Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಇವರೆಲ್ಲ ಹೇಗೆ ಬದಲಾದರು ನೋಡಿ?

ರಾಜಕಾರಣದಲ್ಲಿ ಉನ್ನತ ಹುದ್ದೆಗೇರಿದವರು ಹೇಗೆ ಕೆಡುತ್ತಾರೆ? ತಮ್ಮ ಖುರ್ಚಿಯ ಕಾಲುಗಳನ್ನು ತಾವೇ ಹೇಗೆ ಗರಗಸದಿಂದ ಕೊಯ್ದುಕೊಳ್ಳುತ್ತಾರೆ? ಹೀಗೆ ಮಾಡುತ್ತಲೇ ಹೇಗೆ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುತ್ತಾರೆ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ ಹಲವು ಕುತೂಹಲಕಾರಿ ಉದಾಹರಣೆಗಳು ಸಿಗುತ್ತವೆ. ಉದಾಹರಣೆಗೆ ಸಿಎಂ ಸಿದ್ಧರಾಮಯ್ಯನವರನ್ನೇ ತೆಗೆದುಕೊಳ್ಳಿ. ಅಧಿಕಾರಕ್ಕೆ ಬಂದ ಶುರುವಿನಲ್ಲಿ ಅವರು ಅನಗತ್ಯವಾಗಿ ಮಾತನಾಡುತ್ತಿರಲಿಲ್ಲ. ಪ್ರತಿಪಕ್ಷದ ನಾಯಕರಾಗಿದ್ದಾಗ ಒಂದು ಸರ್ಕಾರದ ಮೇಲೆ ನಿರಂತರವಾಗಿ ದಾಳಿ ನಡೆಸುವುದು, ಆಡಳಿತಾತ್ಮಕ ಲೋಪಗಳನ್ನು ಎತ್ತಿ ತೋರಿಸುವುದು ಸರಿ. ಆದರೆ ಮುಖ್ಯಮಂತ್ರಿ ಹುದ್ದೆಗೇರಿದ ನಂತರ ಒಬ್ಬ ನಾಯಕ ಮಾತನಾಡುವುದನ್ನು ಕಡಿಮೆ ಮಾಡಬೇಕು.

ಎಸ್ಸೆಂ ಕೃಷ್ಣ ಅವರ ವಿರುದ್ಧ ನಾವು ಏನೇ ಟೀಕೆ ಮಾಡಬಹುದು. ತಪ್ಪುಗಳು ಕಂಡು ಬಂದಾಗ ಟೀಕೆ ಮಾಡಲೇಬೇಕು. ಮತ್ತು ಈ ವಿಷಯದಲ್ಲಿ ಯಾವ ಹಿಂಜರಿಕೆಯೂ ಕೂಡದು. ಹೀಗೇ ಎಸ್ಸೆಂ ಕೃಷ್ಣ ಅವರ ಆಡಳಿತದ ಅವಧಿಯಲ್ಲಿ ನಡೆದ ಲೋಪಗಳ ಬಗ್ಗೆ ನಾವು ಬೇಕಾದಷ್ಟು ದೂರಬಹುದು. ಆದರೆ ಎಸ್ಸೆಂ ಕೃಷ್ಣ ಅವರ ನಾಲಿಗೆ ಯಾವತ್ತೂ ಇಷ್ಟ ಬಂದಂತೆ ಆಡುತ್ತಿರಲಿಲ್ಲ. ವಿರೋಧ ಪಕ್ಷಗಳವರಿರಲಿ, ತಾವು ಖಾಸಗಿಯಾಗಿ ಆಡಿದ ಮಾತನ್ನು ಮಾಜಿ ಸಚಿವ ವಿಶ್ವನಾಥ್ ತಮ್ಮ ಪುಸ್ತಕದಲ್ಲಿ ಬಹಿರಂಗಪಡಿಸಿದ್ದರಿಂದ ಆದ ಮುಜುಗರವೇ ಇರಲಿ, ಕೃಷ್ಣ ಪ್ರತಿಕ್ರಿಯಿಸಿದ್ದು ಕಡಿಮೆ. ಸರ್ಕಾರ ಎಂದರೆ ಆಕ್ಷನ್. ಪ್ರತಿಪಕ್ಷ ಎಂದರೆ ರಿಯಾಕ್ಷನ್ ಎಂಬಂತೆ ನಡೆದುಕೊಂಡವರು ಕೃಷ್ಣ. ಹೀಗಾಗಿ ಅವರು ಆಡಳಿತ ನಡೆಸಿದ ಸುಮಾರು ಐದು ವರ್ಷಗಳ ಅವಧಿಯಲ್ಲಿ ರಿಯಾಕ್ಷನ್ ಕೊಟ್ಟಿದ್ದು ಕಡಿಮೆ.

ಕನ್ನಡದ ವರನಟ ರಾಜ್‌ಕುಮಾರ್ ಅವರನ್ನು ನರಹಂತಕ ವೀರಪ್ಪನ್ ಅಪಹರಿಸಿದ ಸಂದರ್ಭದಲ್ಲಿ ಇಡೀ ರಾಜ್ಯವೇ ಹೊತ್ತಿ ಉರಿಯುವ ಸ್ಥಿತಿಗೆ ತಲುಪಿತ್ತು. ಅಂತಹ ಸಂದರ್ಭದಲ್ಲಿ ಯಾರಾದರೂ ಕಾಕಾಪೂಕಿ ನಾಯಕ ಸಿಎಂ ಆಗಿದ್ದಿದ್ದರೆ ಅದೇನೇನು ಅನಾಹುತಗಳಾಗುತ್ತಿದ್ದವೋ? ಆದರೆ ಎಸ್ಸೆಂ ಕೃಷ್ಣ ಅವರ ಮೌನ ಇಡೀ ಎಪಿಸೋಡನ್ನು ಎಷ್ಟು ಚೆನ್ನಾಗಿ ನಿಭಾಯಿಸಿತು ಎಂದರೆ ರಾಜ್ ಅಪಹರಣ ನಡೆದು ನೂರು ದಿನಗಳಷ್ಟು ಸುದೀರ್ಘ ಕಾಲ ಕರ್ನಾಟಕ ಸಾವರಿಸಿಕೊಂಡು ಮುನ್ನಡೆಯುವಂತಾಯಿತು. ಅವರಿಗೆ ಪ್ರಚಾರದ ಹುಚ್ಚು ಇದ್ದಿದ್ದರೆ ದಿನಕ್ಕೆ ಹತ್ತು ಸಲ ಮಾತನಾಡಬಹುದಿತ್ತು. ಆದರೆ ಕೃಷ್ಣ ಅವರು ವೀರಪ್ಪನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗುವ ಬೆಳವಣಿಗೆಗಳ ವಿವರವನ್ನು ಮಾಧ್ಯಮಗಳಿಗೆ ಹೇಳುವ ಜವಾಬ್ದಾರಿಯನ್ನು ಅವತ್ತು ಗೃಹಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಹಿಸಿದರು.

ಮಾತಿನ ವಿಷಯ ಬಂದರೆ ಕೃಷ್ಣ ಅವರಿಗಿಂತ ಖರ್ಗೆ ಭಾರೀ ಬಿಗುವಿನ ನಾಯಕ. ಒಂದು ಪದ ಬಳಸಲು ಹತ್ತು ಸಲ ಯೋಚಿಸುವ ಖರ್ಗೆ ಒಂದು ವಾರ ಕಳೆಯುವಷ್ಟರಲ್ಲಿ ಮಾಧ್ಯಮದವರ ಸುದ್ದಿ ಬಗೆಯುವ ಚಪಲದ ಮೇಲೆ ಚಪ್ಪಡಿ ಕಲ್ಲು ಎಳೆದುಬಿಟ್ಟರು. ಕೊನೆ ಕೊನೆಗೆ ಪರಿಸ್ಥಿತಿ ಹೇಗಾಯಿತೆಂದರೆ ರಾಜ್ ಅಪಹರಣಕ್ಕೆ ಸಂಬಂಧಿಸಿದಂತೆ ಕೃಷ್ಣ ಅವರ ಬಳಿ ಹೋದರೆ ಖರ್ಗೆ ಹತ್ತಿರ ಕೇಳಿ ಅನ್ನುತ್ತಿದ್ದರು. ಖರ್ಗೆ ಹತ್ತಿರ ಹೋದರೆ ಗರಂ ಹವಾ ಎಬ್ಬಿಸುವ ಸುದ್ದಿ ಕೊಡದೇ ಹಬೆಯಾಡುವ ಚಹಾ ಮಾತ್ರ ಸಿಗುತ್ತಿತ್ತು. ಹೀಗಾಗಿ ರಾಜ್ ಅಪಹರಣದ ಸುದ್ದಿಯನ್ನು ರೋಚಕಗೊಳಿಸಲು ಮಾಧ್ಯಮಗಳು ನಕ್ಕೀರನ್ ಗೋಪಾಲ್ ಕೊಡುತ್ತಿದ್ದ ಸುದ್ದಿಯನ್ನೋ, ಇನ್ಯಾವುದೋ ಮೂಲದಿಂದ ಪಡೆದ ಸುದ್ದಿಯನ್ನೋ ಪ್ರಕಟಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಇದನ್ನೇಕೆ ಹೇಳಿದೆನೆಂದರೆ ಉನ್ನತ ಸ್ಥಾನದಲ್ಲಿರುವವರು ಕೆಲಸ ಮಾಡಬೇಕೇ ಹೊರತು ಹೆಚ್ಚು ಮಾತನಾಡಬಾರದು.

ಅಂದ ಹಾಗೆ ಮುಖ್ಯಮಂತ್ರಿಗಳಾದವರೆಲ್ಲ ಕೃಷ್ಣ ಅವರಂತೆಯೇ ಇರಬೇಕು ಎಂದಲ್ಲ. ಆದರೆ ಸನ್ನಿವೇಶವನ್ನು ಹಗುರಗೊಳಿಸುವ ಶಕ್ತಿ ಮಾತಿಗಿಲ್ಲ ಎನ್ನಿಸಿದರೆ ಮೌನವಾಗಿರುವುದು ಬೆಟರ್ರು. ಇದನ್ನು ಹೇಳುವಾಗ ಒಂದು ಝೆನ್ ಕತೆ ನೆನಪಾಗುತ್ತದೆ. ಒಬ್ಬ ವ್ಯಕ್ತಿ ಝೆನ್ ಗುರುಗಳೊಬ್ಬರನ್ನು ನೋಡಲು ಹೋದ. ಅಲ್ಲಿ ಹೋಗಿ ನೋಡಿದರೆ ಗುರುವಿನ ಸಮ್ಮುಖದಲ್ಲಿ ನೂರಾರು ಮಂದಿ ಶಿಷ್ಯರು ಕುಳಿತಿದ್ದಾರೆ. ಆದರೆ ಅಷ್ಟು ಮಂದಿ ಇದ್ದರೂ ಅಲ್ಲಿ ಸೂಜಿ ಹಾಕಿದರೂ ಸದ್ದಾಗುವಂತಹ ಮೌನದ ವಾತಾವರಣ. ಸರಿ, ಈತ ಕಾಯುತ್ತಾ ಕುಳಿತ, ಒಂದು ಗಂಟೆಯಾಯಿತು, ಎರಡು ಗಂಟೆ ಕಳೆಯಿತು. ಮೂರು ಗಂಟೆಯ ಗಡಿ ತಲುಪಿತು. ಚಕಾರ ಶಬ್ದವೂ ಇಲ್ಲ. ಹಾಗಂತಲೇ ಗುರುಗಳನ್ನು ನೋಡಲು ಹೋದ ವ್ಯಕ್ತಿ ಮೆಲ್ಲನೆ ಹತ್ತಿರ ಹೋದ.

ಈತನನ್ನು ನೋಡಿದ ಗುರುಗಳು ಎದ್ದು ಬಂದರು. ಅವರಿಗೆ ವಂದಿಸಿದ ವ್ಯಕ್ತಿ, ಇದೇನಿದು ಆಶ್ಚರ್ಯ. ಇಷ್ಟು ಜನ ಇದ್ದಾರೆ. ಒಬ್ಬರೂ ಮಾತನಾಡುತ್ತಿಲ್ಲವಲ್ಲ? ಅಂತ ಕೇಳಿದ. ಆತನ ಮಾತು ಕೇಳಿದ ಗುರುಗಳು ಹೇಳಿದರು: ಇಲ್ಲಿರುವವರಿಗೆಲ್ಲ ಮಾತು ಬರುತ್ತದೆ. ಆದರೆ ಒಂದು ಮಾತಿಗೆ ಮೌನಕ್ಕಿಂತ ಹೆಚ್ಚಿನ ಅರ್ಥವಿದೆ ಅನ್ನಿಸಿದಾಗ ಮಾತನಾಡುತ್ತಾರೆ ಎಂದರು. ಇದನ್ನು ಕೇಳಿದ ವ್ಯಕ್ತಿ ಸುಸ್ತು. ಇದನ್ನೇಕೆ ಹೇಳಿದೆನೆಂದರೆ ಮೊನ್ನೆ ಸಿದ್ಧರಾಮಯ್ಯ ಇದ್ದಕ್ಕಿದ್ದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ದಂಡಿಯಾಗಿ ಆರೋಪ ಮಾಡಿದರು. ಭ್ರಷ್ಟ ಅಂತ ದೂರಿದರು. ನಿಜ, ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಬಗ್ಗೆ ಬೇಕಾದಷ್ಟು ಆರೋಪಗಳಿವೆ. ಈ ಕುರಿತು ತನಿಖೆಯೂ ನಡೆಯುತ್ತಿದೆ. ತಪ್ಪು ಮಾಡಿದವರು ಒಂದಿಲ್ಲ ಒಂದು ದಿನ ಶಿಕ್ಷೆ ಅನುಭವಿಸಲೇಬೇಕು. ಸಿದ್ಧರಾಮಯ್ಯ ಮಾತನಾಡಿದರೂ ಅಷ್ಟೇ. ಮಾತನಾಡದೇ ಹೋದರೂ ಅಷ್ಟೇ. ಯಡಿಯೂರಪ್ಪ ಏನು ಅನುಭವಿಸಬೇಕೋ? ಅದನ್ನು ಅನುಭವಿಸದೆ ದಾರಿಯಿಲ್ಲ. ಇದು ಗೊತ್ತಿದ್ದರೂ ಹೋದಲ್ಲಿ ಬಂದಲ್ಲಿ ಯಡಿಯೂರಪ್ಪನವರನ್ನು ಕೆರಳಿಸುವಂತೆ ಮಾತನಾಡುವುದು ಸರಿಯಲ್ಲ.

ಯಾಕೆಂದರೆ ಸಿದ್ಧರಾಮಯ್ಯ ಈ ರೀತಿ ಟೀಕಿಸಿದ್ದೇ ತಡ, ಅತ್ತ ಕಡೆಯಿಂದ ಯಡಿಯೂರಪ್ಪ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಏಕವಚನ ಪ್ರಯೋಗ ಮಾಡಿ ಬೈದರು. ನಿನ್ನನ್ನು ಅಧಿಕಾರದಿಂದ ಕೆಳಗಿಳಿಸುವ ತನಕ ನಾನು ಸುಮ್ಮನಿರುವುದಿಲ್ಲ ಅಂತ ಶಪಥ ಮಾಡಿದರು. ಅವರು ಆ ರೀತಿ ಶಪಥ ಮಾಡಿದ್ದೇ ತಡ, ಇತ್ತ ಕಡೆಯಿಂದ ಸಿದ್ಧರಾಮಯ್ಯ ಸೆಡ್ಡು ಹೊಡೆದರು. ಈ ಯಡಿಯೂರಪ್ಪನವರಂತಹ ನೂರು ಜನ ಬಂದರೂ ನನ್ನನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಆತ್ಮವಿಶ್ವಾಸದ ಪರಾಕಾಷ್ಟೆಗೆ ತಲುಪಿದರು. ಈ ಇಬ್ಬರ ಜಗಳದಿಂದ ಈ ರಾಜ್ಯಕ್ಕೆ ಏನಾದರೂ ಉಪಯೋಗವಾಯಿತೇ? ಏನೂ ಇಲ್ಲ. ಅಂದ ಹಾಗೆ ಇಬ್ಬರು ನಾಯಕರ ಮಧ್ಯೆ ಜಗಳ ನಡೆಯುವ ಸ್ಥಿತಿ ಬಂದರೆ ಅದು ಗಂಧದ ಜತೆಗಿನ ಗುದ್ದಾಟವಾಗಬೇಕೇ ಹೊರತು ಗಾಳಿಯ ಜತೆಗಿನ ಗುದ್ದಾಟವಾಗಬಾರದು.

ಈ ವಿಷಯ ಬಂದಾಗ ಜೆ.ಎಚ್.ಪಟೇಲರನ್ನು ನೋಡಬೇಕು. ಪಟೇಲರಂತೆ ಮಾತನಾಡಿದ, ಮಾತನಾಡಿದ್ದೆಲ್ಲವನ್ನೂ ದಕ್ಕಿಸಿಕೊಂಡ ಮತ್ತೊಬ್ಬ ಮುಖ್ಯಮಂತ್ರಿ ಕರ್ನಾಟಕದ ಪಡಸಾಲೆಯಲ್ಲಿ ಇಲ್ಲವೇ ಇಲ್ಲ ಎನ್ನಬೇಕು. ಕಾಲ ಕಾಲಕ್ಕೆ ಅವರು ಹೆಗಡೆ, ದೇವೆಗೌಡ, ಸಿದ್ಧರಾಮಯ್ಯ ಸೇರಿದಂತೆ ಸ್ವ ಪಕ್ಷದ ನಾಯಕರಿಂದ ಹಿಡಿದು ವಿರೋಧ ಪಕ್ಷಗಳ ನಾಯಕರ ತನಕ ಎಲ್ಲರ ಜತೆಗೂ ಮಾತಿನ ಗುದ್ದಾಟಕ್ಕಿಳಿಯುತ್ತಿದ್ದರು. ಆದರೆ ಫೈನಲಿ, ಈ ಗುದ್ದಾಟವನ್ನು ನೋಡಿದವರಿಗೆ ಅಸಹ್ಯವಾಗುತ್ತಿರಲಿಲ್ಲ. ಏನೋ ಒಂದು ಹೊಸ ವಿಚಾರ ತಿಳಿದುಕೊಂಡಂತಾಗುತ್ತಿತ್ತು. ಇಲ್ಲವೇ ಬಿದ್ದು ಬಿದ್ದು ನಗಲು ಅವಕಾಶ ಸಿಗುತ್ತಿತ್ತು. ಅವರು ಸಿಎಂ ಆಗಿದ್ದ ಕಾಲದಲ್ಲಿ ದೇವೆಗೌಡ- ರಾಮಕೃಷ್ಣ ಹೆಗಡೆ ಎಂಬ ದಿಗ್ಗಜ ನಾಯಕರಿಬ್ಬರ ನಡುವೆ ಘನಘೋರ ಸಂಗ್ರಾಮ ನಡೆಯುತ್ತಿತ್ತು. ದೇವೆಗೌಡರ ಪ್ರಭಾವ ಹೆಚ್ಚಾಗಿದ್ದ ಜನತಾದಳ ಸರ್ಕಾರವನ್ನು ಉರುಳಿಸಲು ಹೆಗಡೆ ಸಾಹಸ ಮಾಡುತ್ತಿದ್ದರು.

ಇಂತಹ ಕಾಲಘಟ್ಟದಲ್ಲೇ ಒಂದು ಸಲ ಕನ್ನಡ ಚಳವಳಿಯ ನಾಯಕ ವಾಟಾಳ್ ನಾಗರಾಜ್ ತುಂಬಿದ ವಿಧಾನಸಭೆಯಲ್ಲಿ ಪಟೇಲರೇ, ಈ ಸರ್ಕಾರದಲ್ಲಿರುವವರು ಹೊರಗೆ ಬರಬೇಕು ಅಂತ ಹೆಗಡೆ ಕರೆ ಕೊಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಯಾವುದೇ ಕ್ಷಣದಲ್ಲಿ ನಿಮ್ಮ ಸರ್ಕಾರ ಉರುಳಬಹುದು. ಏನು ಮಾಡುತ್ತೀರಿ? ಅಂತ ಪ್ರಶ್ನಿಸಿದರು. ಆಗ ಉತ್ತರಿಸಿದ ಪಟೇಲರು ಅಯ್ಯೋ, ನನ್ನ ಮನೆ ಎದುರಿನಿಂದ ದಿನ ಬೆಳಗ್ಗೆ ಒಂದು ರೈಲು ಕೂಗುತ್ತಾ ಆ ಕಡೆ ಹೋಗುತ್ತದೆ. ಸಂಜೆ ಮತ್ತೆ ಕೂಗಿಕೊಳ್ಳುತ್ತಾ ಈ ಕಡೆ ಬರುತ್ತದೆ. ಹಾಗಂತ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಾಧ್ಯವಾ? ಅಂತ ಸಿಕ್ಸರ್ ಬಾರಿಸಿದರು. ಒಬ್ಬ ನಿರ್ಲಿಪ್ತ ನಾಯಕನಿಗೆ ಮಾತ್ರ ಇಂತಹ ಮಾತುಗಳನ್ನಾಡಲು ಸಾಧ್ಯ? ಮುಖ್ಯಮಂತ್ರಿಯಾದವರು ಇಂತಹ ನಿರ್ಲಿಪ್ತತೆ ಸಾಧಿಸದಿದ್ದರೆ ದಿನಕ್ಕೆ ಹತ್ತು ಜನರ ಜತೆ ಜಗಳ ಕಾಯುವ ಸ್ಥಿತಿ ಬರುತ್ತದೆ.

ಯಡಿಯೂರಪ್ಪ ಇದೇ ರೀತಿ ಹತ್ತು ಜನರ ಜತೆ ಜಗಳ ಮಾಡುತ್ತಾ ಮಾಡುತ್ತಲೇ ಅಧಿಕಾರ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದರು. ಹೋಲಿಸಿ ನೋಡಿದರೆ ಕರ್ನಾಟಕ ಕಂಡ ಜಗಜಟ್ಟಿ ರಾಜಕಾರಣಿಗಳ ಪೈಕಿ ಅವರು ಮುಂಚೂಣಿ ಸಾಲಿನಲ್ಲಿ ನಿಲ್ಲುವವರು. ಆದರೇನು? ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎನ್ನುವಂತೆ ಮಾತನಾಡಿ ಮಾತನಾಡಿಯೇ ತಮ್ಮ ಸುತ್ತ ಶತ್ರುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡರು. ಕೊನೆಗೊಂದು ದಿನ ಅಕ್ರಮ ಗಣಿಗಾರಿಕೆಯ ವರದಿಯ ಹೆಸರಿನಲ್ಲಿ ರಾಜೀನಾಮೆ ಕೊಟ್ಟು ಮನೆಗೆ ಹೋದರು. ಹಾಗಂತ ಈಗಲೂ ಅವರು ಬದಲಾಗಿದ್ದಾರೆ ಎಂದಲ್ಲ. ಅವರ ಮುಂದೆ ಟಿವಿಯವರು ಹೋಗಿ ಮೈಕು ಹಿಡಿದರೆ ಸಾಕು, ಮೈ ಮೇಲೆ ದೆವ್ವ ಬಂದವರಂತೆ ಆಡುತ್ತಾರೆ. ದಿನಕ್ಕೊಂದು ಶಪಥ ಮಾಡುತ್ತಾರೆ. ನನ್ನ ತಾಕತ್ತೇನು? ಅಂತ ತೋರಿಸುತ್ತೇನೆ ಎಂದು ಗುಡುಗುತ್ತಾರೆ. ಒಬ್ಬ ನಾಯಕ ಈ ರೀತಿ ಪ್ರತಿ ದಿನ ಮಾತನಾಡುತ್ತಾ ಹೋದರೆ ಕೇಳುವ ಜನರಿಗೆ ಬೇಸರವಾಗಿ ಹೋಗುತ್ತದೆ. ಥೋ, ಇದೇನಪ್ಪ ಕೂತರೂ ಮಾತು, ನಿಂತರೂ ಮಾತು ಅಂತ ರೇಜಿಗೆಯಾಗಿ ಹೋಗುತ್ತದೆ. ಅವರು ಇದೇ ರೀತಿ ಮಾತನಾಡುತ್ತಾ ಹೋದರೆ ಇನ್ನು ಸ್ವಲ್ಪ ಕಾಲ ಕಳೆಯುವಷ್ಟರಲ್ಲಿ ನಿಜಕ್ಕೂ ಖಾಯಂ ಆಗಿ ಮನೆ ಸೇರುತ್ತಾರೆ.

ಹೀಗೆ ನೀವು ಇತಿಹಾಸದ ಪುಟಗಳನ್ನು ತೆಗೆದು ನೋಡಿ. ಯಾವ ನಾಯಕರು ಹೆಚ್ಚು ಮಾತನಾಡಿದ್ದಾರೋ, ಅವರು ಬೇಗನೆ ಮನೆ ಸೇರಿಕೊಂಡಿದ್ದಾರೆ. ಯಾರು ಕಡಿಮೆ ಮಾತನಾಡಿದ್ದಾರೋ, ಅವರು ಸುದೀರ್ಘ ಕಾಲ ಉಳಿದುಕೊಂಡಿದ್ದಾರೆ. ಎಂಭತ್ತೆರಡು ವರ್ಷ ಕಳೆದರೂ ದೇವೆಗೌಡ ಇವತ್ತೂ ಅಧಿನಾಯಕನ ಗೆಟಪ್ಪಿನಲ್ಲಿ ಕುಳಿತಿರುವುದು ಕಡಿಮೆ ಮಾತನಾಡಿರುವುದರಿಂದ. ಅನಗತ್ಯವಾಗಿ ಅವರು ಮಾತನಾಡುವುದೇ ಇಲ್ಲ. ಅವರು ಮಾತನಾಡಲು ಬಂದು ಕೂತರು ಎಂದರೆ ಯಾವುದೋ ಒಂದು ವಿಷಯ ಇರಲೇಬೇಕು. ಆದರೆ ವಿಷಯವೇ ಇಲ್ಲದೆ ಮೈಕು ನೋಡಿದ ಕೂಡಲೇ ಮಾತನಾಡುವ ಗುಣ ಬೆಳೆಸಿಕೊಂಡರೆ ಯಡಿಯೂರಪ್ಪ ಹೇಗೆ ತಾನೇ ಶಕ್ತಿ ಗಳಿಸುತ್ತಾರೆ? ಅವರ ಟೀಕೆಗೆ ಪ್ರತಿ ಟೀಕೆ ಮಾಡುತ್ತಾ ಹೋದರೆ ಸಿದ್ಧರಾಮಯ್ಯ ಹೇಗೆ ಗಟ್ಟಿಯಾಗುತ್ತಾರೆ?

ಹೀಗೆ ಒಬ್ಬರ ವಿರುದ್ಧ ಒಬ್ಬರು ಹರಿಹಾಯುತ್ತಾ ಕೂರುವ ಬದಲು ರಾಜ್ಯದ ಏಳಿಗೆಯ ಕಡೆ ಗಮನ ಹರಿಸಿದರೆ ಅವರು ಇತಿಹಾಸದ ಪುಟದಲ್ಲಿ ಎದ್ದು ಕಾಣುತ್ತಾರೆ. ಮೊನ್ನೆ ಅವರು ಬಿಡುಗಡೆ ಮಾಡಿದ ಕೈಗಾರಿಕಾ ನೀತಿ, ಒಂದು ಎಕರೆ ಭೂಮಿ ಪಡೆಯುವ ಕೈಗಾರಿಕೋದ್ಯಮಿಗಳು ಸಾವಿರ ಜನರಿಗೆ ಉದ್ಯೋಗ ಕೊಡಬೇಕು ಎಂದು ಹೇಳಿದೆ. ಇದು ನಿಜವಾದ ಕೆಲಸ. ಇದು ನಿಜವಾದ ಕಾಳಜಿ. ಅಂತಹ ಕಾಳಜಿಯನ್ನು ಹೆಚ್ಚು ಮಾಡಿಕೊಳ್ಳಬೇಕೇ ಹೊರತು ಯಡಿಯೂರಪ್ಪನವರ ಜತೆಗೋ, ಇನ್ಯಾರ ಜತೆಗೋ ಗುದ್ದಾಡುತ್ತಾ ಕುಳಿತರೆ ಏನರ್ಥ? ಅದರಿಂದ ರಾಡಿ ಜಾಸ್ತಿಯಾಗಬಹುದೇ ಹೊರತು ಆಡಳಿತ ಎಂಬ ಗಾಡಿ ಮುನ್ನಡೆಯುವುದಿಲ್ಲ. ಅಲ್ಲವೇ?

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 26 October, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books