Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ನರೇಂದ್ರ ಮೋದಿ ಅಲೆಗೆ ತೀವ್ರತೆ ತಂದುಕೊಡುತ್ತಿರುವರು ಯಾರು?


ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಹೋದ ನಂತರ ಕಾಂಗ್ರೆಸ್ ನಾಯಕರು ಆತಂಕಗೊಂಡಿದ್ದಾರೆ. ಮೋದಿ ತಮಿಳುನಾಡಿಗೆ ಹೋಗಲಿ, ಆಂಧ್ರ ಪ್ರದೇಶಕ್ಕೆ ಹೋಗಲಿ ಅಥವಾ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‌ಗಡ್ ಹೀಗೆ ಎಲ್ಲಿಗೇ ಹೋಗಲಿ, ಒಟ್ಟಿನಲ್ಲಿ ಅವರು ಹೋಗಿ ಬಂದ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರಿಗೆ ಅಥವಾ ಮಿತ್ರ ಪಕ್ಷಗಳ ನಾಯಕರಿಗೆ ಒಂದು ರೀತಿಯ ಧಾವಂತ ಶುರುವಾಗುತ್ತದೆ. ಹೀಗಾಗಿಯೇ ಶುರು ಶುರುವಿನಲ್ಲಿ ಮೋದಿಯನ್ನು ಟೀಕಿಸುವ ಭರದಲ್ಲಿ ಮೋದಿ ಅಲೆ ಎಲ್ಲೂ ಇಲ್ಲ. ಮೋದಿ ಮೋಡಿಯೂ ನಡೆಯುವುದಿಲ್ಲ ಎಂದು ಅವರು ಹೇಳುತ್ತಿದ್ದರು. ಆದರೆ ಕಾಲ ಕ್ರಮೇಣ ಮೋದಿ ಅಲೆ ಎಂಬುದು ಇದೆ ಅನ್ನುವುದು ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳ ನಾಯಕರಿಗೆ ಅರ್ಥವಾಗಿದೆ. ಹೀಗಾಗಿ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ತಮ್ಮ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷವಂತೂ ಇನ್ನಿಲ್ಲದಂತೆ ಹೆಣಗಾಡುತ್ತಿದೆ. ಗುಜರಾತ್‌ನಲ್ಲಿ ನಡೆದ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಶುರುವಾಗುವ ಅವರ ಹೀಯಾಳಿಕೆ ಫೈನಲಿ, ಮೋದಿ ಒಬ್ಬ ನರಹಂತಕ ಎಂಬ ತೀರ್ಮಾನ ಕೊಡುವಲ್ಲಿಗೆ ತಲುಪುತ್ತದೆ.

ಈ ರೀತಿ ಮಾಡುವ ಮೂಲಕ ಅವರು ಮೋದಿ ಅಲೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ, ಸಾಧ್ಯವಾಗುವುದೂ ಇಲ್ಲ. ಯಾಕೆಂದರೆ ಒಂದು ಸಲ ಶುರುವಾಗುವ ಅಲೆಯನ್ನು ಒಂದು ಮಟ್ಟದವರೆಗೆ ತಡೆಯಬಹುದೇ ಹೊರತು ಅದನ್ನು ಸಂಪೂರ್ಣ ತಡೆಗಟ್ಟಲು ಸಾಧ್ಯವಿಲ್ಲ. ಯಾಕೆಂದರೆ ಮೋದಿ ಅಲೆಗೆ ಒಂದು ಹಿನ್ನೆಲೆ ಇದೆ. ಈ ದೇಶದ ಕಾಂಗ್ರೆಸ್ ಪಾಲಿಗೆ ಅವರು ಜಾಗತೀಕರಣದ ಭೂತವನ್ನು ಹೊರಲು ಸಶ್ಯಕ್ತ ವ್ಯಕ್ತಿಯಂತೆ ಕಾಣುತ್ತಿದ್ದಾರೆ. ಗುಜರಾತ್‌ನಲ್ಲಿ ಅವರು ಮಾಡಿರುವ ಕೈಗಾರಿಕಾ ಕ್ರಾಂತಿಯ ಪರಿಣಾಮ ಇದು. ಫೈನಲಿ, ಕೈಗಾರಿಕಾ ಕ್ರಾಂತಿಯನ್ನು ನೆಚ್ಚಿಕೊಂಡ ದೇಶಗಳು ಇವತ್ತು ಯಾವ ದುಃಸ್ಥಿತಿಗೆ ಬಂದು ತಲುಪಿವೆ ಅನ್ನುವುದನ್ನು ನೋಡಲು ಯೂರೋಪ್ ಕಡೆ ನೋಡಬೇಕು. ಕೈಗಾರಿಕಾ ಕ್ರಾಂತಿ ಎಂಬುದು ಸರ್ವರನ್ನು ಶ್ರೀಮಂತರನ್ನಾಗಿಸುವ ಕನಸು ತೋರಿಸುತ್ತಾ, ಉದ್ಯೋಗ ಸೃಷ್ಟಿಯ ಭರವಸೆ ತೋರಿಸುತ್ತಾ ಹೋಗುತ್ತದೆ. ಸಹಜವಾಗಿಯೇ ಇದರ ಆಕರ್ಷಣೆಗೆ ಒಳಗಾಗುವುದು ಮಧ್ಯಮ ವರ್ಗದ ಜನ. ಒಂದು ವ್ಯವಸ್ಥೆಯ ಚಕ್ರವನ್ನು ತಿರುಗಿಸುವ ವಿಷಯ ಬಂದಾಗ ಮಧ್ಯಮ ವರ್ಗ ಯಾವತ್ತೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಯಾಕೆಂದರೆ ಜನಾಭಿಪ್ರಾಯ ರೂಪಿಸುವ ವಿಷಯಕ್ಕೆ ಕುಲುಮೆಯಾಗಿ ಕೆಲಸ ಮಾಡುವುದೇ ಆ ವರ್ಗ. ಇಂತಹ ಕುಲುಮೆಯ ಮೂಲಕ ಹೊರಬರುವ ಅಭಿಪ್ರಾಯಗಳು ಬಡ ಜನರ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತವೆ.

ಇವತ್ತು ಮೋದಿ ವಿಷಯದಲ್ಲಿ ಕುತೂಹಲಿಗಳಾಗಿರುವುದೇ ಮಧ್ಯಮ ವರ್ಗದ ಜನ. ಯಾಕೆಂದರೆ ಅವರಿಗೀಗ ದೇಶದಲ್ಲಿ ಆರ್ಥಿಕ ಕ್ರಾಂತಿಯಾಗಬೇಕು. ಈಗಾಗಲೇ ಆಗಿರುವ ಕ್ರಾಂತಿಯನ್ನು ಮುನ್ನಡೆಸುವ ಶಕ್ತಿ ಅಥವಾ ಮಂತ್ರದಂಡ ಮನಮೋಹನ್‌ಸಿಂಗ್ ಅವರ ಕೈಲಿದ್ದಂತೆ ಕಾಣುತ್ತಿಲ್ಲ. ಹೀಗಾಗಿ ಈ ಕ್ರಾಂತಿಯನ್ನು ದೊಡ್ಡ ಎತ್ತರಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಮೋದಿ ಅವರಿಗಿದೆ. ಅವರು ಈ ನೆಲದ ಮಕ್ಕಳಿಗೆ ಭರಪೂರ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಡುತ್ತಾರೆ ಎಂದು ಅವರು ನಂಬಿದ್ದಾರೆ. ಹೀಗಾಗಿ ಮೋದಿ ವಿಷಯದಲ್ಲಿ ಅತ್ಯಂತ ಕುತೂಹಲಿಗಳಾಗಿರುವುದು, ಅವರು ಈ ದೇಶದ ಪ್ರಧಾನಿ ಗದ್ದುಗೆಗೇರಲಿ ಎಂದು ಬಯಸುತ್ತಿರುವುದು ಮಧ್ಯಮ ವರ್ಗದ ಜನ. ಅಂದ ಹಾಗೆ ಮೋದಿ ಪರವಾದ ಅಲೆ ಹೊರಹೊಮ್ಮಲು ಹಲವು ಕಾರಣಗಳಿವೆ. ಕಾರ್ಪೊರೇಟ್ ದಿಗ್ಗಜರಿಗೆ ತಮ್ಮ ಕೈಗಾರಿಕಾ ಸಾಮ್ರಾಜ್ಯ ವಿಸ್ತರಣೆಯಾಗಲು ಮೋದಿ ಬೇಕು. ಮಧ್ಯಮ ವರ್ಗದ ಜನರಿಗೆ ತಮ್ಮ ಆಶೋತ್ತರಗಳ ಈಡೇರಿಕೆಗೆ ಮೋದಿ ಬೇಕು. ಆದರೆ ಇದು ಅಲೆ ಏಳಲು ಅಗತ್ಯವಾದ ಮೂಲ ಒತ್ತಡ.

ಆದರೆ ಮೋದಿ ಅಲೆ ಬಂದು ದಡಕ್ಕೆ ಅಪ್ಪಳಿಸುವ ಅಥವಾ ದೆಹಲಿ ಸಿಂಹಾಸನದತ್ತ ತಲುಪುವ ಮಾರ್ಗವನ್ನು ಸೃಷ್ಟಿಸಿ ಕೊಡುತ್ತಿರುವುದು ಮಾತ್ರ ಕೇಂದ್ರದ ಯುಪಿಎ ಸರ್ಕಾರ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್. ಕಳೆದ ಒಂಭತ್ತೂವರೆ ವರ್ಷಗಳ ಆಡಳಿತಾವಧಿಯಲ್ಲಿ ಯುಪಿಎ-೧ ಹಾಗೂ ಯುಪಿಎ-೨ ಸರ್ಕಾರ ನಡೆಸಿರುವ ಹಗರಣಗಳು ಸಹಜವಾಗಿಯೇ ಜನರಲ್ಲಿ ಒಂದು ನಿರಾಶೆಯನ್ನು ಮೂಡಿಸಿವೆ. ಸಾವಿರಾರು ಕೋಟಿ ರುಪಾಯಿಗಳ ಕಾಮನ್‌ವೆಲ್ತ್ ಕ್ರೀಡಾಕೂಟದ ಹಗರಣ, ಲಕ್ಷಾಂತರ ಕೋಟಿ ರುಪಾಯಿ ಮೌಲ್ಯದ ಟೂ ಜಿ ಸ್ಪೆಕ್ಟ್ರಮ್ ಹಗರಣ ಮತ್ತು ಕಲ್ಲಿದ್ದಲು ಹಂಚಿಕೆ ಹಗರಣ ಹೀಗೆ ನೋಡುತ್ತಾ ಹೋದರೆ ಯುಪಿಎ ಸರ್ಕಾರದ ಸುತ್ತ ಹಗರಣಗಳ ಬಲೆಯೇ ಕಟ್ಟಿಕೊಂಡಿದೆ. ಇದು ಒಂದು ಕಡೆಗಾದರೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ನಿಲ್ಲಿಸುವ ವಿಷಯದಲ್ಲಿ ಅದು ದೊಡ್ಡ ಮಟ್ಟದ ಪ್ರಯತ್ನವನ್ನೇ ಮಾಡಿಲ್ಲ. ಹೀಗಾಗಿ ಇವತ್ತು ಸರ್ಕಾರದ ವತಿಯಿಂದ ಬಡ, ಮಧ್ಯಮ ವರ್ಗದ ಜನರಿಗೆ ಸಿಗಬೇಕಾದ ಸವಲತ್ತುಗಳು ಒಂದರ ಹಿಂದೊಂದರಂತೆ ಕಡಿಮೆಯಾಗುತ್ತಲೇ ಇವೆ.

ಉದಾಹರಣೆಗೆ ಅಡುಗೆ ಅನಿಲದ ವಿಷಯವನ್ನೇ ತೆಗೆದುಕೊಳ್ಳಿ. ಅಡುಗೆ ಅನಿಲ ವಿತರಣೆಯ ವಿಷಯ ಬಂದಾಗ, ಅದರಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಆಧಾರ್ ಕಾರ್ಡ್‌ನ್ನು ಕಡ್ಡಾಯ ಮಾಡಲು ಹೊರಟಿದೆ. ಆ ಮೂಲಕ ಅಡುಗೆ ಅನಿಲಕ್ಕೆ ನೀಡುತ್ತಿರುವ ಸಬ್ಸಿಡಿ ಹಣವನ್ನು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುವುದಾಗಿ ಹೇಳುತ್ತಿದೆ. ಕರ್ನಾಟಕದಲ್ಲಿ ಇಂತಹ ಯೋಜನೆಯನ್ನು ಪ್ರಾಥಮಿಕವಾಗಿ ಯಾವ ಜಿಲ್ಲೆಗಳಲ್ಲಿ ಆರಂಭಿಸಲಾಯಿತೋ ಆ ಜಿಲ್ಲೆಗಳ ಬಹುತೇಕ ಗ್ರಾಹಕರ ಖಾತೆಗಳಿಗೆ ಸಬ್ಸಿಡಿ ಹಣ ತಲುಪುತ್ತಲೇ ಇಲ್ಲ. ಪರಿಣಾಮವಾಗಿ ಸರ್ಕಾರ ತಮ್ಮ ಜತೆಗಿದೆ ಎಂದು ಭಾವಿಸಲು ಪೂರಕವಾಗಿದ್ದ ವ್ಯವಸ್ಥೆ ಕ್ಷೀಣಿಸುತ್ತಾ ಬಡ, ಮಧ್ಯಮ ವರ್ಗದ ಜನರ ಮನಸ್ಸಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಮೊಳೆಯುತ್ತಿದೆ. ಹಾಗಂತ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಅವ್ಯವಹಾರವನ್ನು ತಡೆಯಬಾರದೇ? ನಿಶ್ಚಿತವಾಗಿ ತಡೆಯಬೇಕು. ಆದರೆ ಅದಕ್ಕೊಂದು ಮಾದರಿ ಇದೆ. ಈ ಮಾದರಿಗಾಗಿ ತುಂಬ ದೂರ ಹೋಗಬೇಕಾಗಿಲ್ಲ. ಕೆಲವೇ ಕಾಲದ ಹಿಂದೆ ಈ ರಾಜ್ಯದ ಇಂಧನ ಮತ್ತು ಆಹಾರ ಖಾತೆ ಮಂತ್ರಿಯಾಗಿದ್ದ ಶೋಭಾ ಕರಂದ್ಲಾಜೆ ಮತ್ತು ಆಹಾರ ಇಲಾಖೆಯ ಮುಖ್ಯಸ್ಥರಾಗಿದ್ದ ಐಎಎಸ್ ಅಧಿಕಾರಿ ಹರೀಶ್ ಗೌಡರು ಸೇರಿ ದಿ ಬೆಸ್ಟ್ ಅನ್ನುವಂತಹ ಕೆಲಸ ಮಾಡಿದ್ದರು.

ಅಡುಗೆ ಅನಿಲ ಪಡೆಯುವವರು ತಮ್ಮ ವಿದ್ಯುತ್ ಬಿಲ್‌ನ ಆರ್.ಆರ್. ನಂಬರ್ ನೀಡಬೇಕಿತ್ತು. ಒಂದು ಆರ್.ಆರ್. ಬಿಲ್‌ಗೆ ಒಂದು ಅಡುಗೆ ಅನಿಲ ನೀಡುವ ಈ ಪದ್ಧತಿ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಲಕ್ಷಾಂತರ ಭೋಗಸ್ ಸಂಪರ್ಕಗಳು ತಾವೇ ತಾವಾಗಿ ರದ್ದಾಗಿ ಹೋದವು. ಅವರು ಜಾರಿಗೊಳಿಸಿದ ಪದ್ಧತಿ ಕೂಡ ಸಿಂಪಲ್ ಆಗಿತ್ತು. ಒಂದು ಮನೆ ಎಂದ ಮೇಲೆ ಒಂದು ವಿದ್ಯುತ್ ಸಂಪರ್ಕ ಇರಬೇಕು. ಈ ವಿದ್ಯುತ್ ಬಿಲ್‌ನ ಆರ್.ಆರ್. ನಂಬರ್ ಒದಗಿಸಿದರೆ ಸಂಬಂಧಪಟ್ಟ ಕುಟುಂಬಕ್ಕೆ ಅಡುಗೆ ಅನಿಲ ನೀಡಬೇಕು ಎಂಬುದು ಈ ಲೆಕ್ಕಾಚಾರ. ಶೋಭಾ ಕರಂದ್ಲಾಜೆಯಂತಹ ರಾಜಕಾರಣಿ ಮತ್ತು ಹರೀಶ್ ಗೌಡರಂತಹ ಅಧಿಕಾರಿಗಳಿಗೆ ಹೊಳೆದ ಈ ಪದ್ಧತಿ ಕೇಂದ್ರದ ಯುಪಿಎ ಸರ್ಕಾರಕ್ಕೆ ಇವತ್ತಿಗೂ ಹೊಳೆದಿಲ್ಲ. ಹೊಳೆದಿದ್ದರೆ ಆಧಾರ್ ಕಾರ್ಡ್ ಗೊಂದಲದಲ್ಲಿ ಜನ ಸಾಮಾನ್ಯರು ತತ್ತರಿಸುವಂತೆ ಅವರು ಮಾಡುತ್ತಿರಲಿಲ್ಲ.

ಅಡುಗೆ ಅನಿಲ ಸಬ್ಸಿಡಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಈ ದೇಶದ ಸುಪ್ರೀಂಕೋರ್ಟ್ ತಪರಾಕಿ ಬಾರಿಸಿತು. ಆಗೆಲ್ಲ ತಡಬಡಾಯಿಸಿದ ಕೇಂದ್ರ ಸರ್ಕಾರ ಇಲ್ಲ, ಇಲ್ಲ ಹಾಗೇನಿಲ್ಲ. ಅಡುಗೆ ಅನಿಲಕ್ಕೆ ನೀಡುವ ಸಬ್ಸಿಡಿಗೆ ಆಧಾರ್ ಕಾರ್ಡ್ ಕಡ್ಡಾಯವೇನಲ್ಲ ಅಂತ ಹೇಳಿತು. ಆದರೆ ಸುಪ್ರೀಂಕೋರ್ಟ್ ಪಡಸಾಲೆಯಿಂದ ಕೆಳಗಿಳಿದ ಕೂಡಲೇ ಅದೇ ರಾಗ, ಅದೇ ಹಾಡು. ಈಗ ಗ್ಯಾಸ್‌ಗೆ ಸಬ್ಸಿಡಿ ಬೇಕಾ? ಆಧಾರ್ ಕಾರ್ಡ್ ಕೊಡಿ. ನವಂಬರ್ ಮೂವತ್ತರೊಳಗೆ ಆಧಾರ್ ಕಾರ್ಡ್ ಕೊಡದಿದ್ದರೆ ಡಿಸೆಂಬರ್ ಒಂದರಿಂದ ಸಬ್ಸಿಡಿ ದರದಲ್ಲಿ ನಿಮಗೆ ಅಡುಗೆ ಅನಿಲ ಸರಬರಾಜು ಮಾಡಲು ಸಾಧ್ಯವಿಲ್ಲ. ಹಾಗಂತ ಕೇಂದ್ರ ಸರ್ಕಾರ ಮೆಸೇಜು ರವಾನಿಸಿ ಬಿಟ್ಟಿದೆ. ಒಂದು ಕಡೆ ಸುಪ್ರೀಂಕೋರ್ಟ್ ಮುಂದೆ ನಿಂತು ಆಡುವ ಮಾತೇ ಬೇರೆ. ಮತ್ತೊಂದು ಕಡೆಯಿಂದ ನಡೆದುಕೊಳ್ಳುವ ರೀತಿಯೇ ಬೇರೆ. ಪರಿಣಾಮವಾಗಿ ಇವತ್ತು ಆಧಾರ್ ಕಾರ್ಡ್ ಪಡೆಯದ ಲಕ್ಷಾಂತರ ಕುಟುಂಬಗಳು ಡಿಸೆಂಬರ್ ಒಂದರಿಂದ ಸಬ್ಸಿಡಿ ಪಡೆಯಲು ಸಾಧ್ಯವಿಲ್ಲ. ಹೋಗಿ ಆಧಾರ್ ಕಾರ್ಡ್ ಪಡೆಯಬೇಕೆಂದರೆ ಅದು ಎಮ್ಮೆಲ್ಲೇ ಟಿಕೆಟ್ ಪಡೆಯುವುದಕ್ಕಿಂತ ಕಷ್ಟದ ಪ್ರೊಸೆಸ್.

ಇಂತಹ ವಾತಾವರಣವನ್ನು ಸೃಷ್ಟಿಸಿದ ಯುಪಿಎ ಸರ್ಕಾರದ ಬಗ್ಗೆ ಬಡ, ಮಧ್ಯಮ ವರ್ಗ ಸಹಜವಾಗಿಯೇ ಸಿಟ್ಟಿಗೇಳುತ್ತದೆ. ಉಳಿದಂತೆ ಆಹಾರ ಪದಾರ್ಥಗಳ ವಿಷಯ ಇರಬಹುದು, ಪೆಟ್ರೋಲ್, ಡೀಸೆಲ್ ವಿಷಯ ಇರಬಹುದು. ಯಾವುದನ್ನು ನೋಡಿದರೂ ದುಬಾರಿ, ದುಬಾರಿ. ಯಾವಾಗ ಜನಸಾಮಾನ್ಯರಿಗೆ ಬದುಕು ಸಾಗಿಸುವುದು ಕಷ್ಟವಾಗುತ್ತದೋ ಆಗ ಸಹಜವಾಗಿಯೇ ಆಡಳಿತಾರೂಢ ಪಕ್ಷದ ವಿರುದ್ಧ ಆಕ್ರೋಶ ಶುರುವಾಗುತ್ತದೆ. ಇವತ್ತು ಬಿಹಾರದಲ್ಲಿ ಉಪ್ಪು ಖರೀದಿಸುವುದೇ ಕಷ್ಟ ಎಂಬ ಸ್ಥಿತಿ. ಉಳಿದ ರಾಜ್ಯಗಳಲ್ಲಿ ಸೇಬಿಗಿಂತ ಈರುಳ್ಳಿ ಬೆಲೆ ಜಾಸ್ತಿ. ಇಂತಹ ವಾತಾವರಣ ಇದ್ದಾಗ ಏನಾಗುತ್ತದೆ? ಆಡಳಿತಾರೂಢ ಯುಪಿಎ ಸರ್ಕಾರದ ವಿರುದ್ಧದ ಆಕ್ರೋಶ ಎದುರಾಳಿಗೆ ಲಾಭದಾಯಕವಾಗುತ್ತದೆ. ಇವತ್ತು ಲಾಭ ಪಡೆಯುವ ಸ್ಥಿತಿಯಲ್ಲಿರುವುದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ. ತೃತೀಯರಂಗ ಅಡ್ಡಮಡ್ಡ ಹೇಗೋ ಮಾಡಿ ಮೇಲೆದ್ದರೆ ಕಾಂಗ್ರೆಸ್ ಬಚಾವ್. ಇಲ್ಲದೇ ಹೋದರೆ ಮುಂಬರುವ ಪಾರ್ಲಿಮೆಂಟ್ ಚುನಾವಣೆಯ ವೇಳೆಗೆ ನರೇಂದ್ರ ಮೋದಿ ಅಲೆ ದೊಡ್ಡ ಮಟ್ಟದ ಶಕ್ತಿ ಪಡೆಯುತ್ತದೆ.

ಈ ಹಿಂದೆ ದೇಶದ ಅಧಿಕಾರ ಸೂತ್ರ ಹಿಡಿದವರನ್ನೇ ನೋಡಿ. ಅವರೆಲ್ಲ ಇಂತಹ ಅಲೆಯ ಬೆಂಬಲದೊಂದಿಗೇ ಗದ್ದುಗೆಗೆ ಏರಿದವರು. ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ದೇಶವನ್ನು ಜಾಗತೀಕರಣದ ನೆಲೆಯಲ್ಲಿ ಮುನ್ನಡೆಸುವುದು ಕಷ್ಟ ಎಂಬ ಭಾವನೆ ಇದ್ದಾಗ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಅದಕ್ಕೂ ಮುನ್ನ ತೃತೀಯ ರಂಗ ಈ ದೇಶ ಆಳಲು ಸೂಕ್ತವಲ್ಲ ಎಂಬ ಭಾವನೆ ಎದ್ದಾಗ ವಾಜಪೇಯಿ ನೇತೃತ್ವದ ಎನ್‌ಡಿಎ ಬಂದು ದಿಲ್ಲಿಯ ಗದ್ದುಗೆಯನ್ನು ಆಕ್ರಮಿಸಿಕೊಂಡಿತು. ಕೇವಲ ಎರಡು ವರ್ಷಗಳಲ್ಲಿ ಇಬ್ಬರು ಪ್ರಧಾನಿಗಳನ್ನು ಕಂಡ ತೃತೀಯ ರಂಗದ ವಿಷಯದಲ್ಲಿ ಜನರಿಗೆ ಹೇವರಿಕೆ ಬಂದು ಹೋಗಿತ್ತು. ಇಂತಹ ಸಂದರ್ಭದಲ್ಲಿ ರಾಜಕೀಯ ನಾಟಕ ಮಾಡಲು ಹೋದ ಕಾಂಗ್ರೆಸ್ ತಾನೂ ಎಡವಿತು. ತೃತೀಯ ರಂಗವೂ ಎಡವಿ ಬೀಳುವಂತೆ ಮಾಡಿತು. ಆ ಮೂಲಕ ದೇಶದ ಅಧಿಕಾರದ ಗದ್ದುಗೆಯ ಮೇಲೆ ಎನ್‌ಡಿಎ ಮೈತ್ರಿಕೂಟ ಬಂದು ಕೂರಲು ದಾರಿ ಮಾಡಿಕೊಟ್ಟಿತು. ಮುಂದಿನದು ಇತಿಹಾಸ. ಕಾಲ ಚಕ್ರ ಬದಲಾಗಿದೆ. ಒಂಭತ್ತೂವರೆ ವರ್ಷಗಳ ಹಿಂದೆ ಎನ್‌ಡಿಎ ಯಾವ ಸ್ಥಿತಿಗೆ ತಲುಪಿತ್ತೋ ಅದಕ್ಕಿಂತ ಕೆಟ್ಟ ಸ್ಥಿತಿಗೆ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ ತಲುಪಿದೆ. ಇಂತಹ ಸಂದರ್ಭದಲ್ಲಿ ಸಹಜವಾಗಿಯೇ ಮೋದಿ ಅಲೆಗೆ ತೀವ್ರತೆ ದಕ್ಕಿದರೆ ಅದೇನೂ ಅಸಹಜವಲ್ಲ.

ಇವತ್ತು ಕಾರ್ಪೊರೇಟ್ ದಿಗ್ಗಜರ ಆಕಾಂಕ್ಷೆ ಒಂದು ಕಡೆ, ಮಧ್ಯಮ ವರ್ಗದ ಆಶೋತ್ತರಗಳು ಮತ್ತೊಂದು ಕಡೆ, ಈ ಎಲ್ಲದರ ನಡುವೆ ಬಡ, ಮಧ್ಯಮ ವರ್ಗದ ಹತಾಶೆ ಮಗದೊಂದು ಕಡೆ. ಹೀಗಾಗಿ ಎಲ್ಲವೂ ಸೇರಿ ಮೋದಿ ಅಲೆಗೆ ದೊಡ್ಡದೊಂದು ಶಕ್ತಿ, ವೇಗ ಮತ್ತು ತೀವ್ರತೆ ದಕ್ಕುವಂತೆ ಮಾಡಿವೆ. ಅದನ್ನು ಎದುರಿಸಲು ಹೊರಟಿರುವ ಕಾಂಗ್ರೆಸ್ ಮೋದಿ ನರಹಂತಕ, ಗೋಧ್ರಾ ಹತ್ಯಾಕಾಂಡದ ರೂವಾರಿ ಅಂತೆಲ್ಲ ದೂಷಿಸಲು ಹೊರಟರೆ ಅದು ಬಹುತೇಕ ಜನರ ಕಿವಿಗೆ ತಲುಪುವುದೇ ಇಲ್ಲ. ಹಾಗಂತ ಮೋದಿ ಈ ದೇಶದ ಪ್ರಧಾನಿ ಗದ್ದುಗೆಗೇರಿದರೆ ಭಾರತದ ಸಾರೋದ್ಧಾರ ಆಗಿ ಬಿಡುತ್ತದೆ ಅಂತೇನೂ ಅಲ್ಲ. ಯಾಕೆಂದರೆ ಮೋದಿಯ ಆದ್ಯತೆಗಳು ಈ ದೇಶದಲ್ಲಿ ಎಷ್ಟರ ಮಟ್ಟಿಗೆ ಶ್ರೀಮಂತರನ್ನು ಸೃಷ್ಟಿಸುತ್ತದೋ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಡವರನ್ನು ಸೃಷ್ಟಿಸುತ್ತದೆ. ಇದು ನಾಳೆ ದೇಶ ಮತ್ತಷ್ಟು ಹತಾಶ ಸ್ಥಿತಿಗೆ ತಲುಪವಂತೆ ಮಾಡಿದರೆ ಅದು ಅಸಹಜ ಏನಲ್ಲ. ಆದರೆ ಇವತ್ತು ಮೋದಿ ಅಲೆಯನ್ನು ಯುಪಿಎ ಮೈತ್ರಿಕೂಟದ ಹಿರಿಯಣ್ಣ ಕಾಂಗ್ರೆಸ್ ಎದುರಿಸುತ್ತಿರುವ ರೀತಿ ಕೆಟ್ಟದಾಗಿರುವುದರಿಂದ ಮೋದಿ ಅಲೆಗೆ ಮತ್ತಷ್ಟು ಬಲ ಬರುತ್ತಿದೆ. ಈ ಅಂಶವನ್ನು ಗಮನಿಸಿದರೆ, ತನ್ನ ಹೋರಾಟದ ರೀತಿಯನ್ನು ಬದಲಿಸಿಕೊಂಡರೆ ಕಾಂಗ್ರೆಸ್ ಮತ್ತೆ ಮೇಲೇಳಬಹುದೇನೋ? ಆದರೆ ಅಂತಹ ಕುರುಹುಗಳು ಮಾತ್ರ ಎಲ್ಲೂ ಕಾಣುತ್ತಿಲ್ಲ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 03 December, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books