Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅನಾವಶ್ಯಕ ವಿಷಯಗಳಿಗೇ ಅ ಚರ್ಚೆ ಅಗತ್ಯವೇ?

ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ಕೆಸರೆರಚಾಟ ಬೇರೆ ಬೇರೆ ನೆಲೆಗಳಲ್ಲಿ ನಡೆಯುತ್ತಾ ಇಡೀ ದೇಶದ ಮನಸ್ಥಿತಿಯೇ ರಾಡಿಯಾಗುವಂತೆ ಮಾಡುತ್ತಿದೆ. ಮೊನ್ನೆ ಸರ್ದಾರ್ ಪಟೇಲರ ವಿಷಯವನ್ನು ಹಿಡಿದುಕೊಂಡು ಶುರು ಮಾಡಿದ ಕೆಸರೆರಚಾಟ ಇನ್ನೂ ಜಾರಿಯಲ್ಲಿದೆ. ಈ ಮಧ್ಯೆಯೇ ಚುನಾವಣಾ ಪೂರ್ವ ಸಮೀಕ್ಷೆ ಬೇಕೋ, ಬೇಡವೋ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ಪಕ್ಷಗಳು ಪರಸ್ಪರ ಕೆಸರು ಎರಚಿಕೊಳ್ಳುತ್ತಿವೆ. ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸುವ ಸಂಬಂಧ ಕೇಂದ್ರ ಚುನಾವಣಾ ಆಯೋಗ ಒಂದು ಹೆಜ್ಜೆ ಮುಂದಿಡುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷ ದೊಡ್ಡ ಧ್ವನಿಯಲ್ಲಿ, ಇಂತಹ ಸಮೀಕ್ಷೆಗಳನ್ನು ನಿಷೇಧಿಸಬೇಕು ಎಂದು ಕೂಗಾಡತೊಡಗಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು, ಇಲ್ಲ, ಇಲ್ಲ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಯಾವ ಕಾರಣಕ್ಕೂ ನಿಷೇಧಿಸಕೂಡದು ಎಂದು ಅರಚಾಡುತ್ತಿದ್ದಾರೆ. ಅಂದ ಹಾಗೆ ಇಡೀ ಎಪಿಸೋಡೇ ವಿಪರ್ಯಾಸಗಳ ಮೂಟೆಯಂತಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ವಾಸ್ತವವಾಗಿ ಫರ್‌ಫೆಕ್ಟ್ ಅಂತ ಹೇಳಲು ಸಾಧ್ಯವಿಲ್ಲ. ಆದರೆ ಅದು ಚುನಾವಣಾ ಸಂದರ್ಭದಲ್ಲಿ ಒಂದು ರಾಜ್ಯ ಅಥವಾ ರಾಷ್ಟ್ರದ ಜನರ ಭಾವನೆ ಏನಿದೆ? ಅನ್ನುವುದನ್ನು ಗುರುತಿಸಲು ಪ್ರಯತ್ನಿಸುತ್ತವೆ. ಹಾಗಂತ ಇದು ನೂರಕ್ಕೆ ನೂರು ವೈಜ್ಞಾನಿಕವಾಗಿರುತ್ತದೆ ಅಂತ ಹೇಳಲು ಸಾಧ್ಯವಿಲ್ಲ.

ಯಾಕೆಂದರೆ ಸಮೀಕ್ಷೆ ನಡೆಸುವವರು ಯಾವುದೇ ಒಂದು ವಿಧಾನಸಭಾ ಕ್ಷೇತ್ರ ಅಥವಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬಹುಸಂಖ್ಯಾತ ಮತದಾರರನ್ನು ಮಾತನಾಡಿಸಲು ಸಾಧ್ಯವಿರುವುದಿಲ್ಲ. ಯಾಕೆಂದರೆ ಚುನಾವಣೆ ಹತ್ತಿರ ಬರುವ ವೇಳೆಗೆ ಮೇಲೆದ್ದು ನಿಂತಿರುವ ವಿಷಯಗಳು ಮತದಾರರ ಭಾವನೆಯ ಮೇಲೆ ಭಿನ್ನ ಭಿನ್ನ ರೀತಿಯ ಪ್ರಭಾವವನ್ನು ಬೀರುತ್ತವೆಯಾದ್ದರಿಂದ ಸಮೀಕ್ಷೆ ನಡೆಸಲು, ಅದರಲ್ಲೂ ಗಣನೀಯ ಸಂಖ್ಯೆಯ ಮತದಾರರನ್ನು ಭೇಟಿ ಮಾಡಿ ಅವರ ಅಭಿಪ್ರಾಯವನ್ನು ತಿಳಿಯುವುದು ಕಷ್ಟ. ಹೀಗಾಗಿಯೇ ಬಹುತೇಕ ಸಮೀಕ್ಷೆಗಳು ವಾಸ್ತವಕ್ಕೆ ದೂರವಾಗಿರುತ್ತವೆ. ೨೦೦೪ರಲ್ಲಿ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯನ್ನೇ ತೆಗೆದುಕೊಳ್ಳಿ. ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರ ಸೂತ್ರ ಹಿಡಿಯುತ್ತದೆ ಎಂದು ದೇಶದ ಬಹುದೊಡ್ಡ ಮಾಧ್ಯಮಗಳು ಹೇಳಿದ್ದವು. ಈ ಮಾಧ್ಯಮಗಳ ದೃಷ್ಟಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡ ನೇತೃತ್ವದ ಜೆಡಿಎಸ್ ಲೆಕ್ಕಕ್ಕೇ ಇಲ್ಲದ ಪಕ್ಷವಾಗಿತ್ತು. ಹೀಗಾಗಿ ಅವರ ಪಕ್ಷವನ್ನು ಇತರರು ಎಂಬ ಪಟ್ಟಿಗೆ ಸೇರಿಸಿದ್ದವು. ಆದರೆ ಚುನಾವಣಾ ಫಲಿತಾಂಶ ಬಂದಾಗ ಕತೆಯೇ ಬೇರೆಯಾಗಿತ್ತು. ಜೆಡಿಎಸ್ ಐವತ್ತೆಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮೈತ್ರಿಕೂಟ ಸರ್ಕಾರದ ಪಾಲುದಾರನಾಗಿ ಹೊರಹೊಮ್ಮಿತ್ತು.

ಇದೇ ರೀತಿ ೨೦೦೪ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಹುತೇಕ ಮಾಧ್ಯಮಗಳು ಭಾರತ ಪ್ರಕಾಶಿಸುತ್ತಿದೆ ಎಂಬ ಎನ್‌ಡಿಎ ಘೋಷವಾಕ್ಯಕ್ಕೆ ಮರುಳಾದವಂತೆ ವರ್ತಿಸಿದ್ದವು. ಹೇಗೋ ಮಾಡಿ ಎನ್‌ಡಿಎ ಮೈತ್ರಿಕೂಟ ಮರಳಿ ಅಧಿಕಾರ ಹಿಡಿಯಲಿದೆ ಎಂದು ಹೇಳಿದ್ದವು. ಆದರೆ ಆಗಲೂ ಕತೆ ಬೇರೆ ಆಯಿತು. ಸುದೀರ್ಘ ಅವಧಿಯ ನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಕೇಂದ್ರದ ಅಧಿಕಾರ ಗದ್ದುಗೆ ಹಿಡಿದಿತ್ತು. ಹೀಗಾಗಿ ಬಹುತೇಕ ಸಲ ಚುನಾವಣಾ ಸಮೀಕ್ಷೆಗಳು ಮೇಲೆದ್ದು ನಿಂತ ಭರದಲ್ಲೇ ಕುಸಿದು ಬಿಡುವುದು ಹೊಸದೇನಲ್ಲ. ಈಗ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಿಷೇಧಿಸಬೇಕು ಎಂದು ಕೂಗುತ್ತಿರುವ ಕಾಂಗ್ರೆಸ್ ಮತ್ತು ಚುನಾವಣಾ ಪೂರ್ವ ಸಮೀಕ್ಷೆಯನ್ನು ನಿಷೇಧಿಸಬಾರದು ಎಂದು ಕೂಗುತ್ತಿರುವ ಬಿಜೆಪಿ ಪಕ್ಷಗಳ ನಾಯಕರು ಮಾಡುತ್ತಿರುವುದು ಮಾತ್ರ ಶುದ್ಧ ರಾಜಕೀಯ. ಅಂದ ಹಾಗೆ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಿಷೇಧಿಸಬೇಕು ಎಂದು ಅರಚುತ್ತಿರುವ ಕಾಂಗ್ರೆಸ್‌ಗೆ ಮೊನ್ನೆ ಮೊನ್ನೆಯಷ್ಟೇ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಾನು ಮಾಡಿದ್ದೇನು? ಅನ್ನುವುದು ಮರೆತು ಹೋದಂತಿದೆ. ಚುನಾವಣೆಗೂ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲಿದೆ ಎಂದು ಪ್ರಕಟವಾದ ಸಮೀಕ್ಷೆಗಳ ಹಿಂದೆ ಆ ಪಕ್ಷದ ನಾಯಕರ ಕೈವಾಡವೇ ಇತ್ತು. ಇಂತಹ ಸಮೀಕ್ಷೆ ಒಂದು ರೀತಿಯಲ್ಲಿ ಕಾಂಗ್ರೆಸ್ ಪರವಾದ ಅಲೆಯನ್ನು ಹುಟ್ಟು ಹಾಕಿದ್ದು ಸುಳ್ಳೇನೂ ಅಲ್ಲ.

ಅರ್ಥಾತ್, ಒಂದು ಚುನಾವಣಾ ಸಮೀಕ್ಷೆ ತನಗೆ ಪರವಾಗಿದೆ ಎಂಬ ಅಭಿಪ್ರಾಯವನ್ನು ಹುಟ್ಟು ಹಾಕುವಾಗ ಕಾಂಗ್ರೆಸ್ ಅದನ್ನು ಬೇಡ ಅಂತ ಹೇಳಲಿಲ್ಲ. ಬದಲಿಗೆ ಅದು ವ್ಯಾಪಕವಾಗಿ ಪ್ರಚಾರ ಆಗುವಂತೆ ನೋಡಿಕೊಂಡಿತು. ಆದರೆ ಆರು ತಿಂಗಳು ಕಳೆಯುವಷ್ಟರಲ್ಲಿ ಅದಕ್ಕೆ ಚುನಾವಣಾ ಪೂರ್ವ ಸಮೀಕ್ಷೆಗಳ ಬಗ್ಗೆ ಕೊಂಚವೂ ಉತ್ಸುಕತೆಯಿಲ್ಲ. ಅದರ ನಿರಾಸಕ್ತಿಗೂ ಕಾರಣವಿದೆ. ಯಾಕೆಂದರೆ ಈಗ ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ತಾನ, ಮಿಜೋರಾಂ ಹಾಗೂ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ತನ್ನ ಪರವಾದ ಅಲೆ ಇಲ್ಲ ಎಂಬ ಆತಂಕ ಕಾಂಗ್ರೆಸ್‌ಗಿದೆ. ಏನೇ ತಿಪ್ಪರಲಾಗ ಹಾಕಿದರೂ ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ನಡೆಯುತ್ತಿರುವ ಬಿಜೆಪಿ ದರ್ಬಾರನ್ನು ಕೊನೆಗಾಣಿಸಲು ತನ್ನಿಂದ ಸಾಧ್ಯವಿಲ್ಲ ಎಂಬುದು ಅದಕ್ಕೆ ಮನವರಿಕೆಯಾಗಿದೆ. ಅದೇ ರೀತಿ ರಾಜಸ್ತಾನ, ದೆಹಲಿಯಲ್ಲಿ ನಡೆಯುತ್ತಿರುವ ತನ್ನದೇ ದರ್ಬಾರು ಅಂತ್ಯಗೊಳ್ಳುವುದನ್ನು ತಡೆಗಟ್ಟಲೂ ಸಾಧ್ಯವಿಲ್ಲ ಎಂಬ ಧಾವಂತ ಅದಕ್ಕಿದೆ. ಈ ಪೈಕಿ ದೆಹಲಿ ಹೊರತುಪಡಿಸಿ ಮೂರು ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಮಾಧ್ಯಮಗಳ ಸಮೀಕ್ಷೆಗಳು ಹೇಳುತ್ತಿರುವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ.

ಹಾಗಂತ ಇಲ್ಲೆಲ್ಲ ಕಾಂಗ್ರೆಸ್ ಕಳಪೆ ಸಾಧನೆ ಮಾಡುತ್ತದೆ ಎಂದಲ್ಲ. ಆದರೆ ಸಮೀಕ್ಷೆಗಳು ಶೇಕಡಾ ನಾಲ್ಕರಿಂದ ಐದರಷ್ಟು ಮತದಾರರ ಮನಸ್ಸನ್ನು ಪರಿವರ್ತಿಸಲು ಸಫಲವಾಗಿ ಬಿಟ್ಟರೆ ಆಟ ಮುಗಿದಂತೆಯೇ ಅರ್ಥ. ಸಮೀಕ್ಷೆಗಳಿಗಿರುವ ನಿಜವಾದ ಶಕ್ತಿ ಎಂದರೆ ಇದೇ. ಮತದಾರರ ಪೈಕಿ ಗೊಂದಲದಲ್ಲಿರುವ ವರ್ಗ ಇಂತಹ ಸಮೀಕ್ಷೆಗಳನ್ನು ನೋಡಿ ಗೆಲ್ಲುವ ಶಕ್ತಿಗೆ ಮತ ಹಾಕೋಣ ಎಂಬ ನಿರ್ಧಾರಕ್ಕೆ ಬಂದು ಬಿಡಬಹುದು. ಗುಜರಾತ್ ರಾಜ್ಯದಲ್ಲಿ ಅಲ್ಪಸಂಖ್ಯಾತ ಮತದಾರರು ದೊಡ್ಡ ಸಂಖ್ಯೆಯಲ್ಲಿ ಮೋದಿ ಪರವಾಗಿ ವೋಟು ಹಾಕುತ್ತಿರುವುದು ಇಂತಹ ಗೊಂದಲಗಳಿಂದಲೇ ಎಂದರೆ ಅದರಲ್ಲಿ ಅಸಹಜ ಸಂಗತಿ ಏನೂ ಇಲ್ಲ. ಫೈನಲಿ, ಕಾಂಗ್ರೆಸ್‌ನ ಮಾತು ಕೇಳಿ ನಾವು ಕೈ ಚಿಹ್ನೆಗೆ ಮತ ಹಾಕಿದರೂ ಮೋದಿಯೇ ಮರಳಿ ಅಧಿಕಾರಕ್ಕೆ ಬಂದರೆ ಗತಿಯೇನು? ಎಂಬ ಆತಂಕ ಅಲ್ಪಸಂಖ್ಯಾತ ಮತದಾರರಲ್ಲಿ ಉಂಟಾಗಲು ಸಮೀಕ್ಷೆಗಳೇ ಮುಖ್ಯ ಕಾರಣ. ಈಗ ಮಾಧ್ಯಮಗಳ ಪೈಕಿ ಶೇಕಡಾ ಎಪ್ಪತ್ತಕ್ಕಿಂತ ಹೆಚ್ಚು ಮಾಧ್ಯಮಗಳು ಯಾರ ಹಿಡಿತದಲ್ಲಿವೆ? ಈ ದೇಶದ ಕಾರ್ಪೊರೇಟ್ ಡಾನುಗಳ ಹಿಡಿತದಲ್ಲಿವೆ. ಸಹಜವಾಗಿಯೇ ಈ ಕಾರ್ಪೊರೇಟ್ ಡಾನುಗಳು ಜಾಗತೀಕರಣದ ಮೂರನೇ ಹಂತಕ್ಕೆ ಭಾರತವನ್ನು ಕೊಂಡೊಯ್ಯಲು ನರೇಂದ್ರ ಮೋದಿಯೇ ಸಮರ್ಥ ನಾಯಕ ಎಂಬ ಅಭಿಪ್ರಾಯಕ್ಕೆ ಬಂದು ಹಲವು ದಿನಗಳೇ ಕಳೆದಿವೆ.

ಹೀಗಾಗಿ ಅದಾನಿಯಿಂದ ಹಿಡಿದು ಅಂಬಾನಿಗಳ ತನಕ ಈ ದೇಶದ ಬಹುತೇಕ ಉದ್ಯಮಿಗಳು ನರೇಂದ್ರ ಮೋದಿ ಜಪವನ್ನು ಆರಂಭಿಸಿದ್ದಾರೆ. ಅದೇನಾದರೂ ಆಗಲೀ, ಮುಂಬರುವ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಬೇಕು ಎಂದು ಅವರು ಬಯಸಿದ್ದಾರೆ. ಹೀಗೆ ಬಯಸಿದವರು ತಮ್ಮ ಹಿಡಿತದಲ್ಲಿರುವ ಮಾಧ್ಯಮಗಳ ಮೂಲಕ ನರೇಂದ್ರ ಮೋದಿ ನಾಯಕತ್ವಕ್ಕೆ ನಮೋ ಎನ್ನುತ್ತವೆ. ಇವತ್ತಿನ ಸ್ಥಿತಿಯಲ್ಲಿ ಈ ದೇಶವನ್ನು ಮುನ್ನಡೆಸಲು ನರೇಂದ್ರ ಮೋದಿ ಅವರಿಗಿಂತ ಸಮರ್ಥ ನಾಯಕರಿಲ್ಲ ಎಂದು ಹೊಗಳುತ್ತವೆ. ಕಾರ್ಪೊರೇಟ್ ವಲಯದ ಈ ಡಾನುಗಳು ಮೋದಿ ಪರವಾಗಿ ಎಬ್ಬಿಸುತ್ತಿರುವ ಹಾಹಾಕಾರವನ್ನು ಕಂಡು ಕಾಂಗ್ರೆಸ್ ಕಂಗಾಲಾಗಿರುವುದೂ ನಿಜ. ಇದೇ ಕಾರಣಕ್ಕಾಗಿ ಅದು ಮೋದಿಯ ಬೆಂಬಲಕ್ಕೆ ನಿಂತ ಉದ್ಯಮಿಗಳ ವಿರುದ್ಧ ಮುಗಿಬಿತ್ತು. ಅದಾನಿಯಿಂದ ಹಿಡಿದು ಕುಮಾರಮಂಗಲಂ ಬಿರ್ಲಾ ತನಕ ಹಲವು ಉದ್ಯಮಿಗಳ ಕೈ ಕಟ್ಟಿ ಹಾಕುವ ಕೆಲಸ ಮಾಡಿತು. ಆ ಮೂಲಕ ಮೋದಿಯನ್ನು ಬೆಂಬಲಿಸಿದರೆ ನಿಮ್ಮ ಗತಿ ನೆಟ್ಟಗಿರುವುದಿಲ್ಲ ಎಂಬ ಸಂದೇಶ ರವಾನಿಸಿತು. ಈ ಮಧ್ಯೆ ಮೋದಿಯನ್ನು ಬೆಂಬಲಿಸಲು ನಿಂತಿರುವ ಉದ್ಯಮಿಗಳ ಖಜಾನೆ ಸೊರಗುವಂತೆ ನೋಡಿಕೊಳ್ಳಲು ಭಾರತದ ಅರ್ಥ ವ್ಯವಸ್ಥೆಗಿದ್ದ ಚುರುಕುತನವನ್ನೇ ಕುಗ್ಗಿಸಿತು. ಆರ್ಥಿಕತೆ ಚುರುಕಾಗಿದ್ದರೆ ತಾನೇ ಉದ್ಯಮಿಗಳ ಶಕ್ತಿ ಬೆಳೆಯುವುದು? ಆರ್ಥಿಕತೆಯ ವೇಗ ಕುಗ್ಗಿದರೆ ಸಹಜವಾಗಿಯೇ ಉದ್ಯಮಿಗಳ ಖಜಾನೆ ಸೊರಗುತ್ತದೆ.

ಒಂದು ಸಲ ಖಜಾನೆಗೆ ಹರಿದು ಬರುತ್ತಿರುವ ಹಣದ ಪ್ರಮಾಣ ಕುಗ್ಗಿದರೆ ಸಹಜವಾಗಿಯೇ ಉದ್ಯಮಿಗಳು ಕಂಗಾಲಾಗುತ್ತಾರೆ. ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಲು ಯಾವ ಪ್ರಮಾಣದ ಬಂಡವಾಳ ಹೂಡಲು ಅವರು ಬಯಸಿದ್ದಾರೋ ಆ ಪ್ರಮಾಣದ ಬಂಡವಾಳವನ್ನು ಹೂಡಲು ಅವರು ಹಿಂಜರಿಯುತ್ತಾರೆ. ಹೀಗೆ ಮೋದಿಯನ್ನು ಬೆಂಬಲಿಸುತ್ತಿರುವ ಉದ್ಯಮಿಗಳು ಹಿಂಜರಿಯಲಿ ಎಂಬ ಕಾರಣಕ್ಕಾಗಿಯೇ ಮನಮೋಹನ್‌ಸಿಂಗ್ ನೇತೃತ್ವದ ಸರ್ಕಾರ ಭಾರತದ ಅರ್ಥ ವ್ಯವಸ್ಥೆಗೆ ಕೊಡಲಿ ಪೆಟ್ಟು ಹಾಕಿದೆ. ಯಾವಾಗ ಒಂದು ಅರ್ಥ ವ್ಯವಸ್ಥೆಯಲ್ಲಿ ಹಣದ ಹರಿವು ಕಡಿಮೆಯಾಗುತ್ತದೋ ಆಗ ಸಹಜವಾಗಿಯೇ ಉದ್ಯಮ ವಲಯ ತಲ್ಲಣಿಸುತ್ತದೆ. ಉದ್ಯಮ ವಲಯ ತಲ್ಲಣಿಸುತ್ತಿದ್ದಂತೆಯೇ ಅದರ ಪರಿಣಾಮ ಜನಸಾಮಾನ್ಯರ ಮೇಲಾಗುತ್ತದೆ. ಹಣದ ಹರಿವಿಲ್ಲದೆ ಕಂಗಾಲಾಗುವ ಜನ ಮೊದಲು ತಮ್ಮ ಅನ್ನ, ಬಟ್ಟೆ, ವಸತಿಗೆ ಆದ್ಯತೆ ಕೊಟ್ಟು ಉಳಿದ ವಿಷಯಗಳ ಮೇಲಿನ ಗಮನವನ್ನು ಕಡಿಮೆ ಮಾಡುತ್ತಾರೆ. ಇದು ಕೂಡ ಉದ್ಯಮ ವಲಯದ ಬೆಳವಣಿಗೆಗೆ ವ್ಯತಿರಿಕ್ತವಾದ ಬೆಳವಣಿಗೆ. ಮಾರುಕಟ್ಟೆಯಲ್ಲಿ ಹಣದ ಹರಿವಿದ್ದರೆ ತಾನೇ ಜನಸಾಮಾನ್ಯರ ಕೊಳ್ಳುವ ಶಕ್ತಿ ಹೆಚ್ಚಾಗುವುದು? ಆ ಶಕ್ತಿಯೇ ಕಡಿಮೆಯಾದರೆ ಮೊದಲು ಹೊಡೆತ ತಿನ್ನುವುದು ಉದ್ಯಮ ವಲಯ.

ಹೀಗೆ ನರೇಂದ್ರ ಮೋದಿ ಪರವಾದ ಅಲೆ ಏಳಬಾರದೆಂದು ಇಷ್ಟೆಲ್ಲ ಸರ್ಕಸ್ಸು ನಡೆಸುತ್ತಿರುವ ಕಾಂಗ್ರೆಸ್ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸಬೇಕು ಎಂದು ಹೇಳದೆ ಇನ್ನೇನು ಹೇಳಲು ಸಾಧ್ಯ? ಎಲ್ಲಕ್ಕಿಂತ ಮುಖ್ಯವಾಗಿ ಅದು ತಮ್ಮ ಮೇಲೆ ನಡೆಸುತ್ತಿರುವ ಗದಾ ಪ್ರಹಾರದಿಂದ, ದೇಶದ ಆರ್ಥಿಕ ವ್ಯವಸ್ಥೆ ಕುಗ್ಗುವಂತೆ ಮಾಡಿರುವ ಕ್ರಮದಿಂದ ಆಕ್ರೋಶಗೊಂಡಿರುವ ಉದ್ಯಮಿಗಳು ಸಹಜವಾಗಿಯೇ ಮೋದಿ ಪರವಾದ ಒಲವನ್ನು ಹೆಚ್ಚು ಮಾಡಿಕೊಂಡಿದ್ದಾರೆ. ಇಂತಹ ಒಲವು ಅವರ ಹಿಡಿತದಲ್ಲಿರುವ ಮಾಧ್ಯಮಗಳ ಮೂಲಕ ವ್ಯಕ್ತವಾದರೆ ಅದು ಸಹಜವೇ. ಒಂದು ವೇಳೆ ಈ ಸಮೀಕ್ಷೆಗಳು ರಾಜಸ್ತಾನ, ಛತ್ತೀಸ್‌ಗಡ ಹಾಗೂ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಳ ಮೇಲೆ ಪ್ರಭಾವ ಬೀರಿದರೆ, ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದರೆ ಸೆಮಿಫೈನಲ್ ಫಲಿತಾಂಶ ಅದರ ಪರವಾಗಿದೆ ಎಂದೇ ಅರ್ಥ. ಒಂದು ಸಲ ಸೆಮಿಫೈನಲ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿತು ಎಂದರೆ ಆರು ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಎಂಬ ಫೈನಲ್‌ನಲ್ಲಿ ಎನ್‌ಡಿಎ ಮೈತ್ರಿಕೂಟದ ಜತೆ ದೇಶದ ವಿವಿಧ ರಾಜ್ಯಗಳಲ್ಲಿರುವ ಶಕ್ತಿಗಳು ಕೈ ಜೋಡಿಸಬಹುದು. ಹಾಗೇನಾದರೂ ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ನಿಸ್ಸಂಶಯವಾಗಿಯೂ ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತದೆ. ಹಾಗೇನಾದರೂ ಆದರೆ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವ ಕನಸನ್ನು ಪಕ್ಕಕ್ಕಿಟ್ಟು ಒಂದೋ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ ಶರದ್ ಪವಾರ್ ಇಲ್ಲವೇ ಮುಲಾಯಂ ಸಿಂಗ್ ಯಾದವ್ ಅವರನ್ನು ಪ್ರಧಾನಿ ಗದ್ದುಗೆಯ ಮೇಲೆ ಕೂರಿಸಿ ಬೆಂಬಲ ಕೊಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ಇಂತಹ ಅನಿವಾರ್ಯತೆ ಸೃಷ್ಟಿಯಾಗುವುದು ಬೇಡ ಅಂತ ಕಾಂಗ್ರೆಸ್ ಬಯಸುವುದು ಸಹಜ. ಇದೇ ಕಾರಣಕ್ಕಾಗಿ ನರೇಂದ್ರ ಮೋದಿ ಅವರನ್ನು ವೈಭವೀಕರಿಸುವ ಎಲ್ಲ ಪ್ರಯತ್ನಗಳ ವಿರುದ್ಧ ಅದು ತಕ್ಷಣವೇ ಗದಾ ಪ್ರಹಾರ ಮಾಡಲು ಮುಂದಾಗುತ್ತದೆ. ಈಗ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸಬೇಕು ಎಂದು ವಾದಿಸುತ್ತಿರುವುದೂ ಇದರ ಒಂದು ಭಾಗ. ಆದರೆ ತನಗೆ ಅನುಕೂಲವಾಗುತ್ತದೆ ಎಂಬ ಪರಿಸ್ಥಿತಿಯಿದ್ದಾಗ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಬೆಂಬಲಿಸುವ ಕಾಂಗ್ರೆಸ್ ಈಗ ತನಗೆ ಅನಾನುಕೂಲದ ವಾತಾವರಣವಿದೆ ಎಂದಾಗ ಅದನ್ನು ವಿರೋಧಿಸುತ್ತಿರುವುದು ಅದರ ರಾಜಕೀಯ ಆಟವೇ ಹೊರತು ಇನ್ನೇನಲ್ಲ. ಬಿಜೆಪಿಯಾದರೂ ಅಷ್ಟೇ. ಈ ದೇಶದ ಕಾರ್ಪೊರೇಟ್ ಡಾನುಗಳು ತಮ್ಮ ಪರವಾಗಿದ್ದಾರೆ. ಮೋದಿ ನೇತೃತ್ವದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿ ಎಂದು ಬಯಸುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಚುನಾವಣಾ ಪೂರ್ವ ಸಮೀಕ್ಷೆಗಳ ಪರವಾಗಿ ವಾದಿಸುತ್ತಿದ್ದಾರೆ. ಬಿಜೆಪಿಯ ತಾಯಿ ಅನ್ನಿಸಿಕೊಂಡಿರುವ ಆರೆಸ್ಸೆಸ್ ನಾಯಕರಂತೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವದೇಶಿ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳವನ್ನು ಹರಿಸಲಿರುವ ಎಫ್‌ಡಿಐಗೆ ಬೆಂಬಲ ಕೊಡುವ ಮಾತನಾಡುತ್ತಿದ್ದಾರೆ. ಹೀಗೆ ಯಾವ ಕಡೆಯಿಂದ ನೋಡಿದರೂ ಕಾಂಗ್ರೆಸ್ ಮತ್ತು ಬಿಜೆಪಿ ತಮಗೆ ಅನುಕೂಲವಾಗುವ ವಿಷಯದ ಕುರಿತು ಜೈ ಎನ್ನುತ್ತಿವೆಯೇ ಹೊರತು ಜನಸಾಮಾನ್ಯರ ಬವಣೆಗಳನ್ನು ದೂರ ಮಾಡುವ ವಿಷಯದಲ್ಲಿ ಕಕ್ಕುಲತಿ ತೋರುತ್ತಿಲ್ಲ. ಅದೇ ಸದ್ಯದ ವಿಪರ್ಯಾಸ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 09 November, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books