Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ನೆನಪಿನ ಹಿತ್ತಲಿನಿಂದ ನೇರವಾಗಿ ಪಶ್ಚಾತ್ತಾಪದ ಅಂಗಳಕ್ಕೆ

ಗಾಯತ್ರಿ ಬದುಕಿರಬೇಕಿತ್ತು. ತುಂಬ ಸರಳ ರೂಪಿನ ಹುಡುಗಿ. ಅವಳಿಗೆ ಚೆಂದದ hand writing ಇತ್ತು. ಸ್ವಲ್ಪ ಕ್ಲಿಷ್ಟವಾದ ಬಾಲ್ಯವಿದ್ದಿರಬೇಕು. ಏನೇನೋ ಅಹಂಕಾರವಿಲ್ಲದವಳು. ಹಗಲು ರಾತ್ರಿ ಓದುತ್ತಿದ್ದಳು. History ಅವಳ ಪ್ರೀತಿಯ ಸಬ್ಜೆಕ್ಟು. ನನ್ನ ಕ್ಲಾಸುಗಳಿಗೆ ದೇವರ ಮೇಲಿನ ಹೂವು ತಪ್ಪುವಂತಿಲ್ಲ-ಅನ್ನುವ ಹಾಗೆ ಬಂದು ಕೂಡುತ್ತಿದ್ದಳು. ಅವರದೊಂದು ಚಿಕ್ಕ ಗ್ಯಾಂಗು. ಮಾರವಾಡಿ ಹುಡುಗಿ ಲಲಿತ, ಅವಳದೇ ಜಾತಿಯ ಚೇತನಾ, ಅಯ್ಯರ್ ಅಥವಾ ಅಯ್ಯಂಗಾರಿ ಇರಬಹುದಾದ ಶ್ರೀದೇವಿ ಮತ್ತು ಈ ಹುಡುಗಿ ಗಾಯತ್ರಿ. ಎಲ್ಲೇ ಹೋದರೂ ಈ ನಾಲ್ಕು ಜನ. ಚೆನ್ನಾಗೇ ಓದುತ್ತಿದ್ದರು. ಬಿ.ಎ ಓದುವ ಹುಡುಗಿಯರಿಗಿರಬೇಕಾಗಿದ್ದ ತುಂಟತನಗಳಿದ್ದವು. ವಯಸ್ಸಿಗನುಗುಣವಾದ ತಲೆಹರಟೆಗಳಿದ್ದವು. boyfriends ಇದ್ದರೇ? ನಂಗೊತ್ತಿಲ್ಲ.

ಅವರ ಪೈಕಿ ಗಾಯತ್ರಿ ಬಿ.ಎ ಮುಗಿಸಿದ ಮೇಲೆ ಐಎಎಸ್ ಮಾಡುತ್ತೇನೆನ್ನುತ್ತಿದ್ದಳು. ಆದರೆ ಮಾಡಿದ್ದು ಬಿ.ಇಡಿ. ಬಳ್ಳಾರಿಯಲ್ಲೇ ಒಂದು ಶಾಲೆಯಲ್ಲಿ ಟೀಚರಳಾದಳು. ನನಗದು ಸ್ವಲ್ಪ ಅಸಹನೆಯ ವಿಷಯವಾಗಿತ್ತು.

"What to do, ಲೈಫು ನಾವೆಂದುಕೊಂಡ ಹಾಗೇ ಇರಬೇಕಲ್ಲ?'' ಅಂದಿದ್ದಳು. ‘ನಾವೆಂದುಕೊಂಡ ಹಾಗೆ ಬದುಕನ್ನು ಕಟ್ಟಿಕೊಳ್ಳಬೇಕು ಗಾಯತ್ರೀ. ಸೋತ ಸೈನಿಕರ ಥರಾ ಮಾತಾಡಬೇಡ’ ಅಂತ ಗದರಿದ್ದೆ. ಆದರೆ ಆ ಹೊತ್ತಿಗಾಗಲೇ ಗಾಯತ್ರಿ ಬದುಕಿನಲ್ಲಿ ಪೂರ್ತಿ ಸೋತಿದ್ದಳು. ಅವಳ ಕಣ್ಣುಗಳಲ್ಲಿ ವಿಷಾದದ, ವಿನಾಶದ, ನಿರಾಶೆಯ ನೆರಳುಗಳಿದ್ದವು. ತಪ್ಪು ನನ್ನದೇ. ನಾನು ಇನ್ನಷ್ಟು ಶ್ರದ್ಧೆಯಿಂದ ಅವಳ ಬಗ್ಗೆ ವಿಚಾರಿಸಲಿಲ್ಲ. ಅವಳ ಕಣ್ಣುಗಳೊಳಕ್ಕೆ ಆಳವಾಗಿ ಇಣುಕಲಿಲ್ಲ.
ನನಗೊಂದು ಭಯವಿತ್ತು. ತುಂಬ ಗುಪ್ತವಾಗಿ ಗಾಯತ್ರಿ ನನ್ನನ್ನು ಪ್ರೀತಿಸುತ್ತಿದ್ದಳು. ಅವಳೊಂದಿಗೆ ಸದಾ ಇರುತ್ತಿದ್ದ ಆ ಮೂವರು ಗೆಳತಿಯರಿಗೂ ಗೊತ್ತಾಗದಷ್ಟು ಗುಪ್ತವಾಗಿ ಮನಸ್ಸಿನಲ್ಲೊಂದು ಆಸೆಯ ಹುತ್ತ ಕಟ್ಟಿಕೊಂಡಿದ್ದಳು. ಮತ್ತು ನನಗದು ಗೊತ್ತಿತ್ತು. ಯಾವ ಕಾರಣಕ್ಕೂ ಅದನ್ನು encourage ಮಾಡಕೂಡದೆಂದು ನಾನೂ ಅಷ್ಟೇ ಗುಪ್ತವಾಗಿ ನಿರ್ಧರಿಸಿದ್ದೆ. ಒಬ್ಬ ಮೇಷ್ಟ್ರಾಗಿ, ಹಿರಿಯ ಗೆಳೆಯನಾಗಿ ನನ್ನ ನಿರ್ಧಾರ ಸರಿಯಿತ್ತು; ಹಾಗಂತ ಭಾವಿಸಿಕೊಂಡಿದ್ದೆ.

ಅಂಥ ಗಾಯತ್ರಿ ಅದೊಂದು ದಿನ ನನ್ನ ಮನೆಗೆ ಬಂದು ಅಮ್ಮನೊಂದಿಗೆ ಹರಟುತ್ತಾ ಕುಳಿತಿದ್ದಳು. ಆ ದಿನಗಳೇ ಹಾಗೇ. ಮನೆಯಲ್ಲಿ ರವಿ ಸಿಗದಿದ್ದರೆ ಅಮ್ಮ ಅದ್ರೂ ಸಿಕ್ತಾರೆ. ಮಾತಾಡಿ ಬರಬಹುದು-ಅಂದುಕೊಂಡು ನನ್ನ ಮನೆಗೆ ಜನ ಬರುತ್ತಿದ್ದ ದಿನಗಳು. ಎಲ್ಲಿಗೋ ಹೋಗಿದ್ದವನು ವಾಪಾಸು ಬಂದು ನನ್ನ ಎಂಭತ್ತು ರುಪಾಯಿ ಕಿಮ್ಮತ್ತಿನ ಸೆಕೆಂಡ್ ಹ್ಯಾಂಡ್ ಅಟ್ಲಾಸ್ ಸೈಕಲ್ಲಿಗೆ stand ಜಡಿದು ಮನೆಯೊಳಕ್ಕೆ ಕಾಲಿಟ್ಟರೆ-ಗಾಯತ್ರಿ!

ಅವತ್ತು ಕೂಡ ಅದೇ ತಪ್ಪು ಮಾಡಿದೆ. ಗಾಯತ್ರಿಯ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲಿಲ್ಲ. ವಿದ್ಯಾರ್ಥಿನಿಯೊಬ್ಬಳ ಯೋಗಕ್ಷೇಮ ವಿಚಾರಿಸಿಕೊಳ್ಳುವ ಮೇಷ್ಟ್ರನ ಹಾಗೆ ಮಾತಾಡಿಸಿದ್ದೆ. ಅವಳು ಅದೇನನ್ನೋ ಹೇಳಲು ಹವಣಿಸುತ್ತಿದ್ದಳು. ನಾನು ಅದೇನೆಂದು ಕೇಳಲಿಲ್ಲ. ಅಷ್ಟು ಹೊತ್ತಿಗಾಗಾಲೇ ನನ್ನ ಕಾಲೇಜಿನ ದಕ್ಷಿಣ ಭಾರತ ಪ್ರವಾಸದ ಹಗರಣವಾಗಿ ನಾನು ಡಿಸ್ಮಿಸ್ ಆಗಿಬಿಟ್ಟಿದ್ದೆ. ಹಳೆಯ ವಿದ್ಯಾರ್ಥಿನಿಯರು ಮಾತ್ರ ಅದೇ ವಿಶ್ವಾಸ, ಪ್ರೀತಿ ಗೌರವಗಳೊಂದಿಗೆ ಮನೆಗೆ ಬರುತ್ತಿದ್ದರು. ಪಾಠ ಹೇಳಿಸಿಕೊಳ್ಳುತ್ತಿದ್ದರು. ಕಷ್ಟ ಸುಖ ಹೇಳಿಕೊಳ್ಳುತ್ತಿದ್ದರು. ಆದರೆ ನಾನೇ ಒಳಗಿಂದೊಳಗೆ ಮುದುಡಿ ಹೋಗಿದ್ದೆ. ಚಾಕಲೇಟು ಕದ್ದ ಆಪಾದನೆಯ ಮೇಲೆ ಒದೆ ತಿಂದ ಮಗು, ಯಾರೋ ಕೊಟ್ಟ ಚಾಕಲೇಟಿಗೆ ಕೈ ಒಡ್ಡುವಾಗಲೂ ಕಂಪಿಸುತ್ತದಲ್ಲ? ಹಾಗಿತ್ತು ನನ್ನ ಸ್ಥಿತಿ. ಅವತ್ತು ಗಾಯತ್ರಿಯನ್ನು ನನ್ನ ಕೋಣೆಗೆ ಕರೆದೊಯ್ದು ಆತ್ಮೀಯವಾಗಿ ಮಾತಾಡಿಸಿ what's the matter ಅಂತ ಕೇಳಿಬಿಟ್ಟಿದ್ದಿದ್ದರೆ ಗಾಯತ್ರಿ ನದಿಯಾಗಿ ಭೋರ್ಗರೆಯುತ್ತಿದ್ದಳೇನೋ? ಮನಸ್ಸಿನ ದುಗುಡ ಹೇಳಿಕೊಳ್ಳುತ್ತಿದ್ದಳೇನೋ? ಅವಳ ಎದೆ ಹಗುರಾಗಿಬಿಡುತ್ತಿತ್ತೋ ಏನೋ?

ನಾನು ಕೇಳಲಿಲ್ಲ. ಛೆ, ನಾನು ನನ್ನ ಬಗ್ಗೆಯೇ ಗಾಬರಿಗೊಂಡಿದ್ದೆ. ಅಂತರಂಗ ಬಿಚ್ಚಿ ಮಾತಿಗೆ ಕುಳಿತರೆ Sir, I think I love you ಅಂದು ಬಿಡುತ್ತಾಳೇನೋ ಎಂದು ಹೆದರಿದ್ದೆ. ಇಷ್ಟಕ್ಕೂ ಗಾಯತ್ರಿ ಹಾಗನ್ನುತ್ತಿದ್ದಳೋ? ಅಥವಾ ಅದೆಲ್ಲ ನನ್ನ ಭ್ರಮೆಯೋ? ನಾನೇ ಕಲ್ಪಿಸಿಕೊಂಡ ಭಯವೋ? ಒಟ್ಟಿನಲ್ಲಿ ನಾನು ಅಂತರಂಗಕ್ಕಿಳಿದು ಮಾತಾಡಲಿಲ್ಲ. ಗಾಯತ್ರಿಯ ಕಣ್ಣುಗಳೊಳಗಿನ ವಿಷಾದವನ್ನು ನೋಡಿಯೂ ಅದಕ್ಕೆ ಸ್ಪಂದಿಸಲಿಲ್ಲ.

“ನಿಮಗೊಂದು ಪುಸ್ತಕ ತಂದಿದೀನಿ. ನೀವು ಹೆರಾಲ್ಡ್ ರಾಬಿನ್ಸ್ ಓದಲ್ಲ ಅಂತ ನಂಗೊತ್ತು. ಆದ್ರೆ ಇದರ ಕೊನೇ ಛಾಪ್ಟರ್‌ನ ಒಂದೇ ಒಂದ್ಸಲ ನನಗೋಸ್ಕರವಾದರೂ ಓದಿ ಸರ್" ಅಂದು ನನ್ನ ಕೈಗೆ ಕೊಟ್ಟಿದ್ದಳು. ಸ್ಟೋನ್ ಫಾರ್ ಡ್ಯಾನಿ ಫಿಶರ್ ಅನ್ನೋ ಹೆಸರಿನ, ತುಂಬ ಮಾಮೂಲಿ ಕಥೆಯ, typical Herald Robinsನ ಕಾದಂಬರಿಯದು. ಎತ್ತಿಟ್ಟುಕೊಂಡೆ. ‘ಕಡೇ ಛಾಪ್ಟರ್ ನಿಮಗೆ ತುಂಬ ಇಷ್ಟವಾಗುತ್ತೆ. ನೀವು ಓದಲೇಬೇಕು ಸರ್. ಒಂದ್ಸಲ ಬರ‍್ತೀನಿ. ಅದರ ಬಗ್ಗೆ ನಿಮ್ಹತ್ರ ಮಾತಾಡಬೇಕು’ ಅಂದಳು ಗಾಯತ್ರಿ. ಒಪ್ಪಿಕೊಂಡೆ. ಅದರ ಬಗ್ಗೆ ನಾನು ಕೊಂಚ ಮಾತ್ರದ ಆಸಕ್ತಿ ತೋರಿಸಿದರೂ ಅದು ಗಾಯತ್ರಿಯ ಮೇಲೆ ಬೇರೆಯೇ ತರಹದ ಪರಿಣಾಮ ಬೀರುತ್ತದೆ ಅನ್ನಿಸಿ ಸುಮ್ಮನಾಗಿಬಿಟ್ಟೆ.

ಇಷ್ಟಕ್ಕೂ, ಒಂದು ಕಾದಂಬರಿ ತಂದಿಟ್ಟು, ಅದರ ಕೊನೇ ಛಾಪ್ಟರು ಓದು ಸಾಕು-ಅಂದರೆ ಓದುವುದು ಕಷ್ಟವಾಗುತ್ತೆ. ಕಥೆ ಏನೇನು ಗೊತ್ತಿರದೆ-ಅದರ ಕೊನೆ ಅಧ್ಯಾಯ enjoy ಮಾಡಲಾಗುವುದಿಲ್ಲ. ಹೆರಾಲ್ಡ್ ರಾಬಿನ್ಸ್‌ನ ಕಾದಂಬರಿ ನನ್ನ ಪುಸ್ತಕಗಳ ಅಟ್ಟ ಸೇರಿತು. ಗಾಯತ್ರಿ ನೆನಪಿನ ಹಿತ್ತಲಿಗೆ ಸರಿದು ಹೋದಳು. ಯಾರಾದರೂ ಐಎಎಸ್ ಬಗ್ಗೆ ಮಾತಾಡುತ್ತಿದ್ದರೆ ಥಟ್ಟನೆ ನೆನಪಾಗುತ್ತಿದ್ದಳು. ಅಷ್ಟು ಬಿಟ್ಟರೆ ಗಾಯತ್ರಿಯ ಸುದ್ದಿಯೇ ಇಲ್ಲ.

ಆದರೆ ಅದೊಂದು ದಿನ ಸುದ್ದಿ ಬಂತು.
ಗಾಯತ್ರಿ ಸತ್ತು ಹೋಗಿದ್ದಳು. ತನ್ನ ಮನೆಯ ಆವರಣದಲ್ಲೇ ಇದ್ದ ಬಾವಿಯೊಂದರ ರಾಟೆಗೆ ಹಗ್ಗ ಬಿಗಿದು, ನೇಣಿಗೆ ಕುಣಿಕೆ ಹಾಕಿಕೊಂಡು, ಬಾವಿಯೊಳಕ್ಕೆ ಕುಸಿದುಬಿಟ್ಟಿದ್ದಳು. ಅವಳೊಂದಿಗೆ ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಗೆಳತಿ ಸುಮನ್, ಮನೆಗೆ ಬಂದು ಗಾಯತ್ರಿಯ ಸಾವನ್ನು ಅನೌನ್ಸ್ ಮಾಡಿದಾಗ ಏನೇನೂ react ಮಾಡದೆ ತೆಪ್ಪಗೆ ನನ್ನ ಕೋಣೆಯೊಳಕ್ಕೆ ಹೋಗಿಬಿಟ್ಟೆ. ಸುಮನ್‌ಳ ಎದುರಿಗೆ ಕಣ್ಣೀರು ಕೆಡವುವ ಧೈರ್ಯ ಕೂಡ ನನಗಿರಲಿಲ್ಲ. ತುಂಬ ಹೊತ್ತು ಬಾಗಿಲು ಹಾಕಿಕೊಂಡು ಕುಳಿತು ಅತ್ತೆ. ಹೆರಾಲ್ಡ್ ರಾಬಿನ್ಸ್ ಪುಸ್ತಕದ ಮೇಲೆ ಕಂಪಿಸುವ ಕೈಗಳನ್ನೂರಿದೆ. ಪಾಠ ಹೇಳಿ ಕೊಟ್ಟ ಹುಡುಗಿ ಸತ್ತರೆ, ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇ ಸತ್ತಷ್ಟು ಸಂಕಟವಾಗುತ್ತದೆ.

ನನಗೆ ಗಾಯತ್ರಿಯ ಮುಖ ಕೂಡ ನೋಡಲು ಸಿಗಲಿಲ್ಲ. ಅವಳ ಶವ ಸಂಸ್ಕಾರವಾಗಿ ಹೋಗಿತ್ತು. ರಾತ್ರಿ ಕುಳಿತು Stone for Danny Fisher ನ ಪುಟಗಳನ್ನು ತೆರೆದೆ. ಏನು ಹೇಳಲು ಬಂದಿದ್ದಳು ಗಾಯತ್ರಿ? ಪ್ರೇಮ, ಕ್ರೈಮು, ಸಸ್ಪೆನ್ಸು, ಸುಟ್ಟು-ಸುಡಗಾಡು ಬರೆಯುವ ರಾಬಿನ್ಸ್‌ನ ಯಾವ ಭಾವ ಅವಳನ್ನು ತಾಕಿತ್ತು? ಅದ್ಯಾವುದನ್ನು ನನ್ನಿಂದ ಓದಿಸಬೇಕೆಂದಿದ್ದಳು.ಅದೇನನ್ನು ಚರ್ಚೆ ಮಾಡಲು ಬಂದಿದ್ದಳು? ರಾತ್ರಿ ಕುಳಿತು ಇನ್ನಿಲ್ಲದ ಧಾವಂತದಿಂದ ರಾಬಿನ್ಸ್‌ನ ಕಾದಂಬರಿಯ ಕೊನೆಯ ಪುಟಗಳನ್ನು ಓದುತ್ತಿದ್ದರೆ,
ನಿಮಗೆ ಹೇಳ್ತೀನಿ;

ಅವು ನನ್ನ ಅತ್ಯಂತ ಹೇಯ, ಕೀಳರಿಮೆಯ, ಪಶ್ಚಾತ್ತಾಪದ, guiltನ ಕ್ಷಣಗಳು. ಕಣ್ಣೀರು ಸುರಿದು ಹೋಗುತ್ತಿತ್ತು. ಗಾಯತ್ರಿ ನನ್ನ ಮುಂದಿಟ್ಟ ಅಧ್ಯಾಯದಲ್ಲಿ ಪ್ರೇಮವಿರಲಿಲ್ಲ. ಸೆಕ್ಸಿರಲಿಲ್ಲ. ಸಸ್ಪೆನ್ಸು, ಥ್ರಿಲ್ಲು, ಎಕ್ಸ್‌ಟಸಿ-ಕಡೇಪಕ್ಷ ಅವಳಿಗೆ ನನ್ನೆಡೆಗಿದ್ದ (ಅಥವಾ ಹಾಗಂತ ನಾನು ಭ್ರಮಿಸಿದ್ದ) ಗುಪ್ತ ಪ್ರೇಮದ ಸಣ್ಣದೊಂದು ಇಂಡಿಕೇಶನ್ ಕೂಡ ಇರಲಿಲ್ಲ. ಅದು ತಂದೆ ಮಕ್ಕಳಿಬ್ಬರ ಸಂವಾದ. ಮಗ ಬೆಳೆದು ನಿಂತಿದ್ದಾನೆ. ಅವನ ತಂದೆ ಗೋರಿಯಲ್ಲಿದ್ದಾನೆ. ಈ ಹುಡುಗನಿಗೆ ತಂದೆಯ ಪರಿಚಯವೇ ಇಲ್ಲ. ಅವನ ಸಮಾಧಿಯ ಮುಂದೆ ನಿಂತು ಆ ಗೋರಿಯ ಕಲ್ಲಿನೊಂದಿಗೆ ಮಾತಿಗಿಳಿಯುತ್ತಾನೆ. ‘ನನ್ನ ಪಾಲಿಗೆ ನಿನ್ನ ದನಿ-ಅದೊಂದು ಅಪರಿಚಿತ ಪ್ರತಿಧ್ವನಿ! ನೀನು ನನ್ನೆದುರಿಗಿರುವ ಗೋಡೆಯ ಮೇಲಿನ ಅಸ್ಪಷ್ಟ ಚಿತ್ರ. ಅಪ್ಪಾ, ನೀನು ಯಾರಪ್ಪಾ? ನೀನು ಹೇಗಿದ್ದೀಯಪ್ಪಾ? ಇವತ್ತು ನಾನಿದ್ದೇನಲ್ಲ... ಹಾಗಿದ್ದೆಯಾ? ನೀನು ನನಗೇನು ಕೊಟ್ಟೆ... ಅಂತ ಕೇಳುವುದೇ ಇಲ್ಲ. ನಾನು ನಿನ್ನ ರಕ್ತ, ಮಾಂಸ, ಮೂಳೆ, ಮಜ್ಜೆ, ನಿನ್ನ ವೀರ್ಯಗಳ ಮುಂದುವರಿಕೆ. ನಿನ್ನ ಅಸ್ತಿತ್ವದ continuation ಅಪ್ಪಾ. ನೀನು ನನಗೆ ಜನ್ಮ ಕೊಟ್ಟೆ. ಇದೆಲ್ಲಾ ಕೊಟ್ಟೂ ನನಗೆ ಅಪರಿಚಿತವಾಗಿ ಉಳಿದು ಹೋದೆ. ನಾನು ನಿನಗೆ ಋಣಿ My dear father.

ಗಾಯತ್ರಿ ತಂದು ಕೊಟ್ಟ ಕಾದಂಬರಿಯ ಕೊನೆಯ ಅಧ್ಯಾಯವನ್ನು ಅವಳ ಸಾವಿನ ನಂತರ ಕೆಲವು ಸಾವಿರ ಸಲ ಓದಿದ್ದೇನೆ. ಇಡೀ ಅಧ್ಯಾಯ ನನಗೆ ಕಂಠಪಾಠವಾಗಿ ಹೋಗಿದೆ. ಆದರೆ ಎಂಥ ಪಾಪಿ ನಾನು? ಅವಳು ಬದುಕಿರುವಾಗ ಒಂದೇ ಒಂದು ಸಲ ಓದಲಿಲ್ಲ. ಓದಿದ್ದರೆ, ಅವತ್ತೇ ಹೋಗಿ ಗಾಯತ್ರಿಯನ್ನು ಕಾಣುತ್ತಿದ್ದೆ. ಕೈ ಹಿಡಿದು ಮಾತಾಡಿಸುತ್ತಿದ್ದೆ. ನನ್ನೆದುರಿಗೆ ತನ್ನ ಬದುಕಿನ ಯಾವ ಗಾಯ ತೆರೆದಿಡುತ್ತಿದ್ದಳೋ? ಅವಳಿಗೆ ತಂದೆ ಇರಲಿಲ್ಲವೇ? ಇದ್ದೂ unidentified ಆಗಿ ಉಳಿದುಬಿಟ್ಟನೆ? ಅವಳ ಬಾಲ್ಯಕ್ಕೂ ನನ್ನ ಯಾತನೆಗಳಿಗೂ ಸಂಬಂಧವಿತ್ತೆ? ಹೋಲಿಕೆಗಳಿದ್ದವೇ? ಏನು ಹೇಳಿಕೊಳ್ಳಲು ಬಂದಿದ್ದಳು? ಸ್ಟೋನ್ ಫಾರ್ ಡ್ಯಾನಿ ಫಿಶರ್ ನನಗೇಕೆ ತಂದುಕೊಟ್ಟಳು.

ಯಾರನ್ನು ಕೇಳಲಿ ಈಗ?
ಇದನ್ನ, ಈ ಭಾವವನ್ನ ಅವತ್ತು ಯಾರಿಗೂ ಹೇಳಿಕೊಳ್ಳುವಂತೆಯೂ ಇರಲಿಲ್ಲ. ಗೆಳತಿ ಸುಮನ್ ಕೇಳಿದ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ. ‘ ಮೊನ್ನೆ ಮೊನ್ನೆ ನಮ್ಮ ಮನೆಗೆ ಬಂದಿದ್ದಳಲ್ಲ... ಆ ಗಾಯತ್ರಿಯೇನೋ?’ ಅಂತ ಕೇಳಿದ ಅಮ್ಮನಿಗೆ ‘ಅಲ್ಲಲ್ಲ.... ಅವಳೇ ಬೇರೆ’ ಅಂತ ಸುಳ್ಳು ಹೇಳಿದೆ.

‘ಅದೇ ಗಾಯತ್ರಿ’ ಅಂತ ಒಪ್ಪಿಕೊಳ್ಳಲು ನನಗೇ ಕಷ್ಟವಾಗುತ್ತಿತ್ತು. ನನ್ನಲ್ಲಿ ಪ್ರೀತಿ ಹುಡುಕಲು ಬಂದ ಪಡ್ಡೆ ಹುಡುಗಿ ಅಂತ ದಾರುಣವಾಗಿ ತಪ್ಪು ತಿಳಿದುಕೊಂಡಿದ್ದೆ. ಏನು ಹುಡುಕಿದ್ದಳು ನನ್ನಲ್ಲಿ ಗಾಯತ್ರಿ? ಸಮಾಧಿ ಕಲ್ಲಿನ ಕೆಳಗೆ ಮಲಗಿರುವ ತಂದೆಯನ್ನೆ? ಉತ್ತರಗಳೇ ಸಿಕ್ಕದ ಪ್ರಶ್ನೆಗಳಿಗೊಂದು ವಿರಾಮವನ್ನೇ? ನಿನ್ನೊಂದಿಗೆ ಹೇಳಿಕೊಂಡರೆ ಸಾಕು. ಮತ್ತೇನೂ ಬೇಡ ಮಿತ್ರಾ ಎಂಬಂತಹ ನೆಮ್ಮದಿಯನ್ನೇ? ತನ್ನ ವೈಫಲ್ಯ, ನಿರಾಸೆ, ಹತಾಶೆಗಳನ್ನು deposit ಮಾಡಿಹೋಗಬಲ್ಲಂತಹ ತಾಣವನ್ನೇ? ಯಾಕೆ ಬಂದಿದ್ದಳೋ? ನಮ್ಮಲ್ಲಿ ಸಾವಿರಾರು ಜನ ಬರುತ್ತಾರೆ. ಅದೇನನ್ನೋ ಅರಸಿಕೊಂಡು ಬರುತ್ತಾರೆ. ಪ್ರತಿಸಲವೂ ನಾವು ತಪ್ಪಾಗಿಯೇ ಕಲ್ಪಿಸಿಕೊಳ್ಳುತ್ತೇವೆ. ದುಡ್ಡು, ಹೆಸರು, ರೆಕಗ್ನಿಷನ್ನು, ಪಬ್ಲಿಸಿಟಿ, ಸ್ನೇಹ, ಪ್ರೀತಿ, ಕಾಮ-ಈ ಪೈಕಿ ಯಾವುದನೋ ಹುಡುಕಿಕೊಂಡು ಬಂದಿದ್ದಾರೆಂದುಕೊಳ್ಳುತ್ತೇವೆ.. What a trajedy!

ಕೆಲವರು ಅಪ್ಪನನ್ನು ಹುಡುಕಿಕೊಂಡು ಬಂದಿರುತ್ತಾರೆ.
ನಮಗದು ಗೊತ್ತಾಗುವುದೇ ಇಲ್ಲ. ಗೊತ್ತಾಗುವಷ್ಟು ಹೊತ್ತಿಗೆ ಸಂಬಂಧಗಳ ಸ್ವರೂಪವನ್ನೇ ಕೆಡಿಸಿಬಿಟ್ಟಿರುತ್ತೇವೆ. ನೊಂದ ಮನಸ್ಸುಗಳು ಹೇಗೆ ದಿಕ್ಕೆಟ್ಟು ಅಲೆಯುತ್ತವೆ ಎಂಬುದು ಗೊತ್ತಾಗುವುದೇ ಇಲ್ಲ. ‘ಅಮ್ಮ ಬೇಕೂ....’ ಅಂತ ಅಳುವ ಮಗುವಿಗೆ ಆ ಕ್ಷಣಕ್ಕೆ ಏನು ಸಿಕ್ಕರೂ ಬೇಡ. ಬೇಕಾಗಿಲ್ಲ. ಅದಕ್ಕೆ ಅಮ್ಮನೇ ಬೇಕು. Atleast, ಅಮ್ಮನಂತಹ ಮತ್ತೊಂದು ಜೀವಿ ಬೇಕು. ಹೊಸ್ತಿಲಿಗೆ ಎಡವಿಕೊಳ್ಳುವುದನ್ನೂ ಗಮನಿಸದೆ ಎದ್ದು ಬಿದ್ದು, ತುಟಿಯೊಡೆದುಕೊಂಡು, ಕೆನ್ನೆಗಳ ಮೇಲೆ ಕಣ್ಣೀರು ಹೆಪ್ಪುಗಟ್ಟಿ ಹಕಳೆಯೆದ್ದು ಹೋದಂತಾಗಿ, ಭೋರಿಡುತ್ತಾ ಓಡಿ ಬರುವ ಮಗು-ಅದಕ್ಕೆ ಮೂವತ್ತೇಳು ವರ್ಷಗಳೇ ಆಗಿದ್ದರೂ, ಅದನ್ನು ಆದರಿಸಿ, ಹತ್ತಿರಕ್ಕೆ ಕರೆದು ‘ಯಾಕೆ ನರಳ್ತೀಯೋ ಪುಟ್ಟಾ’ ಎನ್ನುವಂತಹ, ಮೈದಡವುವಂತಹ ಅಮ್ಮ ಬೇಕಿರುತ್ತಾಳೆ. ಅಂಥ ಅಮ್ಮನಿಗೆ ಇಪ್ಪತ್ತೇ ವರ್ಷಗಳಾಗಿರಬಹುದು.
ಅವಳಲ್ಲೊಬ್ಬ ತಾಯಿ ಅವಿರ್ಭವಿಸಿರಬೇಕಷ್ಟೆ!

ಅವತ್ತು ಗಾಯತ್ರಿ ನನ್ನಲ್ಲಿಗೆ ಬಂದಾಗ ಅಂಥದೊಬ್ಬ ತಂದೆ ನನ್ನಲ್ಲಿರಲಿಲ್ಲ. ಇವತ್ತು ರಿಗ್ರೆಟ್ ಆದರೆ ಏನು ಬಂತು?
ನಿನ್ನೆ ರಾತ್ರಿ ತುಂಬ ಹಳೆಯ ಟ್ರಂಕು ಬಿಚ್ಚಿಕೊಂಡು ಅದರೊಳಗಿನ ಪುಸ್ತಕ, ಫೊಟೋ ಇತ್ಯಾದಿಗಳನ್ನು ತಿರುವುತ್ತಾ ಕುಳಿತಿದ್ದೆನ್ನಲ್ಲ? ಆಗ ಕಣ್ಣಿಗೆ ಬಿತ್ತು ಸ್ಟೋನ್ ಫಾರ್ ಡ್ಯಾನಿ ಫಿಶರ್ ಕಾದಂಬರಿ. ಗಾಯತ್ರಿ ನೆನಪಿನ ಹಿತ್ತಲಿನಿಂದ ನೇರವಾಗಿ ಪಶ್ಚಾತ್ತಾಪದ ಅಂಗಳಕ್ಕೆ ಬಂದು ಹೊಸ ಗಾಯದಂತೆ ಧಗಧಗನೆ ಉರಿಯತೊಡಗಿದಳು.

ಇನ್ನೊಂದು ಸಲ ಆ ಕೊನೆಯ ಅಧ್ಯಾಯವನ್ನು ಓದಿಕೊಂಡೆ. ಇದೆಲ್ಲ ನೆನಪಾಯಿತು.
ಅದೇ ಟ್ರಂಕಿನಲ್ಲಿ ಇನ್ನೂ ಮೂರು ವಸ್ತುಗಳೂ ಸಿಕ್ಕವು. ಮೊದಲನೆಯದು ಪಿ.ಲಂಕೇಶ್ ಎಂಬ ಕವಿ, ತನ್ನ ಜೀವಮಾನದ ಒಟ್ಟು ಬರವಣಿಗೆಗಳ ಪೈಕಿ ಬರೆದ ಅದ್ಭುತವಾದ ಬರಹವಾದ ‘ಅವ್ವ’ ಎಂಬ ಕವಿತೆ. ಅದನ್ನು ಎಷ್ಟೋ ದಿನಗಳ ಹಿಂದೆ ಬರೆದಿಟ್ಟುಕೊಂಡಿದ್ದೆ. ಮತ್ತೊಂದು ಚಂದ್ರಶೇಖರ ಪಾಟೀಲರ ಒಟ್ಟು ಬರಹಗಳ ಪೈಕಿ ಅತ್ಯಂತ ಸುಂದರವಾದ ನಾಟಕ ‘ಅಪ್ಪ’. ಈ ನಾಟಕವನ್ನು ಬಳ್ಳಾರಿಯಲ್ಲಿದ್ದಾಗ ನಾನೇ ಅಭಿನಯಿಸುತ್ತಿದ್ದೆ. ಅದರ ಮೊದಲರ್ಧ ತುಂಬ ತಮಾಷೆಯಾಗಿ, ವ್ಯಂಗ್ಯವಾಗಿ, ಕಟಕಿಯಾಗಿ ಸರಿದು ಹೋಗುತ್ತದೆ. ಎರಡನೆಯ ಅರ್ಧಕ್ಕೆ ಬರುವ ಹೊತ್ತಿಗೆ ಅದು ನಿಮ್ಮನ್ನೊಂದು ವಿಷಾದವಾಗಿ, ವೇದನೆಯಾಗಿ, ಅಂತ್ಯವಿಲ್ಲದ ಸಂಕಟವಾಗಿ ಆವರಿಸಿಕೊಳ್ಳುತ್ತದೆ. ಯಾರಾದರೂ ಓದಿರಬಹುದಾದ ಅತ್ಯುತ್ತಮ ನಾಟಕಗಳ ಪೈಕಿ ಒಂದು. ಹಳ್ಳಿಯ ಬಸವಿಯೊಬ್ಬಳ ಮಗ ತನ್ನ ತಂದೆಯನ್ನು ಹುಡುಕುವ, ಗುರುತಿಸುವ, ನಡುಬೀದಿಯಲ್ಲಿ ನಿಂತು ಊರ ಮಂದಿಯನ್ನೆಲ್ಲಾ, ‘ನೀನೇನಾ ನನ್ನಪ್ಪ?’ ಎಂದು ಬೊಗಸೆಯೊಡ್ಡಿ ಯಾಚಿಸಿ ಕಂಗಾಲಾಗುವ ಹುಡುಗನ ಅತಿ ಶ್ರೇಷ್ಠ human picture.ಪಾಟೀಲರು ತಮ್ಮ ಉಗುರುಗಳನ್ನು ಎದೆಯ ನೆತ್ತರಿನಲ್ಲಿ ಅದ್ದಿ ಬರೆಯಲು ಕುಳಿತಿದ್ದಿರಬೇಕು. ಮತ್ತೆ ಆ ನಾಟಕವನ್ನೊಮ್ಮೆ ಪೂರ್ತಿಯಾಗಿ ಓದಿದೆ.

ಅದೇ ಚಂಪಾ ತಮ್ಮ ‘ಸಂಕ್ರಮಣ’ದಲ್ಲಿ ನನ್ನ ಬಗ್ಗೆ ಬರೆದಿದ್ದು ನೆನಪಾಯಿತು. ಅವರಿಗೆ ನನ್ನ ಬಗ್ಗೆ ಯಾವುದೇ ಆಕ್ರಮಣಗಳನ್ನು ಮಾಡಲು ಸಾಧ್ಯವಾಗಿಲ್ಲ. ನನ್ನ ಪಾಲಿಗೂ unfamiliar ಆಗಿ ಉಳಿದುಹೋಗಿರುವ ನನ್ನ ತಂದೆಯ ಬಗ್ಗೆ ಬರೆದಿದ್ದರು. ಹಾಗೆ ಬರೆಯುವುದೇ ಕನ್ನಡ ಸಾಹಿತ್ಯದಲ್ಲೊಂದು ದಾಖಲೆಯಾಗುವಂತಹ ಬರವಣಿಗೆ ಎಂದು ಹೇಳಿಕೊಂಡಿದ್ದರು. ಚಂಪಾ ನನಗಿಂತ ದೊಡ್ಡವರು. ನನ್ನನ್ನು ನೋಯಿಸುವುದು ತಪ್ಪಲ್ಲ. ಆದರೆ ಬದುಕಿಯೂ ಇಲ್ಲದ ನನ್ನ ತಾಯಿಯ ಬಗ್ಗೆ! ಅವರಿಗೆ ಅಷ್ಟೊಂದು ದ್ವೇಷವಿರಬಾರದಿತ್ತು.

ಬಿಡಿ. ಇದು ಮದ್ದಿಲ್ಲದ ವಿಷ. ನಾನು ನುಂಗಲೇಬೇಕು. ನುಂಗಿದ್ದೇನೆ. ಟ್ರಂಕು ಮುಚ್ಚಿಡುವ ಮುನ್ನ ಹಳೆಯ ಫೊಟೋಗಳನ್ನೆಲ್ಲ ಮತ್ತೊಮ್ಮೆ ಕದಲಿಸಿದೆ. ಹೊಸ ವರ್ಷದ ಮೊದಲ ಸಂಭ್ರಮ ನನ್ನ ಬೆರಳಿಗೆ ತಾಕಿತ್ತು. ಅದು ಕಳೆದೇ ಹೋಯಿತೆಂದುಕೊಂಡಿದ್ದೆ. ಅದರ ಮತ್ತೊಂದು ಕಾಪಿ ನನ್ನಲ್ಲಿರಲಿಲ್ಲ. ಕಲಾವಿದರ‍್ಯಾರಿಗೋ ಅದನ್ನು ಎನ್‌ಲಾರ್ಜ್ ಮಾಡಿಕೊಡಲು ಕೊಟ್ಟಿದ್ದೆ. ಕಳೆದೇ ಹೋಯಿತೆಂದುಕೊಂಡಿದ್ದೆ. ಇದ್ದಕ್ಕಿದ್ದಂತೆ ಸಿಕ್ಕು ಬಿಡ್ತು.

ನನ್ನನ್ನೆತ್ತಿಕೊಂಡಿರುವ ಅಮ್ಮನ ಫೊಟೋ!
‘ಅಜ್ಜಿ ಎಷ್ಟು ಲಕ್ಷಣವಾಗಿದ್ರಲ್ಲಾ?’ ಎನ್ನತೊಡಗಿದ ಮಗಳ ಕೆನ್ನೆಗೆ ಮುತ್ತಿಟ್ಟು ಹೇಳಿದೆ,
“ನೀನೂ ಹಾಗೇ ಇದ್ದೀಯ... ಅಜ್ಜಿಯಷ್ಟೇ ಲಕ್ಷಣವಾಗಿ. ಆದ್ರೆ ಮರೀ... ಅಜ್ಜಿಯಷ್ಟೇ ಒಳ್ಳೆಯವಳಾಗಬೇಕು. ನಾನು ನಿನ್ನ ಹೊಟ್ಟೇಲಿ ಮಗನಾಗಿ ಹುಟ್ಟುತ್ತೇನೆ. ನೀನು ನನ್ನನ್ನು ತುಂಬ ಮುದ್ದು ಮಾಡಬೇಕು!" ಅದಾದ ಮೇಲೆ ರಾತ್ರಿಯಿಡೀ ಅಮ್ಮನದೇ ಕನಸು.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 09 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books