Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಸಾಯಲಿಕ್ಕೆಂದೇ ನನ್ನ ಮನೆಗೆ ಬಂದವನು...!

ಅವನು ಬದುಕಿದ್ದಿದ್ದರೆ ಅವನಿಗೆ ಐವತ್ತಾರಾಗಿರುತ್ತಿದ್ದವು ವರ್ಷ. ಅವನಿದ್ದಿದ್ದರೆ ಆ ಏಳು ಮಕ್ಕಳ ಪೈಕಿ ನಾಲ್ಕನೆಯವನಾಗಿರುತ್ತಿದ್ದ. ಬದುಕಿದ್ದಿದ್ದರೆ ರಾಮು, ನನ್ನ ಮುಪ್ಪಿನ ಕಾಲದ ಅತ್ಯುತ್ತಮ ಗೆಳೆಯನಾಗಿರುತ್ತಿದ್ದ. ಏಕೆಂದರೆ ಅವನಿಗೆ ಧೂರ್ತತನ ಗೊತ್ತಿರಲಿಲ್ಲ. ವಂಚನೆ, ಆತ್ಮವಂಚನೆ, ಸ್ವಪ್ರಶಂಸೆ, ಪರನಿಂದೆ ಯಾವುದೂ ಅವನಲ್ಲಿರಲಿಲ್ಲ. ಏಕೆಂದರೆ ರಾಮುವಿಗೆ ಮಾತು ಬರುತ್ತಿರಲಿಲ್ಲ. ನಡೆಯಲು ಆಗುತ್ತಿರಲಿಲ್ಲ. ಬುದ್ಧಿ ಬೆಳೆದಿರಲಿಲ್ಲ. ರಾಮುವಿಗೆ ಜಗತ್ತೇ ಗೊತ್ತಿರಲಿಲ್ಲ.

ನನಗವನು ಮಿತ್ರನಾಗಿದ್ದ. ಪ್ರಶ್ನೆಯಾಗಿದ್ದ. ಕಥಾವಸ್ತುವಾಗಿದ್ದ. ೧೯೮೦ರ ದಶಕದಲ್ಲಿ ನಾನು ಬರೆದ ‘ಕಾಡು ಕೂಸು’ ಕಥೆಗೆ ಅವನೇ ಕಥಾನಾಯಕ. ಬೆರಳು, ಮೊಳಕಾಲು, ಸೊಂಟ, ನಾಲಗೆ, ಬುದ್ಧಿ-ಉಹುಂ, ಯಾವುದೂ ಅವನ ಹಿಡಿತದಲ್ಲಿರಲಿಲ್ಲ. ಆದರೂ ರಾಮು ಬದುಕಿನ ಸಂಕೇತವಾಗಿದ್ದ. ಸಾವೆಂಬುದು ಹತ್ತಿರಕ್ಕೂ ಸುಳಿಯಲಾರದಷ್ಟು ಜೀವನ್ಮುಖಿಯಾಗಿದ್ದ. ದುರಂತವೆಂದರೆ, ಅಂಥ ರಾಮೂ ನನ್ನ ಮನೆಗೇ ಬಂದ. ಸಾಯಲೆಂದೇ ಬಂದ. ನಮ್ಮೆಲ್ಲರ ಕಣ್ಣೆದುರಿಗೇ ಸತ್ತುಹೋದ. ಕಳೆದ ದೀಪಾವಳಿಗೆ ಬಹುಶಃ ರಾಮು ಸತ್ತು ಇಪ್ಪತ್ತೇಳು ವರ್ಷಗಳು.

ಅವನು ಸತ್ತಾಗ ನನಗೆ ಇಪ್ಪತ್ತೆಂಟು ವರ್ಷ.
ಬಳ್ಳಾರಿಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹಿಂದಿನ ಬಟಾಬಯಲಿನಲ್ಲಿ ‘ಪಾಲು’ ಎಂಬ ಹುಡುಗ ಅಗೆದ ಆರಡಿ ಆಳದ ಇರುಕಾದ ಗುಂಡಿಯೊಳಕ್ಕೆ ರಾಮುವಿನ ತೆಳ್ಳನೆಯ ನಿಶ್ಯಕ್ತ ಕೈಕಾಲುಗಳನ್ನು ಹಿಡಿದು ನಿಧಾನವಾಗಿ ಇಳಿಸುತ್ತಿದ್ದಾಗ ಅದೇನಾಯಿತೋ, ಆ ಹುಡುಗನ ಗೋಣು ಫಕ್ಕನೆ ಎಡಕ್ಕೆ ವಾಲಿತು. ಗುಂಡಿಯ ಪಕ್ಕದಲ್ಲಿ ನಿಂತಿದ್ದ ಅವನ ತಂಗಿ ವಿಜಿ ‘ಮೆಲ್ಲಕ್ಕೇ... ನೋವಾಗುತ್ತೆ!’ ಎಂದು ಕಿರುಚಿಕೊಂಡಳು. ಅಂಗಾತ ಬಿದ್ದ ರಾಮುವಿನ ಕಣ್ಣು ಅರೆಬರೆಯಾಗಿ ತೆರೆದುಕೊಂಡು ನಮ್ಮನ್ನೇ ನೋಡುತ್ತಿವೆಯೇನೋ ಎನಿಸುವಂತಿತ್ತು. ಗುಂಡಿಯೊಳಕ್ಕಿಳಿದು ನಾನೇ ಅವನ ಕಣ್ಣುಗಳೆರಡನ್ನೂ ಮುಚ್ಚಿದೆ. ನಾನೇ ಮೊದಲು ಅವನ ಶವದ ಮೇಲೆ ನಡುಗುವ ಮುಷ್ಠಿಯೊಳಗಿನಿಂದ ಹಿಡಿಮಣ್ಣು ಕೆಡವಿದೆ. ಆಮೇಲೆ ರಾಮು ಜಗತ್ತನ್ನು ನೋಡಲಿಲ್ಲ. ಜಗತ್ತು ಅವನನ್ನು ಮರೆತು ಹೋಯಿತು. ನಾವು ರಾಮುವನ್ನು ಹೂತು ಹಾಕಿದೆವು; ಅವನ ಅಮಾಯಕತೆಯ ಸಮೇತ.

‘ರವೀ ಭಾವಾ’ ಅನ್ನುತ್ತಿದ್ದ. ನನ್ನ ಆರು ಜನ ಭಾವ-ನಾದಿನಿಯರ ಪೈಕಿ ಬಾಯ್ತುಂಬ ‘ಭಾವಾ’ ಅನ್ನುತ್ತಿದ್ದವನು ಅವನೊಬ್ಬನೇ. ನನ್ನ ಲಲಿತೆಯ ಎರಡನೇ ತಮ್ಮ. ಹುಟ್ಟಾ ಅಂಗವಿಕಲ. ನಾನು ನೋಡುವ ಹೊತ್ತಿಗಾಗಲೇ ರಾಮು ಆರಡಿ ಎತ್ತರಕ್ಕೆ ಬೆಳೆದಿದ್ದ. ನಿಜಕ್ಕೂ tall fellow. ಆದರೆ ಅವನಿಗೆ ಎದ್ದು ನಿಲ್ಲುವುದು ಸಾಧ್ಯವಾಗುತ್ತಿರಲಿಲ್ಲ. ಅದು ಪೋಲಿಯೋ ಕೂಡ ಅಲ್ಲ. ಕೈಗಳೆರಡೂ ತೆಳ್ಳಗೆ ಚಾಚಿಕೊಂಡಿದ್ದವು. ಕಾಲುಗಳು ನಿರ್ಜೀವವಾಗಿ ನೇತಾಡುತ್ತಿದ್ದವು. ಹೆಚ್ಚೆಂದರೆ ಕುಳಿತಿರಬಹುದಾದಷ್ಟು, ಮಕ್ಕಳಂತೆ ಅಂಬೆಗಾಲಿಡಬಹುದಾದಷ್ಟು, ವಿಪರೀತ ಕಷ್ಟಪಟ್ಟರೆ ಗೋಡೆ ಹಿಡಿದುಕೊಂಡು ನಿಲ್ಲಬಹುದಾದಷ್ಟು ಮಾತ್ರದ ಶಕ್ತಿ ಅವನ ಸೊಂಟಕ್ಕಿತ್ತು.ಆದರೆ ಅವನ ಬೆರಳ ತುದಿಗೆ ಅದೆಂತಹುದೋ ವಿಚಿತ್ರವಾದ ದೈತ್ಯಶಕ್ತಿ! ಆದರೆ ತಾನಾಗೇ ಸಲೀಸಾಗಿ ಲೋಟ ಕೈಗೆತ್ತಿಕೊಳ್ಳಲಾಗದ disorder. ರಾಮುವಿಗೆ ಬುದ್ಧಿ ಬೆಳೆದಿರಲಿಲ್ಲ. ಇಪ್ಪತ್ತೊಂಭತ್ತರ ಆ ಹುಡುಗನಿಗೆ ಐದು ವರ್ಷದ ಮಗುವಿನ ಮನಸ್ಸು.

ಪ್ರಪಂಚ ಜ್ಞಾನಕ್ಕೆ ಅವನಲ್ಲಿದ್ದದು ಒಂದೇ ಪುರಾವೆ.
“ನಿನ್ನನ್ನಎಲ್ರೂ ಬಿಟ್ಟು ಹೋಗಿಬಿಟ್ರೆ ಏನು ಮಾಡ್ತೀಯೋ ರಾಮೂ?" ಅಂತ ಕೇಳಿದರೆ,
“ಬಸ್ಟ್ಯಾಂಡಿನಲ್ಲಿ ಭಿಕ್ಷೆ ಬೇಡ್ತೀನಿ!" ಅಂತ ಅತ್ಯಂತ ಮುಗ್ಧನಾಗಿ ಹೇಳುತ್ತಿದ್ದ.
ನಿಜ ಹೇಳಬೇಕೆಂದರೆ, ಅವನೇ ನಮ್ಮನ್ನೆಲ್ಲ ಬಿಟ್ಟು ಹೋಗಿಬಿಟ್ಟ. ಒಂದು ಹಿಡಿ ಅಮಾಯಕತೆಯೆಂಬುದು ಎಲ್ಲಾದರೂ ಸಿಕ್ಕೀತೇ ಎಂದು ಹುಡುಕಿಕೊಂಡು ಅಲೆಯುವ ಭಿಕ್ಷುಕರನ್ನಾಗಿಸಿ ಹೊರಟುಹೋದ.

ರಾಮುವಿಗೆ ನಾಲಗೆಯೂ ಇರಲಿಲ್ಲ.ಅವನ ಮಾತು ತೀರಾ ಅಸ್ಪಷ್ಟ. Over the years ಮಗೆ ಆತನ ತೊದಲು ತೊದಲಾದ ಉಚ್ಚಾರ ಅರ್ಥವಾಗುವಂತಾಗಿತ್ತು. ರಾಮುವಿನ ಹಠಗಳು, ಆಸೆಗಳು, ಊಟದ ಮಿತಿ, ನಿದ್ರೆಯ ಅವಧಿ, ಅವನ ಮನೋದೈಹಿಕ ಜರೂರತ್ತುಗಳು ಎಲ್ಲವೂ ಅರ್ಥವಾಗಿದ್ದವು. ರಾಮು ತುಂಬಿದ ಆ ಮನೆಯಲ್ಲಿ ನೆರಳಿನಂತೆ, ಯಾವುದೋ ಜನ್ಮದ ನೆನಪಿನಂತೆ, ಯಾವಾಗಲೋ ಬಂದು ಇನ್ಯಾವಾಗಲೋ ಹೊರಟು ಹೋಗಲು ಸಿದ್ಧನಿದ್ದ ಅತಿಥಿಯಂತೆ ಸರಿಸುಮಾರು ಇಪ್ಪತ್ತೊಂಭತ್ತು ವರ್ಷ ಬದುಕಿದ್ದ. ಅಂಥ ಅಂಗ ವೈಕಲ್ಯದಲ್ಲೂ ರಾಮು ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಿದ್ದ. ತನ್ನ ಬಟ್ಟೆ, ತಟ್ಟೆ, ಹಾಸಿಗೆ, ಸಂಡಾಸು, ಸ್ನಾನ, ತಲೆ ಬಾಚಿಕೊಳ್ಳುವಿಕೆ ಯಾವುದಕ್ಕೂ ನೆರವು ಬೇಕಿಲ್ಲ. ತನ್ನದೇ ಆದ ರೀತಿಯಲ್ಲಿ ಎಲ್ಲವನ್ನೂ communicate ಮಾಡುತ್ತಿದ್ದ. ಅವನ ಮುಖದಲ್ಲಿ ಸದಾ ಒಂದು ಅಬೋಧ ನಗೆಯಿರುತ್ತಿತ್ತು. ಯಾರೂ ಇಲ್ಲದಾಗ ತೊಟ್ಟಿಲಲ್ಲಿ ತನಗೆ ತಾನೇ ನಗುತ್ತಾ ಮಲಗಿರುವ ಮಗುವಿನಂತೆ ಆತ ನಗುತ್ತಾ ಇರುತ್ತಿದ್ದ. ಸುಸ್ತಾಗಿ ಮಲಗಿದರೆ ತೆವಳುತ್ತಾ ಬಂದು ಕಾಲ ಬಳಿ ಕೂಡುತ್ತಿದ್ದ. ಬೆರಳುಗಳಲ್ಲೊಂದು ಅಗಾಧವಾದ ತಾಕತ್ತಿತ್ತಲ್ಲ? ಗ್ರಿಪ್ ಸಿಕ್ಕರೆ ಮಾತ್ರ ಕಾಲು ನೋವೆಲ್ಲ ಕರಗಿ ಹೋಗುವಷ್ಟು ದಿವ್ಯವಾಗಿ ಕಾಲೊತ್ತುತ್ತಿದ್ದ. ನಾನು ಕುಶಾಲಿಗೆ, ಪ್ರೀತಿಗೆ, ಅವನ ಸಮಾಧಾನಕ್ಕೆ ಅಂತ ಯಾವಾಗಲಾದರೂ ಒಂದಿಷ್ಟು ಕಾಸು ಕೊಟ್ಟರೆ, ಅದು ದಿನಗಟ್ಟಲೆ ರಾಮುವಿನ ಜೇಬಿನಲ್ಲೇ ಘಲ್ಲುಘಲ್ಲೆನ್ನುತ್ತ ಬಿದ್ದಿರುತ್ತಿತ್ತು.

ಮದುವೆಗೆ ಮುಂಚೆ ಇವಳ ಮನೆಗೆ ಸಾವಿರ ನೆಪವಿಟುಕೊಟ್ಟುಕೊಂಡು ಹೋಗುತ್ತಿದ್ದೆನ್ನಲ್ಲ? ನನಗೆ ಮೊದಲು ಫ್ರೆಂಡಾಗಿದ್ದವನೇ ರಾಮು! ಅವನಿಗೆ ಉಳಿದೆಲ್ಲರಿಗಿಂತ ಹೆಚ್ಚಾಗಿ ನಮ್ಮಿಬ್ಬರ ಮದುವೆಗೆ ಸಂಬಂಧಿಸಿದಂತೆ ಒಂದು ಮೌನ ಸಮ್ಮತಿಯಿತ್ತು. ಇವತ್ತಿಗೂ ನನಗರ್ಥವಾಗದ ಸಂಗತಿಯೆಂದರೆ, ಕೇವಲ ಐದಾರು ವರ್ಷದ ಮಗುವಿಗಿರಬಹುದಾದಷ್ಟೇ ಬುದ್ಧಿಯಿದ್ದ ರಾಮು ತನ್ನ ಅಕ್ಕ ತಂಗಿಯರ ಬಗ್ಗೆ ವಿವರಿಸಲು ಸಾಧ್ಯವಾಗದಂತಹ ಒಂದು possessiveness ಹೊಂದಿದ್ದುದು. ಅವರ ಸಹಪಾಠಿಗಳ ಪೈಕಿ ಹುಡುಗರ‍್ಯಾರಾದರೂ ಬಂದರೆ ಸಾಕು, ರಾಮು ಸಿಡಿಮಿಡಿಗುಟ್ಟುತ್ತಿದ್ದ. ಯಾವುದೇ ಮುಲಾಜಿಲ್ಲದೆ ಬಂದವರ ಬಳಿಗೆ ನಿಧಾನಕ್ಕೆ ತೆವಳುತ್ತಾ ಹೋಗಿ, ಅವರೆದುರು ಪದ್ಮಾಸನ ಹಾಕಿ ಕುಳಿತು,

“ನೀನು ಹೋಗು!" ಎಂದು ಶುರುವಿಟ್ಟುಕೊಂಡು ಬಿಡುತ್ತಿದ್ದ. ಅವರು ಎದ್ದು ಹೋಗುವ ತನಕ ಆ ಮಾತು ನಿಲ್ಲಿಸದೆ repeat ಮಾಡುತ್ತಲೇ ಇರುತ್ತಿದ್ದ. ಯಾರು ಸಮಾಧಾನ ಹೇಳಿದರೂ, ಏನು ವಿವರಣೆ ನೀಡಿದರೂ, ಎಷ್ಟೇ ಗದರಿಕೊಂಡರೂ, ಉಹುಂ! “ನೀನು ಹೋಗು" ಎಂಬುದು ಅವನ ಶಾಶ್ವತ ಮಂತ್ರ. ಸದಾ ಹಾಗೇ ಅಬೋಧವಾಗಿ ನಗುತ್ತಾ ಇರುತ್ತಿದ್ದ ಹುಡುಗ, ಇಂತಹ ಆಗಂತುಕರನ್ನು ಕಂಡ ತಕ್ಷಣ ಕ್ರುದ್ಧನಾಗುತ್ತಿದ್ದ. ಎಲ್ಲಿದ್ದರೂ ಸರಿ, ತೆವಳುತ್ತಾ ಬಂದು ವರಾತ ಪ್ರಾರಂಭಿಸಿಬಿಡುತ್ತಿದ್ದ. ಅವನೇನು ಹೇಳುತ್ತಿದ್ದನೆಂಬುದೇ ತುಸು ಹೊತ್ತು ಅರ್ಥವಾಗುತ್ತಿರಲಿಲ್ಲ. ಆಗಂತುಕರು ಗೊಂದಲಕ್ಕೆ ಬೀಳುತ್ತಿದ್ದರು. ಆಗ ರಾಮು ಸ್ಪಷ್ಟವಾಗಿ ಬಾಗಿಲೆಡೆಗೆ ಕೈ ತೋರಿಸಿ “ನೀನು ಹೋಗು!" ಅನ್ನುತ್ತಿದ್ದ. ಅಲ್ಲಿಗೂ ಹೊರಡದಿದ್ದರೆ ತೆವಳುತ್ತಲೇ ಹೋಗಿ, ಆಗಂತುಕರು ಬಾಗಿಲಲ್ಲಿ ಬಿಟ್ಟಿರುತ್ತಿದ್ದ ಚಪ್ಪಲಿಗಳನ್ನು ತಂದು ಅವರೆದುರಿಗಿಟ್ಟು ‘ಹೋಗು’ ಅನ್ನುತ್ತಿದ್ದ. ಹಾಗೆಲ್ಲ ಅನ್ನಬಾರದು ಕಣಯ್ಯಾ, ಬಂದವರಿಗೆ ಬೇಜಾರಾಗೊಲ್ವೇ? ಅಂತ ನಾನು ವಿವರಿಸಲು ಹೊರಟರೆ, “ನೀವು ಇರಿ, ಅವನು ಹೋಗಲಿ!" ಅಂತ ನಿರ್ಧಾರ ಘೋಷಿಸಿಬಿಡುತ್ತಿದ್ದ ರಾಮು.

ಅಂಗವಿಕಲತೆಯ ಕಾರಣವೋ ಅಥವಾ ಆಕೆಗಿದ್ದ ಮೂಲಭೂತ ವಾತ್ಸಲ್ಯಮಯ ಸ್ವಭಾವವೋ ಕಾಣೆ, ರಾಮುವಿಗೆ ನನ್ನ ತಾಯಿ ತುಂಬ ಆತ್ಮೀಯಳಾಗಿ ಬಿಟ್ಟಿದ್ದಳು. ಅವಳಿಗೂ ಕಡೆಕಡೆಯ ವರ್ಷಗಳಲ್ಲಿ ಕೈಕಾಲು ಬಿದ್ದು ಹೋಗಿದ್ದವು. ಇಬ್ಬರೂ ಒಂದು ಮಂಚದ ಮೇಲೆ ಕುಳಿತು ಉಳಿದವರ‍್ಯಾರಿಗೂ ಅರ್ಥವಾಗದಂತೆ ಹರಟುತ್ತಿದ್ದರು. ಇಬ್ಬರೂ ತೆವಳುತ್ತಾ, ಕುಂಟುತ್ತಾ ಹೋಗಿ ಕಾಫಿ ಮಾಡಿಕೊಳ್ಳುತ್ತಿದ್ದರು. ಅದು ಅವರದೇ ಪ್ರಪಂಚ. ಅವನಿಗೆ ಬುದ್ಧಿ ಬೆಳೆದಿರಲಿಲ್ಲ. ಅಮ್ಮನಿಗೆ ಹೃದಯವಂತಿಕೆ ಇತ್ತು. ಎರಡು ಜೀವಗಳು ಜೊತೆಯಾಗಲು ಅಷ್ಟು ಸಾಕಿತ್ತು.

ಅಂಥ ರಾಮು ಅದೊಂದು ದಿನ ಘೋಷಿಸಿಬಿಟ್ಟ.

“ನಾನು ಅಕ್ಕನ ಊರಿಗೆ ಹೋಗ್ತೇನೆ. ಅಲ್ಲೇ ಇರ‍್ತೇನೆ. ಇಲ್ಲಿಗೆ ಮತ್ತೆ ವಾಪಸು ಬರೋದಿಲ್ಲ!" ಹಾಗಂತ ಅವನು ಮನೆಯವರಿಗೆಲ್ಲ ಹೇಳಿದ. ಸಮಾಧಾನವಾಗಲಿಲ್ಲ. ಅಂಬೆಗಾಲಿಕ್ಕಿಕೊಂಡು ಅಕ್ಕಪಕ್ಕದ ಮನೆಗಳಿಗೆಲ್ಲ ಹೋಗಿ ಹೇಳಿಬಂದ. ಹೆರಿಗೆಗೆಂದು ದಾವಣಗೆರೆಗೆ ಹೋಗಿದ್ದ ನನ್ನ ಹೆಂಡತಿಯೊಂದಿಗೆ ರಾಮು ಕೂಡ ಬಳ್ಳಾರಿಗೆ ಬಂದು ಬಿಟ್ಟ. ನಾನೇ ಅವನನ್ನು ಟ್ಯಾಕ್ಸಿಯಲ್ಲಿ ಕರೆತಂದೆ. ಈ ಹುಡುಗ ಸಾಯಲಿಕ್ಕೆಂದೇ ನನ್ನ ಮನೆಗೆ ಬರಲಿದ್ದಾನೆಂಬ ಸಣ್ಣ ಅನುಮಾನವೂ ಇಲ್ಲದೆ ಕರೆತಂದೆ. ಅವನಿಗೆ ಯಾವ ಊರಾದರೂ ಒಂದೇ. ಎಷ್ಟು ತೆವಳಿದರೂ ಮನೆಯ ಅಂಗಳ ದಾಟಲಾರ. ಮನೆಯವರ ಹೊರತಾಗಿ ಮತ್ತೊಬ್ಬರೊಂದಿಗೆ ಮಾತನಾಡಲಾರ. ಆದರೂ ತಾನು ಬೆಳೆದ ಊರು, ಬಳ್ಳಾರಿ. ಅಲ್ಲಿಗೆ ಬಂದೆನೆಂಬ ಸಂತೋಷ. ನಮ್ಮ ಕಂಪೋಂಡಿನ ತುಂಬ ಹರಿದಾಡಿದ. ಅಮ್ಮನ ಪಕ್ಕ ಕುಳಿತು ಕಥೆ ಹೇಳಿದ. ತನಗೊಂದು ರೇಡಿಯೋ ಬೇಕೆಂದು ಅಪ್ಪಣೆ ಕೊಡಿಸಿದ. ಅಮ್ಮ ತಾನಿಟ್ಟುಕೊಂಡಿದ್ದ ರೇಡಿಯೋ ಕೊಟ್ಟುಬಿಟ್ಟಳು. ಅದ್ಹೇಗೋ ರಾಮು ರೇಡಿಯೋದ stationಗಳನ್ನು tune ಮಾಡಿಕೊಳ್ಳುತ್ತಿದ್ದ. ಒಬ್ಬ ರಾಜ್‌ಕುಮಾರ್ ಹಾಡಿದರೆ ಮಾತ್ರ ಅವನ ಕಣ್ಣುಗಳು ಆನಂದದಿಂದ ಅರಳಿಬಿಡುತ್ತಿದ್ದವು. ‘ಎಮ್ಮೇ ನಿನಗೆ ಸಾಟಿಯಿಲ್ಲ...’ ಕೇಳಿಸಿಕೊಂಡರೆ ಇಡೀ ಮನೆಗೆ ಕೇಳಿಸುವಂತೆ ಕೇಕೆ ಹಾಕಿಬಿಡುತ್ತಿದ್ದ. ಜೊತೆಗೆ ತಾನೂ ಹಾಡಲು ಯತ್ನಿಸುತ್ತಿದ್ದ. ಅವನಲ್ಲೊಂದು ವಿಲಕ್ಷಣ ಲಹರಿ, unexplainable ಸಡಗರ, ಅಂತ್ಯವಿಲ್ಲದ ಆನಂದಗಳನ್ನು ಆ ನಾಲ್ಕು ಸೆಲ್ಲಿನ ರೇಡಿಯೋ ಮಾಡಿಬಿಡುತ್ತಿತ್ತು.

ಸುಮ್ಮನೆ ಕೂಡುವುದಿಲ್ಲ. ನನಗೆ ಕೆಲಸ ಕೊಡಿ. ಕಸ ಬಳಿಯುತ್ತೇನೆ! ಅನ್ನುತ್ತ ಕೈಯಲ್ಲೊಂದು ಪೊರಕೆ ಹಿಡಿದುಕೊಂಡು ನನ್ನ ಕೋಣೆಯೊಳಕ್ಕೆ ಬರುತ್ತಿದ್ದ. ಒಂದೇ ಒಂದು ಧೂಳಿನ ತುಣುಕೂ ಇಲ್ಲದಂತೆ ಕಸ ಬಳಿಯುವುದರೊಳಗಾಗಿ ಸಂಜೆಯಾಗುತ್ತಿತ್ತು. ರಾತ್ರಿ ಊಟಕ್ಕೆ ಕುಳಿತಾಗ ಯಾರಿಗೂ ಭಾರವಿಲ್ಲದ ಜೀವಿ ತನ್ನ ಊಟ ತಾನೇ ದುಡಿದುಕೊಳ್ಳುತ್ತಾನಲ್ಲ ಅನ್ನಿಸುತ್ತಿತ್ತು. ಕಡೆಕಡೆಯ ದಿನಗಳಲ್ಲಿ ರಾಮು, ಭಿಕ್ಷೆ ಬೇಡುತ್ತೇನೆ ಅನ್ನುವುದನ್ನು ಬಿಟ್ಟುಬಿಟ್ಟಿದ್ದ. ಅಕ್ಕತಂಗಿಯರ ಮದುವೆಗಳೂ ಆಗಿಹೋಗಿದ್ದರಿಂದ ಬಂದವರ‍್ಯಾರನ್ನೂ ‘ನೀನು ಹೋಗು’ ಅನ್ನುತ್ತಿರಲಿಲ್ಲ. ಆ ತನಕ ಇದ್ದ ಸಣ್ಣಪುಟ್ಟ ಹಠಗಳೂ ಇಲ್ಲವಾಗಿ ಬಿಟ್ಟಿದ್ದವು. ನಾನು ರಾಮುವಿನ ಬಗ್ಗೆ ಕಥೆ ಬರೆಯಲು ಶುರುವಿಟ್ಟೆ. ಅರ್ಥವಾಗಲಾರದೆಂದು ಚೆನ್ನಾಗಿ ಗೊತ್ತಿದ್ದರೂ ಅವನೆದುರಿಗೆ ಒಂದೆರಡು ಪ್ಯಾರಾ ಓದಿದೆ. ಅವನಿಗೆ ಕೊಂಚವೂ ಖುಷಿಯಾಗಲಿಲ್ಲ. ತೆವಳುತ್ತಾ ಹೋಗಿ ರೇಡಿಯೋ tune ಮಾಡತೊಡಗಿದ.“ನೀನು ಕಥಾಸಾಹಿತ್ಯದ ವಿರೋಧಿ ಕಣಯ್ಯಾ" ಅಂತ ತಮಾಷೆ ಮಾಡಿದೆ. ನನ್ನನ್ನು ಹುಟ್ಟಾಮೂರ್ಖನಂತೆ ನೋಡಿ ನಕ್ಕುಬಿಟ್ಟ.ರಾತ್ರಿ ಮಲಗುವ ಮುನ್ನ ನನ್ನ ಅಮ್ಮನಿಗೆ ಹನುಮಂತ ದೇವರ ಸ್ತೋತ್ರ ಒಪ್ಪಿಸಿ,

“ಭಾವ ಕಥೆ ಬರೆದಿದ್ದಾರೆ ನನ್ನ ಮೇಲೆ!" ಎಂದು ಎಲ್ಲರಿಗೂ ಆಶ್ಚರ್ಯವಾಗುವಂತೆ ಹೇಳಿ ತೆವಳುತ್ತಾ ಹೋಗಿ ಮಲಗಿಬಿಟ್ಟ.
ನನಗೆ ಭಯಗಳಾಗುತ್ತಿದ್ದುದೇ ಆವಾಗ. ರಾಮುವಿನ ಅಂಗವೈಕಲ್ಯ, ಬುದ್ಧಿ ಮಾಂದ್ಯತೆ, ಕೆಲವೊಮ್ಮೆ ಆ ಕಣ್ಣುಗಳಲ್ಲಿ ಕಾಣುತ್ತಿದ್ದ ಶೂನ್ಯಭಾವ, ಅವನ ವಿನಾಕಾರಣದ ನಗೆ, ಆ ತೆವಳಾಟ, ಅಸ್ಪಷ್ಟ ಮಾತು ಎಲ್ಲ ನಾಟಕವೇನೋ? ರಾಮುವಿಗೆ ಎಲ್ಲ ತಿಳಿಯುತ್ತದೇನೋ? ನಮ್ಮನ್ನು ಪರೀಕ್ಷಿಸಲೆಂದೇ ಹೀಗಾಡುತ್ತಿದ್ದಾನೇನೋ? ಯಾವತ್ತೋ ಒಂದು ದಿನ ರಪ್ಪಂತ ಕಾಲಿಟ್ಟುಕೊಂಡು ಸ್ಥಿರವಾಗಿ ಎದ್ದು ನಿಂತು ನಾನು ಕೊಟ್ಟ ಚಿಲ್ಲರೆಯನ್ನೆಲ್ಲ ಬಕ್ಕಣದಿಂದ ಹಿರಿದು ನನ್ನ ಮುಖಕ್ಕೆ ಛಕ್ಕನೆ ರಾಚಿ,

“ಏನಂದುಕೊಂಡಿದ್ದೀಯಾ ನನ್ನನ್ನ?"
ಅಂತ ರೇಗಿಬಿಡುತ್ತಾನೇನೋ? ಹಾಗೇನಾದರೂ ಆಗಿಬಿಟ್ಟರೆ ಭಗವಂತಾ.... ರಾಮುವಿನ ಮುಂದೆ ನಾನು ಸಣ್ಣವನಾಗಿಬಿಡುತ್ತೇನೆ ಅಂತ ಅನ್ನಿಸಿ ಸಣ್ಣಗೆ ಬೆವೆಯುತ್ತಿದ್ದೆ. ಈ ವಿಲಕ್ಷಣ ಭಯಗಳು ಸಾಮಾನ್ಯವಾಗಿ ಎಳೆಯ ಮಕ್ಕಳಿದ್ದವರಿಗೆ ಹೆಚ್ಚು ಅರ್ಥವಾಗುತ್ತವೆ. ನಡುರಾತ್ರಿಯಲ್ಲಿ ಪಕ್ಕಕ್ಕೆ ಮಲಗಿಸಿಕೊಂಡು ಮಗು ಚೆನ್ನಾಗಿ ನಿದ್ರೆ ಮಾಡಿದೆಯೆಂದು ಭಾವಿಸಿಕೊಂಡು ಆ ನಂಬಿಕೆಯಲ್ಲೇ ಮೈಮರೆತು ಮೈಥುನಕ್ಕಿಳಿಯುವ ದಂಪತಿಗಳ ಪೈಕಿ ಯಾರಾದರೊಬ್ಬರು ಇದ್ದಕ್ಕಿದ್ದಂತೆ ಗಮನಿಸಿಬಿಡುತ್ತಾರೆ.
ಮಗು ಪಿಳಪಿಳನೆ ಕಣ್ಣು ಬಿಟ್ಟುಕೊಂಡು ಇವರನ್ನೇ ನೋಡುತ್ತಿರುತ್ತದೆ.

ಫಕ್ಕನೆ ಮೈಗೆ ಬಟ್ಟೆ ಎಳೆದುಕೊಳ್ಳುತ್ತಾರೆ. ದೀಪ ಆರಿಸುತ್ತಾರೆ. ಮಗು ಕಿಟಾರನೆ ಕಿರುಚಿಕೊಳ್ಳುತ್ತದೆ. ತಾವಿದ್ದ ಸ್ಥಿತಿಯಲ್ಲೇ ಮಗುವನ್ನು ತಟ್ಟಿ ಮಲಗಿಸಲು ಯತ್ನಿಸುತ್ತಾರೆ. ಸಾಧ್ಯವಾಗುವುದಿಲ್ಲ. ಸುಖದ ಆಸೆ ಕೈಬಿಟ್ಟು ಮಗುವಿನ ಪಕ್ಕಕ್ಕೆ ಮಗ್ಗುಲಾಗುತ್ತಾರೆ. ಎಷ್ಟೋ ಹೊತ್ತಿನ ನಂತರ ಮಗು ನಿದ್ದೆಗಿಳಿಯುತ್ತದೆ. ಆದರೆ ಇವರಿಗೆ ಕೇಳಿಗಿಳಿಯುವ ಹುಮ್ಮಸಿರುವುದಿಲ್ಲ. ಯಾವುದೂ ಏನೂ ಬೇಡವೆನಿಸುತ್ತದೆ. ಅಂಥ ಸ್ಥಿತಿಯಲ್ಲೂ ನಿದ್ದೆಗೆ ಜಾರುವ ಮುನ್ನ ಒಂದು ಪ್ರಶ್ನೆ ಕಾಡದೆ ಇರಲಾರದು.

ಮಗುವು ನೋಡಿತಲ್ಲ? ಅದಕ್ಕೆ ಗೊತ್ತಾಯಿತಾ?

ಛೆ, ಆರೆಂಟು ತಿಂಗಳ ಕೂಸಿಗೆ ಏನು ಗೊತ್ತಾಗುತ್ತದೆ. ಹಾಗಾದರೆ ಗಬಕ್ಕನೆ ಬಟ್ಟೆ ಎಳೆದುಕೊಂಡದ್ದೇಕೆ? ನಾವೇ ಹೆತ್ತ ಬೆತ್ತಲೆ ಕೂಸಿನ ಮುಂದೆ ನಮಗೆಂತಹ ನಾಚಿಕೆ? ನಮ್ಮೊಳಗಿಂದಲೇ ಉದ್ಭವವಾದ ಕಂದನೆದುರು ಬಟ್ಟೆಯ ಹಂಗೇಕೆ? ಆದರೂ ಬಟ್ಟೆ ಎಳೆದುಕೊಳ್ಳುತ್ತೇವೆ. ದೀಪ ಆರಿಸುತ್ತೇವೆ. ನಿದ್ದೆಗೆ ಜಾರುವ ಮುನ್ನ ಪ್ರಶ್ನೆ ಕೇಳಿಕೊಳ್ಳುತ್ತೇವೆ. ಏಕೆಂದರೆ ಬೆತ್ತಲೆ ನಮ್ಮದೇ ದೇಹದಾದರೂ ಅಸಹ್ಯಪಡುತ್ತೇವೆ. ಅದು ಮತ್ತೊಬ್ಬರ ಕಣ್ಣಿಗೆ ಬೀಳದಿರಲಿ ಅಂತ ಗಾಬರಿಗೊಳ್ಳುತ್ತೇವೆ. ಬೆತ್ತಲೆಯೆಂಬುದು ಪ್ರತೀಸಲವೂ ಆಸೆಯನ್ನೇ ಹುಟ್ಟಿಸೀತೆಂಬ ಖಾತರಿಯಿಲ್ಲ. ಅನೇಕ ಸಲ ಅದು ಅಸಹ್ಯ ಹುಟ್ಟಿಸಬಲ್ಲದು.

ರಾಮು ಎಂಬ ಹುಡುಗನಿಗೆ ನನ್ನ ತಲೆಯೊಳಗಿನ ವ್ಯಾಪಾರಗಳನ್ನೆಲ್ಲ ಅರ್ಥ ಮಾಡಿಕೊಳ್ಳುವ ಚೈತನ್ಯವಿದ್ದುಬಿಟ್ಟಿದ್ದರೆ... ಗತಿ? ಅವನು ದೃಢವಾಗಿ ಎದ್ದು ನಿಂತು ರೇಗಿದರೆ? ಗೇಲಿ ಮಾಡಿದರೆ? ಇಷ್ಟೇನಾ ಭಾವಾ ನಿನ್ನ ಹಣೇಬರಹ ಅಂತ ನಗೆಯಾಡಿದರೇ? ನನ್ನ ಕಪಟ, ತಂತ್ರ, ಒರಟುತನ, ಸಣ್ಣತನ, ಧೂರ್ತತನಗಳೆಲ್ಲ ಅವನಿಗೆ ಅರ್ಥವಾಗಿಬಿಟ್ಟರೆ? ಅವನಿಗೆ ಅಂಥದ್ದೊಂದು ಅತಿಮಾನುಷ ಶಕ್ತಿ ಇದ್ದುಬಿಟ್ಟಿದ್ದರೆ...? ಅದಿಲ್ಲದೆ ಹೋಗಿದ್ದಿದ್ದರೆ ರಾಮುವಿನಂತಹ ನಿಸ್ಸಹಾಯಕ ಅದ್ಹ್ಯಾಗೆ ರೇಡಿಯೋ tune ಮಾಡುತ್ತಿದ್ದ? ಒಲ್ಲದ ಅತಿಥಿಯನ್ನು ಅದು ಹೇಗೆ ‘ಹೋಗು’ ಅನ್ನುತ್ತಿದ್ದ? ಅದ್ಹೇಗೆ ಅಮ್ಮನಿಗೆ ಅಷ್ಟು ಆತ್ಮೀಯನಾಗಿಬಿಡುತ್ತಿದ್ದ? ನನ್ನಷ್ಟೇ!

ಹಾಗೆ ರಾಮು ತುಂಬ ಸಲ ಒಂದು ಪರಿಹಾರವಿಲ್ಲದ ಪ್ರಶ್ನೆಯಾಗಿಯೇ ಗೋಚರಿಸುತ್ತಿದ್ದ. ತುಂಬ ಹೊತ್ತು ಅವನ ಮುಂದೆ ಕೂಡಲು ಏನೋ ಕಸಿವಿಸಿ. ಎಂಥದೋ guilt. ಅವನಿಗೊಂದು ಅಂಗಿ ಚಡ್ಡಿ ತಂದು ಕೊಟ್ಟು ಅದನ್ನೆಲ್ಲ comfortable ಆಗಿ ಮರೆಯಲು ಯತ್ನಿಸುತ್ತಿದ್ದೆ. ಹೋದಬಂದವರಿಗೆಲ್ಲ ಹೊಸ ಅಂಗಿ ತೋರಿಸಿ ‘ಭಾವ ಕೊಡಿಸಿದ್ದು’ ಅನ್ನುತ್ತಿದ್ದ. ಅದು ಇನ್ನೊಂದು ತೆರನಾದ guiltಗೆ ಕಾರಣವಾಗುತ್ತಿತ್ತು.

ಬಂದ ಒಂದೆರಡು ತಿಂಗಳು ರಾಮು ಆರೋಗ್ಯವಾಗಿಯೇ ಇದ್ದ. ಯಾರಿಗೂ ಅವನಿಂದ ಉಪದ್ರವವಿರಲಿಲ್ಲ. ಆದರೆ ಅದೊಂದು ದಿನ ಇದ್ದಕ್ಕಿದ್ದಂತೆ ಖಾಯಿಲೆ ಬಿದ್ದ. ಮೊದಲು ಹೊಟ್ಟೆ ಉಬ್ಬಿಕೊಂಡಿತು. ಆಮೇಲೆ ಸುಡುಸುಡು ಜ್ವರ. ಹಿಂದೆಯೇ ಎಚ್ಚರ ತಪ್ಪುವಿಕೆ. ತಕ್ಷಣ ಅವನನ್ನೊಂದು ಖಾಸಗಿ ನರ್ಸಿಂಗ್ ಹೋಮಿಗೆ ಕರೆದೊಯ್ದೆ. ಅವರು ಒಳಕ್ಕೂ ಬಿಟ್ಟುಕೊಳ್ಳಲಿಲ್ಲ. ಇದು ಸಣ್ಣದಕ್ಕೆ ಸರಿಯಾಗುವ ಕೇಸಲ್ಲ. ಸರ್ಕಾರಿ ಆಸ್ಪತ್ರೆಗೆ ಒಯ್ಯಿರಿ ಅಂದರು. ಇದ್ದ ದುಡ್ಡು ಒಟ್ಟು ಮಾಡಿ ಆಸ್ಪತ್ರೆಗೆ ಸೇರಿಸಿದೆ.

“ಕರೆಸಿಬಿಡಿ; ಯಾರಾದರೂ ಬಂಧುಗಳಿದ್ದರೆ ಇವತ್ತೇ ಕರೆಸಿ. matter of one day. ನಾಳೇ ಹೊತ್ತಿಗೆ ಈ ಹುಡುಗ ಬದುಕೋದಿಲ್ಲ. ಅವನಿಗೆ ಸೆರಿಬ್ರಲ್ ಹೆಮೋರೇಜ್ ಆಗಿದೆ!" ಅಂದರು ಡಾಕ್ಟರ್. ರಾಮು ಅವರನ್ನೊಮ್ಮೆ ನೋಡಿ ನಕ್ಕ.

ಅವನಿಗೆ ಗೊತ್ತಾಯಿತೆ?

ಎಕ್ಸರೇ ತೆಗೆದರು. ರಕ್ತ ಪರೀಕ್ಷೆ ಮಾಡಿದರು. ಬೆನ್ನು ಮೂಳೆ ತೂತು ಮಾಡಿ ನೋಡಿದರು. ಸ್ವಲ್ಪ ಕಾಲ ಏನನ್ನೂ ಮಾಡದೆ ಸುಮ್ಮನಿದ್ದು ನೋಡಿದರು. ಹೊತ್ತು ಕಳೆಯುತ್ತಾ ಬಂತು. ರಾಮು ನಗುತ್ತಲೇ ಇದ್ದ. ಊರಿಂದ ಬಂಧುಗಳು ಬಂದರು. ಆಸ್ಪತ್ರೆಯ ಕಟ್ಟೆಯ ಮೇಲೆ ಕುಳಿತು ಎಲ್ಲರೂ ‘ಸುದ್ದಿ’ಗಾಗಿ ಕಾದೆವು. ರಾಮು ನಗುತ್ತಲೇ ಉಳಿದ. ಎರಡನೆಯ ದಿನಕ್ಕೆ ಅವನ ಮೂತ್ರಪಿಂಡಗಳು ನಿಷ್ಕ್ರಿಯಗೊಂಡವು. ವೈದ್ಯರು ‘ಇವತ್ತೇ ಕೊನೆ’ ಅಂದರು. ಸಿನೆಮಾ ಮಂದಿರದ ಮೆನೇಜರರಂತೆ, ರಾಮು ನಕ್ಕ. ಆಮೇಲೆ ಎರಡು ದಿನಕ್ಕೆ ಅವನ ಯಕೃತ್ತು ನಿಂತು ಹೋಯಿತು. ವೈದ್ಯರು ಮತ್ತೆ ಶಕುನ ಹೇಳಿದರು. ರಾಮು ನಗುತ್ತಲೇ ಇದ್ದ. ಕೊನೆಗೆ ರಾಮುವಿನ ದೇಹದ ಎಲ್ಲ vital ಅಂಗಗಳೂ ನಿಷ್ಕ್ರಿಯಗೊಂಡವು. ಅವನೊಂದಿಗೆ emergency wardಗೆ admit ಆದ ರೋಗಿಗಳಲ್ಲಿ ಅನೇಕರು ಸತ್ತರು. ಬದುಕಿದವರು wardಗಳಿಗೆ shift ಆದರು. ಮತ್ತೆ ಕೆಲವರು ಗುಣವಾಗಿ ವಾಪಾಸು ಹೋದರು. ರಾಮು ವೈದ್ಯಲೋಕಕ್ಕೊಂದು ಸವಾಲಾಗಿ, ವೈಚಿತ್ರ್ಯವಾಗಿ ದಿನಗಟ್ಟಲೆ ಉಳಿದೇ ಉಳಿದ. ಅದೊಂದು ದಿನ ರಾಮುವನ್ನು ಹಾಸಿಗೆಯ ಮೇಲೆ ಮಲಗಿದ್ದಂತೆಯೇ ಪಕ್ಕಕ್ಕೆ ಹೊರಳಿಸಿದ ನರ್ಸು ಸಣ್ಣಗೆ ಕಿರುಚಿದಳು.

ಬೆನ್ನು ತೂತು ಬಿದ್ದಿತ್ತು!

ನನ್ನ ಜೀವಮಾನದಲ್ಲೆಲ್ಲೂ ಅಂಥ ದೃಶ್ಯವನ್ನು ನಾನು ನೋಡಿಲ್ಲ. ಬೆನ್ನು ಮತ್ತು hip ಒಂದಾಗುವ ಜಾಗದಲ್ಲಿ ಸರಿಯಾಗಿ ಒಂದು ಮುಷ್ಠಿಯಗಲದ ದೊಗರು ಕಾಣಿಸಿಕೊಂಡಿತ್ತು. ಅದು ಮಲಗೀ ಮಲಗೀ ಆದ bed soreನ ಉಲ್ಬಣ ಸ್ವರೂಪ. ಬೇರಿನ್ಯಾವುದಕ್ಕಲ್ಲದಿದ್ದರೂ ರಾಮು, ಈ ಬೆನ್ನು ಹುಣ್ಣಿನಿಂದ ಸಾಯುತ್ತಾನೆ ಅಂತ ನನಗೇ ಅನ್ನಿಸಿತು. ರಾಮುವಿನ ಮುಖ ನೋಡಿದೆ. ಅಲ್ಲಿ ನಗೆಯಿರಲಿಲ್ಲ. ಅವತ್ತಿಗಾಗಲೇ ರಾಮು ಖಾಯಿಲೆ ಬಿದ್ದು ಇಪ್ಪತ್ತೊಂದು ದಿನಗಳಾಗಿದ್ದವು. ರಾಮು ಆಗಲೇ ಮಂಕಾಗಿ ಬಿಟ್ಟಿದ್ದ. ಮಾತು ಪೂರ್ತಿಯಾಗಿ ನಿಂತಿದ್ದವು. ಕಣ್ಣುಗಳಲ್ಲಿ ಹೊಳಪು ಮುಗಿದಿತ್ತು. ರಾತ್ರಿ ತೋರಣಗಲ್ಲಿನಲ್ಲಿ ಗೆಳೆಯರು ನೀಡಿದ ಔತಣ ಮುಗಿಸಿಕೊಂಡು ಮೊಬೈಕಿನ ಮೇಲೆ ಹಿಂತಿರುಗುತ್ತಿದ್ದೆ. ದಾರಿಯಲ್ಲಿ ಫಟ್ಟನೆ head light ಕಣ್ಣು ಮುಚ್ಚಿತು. ರಾಮು ನೆನಪಾದ. ಅಮಾವಾಸ್ಯೆಯ ಕತ್ತಲಲ್ಲೇ ಬೈಕು ಓಡಿಸಿಕೊಂಡು ಬಂದೆ. ಬಂದಾಗ ರಾತ್ರಿ ಒಂದು ಗಂಟೆ. ಅದೇಕೋ ಮನಸ್ಸು ತಡೆಯಲಾಗದೆ ನೇರವಾಗಿ ಆಸ್ಪತ್ರೆಗೆ ಹೋದೆ.

ರಾಮು ಮಲಗಿದ್ದ.

ಜ್ಞಾನ ತಪ್ಪಿಹೋಗಿ ಆಗಲೇ ಮೂರು ದಿನಗಳಾಗಿದ್ದವು. ದಿಂಬಿನ ಬಳಿ ಕುಳಿತು ಹಣೆಯ ಮೇಲೆ ಕೈಯಿಟ್ಟೆ. ನವೆಂಬರಿನ ಚಳಿಯಲ್ಲೂ ಹಣೆ ಕೆಂಡದಂತೆ ಉರಿಯುತ್ತಿತ್ತು. ಸುಮ್ಮನೆ ಮುಂದಕ್ಕೆ ಬಾಗಿ,

“ರಾಮೂ" ಅಂದೆ.

“ಭಾವಾ" ಅಂದವನೇ ಕಣ್ಣು ಬಿಚ್ಚಿದ. ಮತ್ತದೇ ನಿಷ್ಕಳಂಕ, ಅಬೋಧ ನಗೆ. ಸಾವು ಕೂಡ ಅದನ್ನು ಕಿತ್ತುಕೊಳ್ಳಲಾರದು ಅನ್ನಿಸಿತು. ನಾನು ಮೆಲುದನಿಯಲ್ಲಿ ಮಾತಾಡಿಸಲು ಯತ್ನಿಸಿದೆ. ರಾಮು ದೊಡ್ಡ ದನಿಯಲ್ಲಿ “ಎಮ್ಮೇ ನಿನಗೆ ಸಾಟಿಯಿಲ್ಲ" ಅಂತ ರಾಗವಾಗಿ ಹಾಡಲಿಕ್ಕೆ ಆರಂಭಿಸಿದ. ಅದರಲ್ಲಿ ಸಾವನ್ನು ಬೆನ್ನಟ್ಟಿಕೊಂಡು ಹೋಗಿ ದೂರಕ್ಕೆ ಓಡಿಸಿ ಬಂದವನ ಹೇಶಾರವವಿದೆಯೆನ್ನಿಸಿತು. ಕೊಂಚ ಹೊತ್ತು ಹಾಡಿದ ನಂತರ ಅವನು ನಿದ್ರೆಗೆ ಜಾರಿದ. ಡಾಕ್ಟರುಗಳ ಪಾಲಿಗೆ ಬಹುದೊಡ್ಡ medical wonder ಆಗಿದ್ದ ರಾಮುವನ್ನು ಆಸ್ಪತ್ರೆಯ ಮಂಚದ ಪಾಲಿಗೆ ಬಿಟ್ಟು ಕುರುಡುಬಿದ್ದ ಬೈಕು ಹತ್ತಿ ಮನೆಗೆ ಬಂದೆ. ಆ ಚಳಿಯಲ್ಲೂ ಒಮ್ಮೆ ಸ್ನಾನ ಮಾಡಬೇಕೆನ್ನಿಸಿತು. ಮಾಡಿದೆ. ಹಾಸಿಗೆಗೆ ಬಿದ್ದು ಕಣ್ಮುಚ್ಚಿದೆನೋ ಇಲ್ಲವೋ, ಪಕ್ಕದ ಮನೆಯ ಫೋನಿನ ಮೂಲಕ ಸುದ್ದಿ ಬಂತು. Ramu is dead!

ಆ ಹುಡುಗ ಕಡೆಗೂ ನಮ್ಮನ್ನೆಲ್ಲ ಹಿಂದಕ್ಕೆ ಹಾಕಿ ಸಾವಿನತ್ತ ತೆವಳುತ್ತ ಹೊರಟು ಹೋಗಿದ್ದ. ನಮ್ಮಲ್ಲಿ ಅವನದೊಂದು ಒಳ್ಳೆಯ ಫೊಟೋ ಕೂಡ ಉಳಿದಿಲ್ಲ. ಆದರೆ ನಮ್ಮ ಓರಗೆಯವನಾಗಿದ್ದ ಆ ಹುಡುಗ ಕೆಲವೊಮ್ಮೆ ಬಿಟ್ಟೂ ಬಿಡದೆ ನೆನಪಾಗುತ್ತಾನೆ. ಮತ್ತದೇ ಪ್ರಶ್ನೆ ನನ್ನಲ್ಲಿ ಉದ್ಭವವಾಗುತ್ತದೆ.

ರಾಮುವಿಗೆ ಎಲ್ಲ ಗೊತ್ತಾಗುತ್ತಿತ್ತೆ?

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 28 November, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books