Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ನಮ್ಮ ಮಕ್ಕಳು ನಮಗೇ ಯಾಕೆ ತಲೆನೋವು ತರುತ್ತವೆ?

ನಾವು ಕಷ್ಟಪಟ್ಟಿದ್ದು ಸಾಕು, ಆ ಕಷ್ಟ ನಮ್ಮ ಮಕ್ಕಳಿಗೆ ಬೇಡ. ಅವು ಸುಖವಾಗಿರಬೇಕು. ನಮ್ಮ ಜೀವನಕ್ಕೆ ಇದಕ್ಕಿಂತ ಬೇರೆ ಗುರಿ ಏನಿದೆ? ಹಾಗಂತ ನಾವು-ನೀವು ಆಗಾಗ ಹೇಳಿರುತ್ತೇವೆ. ಬಾಲ್ಯದಲ್ಲಿ ನಾವು ಪಟ್ಟ ಕಷ್ಟ, ಬೆಳೆಯುವ ಸಂದರ್ಭದಲ್ಲಿ ಅನುಭವಿಸಿದ ಪಡಿಪಾಟಲು ಇವನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡು ನಾವು ಈ ಮಾತು ಹೇಳಿರುತ್ತೇವೆ. ಈ ಮಾತು ಬರೀ ಮೇಲ್ತೋರಿಕೆಯದಲ್ಲ. ನಿಜಕ್ಕೂ ನಮ್ಮ ಹೃದಯದ ಆಳದಿಂದಲೇ ಬಂದಿದ್ದು. ಆದರೆ ಇಂತಹ ಮಾತುಗಳನ್ನಾಡುವ ನಾವು ಒಂದು ಸಂಗತಿಯನ್ನು ಬಹುಬೇಗ ಮನವರಿಕೆ ಮಾಡಿಕೊಳ್ಳಬೇಕು. ಇಂತಹ ಮಾತುಗಳನ್ನು ಆಡುವ ಮೂಲಕ ನಾವೇ ನಾವಾಗಿ ನಮ್ಮ ಮಕ್ಕಳ ಬದುಕಿಗೆ ಅಡ್ಡಗಾಲು ಹಾಕುತ್ತೇವೆ. ಕಷ್ಟವೋ, ನಷ್ಟವೋ ನಮ್ಮ ಶಕ್ತಿಯನ್ನು ಮೀರಿ ಆ ಮಕ್ಕಳನ್ನು ಸುಖವಾಗಿಡಲು ಪ್ರಯತ್ನಿಸುತ್ತೇವೆ. ಹೊಟ್ಟೆ, ಬಟ್ಟೆಯ ವಿಚಾರವನ್ನು ಬಿಡಿ. ಉಳಿದಂತೆ ಅವು ಮುಂದಿಡುವ ಯಾವುದೇ ಬೇಡಿಕೆಗಳಿರಲಿ, ಆ ಪೈಕಿ ಬಹುತೇಕ ಬೇಡಿಕೆಗಳನ್ನು ಈಡೇರಿಸುತ್ತೇವೆ. ಹೀಗೆ ಮಾಡುತ್ತಾ, ಮಾಡುತ್ತಾ ಆ ಮಕ್ಕಳಿಗೆ ಕಷ್ಟದ ಅರಿವಿಲ್ಲದಂತೆ ಮಾಡಿ, ಬದುಕು ಎಂದರೆ ಸುಗಮವಾಗಿ ಸಾಗುವ ರಥ ಎಂಬ ಭಾವನೆ ಮೂಡಿರುವಂತೆ ಮಾಡಿರುತ್ತೇವೆ.

ಆದರೆ ಅವು ಯೌವ್ವನಾವಸ್ಥೆಗೆ ಬರುವ ಕಾಲಕ್ಕಾಗಲೇ ನಮ್ಮಲ್ಲಿ ದಣಿವು ಮೂಡಿರುತ್ತದೆ. ಆದರೆ ಆ ಮಕ್ಕಳಲ್ಲಿ ಉತ್ಸಾಹ ಚಿಮ್ಮು ಕಾರಂಜಿಯಂತಿರುತ್ತದೆ. ಹೀಗಾಗಿ ನನಗೆ ಇಪ್ಪತ್ತೈದು ಸಾವಿರ ರುಪಾಯಿ ಮೌಲ್ಯದ ಮೊಬೈಲು ಕೊಡಿಸು, ಒಂದು ಲಕ್ಷ ರುಪಾಯಿಯ ಟೂ ವ್ಹೀಲರ್ ಕೊಡಿಸು ಎಂಬುದರಿಂದ ಹಿಡಿದು ಅನೇಕ ಬೇಡಿಕೆಗಳ ಪಟ್ಟಿಯನ್ನು ಮುಂದಿಡುತ್ತಾರೆ. ಕೆಲವು ಪೋಷಕರು ಈ ಬೇಡಿಕೆಗಳನ್ನು ಪೂರೈಸುವ ಶಕ್ತಿ ಹೊಂದಿರಬಹುದು. ಅಯ್ಯೋ, ದುಡಿಯೋದೇ ಹೌದಂತೆ. ಅವು ಕೇಳುವುದನ್ನು ಕೊಡಿಸದಿದ್ದರೆ ಇರುವುದನ್ನು ಹೆಣದ ಮೇಲೆ ಹಾಕಿಕೊಂಡು ಹೋಗಲು ಸಾಧ್ಯವೇ? ಅಂತ ಕೆಲವರು ಹೇಳಲೂಬಹುದು. ಆದರೆ ತುಂಬ ಜನರಿಗೆ ಇಂತಹ ಬೇಡಿಕೆ ಪೂರೈಸುವ ಶಕ್ತಿ ಇರುವುದಿಲ್ಲ. ಯಾವಾಗ ತಮ್ಮ ಬೇಡಿಕೆ ಪೂರೈಸಲು ತಂದೆ- ತಾಯಿಗಳಿಗೆ ಶಕ್ತಿ ಇಲ್ಲ ಎಂಬುದು ಮನವರಿಕೆಯಾಗುತ್ತದೋ ಆಗ ಮಕ್ಕಳು ಖಿನ್ನರಾಗುತ್ತಾರೆ. ಇಂತಹ ಖಿನ್ನತೆ ಅವರನ್ನು ಒಂದು ಅಸಹಾಯಕತೆಯ ದಿಕ್ಕಿಗೂ ತಳ್ಳಬಹುದು. ಅಥವಾ ಕೆಟ್ಟ ಮಾರ್ಗ ಹಿಡಿಯಲೂ ಪ್ರೇರೇಪಣೆ ನೀಡಬಹುದು.

ಹಾಗಂತ ತಂದೆ-ತಾಯಿಗಳು ಎಲ್ಲ ಬೇಡಿಕೆಗಳನ್ನು ಈಡೇರಿಸಿದರು ಅಂತಿಟ್ಟುಕೊಳ್ಳಿ. ಆ ಮಕ್ಕಳು ನೆಟ್ಟಗಿರುತ್ತವಾ ಅಂತ ನೋಡಿದರೆ ಆ ಮಕ್ಕಳು ತಮ್ಮದೇ ಅಡ್ಡ ದಾರಿಯಲ್ಲಿ ಹೋಗತೊಡಗುತ್ತವೆ. ಅಷ್ಟೇ ಅಲ್ಲ, ಈ ಎರಡೂ ಕೆಟಗರಿಯ ಮಕ್ಕಳು ಮನೆಗೆ ಸಮಸ್ಯೆಯನ್ನು ತರುವುದು ದೈನಂದಿನ ಕ್ರಿಯೆಯಾಗಿ ಹೋಗುತ್ತದೆ. ಇದಕ್ಕೆ ಮುಖ್ಯ ಕಾರಣ, ಮಕ್ಕಳಲ್ಲಿ ಬದುಕಿನ ಬಗ್ಗೆ ಸ್ಪಷ್ಟ ತಿಳುವಳಿಕೆ ಮೂಡಿಸಲು ನಮಗೆ ಸಾಧ್ಯವಾಗದಿರುವುದೇ ಹೊರತು ಬೇರೇನಲ್ಲ. ಇವತ್ತು ಯಾವುದೇ ಮನೆಗಳಿಗೆ ಹೋಗಿ. ಬಹುತೇಕ ಮನೆಗಳಲ್ಲಿ ಮಕ್ಕಳೇ ಒಂದು ಸಮಸ್ಯೆಯಾಗಿ ಕಾಡುತ್ತಿರುತ್ತಾರೆ. ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಕಾಲೇಜಿಗೆ ಹೋಗುವ ಮಕ್ಕಳ ತನಕ ನೈಂಟಿ ಪರ್ಸೆಂಟ್ ಮಕ್ಕಳು ಮನೆಯಲ್ಲಿ ಒಂದು ರೀತಿಯ ಧಾವಂತದ ವಾತಾವರಣವನ್ನು ಸೃಷ್ಟಿಸಿರುತ್ತವೆ.

ಮಮ್ಮಿ, ನಮ್ಮ ಟೀಚರಿಗೆ ನನ್ನನ್ನು ಕಂಡರೆ ಆಗುವುದಿಲ್ಲ. ಅವರು ಇವತ್ತು ನನಗೆ ಸಿಕ್ಕಾಪಟ್ಟೆ ಟೀಸ್ ಮಾಡಿದರು. ಆದರೆ ಚುಮ್ಮಿ ಇದ್ದಾಳಲ್ಲ ಅವಳ ಬಗ್ಗೆ ಸಿಕ್ಕಾಪಟ್ಟೆ ಹೊಗಳಿದರು. ಷೀ ಈಸ್ ಹೇಟ್ ಮೀ. ನನಗೂ ಅಷ್ಟೇ, ಅವರ ಮುಖ ಕಂಡರೆ ಇಷ್ಟ ಆಗುವುದಿಲ್ಲ. ನಿಜ ಹೇಳಬೇಕು ಅಂದರೆ ಶಾಲೆಗೆ ಹೋಗಲೂ ನನಗಿಷ್ಟವಿಲ್ಲ ಅನ್ನುವಂತಹ ಕಂಪ್ಲೇಂಟನ್ನು ನಿಮ್ಮ ಮಕ್ಕಳು ಒಂದಲ್ಲ, ಹತ್ತು ಸಲ ತಂದಿರುತ್ತವೆ. ಆಗ ನಿಮಗೂ ಆ ಟೀಚರ್ ಮೇಲೆ ಒಂದು ಆಕ್ರೋಶ ಮೂಡಿ ಅವುಳ್ಯಾವುಳ್ರೀ, ನನ್ನ ಮಗಳನ್ನು ಬೈಯ್ಯುವ ಅಧಿಕಾರ ಅವಳಿಗೇನ್ರೀ ಇದೆ. ಕೊಟ್ಟಿಲ್ವಾ ಕೇಳಿದಷ್ಟು ಡೊನೇಷನ್ನು, ಫೀಸು. ಅವಳಿಗೆ ಮಾಡ್ತೀನಿರಿ, ಸೀದಾ ಹೋಗಿ ಆ ಪ್ರಿನ್ಸಿ ಹತ್ತಿರವೇ ಕಂಪ್ಲೇಂಟ್ ಕೊಡ್ತೀನಿ. ಅದ್ಹೆಂಗೆ ಅವಳು ಅಲ್ಲಿ ಕೆಲಸ ಮಾಡ್ತಾಳೋ ಅಂತ ನಿಮ್ಮಲ್ಲಿ ಬಹುತೇಕ ಮಂದಿ ಸಿಟ್ಟು ಕಾರಿಕೊಳ್ಳುತ್ತೀರಿ. ಅಷ್ಟೇ ಅಲ್ಲ, ಇರುವ ಕೆಲಸವನ್ನೆಲ್ಲ ಬಿಟ್ಟು ಸೀದಾ ಶಾಲೆಗೆ ಹೋಗಿ, ಇದೇನು ಇಂಡಿಯಾ-ಪಾಕಿಸ್ತಾನದ ಮಧ್ಯದ ಸಂಘರ್ಷ ಎಂಬಂತಹ ಮನಸ್ಥಿತಿಯಲ್ಲಿ ನಿಮ್ಮ ಸಿಟ್ಟನ್ನು ತೋಡಿಕೊಂಡು ಬಂದಿರುತ್ತೀರಿ. ಆದರೆ ಅದರ ಬದಲು ಆ ಮಕ್ಕಳು ತರುವ ಕಂಪ್ಲೇಂಟನ್ನೇ ಆಳವಾಗಿ ಗಮನಿಸಿ, ಒಂದು ಕೌನ್ಸೆಲಿಂಗ್ ಮಾಡಿ.

ಬಹುತೇಕ ಸಂದರ್ಭಗಳಲ್ಲಿ ಸಣ್ಣ ಪುಟ್ಟ ವಿಷಯಗಳನ್ನೇ ಅವು ದೊಡ್ಡದು ಮಾಡಿಕೊಂಡು ಬಂದಿರುತ್ತವೆ. ಯಾಕಮ್ಮಾ ಹೋಮ್ ವರ್ಕ್ ಮಾಡಿಕೊಂಡು ಬಂದಿಲ್ಲ? ನೋಡು, ಆ ಚುಮ್ಮಿ ಎಷ್ಟು ಕ್ಲೀನಾಗಿ ಹೋಮ್ ವರ್ಕ್ ಮಾಡಿಕೊಂಡು ಬಂದಿದ್ದಾಳೆ. ನೀನೂ ಹಾಗೇ ಇರಬಾರದಾ ಅಂತ ಟೀಚರುಗಳು ಹೇಳಿರುತ್ತಾರೆ. ಆಗಿರುವ ಮಾತು ಇಷ್ಟೇ. ಆದರೆ ಅದರ ಪರಿಣಾಮ ಮಾತ್ರ ವಿಕೋಪಕ್ಕೆ ಹೋಗಿರುತ್ತದೆ. ಆದರೆ ನಾವು-ನೀವು ಶಾಲೆಗೆ ಹೋಗುವಾಗ ಇದ್ದ ಸ್ಥಿತಿಯನ್ನು ಗಮನಿಸಿ. ನಾನೇನಾದರೂ ಒಂದು ವೇಳೆ ಶಾಲೆಯಿಂದ ಇಂತಹ ಕಂಪ್ಲೇಂಟು ಹೊತ್ತು ತಂದರೆ ಮನೆಯಲ್ಲಿ ಭರ್ಜರಿ ಕಡುಬು ಸಿಗುತ್ತಿದ್ದವು. ಏನಲೇ ಹೈವಾನ್, ಏನೋ ತಪ್ಪು ಮಾಡಿದ್ದೀಯಾ? ಇಲ್ಲಾಂದ್ರೆ ನಿನಗ್ಯಾಕೋ ಆ ಮೇಷ್ಟ್ರು ಬೈಯ್ತಾರೆ? ನಿನಗೆ ಬೈಯ್ಯಲು ಅವರಿಗೇನೋ ಕೇಡುಗಾಲ? ಒಂದೋ ನೀನು ನೀಟಾಗಿ ಹೋಮ್ ವರ್ಕ್ ಮಾಡಿಲ್ಲ. ಇಲ್ಲವೇ ಏನೋ ತರಲೆ ಮಾಡಿದ್ದೀಯ. ಅದೇನು ಮಾಡಿದ್ದೀಯ ಹೇಳು ಅಂತ್ಹೇಳಿ ತಲೆ ಕೂದಲು ಹಿಡಿದು ಮಸಾಲೆ ಅರೆಯುವ ಕಲ್ಲಿನ ಥರ ತಿರುಗಾಡಿಸಿ ಬಡಿಯುತ್ತಿದ್ದರು.

ಹೀಗೆ ಅವರು ನಮ್ಮಲ್ಲೇ ಏನೋ ತಪ್ಪಿರಬೇಕು ಎಂದು ಭಾವಿಸುತ್ತಿದ್ದಾರೆ ಅನ್ನುವುದು ಅರ್ಥವಾಗುತ್ತಿದ್ದುದರಿಂದ ನಾವು ಶಾಲೆಯಿಂದ ಮನೆಗೆ ಯಾವ ಕಂಪ್ಲೇಂಟನ್ನೂ ತರುತ್ತಿರಲಿಲ್ಲ. ಇಲ್ಲೂ ಒದೆ, ಅಲ್ಲೂ ಒದೆ ಅನ್ನುವ ಸ್ಥಿತಿ ಇದೆ ಅಂದ ಮೇಲೆ ಯಾಕಪ್ಪಾ ಸಹವಾಸ ಅನ್ನುವ ಮನಸ್ಥಿತಿಗೆ ಬಂದು ಬಿಡುತ್ತಿದ್ದೆವು. ಅದೇ ರೀತಿ ನಾವು ಕೇಳಿದ್ದನ್ನೆಲ್ಲ ತಂದು ಕೊಡುವ ಶಕ್ತಿ ನಮ್ಮ ಮನೆಗಿಲ್ಲ ಎಂಬುದು ನಮಗೆ ಬಾಲ್ಯದಲ್ಲೇ ಮನದಟ್ಟಾಗಿದ್ದುದರಿಂದ ತೀರಾ ಹೈಲೀ ಅನ್ನುವಂತಹ ಯಾವುದೇ ಡಿಮ್ಯಾಂಡುಗಳನ್ನೂ ನಾವು ಮುಂದಿಡುತ್ತಿರಲಿಲ್ಲ. ಶಾಲೆಗೆ ಹೋಗಲು ಒಂದು ಖಾಕಿ ಚೀಲ, ಆ ಚೀಲದ ಒಳಭಾಗದಲ್ಲೇ ಪೆನ್ನು, ಪೆನ್ಸಿಲ್ಲು, ಬಳಪ, ರಬ್ಬರು, ಸ್ಕೇಲು ಇಟ್ಟುಕೊಳ್ಳುವ ಪಾಕೇಟು. ಅಗತ್ಯವಾಗಿರುವಷ್ಟು ಬುಕ್ಕು. ಇಷ್ಟಕ್ಕೆ ಎಲ್ಲ ಫಿನಿಷ್. ಆದರೆ ಈಗ ಮಕ್ಕಳಿಗೆ ಶಾಲೆ ಶುರುವಾಗುತ್ತದೆ ಅನ್ನುವ ಒಂದು ತಿಂಗಳ ಮುಂಚೆಯೇ ಒಂದು ಬಂಪರ್ ಶಾಪಿಂಗ್ ಮಾಡುತ್ತೇವೆ. ನಮ್ಮ ದುಡಿಮೆಯ ಲೆವೆಲ್ಲಿಗೆ ತಕ್ಕಂತೆ ಐನೂರರಿಂದ ಸಾವಿರ, ಎರಡು ಸಾವಿರ ರುಪಾಯಿ ಮೌಲ್ಯದ ಒಂದು ಬ್ಯಾಗು, ಪೆನ್ನು ಪೆನ್ಸಿಲ್ಲು, ರಬ್ಬರು ಮತ್ತಿತರ ವಸ್ತುಗಳನ್ನು ಇಟ್ಟುಕೊಳ್ಳಲು ಒಂದು ಪೌಚು. ಹೀಗೆ ನೋಡುತ್ತಾ ನೋಡುತ್ತಾ ಪ್ರೈಮರಿ ಸ್ಕೂಲಿಗೆ ಹೋಗುವ ಮಕ್ಕಳ ಮೇಲೆ ನಾಲ್ಕರಿಂದ ಐದು ಸಾವಿರ ರುಪಾಯಿ ಬಂಡವಾಳ ಹೂಡುತ್ತೇವೆ.

ಹೀಗೆ ಅವಕ್ಕೆ ಅಗತ್ಯವಾಗಿದ್ದನ್ನು ತೆಗೆದುಕೊಡುವುದು ಒಂದು ಮಾತಾಯಿತು. ಆದರೆ ಇದಾದ ನಂತರ ಮಕ್ಕಳಿಗೆ ಶಾಲೆಯಲ್ಲಿ ಕೊಡುವ ಯಾವುದಾದರೂ ಪ್ರಾಜೆಕ್ಟು ಇದ್ದರೆ ಅದಕ್ಕೆ ಅಗತ್ಯವಾದ ಕೆಲಸವನ್ನು ನಾವೇ ಕೂತು ಮಾಡಿಕೊಡುತ್ತೇವೆ. ಇನ್‌ಫ್ಯಾಕ್ಟ್ ಈಗಿನ ಶಿಕ್ಷಣ ವ್ಯವಸ್ಥೆ ಯಾವ ಮಟ್ಟಿಗೆ ಮಕ್ಕಳ ತಲೆಯನ್ನು ಭಾರ ಮಾಡುತ್ತದೆ ಎಂದರೆ ಸೆಂಟ್ರಲ್ ಸಿಲೆಬಸ್ ಓದುವ ಮಕ್ಕಳಿಗೆ ಕೊಡುವ ಪ್ರಾಜೆಕ್ಟುಗಳನ್ನು ಮುಗಿಸಬೇಕೆಂದರೆ ಆ ಮಕ್ಕಳಷ್ಟೇ ಅಲ್ಲ, ತಂದೆ-ತಾಯಿ, ಚಿಕ್ಕಪ್ಪ-ದೊಡ್ಡಪ್ಪ ಅಂತ ಮನೆಯಲ್ಲಿರುವ ಬಹುತೇಕ ಹಿರಿಯರು ಕೆಲಸ ಮಾಡಲೇಬೇಕು. ಆ ಪ್ರಾಜೆಕ್ಟುಗಳಿಗೆ ಬೇಕಾದ ಮೆಟೀರಿಯಲ್ಲುಗಳನ್ನು ಒದಗಿಸಲು ಕಂಪ್ಯೂಟರಿನಿಂದ ಹಿಡಿದು ಸ್ಟೇಷನರಿ ಅಂಗಡಿಗಳ ತನಕ ಹತ್ತಾರು ಮೂಲಗಳ ನೆರವು ಬೇಕು. ಇಂತಹ ಸ್ಥಿತಿ ಇದ್ದಾಗ ಅವು ಮನೆಗೆ ಬಂದ ಮೇಲೆ ಆಡುವುದಕ್ಕೂ ನಾವು ಟೈಮ್ ಕೊಡುವುದಿಲ್ಲ. ಏಯ್, ಅಷ್ಟೆಲ್ಲ ಓದಬೇಕು. ಕುಣಿದಾಡಿದರೆ ನಡಿಯಲ್ಲ, ಹೋಗು ಓದಿಕೋ ಅನ್ನುತ್ತೇವೆ.

ಯಾವಾಗ ಮಕ್ಕಳು ಆಡುವ ಸಂಸ್ಕೃತಿಯಿಂದ ದೂರ ಆಗುತ್ತಾ ಹೋಗುತ್ತವೋ ಆಗ ಇತರ ಮಕ್ಕಳೊಡನೆ ಬೆರೆಯುವ ಅವಕಾಶವನ್ನು ಕಳೆದುಕೊಳ್ಳುತ್ತವೆ. ಅದಕ್ಕಿಂತ ಮುಖ್ಯವಾಗಿ ದೇಹಕ್ಕೆ ಅಗತ್ಯವಾದ ವ್ಯಾಯಾಮವೇ ಇಲ್ಲದಂತಾಗುತ್ತದೆ. ನಾವು ಕಷ್ಟಪಟ್ಟಿದ್ದು ಸಾಕು, ನಮ್ಮ ಮಕ್ಕಳು ಆ ರೀತಿಯ ಕಷ್ಟಪಡುವುದು ಬೇಡ ಎಂಬ ನಮ್ಮ ಮನಸ್ಥಿತಿಯಂತೆಯೇ ಆ ಮಕ್ಕಳ ಪಾಲಿಗೆ ಒಂದು ಶಾಪವಾಗಿ ಬಿಡುತ್ತದೆ. ಅರ್ಥಾತ್, ನಾವು ನಮ್ಮ ಮಕ್ಕಳನ್ನು ಎಳವೆಯಲ್ಲಿ ನಾಲ್ಕು ಜನರ ಜತೆ ಬೆರೆಯಲು, ಆಟವಾಡಲು ಬಿಡುತ್ತಿಲ್ಲ. ಹಾಗಾದಾಗ ಏನಾಗುತ್ತವೆ ಎಂದರೆ ಅವುಗಳಿಗೆ ಜಗತ್ತಿನಲ್ಲಿ ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿ ಇರುತ್ತದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಲು ಅವಕಾಶವೇ ಸಿಗುವುದಿಲ್ಲ. ಅದಕ್ಕಾಗಿಯೇ ಶಾಲೆಯಲ್ಲಿ ಯಾರೋ ಏನೋ ಅಂದರೆ ಕಡ್ಡಿಯನ್ನು ಗುಡ್ಡ ಮಾಡಿ ನಮ್ಮೆದುರು ತಂದಿಡುತ್ತವೆ. ಆದರೆ ನಮ್ಮ ಬಾಲ್ಯದಲ್ಲಿ ಎಲ್ಲರ ಜತೆ ಬೆರೆಯಲು ಅವಕಾಶ ಇದ್ದುದರಿಂದ, ಒಬ್ಬೊಬ್ಬರ ಮೈಂಡ್‌ಸೆಟ್ಟು ಹೇಗಿರುತ್ತದೆ ಅನ್ನುವುದು ಸಹಜವಾಗಿಯೇ ಅರ್ಥವಾಗುತ್ತಿತ್ತು.

ಹೀಗಾಗಿ ಅವರಿಗೆ ತಕ್ಕ ರೀತಿಯಲ್ಲಿ ಅಡ್ಜಸ್ಟ್ ಆಗುತ್ತಾ, ನಮಗೆ ಅವರು ಅಡ್ಜಸ್ಟ್ ಆಗುವಂತೆ ನಡೆದುಕೊಳ್ಳುತ್ತಾ ಮನುಷ್ಯ ಸಂಬಂಧಗಳ ಸ್ವರೂಪವನ್ನು ನಮಗರಿವಿಲ್ಲದಂತೆಯೇ ಗೊತ್ತು ಮಾಡಿಕೊಂಡು ಬಿಡುತ್ತಿದ್ದೆವು. ಹೀಗಾಗಿ ಕಷ್ಟ ಎಂಬುದು ನಮ್ಮ ಕೆಪ್ಯಾಸಿಟಿಯ ಪರೀಕ್ಷೆಗೆ ದಕ್ಕುತ್ತಿದ್ದ ಒಂದು ಅವಕಾಶವಾಗಿ ಬಿಡುತ್ತಿತ್ತು. ಇನ್ನು ಕೇಳಿದ್ದನ್ನೆಲ್ಲ ಕೊಡುವುದು ಹಾಗಿರಲಿ, ಸ್ವಲ್ಪ ಹೆಚ್ಚು ಕಡಿಮೆಯಾದರೂ ಊಟಕ್ಕೆ ಕಷ್ಟ ಎಂಬುದು ಗೊತ್ತಿರುತ್ತಿದ್ದುದರಿಂದ ಊಟಕ್ಕೆ, ತಿಂಡಿಗೆ, ಬೈಟು ಕಾಫಿಗೆ ಹಾತೊರೆಯುತ್ತಿದ್ದೆವು. ಒಂದು ಮದುವೆಗೋ, ಫಂಕ್ಷನ್ನಿಗೋ ಊಟಕ್ಕೆ ಅಂತ ಕರೆದರೆ ನಮಗೆ ಅದೇನು ಸಂಭ್ರಮ ಅನ್ನುತ್ತೀರಿ? ಹೀಗೆ ಹೋದ ಜಾಗದಲ್ಲಿ ಹೊಟ್ಟೆ ತುಂಬ ಉಣ್ಣುವುದರ ಜತೆಗೆ ಅಲ್ಲಿ ಕೊಡುವ ಬೂಂದಿ ಉಂಡೆಯೋ, ಬಾದುಷಾ ಅನ್ನೋ ಜೇಬಿನಲ್ಲಿ ಇಟ್ಟುಕೊಂಡು ಬಂದು ತಿನ್ನುತ್ತಿದ್ದೆವು, ಎಂಜಾಯ್ ಮಾಡುತ್ತಿದ್ದೆವು. ಆದರೆ ಈಗಿನ ಮಕ್ಕಳಿಗೆ ಬೋಂದಿ ಉಂಡೆಯ ರುಚಿಯೂ ಗೊತ್ತಿಲ್ಲ. ಬಾದುಷಾದ ಸವಿಯೂ ಗೊತ್ತಿಲ್ಲ. ಯಾಕೆಂದರೆ ಈ ಸ್ವೀಟುಗಳು ಮಾತ್ರವಲ್ಲ, ನೂರಾರು ಬಗೆಯ ತಿಂಡಿಗಳು ಈಗ ವರ್ಷದ ಇಪ್ಪತ್ನಾಲ್ಕು ತಿಂಗಳು ಮನೆಯ ಅಕ್ಕಪಕ್ಕದಲ್ಲೇ ಸಿಗುತ್ತವೆ. ಇನ್ನು ತಿನ್ನು ಅಂದರೆ ಆ ಮಕ್ಕಳಾದರೂ ಏನು ತಿಂದಾವು. ಹೋಗಲಿ, ತಿಂದು ಸುಖ ಪಡಬೇಕು ಎಂದರೆ ಅವು ಆಟವಾಡಿ ದಣಿದಿರಬೇಕಲ್ಲ? ದಣಿದರೆ ತಾನೇ ಊಟದ ಸುಖ ದಕ್ಕಲು ಸಾಧ್ಯ?

ಇವತ್ತು ಮ್ಯಾಗಿ, ಪಿಜ್ಜಾದಂತಹ ಜಂಕ್ ಫುಡ್ಡುಗಳ ಪರಂಪರೆ ಶುರುವಾಗಿರುವುದಕ್ಕೆ ಇದೇ ಕಾರಣ. ಹೀಗೆ ನೋಡುತ್ತಾ ಹೋದರೆ ಮಕ್ಕಳು ಸಮಸ್ಯೆಯಾಗಿ ಬೆಳೆಯಲು ಇರುವ ಹತ್ತಾರು ಕಾರಣಗಳಿಗೆ ನಾವೇ ಮೂಲವಾಗಿರುತ್ತೇವೆ. ಅಯ್ಯೋ, ನಾವು ಪಟ್ಟ ಕಷ್ಟವೇ ಸಾಕು ನಮ್ಮ ಮಕ್ಕಳಿಗೆ ಅಂತ ಕಷ್ಟ ಬೇಡಪ್ಪಾ ಅಂತ ಹೇಳಿರುತ್ತೇವೆ. ಕಾಲ ಕಾಲಕ್ಕೆ ಅವುಗಳಿಗೆ ಆಟ-ಓಟ ಇಲ್ಲದಂತೆ ಮಾಡಿರುತ್ತೇವೆ. ಅವು ಕಂಪ್ಲೇಂಟು ತಂದಾಗ ಪೂರ್ವಾಪರ ಅರಿಯದೆ ಹೋಗಿ ಟೀಚರನ್ನೇ ಬೈದು ಬಂದಿರುತ್ತೇವೆ. ಆ ಮೂಲಕ ಮಕ್ಕಳಲ್ಲಿ ಈಗೋ ಬೆಳೆಸಿ ಸಂಭ್ರಮಪಟ್ಟಿರುತ್ತೇವೆ. ಇಷ್ಟೆಲ್ಲ ಮಾಡಿದ ಮೇಲೆ ಆ ಮಕ್ಕಳು ತಲೆನೋವು ತರದೆ ಇನ್ನೇನು ತರುತ್ತವೆ? ಹೀಗಾಗಿ ಅದನ್ನು ನಾವೇ ಅನುಭವಿಸಬೇಕಾಗುತ್ತದೆ. ಹಾಗೆ ಮಾಡುವ ಬದಲು ಬಾಲ್ಯದಿಂದಲೇ ಅವುಗಳಿಗೆ ಹಸಿವಿನ ಬೆಲೆ, ದೈಹಿಕ ಶ್ರಮ ತಂದುಕೊಡುವ ಸುಖ, ಸಮಾಜದಲ್ಲಿ ಬೆರೆತು ಬಾಳಲು ಅಗತ್ಯವಾದ ತರಬೇತಿ ನೀಡಿದರೆ ಅವು ಸಹಜವಾಗಿ ಬೆಳೆಯುತ್ತವೆ. ಎಲ್ಲ ಒತ್ತಡವನ್ನು ನಿಭಾಯಿಸಲು ಕಲಿಯುತ್ತವೆ. ಆ ಮೂಲಕ ತಾವು ಮೇಲೆದ್ದು ನಿಲ್ಲುವುದಲ್ಲದೇ ಕುಟುಂಬದ ಹಿರಿಯರಿಗೆ ಆಸರೆಯಾಗಿ ನಿಲ್ಲುವ ಶಕ್ತಿ ಪಡೆಯುತ್ತವೆ. ಮಕ್ಕಳಿಗೆ ಇಂತಹ ಶಕ್ತಿ ದೊರಕಿಸಿ ಕೊಡೋಣ. ಆ ಮೂಲಕ ನಾವೂ ನೆಮ್ಮದಿಯ ಬದುಕನ್ನು ಬಯಸೋಣ. ಅಲ್ಲವೇ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 30 November, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books