Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಶಾಸಕರೇ ಉಂಡೆದ್ದು ಬರಬೇಡಿ, ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡಿ

ರಾಜ್ಯ ವಿಧಾನಮಂಡಲದ ಅಧಿವೇಶನ ಎಂದಿನಂತೆ ನೀರಸವಾಗಿ ನಡೆಯುತ್ತಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನವನ್ನು ಸುಮ್ಮನೆ ಒಂದು ಬಾರಿ ಗಮನಿಸಿ ನೋಡಿ. ಅಲ್ಲಿ ಈ ರಾಜ್ಯದ ಜನ ಎದುರಿಸುತ್ತಿರುವ ಸಮಸ್ಯೆಗಳಿಗಿಂತ ಮುಖ್ಯವಾಗಿ ಹಾಹಾಕಾರ ನಡೆಯುತ್ತಿದೆ. ಜಾಗತೀಕರಣದ ಪ್ರಭಾವ ಇಡೀ ದೇಶದ ಮೇಲೆ ಆಗಿರುವಾಗ ಅದರ ಪ್ರಭಾವದಿಂದ ಹೊರಬರಲು ಕರ್ನಾಟಕಕ್ಕೂ ಸಾಧ್ಯವಿಲ್ಲ. ಆದರೆ ನಮ್ಮ ಶಾಸಕಾಂಗ ಪ್ರಬಲವಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದರೆ ಜನಜೀವನ ಒಂದಷ್ಟು ಸರಾಗವಾಗುವಂತೆ ಮಾಡಬಹುದು.

ಇವತ್ತು ಕಬ್ಬು ಬೆಳೆಗಾರರ ಸಮಸ್ಯೆ ಇರಬಹುದು, ಭತ್ತ, ದಾಳಿಂಬೆ, ತೆಂಗು, ಹತ್ತಿ, ಅಡಿಕೆ ಸೇರಿದಂತೆ ಹಲವು ಬಗೆಯ ಬೆಳೆಗಳನ್ನು ಬೆಳೆದು ಕಂಗಾಲಾಗಿರುವ ರೈತರ ಸಮಸ್ಯೆ ಇರಬಹುದು. ಒಟ್ಟಿನಲ್ಲಿ ಯಾವ ನಿಟ್ಟಿನಿಂದ ನೋಡಿದರೂ ಸಮಸ್ಯೆಗಳ ಆಗರವೇ ಎದ್ದು ಕಾಣುತ್ತದೆ. ಆದರೆ ಇವತ್ತು ವಿಧಾನಮಂಡಲ ಅಧಿವೇಶನದಲ್ಲಿ ಜನ ಎದುರಿಸುತ್ತಿರುವ ಸಮಸ್ಯೆಗಳಿಗಿಂತ ಹೆಚ್ಚಾಗಿ ಚರ್ಚಿತವಾಗುತ್ತಿರುವುದು ರಾಜಕೀಯ ಜಗ್ಗಾಟ. ಉದಾಹರಣೆಗೆ ಶಾದಿ ಭಾಗ್ಯ ಯೋಜನೆಯನ್ನೇ ತೆಗೆದುಕೊಳ್ಳಿ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಮದುವೆಯಾಗಲು ಐವತ್ತು ಸಾವಿರ ರುಪಾಯಿಗಳ ನೆರವು ನೀಡುವುದು ಈ ಯೋಜನೆಯ ಒಟ್ಟಾರೆ ರೂಪ. ಹಾಗಿದ್ದರೆ ಬೇರೆ ಸಮುದಾಯಗಳಲ್ಲಿ ಬಡ ಹೆಣ್ಣು ಮಕ್ಕಳಿಲ್ಲವೇ? ಅವರ ಮದುವೆಗೆ ನೆರವು ನೀಡಲು ಏನು ಕಷ್ಟ ಅಂತ ಪ್ರತಿಪಕ್ಷಗಳು ಪ್ರಶ್ನೆ ಮಾಡಿದವು.

ಈ ಪ್ರಶ್ನೆ ಸಹಜವಾಗಿಯೇ ಎಲ್ಲ ಬಡವರ್ಗಗಳನ್ನು ಕೆರಳಿಸುವುದು ಸಹಜ. ಆದರೆ ವಾಸ್ತವವಾಗಿ ಅಲ್ಪಸಂಖ್ಯಾತರಿಗಾದರೂ ಈ ಯೋಜನೆಯಿಂದ ಪರಿಪೂರ್ಣ ಲಾಭ ಸಿಗುತ್ತದೆಯೇ ಅಂತ ನೋಡಿದರೆ ನೋ ಚಾನ್ಸ್. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಇಡೀ ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಒಂದು ಸಾವಿರ ಹೆಣ್ಣು ಮಕ್ಕಳ ಮದುವೆಗೆ ಸರ್ಕಾರ ನೆರವು ನೀಡುತ್ತದೆ. ಇಡೀ ರಾಜ್ಯದ ಕತೆ ಹಾಗಿರಲಿ, ಬರೀ ಬೆಂಗಳೂರು ಒಂದರಲ್ಲೇ ವರ್ಷಕ್ಕೆ ಸಾವಿರಕ್ಕೂ ಹೆಚ್ಚು ಮದುವೆಗಳು ನಡೆಯುತ್ತವೆ. ಹೀಗಿರುವಾಗ ಅಲ್ಪಸಂಖ್ಯಾತ ಸಮುದಾಯದ ಎಲ್ಲ ಬಡಕುಟುಂಬಗಳಿಗೆ ಲಾಭ ಸಿಗುವುದು ಹೇಗೆ? ಇಂತಹ ಸ್ಥಿತಿಯಲ್ಲಿ ಸಾವಿರ ಜನ ಫಲಾನುಭವಿಗಳನ್ನು ಹುಡುಕಲು ಮಾನದಂಡ ಏನು?

ಸದ್ಯದ ಲೆಕ್ಕಾಚಾರದ ಪ್ರಕಾರ, ಈ ಯೋಜನೆ ಜಾರಿಗೆ ಬಂದರೆ ಪ್ರತಿ ಜಿಲ್ಲೆಯಲ್ಲಿ ಮೂವತ್ತೋ, ಮೂವತ್ತೈದೋ ಹೆಣ್ಣು ಮಕ್ಕಳ ಮದುವೆಗೆ ನೆರವು ಸಿಗಬಹುದು. ಆದರೆ ವಾಸ್ತವದಲ್ಲಿ ಇದರ ಹದಿನೈದಿಪ್ಪತ್ತು ಪಟ್ಟು ಹೆಚ್ಚು ಮಂದಿ ಶಾದಿ ಭಾಗ್ಯ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿರುತ್ತಾರೆ. ಇವರಿಗೆ ಆ ಯೋಜನೆಯ ಫಲ ಸಿಗಲು ಸಾಧ್ಯವಿಲ್ಲ. ಆದರೆ ನಿಜವಾದ ಸಮಸ್ಯೆ ಶುರುವಾಗುವುದು ಇಲ್ಲಿಂದಲೇ. ಯಾಕೆಂದರೆ ಬಹುಸಂಖ್ಯಾತರ ಕಣ್ಣಿಗೆ ಈ ಸರ್ಕಾರ ಅಲ್ಪಸಂಖ್ಯಾತರ ಮತಕ್ಕಾಗಿ ಇಂತಹ ಕೆಲಸ ಮಾಡುತ್ತಿದೆ ಎಂಬ ಅಸಮಾಧಾನ ಮೂಡುತ್ತದೆ. ಇಂತಹ ಅಸಮಾಧಾನ ಆ ಸಮುದಾಯದ ಬಗೆಗಿನ ಅಸಹನೆಯಾಗಿಯೂ ವ್ಯಕ್ತವಾಗುತ್ತದೆ. ಅತ್ತ ನೋಡಿದರೆ ಅಲ್ಪಸಂಖ್ಯಾತರಿಗೂ ಲಾಭ ಸಿಗಲಿಲ್ಲ. ಇತ್ತ ಕಡೆ ಬಹುಸಂಖ್ಯಾತರ ದ್ವೇಷ ಕಟ್ಟಿಕೊಳ್ಳುವ ವಾತಾವರಣವೂ ಸೃಷ್ಟಿಯಾಯಿತು. ಇದು ಯಾರ ತಪ್ಪು? ಸರ್ಕಾರದ್ದೇ ಅಂತ ನಿಸ್ಸಂಶಯವಾಗಿ ಹೇಳಬಹುದು.

ಅಂದ ಹಾಗೆ ಕುತೂಹಲದ ವಿಷಯ ಗಮನಿಸಿ. ಇಡೀ ಯೋಜನೆಗಾಗಿ ಸರ್ಕಾರ ಮೀಸಲಿಟ್ಟಿರುವ ಹಣವೇ ಕೇವಲ ಹತ್ತು ಕೋಟಿ ರುಪಾಯಿ. ಅತ್ತ ಕಡೆ ಯೋಜನೆಗಳ ಜಾರಿ ವಿಷಯದಲ್ಲಿ ಸಾವಿರಾರು ಕೋಟಿ ರುಪಾಯಿ ಲೂಟಿ ಮಾಡುವ ಕೆಲಸ ನಡೆಯುತ್ತಿದೆ. ಅದನ್ನು ತಿನ್ನುತ್ತಿರುವವರು ಬೆರಳೆಣಿಕೆಯಷ್ಟು ಜನ. ಆದರೆ ಹತ್ತು ಕೋಟಿ ರುಪಾಯಿಗಳ ಒಂದು ಯೋಜನೆಗಾಗಿ ಸಮುದಾಯ, ಸಮುದಾಯಗಳ ಮಧ್ಯೆ ವೈಮನಸ್ಸು ಉಂಟುಮಾಡುವ ಕೆಲಸ ನಡೆಯುತ್ತದೆ. ಇದು ಮತಬ್ಯಾಂಕ್ ರಾಜಕಾರಣವಲ್ಲದೇ ಬೇರೇನೂ ಅಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿ ಉಣ್ಣುತ್ತಿರುವ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತರ ವೋಟು ಬೇಕು. ಹೀಗಾಗಿ ಅದಕ್ಕೆ ಪೂರಕವಾದಂತಹ ಯೋಜನೆಗಳನ್ನು ಪ್ರಕಟಿಸುವ ಮೂಲಕ ಆ ವರ್ಗಗಳ ಗಮನ ಸೆಳೆಯುವ ಕೆಲಸ ಮಾಡುತ್ತದೆ. ವಾಸ್ತವದಲ್ಲಿ ಆ ವರ್ಗಗಳಿಗೆ ಲಾಭವೇನೂ ಆಗುವುದಿಲ್ಲ. ಬದಲಿಗೆ ಮತ್ತಷ್ಟು ಅಭದ್ರತೆ ಕಾಡತೊಡಗುತ್ತದೆ.

ಇಂತಹ ಅಭದ್ರತೆ ಇದ್ದರೆ ತಾನೇ ಅವು ಬಿಜೆಪಿಯ ವಿರುದ್ಧ ಮತ ಹಾಕುವ ಅನಿವಾರ್ಯತೆಗೆ ಒಳಗಾಗುವುದು. ಮತ್ತು ಇಂತಹ ವಿಷಯವನ್ನು ಎತ್ತಿ ಹಿಡಿದು ಹೋರಾಡಿದರೆ ತಾನೇ ಬಿಜೆಪಿಯ ಮತಬ್ಯಾಂಕ್ ಕೂಡ ಏಕೀಕೃತಗೊಳ್ಳುವುದು. ಹೀಗಾಗಿ ಆಡಳಿತ ಮತ್ತು ಪ್ರತಿಪಕ್ಷಗಳು ವಿಧಾನಮಂಡಲ ಕಲಾಪದಲ್ಲಿ ಕುಳಿತು ಇಂತಹ ವಿಷಯಗಳನ್ನೇ ಅಗತ್ಯಕ್ಕಿಂತ ಹೆಚ್ಚಾಗಿ ಚರ್ಚಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿವೆ. ಇದೇ ರೀತಿ ಶಾಲಾ ಮಕ್ಕಳಿಗೆ ಪ್ರವಾಸ ಭಾಗ್ಯ ಯೋಜನೆಯನ್ನು ರೂಪಿಸಿದಾಗ ಸರ್ಕಾರ ಮಾಡಿದ ತಪ್ಪನ್ನೇ ಗಮನಿಸಿ. ಕೇವಲ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಈ ಯೋಜನೆಯ ಸವಲತ್ತು ನೀಡಲು ನಿರ್ಧರಿಸಿತು. ಹೋಗಲಿ, ಇದಾದರೂ ಬ್ರಹ್ಮಾಂಡದಂತಹ ಯೋಜನೆಯಾ ಅಂತ ನೋಡಿದರೆ ಇದಕ್ಕಾಗಿ ಸರ್ಕಾರ ಮೀಸಲಿಟ್ಟಿದ್ದು ಕೇವಲ ಮೂರೂವರೆ ಕೋಟಿ ರುಪಾಯಿ.

ಆದರೆ ಇದಕ್ಕಾಗಿ ಎದ್ದ ಹಾಹಾಕಾರ ಯಾವ ಮಟ್ಟದ್ದು ಎಂಬುದನ್ನು ಗಮನಿಸಿದರೆ ದಿಗಿಲಾಗುತ್ತದೆ. ಯಾಕೆಂದರೆ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಮಾತ್ರವೇ ಈ ಕರ್ನಾಟಕ ದರ್ಶನ ಯೋಜನೆಯ ಲಾಭ ಪಡೆಯಬೇಕೇ. ರಾಜ್ಯದ ಸರ್ಕಾರಿ ಶಾಲೆಗಳಿಗೆ ಹೋಗುವವರು ಯಾರು ಬಡ, ಮಧ್ಯಮ ವರ್ಗದ ಮಕ್ಕಳು ತಾನೇ. ಇಂತಹ ಮಕ್ಕಳಲ್ಲಿ ಯಾಕೆ ತಾರತಮ್ಯ ಮಾಡುತ್ತೀರಿ. ಹಾಗಂತ ಪ್ರತಿಪಕ್ಷಗಳು ಹಾಹಾಕಾರ ಎಬ್ಬಿಸಿದ್ದೇ ತಡ, ರಾಜ್ಯದ ಎಲ್ಲೆಡೆಯಿಂದ ಪ್ರತಿಕ್ರಿಯೆ ವ್ಯಕ್ತವಾಯಿತು. ಬಡವರು ಎಂದ ಮೇಲೆ ಇಂತಹ ಸಮುದಾಯಗಳ ಬಡವರು ಅಂತ ಮಾತ್ರವೇ ಸೀಮಿತಗೊಳಿಸಬಾರದು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸರಿ, ತನ್ನ ನಿರ್ಧಾರವನ್ನು ಬದಲಿಸಿದ ಸರ್ಕಾರ ಈ ಯೋಜನೆಯನ್ನು ಎಲ್ಲ ಬಡ ವರ್ಗಗಳ ಮಕ್ಕಳಿಗೆ ವಿಸ್ತರಿಸುವುದಾಗಿ ಘೋಷಿಸಿತು. ಪರಿಷ್ಕೃತ ಆದೇಶವೊಂದನ್ನು ಹೊರಡಿಸಿತು.

ಆದರೆ ಇಡೀ ಯೋಜನೆಯ ವ್ಯಂಗ್ಯ ಎಲ್ಲಿದೆ ಅಂತ ನೋಡಿ. ಒಂದು ಜಿಲ್ಲೆಯ ನಾಲ್ಕು ನೂರಾ ಐವತ್ತು ಮಕ್ಕಳನ್ನು ಮಾತ್ರವೇ ಈ ಯೋಜನೆಯಡಿ ಕರ್ನಾಟಕದ ಆಯ್ದ ಸ್ಥಳಗಳಿಗೆ ಕಳಿಸಲಾಗುತ್ತದೆ. ಅಂದ ಮೇಲೆ ಉಳಿದ ಮಕ್ಕಳು ಏನು ಮಾಡಬೇಕು? ಇದಕ್ಕೂ ಮುನ್ನ ಎರಡು ಸಮುದಾಯಗಳ ಮಕ್ಕಳ ಮೇಲೆ ಇತರ ಸಮುದಾಯಗಳ ಮಕ್ಕಳಿಗೆ ಅಸಮಾಧಾನ ಬೆಳೆಯುತ್ತದೆ ಅಂತ ಹೇಳಲಾಯಿತು. ಆದರೆ ಈಗ ಕರ್ನಾಟಕ ದರ್ಶನ ಯೋಜನೆಯಡಿ ಪ್ರವಾಸ ಭಾಗ್ಯ ಪಡೆಯದ ಬಡ ಮಕ್ಕಳಲ್ಲೇ ಎರಡು ಗುಂಪುಗಳಾಗುತ್ತವೆ. ಪ್ರವಾಸ ಭಾಗ್ಯ ಪಡೆದ ಮಕ್ಕಳು, ಪ್ರವಾಸ ಭಾಗ್ಯ ಪಡೆಯದ ಮಕ್ಕಳ ಮಧ್ಯೆಯೇ ಒಂದು ಅಂತರ ಮೂಡುತ್ತದೆ. ಇದು ಮತ್ತಷ್ಟು ಅಪಾಯಕಾರಿ ಬೆಳವಣಿಗೆ. ಒಂದು ಸರ್ಕಾರ ಇಂತಹ ಯೋಜನೆಗಳನ್ನು ಜಾರಿಗೆ ತರುವ ಮುನ್ನ ಹತ್ತು ಬಾರಿ ಯೋಚಿಸಬೇಕು. ಯಾಕೆಂದರೆ ಇಡುವ ಪ್ರತಿಯೊಂದು ಹೆಜ್ಜೆಯೂ ಸಮಾಜವನ್ನು ಒಂದುಗೂಡಿಸುವ ಕೆಲಸಕ್ಕೆ ಮೂಲವಾಗಬೇಕೇ ಹೊರತು ಸಮಾಜವನ್ನು ಒಡೆಯುವ ಕೆಲಸಕ್ಕೆ ಕುಮ್ಮಕ್ಕು ನೀಡಬಾರದು.

ಇದೆಲ್ಲದರ ಪರಿಣಾಮ ಏನಾಗಿದೆಯೆಂದರೆ ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಗಿಂತ ಹೆಚ್ಚಾಗಿ ಕಚ್ಚಾಟ ನಡೆಯುತ್ತಿದೆ. ಇದರಿಂದ ರಾಜ್ಯಕ್ಕೆ ಏನು ಲಾಭ? ಹಾಗಂತ ಪ್ರಶ್ನೆ ಹಾಕಿಕೊಂಡು ನೋಡಿದರೆ ನಿಮಗೆ ನಿರಾಸೆ ಮೂಡುವುದು ಗ್ಯಾರಂಟಿ. ಅದರ ಬದಲು ರೈತರಿಂದ ಹಿಡಿದು ಮಹಿಳೆಯರ ತನಕ, ಬಡವರಿಂದ ಹಿಡಿದು ಶೋಷಿತರ ತನಕ ಎಲ್ಲರ ಸಮಸ್ಯೆಗಳ ಕಡೆ ಕಣ್ಣಿಡುವ, ಅವುಗಳನ್ನು ಪರಿಹರಿಸಲು ಸರ್ಕಾರದಿಂದ ಆಗುವ ಕೆಲಸವನ್ನು ಮಾಡಬೇಕು. ಹಾಗೆ ಮಾಡದೆ ಹೋದರೆ ಏನಾಗುತ್ತದೆ? ಇರುವ ಸಮಸ್ಯೆ ಹಾಗೇ ಉಳಿದು ಹೊಸ ಹೊಸ ಸಮಸ್ಯೆಗಳು ಬೆಳೆಯುತ್ತಲೇ ಹೋಗುತ್ತವೆ. ಯಾವ ದೃಷ್ಟಿಯಿಂದ ಗಮನಿಸಿದರೂ ಇದು ಒಳ್ಳೆಯ ಬೆಳವಣಿಗೆಯಲ್ಲ. ಹೋಗಲಿ, ಇವತ್ತು ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ ವಿಧಾನಮಂಡಲದ ಅಧಿವೇಶನ ನಡೆಯುತ್ತಿದೆ. ಈ ಸುವರ್ಣಸೌಧವನ್ನು ಮುನ್ನೂರೈವತ್ತು ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಆದರೆ ವಿಧಾನಮಂಡಲ ಅಧಿವೇಶನವನ್ನು ನಡೆಸುವ ಕಾಲ ಹೊರತುಪಡಿಸಿ ಉಳಿದಂತೆ ಆ ಕಟ್ಟಡ ಯಾವುದಕ್ಕೆ ಬಳಕೆಯಾಗುತ್ತಿದೆ? ಒಂದು ಸರ್ಕಾರಕ್ಕೆ ನಿಜವಾದ ಕಾಳಜಿ ಅಂತಿದ್ದರೆ ವಿಧಾನಸೌಧಕ್ಕೆ ಪರ್ಯಾಯವಾಗಿ ಆ ಸುವರ್ಣಸೌಧದ ಬಳಕೆಯಾಗಬೇಕು. ಯಾವ ಕೆಲಸಕ್ಕಾಗಿ ಜನ ದೂರದ ಜಿಲ್ಲೆಗಳಿಂದ ರಾಜಧಾನಿಗೆ ಬರುತ್ತಾರೋ ಅವರ ಕೆಲಸ ಅದೇ ಭಾಗದಲ್ಲಿರುವ ಸುವರ್ಣಸೌಧಕ್ಕೆ ಹೋದರೆ ಆಗಬೇಕು. ಇವತ್ತು ಮುಂಬೈ-ಕರ್ನಾಟಕ ಮತ್ತು ಹೈದ್ರಾಬಾದ್-ಕರ್ನಾಟಕ ಭಾಗದ ಜನ ತಮ್ಮ ಕೆಲಸಗಳಿಗಾಗಿ ಬೆಂಗಳೂರಿಗೆ ಅಲೆದಾಡುವ ಸ್ಥಿತಿಯಿದೆ. ಈ ಸ್ಥಿತಿಯನ್ನು ತಪ್ಪಿಸಲು ಸುವರ್ಣಸೌಧವನ್ನು ಅಣಿ ಮಾಡುವ ಕೆಲಸ ನಡೆಯಬೇಕಲ್ಲವೇ? ದಿನ ಬೆಳಗಾದರೆ ಮಂತ್ರಿ ಮಹೋದಯರು ಹತ್ತಾರು ಸಭೆ, ಸಮಾರಂಭಗಳಿಗೆ ಹೋಗಿ, ಹಾರ-ತುರಾಯಿ ಹಾಕಿಸಿಕೊಂಡು ಕುಳಿತು ಬಿಟ್ಟರೆ ಸಾಕೇ? ತಿಂಗಳಿಗೆ ಕನಿಷ್ಠ ಪಕ್ಷ ಒಂದು ವಾರವಾದರೂ ಹೋಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಕೂರಲಿ.

ಅಂದ ಹಾಗೆ ಇದು ಕಂಪ್ಯೂಟರ್ ಯುಗ. ಪ್ರತಿಯೊಂದು ಇಲಾಖೆಗಳ ವ್ಯಾಪ್ತಿಗೆ ಬರುವ ಕೆಲಸವನ್ನು ಬೆಂಗಳೂರಿನಲ್ಲಿ ಕೂತರೂ ಮಾಡಬಹುದು. ಬೆಳಗಾವಿಯಲ್ಲಿ ಕೂತರೂ ಮಾಡಬಹುದು. ಹಾಗಾದಾಗ ಏನಾಗುತ್ತದೆ? ದಿನ ಬೆಳಗಾದರೆ ಸಾವಿರಾರು ಜನ ಬೆಂಗಳೂರಿಗೆ ಬರುವುದು ತಪ್ಪುತ್ತದೆ. ಇದರಿಂದ ಅವರ ಶ್ರಮ ಕಡಿಮೆಯಾಗುವುದಷ್ಟೇ ಅಲ್ಲ. ರಾಜ್ಯಕ್ಕಾಗುವ ನಷ್ಟ ಕಡಿಮೆಯಾಗುತ್ತದೆ. ನೋಡ ನೋಡುತ್ತಲೇ ಇವತ್ತು ಬೆಂಗಳೂರು ಸಾಯುವ ನಗರವಾಗಿ ಪರಿವರ್ತನೆಯಾಗಿದೆ. ಜನ ಪ್ರವಾಹೋಪಾದಿಯಲ್ಲಿ ನುಗ್ಗುತ್ತಿರುವ ಪರಿಣಾಮವಾಗಿ ಹೊಸ ಹೊಸ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆಗೆ ಗುರಿಯಾಗಿದೆ. ಒಂದು ಎಟಿಎಂ ಕೇಂದ್ರದಲ್ಲಿ, ಅದೂ ಜನನಿಬಿಡ ಪ್ರದೇಶದಲ್ಲಿರುವ ಒಂದು ಎಟಿಎಂ ಕೇಂದ್ರದಲ್ಲಿ ಹಾಡಹಗಲೇ ಒಬ್ಬ ಮಹಿಳೆಯ ಮೇಲೆ ಹಲ್ಲೆ ನಡೆಸಲು ಸಾಧ್ಯ ಎಂಬ ಬೆಳವಣಿಗೆ ಕೇವಲ ಬೆಂಗಳೂರಿಗರನ್ನು ಮಾತ್ರವಲ್ಲ, ಎಲ್ಲರನ್ನೂ ಬೆಚ್ಚಿಸಿದೆ.
ಇದೇ ಪರಿಸ್ಥಿತಿ ಮುಂದುವರಿದರೆ ಬರಲಿರುವ ದಿನಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಕಷ್ಟದ ಕೆಲಸವಾಗುತ್ತದಷ್ಟೇ ಅಲ್ಲ, ಬೆಂಗಳೂರಿನಲ್ಲಿ ವಾಸ ಮಾಡುವುದು ದುಸ್ತರ ಎಂಬಂತಹ ವಾತಾವರಣ ನಿರ್ಮಾಣವಾಗುತ್ತದೆ. ಹೀಗಾಗಿ ಒಂದು ಸರ್ಕಾರ ಎಂಬುದು ರಾಜ್ಯದ ಪ್ರತಿಯೊಂದು ಜಿಲ್ಲೆಗಳನ್ನೂ ಅಭಿವೃದ್ಧಿಯ ನೆಲೆಯಲ್ಲಿ ಮುನ್ನಡೆಸುತ್ತಾ, ಸ್ಥಳೀಯರಿಗೆ ಸಾಧ್ಯವಾದಷ್ಟೂ ಮಟ್ಟಿಗೆ ಅಲ್ಲೇ ಉದ್ಯೋಗ ದೊರೆಯುವಂತೆ ಮಾಡುತ್ತಾ, ಜನ ಬೇರೆ ಕಡೆ ವಲಸೆ ಹೋಗುವುದನ್ನು ಕಡಿಮೆ ಮಾಡಬೇಕು. ಹಾಗೆ ಮಾಡದೇ ಹೋದಾಗ ಒಂದು ರೀತಿಯ ಹತಾಶ ಭಾವನೆ ಕಾಣುತ್ತದೆ. ಈಗಾಗಲೇ ಸರ್ಕಾರದ ಯೋಜನೆಗಳು ಶ್ರಮಿಕ ವರ್ಗದ ಶಕ್ತಿಯನ್ನು ಕಸಿದುಕೊಂಡಿವೆ. ಇದೇ ಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಏನಾಗುತ್ತದೆ? ಇದನ್ನು ಸವಿಸ್ತಾರವಾಗಿ ಯೋಚಿಸಬೇಕಲ್ಲ?
ಹೀಗಾಗಿ ಇವತ್ತು ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ಆಗಬೇಕಿರುವುದು ಇಂತಹ ವಿಷಯಗಳೇ ಹೊರತು ಪರಸ್ಪರ ರಾಜಕೀಯ ಲಾಭಕ್ಕಾಗಿ ಆರೋಪ ಮಾಡಿಕೊಳ್ಳುವ ಕೆಲಸವಲ್ಲ. ಇಂತಹ ಆರೋಪವನ್ನು ನಡು ಬೀದಿಯಲ್ಲಿ ನಿಂತು ಯಾರು ಬೇಕಾದರೂ ಮಾಡಬಹುದು. ಇದಕ್ಕೆ ವಿಧಾನಮಂಡಲ ಕಲಾಪವೇ ಆಗಬೇಕೆಂದಿಲ್ಲ. ಹೀಗಾಗಿ ಬಾಕಿ ಉಳಿದಿರುವ ದಿನಗಳಲ್ಲಾದರೂ ಕಲಾಪದಲ್ಲಿ ರಾಜ್ಯ ಎದುರಿಸುತ್ತಿರುವ ನಿಜವಾದ ಸಮಸ್ಯೆಗಳ ಕುರಿತು ಚರ್ಚೆಯಾಗಲಿ, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ನಡೆಯಲಿ. ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books