Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಯಶಸ್ಸು ಬೇಕು ಅಂತ ಬಯಸುವವರು ಅಜ್ಞಾತವಾಸಕ್ಕೆ ಸಿದ್ಧರಾಗಿರಬೇಕು


ಅಯ್ಯೋ, ನಾವು ಏನು ಮಾಡಿದರೂ ಬರಕತ್ತಾಗುತ್ತಿಲ್ಲ ಕಣ್ರೀ. ನಮ್ಮ ಕೆಪ್ಯಾಸಿಟಿಗೆ ನಾವು ಇರಬೇಕಾದ ಲೆವೆಲ್ಲೇ ಬೇರೆ. ಆದರೇನು? ನಸೀಬು ಕೈ ಕೊಟ್ಟಿರುವುದರಿಂದ ಇದ್ದಲ್ಲೇ ಇದ್ದೇವೆ ಎಂದು ಗೊಣಗಾಡುತ್ತಿರುವವರನ್ನು ನಾವು ನೋಡುತ್ತಿರುತ್ತೇವೆ. ಅಥವಾ ನಾವೇ ಹಾಗೆ ಗೊಣಗುವವರ ಪಟ್ಟಿಯಲ್ಲಿ ದಿವಿನಾಗಿ ಕುಳಿತಿರುತ್ತೇವೆ. ಈ ರೀತಿ ಗೊಣಗಾಡುವವರ ಪೈಕಿ ಬಹುತೇಕ ಜನ ನಿಜಕ್ಕೂ ಕಷ್ಟಪಟ್ಟು ದುಡಿಯುತ್ತಿರುತ್ತಾರೆ. ತಮ್ಮ ಗುರಿಯ ದಾರಿಯಲ್ಲಿ ಶ್ರಮ ಹಾಕುತ್ತಿರುತ್ತಾರೆ. ಒಂದು ಲೆವೆಲ್ಲಿಗೆ ತಲುಪಬೇಕು ಎಂದು ಯೋಚಿಸುತ್ತಲೇ ಇರುತ್ತಾರೆ ಎಂಬುದೆಲ್ಲ ನಿಜವೇ ಇರಬಹುದು. ಆದರೆ ಆಳವಾಗಿ ಗಮನಿಸಿ ನೋಡಿ. ಇಂತಹವರಲ್ಲಿ ಗುರಿ ತಲುಪುವ ಆಸೆ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ವಾಚಾಳಿತನ ಇರುತ್ತದೆ. ಹೀಗಾಗಿ ಇಂತಹವರು ಕಂಡ ಕಂಡವರ ಬಳಿ ಕುಳಿತು ಹಳಹಳಿಸುತ್ತಿರುತ್ತಾರೆ. ಹೀಗೆ ಹಳಹಳಿಸುವುದರಿಂದ ಏನಾಗುತ್ತದೆ ಅಂದರೆ ಒಂದೋ ಜನ ಇಂತಹವರನ್ನು ಅನುಕಂಪದಿಂದ ನೋಡುತ್ತಾರೆ, ಇಲ್ಲವೇ ಅವರು ಅತ್ತ ಕಡೆ ಹೋದ ಕೂಡಲೇ ಹೀಯಾಳಿಸುತ್ತಾರೆ.

ನನ್ನ ಪ್ರಕಾರ ಜೀವನದಲ್ಲಿ ಒಂದು ದೊಡ್ಡ ಯಶಸ್ಸು ಪಡೆಯಬೇಕು, ಒಂದು ಲೆವೆಲ್ಲಿಗೆ ಬರಬೇಕು ಅಂತ ಬಯಸುವವರು ಒಂದು ಅಜ್ಞಾತವಾಸಕ್ಕೆ ಸಿದ್ಧರಾಗಿರಬೇಕು. ಮಹಾಭಾರತದಲ್ಲಿ ಪಾಂಡವರು ಹದಿನಾಲ್ಕು ವರ್ಷಗಳ ವನವಾಸ ಮಾಡುತ್ತಾರಲ್ಲ? ಈ ಪೈಕಿ ಒಂದು ವರ್ಷ ಅಜ್ಞಾತವಾಸ ಮಾಡಬೇಕು ಎಂಬ ಷರತ್ತಿರುತ್ತದೆ. ವಾಸ್ತವವಾಗಿ ಪಾಂಡವರು ಮಾಡಿದ ಹದಿಮೂರು ವರ್ಷಗಳ ವನವಾಸಕ್ಕಿಂತ ಒಂದು ವರ್ಷದ ಅಜ್ಞಾತವಾಸದ ಕಾಲ ಇದೆಯಲ್ಲ ಅದೇ ಅವರನ್ನು ಮಾಗಿಸುತ್ತದೆ. ಅಜ್ಞಾತವಾಸ ಎಂಬುದು ಸೆರೆವಾಸಕ್ಕಿಂತ ಕಷ್ಟಕರವಾದದ್ದು. ಹೀಗಾಗಿ ಪಾಂಡವರು ಈ ಅವಧಿಯಲ್ಲಿ ಎಷ್ಟು ಮಾಗುತ್ತಾರೆ ಎಂದರೆ ಹಸ್ತಿನಾಪುರದಿಂದ ವನವಾಸಕ್ಕೆ ಹೊರಟ ಪಾಂಡವರು ಮರಳಿ ರಾಜ್ಯ ಪಡೆಯುವ ವೇಳೆಗೆ ಎಲ್ಲ ದೃಷ್ಟಿಯಿಂದಲೂ ಪ್ರಬುದ್ಧರಾಗಿರುತ್ತಾರೆ. ಒಂದು ದೇಶವನ್ನಾಳಲು ಅಗತ್ಯವಾದ ಪಕ್ವತೆ ಈ ಅಜ್ಞಾತವಾಸದಿಂದ ಅವರಿಗೆ ಸಿದ್ಧಿಸಿರುತ್ತದೆ. ಯಶಸ್ಸು ಬಯಸುವ ಪ್ರತಿಯೊಬ್ಬ ವ್ಯಕ್ತಿ ಕೂಡ ಇದನ್ನು ಮಾದರಿಯಾಗಿಟ್ಟುಕೊಳ್ಳಬೇಕು.

ಯಾಕೆಂದರೆ ಜೀವನದಲ್ಲಿ ಯಶಸ್ಸು ಎಂಬುದು ಧುತ್ತಂತ ಎದುರಾಗುವುದಿಲ್ಲ. ಸಟ್ಟಾ ವ್ಯಾಪಾರ, ಷೇರು ಖರೀದಿ, ಲಾಟರಿ ಖರೀದಿಯ ಮೂಲಕ ಯಾರಾದರೂ ಕೋಟಿಗಟ್ಟಲೆ ಹಣ ಗಳಿಸಬಹುದು. ಆದರೆ ಅದನ್ನು ಯಶಸ್ಸು ಅಂತ ಪರಿಗಣಿಸಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಮೂವತ್ತು ವರ್ಷದ ಹಿಂದೆ ಕಂಡವರ ಮನೆಯಲ್ಲಿ ಪಾತ್ರೆ-ಪಗಡ ತೊಳೆದು, ಯಾರನ್ನೋ ಹಿಡಿದುಕೊಂಡು ಒಂದು ಗುಡಿಸಲು ಕಟ್ಟಲು ಜಾಗ ಪಡೆದು ಜೀವನ ತಳ್ಳಿದವರ ಮಕ್ಕಳ ಪಾಲಿಗೆ ಇವತ್ತು ಆ ಜಾಗವೇ ಕೋಟಿಗಟ್ಟಲೆ ದುಡ್ಡು ತಂದು ಕೊಡುತ್ತದೆ. ಅದು ಯಶಸ್ಸಲ್ಲ. ಯಾಕೆಂದರೆ ಸ್ವಯಂ ಶಕ್ತಿಯ ಮೇಲೆ ದುಡಿದಿದ್ದು, ನ್ಯಾಯದ ಮಾರ್ಗದಲ್ಲಿ ದುಡಿದಿದ್ದು, ತನ್ನ ಬದುಕಿಗಾಗಿಯಷ್ಟೇ ಅಲ್ಲದೇ ಹತ್ತಾರು ಜನರ ಹಿತಕ್ಕಾಗಿ ಗಳಿಸಿದ ಸಂಪತ್ತು, ಗಳಿಸಿದ ಅಧಿಕಾರಗಳು ಯಶಸ್ಸಿನ ಪಟ್ಟಿಗೆ ಸೇರುತ್ತವೆ.
ಆದರೆ ಇಂತಹ ಯಶಸ್ಸು ಪಡೆಯಲು ಮನುಷ್ಯನಿಗೆ ಒಂದು ಅಜ್ಞಾತವಾಸದ ಅಗತ್ಯ ಇರುತ್ತದೆ.

ಉದಾಹರಣೆಗೆ ತುಂಬ ದೂರ ಹೋಗುವುದು ಬೇಡ. ಕರ್ನಾಟಕದಲ್ಲಿ ಮುಖ್ಯಮಂತ್ರಿಗಳಾದವರ ಪಟ್ಟಿಯನ್ನೇ ತೆಗೆದು ನೋಡಿ. ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ತುಂಬ ವರ್ಷಗಳ ಕಾಲ ವಕೀಲಿಕೆ ಮಾಡಿಕೊಂಡಿದ್ದರು. ತನ್ನ ಕಕ್ಷೀದಾರರಾಗಿ ಬರುವವರು ನ್ಯಾಯದ ನೆಲೆಯಲ್ಲಿ ನಿಂತಿದ್ದರಷ್ಟೇ ಅವರು ಸಂಬಂಧಪಟ್ಟ ಪ್ರಕರಣದ ಕುರಿತು ವಾದಿಸಲು ಒಪ್ಪುತ್ತಿದ್ದರು. ತಪ್ಪು ಮಾಡಿದವರ ಪರವಾಗಿ ವಾದಿಸಲು ಅವರು ಸಿದ್ಧರಾಗಿದ್ದರೆ ಮುಖ್ಯಮಂತ್ರಿ ಗದ್ದುಗೆಗೇರುವ ಮುನ್ನವೇ ಅವರು ವಕೀಲಿಕೆಯಿಂದ ಲಕ್ಷಾಂತರ ರುಪಾಯಿ ಗಳಿಸಬಹುದಿತ್ತು. ಆದರೆ ಗಳಿಸುವ ದುಡ್ಡು ನ್ಯಾಯದ ಮಾರ್ಗದಲ್ಲಿ ಬರಬೇಕೇ ವಿನಾ ಅನ್ಯಾಯದ ಮಾರ್ಗದಲ್ಲಿ ಬರಬಾರದು ಅಂತ ಅವರು ನಂಬಿದ್ದರು. ಇವತ್ತು ಕೆ.ಆರ್.ಸರ್ಕಲ್‌ನಲ್ಲಿರುವ ಕೃಷ್ಣ ರಾಜೇಂದ್ರ ಟೆಕ್ನಲಾಜಿಕಲ್ ಕಾಲೇಜಿನ ಕಟ್ಟಡ ಇದೆಯಲ್ಲ? ಈ ಕಟ್ಟಡ ನಿರ್ಮಿಸುವಾಗ ತುಂಬು ಕುತೂಹಲದಿಂದ ಆ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಗಮನಿಸುತ್ತಾ ನಿಲ್ಲುತ್ತಿದ್ದರು ಕೆಂಗಲ್ ಹನುಮಂತಯ್ಯ.

ಹೀಗೆ ವರ್ಷಾನುಗಟ್ಟಲೆ ಕಾಲ ಅವರು ಇದನ್ನು ಗಮನಿಸುತ್ತಾ, ಕಟ್ಟಡ ನಿರ್ಮಿಸುವ ಇಂಜಿನೀರ್‌ಗಳ ಬಳಿ, ಮೇಸ್ತ್ರಿಗಳ ಬಳಿ, ಕೆಲಸಗಾರರ ಬಳಿ ಚರ್ಚಿಸುತ್ತಿದ್ದರು. ಅವರು ಆ ಕಟ್ಟಡದ ಮುಂದೆ ನಿಂತು ನೋಡುವುದು, ಅಲ್ಲಿದ್ದವರ ಬಗ್ಗೆ ಆ ಕಟ್ಟಡ ನಿರ್ಮಾಣದ ಕುರಿತು ಚರ್ಚಿಸುವುದಕ್ಕೂ, ಅವರು ಮಾಡುವ ವಕೀಲಿ ವೃತ್ತಿಗೂ ಅರ್ಥಾತ್ ಸಂಬಂಧವಿರಲಿಲ್ಲ. ಲಾಭವಿಲ್ಲದೇ ನಾನು ಯಾವ ಕೆಲಸವನ್ನೂ ಮಾಡಬಾರದು ಎಂದು ಅವರಂದುಕೊಂಡಿದ್ದರೆ ಈ ಕಟ್ಟಡ ನಿರ್ಮಾಣದ ಕೆಲಸವನ್ನು ಅವರು ವರ್ಷಾನುಗಟ್ಟಲೆ ಕಾಲ ಪುಕಾ ಪುಗಸಟ್ಟೆಯಾಗಿ ನೋಡುತ್ತಾ ನಿಲ್ಲುತ್ತಿರಲಿಲ್ಲ. ಇದು ಅವರ ಅಜ್ಞಾತವಾಸದ ಕಾಲ. ಆದರೆ ಈ ಅಜ್ಞಾತವಾಸದಲ್ಲಿ ಅವರು ಪಡೆದ ಅನುಭವ ಮುಂದೆ ರಾಜಕೀಯಕ್ಕೆ ಎಂಟ್ರಿ ಪಡೆದ ಮೇಲೆ ಇಡೀ ಕರ್ನಾಟಕ ಹೆಮ್ಮೆ ಪಡುವಂತಹ ವಿಧಾನಸೌಧದ ನಿರ್ಮಾಣಕ್ಕೆ ಮೂಲ ಕಾರಣವಾಯಿತು. ಯಾವ ಕೆ.ಆರ್. ಸರ್ಕಲ್ಲಿನ ಕೃಷ್ಣ ರಾಜೇಂದ್ರ ಟೆಕ್ನಲಾಜಿಕಲ್ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ವರ್ಷಗಟ್ಟಲೆ ಕಾಲ ನಿಂತು ಅವರು ನೋಡಿದ್ದರೋ, ಅದೇ ಅನುಭವವನ್ನು ಬಳಸಿ ಅವರು ವಿಧಾನಸೌಧ ಮೇಲೆದ್ದು ನಿಲ್ಲಲು ಕಾರಣರಾದರು.

ಒಬ್ಬ ಮುಖ್ಯಮಂತ್ರಿ ಮನಸ್ಸು ಮಾಡಿದ್ದರೆ ಮೈಸೂರು ಅರಮನೆ ಥರವೋ, ಇನ್ಯಾವುದೋ ಕಟ್ಟಡದ ಥರವೋ ಭವ್ಯವಾದ ಒಂದು ಕಟ್ಟಡವನ್ನು ನಿರ್ಮಿಸಲು ಮಂಜೂರಾತಿ ನೀಡಿ ಸುಮ್ಮನೆ ಕೂರಬಹುದಿತ್ತು. ಆದರೆ ಕೆಂಗಲ್ ಹನುಮಂತಯ್ಯ ಹಾಗೆ ಮಾಡಲಿಲ್ಲ. ನಮಗೆ ಬೇಕಿರುವುದು ರಾಜಪ್ರಭುತ್ವವನ್ನು ನೆನಪಿಸುವ ಕಟ್ಟಡವಲ್ಲ, ಪ್ರಜಾಪ್ರಭುತ್ವದ ಆದರ್ಶವನ್ನು ಎತ್ತಿ ಹಿಡಿಯುವ ಕಟ್ಟಡ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು. ತಾವೇ ಮುಂದೆ ನಿಂತು ವಿಧಾನಸೌಧವನ್ನು ಕಟ್ಟಿಸಿದರು. ಹೀಗೆ ತಾವೇ ನಿಂತು ಕಟ್ಟಿಸಿದ ವಿಧಾನಸೌಧದಲ್ಲಿ ಅವರು ಮುಖ್ಯಮಂತ್ರಿಯಾಗಿ ಕೂರಲಿಲ್ಲ ಎಂಬುದೇನೋ ನಿಜ. ಆದರೆ ಇವತ್ತು ವಿಧಾನಸೌಧ ಎಂದ ಕೂಡಲೇ, ಆ ಕಟ್ಟಡದ ನೆನಪು ಬಂದ ಕೂಡಲೇ ನಮ್ಮ ಮನಸ್ಸಿನಲ್ಲಿ ಕೂರುವುದು ಕೆಂಗಲ್ ಹನುಮಂತಯ್ಯ ಅವರೇ ಹೊರತು ಬೇರ‍್ಯಾರೂ ಅಲ್ಲ.

ತೀರಾ ದೂರ ಹೋಗುವುದು ಬೇಡ. ಇತ್ತೀಚಿನ ಉದಾಹರಣೆಗಳನ್ನೇ ತೆಗೆದುಕೊಳ್ಳಿ. ಎಂಭತ್ತೊಂಭತ್ತರಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆದರಲ್ಲ? ಹೀಗೆ ಮುಖ್ಯಮಂತ್ರಿ ಗದ್ದುಗೆಯ ಮೇಲೆ ಬಂದು ಕೂರುವ ಮುನ್ನ ಅವರು ಅನುಭವಿಸಿದ ಅಜ್ಞಾತವಾಸ ಅಂತಿಂಥದ್ದಲ್ಲ. ಎಷ್ಟೋ ಮಂದಿ ವೀರೇಂದ್ರ ಪಾಟೀಲರ ರಾಜಕೀಯ ಬದುಕು ಇನ್ನು ಮುಗಿದು ಹೋಯಿತು ಅನ್ನುತ್ತಿದ್ದರು. ಯಾಕೆಂದರೆ ೧೯೬೯ರಲ್ಲೇ ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕೂತು ಹೋದವರು ಅವರು. ಅಂತಹವರು ಇಪ್ಪತ್ತು ವರ್ಷಗಳಷ್ಟು ಸುದೀರ್ಘ ಕಾಲದ ನಂತರ ಮತ್ತೆ ಆ ಗದ್ದುಗೆಯ ಮೇಲೆ ಬಂದು ಕೂರುವುದು ಎಂದರೆ ಅದೇನು ಸಾಮಾನ್ಯದ ಮಾತೇ? ಅರ್ಥಾತ್, ಒಂದು ದೊಡ್ಡ ಮಟ್ಟದ ಅಜ್ಞಾತವಾಸ ವೀರೇಂದ್ರ ಪಾಟೀಲರನ್ನು ಮತ್ತಷ್ಟು ಪಕ್ವಗೊಳಿಸಿತ್ತು. ಮುಖ್ಯಮಂತ್ರಿ ಗದ್ದುಗೆಯ ಮೇಲೆ ಬಂದು ಕೂತು ಯಶಸ್ವಿ ಆಡಳಿತ ನೀಡಲು ಕಾರಣವಾಯಿತು.

೧೯೬೯ರಲ್ಲಿ ಮುಖ್ಯಮಂತ್ರಿಯಾಗಿ ಅವರು ಸಾಧಿಸಿದ್ದೇನು ಅನ್ನುವುದು ಇವತ್ತಿಗೂ ತುಂಬ ಜನರಿಗೆ ಗೊತ್ತಿಲ್ಲ. ಆದರೆ ಇಪ್ಪತ್ತು ವರ್ಷಗಳ ತರುವಾಯ ಮುಖ್ಯಮಂತ್ರಿ ಹುದ್ದೆಯ ಮೇಲೆ ಬಂದು ಕೂತರಲ್ಲ? ಆಗ ಮೊಟ್ಟ ಮೊದಲ ಬಾರಿ ಲಿಕ್ಕರ್ ಡಾನುಗಳನ್ನು ಬಗ್ಗು ಬಡಿದು ಸರ್ಕಾರದ ಬೊಕ್ಕಸ ತುಂಬಿಸಿದ ಅವರ ಸಾಧನೆ ಮಾತ್ರ ಚಿರಸ್ಮರಣೀಯ. ಈ ರೀತಿ ಲಿಕ್ಕರ್ ಡಾನುಗಳನ್ನು ಬಗ್ಗು ಬಡಿದ ಮೊಟ್ಟ ಮೊದಲ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್. ಹೀಗೆ ನೋಡುತ್ತಾ ಹೋದರೆ ಬಂಗಾರಪ್ಪ, ದೇವೆಗೌಡ, ಎಸ್ಸೆಂ ಕೃಷ್ಣ ಅವರೆಲ್ಲ ಒಂದು ದೊಡ್ಡ ಮಟ್ಟದ ಅಜ್ಞಾತವಾಸವನ್ನು ಅನುಭವಿಸಿದ ನಂತರವೇ ಸಿಎಂ ಗದ್ದುಗೆಯ ಮೇಲೆ ಬಂದು ಕೂತವರು. ಆ ಪೈಕಿ ದೇವೆಗೌಡರ ಅಜ್ಞಾತವಾಸ ಅತ್ಯಂತ ಸುದೀರ್ಘವಾದದ್ದು. ಆದರೆ ಇಷ್ಟು ಸುದೀರ್ಘ ಅವಧಿಯ ಅಜ್ಞಾತವಾಸದ ಪರಿಣಾಮವಾಗಿ ಅವರು ಕರ್ನಾಟಕದ ಗಡಿ ಮೀರಿ ದೆಹಲಿಯ ಎತ್ತರಕ್ಕೆ ತಲುಪಿದರು. ಪ್ರಧಾನಿ ಹುದ್ದೆಯಲ್ಲಿ ಕುಳಿತು ರಾಜ್ಯಕ್ಕೆ ಗೌರವ ತಂದರು. ಇದನ್ನು ಕೇವಲ ರಾಜಕೀಯ ಕ್ಷೇತ್ರಕ್ಕೆ ಮಾತ್ರ ಅನ್ವಯಿಸಿ ನೋಡಬೇಕಿಲ್ಲ. ಬದುಕಿನ ಯಾವ ರಂಗವೇ ಇರಬಹುದು. ಅಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದವರ ಇತಿಹಾಸ ಗಮನಿಸಿದರೆ ಅದರ ಹಿಂದೆ ಅಜ್ಞಾತವಾಸದ ಒಂದು ಇತಿಹಾಸ ಇರುತ್ತದೆ.

ಇವತ್ತು ರಿಲಯನ್ಸ್ ಗ್ರೂಫ್‌ನ ಮುಖೇಶ್ ಅಂಬಾನಿ, ಅನಿಲ್ ಅಂಬಾನಿಗಳ ಯಶಸ್ಸು ನಿಮಗೆ ದೊಡ್ಡ ಮಟ್ಟದಲ್ಲಿ ಕಾಣಬಹುದು. ಆದರೆ ಅದರ ಹಿಂದೆ ಅವರ ತಂದೆ ಧೀರೂಭಾಯಿ ಅಂಬಾನಿ ಅನುಭವಿಸಿದ ಅಜ್ಞಾತವಾಸದ ಶಕ್ತಿ ಇದೆ ಎಂಬುದನ್ನು ಮರೆಯಬಾರದು. ಅದಕ್ಕೇ ಹೇಳುವುದು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ಯಶಸ್ಸಿನ ಎತ್ತರಕ್ಕೆ ತಲುಪಬೇಕು ಎಂದು ಬಯಸುವವರು ಒಂದು ಅಜ್ಞಾತವಾಸಕ್ಕೆ ಅಣಿಯಾಗಲೇಬೇಕು. ಮತ್ತು ಈ ಅಜ್ಞಾತವಾಸ ಎಂಬುದು ಅವರನ್ನು ಮಾಗಿಸುವ ಕ್ರಿಯೆಗೆ ವೇದಿಕೆಯಾಗಿರಬೇಕು. ಅಜ್ಞಾತವಾಸ ಅಂದ ಕೂಡಲೇ ತಣ್ಣಗೆ ನಾಲ್ಕು ವರ್ಷ ಮನೆಯಲ್ಲಿ ಮಲಗಿಕೊಂಡು ಹೊರಬರುವುದಲ್ಲ. ನಮ್ಮನ್ನು ನಾವು ಮಾಗಿಸಿಕೊಳ್ಳುವ, ನಮ್ಮ ಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಬಳಸುವ ಕ್ರಿಯೆ. ಇದನ್ನು ಅರ್ಥ ಮಾಡಿಕೊಳ್ಳದವರು ಗೊಣಗುತ್ತಾರೆ. ಗೊಣಗುತ್ತಲೇ ಇರುತ್ತಾರೆ. ಅಂತಹವರ ಪಟ್ಟಿಗೆ ನೀವು ಸೇರಬೇಡಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 22 November, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books