ಗಮನಿಸಬೇಕಾದ ಸಂಗತಿ ಎಂದರೆ ಅವರು ಮಾತನಾಡದೇ ಇರುವುದರಲ್ಲಿ ತಪ್ಪೇನೂ ಇಲ್ಲ. ಯಾಕೆಂದರೆ ಶಾದಿ ಭಾಗ್ಯದಿಂದ ಹಿಡಿದು ಪ್ರವಾಸ ಭಾಗ್ಯದ ತನಕ ಯಾವುದೇ ವಿಷಯ ಇರಲಿ, ಆ ಕುರಿತು ಸಿದ್ಧರಾಮಯ್ಯ ಸೌಜನ್ಯಕ್ಕಾಗಿಯೂ ಪರಮೇಶ್ವರ್ ಜತೆ ಚರ್ಚಿಸಿರಲಿಲ್ಲ. ಯಾವಾಗ ಒಬ್ಬ ಮುಖ್ಯಮಂತ್ರಿ ಚರ್ಚೆಯನ್ನೇ ಮಾಡದೆ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುತ್ತಾರೋ ಆಗ ಸಹಜವಾಗಿಯೇ ಇಂತಹ ವಿಷಯಗಳಲ್ಲಿ ವಿವಾದವೆದ್ದಾಗ ಪ್ರಮುಖ ನಾಯಕರು ಮೌನವಾಗಿರುತ್ತಾರೆ. ಹೀಗೆ ಯಾವುದೇ ವಿವಾದಗಳ ಕುರಿತು ಪಕ್ಷ ಹಾಗೂ ಸರ್ಕಾರದ ಪ್ರಮುಖ ನಾಯಕರನೇಕರು ಸಿದ್ಧರಾಮಯ್ಯನವರ ಸಮರ್ಥನೆಗೆ ನಿಲ್ಲದೇ ಇರುವುದರ ಪರಿಣಾಮವಾಗಿಯೇ ಇವತ್ತು ಅವರು ದುರ್ಬಲರಂತೆ ಕಾಣತೊಡಗಿದ್ದಾರೆ. ಮುಖ್ಯಮಂತ್ರಿಯಾದ ಆರೇ ತಿಂಗಳಲ್ಲಿ ಅವರು ಇಂತಹ ಸ್ಥಿತಿಯನ್ನು ಸೃಷ್ಟಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆಯೇನಲ್ಲ.

ಅಂದ ಹಾಗೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಕೂಡ ಇದೇ ರೀತಿ ವರ್ತಿಸುತ್ತಿದ್ದರು. ಸರ್ಕಾರ ಅಸ್ತಿತ್ವಕ್ಕೆ ಬಂದ ಶುರುವಿನಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಸಚಿವ ಸಂಪುಟದೊಳಕ್ಕೆ ಬಿಟ್ಟುಕೊಳ್ಳಲೂ ಅವರು ಒಪ್ಪಿರಲಿಲ್ಲ. ಇದೇ ರೀತಿ ಹಲವು ವಿಷಯಗಳಲ್ಲಿ ಅವರು ಸರ್ವಾಧಿಕಾರಿಯಂತೆ ನಡೆದುಕೊಂಡ ಪರಿಣಾಮವಾಗಿ ಸಮಸ್ಯೆ ಬಿಗಡಾಯಿಸುತ್ತಾ ಹೋಯಿತು. ಇಷ್ಟಾದರೂ ಯಡಿಯೂರಪ್ಪನವರು, ಸಿದ್ಧರಾಮಯ್ಯನವರಷ್ಟು ಬೇಗ ದುರ್ಬಲರಾಗಲಿಲ್ಲ. ಅದಕ್ಕಿದ್ದ ಮುಖ್ಯ ಕಾರಣವೆಂದರೆ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಅವರ ನಾಯಕತ್ವವೇ ಮುಖ್ಯ ಕಾರಣವಾಗಿತ್ತು. ಹೀಗಾಗಿ ಯಡಿಯೂರಪ್ಪ ಏನು ಹೆಜ್ಜೆ ಇಟ್ಟರೂ ಅದನ್ನು ಬಹಿರಂಗವಾಗಿ ವಿರೋಧಿಸುವವರ ಸಂಖ್ಯೆ ಕಡಿಮೆ ಇತ್ತು. ಆದರೆ ಸಿದ್ಧರಾಮಯ್ಯನವರ ಸ್ಥಿತಿ ಹಾಗೇನಿಲ್ಲ. ಕರ್ನಾಟಕದ ಪಡಸಾಲೆಯಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಅವರೇ ಮುಖ್ಯ ಪಾತ್ರಧಾರಿಯಾಗಿರಲಿಲ್ಲ. ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಪಾತ್ರವೂ ದೊಡ್ಡದಿತ್ತು.

ಡಿ.ಕೆ.ಶಿ ಕೂಡ ಒಂದು ಮಟ್ಟದಲ್ಲಿ ಹಲವು ಕ್ಯಾಂಡಿಡೇಟ್‌ಗಳ ಗೆಲುವಿಗೆ ಅಗತ್ಯವಾದ ಬಲ ನೀಡಿದ್ದರು. ಆದರೆ ಅವರ ಪಡೆಯೇ ಇವತ್ತು ಸರ್ಕಾರದಿಂದ ದೂರವಿದೆ. ಅದೇ ರೀತಿ ರಮೇಶ್ ಕುಮಾರ್, ರೋಷನ್ ಬೇಗ್ ಸೇರಿದಂತೆ ಹಲವರು ಸಂಪುಟಕ್ಕೆ ಸೇರಲಾಗದ ಕಾರಣಕ್ಕಾಗಿ ಅಸಮಾಧಾನಗೊಂಡಿದ್ದಾರೆ. ಇದೆಲ್ಲದರ ಫಲವಾಗಿಯೇ ಇವತ್ತು ಸಿದ್ಧರಾಮಯ್ಯ ಕೈಗೊಳ್ಳುವ ಯಾವುದೇ ನಿರ್ಧಾರಗಳಿಗೆ, ಅವರು ಎದುರಿಸುವ ಯಾವುದೇ ಸಮಸ್ಯೆಗಳಿಗೆ ಜತೆ ಕೊಡುವ ಜನರ ಸಂಖ್ಯೆ ಕಡಿಮೆಯಾಗಿದೆ. ಇದೇ ಸ್ಥಿತಿ ಮುಂದುವರಿದರೆ ಮುಂಬರುವ ಪಾರ್ಲಿಮೆಂಟ್ ಚುನಾವಣೆಯ ನಂತರ ಅವರ ಪದಚ್ಯುತಿಯಾದರೂ ಅಚ್ಚರಿಯೇನಿಲ್ಲ. ಇನ್ನಾದರೂ ಸಿದ್ಧರಾಮಯ್ಯ ಎಚ್ಚೆತ್ತುಕೊಳ್ಳಲಿ. ಪಕ್ಷದ ನಾಯಕರನ್ನು ಚಾಣಾಕ್ಷತೆಯಿಂದ ದೂರ ಇಡುವ ಬದಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಜ್ಜೆಯಿಡಲಿ. ಆಗ ತನ್ನಿಂತಾನೇ ಒಂದು ಟಾನಿಕ್ ಅವರಿಗೆ ಸಿಕ್ಕಂತಾಗುತ್ತದೆ. ಅದನ್ನು ತೆಗೆದುಕೊಳ್ಳಲು ಅವರು ರೆಡಿ ಇರಬೇಕಷ್ಟೇ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 13 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books