Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಬದುಕು ಎಂದರೆ ಅಲೆಗಳನ್ನು ಸೃಷ್ಟಿಸುವ ಸಾಗರ ಅಲ್ಲವೇ?

ಇಲ್ಲ, ಇನ್ನು ಈ ಚಕ್ರಸುಳಿಯಿಂದ ಪಾರಾಗಲು ನಮಗೆ ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಪಾರಾಗುವ ದಾರಿ ಅಂತಿದ್ದರೆ ಅದು ಸಾವಿನಿಂದ ಮಾತ್ರ ಸಾಧ್ಯ. ಹಾಗಂತ ನಾವು ಹಲವು ಸಂದರ್ಭಗಳಲ್ಲಿ ಯೋಚಿಸಿರುತ್ತೇವೆ. ಅಷ್ಟೇ ಅಲ್ಲ, ಆ ಥರದ ತೀರ್ಮಾನಕ್ಕೂ ಬಂದಿರುತ್ತೇವೆ. ಅದು ಯಾವುದೇ ಸಮಸ್ಯೆ ಆಗಿರಬಹುದು. ಮೈ, ಮನಸ್ಸುಗಳಲ್ಲಿ ತ್ರಾಣವೇ ಇಲ್ಲದಿದ್ದಾಗ ಸಾಲದ ಹೊರೆ ಎಂಬುದು ಈ ರೀತಿ ನಮ್ಮನ್ನು ಕಾಡಬಹುದು. ವೃತ್ತಿಯಲ್ಲಿ ಎದುರಾಗುವ ಅನಿಶ್ಚಿತತೆ ಇರಬಹುದು ಅಥವಾ ಇನ್ನೇನೋ ಸಮಸ್ಯೆ ಇರಬಹುದು. ಇಂತಹ ಸಮಸ್ಯೆಗೆ ನಾವು ಅಗತ್ಯಕ್ಕಿಂತ ಹೆಚ್ಚಾಗಿ ಹೆದರಿಕೊಂಡಿರುತ್ತೇವೆ. ಈ ಸಮಸ್ಯೆಯ ಪರಿಹಾರಕ್ಕೆ ಸಾವನ್ನು ಹೊರತುಪಡಿಸಿ ಬೇರೆ ಯಾವುದೇ ಮಾರ್ಗ ಇರಲು ಸಾಧ್ಯವಿಲ್ಲ ಅಂದುಕೊಂಡಿರುತ್ತೇವೆ. ಆದರೆ ನನ್ನ ಅನುಭವದ ಪ್ರಕಾರ, ಎಂತಹ ಸಮಸ್ಯೆಯೇ ಎದುರಾಗಲಿ ಅದರಿಂದ ಪಾರಾಗುವ ದಾರಿ ಇದ್ದೇ ಇರುತ್ತದೆ. ಅದಕ್ಕೆ ಬೇಕಾಗಿರುವುದು ಒಂದೇ ಅಸ್ತ್ರ. ಅದೆಂದರೆ ಸಾವಿನ ಹೆದರಿಕೆಯಿಂದ ದೂರ ನಿಂತು ಎಲ್ಲವನ್ನೂ ಕೂಲಂಕುಷವಾಗಿ ನೋಡುವುದು.

ಸಾವು ಅನ್ನುವುದು ಬದುಕಿನ ಅಲ್ಟಿಮೇಟ್. ಈ ಅಲ್ಟಿಮೇಟ್ ಬಗ್ಗೆ ನಿಮ್ಮಲ್ಲಿ ಹೆದರಿಕೆ ಎಂಬುದು ಇಲ್ಲದೇ ಹೋದರೆ ನೀವು ಯಾವ ಸಮಸ್ಯೆಯನ್ನಾದರೂ ಎದುರಿಸಬಲ್ಲಿರಿ. ಮೊನ್ನೆ ನನ್ನ ಗೆಳೆಯನೊಬ್ಬ ಇದ್ದಕ್ಕಿದ್ದಂತೆ ನನಗೆ ಫೋನ್ ಮಾಡಿದ. ನಾನೀಗ ದೊಡ್ಡ ಸಮಸ್ಯೆಯಲ್ಲಿ ಸಿಲುಕಿದ್ದೇನೆ. ಇದಕ್ಕೆ ಪರಿಹಾರವೇ ಇಲ್ಲ ಅಂತ ಅನ್ನಿಸುತ್ತಿದೆ ಅಂತ ನೋವು ತೋಡಿಕೊಂಡ. ಆತನ ಧ್ವನಿಯಲ್ಲಿದ್ದ ಕಳವಳವನ್ನು ಗಮನಿಸಿದ ನನಗೆ ಸುಮ್ಮನೆ ಇರಲಾಗಲಿಲ್ಲ. ಹಾಗಂತಲೇ, ತಕ್ಷಣ ಹೊರಟು ಬಾ ಮಾತನಾಡೋಣ ಎಂದು ಹೇಳಿದೆ. ಹೀಗೆ ಹೇಳಿದ ಅರ್ಧ ಗಂಟೆಯೊಳಗಾಗಿ ಆತ ನನ್ನ ಎದುರಿಗೆ ಕುಳಿತಿದ್ದ. ಆತನಿಗಿರುವುದು ಒಬ್ಬನೇ ಮಗ. ಇಂಜಿನೀರಿಂಗ್ ಓದಿಕೊಂಡಿದ್ದ ಹುಡುಗ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಆರು ತಿಂಗಳು ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಎರಡು ವರ್ಷ ಕಳೆಯುವಷ್ಟರಲ್ಲಿ ಅವನ ಬಾಸು ಇದ್ದಕ್ಕಿದ್ದಂತೆ ಕಿರುಕುಳ ನೀಡತೊಡಗಿದ. ಕೊಡುವ ಸಂಬಳಕ್ಕೆ ಮೂರು ಪಟ್ಟು ಕೆಲಸವನ್ನು ಅಪೇಕ್ಷಿಸತೊಡಗಿದ. ಆತನ ಅಪೇಕ್ಷೆಯ ಪ್ರಮಾಣ ಹೇಗಿತ್ತೆಂದರೆ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ದುಡಿದರೂ ಈ ಹುಡುಗ ಅದನ್ನು ಪೂರೈಸಲು ಸಾಧ್ಯವಿರಲಿಲ್ಲ.

ಪರಿಣಾಮವಾಗಿ ಹುಡುಗ ದಿನದಿಂದ ದಿನಕ್ಕೆ ಬಳಲುತ್ತಾ, ಬಳಲುತ್ತಾ ಖಿನ್ನನಾಗಿ ಹೋದ. ಆತ್ಮವಿಶ್ವಾಸವನ್ನೇ ಕಳೆದುಕೊಂಡ. ಹೀಗೆ ಆತ್ಮವಿಶ್ವಾಸ ಕಳೆದುಕೊಂಡ ಮಗ ಈಗ ಮನೆಯ ಮಟ್ಟಿಗೆ ಸಮಸ್ಯೆಯಾಗಿ ಹೋಗಿದ್ದಾನೆ. ತಪ್ಪು ಅವನದು ಅಂತ ಹೇಳುವಂತಿಲ್ಲ. ಯಾಕೆಂದರೆ ಬೆಳಗ್ಗೆ ಐದು ಗಂಟೆಗೆ ಆತ ಕೆಲಸಕ್ಕೆ ಹಾಜರಾಗಬೇಕು ಎಂಬುದು ಬಾಸ್ ಆದೇಶ. ಈ ಆದೇಶವನ್ನು ಪಾಲಿಸುವ ಹುಡುಗ ಮೂರೂವರೆಗೇ ಎದ್ದು ಕಂಪನಿಗೆ ಹೋಗಬೇಕು. ರಾತ್ರಿ ಹತ್ತು ಗಂಟೆಯ ತನಕ ಬಿಡುವಿಲ್ಲದ ಕೆಲಸ. ಎಲ್ಲ ಮುಗಿಸಿ ಮನೆಗೆ ಬರುವ ಹೊತ್ತಿಗೆ ನಡುರಾತ್ರಿ ಹನ್ನೆರಡು ಗಂಟೆ. ಆತ ಏಳುವ ಹೊತ್ತಿಗೆ ಸರಿಯಾಗಿ ತಾಯಿ ತಿಂಡಿ, ತೀರ್ಥ ಕಟ್ಟಿ ಕೊಡಬೇಕು. ನಡುರಾತ್ರಿ ಮನೆಗೆ ಬರುವ ತನಕ ಕಾದು ಕುಳಿತು ಊಟ ಬಡಿಸಿಯೇ ಮಲಗಬೇಕು. ಇದು ಒಂದೆರಡು ದಿನಗಳ ಕತೆಯಲ್ಲ. ಅತ್ತ ಹುಡುಗನೂ ಹೈರಾಣು, ಇತ್ತ ತಾಯಿಯೂ ಹೈರಾಣು.


ಹೀಗಾಗಿ ನನ್ನ ಸ್ನೇಹಿತನಿಗೆ ಮಗನ ಕೆಲಸವೇ ಒಂದು ವೈರಾಣುವಿನ ಥರ ಭಾಸವಾಗತೊಡಗಿತು. ಹಾಗಂತಲೇ ಅತ್ತ ಮಗನ ಕಷ್ಟ ನೋಡಲಾಗದೆ, ಇತ್ತ ಹೆಂಡತಿಯ ಸಂಕಟ ನೋಡಲಾಗದೇ ಬಸವಳಿದು ಹೋಗಿದ್ದ. ಹೋಗಲಿ, ಈ ಕೆಲಸ ಬಿಟ್ಟು ಬೇರೆ ಕೆಲಸ ಹುಡುಕು ಎಂದರೆ ಮಗನಿಗೆ ಅಂತಹ ಆತ್ಮವಿಶ್ವಾಸವೇ ಇಲ್ಲ. ಹೀಗಾಗಿ ನನ್ನ ಸ್ನೇಹಿತನಿಗೆ ಇದು ಬಗೆಹರಿಯದ ಸಮಸ್ಯೆ. ಅತ್ತ ಕಡೆ ಮಗನ ಕಷ್ಟ. ಇತ್ತ ಕಡೆ ಹೆಂಡತಿಯ ಕಷ್ಟ. ಇವೆರಡನ್ನು ನೋಡುವ, ತನ್ನ ಕಷ್ಟಗಳೆಲ್ಲವೂ ಮಿಕ್ಸ್ ಅಪ್ ಆಗಿ, ಸಾವೊಂದೇ ಇದಕ್ಕೆ ಪರಿಹಾರವೇನೋ ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದ. ನನ್ನೆದುರಿಗೆ ಕೂತವನು ಹಾಗಂತ ಹೇಳಿ ಗದ್ಗದಿತನಾದ. ಆತ ಹೇಳಿದ್ದನ್ನು ಕೇಳಿ ನಾನು ಅರೆಕ್ಷಣ ಸುಮ್ಮನಾದೆ. ಆನಂತರ ಹೇಳಿದೆ: ಸಾವು ಮಾತ್ರ ನಿನ್ನ ಸಮಸ್ಯೆಗೆ ಪರಿಹಾರ ಅಂತ ನಿನಗನ್ನಿಸುತ್ತದೆಯೇ? ಹೌದು, ಇದನ್ನು ಬಿಟ್ಟರೆ ಬೇರೆ ದಾರಿ ಏನಿದೆ? ಆ ಕಡೆ ಮಗ ಆತ್ಮವಿಶ್ವಾಸ ಕಳೆದುಕೊಂಡಿದ್ದಾನೆ. ಇತ್ತ ನನ್ನ ಹೆಂಡತಿಯ ಬದುಕು ನರಕವಾಗಿ ಹೋಗಿದೆ. ಅವರಿಬ್ಬರ ಮಧ್ಯೆ ಬದುಕುತ್ತಾ, ಈ ಬದುಕಿಗೆ ಅರ್ಥವೇ ಇಲ್ಲ ಅಂತ ನನಗನ್ನಿಸುತ್ತಿದೆ ಎಂದು ಹೇಳಿದ.
ಹಾಗಿದ್ದರೆ ಒಂದು ಕೆಲಸ ಮಾಡು. ನಿನ್ನ ಮಗನನ್ನು ಒಂದು ಸಲ ನನ್ನ ಬಳಿ ಕರೆದುಕೊಂಡು ಬಾ ಎಂದು ಹೇಳಿದೆ. ಇದಾದ ಮೂರನೇ ದಿನ ಆತ ತನ್ನ ಮಗನ ಜತೆ ಹಾಜರಾದ.

ಯಥಾಪ್ರಕಾರ ಆತನ ಮಗನನ್ನು ಎದುರುಗಡೆ ಕೂರಿಸಿಕೊಂಡು ಎಲ್ಲ ಸಮಸ್ಯೆಯನ್ನು ಕೇಳಿದೆ. ಆತ ಜಾಗತೀಕರಣದ ಮೂಲಕ ಸೃಷ್ಟಿಯಾದ ಒತ್ತಡಗಳಿಂದ ಹಿಡಿದು, ಈ ಒತ್ತಡಗಳನ್ನು ಎದುರಿಸಲು ಪಡಬೇಕಾದ ಕಷ್ಟ ಪರಂಪರೆಗಳ ವಿವರವನ್ನು ನೀಡುತ್ತಾ ಹೋದ. ಎಲ್ಲವನ್ನೂ ಕೇಳಿದ ಮೇಲೆ ನಾನು ನಗುತ್ತಾ ಆತನಿಗೆ ಒಂದು ಪ್ರಶ್ನೆ ಕೇಳಿದೆ. ಯೆಸ್, ನೀನು ಹೇಳಿದ್ದನ್ನೆಲ್ಲ ನಾನು ಒಪ್ಪುತ್ತೇನೆ. ಜಾಗತೀಕರಣ ಎಂಬುದು ಮನುಷ್ಯನ ಬದುಕನ್ನು ಒತ್ತಡಕ್ಕೆ ಸಿಲುಕಿಸಿದೆ. ನನ್ನ ಪ್ರಕಾರ ಈ ಒತ್ತಡ ಎಂಬುದೇ ಒಂದು ಫ್ಲೂಕ್. ಅದೊಂದು ಭ್ರಮೆ. ಯಾಕೆಂದರೆ ಮನುಷ್ಯನ ಬದುಕಿಗೆ ಬೇಕಿರುವುದು ಫೈನಲಿ, ಮೂರು ಹೊತ್ತಿನ ಊಟ. ಉಡಲು ಸ್ವಚ್ಚವಾದ ಬಟ್ಟೆ, ವಾಸಿಸಲು ಒಂದು ಸೂರು. ಇದಕ್ಕಾಗಿ ನೀನು ಐವತ್ತು ಸಾವಿರ ದುಡಿಯಬೇಕಿಲ್ಲ ಮಗು ಅಂದೆ.

ಆತ ಅರೆಕ್ಷಣ ವಿಚಲಿತನಾದ. ಒಂದು ರೀತಿಯ ಗೊಂದಲ ಆತನನ್ನು ಆವರಿಸಿಕೊಂಡಂತೆ ಕಾಣುತ್ತಿತ್ತು. ನಾನು ಮುಂದುವರಿಸಿದೆ. ನೋಡು, ನಾವು ನಮ್ಮ ಬದುಕಿನ ಮೂಲಭೂತ ಅಗತ್ಯಗಳ ಬಗ್ಗೆ ಚಿಂತೆ ಮಾಡಬೇಕೇ ಹೊರತು ಈ ಅಗತ್ಯಗಳನ್ನು ಮೀರಿದ ಯಾವ ವಿಷಯದ ಬಗ್ಗೆಯೂ ಚಿಂತೆ ಮಾಡಕೂಡದು. ಕೋಟಿಗಟ್ಟಲೆ ಹಣವಿದ್ದರೂ ಯಡಿಯೂರಪ್ಪನವರಂತಹ ಧೀಶಕ್ತಿ ಇರುವ ನಾಯಕ ಇವತ್ತು ಹೋರಾಟದ ಹೆಸರಿನಲ್ಲಿ ಬೀದಿಯ ಮೇಲೆ ಮಲಗುವ ಸ್ಥಿತಿ ಇದೆ. ಸಾವಿರಾರು ಕೋಟಿ ಹಣವಿದ್ದರೂ ನಮ್ಮ ರಾಜಕಾರಣಿಗಳು ನೆಮ್ಮದಿಯಿಂದ ಎರಡು ತುತ್ತು ಅನ್ನ ತಿನ್ನುವುದನ್ನು ನಾನು ನೋಡಿಲ್ಲ. ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೋ. ನೀನು ಐವತ್ತು ಸಾವಿರ ರುಪಾಯಿ ದುಡಿಯುತ್ತೀಯೋ? ಐದು ಸಾವಿರ ದುಡಿಯುತ್ತೀಯೋ ಎಂಬುದು ಮುಖ್ಯವಲ್ಲ. ಯಾವುದಾದರೂ ಒಂದು ಭಾನುವಾರ ರಜೆ ಹಾಕಿ ಕಬ್ಬನ್ ಪಾರ್ಕಿಗೋ, ಲಾಲ್‌ಬಾಗ್‌ಗೋ ಹೋಗಿ ನೋಡು. ಬಡ, ಮಧ್ಯಮ ವರ್ಗದ ದಂಡೇ ಅಲ್ಲಿರುತ್ತದೆ.

ನಾನು ಗಮನಿಸಿದಂತೆ ತಿಂಗಳಿಗೆ ಐದು, ಹತ್ತು ಸಾವಿರ ರುಪಾಯಿಗಳಷ್ಟು ಆದಾಯವೂ ಇಲ್ಲದ ಬಡವರೇ ಪಾರ್ಕುಗಳಲ್ಲಿ ತುಂಬಿ ತುಳುಕುತ್ತಿರುತ್ತಾರೆ. ಪಾರ್ಕಿನಲ್ಲಿರುವ ಮರಕ್ಕೇ ಹಗ್ಗ ಕಟ್ಟಿ ಜೋಕಾಲಿ ಆಡುತ್ತಾರೆ. ತೇಕಾಡುವ ಕುದುರೆಯನ್ನೇ ಹತ್ತಿ ಇಡೀ ಪಾರ್ಕಿನ ತುಂಬ ನಾನೇ ಅಕ್ಬರ್ ಬಾದ್‌ಷಾ ಎಂಬಂತೆ ತಿರುಗಾಡುತ್ತಿರುತ್ತಾರೆ ಬದುಕನ್ನು ನಿಜವಾದ ಅರ್ಥದಲ್ಲಿ ಅನುಭವಿಸುವುದು ಎಂದರೆ ಅದು. ಬಡತನದಲ್ಲಿ ಬದುಕಿನ ಸುಖವನ್ನು ನಾವು ಅನುಭವಿಸುತ್ತೇವೆ. ಶ್ರೀಮಂತಿಕೆ ಬಂದಾಗ ನಮ್ಮ ಜತೆಗಿದ್ದವರು ಅದನ್ನು ಅನುಭವಿಸುತ್ತಾರೆ. ಯಾವತ್ತೂ ಇದನ್ನು ನೆನಪಿನಲ್ಲಿಟ್ಟುಕೋ. ಹೀಗಾಗಿ ಯಾವುದೇ ಕಷ್ಟಕ್ಕೂ ಅಂಜಬೇಡ. ಫೈನಲಿ, ನಾವು ಬದುಕಿನ ಎಲ್ಲ ಸುಖಗಳನ್ನು ಅನುಭವಿಸಬೇಕು. ಹಾಗೆ ಸುಖ ಅನುಭವಿಸಬೇಕು ಎಂದರೆ ಯಾವುದೇ ಒತ್ತಡವಿಲ್ಲದೇ ಬದುಕುವುದನ್ನು ರೂಢಿಸಿಕೊಳ್ಳಬೇಕು. ಫೈವ್ ಸ್ಟಾರ್ ಹೊಟೇಲಿನಲ್ಲಿ ಕೂತು ತಿನ್ನುವುದು ಸ್ಟ್ಯಾಂಡರ್ಡ್ ಅಂತ ಯಾವತ್ತೂ ಭಾವಿಸಬೇಡ. ನಿನ್ನ ಹೊಟ್ಟೆ, ಹಸಿವಿನ ಅನುಭವ ಕೊಟ್ಟಾಗ ನೀವು ಫುಟ್‌ಪಾತ್ ಮೇಲೆ ನಿಂತು ತಿನ್ನುವ ಪಾನಿಪೂರಿ ಕೂಡ ಸ್ವರ್ಗ ಸುಖ ಕೊಡುತ್ತದೆ.

ನಿನ್ನ ಕೆಲಸ ನಿನಗೆ ವಿಪರೀತ ಕಿರುಕುಳ ಕೊಡುತ್ತಿದೆ ಎಂದರೆ ಜಸ್ಟ್ ಫರ್‌ಗೆಟ್ ಇಟ್. ಸ್ವಂತ ಮನೆ ಇರುವವನಿಗೆ ಒಂದೇ ಮನೆ. ಬಾಡಿಗೆ ಮನೆ ಹುಡುಕುವವನಿಗೆ ಸಾವಿರ ಮನೆ. ಮೊದಲು ನಿನಗೆ ಟೈಮು ಟೈಮಿಗೆ ಹಸಿವಾಗುತ್ತಿದೆಯಾ ಅಂತ ನೋಡು. ಟೈಮಿಗೆ ಸರಿಯಾಗಿ ನಿದ್ರೆ ಎಳೆಯುತ್ತಿದೆಯಾ ನೋಡು. ಇವೆರಡೂ ಸಮರ್ಪಕವಾಗಿದೆ ಅನ್ನಿಸಿದರೆ ನೀನು ಸ್ವರ್ಗದ ಹಾದಿಯಲ್ಲಿದ್ದಿ ಅಂತ ಅರ್ಥ. ಇವೆರಡೂ ನೆಟ್ಟಗಿಲ್ಲದಿದ್ದರೆ ನೀನು ಖಾಯಂ ನರಕವಾಸಿ. ಆದ್ದರಿಂದ ನಿನ್ನ ಕೆಲಸ ನಿನಗೆ ತೃಪ್ತಿ ಕೊಡುತ್ತಿಲ್ಲ, ಹಿಂಸೆ ಕೊಡುತ್ತಿದೆ ಅನ್ನಿಸಿದರೆ ರಾಜೀನಾಮೆ ಬಿಸಾಡು. ಬಾಸು ಅಂದರೂ ಅಷ್ಟೇ, ಅವನೂ ಒಂದು ಬಾಡಿಗೆ ಮನೆ ಇದ್ದಂತೆ. ಇವನಲ್ಲ, ಇವನಪ್ಪ ಅಂದುಕೊಂಡು ಎದ್ದು ಬಾ. ಇವನಿಗಿಂತ ಒಳ್ಳೆಯ ಮನೆ, ಅರ್ಥಾತ್ ಬಾಸು ಸಿಗುತ್ತಾನೆ.

ಫೈನಲಿ, ಈ ರೀತಿ ನೀನು ತೆಗೆದುಕೊಳ್ಳುವ ರಿಸ್ಕಿನಲ್ಲಿ ಕಳೆದುಕೊಳ್ಳುವಂತಹದೇನೂ ಇಲ್ಲ. ಯೋಚಿಸಿ ನೋಡು ಎಂದೆ. ಆತ ಸುಮ್ಮನೆ ನಕ್ಕು ತಂದೆಯ ಜತೆ ಹೊರಟು ಹೋದ. ಇದಾದ ಕೆಲವೇ ದಿನಗಳಲ್ಲಿ ನನಗೊಂದು ಆಹ್ವಾನ ಪತ್ರ ಬಂತು. ತೆಗೆದು ನೋಡಿದರೆ ನನ್ನ ಗೆಳೆಯನ ಮಗ ತನ್ನದೇ ಒಂದು ಸ್ವಂತ ಕಂಪನಿಯ ಓಪನಿಂಗ್ ಸರ್ಮನಿ ಇಟ್ಟುಕೊಂಡ ವಿವರ ಅದರಲ್ಲಿತ್ತು. ಅದನ್ನು ನೋಡಿದ್ದೇ ತಡ, ನನ್ನ ಹಳೆಯ ದಿನಗಳು ನೆನಪಾದವು. ಕಣ್ಣುಗಳು ತೇವ, ತೇವ. ಬದುಕೆಂದರೆ ಇಂತಹ ಅಲೆಗಳನ್ನು ಸೃಷ್ಟಿಸುವ ಸಾಗರ ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 11 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books