Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ನೀವು ಬೆಳೆಯಬೇಕು ಅಂದರೆ ಅದಕ್ಕೊಂದು ಸಿದ್ದತೆ ಬೇಡವಾ?


ಪ್ರತಿ ದಿನವೂ ನಾನು ಬೆಳೆಯಬೇಕು ಎಂದು ಬಯಸುವ ಮನಸ್ಸು ನಿಮಗಿದೆಯೇ? ಹಾಗಿದ್ದರೆ ಅನುಮಾನವೇ ಬೇಡ. ನಿಮ್ಮ ಬದುಕಿಗೆ ಒಂದು ರೂಟ್ ಮ್ಯಾಪ್‌ನ ಅಗತ್ಯವಿದೆ ಎಂಬುದು ನಿಮಗೆ ಮನವರಿಕೆಯಾಗಿದೆ. ನನ್ನ ಪ್ರಕಾರ, ಪ್ರತಿಯೊಬ್ಬ ಮನುಷ್ಯ ಕೂಡ ಬದುಕು ಎಂಬ ದಾರಿಯಲ್ಲಿ ನಡೆಯುತ್ತಲೇ ಇರಬೇಕು. ತನ್ನ ಬುದ್ಧಿಮತ್ತೆಯನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಲೇ ಇರಬೇಕು. ಆದರೆ ವಿಪರ್ಯಾಸವೆಂದರೆ ತುಂಬ ಜನ ಇದನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಹಾಗಂತ ಅದು ಅವರ ತಪ್ಪು ಅಂತಲ್ಲ. ಅವರಿಗೆ ಈ ವಿಷಯದಲ್ಲಿ ಸರಿಯಾಗಿ ಮಾರ್ಗದರ್ಶನ ಮಾಡುವವರು ಸಿಗದೇ ಇದ್ದಿರಬಹುದು. ಅಥವಾ ಸಾಮಾಜಿಕ, ಆರ್ಥಿಕ ಜಂಜಡಗಳ ಬಲೆಯಲ್ಲಿ ಸಿಲುಕಿ ಅವರು ಪರದಾಡುತ್ತಿರಬಹುದು. ಹೀಗಾಗಿ ತಮ್ಮ ಬದುಕಿಗೆ ಒಂದು ರೂಟ್ ಮ್ಯಾಪ್‌ನ ಅಗತ್ಯವಿದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂಬ ಕಾರಣಕ್ಕಾಗಿ ಅಂತಹವರನ್ನು ಟೀಕಿಸುವ ಅಗತ್ಯವೇನಿಲ್ಲ. ಆದರೆ ಕನಿಷ್ಠ ಪಕ್ಷ ನಾವು ನಮ್ಮ ಬದುಕಿಗೆ ಒಂದು ರೂಟ್ ಮ್ಯಾಪ್‌ನ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮತ್ತು ಅದನ್ನು ನಾಲ್ಕು ಜನರಿಗೆ ತಿಳಿಹೇಳುವ ಸಂದರ್ಭ ಸಿಕ್ಕರೆ ತಪ್ಪದೇ ಆ ಕೆಲಸ ಮಾಡಬೇಕು.

ಯಾಕೆಂದರೆ ಲಕ್ಷಾಂತರ ವರ್ಷಗಳ ಇತಿಹಾಸವನ್ನು ಗಮನಿಸಿದರೆ ಮಾನವನ ಬದುಕು ಪೀಳಿಗೆಯಿಂದ ಪೀಳಿಗೆಗೆ ಅಪ್‌ಗ್ರೇಡ್ ಆಗುತ್ತಲೇ ಬಂದಿದೆ. ಹೀಗಾಗಿ ಒಂದು ಕಾಲದಲ್ಲಿ ಮಹಾನ್ ಚಕ್ರವರ್ತಿಗಳು ಅನ್ನಿಸಿಕೊಂಡವರಿಗೆ ಸಿಗದಿದ್ದ ಸುಖ, ಸವಲತ್ತುಗಳು ಇವತ್ತು ಸಾಮಾನ್ಯ ಜನರಿಗೂ ಸಿಗುವಂತಾಗಿದೆ. ಅರ್ಥಾತ್, ಮನುಷ್ಯನ ಬದುಕು ನಿರಂತರವಾಗಿ ವಿಕಸನಗೊಳ್ಳುತ್ತಲೇ ಬಂದಿದೆ. ಈಗಿರುವ ಪೀಳಿಗೆ ಮುಂದಿನ ಪೀಳಿಗೆಗೆ ಇನ್ನಷ್ಟು ಅನುಕೂಲಗಳನ್ನು ಮಾಡಿಕೊಟ್ಟು ಕಣ್ಮರೆಯಾಗುತ್ತದೆ. ನಾವು ಕೂಡ ಈ ಪರಂಪರೆಗೆ ವಾರಸುದಾರರು, ನಮ್ಮ ಮುಂದಿನ ಪೀಳಿಗೆಯ ಶ್ರೇಯಸ್ಸನ್ನು ಬಯಸುವ ಜವಾಬ್ದಾರಿ ಹೊತ್ತಿರುವವರು ಎಂಬುದು ನಮಗೆ ಗೊತ್ತಾಗಬೇಕು. ಹಾಗಂತ ಯಾರು ಇದನ್ನು ಅರ್ಥ ಮಾಡಿಕೊಂಡಿದ್ದಾರೋ? ಅವರಷ್ಟೇ ಮುಂದಿನ ಪೀಳಿಗೆಗೆ ಒಳ್ಳೆಯದನ್ನು ಮಾಡುವ ದಾರಿಯಲ್ಲಿ ನಡೆಯುತ್ತಾರೆ ಅಂತಲ್ಲ. ಗೊತ್ತಿಲ್ಲದವರೂ ಇಂತಹ ದಾರಿಯಲ್ಲಿ ನಡೆಯುತ್ತಾರೆ. ಆದರೆ ಗೊತ್ತಿದ್ದು ನಡೆಯುವವರು ತುಂಬ ದೂರ ನಡೆಯುತ್ತಾರೆ. ಮತ್ತು ತನ್ನ ಮುಂದಿನ ಪೀಳಿಗೆಗೆ ತುಂಬ ಮಹತ್ವದ ಕಾಣಿಕೆಯನ್ನು ಕೊಟ್ಟು ಹೋಗುತ್ತಾರೆ.

ಇದನ್ನು ನಾವು-ನೀವು ಅರ್ಥ ಮಾಡಿಕೊಂಡರೆ ಮತ್ತಷ್ಟು ವ್ಯವಸ್ಥಿತವಾಗಿ ನಮ್ಮ ಬದುಕಿನಲ್ಲಿ ಮುನ್ನಡೆಯುತ್ತೇವೆ. ಇದಕ್ಕಿರಬೇಕಾದ ಮೂಲ ಗುಣವೆಂದರೆ ಹಳೆಯದನ್ನು ಸುಧಾರಿಸಲು ಸಾಧ್ಯವೇ? ಎಂಬುದನ್ನು ಸದಾಕಾಲ ಗಮನದಲ್ಲಿಟ್ಟುಕೊಳ್ಳುವುದು. ಹಳೆಯದನ್ನು ಸುಧಾರಿಸುವುದು ಎಂದರೆ ಯಾವುದೋ ಒಂದು ವಸ್ತುವಿಗೋ, ಆಹಾರ ಪದ್ಧತಿಗೋ, ಜೀವನಕ್ರಮಕ್ಕೋ ಸೀಮಿತವಾಗಿ ಯೋಚಿಸುವುದಲ್ಲ. ಪ್ರತಿಯೊಂದು ವಿಷಯದಲ್ಲೂ ಅಪ್‌ಡೇಟ್ ಆಗುತ್ತಾ ಹೋಗುವುದು ಎಂದರ್ಥ. ಉದಾಹರಣೆಗೆ ಮನುಷ್ಯ ಬದುಕಿನ ಮೌಲ್ಯಗಳನ್ನೇ ತೆಗೆದುಕೊಳ್ಳಿ. ಒಂದು ಕಾಲದಲ್ಲಿ ಯಾವುದು ನಮಗೆ ಮಹಾನ್ ಅನ್ನಿಸುತ್ತಿತ್ತೋ? ಕೇಳಿದ ಕೂಡಲೇ ಚಕಿತಗೊಳಿಸುತ್ತಿತ್ತೋ? ಅದು ಇವತ್ತು ನಮಗೆ ಮಹಾನ್ ಅನ್ನಿಸುವುದಿಲ್ಲ, ಚಕಿತಗೊಳಿಸುವುದಿಲ್ಲ. ಯಾಕೆಂದರೆ ಕಾಲ ಎಂಬ ಅಗ್ನಿಯಲ್ಲಿ ಪ್ರತಿಯೊಂದು ವಿಷಯಗಳೂ ನಿರಂತರವಾಗಿ ಪರೀಕ್ಷೆಗೆ ಒಳಪಡುತ್ತಲೇ ಇರುತ್ತವೆ. ಇದಕ್ಕೆ ಪ್ರತಿಮಾತ್ಮಕವಾದ ಒಂದು ಘಟನೆಯನ್ನು ನಿಮಗೆ ಹೇಳುತ್ತೇನೆ.

ಮೊನ್ನೆ ನನ್ನ ಗೆಳೆಯನೊಬ್ಬ ನನ್ನನ್ನು ನೋಡಲು ಬಂದ. ಜತೆಗೆ ಇಂಜಿನೀರಿಂಗ್ ಮುಗಿಸಿದ ಅವನ ಮಗಳು. ನಾವು ಕೆಲ ಗೆಳೆಯರು ಮಾತಿಗೆ ಕುಳಿತರೆ ಚರ್ಚೆ ಹತ್ತಾರು ದಿಕ್ಕುಗಳಲ್ಲಿ ಸಾಗುತ್ತದೆ. ಹೀಗೇ ಒಂದು ಹಂತದಲ್ಲಿ ಮಹಾಭಾರತದ ಯಾವುದೋ ಒಂದು ಘಟನೆಯ ಬಗ್ಗೆ ನನ್ನ ಗೆಳೆಯ ಪ್ರಸ್ತಾಪ ಮಾಡಿದ. ಆಗ ಪಕ್ಕದಲ್ಲಿದ್ದ ಅವನ ಮಗಳು ತಕ್ಷಣವೇ ನನ್ನತ್ತ ತಿರುಗಿ: ಅಂಕಲ್ ಮಹಾಭಾರತದಲ್ಲಿ ಗಾಂಧಾರಿ ಪಾತ್ರ ಬರುತ್ತಲ್ಲ? ಆ ಗಾಂಧಾರಿಯನ್ನು ಯಾಕೆ ಪತಿವ್ರತೆ ಅಂತ ಕರೆಯುತ್ತಾರೆ? ಅಂತ ಕೇಳಿದಳು. ಯಾಕೆ ಅಂದರೆ ಪಾಪ, ತನ್ನ ಗಂಡನಿಗೆ ಕಣ್ಣು ಕಾಣುವುದಿಲ್ಲ. ತನ್ನ ಗಂಡನಿಗೆ ಕಾಣದ ಜಗತ್ತನ್ನು ನಾನೂ ನೋಡುವುದಿಲ್ಲ ಅಂತ ಗಾಂಧಾರಿ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಳು, ಬದುಕಿನ ಕೊನೆಯ ತನಕ ಕಣ್ಣಿದ್ದೂ ಕುರುಡಿಯಂತೆ ಬಾಳಿದಳು. ಅದಕ್ಕೇ ಆಕೆಯನ್ನು ಪತಿವ್ರತೆ ಅನ್ನುತ್ತಾರೆ ಅಂತ ನನ್ನ ಗೆಳೆಯನೇ ಪ್ರತಿಕ್ರಿಯಿಸಿದ. ಅದಕ್ಕಾಕೆ, ಅಯ್ಯೋ ಪಪ್ಪಾ, ಗಂಡನಿಗೆ ಕಣ್ಣು ಕಾಣುವುದಿಲ್ಲ ಅಂತ ತಾನೂ ಕುರುಡಿಯಂತೆ ಬದುಕಿದರೆ ಆಕೆ ಪತಿವ್ರತೆ ಅಂತ ಯಾಕೆ ಹೊಗಳಬೇಕು.

ನನ್ನ ಪ್ರಕಾರ ಗಂಡನಿಗೆ ಕಣ್ಣು ಕಾಣುವುದಿಲ್ಲ ಎಂಬುದು ಗೊತ್ತಾದಾಗ ಆಕೆ ತನ್ನ ಗಂಡನ ಪಾಲಿಗೆ ಕಣ್ಣಾಗಬೇಕಿತ್ತು. ಆತನ ಪ್ರತಿಯೊಂದು ನಡೆಗೆ ಸಾಥ್ ಕೊಡಬೇಕಿತ್ತು. ಆತ ಊಟ ಮಾಡಲು, ಬಾತ್‌ರೂಂಗೆ ಹೋಗಲು, ಬೆಡ್‌ರೂಂಗೆ ಹೋಗಲು, ಕೊನೆಗೆ ಆತ ಅನಾರೋಗ್ಯದಿಂದ ಬಳಲಿದರೆ ಸೇವೆ ಮಾಡಲು, ಹೀಗೆ ಎಲ್ಲದಕ್ಕೂ ಜತೆಯಾಗಿರಬೇಕಿತ್ತು. ಆದರೆ ಆಕೆ ಹಾಗೆ ಮಾಡದೇ ತನ್ನ ಗಂಡನ ಥರವೇ ಕುರುಡು ಜೀವನ ನಡೆಸಿದಳು ಎಂದರೆ ಮೊದಲನೆಯದಾಗಿ ಆಕೆಯೇ ಇನ್ನೊಬ್ಬರಿಗೆ ಹೊರೆಯಾದಳು. ಇನ್ನೊಬ್ಬರಿಗೆ ಹೊರೆಯಾದವಳು ಗಂಡನ ಸೇವೆ ಹೇಗೆ ಮಾಡಲು ಸಾಧ್ಯ? ಈಗ ನೀವೇ ಯೋಚಿಸಿ. ನನಗೊಂದು ಮದುವೆಯಾಗಿ, ನನ್ನ ಗಂಡನೇ ಕುರುಡನಾಗಿ ಬಿಟ್ಟರೆ ನಾನು ಆತನನ್ನು ಕೈ ಹಿಡಿದು ನಡೆಸಬೇಕೋ? ಅಥವಾ ನೀನು ನೋಡದ ಜಗತ್ತನ್ನು ನಾನೂ ನೋಡುವುದಿಲ್ಲ ಅಂತ ಕುರುಡಿಯಂತೆ ಬಾಳಬೇಕೋ? ಹಾಗೊಂದು ವೇಳೆ ನಾನೂ ಆತನಂತೆ ಬಾಳಿದರೆ ನನ್ನನ್ನು ಪತಿವ್ರತೆ ಅನ್ನುತ್ತೀರೋ? ಮೈಗಳ್ಳಿ ಅನ್ನುತ್ತೀರೋ? ಅಂತ ಕೇಳಿದಳು.

ಈ ಮಾತು ಕೇಳಿ ನಾನು ಸುಮ್ಮನೆ ನಕ್ಕರೆ, ನನ್ನ ಗೆಳೆಯ ಕೆಕರು ಮಕರಾದವನಂತೆ ‘ಈ ಹುಡುಗಿಯದು ಒಳ್ಳೆ ವಿಚಿತ್ರ ವಾದ ಮಾರಾಯ’ ಅಂದ. ಅವರು ಹೋದ ಮೇಲೆ ನಾನು ಸುಮ್ಮನೆ ಯೋಚಿಸಿದೆ. ಆಕೆ ಹೇಳಿದ್ದೂ ನಿಜವಲ್ಲವೇ? ಸಂಗಾತಿ ಅಸಹಾಯಕ ಸ್ಥಿತಿಯಲ್ಲಿರುವಾಗ ಆತನ ಸಹಾಯಕ್ಕೆ ಧಾವಿಸುವುದು ನಿಜವಾದ ಮೌಲ್ಯ ಅಲ್ಲವೇ? ನಿಜಕ್ಕೂ ಆ ಹುಡುಗಿ ಹೇಳಿದ ಮಾತುಗಳು ನನ್ನನ್ನು ಇನ್ನಿಲ್ಲದಂತೆ ಕಾಡಿದವು. ಒಂದು ಕಾಲಘಟ್ಟದಲ್ಲಿ ಮಹಾನ್ ಪಾತ್ರವಾಗಿದ್ದ ಗಾಂಧಾರಿಯ ಬಗ್ಗೆ ಈಗಿನ ಜನರೇಷನ್ ಹೇಗೆ ಯೋಚಿಸುತ್ತದೆ ಅನ್ನುವುದಿದೆಯಲ್ಲ? ತುಂಬ ಸಲ ನಾವೂ ಇಂತಹ ಅಂಶಗಳನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಇದಕ್ಕೇ ಜನರೇಷನ್ ಗ್ಯಾಪ್ ಅನ್ನುವುದು. ಇಂತಹ ಜನರೇಷನ್ ಗ್ಯಾಪ್ ಇರುವ ಕಾರಣಕ್ಕಾಗಿಯೇ ಬಹುತೇಕ ಮನೆಗಳಲ್ಲಿ ಅತ್ತೆ-ಸೊಸೆಯರ ಕಚ್ಚಾಟ ನಿರಂತರವಾಗಿ ಜಾರಿಯಲ್ಲಿರುವುದು. ಹಿರಿಯರು-ಕಿರಿಯರ ಮಧ್ಯೆ ಒಂದು ಅನುಮಾನದ ಬಳ್ಳಿ ಉಳಿದುಕೊಂಡಿರುವುದು.
ಈ ಜನರೇಷನ್ ಗ್ಯಾಪ್ ಇಲ್ಲದಂತೆ ನೋಡಿಕೊಳ್ಳಬೇಕೆಂದರೆ ಮನುಷ್ಯ ಜ್ಞಾನದ ವಿಷಯದಲ್ಲಿ ಪ್ರತಿ ದಿನ ಬೆಳೆಯುತ್ತಾ ಹೋಗಬೇಕು. ಯಾರು ಬದುಕಿನ ಪಥದಲ್ಲಿ ಹೀಗೆ ಅಪ್‌ಡೇಟ್ ಆಗುತ್ತಾ ಹೋಗುತ್ತಾರೋ, ಅವರು ತಮಗಿಂತ ಕಿರಿಯ ಜನರೇಷನ್ ಜತೆ ಕಚ್ಚಾಟವಾಡುವ ಪ್ರಮೇಯವೇ ಉದ್ಭವವಾಗುವುದಿಲ್ಲ. ಯಾಕೆಂದರೆ ಬದುಕಿನ ದಾರಿಯಲ್ಲಿ ನೀವೂ ನಡೆಯುತ್ತಿರುತ್ತೀರಿ. ನಿಮಗಿಂತ ಕಿರಿಯರೂ ನಡೆಯುತ್ತಿರುತ್ತಾರೆ. ಹೀಗಾಗಿ ಜನರೇಷನ್ ಗ್ಯಾಪ್ ಅನ್ನುವ ಸಮಸ್ಯೆಯೇ ಕಾಡುವುದಿಲ್ಲ. ಹೀಗಾಗಿ ನಾನು ಹೇಳಿದ್ದು: ನಿಮ್ಮ ಬದುಕಿಗೆ ಒಂದು ರೂಟ್ ಮ್ಯಾಪ್ ಇರಬೇಕು. ಅಂದ ಹಾಗೆ ವಯಸ್ಸಾಗುತ್ತಾ ಹೋದಂತೆ ನಮ್ಮ ನಡಿಗೆಯ ವೇಗ ಕಡಿಮೆ ಆಗಬಹುದು. ಆದರೆ ಅನುಭವ ಎಂಬುದು ಹೇಗೆಂದರೆ ಮೊದಲ ಹಂತದಲ್ಲಿ ಅದು ಕಾಲ್ನಡಿಗೆ, ಆನಂತರ ಸೈಕಲ್, ಕೆಲ ಕಾಲ ಕಳೆದ ಮೇಲೆ ಕಾರು, ಆಮೇಲೆ ಅದು ವಿಮಾನ. ಹೀಗಾಗಿ ನಿಮಗಿಂತ ಕಿರಿಯರು ಎಷ್ಟೇ ವೇಗವಾಗಿ ತಮ್ಮ ಗುರಿಯತ್ತ ದಾಪುಗಾಲಿಡುತ್ತಿದ್ದರೂ ನೀವು ನಿಮಗೆ ಲಭ್ಯವಿರುವ ಅನುಭವ ಎಂಬ ವೆಹಿಕಲ್ಲಿನ ಮೇಲೆ ಕುಳಿತು ಆ ದಾರಿಯಲ್ಲಿ ವೇಗವಾಗಿಯೇ ಸಾಗುತ್ತಿರುತ್ತೀರಿ.

ಹೀಗೆ ಸಾಗುವಾಗ ನಿಮಗೆ ಜನರೇಷನ್ ಗ್ಯಾಪ್ ಎಂಬುದು ಸಮಸ್ಯೆಯಾಗಿ ಕಾಡುವುದಿಲ್ಲ. ಬದಲಿಗೆ ಹಳೆಯ ವಿಷಯಕ್ಕೆ ನಿಮ್ಮ ತಲೆಮಾರು ಹೇಗೆ ಪ್ರತಿಕ್ರಿಯಿಸುತ್ತಿತ್ತು? ಈಗಿನ ತಲೆಮಾರು ಹೇಗೆ ಪ್ರತಿಕ್ರಿಯಿಸುತ್ತಿದೆ? ಎಂಬುದು ಸರಿಯಾಗಿ ಅರ್ಥವಾಗುತ್ತದೆ. ಈ ಪೈಕಿ ಸದ್ಯದ ಕಾಲಮಾನಕ್ಕೆ ಆ ವಿಷಯ ಹೊಂದುತ್ತದೋ, ಇಲ್ಲವೋ ಎಂಬುದು ನಿಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಒಂದು ವೇಳೆ ನೀವು ಅಪ್‌ಡೇಟ್ ಆಗದೇ ಹೋದರೆ, ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆ ನಿಮಗಿಂತ ಕಿರಿಯರ ಚಿಂತನೆಯ ವಿಷಯದಲ್ಲಿ ನಿಮಗೆ ಭಿನ್ನಾಭಿಪ್ರಾಯ ಬರುತ್ತದೆ. ಹಾಗಾಗದಂತೆ ನೋಡಿಕೊಳ್ಳಿ. ಯಾಕೆಂದರೆ ನೀವು ನಿಮಗಿಂತ ಕಿರಿಯರ ಮೇಲೆ ಹರಿಹಾಯಲು, ಅವರ ಚಿಂತನೆಗಳ ಮೇಲೆ ಗದಾ ಪ್ರಹಾರ ಮಾಡಲು, ಅವರನ್ನು ನೆಲಕ್ಕುರುಳಿಸಿ ಮೆರೆಯಲು ಈ ಭೂಮಿಯ ಮೇಲೆ ಬಂದಿಲ್ಲ. ಬದಲಿಗೆ ಅವರ ಬದುಕು ನಿಮ್ಮ ಬದುಕಿಗಿಂತ ಹೆಚ್ಚು ಸುಸೂತ್ರವಾಗಿ ನಡೆಯಲು ಅಗತ್ಯವಾದ ಷಾಮಿಯಾನ ಕಟ್ಟಿ ಹೋಗಲು ಬಂದಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನನ್ನ ಪ್ರಕಾರ, ಬದುಕಿನ ನಿಜವಾದ ಅರ್ಥ ಎಂದರೆ ಇದೇ.

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 11 November, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books