Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಭಯವೆಂಬ ಬೃಹತ್ ಚೀಜು ಎಂಥ ಅದ್ಭುತದ ಸಂಗತಿಯಲ್ಲವೇ?


“ಹಾಗೇನಿಲ್ಲ;
ನಿನ್ನ ಪ್ರೀತಿಯೊಂದೇ ನನಗೆ ಮೀಸಲಾಗಿರಬೇಕಿಲ್ಲ
ನಿನ್ನ ಸಿಟ್ಟು ಸೆಡವು ಶಾಪ ತಾಪಗಳೆಲ್ಲ
ನನಗೇ ಇರಲಿ
ಶಾಪಗ್ರಸ್ತನೆಂಬ ಹೆಮ್ಮೆಯಾದರೂ ನನಗೊಬ್ಬನಿಗೇ
ಇರಲಿ! ಮಾರಾಯ್ತೀ....
ನನಗೊಬ್ಬನಿಗೇ!"

ಎದುರಿಗಿದ್ದಿದ್ದರೆ ಸುಕ್ಕು ಬಿದ್ದ ಕೆನ್ನೆಗೊಂದು ಹೂ ಮುತ್ತು ಕೊಟ್ಟು ಶರಾಬಿನಂಗಡಿಯವನಿಗೆ ಸಾಲ ಹೇಳಿ ತೂರಾಡುವ ಗಾಲಿಬ್‌ನನ್ನು ಅವನ ಮನೆಯಂಗಳದ ತನಕ ಕರೆದೊಯ್ದು, ಜಗುಲಿಯ ಮೇಲೆ ಕೂಡಿಸಿ, ಅವನ ಇನ್ನೊಂದು ಇಂಥ ಕವಿತೆಗಾಗಿ ಕೈ ಕೈ ಹಚ್ಚಿಕೊಂಡು ಕಾಯುತ್ತಾ ಕುಳಿತುಬಿಡುತ್ತಿದ್ದೆ.

ಅಂದುಕೊಂಡು ಪ್ರಯೋಜನವಿಲ್ಲ. ಗಾಲಿಬ್ ಸತ್ತು ಹೋಗಿಯೇ ನೂರಾ ನಲವತ್ನಾಲ್ಕು ವರ್ಷಗಳಾಗಿ ಹೋದವು. ಅವನ ಕವಿತೆಗಳು ಸತ್ತಿಲ್ಲ. ಬರೆಯಲು ಕುಳಿತಾಗಿನ ಅವನ confidence ಸತ್ತಿಲ್ಲ. ಗಾಲಿಬ್‌ನೊಂದಿಗೆ ಅವನ ನೋವು ಸಾಯಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆತ ತನ್ನೆಲ್ಲ ನಿರಾಸೆಯ ನಡುವೆಯೂ ಉಳಿಸಿ ಹೋದ ಒಂದು ಸಾಂಕ್ರಾಮಿಕ ಆಶಾಭಾವ ಸತ್ತಿಲ್ಲ. ಇವತ್ತೇಕೋ ಎದ್ದ ಕ್ಷಣದಿಂದಲೂ ಗಾಲಿಬ್ ನನ್ನನ್ನು ಬೇಟೆಯಾಡುತ್ತಿದ್ದಾನೆ. ಆತನ ಬಗ್ಗೆ ತುಂಬ ವಿವರವಾದ ಲೇಖನವನ್ನು ಬರೆಯಲಿಕ್ಕೆಂದೇ ನೋಟ್ಸ್ ಮಾಡಿಕೊಂಡು, ಈ ಖಾಸ್‌ಬಾತ್ ಎಂಬ ಪ್ರಸವ ವೇದನೆಗೆ ಅಣಿಯಾಗಿದ್ದೇನೆ.

ಬಹುತ್ ಬೇ ಆಬರೂ ಹೋಕರ್
ತೇರೇ ಕೂಚೇ ಸೆ ಹಮ್ ನಿಕಲೆ...
ಬಹುತ್ ನಿಕಲೇ ಮೇರೇ ಅರ್‌ಮಾನ್
ಲೇಕಿನ್ ಫಿರ್ ಬಿ ಕಮ್ ನಿಕಲೇ...

“ಒಂದ್ನಿಮಿಷ, ಬೇ-ಆಬರೂ ಅಂದ್ರೆ ಏನೂಂತ ಹೇಳಿ ಹೋಗಿಬಿಡಿ. ಮೂರು ದಿನದಿಂದ ಕೇಳಬೇಕು ಅಂದ್ಕೋತಿದ್ದೆ, ಮರೆತೇ ಹೋಗ್ತಿತ್ತು" ಕಾರಿನ ಸ್ಟೀರಿಯೋದಲ್ಲಿದ್ದ ಜಗಜಿತ್‌ಸಿಂಗ್‌ನ ಗಝಲಿಗೆ ಅರ್ಥ ಕೇಳಿ ಕಾರಿಗೆ ಅಡ್ಡ ನಿಂತ ಮಗಳಿಗೆ, ಲಕ್ಷಾಂತರ ಆಸೆಗಳ ಪ್ರೇಮಿಯೊಬ್ಬ ತನ್ನ ಗೆಳತಿಯ ಅಂಗಳದಿಂದ ಅವಮಾನಿತವಾಗಿ ಹೊರಬೀಳುವ ಯಾತನಾದಾಯಕ ವಿವರಗಳನ್ನೆಲ್ಲ ವಿವರಿಸಿ ಹೇಳಲಾಗದೆ ಅವಳು ಕೇಳಿದ್ದೊಂದು ಪದಕ್ಕಷ್ಟೇ ಅರ್ಥ ಹೇಳಿ ಆಫೀಸಿಗೆ ಬಂದುಬಿಟ್ಟೆ. ಹೀಗೆ, ಬರೆಯಲೇಬೇಕೆಂಬ ಉತ್ಕಟತೆ ತೀವ್ರವಾದ ದಿನಗಳಂದು, ನಾನು ಬೆಳಗಿನ ಮೊದಲ ಕಿರಣ ನೆಲಕ್ಕೆ ಬೀಳುವ ಹೊತ್ತಿಗೆಲ್ಲ ಆಫೀಸಿನಲ್ಲಿರುತ್ತೇನೆ. ಹೊರಡುವ ಘಳಿಗೆಗೆ ಸರಿಯಾಗಿ ಅದೆಲ್ಲಿದ್ದರೂ ಮಗಳು ಅಂಗಳಕ್ಕೆ ಬಂದು ನಿಲ್ಲುತ್ತಾಳೆ, ಅವರಮ್ಮನೊಂದಿಗೆ.


ನನ್ನ ವಿಲಕ್ಷಣ ಬದುಕು, ಈ ಚೇತನಾ ಎಂಬ ಅಗಂತುಕಳನ್ನು ನನಗೆ ಪರಿಚಯ ಮಾಡಿಸಿ ಮೂವತ್ಮೂರೂವರೆ ವರ್ಷಗಳೇ ಆಗಿಹೋಗಿವೆ. ಎಷ್ಟಿದ್ದಳು ಇವಳು? ಒಂದು ಮೊಳದುದ್ದ. ಪುಟ್ಟ ಕೈಕಾಲು, ಪುಟಾಣಿ ಬೆರಳು, ನಕ್ಷತ್ರದಂತಹ ಕಣ್ಣು, ಇಷ್ಟಿಷ್ಟೇ ಪಾದ... ಥೇಟು ನಿನ್ನ ಹಾಗೇ ಇದ್ದಾಳಯ್ಯಾ ಅಂತ ಅಮ್ಮ ಉದ್ಗರಿಸಿದಾಗ ನನಗೆ ಕೇವಲ ಇಪ್ಪತ್ತೆರಡು ವರ್ಷ! ಅವತ್ತು mostly ಬುಧವಾರವಾಗಿತ್ತು. ಇಳಿಮಧ್ಯಾಹ್ನ ನಾಲ್ಕು ಗಂಟೆಗೆ, ನಾನು ಕುಕ್ಕರಗಾಲಿನಲ್ಲಿ ಕುಳಿತು, ಎಮ್ಮೆಯ ಕೆಚ್ಚಲು ತೊಳೆದು, ಕರು ಬಿಟ್ಟು, ಕರು ಕಟ್ಟಿ ಹಾಲು ಕರೆಯುತ್ತಿದ್ದೆ. ಒಂದಲ್ಲ, ನಾಲ್ಕಿದ್ದವು ಎಮ್ಮೆ. ಶುದ್ಧ ಗೌಳಿಯಂತೆ ಹಾಲು ಮಾರಿಕೊಂಡು ಜೀವಿಸುತ್ತಿದ್ದೆ. ಇತಿಹಾಸದಲ್ಲಿ ಎಂ.ಎ ಮುಗಿಸಿ, ಎಲ್ಲೂ ನೌಕರಿ ಸಿಗದೆ ಗುಲಬರ್ಗಾದ ಕಾಲೇಜೊಂದರಲ್ಲಿ ನೌಕರಿಗೆ ಅರ್ಜಿ ಹಾಕಿದಾಗ, ‘ಡೊನೇಶನ್ ಕೊಡಲಿಕ್ಕಾಗದ ಮೇಲೆ ಯಾಕ್ ಸುಮ್ನೆ ಇಂಟರ್‌ವ್ಯೂಗೆ ಬರ‍್ತೀರಿ? ಎಲ್ಲಾದ್ರೂ ದನ ಕಾಯಲಿಕ್ಕೆ ಹೋಗಿ!’ ಅಂತ ಇದೇ ಮಲ್ಲಿಕಾರ್ಜುನ ಖರ್ಗೆ ಕೈಲಿ ಬೈಸಿಕೊಂಡು ಬಂದವನು, ನೆಟ್ಟಗೆ ಹೋಗಿ ಮಜಬೂತಾದ ಎಮ್ಮೆ ತಂದು ಮನೆಯಲ್ಲಿ ಕಟ್ಟಿಕೊಂಡಿದ್ದೆನಲ್ಲ?

ಹಾಗೆ ನಾನು ಶುಭ ಬುಧವಾರದಂದು(?)ಮಧ್ಯಾಹ್ನ ಎಮ್ಮೆಯ ಒಡಲಿನಿಂದ ಅಲ್ಯೂಮಿನಿಯಂ ಪಾತ್ರೆಗೆ ಹಾಲಿನ ಧಾರೆ ಬಸಿದುಕೊಳ್ಳುತ್ತಿದ್ದ ಕ್ಷಣಗಳಲ್ಲೇ ನನ್ನ ಲಲಿತೆಯ ತಮ್ಮ ಅನಂತ ಓಡಿ ಬಂದು, “ರವೀ, ನಿಮಗೆ ಹೆಣ್ಣು ಮಗು!" ಅಂತ ಘೋಷಿಸಿದ್ದ. ಹಾಲಿನದೊಂದು ಧಾರೆ ಬೆರಳು ತೋಯಿಸಿತ್ತು.

ಎಣಿಸಿದರೆ ಇಪ್ಪತ್ತೆರಡು ವರ್ಷಗಳಿಲ್ಲ. ಆಗಲೇ ತಂದೆಯಾಗಿದ್ದೆ. ಅದೇ ಒಂದು ಸಂತೋಷ. ಅಮ್ಮನ ನಂತರ, ಅಂದರೆ ಅರವತ್ತು ವರ್ಷಗಳ ನಂತರ ನಮ್ಮ ಮನೆಯಲ್ಲೊಂದು ಹೆಣ್ಣು ಜೀವ ಕಣ್ಣು ಬಿಟ್ಟಿತ್ತು. ಪ್ಯಾಂಟೇರಿಸಿಕೊಂಡು ಮಿಂಚಿನಂತೆ ಆಸ್ಪತ್ರೆಗೆ ಹೋದವನ ಕೈಗೆ ಈ ಅಪರಿಚಿತ ಜೀವಿಯನ್ನಿಟ್ಟು, “ನಿನ್ನ ಮಗಳು!" ಅಂದಿದ್ದರು. ಅವಳನ್ನು ಮೊದಲು ಎತ್ತಿಕೊಂಡವನೇ ನಾನು. ಇವತ್ತು ಗಾಲಿಬ್‌ನ ಗಝಲಿಗೆ ಅರ್ಥ ಕೇಳುವಷ್ಟಾಗಿದ್ದಾಳೆ.

ಮೂವತ್ಮೂರೂವರೆ ವರ್ಷದ ಹಿಂದೆ ಎಲ್ಲಿದ್ದಳು?
ಎಲ್ಲಿದ್ದಳೋ ಯಾರಿಗೆ ಗೊತ್ತು? ನನ್ನ ಇಪ್ಪತ್ತೆರಡರ ಕಸುವು, ಕನಸು, ಕನವರಿಕೆ, ಆಸೆ, ಆಶೋತ್ತರಗಳ ನಡುವೆ ಅದೆಲ್ಲಿಂದ ಎದ್ದು ಬಂದಳೋ? ಅವತ್ತಿಗೆ ನಾನೇ ಚಿಕ್ಕ ಹುಡುಗ. ಇಪ್ಪತ್ತೆರಡರಲ್ಲಿ ಹುಡುಗರಿನ್ನೂ ಕನಸಿನ ದೀಪ ಹಚ್ಚಿಟ್ಟುಕೊಂಡಿರುತ್ತಾರೆ. ಎಲ್ಲಿಡಲಿ, ಎಲ್ಲಿ ಬಿಡಲಿ ಎಂಬಂತಹ ನಿಗಿನಿಗಿ ತಾರುಣ್ಯಕ್ಕೆ ಯಾವತ್ತಿಗೊಂದು outlet ಸಿಕ್ಕೀತೋ ಎಂದು ಹಂಬಲಿಸುತ್ತಿರುತ್ತಾರೆ. ಯಾವುದೋ ಜೋಡಿ ಸೊಂಟ ತಬ್ಬಿಕೊಂಡು ಮೊಬೈಕಿನ ಸದ್ದುಗಳ ನಡುವೆ ಪಿಸು ಮಾತಾಡುತ್ತಾ ರಸ್ತೆ ಸವೆಸುತ್ತಿದ್ದರೆ, ನಮಗ್ಯಾವತ್ತು ಈ ಭಾಗ್ಯ ಅಂತ ಕನವರಿಸುತ್ತಿರುತ್ತಾರೆ. ಜಗತ್ತು ತಾವಂದುಕೊಂಡಷ್ಟು ಒಳ್ಳೆಯದಿಲ್ಲವೆಂದೂ, ಫೈನಲ್ ಬಿಎಗಿಂತ ಸೆಕೆಂಡ್ ಪಿಯೂಸಿಯ ದಿನಗಳೇ ಚೆನ್ನಾಗಿದ್ದವೆಂದೂ, ಕಾಲೇಜೆಂಬ ಕಾಲೇಜು ಮುಗಿದೇ ಹೋಯಿತಲ್ಲ ಎಂದೂ ಆತಂಕಗೊಳ್ಳುತ್ತಿರುತ್ತಾರೆ. ಇಂಥ ಇಪ್ಪತ್ತೆರಡರ ಬೇಜವಾಬ್ದಾರಿಯ ಹರೆಯ, ನನ್ನ ಮಟ್ಟಿಗೆ ಒಡಲಿಗೊಂದು ಮಗುವನ್ನು ಹಾಕಿ be a good boy ಅನ್ನುವ ಬದಲು be a good father ಅಂತ ಗದರಿಕೊಂಡಿತ್ತು.

ಅದನ್ನು ಅತ್ಯಂತ ಪ್ರೀತಿಯಿಂದಲೇ ಒಪ್ಪಿಕೊಂಡೆ. Good father ಆದೆನೋ ಇಲ್ಲವೋ ಕಾಣೆ. ನನ್ನ ಮಗಳಿಗೊಬ್ಬ ಒಳ್ಳೆಯ boy friend ಅಂತೂ ಆದೆ. ನಿಜ ಹೇಳಬೇಕೆಂದರೆ, ಇಪ್ಪತ್ತೆರಡರಲ್ಲಿ ನನಗೆ ಮತ್ತೆ ಬಾಲ್ಯ ಮರುಕಳಿಸಿದಂತಾಗಿತ್ತು. ನೀವು ಬೇಕಾದರೆ observe ಮಾಡಿ ನೋಡಿ; ತುಂಬ ವರ್ಷಗಳ ಗ್ಯಾಪ್‌ನ ನಂತರ ಒಂದು ಮನೆಯಲ್ಲಿ ಮಗುವಿನ ಆಗಮನವಾಯಿತೆಂದರೆ ಆ ಮನೆಯವರೆಲ್ಲರ ವರ್ತನೆಯೇ ಬದಲಾಗಿ ಬಿಟ್ಟಿರುತ್ತದೆ. ಅವರ ಮಾತು, ನಡೆದಾಡುವ ರೀತಿ, ಅಭ್ಯಾಸಗಳು-ಎಲ್ಲದರಲ್ಲೂ ಅನುದ್ದೇಶಿತ ಬದಲಾವಣೆಗಳು ಬಂದು ಬಿಟ್ಟಿರುತ್ತವೆ. ಪುಟ್ಟ ಕೋತಿಮರಿ ಗಾತ್ರದ ಕೂಸು, ಆರಡಿ ಮನುಷ್ಯನನ್ನು ಮಗುವನ್ನಾಗಿ ಮಾಡಿ ಬಿಟ್ಟಿರುತ್ತದೆ.

ನನ್ನಲ್ಲಿ ಆದದ್ದೇ ಅದು.

ನಿಜ ಹೇಳಬೇಕೆಂದರೆ, ನಾನು bold ಆದದ್ದು ಪತ್ರಿಕೋದ್ಯಮಕ್ಕೆ ಬಂದ ಮೇಲಲ್ಲ. ನಕ್ಸಲೀಯರೊಡನೆ ಓಡಾಡಿದ ಮೇಲಲ್ಲ. ಮಾರ್ಕ್ಸ್ ಸಿದ್ಧಾಂತ ಓದಿದ ಮೇಲಲ್ಲ.

ಚೇತನಾ ಹುಟ್ಟಿದ ಮೇಲೆ!

ಅವಳಿಗೆ ನೋವಾಗಬಾರದು, ಅವಳಿಗೆ ಹಸಿವಾಗಬಾರದು, ಕಷ್ಟ ಗೊತ್ತಾಗಬಾರದು, ಅವಳು ಫೇಲಾಗಬಾರದು-ಉಹುಂ ನಾನ್ಯಾವತ್ತೂ ಹಾಗೆ ಯೋಚಿಸಲಿಲ್ಲ. ಮುಖ್ಯವಾಗಿ ನನಗೆ ಅನಿಸುತ್ತಿದ್ದ್ದುದೆಂದರೆ,

ಅವಳಿಗೆ ಭಯವಾಗಬಾರದು!

ಒಂದಲ್ಲ, ನೂರು ದಿಗಿಲುಗಳ ಮಧ್ಯೆಯೇ ಬೆಳೆದ ಇಪ್ಪತ್ತೆರಡು ವರ್ಷದ ಹುಡುಗನಿಗೆ ತನ್ನ ಮಗಳಿಗೊಂದು ಅತ್ಯಂತ comfortable ಬಾಲ್ಯವನ್ನು ಕೊಡಬೇಕು ಎಂಬುದಕ್ಕಿಂತ ಅವಳಿಗೊಂದು ದಿಗಿಲುಗಳಿಲ್ಲದ ಬಾಲ್ಯ ದೊರಕಿಸಿಕೊಡಬೇಕು ಎಂಬುದೇ priorityಯಾಗಿ ಹೋಗುತ್ತದೆ. ಬಾಲ್ಯದಲ್ಲಿ ನನ್ನನ್ನು ಕಾಡಿದ ಯಾವ ದಿಗಿಲೂ ಅವಳನ್ನು ಕಾಡದಿರಲಿ ಎಂಬುದು ನನ್ನ ನಿರ್ಧಾರವಾಗಿಬಿಟ್ಟಿತ್ತು. ದುಡಿಯಲು ಹೋದ ಅಮ್ಮ ವಾಪಾಸು ಬರುತ್ತಾಳೋ ಇಲ್ಲವೋ ಎಂಬ ಭಯ, ಬರುವ ಹೊತ್ತಿಗೆ ಅವಳಿಗೇನಾಗಿರುತ್ತದೋ ಎಂಬ ದಿಗಿಲು, ಮನೆಯಲ್ಲಿ ಒಬ್ಬಂಟಿಯಾಗಿರುವ ಹೆದರಿಕೆ, ಪಕ್ಕದ ಮನೆಯವರು ಏನೆಂದುಬಿಡುತ್ತಾರೋ ಎಂಬ ಅಳುಕು, ಆಟಕ್ಕೆ ಹೋದರೆ ಸೇರಿಸಿಕೊಳ್ಳುತ್ತಾರೋ ಇಲ್ಲವೋ ಎಂಬ ಅನುಮಾನ-ಉಹುಂ ಚೇತನಾಳನ್ನು ಇವ್ಯಾವೂ ಕಾಡಬಾರದು. ಅವಳು ನನ್ನ ಮಗಳು. ಅವಳಿಗೆಂಥ ಹೆದರಿಕೆ? ಅವಳೊಂದಿಗೆ ನಾನಿದ್ದೇನೆ. ನಾನೆಂದರೆ ಏನು ಸುಮ್ಮನಾಯಿತೇ? ನಾನೆಂದರೆ... ರವಿ ಬೆಳಗೆರೆ!

ರವಿ ಬೆಳಗೆರೆ ಎಂದರೆ?

ನಗು ಬಂದದ್ದೇ ಆಗ. ಆ ದಿನಗಳಲ್ಲಿ ನಾನೇ ಒಬ್ಬ ಅಬ್ಬೇಪಾರಿ. ಸಾವಿರ ಭಯಗಳ ಸಂಕಲನ. ನೌಕರಿ ಸಿಗಲಿಕ್ಕಿಲ್ಲ. ಸಂತೋಷ ಮರಳಲಿಕ್ಕಿಲ್ಲ. ಒಳ್ಳೆಯ ದಿನಗಳೇ ಬರಲಿಕ್ಕಿಲ್ಲ-ಮುಂತಾದ ನಿರಾಸೆಗಳ ಮಧ್ಯೆ ಪತರಗುಟ್ಟುತ್ತ ಬದುಕುತ್ತಿದ್ದ ಇಪ್ಪತ್ತೆರಡರ ಅರ್ಭಕ. ನನ್ನಲ್ಲೇ ಧೈರ್ಯವಿಲ್ಲ. ನನ್ನ ಮಗಳಿಗೆಂತಹ protected ಬಾಲ್ಯವನ್ನು ಕೊಡಬಲ್ಲೆ? ಅವಳೆದುರು ನಿಂತು ‘ಅಪ್ಪನೆಂದರೆ ಸರ್ವಶಕ್ತನಾದ ಮನುಷ್ಯ ಕಣೇ’ ಅಂತ ಹ್ಯಾಗೆ ನಿರೂಪಿಸಬಲ್ಲೆ?

ಜೀವನದಲ್ಲಿ ಎರಡನೆಯ ಬಾರಿಗೆ ನಾನು ಭಯಗಳ ಬಗ್ಗೆ ಯೋಚಿಸತೊಡಗಿದ್ದೆ. ಭಯಗಳೂ ಕೂಡ ಎಷ್ಟು ನಮೂನೆಯವಲ್ಲವೇ? ನಮ್ಮ ಪ್ರತಿನಿತ್ಯದ ಸಡಗರ, ಸಂಭ್ರಮ, ಹೊಟ್ಟೆಪಾಡು, ಆಸೆಗಳು, ಕಾಮನೆ, ಸಿಟಿ ಬಸ್ಸು, ಕೈ ಸಾಲ, ಉನ್ಮಾದ, ಮೈಮರೆವು, ನಿರಾಸೆ, ನಿರೀಕ್ಷೆ, ಸೋಮಾರಿತನ, ಡಿಪ್ರೆಷನ್ನು-ಇವೆಲ್ಲವುಗಳ ನಡುವೆಯೇ ಯಾವುದೋ ಮಾಯೆಯಲ್ಲಿ ಬಂದು ನಮಗೇ ಗೊತ್ತಿಲ್ಲದೆ ನಮ್ಮ ಬೆನ್ನು ಮೂಳೆಯ ಅಡಿಯಲ್ಲಿ ಸ್ಥಾಪಿತಗೊಂಡು ತೀರ ಅನಿರೀಕ್ಷಿತವಾಗಿ ದೇಹದ ಪ್ರತಿ ಎಮಿಕೆಯಲ್ಲೂ ತನ್ನ ಮಿಂಚು ಮೂಡಿಸಿಬಿಡಬಲ್ಲ ಭಯವೆಂಬ ಬೃಹತ್ ಚೀಜು ಎಂಥ ಅದ್ಭುತದ ಸಂಗತಿಯಲ್ಲವೇ? ಜಗತ್ತನ್ನೇ ಗೆಲ್ಲಲು ಹೊರಟ ಬೋನಪಾರ್ಟೆ ನೆಪೋಲಿಯನ್ನನಿಗೆ, ಹಿಟ್ಲರ್ ಅಡೋಲ್ಫನಿಗೆ, ಅಲೆಗ್ಝಾಂಡರನೆಂಬ ಜಗದೇಕ ವೀರನಿಗೆ, ಗುಜ್ರಾಲ್ ಇಂದ್ರಕುಮಾರನಿಗೆ, ಪಟೇಲ್ ಜಯದೇವನಿಗೆ, ಪೊಲೀಸ್ ಆಫೀಸರನಿಗೆ, ಇಬ್ರಾಹಿಂ ದಾವೂದನಿಗೆ, ನಿಮಗೆ, ನಿಮ್ಮೆದುರು ಕುಳಿತ ನನಗೆ....

ಎಷ್ಟೊಂದು ಭಯಗಳಿವೆಯಲ್ಲವೆ?

ದೊಡ್ಡವರಿಗೆ ದೊಡ್ಡ ಭಯ. ಸಣ್ಣವರಿಗೆ ಸಣ್ಣ ಭಯ. ಚಿಕ್ಕವರಿಗೆ ದೊಡ್ಡವರ ಭಯ. ದೊಡ್ಡವರಿಗೆ ದೇವರ ಭಯ. ಹೆಂಗಸಿಗೆ ಗಂಡಸಿನ ಭಯ. ಗಂಡಸಿಗೆ ತನ್ನ ಭಯಗಳೆಲ್ಲ ಹೆಂಡತಿಗೆ ಗೊತ್ತಾದಾವೆಂಬ ಭಯ. ಹುಡುಗನಿಗೆ ಸ್ವಪ್ನ ಸ್ಖಲನದ ಭಯ. ವಯಸ್ಕನಿಗೆ ಶೀಘ್ರಸ್ಖಲನದ ಭಯ. ಅವನಿಗೆ ಫೇಲಾಗುವ ಭಯ. ಇವಳಿಗೆ ಮುಟ್ಟು ಲೇಟಾಗಿರುವ ಭಯ. ಸರ್ಕಸ್ಸಿನ ಹುಡುಗಿಯ ಕಾಲು ಜಾರೀತೆಂಬುದು ಪ್ರೇಕ್ಷಕರ ಭಯ. ಅವರಿಗೆ ಭಯವೇ ಆಗದಿದ್ದರೆ ಏನು ಗತಿಯೆಂಬುದು ಸರ್ಕಸ್ ಮಾಲೀಕನ ಭಯ. ಇನ್‌ಕಮ್ ಇದ್ದವನಿಗೆ ಟ್ಯಾಕ್ಸಿನ ಭಯ. ಅದು ಕಮ್ಮಿಯಿದ್ದವನಿಗೆ ಊಟದ ಬಾಕ್ಸಿನ ಭಯ. ಪಥ್ಯದ ಭಯ. ಹಾಸಿಗೆಯ ಭಯ. ಮಲಗಿದರೆ ಸಾಯುವ ಭಯ. ನಡೆದರೆ ಎಡವುವ ಭಯ. ಸ್ಕರ್ಟು ಗಾಳಿಗೆ ಹಾರೀತೆಂಬ ಭಯ. ಬೆಲ್ಟಿಲ್ಲದ ಪ್ಯಾಂಟು ಜಾರೀತೆಂಬ ಭಯ. ಗಂಡನಿಲ್ಲದ ವೇಳೆಯಲ್ಲಿ ಮಗುವಿಗೆ ಜ್ವರ ಬಂದೀತೆಂಬ ತಾಯಿ ಭಯ. ಎಷ್ಟೊತ್ತಾದರೂ ಅಮ್ಮ ಅಪ್ಪನೊಂದಿಗೆ ಬೆಡ್ರೂಮಿನಲ್ಲಿದ್ದಾಳೇಕೆಂಬ ಮಗುವಿನ ಭಯ. ಅಯ್ಯಪ್ಪ ಸ್ವಾಮಿಯ ಸೀಝನಲ್ ಭಯ.

ಭಯವಿಲ್ಲದವರ‍್ಯಾರು?

ಬಹುಶಃ ಸಾವಿನ ಭಯವೆಂಬುದು ಎಲ್ಲ ಭಯಗಳ ತಾಯಿ ಅನಿಸುತ್ತೆ. ಮನುಷ್ಯ ವಿಪರೀತ ಹೆದರಿದಾಗ, ಅದನ್ನು ಮುಚ್ಚಿ ಹಾಕುವುದಕ್ಕೆಂದೇ “ಹೆಚ್ಚೆಂದ್ರೆ ನೀನು ಏನು ಮಾಡಬಲ್ಲೆ? ಸಾಯಿಸ್ತೀಯಾ. ಅಷ್ಟೆ ತಾನೇ?" ಅನ್ನುತ್ತಾನೆ. ಸಾಯಿಸಲಾರ ಎಂಬ ಸಣ್ಣ ನಂಬಿಕೆಯೊಂದಿಗೆ! ಆದರೆ ಸಾಯಿಸಿಬಿಡುತ್ತಾನೆಂಬುದು ಖಚಿತವಾದಾಗ ನಿಜವಾದ ಭಯ ಶುರುವಾಗುತ್ತದೆ. ಕೋಟ್ಯಂತರ ರುಪಾಯಿಗಳ ಕಾಳಧನ, ಅದನ್ನು ಕಾಯಲು ಪೊಲೀಸರು, ಸೆಕ್ಯುರಿಟಿಯವರು, ಬಾಡಿಗಾರ್ಡು, ಬಂದೂಕು, ವಕೀಲರು-ಎಲ್ಲ ಇಟ್ಟುಕೊಂಡೂ ಥರಥರ ನಡುಗುತ್ತಾ ಏರ್‌ಕಂಡೀಷನ್ಡ್ ರೂಮುಗಳಲ್ಲಿ ನಡುಗುತ್ತಾ ಕೂಡುವವರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ದುಡ್ಡೆಂಬುದು ಮನುಷ್ಯನಿಗೆ ಎಷ್ಟೊಂದು confidence ಕೊಡುತ್ತದೋ, ಅದೇ ದುಡ್ಡು ಮನುಷ್ಯನ minimum ಧೈರ್ಯಗಳನ್ನು ತರಿದು ಬಿಸಾಡುವ ಪರಿಯನ್ನು ಇನ್ನೂ ಹತ್ತಿರದಿಂದ ಕಂಡಿದ್ದೇನೆ. ನಾವೂ ದುಡಿದ ದುಡ್ಡಿಗೆ ನಾವು ಮಾಲೀಕರಾಗಬೇಕೇ ಹೊರತು ಅದರ ಕಾವಲಿಗೆ ನಿಂತ ವಾಚ್‌ಮನ್‌ಗಳಾಗಿಬಿಡಬಾರದು. ಹಾಗಾದಾಗಲೇ ದುಡ್ಡೆಂಬುದು ನಮ್ಮ ಧೈರ್ಯ ಕರಗಿಸುವ ದಾವಾನಲವಾಗಿಬಿಡುತ್ತದೆ. ಕೈಯಲ್ಲಿ ನಯಾಪೈಸೆಯಿಲ್ಲದೆ ಅವತ್ತಿನ ಮಧ್ಯಾಹ್ನದ ಭೋಜನಕ್ಕೆ signal ಹುಡುಕಿಕೊಂಡು ಹೊರಟ ದಾರಿಹೋಕನನ್ನು ಬೆದರಿಸಿ ನೋಡಿ? ಕಿತ್ತುಕೊಳ್ಳಲು ನನ್ನಲ್ಲಿ ಖಾಲಿ ಪರ್ಸೂ ಇಲ್ಲ. ಮಧ್ಯಾಹ್ನದ ಊಟ ಸಿಕ್ಕೇ ಸಿಗುತ್ತದೆಂಬ ಆತ್ಮವಿಶ್ವಾಸ ಮಾತ್ರ ಇದೆ. ನೀನದನ್ನು ಮಾತ್ರ ಕಿತ್ತು ಕೊಳ್ಳಲಾರೆ-ಎಂಬಂತೆ ನೋಡುತ್ತಾನೆ.

ಅದೇ ಒಬ್ಬ ಶ್ರೀಮಂತನಿಗೆ ಸುಮ್ಮನೆ ಫೋನು ಮಾಡಿ ಬೆದರಿಸಿ ನೋಡಿ? ತಕ್ಷಣ ಅವನ ಮೆದುಳಿನ juices ಬಿಡುಗಡೆಯಾಗುತ್ತವೆ. ದೇಹದ enzymesಗಳು ಚೆಲ್ಲಾಡುತ್ತವೆ. ಬೆವರು ಸಾಲಿಡುತ್ತದೆ. ಪೊಲೀಸರು ಹಾಗಿರಲಿ; ಸ್ವಂತ ಮನೆಯ ಟೆಲಿಫೋನು ನಂಬರ್ರೂ ಮರೆತುಹೋಗುತ್ತದೆ. ರೌಡಿಯಿಸಂ ಎಂಬ ಮಾಯೆ ಕೆಲಸ ಮಾಡುವುದೇ ಆವಾಗ. ರೌಡಿಗಳಿಗೆ ಶ್ರೀಮಂತರು ಹೆದರುವಷ್ಟು ಬಡವರು ಹೆದರುವುದಿಲ್ಲ. ಬದುಕೆಂಬ ರೌಡಿಯನ್ನೇ ಎದುರು ಹಾಕಿಕೊಂಡು ತೊಡೆ ತಟ್ಟಿದವರವರು. ಅವರು ಸಾವಿನ ಭಯವನ್ನು ಹತ್ತಿರಕ್ಕೂ ಬಿಟ್ಟುಕೊಂಡಿರುವುದಿಲ್ಲ.

ಅವತ್ತು ನಾನು ಹಿಮಪರ್ವತದ ತುದಿಯಲ್ಲಿ, ಹಕ್ಕಿಗಳು ಕೂಡ ಹಾರಾಡದ ಶಿಖರದ ಮೇಲೆ, ಯಾರೋ ಕಟ್ಟಿ ಬಿಟ್ಟು ಹೋದ ಶೆಡ್ಡಿನಲ್ಲಿ ಬರೀ ಆಲೂಗಡ್ಡೆ ತಿನ್ನುತ್ತಾ ಒಬ್ಬನೇ ಕುಳಿತು ದೇವರ ನಿರೀಕ್ಷೆಯಲ್ಲಿದ್ದಾಗ ಅದೆಂಥ ಭಯವಾಗಿತ್ತು ಗೊತ್ತೇ? ಮರಳುಗಾಡಿನಲ್ಲಿ ಮರಳಿನ ಭಯ, ಹಿಮಪರ್ವತದ ಮೇಲೆ ಮಂಜಿನ ಭಯ, ಬೆಟ್ಟದ ಮೇಲೆ ನಿಂತವನ ಆಳದ ಭಯ, ಸುಳಿವಿಗೆ ಸಿಕ್ಕವನ ನೀರಿನ ಭಯ-ಈ ಥರದ ಭಯಗಳು ನಿಮ್ಮನ್ನು ಉಸಿರಾಡಲಿಕ್ಕೂ ಬಿಡುವುದಿಲ್ಲ. ಒಂದೇ ಸಮನೆ ಬೀಳುತ್ತಿದ್ದ ‘ರಪಾರಪ್’ ಸದ್ದಿನ ಮಂಜು ದಿನಗಟ್ಟಲೆ ಮುಂದುವರೆಯತೊಡಗಿದಾಗ ನಾನು ಕುಳಿತಿದ್ದ ಶೆಡ್ಡು ಕ್ರಮೇಣ ಮಂಜಿನೊಳಗೆ ಮುಚ್ಚಿ ಹೋಗಿ ಬಿಡಬಹುದೆನಿಸತೊಡಗಿತ್ತು. ನಿದ್ದೆ ಮಾಡಿದಾಗ ನನಗೆ ಗೊತ್ತಾಗದೇನೇ ನಾನು ಸತ್ತು ಹೋಗಿಬಿಡಬಹುದೆನಿಸಿತ್ತು. ದೇವರನ್ನು ಹುಡುಕಲು ಬಂದು ಸಾವಿನ ತೆಕ್ಕೆಗೆ ಸಿಕ್ಕುಬಿದ್ದೆನೆನ್ನಿಸಿತು. ಇಲ್ಲಿಯ ತನಕ, ಹಿಮಶಿಖರದ ಈ ತುದಿಯ ತನಕ ನಾನು ಬಂದಿದ್ದೇನೆಂಬುದು ನನ್ನವರ‍್ಯಾರಿಗೂ ಗೊತ್ತಾಗುವುದಿಲ್ಲ. ನನಗಿಷ್ಟು c ಕಲಿಸಿ ನನ್ನನ್ನು ಶೆಡ್ಡಿಗೆ ಕಳಿಸಿದ ಬದರೀನಾಥದ ಗುರುವಿಗೆ ನಾನ್ಯಾರೆಂಬುದು ಕೂಡ ಗೊತ್ತಿಲ್ಲ. ಇಲ್ಲಿ ಸತ್ತು ಹೋದರೆ, ಅದು ಬಹುಶಃ ನನಗೂ ಗೊತ್ತಾಗುವುದಿಲ್ಲ.

ಹಾಗಿದ್ದ ಮೇಲೆ ನಾನ್ಯಾಕೆ ಅದರ ಚಿಂತೆ ಮಾಡಬೇಕು?

ಸತ್ತು ಹೋದ ನಂತರ ಯಾರ‍್ಯಾರಿಗೋ ದುಃಖವಾಗುತ್ತದೆ. ಹೇಗೆ ಸತ್ತೆ ಅಂತ ಗೊತ್ತಾದ ಮೇಲಂತೂ ಇನ್ನೂ ನೊಂದುಕೊಳ್ಳುತ್ತಾರೆ. ಅವರ ಕಣ್ಣೆದುರಿಗೇ ಸತ್ತರೆ ಅವರಿಗೆ ಕಡಿಮೆ ದುಃಖವಾಗುತ್ತಿತ್ತೇ? ಗೊತ್ತಿಲ್ಲ. ಈ ಹಿಮಗರ್ಭದಲ್ಲಿ ಉಸಿರು ಕಟ್ಟಿ ಸತ್ತು ಹೋದರೆ ಎಷ್ಟೋ ದಿವಸ ಯಾರಿಗೂ ಗೊತ್ತಾಗುವುದೇ ಇಲ್ಲ. ಸತ್ತ ಮೇಲೆ ನಾನು ಬೇಗನೆ ಕೊಳೆಯುವುದೂ ಇಲ್ಲ. ಸುಮ್ಮನೆ, ದೇವರ ನಿರೀಕ್ಷೆಯಲ್ಲಿ ಕಾದೂ ಕಾದೂ ಬೋರ್ ಆದವನ ಹಾಗೆ ಮಲಗಿಕೊಂಡಿದ್ದಾನೇನೋ ಎನ್ನಿಸುವಂತೆ ಮಲಗಿರುತ್ತೇನೆ. ಉಸಿರಾಟ ನಿಂತಿರುತ್ತದೆ. ರಕ್ತ ಗಡ್ಡೆಯಾಗಿರುತ್ತದೆ. ತಣ್ಣಗಾಗಿರುತ್ತದೆ. ಕಣ್ಣು ಖಲಾಸ್. ಅಲ್ಲಿಂದ ಮುಂದಕ್ಕೆ ಬದುಕೇ ಖಲಾಸ್. ನನ್ನ ಕಣ್ಣಿಗೆ ನಾನು ಕೂಡ ಕಾಣುವುದಿಲ್ಲ. ಸತ್ತ ಮೇಲೆ ಏನಾಗುತ್ತದೆಂಬುದು ಸ್ವಲ್ಪ ಕೂಡ ಗೊತ್ತಿಲ್ಲ.

ಹಾಗಂದ ಮೇಲೆ ಸಾವಿಗೇಕೆ ಹೆದರೋದು?

No no. ಸಾವಿಗೆ ಹೆದರಲೇಬಾರದು ಅಂತ ನಿರ್ಧರಿಸಿ ಪದ್ಮಾಸನ ಹಾಕಿಕೊಂಡು ಕೂತುಬಿಟ್ಟೆ. ಚಳಿಗೆ ಹೆದರುತ್ತಿದ್ದೇನೆನಿಸಿತು. ಶಾಲು ಕಿತ್ತು ಹಾಕಿದೆ. ಹಸಿವಿಗೆ ಹೆದರುತ್ತಿದ್ದೇನೆನಿಸಿತು. ಆಲೂಗಡ್ಡೆ ಎತ್ತಿಟ್ಟೆ. ಅಂಥ ದಿವ್ಯ ಏಕಾಂತದಲ್ಲೂ ಅರೆಬರೆಯಾಗಿ ತೊಯ್ದಿರುತ್ತಿದ್ದ ಸಿಗರೇಟುಗಳಿಗೆ ಬೆಂಕಿ ಕೊಟ್ಟುಕೊಂಡು ಕೂತಿರುತ್ತಿದ್ದೆ. ಹಸಿವು ತಡೆಯಲು ಸಿಗರೇಟು ಸಹಾಯ ಮಾಡುತ್ತಿತ್ತು. ಆಮೇಲೆ ಸಿಗರೇಟೂ ಬೇಡವೆನ್ನಿಸಿತು. ಅವಳ ನೆನಪೊಂದೇ ಸಾಕೆನ್ನಿಸಿತು. ಹೀಗೆ ಹುಡುಗನೊಬ್ಬ ತನ್ನ ಹುಡುಗಿಯನ್ನು ಕಳೆದುಕೊಂಡು, ಸಾವಿರಾರು ಮೈಲಿ ದೂರದ ಹಿಮಪರ್ವತಕ್ಕೆ ದೇವರನ್ನು ಹುಡುಕಿಕೊಂಡು ಬಂದು, ಮಂಜಿಗೆ ಸಿಕ್ಕು ಸತ್ತು ಹೋದ ಅನ್ನಿಸಿಕೊಳ್ಳುವುದೊಂದೇ ಸಾಕು; ಅದಕ್ಕಿಂತ ಸಾರ್ಥಕ್ಯವಿಲ್ಲ ಅಂದುಕೊಂಡೆ. ತುಂಬ ಹೊತ್ತು ಆ ತೆರನಾದ martyrdom(ಹುತಾತ್ಮಗಿರಿ)ನ್ನು ಎಂಜಾಯ್ ಮಾಡಿದೆ.

ಅರೆ, ನಾನು ಸತ್ತಿರುವುದೇ ನನ್ನವರಿಗೆ ಗೊತ್ತಾಗಲಾರದು. ಹಾಗಿರುವಾಗ ಅವಳಿಗಾಗಿ ಸತ್ತೆ, ದೇವರಿಗಾಗಿ ಸತ್ತೆ, ಪ್ರೇಮಕ್ಕಾಗಿ ಸತ್ತೆ ಅಂತ ಯಾರಿಗೆ ಗೊತ್ತಾದೀತು? ಬದರೀನಾಥದಲ್ಲಿ ಸಾಕಷ್ಟು ಜನ ಸಾಯುತ್ತಾರೆ. ಹಾಗೆಯೇ ಯಾತ್ರಿಕನೊಬ್ಬ ಸತ್ತ ಅಂದುಕೊಳ್ಳುತ್ತಾರೆ ಜನ. ಹಾಗಾದರೆ ಸತ್ತೇನು ಉಪಯೋಗ? ಸತ್ತು ಉಪಯೋಗವಿಲ್ಲ; ಅವಳನ್ನು ಪ್ರೀತಿಸಿ ಉಪಯೋಗವಿಲ್ಲ; ದೇವರಿಗಾಗಿ ಕಾಯ್ದು ಉಪಯೋಗವಿಲ್ಲ; ಹಿಮಪರ್ವತದ ತುದಿ ತಲುಪಿದ್ದೂ ಉಪಯೋಗವಿಲ್ಲ! ಉಪವಾಸ, ಧ್ಯಾನ, ದೈವ ಸ್ಮರಣೆ, ಕ್ರುತ್‌ನ ಸ್ನೇಹ, ಗುರುವಿನ ಬೋಧನೆ, ಅವಳ ನೆನಪು - ಯಾವುದರಿಂದಲೂ ಉಪಯೋಗವಿಲ್ಲ.

ಉಪಯೋಗವಿಲ್ಲದರ ಬಗ್ಗೆ ಹೆಚ್ಚು ಆಸಕ್ತಿ ಉಳಿಯುವುದಿಲ್ಲ. ಶೆಡ್ಡಿನಿಂದ ಅದೊಂದು ಮುಂಜಾನೆ ಈಚೆಗೆ ಬಂದೆ. ಸನ್ಯಾಸವೇ ಉಪಯೋಗವಿಲ್ಲದ್ದು ಅಂತ ಖಚಿತವಾಯಿತು. ಮಂಜು ಗಟ್ಟಿಯಾಗತೊಡಗಿತ್ತು. ಹಿಮಪಾತ ನಿಂತಿತ್ತು. ಬದರೀನಾಥದಲ್ಲಿ ನಾನಿಳಿದುಕೊಂಡಿದ್ದ ಮಠ ತಲುಪುವ ಹೊತ್ತಿಗೆ ನನ್ನಲ್ಲಿ ದೇವರ ಮೇಲಿನ ವಿಶ್ವಾಸ ಮುಕ್ಕಾಲು ಪಾಲು ಇಲ್ಲವಾಗಿತ್ತು. ಅದೇ ಹೊತ್ತಿನಲ್ಲಿ ಸಾವಿನ ಬಗೆಗಿದ್ದ ಭಯಗಳೂ ಬಿದ್ದು ಹೋಗಿದ್ದವು. ಒಂದು ವಿಚಿತ್ರವಾದ ಬಯಕೆ ನನ್ನ ಮನಸ್ಸಿನಲ್ಲಿ ಹೆಡೆಯೆತ್ತಿತ್ತು.

ಅವಳನ್ನು ಮತ್ತೆ ಗೆಲ್ಲುತ್ತೇನೆ!

ಉಹುಂ, ಅವಳನ್ನಲ್ಲ. ಅವಳಂಥವಳನ್ನೇ ಮತ್ತೊಬ್ಬಳನ್ನ. ಅವಳಷ್ಟೇ ಸುಂದರಿಯನ್ನ, ಬಡವಳನ್ನ, ಧಿಮಾಕಿನವಳನ್ನ... ನನ್ನನ್ನು ಪ್ರೀತಿಸುವವಳನ್ನ! ಯಾರವಳು? ಸರಿಯಾಗಿ ಗೊತ್ತಿರಲಿಲ್ಲ. ಹಿಂದಿನ ಮನೆಯವಳಿರಬಹುದಾ? ಇರಬಹುದೇನೋ. ಅವಳು ಒಪ್ಪದಿದ್ದರೆ? ಒಪ್ಪದಿದ್ದರೆ ಮತ್ತೊಬ್ಬಳು. otherwise ಇನ್ನೂ ಒಬ್ಬಳು. ದೇವರೇ ಇಲ್ಲ ಅಂದುಕೊಂಡವನಿಗೆ ದೆವ್ವದ್ದೆಲ್ಲಿಯ ಭಯ? ಅವಳೆಡೆಗಿನ ಪ್ರೀತಿ, ಪ್ರೀತಿಗಿಂತ ಹೆಚ್ಚಾಗಿ ನಿಯತ್ತು ನಾಶವಾದ ಮೇಲೆ ಯಾವಳಾದರೇನು? ಯಾರೋ ಒಬ್ಬಳು. ಹಲುಬೋದಿಕ್ಕೆ, ಹೇಳಿಕೊಳ್ಳುವುದಕ್ಕೆ, ಕಣ್ಣೀರಿಡುವುದಕ್ಕೆ, ನನ್ನ ಮೊದಲ ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವುದಕ್ಕೆ- ಅಷ್ಟಕ್ಕೆ ಮಾತ್ರ ಇನ್ನೊಬ್ಬಳು ಸಿಕ್ಕರೆ ಸಾಕು.

ಈಗ ಬೆಟ್ಟವಿಳಿದು ಹೋಗುತ್ತೇನೆ. ಅಂಥವಳನ್ನು ಹುಡುಕುತ್ತೇನೆ. ಮತ್ತೊಂದು ಬದುಕು ಕಟ್ಟಿಕೊಳ್ಳುತ್ತೇನೆ. ಪ್ರೀತಿಗೆ ನಾನೂ ಅರ್ಹನೇ ಅಂತ ಗೊತ್ತು ಮಾಡಿಕೊಳ್ಳುತ್ತೇನೆ. ಮುಖ್ಯವಾಗಿ ಅವಳಿಗೆ ಸಾಬೀತು ಮಾಡಿ ತೋರಿಸುತ್ತೇನೆ. ಹಾಗೆಂದುಕೊಂಡೇ ಬೆಟ್ಟವಿಳಿದು ಬಂದೆ. ಬಂದ ಮೇಲೆ ಆದದ್ದೇ ಬೇರೆ. ಅದು ಬಿಡಿ. ಆದರೆ ಮನಸ್ಸಿನೊಳಗಿಂದ ಸಾವಿನ ಭಯ ಮಾತ್ರ ಶಾಶ್ವತವಾಗಿ ಎದ್ದು ಹೋಗಿತ್ತು. ಬಂದವನೇ ಎಂ.ಎ ಮಾಡಿದೆ. ಪರೀಕ್ಷೆ ಮುಗಿದ ಮಾರನೇ ದಿನವೇ ಮದುವೆಯಾದೆ. ಒಂದೇ ವರ್ಷದೊಳಗಾಗಿ ಚೇತನಾ ಬಂದಳು. ನನ್ನೊಳಗಿನ ಎಲ್ಲ ದಿಗಿಲುಗಳನ್ನು ಸರಿಸಿ ಹಾಕಿದಳು. ಕೇವಲ ಮಾರ್ಕ್ಸು, ಮಾವೋ ಓದಿಕೊಂಡು ಆರಾಮ ಕುರ್ಚಿಯಲ್ಲಿ ಕೂತು ಕ್ರಾಂತಿಯ ಬಗ್ಗೆ ಮಾತಾಡಿ ಸುಮ್ಮನಾಗಬಹುದಿತ್ತು. ಆಗಲಿಲ್ಲ. ಅದೊಂದು ಸಂಜೆ, ತೊಟ್ಟಿಲಲ್ಲಿ ಮಲಗಿದ್ದವಳನ್ನು ಎತ್ತಿ ಹೆಗಲಿಗೆ ಹಾಕಿಕೊಂಡು ಲಲಿತೆಗೆ ಹೇಳಿದೆ;

“ಮೆರವಣಿಗೆಯಿದೆ. ನೀನೂ ಹೊರಡು. ಹೆಗಲ ಮೇಲಿನ ಹಸುಗೂಸನ್ನೂ ಸೇರಿಸಿ ಎಣಿಸಿದರೆ ನಾವು ಹದಿನೇಳು ಜನ! ಮಟ್ಕಾ ದೊರೆ ಗಫೂರ್‌ನ ವಿರುದ್ಧ ದನಿಯಾಗೋಣ".

ಬಳ್ಳಾರಿಯ ಜನ ನನ್ನನ್ನು ಹುಚ್ಚನನ್ನು ನೋಡಿದಂತೆ ನೋಡಿದರು. ಹೀಗೇ ಹೊರಟರೆ ಇವನ ಕೊಲೆಯಾಗುತ್ತದೆಂದರು. ಆಗಲಿಲ್ಲ. ಇವತ್ತಿಗೂ ಅನ್ನುತ್ತಿದ್ದಾರೆ. ಆಗಲಿಕ್ಕಿಲ್ಲ.

ಆಗಲೂಬಹುದು. ಗಾಂಧಿಯದೇ ಆಯಿತಂತೆ. ನನ್ನದೇಕಾಗಬಾರದು? ಇವತ್ತಿಗೆ ಮೂವತ್ತಾರೂ ವರ್ಷಗಳ ಹಿಂದೆಯೇ ಮಂಜಿನ ಮಧ್ಯೆ ಸತ್ತು ಮಲಗಲು ಸಿದ್ಧನಾಗಿಬಿಟ್ಟಿದ್ದೆ; ಇಲ್ಲದ ದೇವರಿಗಾಗಿ, ಒಲ್ಲದ ಹುಡುಗಿಗಾಗಿ; ಅವತ್ತು ಈ ಆದರ್ಶಗಳಿರಲಿಲ್ಲ. ಪುಕ್ಕಟೆಯಾಗಿ ಸಾಯಲು ಸಿದ್ಧನಿದ್ದೆ. ಇವತ್ತು ಬದುಕುವ ಎಲ್ಲ ಹಂಬಲಗಳ ನಡುವೆಯೂ ಸಾವಿನೊಂದಿಗೆ ಸಂಧಾನಕ್ಕೆ ತಯಾರಿದ್ದೇನೆ. ನನ್ನನ್ನು ಕೊಲ್ಲ ಬಯಸುವ ಮನುಷ್ಯ ನನ್ನ ಸುತ್ತ, ನನ್ನ ಸಾವಿನ ಸುತ್ತ ಗಸ್ತು ತಿರುಗುತ್ತಾನೆ. ಅದು ಅವನ ಕರ್ಮ. ನಾನು ಬದುಕಿನ ಸುತ್ತ ಗಿರಕಿ ಹೊಡೆಯುತ್ತೇನೆ. ನಾನೇ ವಾಸಿ. ಕಣ್ಣೆದುರಿಗೇ ಬದುಕು ಕಾಣಿಸುತ್ತದೆ. ಅವನಿಗೇನಿದೆ? ಸಾವಿನದೊಂದೇ ಧ್ಯಾನ. ಸಾವು ನನ್ನದೇ ಆಗಿರಬಹುದು. ಯಾರಿಗೆ ಗೊತ್ತು?

ಅವನದೂ ಆಗಿರಬಹುದು!

ಏನಂತೀರಿ?

ನಿಮ್ಮವನು

-ಆರ್,ಬಿ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 November, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books