Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅವರು ಹೊರಗಣ ಚರ್ಮ ಹರಿದಿದ್ದರು. ಇನ್ನೂ ಕೋಶ ಪ್ರವೇಶ ಆಗಿರಲಿಲ್ಲ

ಸತ್ಯಕಾಮರ ವ್ಯಕ್ತಿತ್ವವೇ ಅಂತಹುದು. ಅದು ಒಂದು ತೆಕ್ಕೆಗೆ, ಒಂದು ಅನುಭೂತಿಗೆ, ಒಂದು ನಿರ್ಣಯಕ್ಕೆ ಸಿಕ್ಕುವಂತಹುದಲ್ಲ. ಸಾಹಿತಿ ಮಿತ್ರರಲ್ಲಿ ಸತ್ಯಕಾಮರ ವ್ಯಕ್ತಿತ್ವದ ಬಗ್ಗೆಯೇ ಭಿನ್ನಾಭಿಪ್ರಾಯ. ಅವರೊಬ್ಬ ಸಾಧಕ ಅಲ್ಲ ಸಮಯ ಸಾಧಕ. ಅವರು ತಾಂತ್ರಿಕ. ಅಲ್ಲ ಕುತಂತ್ರಿ. ಸತ್ಯಕಾಮ ನಿಜವಾದ ಶ್ರೇಷ್ಠ ಸಾಹಿತಿ. ಅಲ್ಲವೇ ಅಲ್ಲ; ಅವರದು ಅರ್ಥಹೀನ ಅಧಮ ಸಾಹಿತ್ಯ!

ಹೀಗೆ ತದ್ವಿರುದ್ಧದ ಅಭಿಪ್ರಾಯಗಳನ್ನು ಹುಟ್ಟಿಕೊಳ್ಳಲು ಬಿಟ್ಟು ತಮ್ಮ ಪಾಡಿಗೆ ತಾವು ಇದ್ದುಬಿಟ್ಟಿದ್ದ ಅವರೇಕೆ ತಮ್ಮ ಹೆಸರನ್ನು ಸತ್ಯಕಾಮ ಅಂತ ಇಟ್ಟುಕೊಂಡರೋ, ಅದೇಕೆ ಮದುವೆಯಾಗದೆ ವ್ಯವಸ್ಥಿತ ಕಾಮವನ್ನು ಧಿಕ್ಕರಿಸಿ ಬ್ರಹ್ಮಚಾರಿಯಾಗಿ ಉಳಿದರೋ.... ಅವರು ಉತ್ತರಿಸಿದರೇನೇ ತಿಳಿದೀತು.

ಇನ್ನು ವೀಣಾ ಬನ್ನಂಜೆಯವರ ಮನಸ್ಸು. ಅದು ಸತ್ಯಕಾಮರಲ್ಲಿ ಕರಗಿಹೋಗಿದೆ. ಇಪ್ಪತ್ತರ ಹುಡುಗಿ ಬದುಕಿನ ಸತ್ಯಗಳನ್ನು ಶೋಧಿಸುತ್ತಾ ಹೋಗಿ ಎಂಬತ್ತರ ವೃದ್ಧನ ರಿಯಲೈಸೇಷನ್‌ಗಳನ್ನು ತನ್ನದಾಗಿಸಿಕೊಳ್ಳುವ ತವಕಕ್ಕೆ ಬಿದ್ದಿದ್ದಾಳೆ. ಅದರಲ್ಲಿರುವುದು ಶುದ್ಧ ಆರಾಧನೆ. ಆಕೆ ಪವಾಡಗಳ ಬಗ್ಗೆ ಮಾತಾಡುವುದಿಲ್ಲ. ತಂತ್ರದ ಬಗ್ಗೆ, ಸಿದ್ಧಿಯ ಬಗ್ಗೆ ಬೆರಗಾಗುವುದಿಲ್ಲ. ಸತ್ಯಕಾಮರ ಪ್ರೀತಿಯ ಬಗ್ಗೆ ವಿವರಣೆಯಾಗುತ್ತಾಳೆ. ತನಗೆ ದೊರೆತ ಸೌಭಾಗ್ಯದ ಬಗ್ಗೆ excite ಆಗುತ್ತಾಳೆ. ಎಂಟು ದಶಕಗಳಷ್ಟು ಹಳೆಯ ಹುತ್ತ ಹೊಕ್ಕ ನಾಗರಮರಿಯ ಸಂಭ್ರಮ ಮತ್ತು infatuationಗಳು ಆಕೆಯ ಪ್ರತಿ ಸಾಲಿನಲ್ಲೂ ಗೋಚರಿಸುತ್ತವೆ...

ಸತ್ಯಕಾಮರು ವೀಣಾಳ ಮೂಲಕ ಇನ್ನೂ ಬದುಕಿದ್ದಾರೆ. ಅವಳಿಗೆ ನನ್ನ ನಮಸ್ಕಾರಗಳು. ಆಕೆ ಬರೆದಿರುವ ಇನ್ನೂರಾ ಇಪ್ಪತ್ತೆಂಟು ಪುಟಗಳ 'ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು' ಪುಸ್ತಕ ಅದ್ಭುತವಾಗಿ ಮೂಡಿ ಬಂದಿದೆ. ವೀಣಾ ಬನ್ನಂಜೆ ಬರಹ ನಿಮ್ಮನ್ನು ಪೂರ್ತಿ ಪುಸ್ತಕ ಓದಿ ಮುಗಿಸುವ ತನಕ ಹಿಡಿದಿಟ್ಟುಕೊಂಡಿರುತ್ತದೆ. ಆ ಶಕ್ತಿ ಆಕೆಗಿರುವುದರಿಂದಲೇ ನಾನು ಅವಳನ್ನು 'ಗುರುಭಗಿನಿ' ಎಂದು ಕರೆಯುತ್ತೇನೆ. ನನ್ನ ಬಿಬಿಸಿ ಪ್ರಕಾಶನದ ಮೂಲಕ ಪ್ರಕಟಣೆಗೊಂಡಿರುವ ಈ ಪುಸ್ತಕ ಮುಂದಿನ ಭಾನುವಾರ ಅಂದರೆ ಅಕ್ಟೋಬರ್ ಇಪ್ಪತ್ತರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಲಹಳ್ಳಿಯಲ್ಲಿ ಬಿಡುಗಡೆಯಾಗಲಿದೆ. ಕಾರ್ಯಕ್ರಮದಲ್ಲಿ ಉಡುಪಿಯ ವಿಶ್ವೇಶ್ವರತೀರ್ಥ ಸ್ವಾಮಿಗಳು, ಸಚಿವೆ ಉಮಾಶ್ರೀ, ಗಂಗಾವತಿ ಪ್ರಾಣೇಶ್, ಬಿ.ಜಯಶ್ರೀ, ಕುಂ.ವೀರಭದ್ರಪ್ಪ, ಹಿರಿಯ ಪತ್ರಕರ್ತರಾದ ಎಂ.ಕೆ.ಭಾಸ್ಕರರಾವ್ ಸೇರಿದಂತೆ ಸಾಕಷ್ಟು ಗಣ್ಯರು ಭಾಗವಹಿಸುತ್ತಾರೆ. ಆ ಕಾರ್ಯಕ್ರಮದಲ್ಲಿ ನೀವಿದ್ದರೆ ಇನ್ನೂ ಚೆನ್ನ. ಅದಿರಲಿ, ವೀಣಾ ಬರೆದಿರುವ 'ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು' ಪುಸ್ತಕ ಅದೆಷ್ಟು ಕುತೂಹಲವಾಗಿದೆ ಎಂಬುದಕ್ಕೆ 'ಚರ್ಮಾನಂದದ ಕಥೆ' ಎಂಬ ಒಂದು ಅಧ್ಯಾಯವನ್ನು ನಿಮಗಾಗಿ ನೀಡಿದ್ದೇನೆ. ಬರೀ ಒಂದೇ ಅಧ್ಯಾಯವಲ್ಲ, ಇಡೀ ಪುಸ್ತಕ ಓದಿ ಮುಗಿಸುವವರೆಗೂ ನಿಮ್ಮ ಕುತೂಹಲ ಹೀಗೆ ಇರುತ್ತದೆ. ಮರೆತೇಬಿಟ್ಟೆ, ಇದೇ ಸಂದರ್ಭದಲ್ಲಿ 'ಸುಮ್ಮನೆ ಸತ್ಯಕಾಮರ ಒಡನಾಟ' ಪುಸ್ತಕ ಕೂಡ ಬಿಡುಗಡೆಯಾಗುತ್ತದೆ. ವೀಣಾಗೆ ಹೇಳಿ ಒಂದು ಆಲ್ ದಿ ಬೆಸ್ಟ್.

-ರವಿ ಬೆಳಗರೆ

***

ಈ ಭೇಟಿಯ ನಂತರ ನಾನು ಊರಿಗೆ ಬಂದು, ಎಷ್ಟೋ ನನ್ನ ಕೆಲಸಗಳಲ್ಲಿ ತೊಡಗಿದ್ದೆ. ನನ್ನ ನಿರಾಸಕ್ತಿಯ ಭಾಗ ಇನ್ನಷ್ಟು ಹೆಚ್ಚಾಗಿಯೇ ನನ್ನನ್ನು ಆವರಿಸುತ್ತಿತ್ತು. ಯಾವಾಗಲಾದರೂ ಮುರಾರಿಯಣ್ಣನ ಮನೆಗೆ 'ಮಾಮ'ನನ್ನು ಕಾಣಲು ಹೋಗುವ ಅವಕಾಶಗಳು ಮಾತ್ರ ಖುಷಿ ಕೊಡುತ್ತಿದ್ದವು. ಮಾತು, ನಗೆ, ಅಪ್ಪುಗೆ, ಅಲ್ಲಲ್ಲಿ ಖುಷಿ. ಆಗ ಸತ್ಯಕಾಮರಿಗೆ ಎಪ್ಪತ್ತೆರಡು. ನನಗೆ ಇಪ್ಪತ್ತೈದು. ನನಗೆ ಅವು ಯಾವುವೂ ಗೊತ್ತಿರಲಿಲ್ಲ. 'ಮಾಮ' ಅಂದರೆ, ಅವರು 'ಇಮಾಮ' ಎನ್ನುತ್ತಿದ್ದರು. ತನ್ನನ್ನು ಮಾಮ ಕರಿಯೋದು ಇಷ್ಟವಿಲ್ಲ ಎಂಬರ್ಥದಲ್ಲಿ. ಆದರೂ ಅದು ಹಾಗೆಯೇ ಇತ್ತು. ಆಗೊಮ್ಮೆ ಈಗೊಮ್ಮೆ ಅವರು ಕಲ್ಲಹಳ್ಳಿಗೆ ಹೊರಟು ಬಿಟ್ರೆ ಆಕಾಶ ಕಳಚಿದ ಹಾಗಾಗಿ ನಾನು ಅಳುವಿನೊಳಗೆ ಮುಳುಗಿ ಬಿಡುತ್ತಿದ್ದೆ. 'ಅಳಬಾರದು ತಾಯಿ, ನಾನು ಬೇಗನೆ ಬರ‍್ತೇನೆ' ಅಂದು ನಡೆದು ಬಿಟ್ಟರೆ, 'ನೀವು ಹೇಳ್ತೀರಿ, ಅಲ್ಲಿ ಹೋದ ಮೇಲೆ ಎಷ್ಟು ದಿನವೋ ಯಾರಿಗೆ ಗೊತ್ತು?' ಅಂತ ನಾನು ಬಿಕ್ಕಿದರೆ, 'ನಾಳೆ ಒಂದು ದಿನ ತಾಯಿ ನಾಡಿದ್ದು ಬೆಳಿಗ್ಗೆ ಇಲ್ಲಿಯೇ ಇದ್ದೇನೆ.' 'ಸುಳ್ಳು ಹೇಳ್ತೀರಿ, ನನ್ನ ಸಮಾಧಾನಕ್ಕೆ' ಅಂದರೆ 'ಇಲ್ಲ ತಾಯಿ ನನ್ನನ್ನು ನಂಬು'. ಹೀಗೆ ಅವರ ಮಾತನ್ನು ನಂಬದೆ, ಕಳಿಸುವ ಅನಿವಾರ್ಯತೆಗೆ ಕಳಿಸಿ ಬಿಡುತ್ತಿದ್ದೆ.

ನಿನ್ನೆ ರಾತ್ರಿ ಕಳಿಸಿದ್ದೇನೆ. ಇಂದು ರಾತ್ರಿ ಮಲಗಿ ಏಳುವಾಗ ಅವರಿಂದ ದೂರವಾಣಿ. 'ಮುರಾರಿಯವರ ಮನೆಗೆ ಇದೇ ಈಗ ಬಂದೆ ತಾಯಿ.' ಹೇಳಿದ ಮಾತಿನಂತೆ ಎರಡನೆಯ ಬೆಳಿಗ್ಗೆ ಇದ್ದು ಬಿಡುತ್ತಿದ್ದರು. ನನಗೆ ನಂಬಲಸಾಧ್ಯ ಆದರೆ ನಂಬಲೇಬೇಕು.
ಕೆಲ ಬಾರಿ, ಸಾಧ್ಯವಾದಷ್ಟು ಹೊತ್ತು ನಾನು ಮುರಾರಿಯಣ್ಣನ ಮನೆಯಲ್ಲಿ ಅವರ ಜೊತೆ, ಮಾತು, ನಗು ಹೀಗೆ.. ಒಂದು ದಿನ ಕಾಲೇಜಿಗೆ ಹೊರಟಿದ್ದೇನೆ. ನಾನು ಹೊರಡುವಾಗ ಅವರ ಮನೆ ನನಗೆ ದಾರಿ. ನನ್ನ ಮೊಪೆಡ್ ಹತ್ತಿ ಅಲ್ಲಿ ಹೊಕ್ಕು ಅವರಿಗೊಂದು ಬಾಯ್ ಹೇಳುವುದು ರೂಢಿಯಾಯ್ತು. ಅಂದು ಹೋದೆ, ಮಾಮ ದಿನದಂತೆ ವರಾಂಡದಲ್ಲಿ ಕಾಣಿಸಲಿಲ್ಲ. ಡ್ರಾಯಿಂಗ್ ರೂಮ್‌ನಲ್ಲೂ ಇಲ್ಲ. ನಾನು ಅಡಿಗೆ ಮನೆ ನೋಡಿದೆ, ಅಲ್ಲಿಯೂ ನಾಪತ್ತೆ, ಕಡೆಗೆ ಅವರಿರುವ ರೂಮಿನ ಬಾಗಿಲು ಸರಿಸಿದೆ. ಮಾಮ ಕಚ್ಚೆ ಪಂಚೆ, ಖಾಲಿ ಮೈಯಲ್ಲಿ ಕವುಚಿ ನೆಲದ ಮೇಲೆ ಮಲಗಿದ್ದಾರೆ. ನಾನು ಸ್ವಲ್ಪ ಗಾಬರಿಯಾಗಿ ಅವರ ತಲೆ ಪಕ್ಕ ಮೊಣಕಾಲೂರಿ ಕುಳಿತು 'ಯಾಕೆ ಮಾಮ ಹೀಗೆ ಏನಾಯಿತು?' ಅವರು ಮುಚ್ಚಿದ್ದ ಕಣ್ಣು ಫಕ್ಕಂತ ಅರಳಿಸಿ 'ಓಹ್ ನೀವೇ, ಏನಿಲ್ಲ ತಾಯಿ ಸ್ವಲ್ಪ ಜ್ವರ, ಜೊತೆಗೆ ಹೊಟ್ಟೆ ನೋವು' ಅಂದರು. 'ಅಯ್ಯಯ್ಯೋ ಡಾಕ್ಟರ್ ಕರೀಲಾ' ಅಂದವಳೇ ಹಣೆಗೆ ಕೈಯಿಟ್ಟೆ, ಸುಡುತ್ತಿತ್ತು. 'ಬೇಡ ತಾಯಿ, ನೀವು ನನ್ನ ವೈದ್ಯರಲ್ಲವೇ, ಮುಟ್ಟಿದಿರಿ, ಇನ್ನು ಉರಿ ನಾಶ' ಅಂದರು. ನನಗೆ ಒಂದು ವಿಚಿತ್ರ ಸೆಳೆತ, ಯಾಕೋ ಹಾಗೆ ಮಾಡಲೇಬೇಕು ಅನಿಸುವ ತೀವ್ರ ಒತ್ತಡ. ನಾನು ಬಾಗಿ ಅವರ ಕೆನ್ನೆಗೆ ಒಂದು ಮುತ್ತು ಕೊಟ್ಟೆ ಅಷ್ಟೆ. ಅವರು ಅರಳಿ ಎದ್ದು ಕುಳಿತರು. 'ಹೋಗಿ ಬಾ ತಾಯಿ, ನನ್ನ ಚಿಂತೆ ಬೇಡವೇ ಬೇಡ, ನಾನು ಸಂಪೂರ್ಣ ಗುಣವಾದೆ' ಅವರ ಕಣ್ಣು ಕುಣಿಯುತ್ತಿತ್ತು. ನನಗೆ ನನ್ನ ಒಳಗೆ ಆ ಕಣ್ಣು ಅರಳುತ್ತಿದ್ದುದು ಕಾಣಿಸಿತು.

ಹೀಗೆ ದೂರವಿದ್ದದ್ದು, ಹತ್ತಿರವಾಗಿ, ಹತ್ತಿರವಿದ್ದದ್ದು ಆಪ್ತವಾಗಿ, ಆಪ್ತವಿದ್ದದ್ದು ಅಂತರ ಕಳೆದು, ಮುಟ್ಟಿ ತಟ್ಟಿ ಮುತ್ತಿಡುವ ಹೊತ್ತಿಗೆ ನನ್ನ ಹಳೆಯ ಚರ್ಮ ಹರಿಯುತ್ತಿತ್ತೋ ಅದೇ ಬೆಳೆಯುತ್ತಿತ್ತೋ ಗೊತ್ತಿಲ್ಲ. ಸಾನ್ನಿಧ್ಯ, ಸಾಮೀಪ್ಯ, ಸಾಲೋಕ್ಯ, ಸಾಯುಜ್ಯ, ಸಾರೂಪ್ಯ ಹಂತ ಹಂತದ ಬೆಳವಣಿಗೆ. ಅಂಥದೊಂದು ನಡೆ ಉಪಕ್ರಮಣದಲ್ಲಿತ್ತು.

ಒಂದು ದಿನ ರಾತ್ರಿ ಎಂಟಕ್ಕೆ ಮಾಮ ಫೋನ್ ಮಾಡಿದರು. 'ಅವ್ವಾ ತುರ್ತು ಕರೆ ಬಂದಿದೆ. ಊರಿಗೆ ಹೋಗಬೇಕು'. ನನಗೆ ಮತ್ತೆ ದಿಗಿಲು. ಮೊಪೆಡ್‌ನಲ್ಲಿ ಹಾರಿ ಬಂದೆ. ಹೋಗಬೇಡಿ ಅಂದೆ, 'ಮುರಾರಿಯಣ್ಣ ಬೇಡ ಹೇಳಿ' ಅಂತ ಮುರಾರಿಯಣ್ಣಗೂ ಕೇಳಿಕೊಂಡೆ. ಅವರು ತಡೆಯಲಿಲ್ಲ. ಅವರ ಮುಖದಲ್ಲಿ ನಿರ್ಭಾವ ಇತ್ತು. ಮಾಮ ಸೂಟ್‌ಕೇಸ್ ಎತ್ತಿ ಹೊರಟರು. ನಾನು ಅವರನ್ನು ಕಳಿಸಿಕೊಡಲು ಮೊಪೆಡ್‌ನಲ್ಲಿ ಕೂರಿಸಿಕೊಂಡು ಬಸ್‌ಸ್ಟಾಂಡಿಗೆ ಬಂದೆ. ಅಲ್ಲಿ ಸಿಕ್ಕ ಯಾವುದೋ ಕೆಂಪು ಬಸ್ ಹತ್ತಿದರು. ಎರಡನೆಯ ಬೆಳಿಗ್ಗೆ ಮತ್ತೆ ಫೋನ್ ಬಂತು, 'ಅವ್ವಾ ನಾನು ಜನಾರ್ದನ ಹೊಟೇಲ್‌ನ ಇಂಥ ಸಂಖ್ಯೆಯ ರೂಮಿನಲ್ಲಿದ್ದೇನೆ. ನಿನ್ನ ಕೆಲಸ ಮುಗಿದ ಮೇಲೆ ಬಾ', 'ಯಾಕೆ ಮುರಾರಿಯಣ್ಣನ ಮನೆಗೆ ಯಾಕೆ ಬಂದಿಲ್ಲ?' 'ಇಲ್ಲ ತಾಯಿ ಅವರು ಯಾಕೋ ನನ್ನಿಂದ ನೊಂದು ಕೊಂಡಂತಿದೆ. ಬೇಡ.' ನಾನು ಹೆಚ್ಚು ವಿಸ್ತರಿಸಲಿಲ್ಲ.

ಕಾಲೇಜು ಪಾಠ ಮುಗಿಸಿ ಸಂಜೆ ಆರರ ಮೇಲೆ ಬಂದೆ. ಅವರ ಜತೆಗೆ ಉಂಡು ತಿಂದು ಮನೆಗೆ ಹೋದೆ. ಮತ್ತೆ ಮರುದಿವಸ ಹೀಗೆ ಕೆಲವಾರು ದಿನ ಸವೆಯಿತು. ಮತ್ತೊಂದು ದಿನ ಮನೆಗೆ ಫೆನ್ ಮಾಡಿ ಹೇಳಿದೆ, 'ನಾನು ಇವತ್ತು ಮಾಮ ಜತೆ ಇರುತ್ತೇನೆ. ನಾಳೆ ಬೆಳಿಗ್ಗೆ ಬರುತ್ತೇನೆ' 'ಆಯಿತು' ಅಂದಿತು ಆ ಕಡೆಯ ಉತ್ತರ.

ಹೀಗೆ ಕೆಲ ದಿನಗಳು ಕಳೆದಿರಬೇಕು. ಒಂದು ದಿನ ಸಂಜೆ ನಾನು ಮಾಮನ ಕೋಣೆಯಲ್ಲಿದ್ದೆ, ಮುರಾರಿಯಣ್ಣ ಒಂದು ಬೆಟಾಲಿಯನ್ ಕರೆದುಕೊಂಡು ಬಂದರು. ಅವರೊಳಗೆ ನಮ್ಮ ತಂದೆ ಬನ್ನಂಜೆ ಗೋವಿಂದಾಚಾರ್ಯರು, ವೈ.ಕೆ.ಮೂರ್ತಿ, ರಾಜಾರಾಮಾಚಾರ್ಯರು ಇದ್ದರು. ನಾನು ಮಾಮನ ಮಂಚದ ಮೇಲೆ ಕೂತಿದ್ದೆ. ಮಾಮ ಒಂದು ಕುರ್ಚಿಯ ಮೇಲೆ ಉಳಿದವರು ಕುರ್ಚಿ ಮಂಚ ಹೀಗೆ ಹಂಚಿಕೊಂಡರು.

ಮಾತು ಆರಂಭಿಸಿದ್ದು ಮುರಾರಿಯಣ್ಣನೇ. 'ಹೇಳಿ ಆಚಾರ್ಯರೇ, ಇದು ಸರಿಯಾ? ಒಂದು ಸಂಪ್ರದಾಯಸ್ಥ ಕುಟುಂಬ; ಸಾಮಾಜಿಕ ನಡವಳಿಕೆಗೆ ಇದು ಶೋಭೆ ತರುವ ಕೆಲಸವಾ? ಅವಳು ಚಿಕ್ಕವಳು, ಅವಳಿಗೆ ತಿಳಿಯೋದಿಲ್ಲ. ಬೇಡ, ಇವರಿಗೇನು ಧಾಡಿ? ಇವರಿಗೆ ಗೊತ್ತಾಗೋದು ಬೇಡವಾ? ಹುಡುಗಿಯ ಜೊತೆ ಹೊಟೇಲಲ್ಲಿ ಇರಬಹುದಾ? ನೋಡಿದವರು ಏನಂದಾರು? ನಿಮ್ಮ ಕುಟುಂಬದ ಮಾನದ ಪ್ರಶ್ನೆ ಮಾತ್ರ ಅಲ್ಲ ಇದು, ಇದರ ಹಿಂದೆ ಸಾಮಾಜಿಕ ಮರ್ಯಾದೆಯೂ ಇದೆ. ಅಷ್ಟು ಯೋಚಿಸಬೇಡವಾ? ಹುಡುಗಿಯನ್ನು ಹೀಗೆಲ್ಲ ಬಳಸಿಕೊಂಡರೆ ನೋಡಿದವರು ಏನಂದಾರು?' ಇತ್ಯಾದಿ.. ಇತ್ಯಾದಿ..

ನನ್ನ ತಂದೆ ಆಚಾರ್ಯರು ಸುಮ್ಮನೆ ಇದ್ದರು. ಮಾಮ, 'ಆಚಾರ್ಯರೆ, ನಿಮಗೆ ಇಂತಹ ಪ್ರಶ್ನೆ ಬಂದಿದೆಯೇ? ನಾನು ಆ ರೀತಿ ವರ್ತಿಸಿದ್ದೇನೆ ಅನಿಸಿದೆಯೇ?' ಕೇಳಿದರು. ಆಚಾರ್ಯರು ತುಂಬ ಶುಭ್ರ ನಗು ನಕ್ಕು 'ಇದು ಮುರಾರಿಯ ಪ್ರಶ್ನೆ, ನನಗೂ ಇದಕ್ಕೂ ಏನೂ ಸಂಬಂಧ ಇಲ್ಲ. ಅವನು ಬರಲೇಬೇಕು ಅಂತ ಹಟ ಹಿಡಿದ, ಬಂದಿದ್ದೇನೆ' ಅಂದರು. ಮಾಮ ಕೂಡಲೇ 'ಮುರಾರಿಗಳೇ ಇದು ಕೇವಲ ನಿಮ್ಮ ಪ್ರಶ್ನೆಯಾದರೆ, ಇದೋ ಬರೆದುಕೊಳ್ಳಿ. ಈ ಸತ್ಯಕಾಮ ನಿಮ್ಮ ಹಾಗೆ ಷಂಡನಲ್ಲ. ವೀಣಾ ಬೇಕು ಅನಿಸಿದರೆ ಕತ್ತಲಲ್ಲಿ ಯಾರಿಗೂ ಕಾಣದಂತೆ ಓಡಿಸಿಕೊಂಡು ಹೋಗುವವನಲ್ಲ ಇವನು, ಹಗಲು ಹೊತ್ತಿನಲ್ಲಿ ಹೆಗಲ ಮೇಲೆ ಹೊತ್ತು ಎಲ್ಲರ ಮುಂದೆಯೂ ಹೋಗುತ್ತಾನೆ. ನಿಲ್ಲಿಸಬಲ್ಲ ಅರ್ಹತೆ ಇದ್ದರೆ ಅದು ವೀಣಾ ಮಾತ್ರ ನೀವ್ಯಾರೂ ಅಲ್ಲ. ಇಷ್ಟಕ್ಕೂ ಮಲಗುವುದೇ ಆದರೆ ಈ ಸತ್ಯಕಾಮ ನಿಮ್ಮ ಹಾಗೆ ಮುಚ್ಚಿದ ಕೋಣೆ ಹುಡುಕುವುದಿಲ್ಲ ರಥ ಬೀದಿಯಲ್ಲಿ ಮಂಚ ಹಾಕಿ ವೀಣಾಳ ಜೊತೆ ಮಲಗುತ್ತಾನೆ. ಯಾಕೆಂದರೆ ಅವನು ಮಲಗುವುದು ನಿಮ್ಮಂಥಲ್ಲ ತಿಳಿದಿರಲಿ' ಅಂದರು. ಎಲ್ಲರೂ ದಿಗ್ಭ್ರಾಂತರಾಗಿ ಸುಮ್ಮನಿದ್ದರು.

ನಮ್ಮ ತಂದೆ ಪರಿಸ್ಥಿತಿಯನ್ನು ತಿಳಿ ಮಾಡುವ ಉದ್ದೇಶದಿಂದ 'ನಿಮಗೆ ಮುರಾರಿ 'ಮನೆಗೆ ಬರಬೇಡಿ' ಅಂದಿರಬಹುದು. ನಾನು ಹೇಳಿಲ್ಲವಲ್ಲ, ಈ ಹೊಟೇಲ್ ಯಾಕೆ, ನಮ್ಮ ಮನೆಗೇ ಬಂದು ನಮ್ಮಲ್ಲೇ ಉಳಿಯಿರಿ' ಅಂದು ಬಿಟ್ಟರು. ನನಗೆ ಆಗಲೇ ಗೊತ್ತಾದದ್ದು ಮುರಾರಿಯಣ್ಣನಿಗೆ ಸತ್ಯಕಾಮರ ಮೇಲೆ ನನ್ನಿಂದಾಗಿ ಅಸಮಾಧಾನ ಆಗಿದೆ.

ಆ ದಿನ ಸತ್ಯಕಾಮರು ನಮ್ಮ ಮನೆಯಲ್ಲೇ ಇಳಿದರು, ಉಳಿದರು. ಆಗೊಮ್ಮೆ ಈಗೊಮ್ಮೆ ಅವರ ಊರಿಗೆ. ನಾನು ಕರೆದಾಗ, ಅವರು ಬಂದಾಗೆಲ್ಲ ಅವರು ನಮ್ಮ ಮನೆಯಲ್ಲೇ ನನ್ನ ಉಪ್ಪರಿಗೆಯ ಕೊಠಡಿಯಲ್ಲೇ ಅವರ ವಾಸ್ತವ್ಯ. ನನಗೆ ಆಗಲೇ ಅವರನ್ನು ದೂರ ಇಟ್ಟದ್ದು ಮರೆತೇ ಹೋಗಿತ್ತು. ಆಗೆಲ್ಲ ಅವರು 'ಹಾಡು' ಬರೆದು ಕೊಟ್ಟರು. ಒಂದು ಹಾಡಂತೂ 'ಮುದಿ ತಂದೆಯನು ಹೆತ್ತ ತಾಯಿ ನೀನು ಕನ್ಯಾಕುಮಾರಿ' ಎಂದು ಬರೆದರು. ಓದಿದರೂ ತಿಳಿಯುತ್ತಿರಲಿಲ್ಲ.

ನನ್ನ ವಾರ್ಷಿಕ ರಜೆಗಳಲ್ಲಿ ಅವರ ಜತೆ ನಾನು ಹಿಮಾಲಯದ ಕೆಲ ಭಾಗಗಳಿಗೆ ಹೋಗಿ ಬರುತ್ತಿದ್ದೆ ಒಂದಿಷ್ಟು ಕಾಲ. ಒಂದು ರಜೆ, ಬಹುತೇಕ ಅದು ಏಪ್ರಿಲ್ ಮೇ 1994 ಇರಬೇಕು, ನಲವತ್ತು ದಿನ ನಾನು, ಅವರು, ನನ್ನ ಸ್ನೇಹಿತ ರಘು ಮತ್ತು ಮಿಲಿಟರಿ ಸ್ನೇಹಿತ ಪವಾರ್ ದಂಪತಿಗಳು ಹಿಮಾಚಲ ಪ್ರದೇಶದ ಕರ್ಚಂನಲ್ಲಿ ಇದ್ದೆವು. ನಮ್ಮ ಮಿಲಿಟರಿ ಸ್ನೇಹಿತ ಪವಾರ್ ಅವರದೇ ಆತಿಥ್ಯ. ನಾವು ಅತಿಥಿಗಳು, ಅವರಿಬ್ಬರದು ಒಂದು ಡೇರೆ, ನಾನು ಮಾಮ ಮತ್ತು ರಘು ಒಂದು ಡೇರೆ. ಪಕ್ಕಕ್ಕೆ ಸತ್ಲೆಜ್ ನದಿ, ಇನ್ನೊಂದು ಬದಿಗೆ ತಲೆಯೆತ್ತಿ ನಿಂತ ಹಿಮಾಲಯ ಪರ್ವತ ನಡುವೆ ಮಿಲಿಟರಿಯ ಸಣ್ಣ ಡೇರೆಗಳು. ಮೈ ನಡುಗುವ ಚಳಿ, ಒಳಗೂ ಹೊರಗೂ, ದಿನದಲ್ಲೆಲ್ಲ ಬೇರೆ ಬೇರೆ ತಾಣಗಳಿಗೆ ಮಿಲಿಟರಿ ಜೀಪಿನಲ್ಲಿ ಸುತ್ತಾಡಿಸುವ ಆನಂದ, ಸಂಜೆಗೆ ಡೇರೆ ಸೇರಿ ಬಿಟ್ಟರೆ ಮತ್ತೆ ಬೆಳಗಾದ ಮೇಲೆಯೇ ಸೂರ್ಯ ಕಿರಣ ಹುಡುಕುತ್ತಾ ಹೊರಗೆ ಬೀಳುವುದು.

ಅಲ್ಲಿ ಮಾಮ 'ಅಪ್ಪಯ್ಯ' ಆಗಿಬಿಟ್ಟಿದ್ದರು. ನಾನು ಅವ್ವಾ, ಮಗಳೆ... ಹೀಗೆ ಹಲವು ಹೆಸರಿನ ತಾಯಿ. ಅಪ್ಪಯ್ಯನನ್ನು ಆ ಕಠಿಣ ಚಳಿಯಲ್ಲಿ ಬಿಗಿದಪ್ಪಿ ಮುತ್ತಿಟ್ಟರೆ, 'ಏಯ್ ಚರ್ಮಾನಂದಿ, ಮುತ್ತಿಟ್ಟರೆ ಚರ್ಮ ಸುಖ ಪಡುವುದು ನಾಯಿ, ದನಕ್ಕೂ ಆಗುತ್ತದೆ, ನೀನು ಅಷ್ಟೇ ಅಲ. ನಾನು ಅಷ್ಟಕ್ಕಾಗಿ ಬರಬೇಕಿಲ್ಲ' ಅಂದರೆ, 'ನನಗೆ ಅದೆಲ್ಲ ಗೊತ್ತಿಲ್ಲ ಅಪ್ಪ. ನಂಗೆ ಮುತ್ತು ಕೊಡಬೇಕು ಅನ್ಸುತ್ತೆ, ಖುಷಿ ಆಗುತ್ತೆ, ಉಳಿದದ್ದೆಲ್ಲಾ ನಾನು ಯೋಚನೇನೇ ಮಾಡಲ್ಲ' ಅಂದೆ. ಎಂದಿನಂತೆ ನನ್ನ ಉಡಾಳ ಉತ್ತರ. ಒಮ್ಮೆಗೆ ಬೀಸಿ ಮುಖವನ್ನು ತನ್ನ ಮುಖಕ್ಕೆ ಹಿಡಿದರು. ಕಣ್ಣಲ್ಲಿ ಕಣ್ಣಿಟ್ಟು 'ಏಯ್ ಚರ್ಮ ಹರಿದುಕೋ. ಮುತ್ತಿಟ್ಟ ಕೂಡಲೇ ಲಿಂಗಾನಂದ ಪಶುಸದೃಶ. ನೀನು ಅಷ್ಟೇ ಅಲ್ಲ, ಎಚ್ಚರಾಗು'.. ನಾನು ಅವರ ಕಣ್ಣಿನ ಕಾಠೋರ‍್ಯಕ್ಕೆ ನಡುಗಿ ಹೋದೆ. 'ನನಗೆ ಗೊತ್ತಿಲ್ಲ ಅಪ್ಪಯ್ಯ... ಅಷ್ಟೆಲ್ಲ ತಿಳಿಯಲಾರೆ ಖುಷಿಯಾಗ್ತಿದೆ ನಿಜ. ಅದರ ಆಚೆಗಿನ ವಿವರಣೆ ತಿಳಿಯದು' ಅಂದೆ. 'ಈ ಮುತ್ತು ಹೆಣದ ಮುತ್ತಲ್ಲ. ಒಳಗೊಂದು ಚೇತನ ಇದೆ, ಅದಕ್ಕೆ ಆನಂದ ಆಗಿದೆ. ಎಚ್ಚರಿಸು ಅದನ್ನು, ಖುಷಿಪಟ್ಟ ದೇಹಕ್ಕೆ ಜೋತು ಬೀಳಬೇಡ' ಅಂದರು. ಅವರ ಕಣ್ಣು ಕೆಂಡದ ಹಾಗೆ ಇತ್ತು. ನಾನು 'ಅಪ್ಪಯ್ಯ ನೀನು ಅದನ್ನು ಮಾಡು. ನನಗೆ ಅದೆಲ್ಲ ಏನೂ ಗೊತ್ತಿಲ್ಲ. ಖುಷಿಯಾದದ್ದನ್ನು ಮಾಡುತ್ತಿದ್ದೇನೆ. ಕಷ್ಟವಾದರೆ ಹೇಳಿದ್ದೇನೆ. ನೀನು ಕೂಡ ಕಠೋರವಾದರೆ ನಾನು ನಡೆಯಲಾರೆ' ಅಂದೆ. ಅವರು ಒಮ್ಮೆಲೆ ಮೃದುವಾದರು, ತಲೆ ನೇವರಿಸಿದರು, 'ನನಗೆ ಗೊತ್ತು ಮಗಳೆ, ನಾನು ನಡೆಸುವ ಹೊಣೆ ಹೊತ್ತವನು, ಆದರೆ ನೀನೂ ಎಡವದಂತೆ ಎಚ್ಚರವಹಿಸಬೇಕಲ್ಲ' ಅಂದವರೇ ಬಾಚಿ ತಬ್ಬಿಕೊಂಡರು. ಬಲದ ಕೈಯಲ್ಲಿ ಓಜವಟ್ಟಿಗೆ ಎಡದ ಕೈಯಲ್ಲಿ ಹಾಲು ಬಟ್ಟಲು. ನಾನು ಪುನಃ ಹಗುರಾಗಿ ತೇಲಿಬಿಡುತ್ತಿದ್ದೆ.

ಹೀಗೆ ನನಗೆ ಮುತ್ತು, ಚುಂಬನಗಳಲ್ಲಿಯೇ ಪ್ರಾಣಾಯಾಮದ ಪಾಠ ಕಲಿಸಿಬಿಟ್ಟಿದ್ದರು ಅಪ್ಪಯ್ಯ. ಆ ನಲವತ್ತು ದಿನಗಳಲ್ಲಿ ನನಗೆ ಚಳಿಯಾಗದಂತೆ ಬೆಚ್ಚಗೆ ಕಾದದ್ದು, ಹಸಿವಾದಾಗ ವಿಧ ವಿಧದ ಊಟ ತರಿಸಿ ತಿನಿಸಿದ್ದು, ಬಿಡು ಬೀಸಾಗಿ ನದೀತಟ, ಬೆಟ್ಟ ಸುತ್ತಾಡಿಸಿದ್ದು ಹೀಗೆ ಕಾಲ ಸರಿದದ್ದೆ ಗೊತ್ತಿಲ್ಲ. ಪಾಠ ಮಾಡಿದ್ದು, ಬೋಧಿಸಿದ್ದು ಊಂ.. ಹ್ಞೂಂ.. ನನಗೆ ಗೊತ್ತಿಲ್ಲ. ಹಾಗಂತ ಅವರ ಕಣ್ಣ ನೋಟದ ಆಚೆಗೆ ನನ್ನನ್ನು ಹರಿಯ ಬಿಟ್ಟದ್ದು ನನಗೆ ಗೊತ್ತಿಲ್ಲ. ನಾನು ಎಲ್ಲಿದ್ದರೂ ಅವರ ಆ ಕಣ್ಣ ಬೆಳಕಿನೊಳಗೆ ಇರುವಂತೆ ಇತ್ತು.

ಪಾಠ ಎಂದರೆ ಸತ್ಲೆಜ್ ನದೀತಟದಲ್ಲಿ ಕಲ್ಲು ತೋರಿಸಿ ಹೇಳಿದ್ದೆಷ್ಟೋ ಅಷ್ಟೆ. 'ಮಗಳೇ, ಈ ಕಲ್ಲು ನೋಡಿದ್ದೀಯಾ? ಹೇಗಿದೆ ಎಷ್ಟು ಮೃದು, ನುಣುಪಾದ ಮೈ ಅಲ್ಲವೆ? ಈ ದಡದ ಮೇಲಿನ ಕಲ್ಲು ನೋಡು ಒರಟೊರಟು ಮೈ, ಆಕಾರವಿಲ್ಲ.' 'ಹೌದಲ್ಲ ಅಪ್ಪ, ಯಾಕೆ ಹಾಗೆ?' 'ಮಗಳೆ ನೋಡು ಈ ನೀರಿನೊಳಗೆ ಇರುವ ಕಲ್ಲು ಬರೇ ತನ್ನನ್ನು ಹರಿವ ನದಿಗೆ ಅರ್ಪಿಸಿಕೊಂಡಿದೆ. ಹಾಗಾಗಿಯೇ ನುಣುಪಾಗಿ ಆಕಾರ ಪಡೆದಿದೆ. ನೀರಿಗೆ ಅರ್ಪಿಸಿಕೊಳ್ಳದೆ ತಮ್ಮಷ್ಟಕ್ಕೆ ಆಚೆಗೆ ಇವೆಯಲ್ಲ ತಮ್ಮ ಅಹಂಕಾರದಿಂದ ಒರಟಾಗಿ ಆಕಾರವಿಲ್ಲದೆ ಹಾಗೆ ಉಳಿದಿವೆ. ಏನೂ ಇಲ್ಲ ಮಗಳೆ, ಯಾವುದಾದರೂ ಒಂದಕ್ಕೆ ಅರ್ಪಿಸಿಕೊ, ತಾನಾಗಿ ಆಕಾರ ಬರುತ್ತದೆ, ಮೃದುವಾಗುತ್ತಿ, ಅರ್ಪಿಸಿಕೊ'. ನನಗೆ ನೀರಿನಡಿಯ ಕಲ್ಲಾಗುವ ಆಸೆ. ಮತ್ತದೇ ತಟದಲ್ಲಿ ಕುಳಿತ ಜಾಗಕ್ಕೆ ನಿನ್ನೆ, ನಾಳೆ, ಇಂದು ಮತ್ತೆ ಮತ್ತೆ ಬರುತ್ತಿದ್ದೆವು. ಒಂದು ಹುಲ್ಲು ತೋರಿಸಿ, 'ನೋಡಿದಿಯಾ ಮಗಳೆ ಈ ಹುಲ್ಲು ನೋಡು ಮೊನ್ನೆಗಿಂತ ನಿನ್ನೆ, ನಿನ್ನೆಗಿಂತ ಇಂದು, ಮತ್ತೆ ನಾಳೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಒಂದು ಹುಲ್ಲು ಬೆಳೆಯುತ್ತೆ, ಕೂದಲು ಬೆಳೆಯುತ್ತೆ, ಉಗುರೂ ಬೆಳೆಯುತ್ತೆ, ನೀನು ಬೆಳೆಯೋದು ಬೇಡವೇ? ನೀನು ಅವುಗಳಿಗಿಂತ ಕನಿಷ್ಠವೇ ತಾಯಿ?' ನನಗೆ ಎಂಥ ಅದ್ಭುತ ಪಾಠ! ಅಷ್ಟೇ. ಇಂಥದೇ ಮಾತು, ಧುಮ್ಮಿಕ್ಕಿ ಹರಿವ ಸತ್ಲೆಜ್ ನದಿ ಎಂತೆಂಥ ಬಂಡೆ ಕೊರೆದು, ಹರಿದು, ಭೋರ್ಗರೆದು ಹರಿವಿಗೆ ದಿಕ್ಕು ಮಾಡಿಕೊಂಡದ್ದನ್ನು ತೋರಿಸಿ, 'ನೋಡು ಮಗಳೆ ಗಂತವ್ಯ ಸೇರುವವರೆಗೂ ಎಲ್ಲ ಅಡ್ಡಿಗಳನ್ನು ಹರಿದು ನಡೆವ ಈ ನದಿಯ ಕೆಚ್ಚು ನೋಡು, ಗಂತವ್ಯ ಸೇರಬೇಕೆಂದರೆ ಅಡ್ಡಿಗಳನ್ನು ಪುಡಿ ಮಾಡಲೇ ಬೇಕಲ್ಲ?' ಅದರ ಆ ಭೋರ್ಗರೆವ ಸದ್ದು ಮೀರಿ ಎದೆಗೆ ಗಂಟೆ ಹೊಡೆದಂತೆ ಅವರ ಮಾತು!

ಪ್ರಯಾಣ ಮುಗಿಸಿ ಕರ್ನಾಟಕಕ್ಕೆ ಬಂದು ಇಳಿದವರು ಮೊದಲು ಹೋದದ್ದು ಅಪ್ಪಯ್ಯನ ತೋಟ ಕಲ್ಲಹಳ್ಳಿಗೆ. ಎರಡು ಮೂರು ದಿನಗಳ ರೈಲು ಪ್ರಯಾಣ ಮುಗಿಸಿ ಕಲ್ಲಹಳ್ಳಿ ಮನೆ ಸೇರುವ ಹೊತ್ತಿಗೆ ತುಂಬ ದಣಿವಿತ್ತು. ಬಿಸಿ ನೀರಿನ ಹಂಡೆಸ್ನಾನ ಮುಗಿಸಿ ಉಪ್ಪರಿಗೆಯ ಅವರ ಹಾಲ್‌ಗೆ ಬಂದೆ. ಅಪ್ಪಯ್ಯ ಏನೋ ಬರೆಯುತ್ತಿದ್ದರು. ಆ ಹಾಲ್‌ನಲ್ಲಿ ಒಂದು ಬೀಗ ಹಾಕಿದ ಕದವಿತ್ತು. ಹಿಂದಿನ ನನ್ನ ಭೇಟಿಯಲ್ಲೂ ಅದು ಹಾಗೆಯೇ ಇತ್ತು. ಈ ಬಾರಿ ಕುತೂಹಲದಿಂದ ಕೇಳಿದೆ 'ಇದೇನಪ್ಪಾ ಬೀಗದ ಬಾಗಿಲು, ಏನಿದೆ ಅಲ್ಲಿ?' ಅವರು ಅದರ ಚೌಕಟ್ಟಿನಲ್ಲೇ ಸಿಕ್ಕಿಸಿದ್ದ ಕೀಲಿಕೈಯಿಂದ ಕೀಲಿ ತೆಗೆಯುತ್ತಾ, 'ಇದು ದೇವರ ಕೋಣೆ ಮಗಳೆ, ಪೂಜೆಗೆ ಹೋಗುವವರು ಮಾತ್ರ ಒಳಗೆ ಹೋಗುತ್ತಾರೆ. ಉಳಿದ ಹೊತ್ತಿಗೆ ಯಾರ‍್ಯಾರೋ ಸುಮ್ಮ ಸುಮ್ಮನೆ ಹೋಗದಂತೆ ಈ ಬೀಗ' ನನಗದು ತುಂಬ ಹೊಸದು. ದೇವರಿಗೆ ಕೀಲಿ! ಅಲ್ಲಿ ಒಳಗೆ ಕತ್ತಲಿತ್ತು. ಪೀಠದ ಮೇಲೆ ದೇವಿಯ ವಿಗ್ರಹ. ಒಂದು ಸಣ್ಣನೆ ಉರಿಯುವ ನಂದಾದೀಪ. ಯಾಕೋ ಕೇಳಿದೆ, 'ನಾನು ಒಳಗೆ ಹೋಗಿ ಸ್ವಲ್ಪ ಹೊತ್ತು ಕುಳಿತುಕೊಳ್ಳಬಹುದಾ?' 'ಓಹ್ ಅದಕ್ಕೇನಂತೆ ಹೋಗು, ಬಾಗಿಲು ಮುಂದು ಮಾಡಿಕೊ.' ನಾನು ಬಾಗಿಲು ಮುಂದೆ ಮಾಡಿಕೊಂಡು ಕುಳಿತೆ.

ಜೀವನದಲ್ಲಿ ಎಂದೂ ಅಲ್ಲಿಯವರೆಗೆ ಧ್ಯಾನ ಎಂದರೇನು, ಕಣ್ಮುಚ್ಚಿ ಕೂಡುವುದು ಯಾಕೆ, ಅಂಥದೊಂದು ಬೇಕಾ, ಬೇಡವಾ ಇಂಥ ಯಾವ ಸಂಗತಿಗಳ ಬಗ್ಗೆಯೂ ಯೋಚಿಸದೇ ಇದ್ದ ಮನಸ್ಸು. ಪೂಜೆಯನ್ನು ಸ್ವತಃ ನೋಡದ, ಎಂದೂ ಮಾಡಿಲ್ಲದ ಮನಸ್ಸು, ಅಂದು ಹಾಗೆ ಹೇಳಿತು, ಒಳಗೆ ಹೋಗಿ ಪದ್ಮಾಸನದಲ್ಲಿ ಕುಳಿತಿದ್ದು ಗೊತ್ತು. ಕಣ್ಮುಚ್ಚಿದ್ದು ಗೊತ್ತು.

ಎಚ್ಚರಾದಾಗ ಅಪ್ಪಯ್ಯ ತನ್ನ ತೊಡೆಯ ಮೇಲೆ ನನ್ನ ತಲೆ ಇರಿಸಿಕೊಂಡು ತಲೆ ನೇವರಿಸುತ್ತಿದ್ದಾರೆ. 'ಅರೆ, ಅಪ್ಪಯ್ಯ, ನೀವು ಯಾವಾಗ ಬಂದ್ರಿ? ನಾನು ಯಾಕೆ ನಿಮ್ಮ ತೊಡೆಯ ಮೇಲೆ ಮಲಗಿದೆ?' 'ಇಲ್ಲ ಮಗಳೆ ನಿನ್ನನ್ನು ಕುಳ್ಳಿರಿಸಿ, ನಾನು ಇದರ ಕೆಳಗಿರುವ ಕೊಠಡಿಯಲ್ಲಿ ಮನೆಯವರೊಂದಿಗೆ ಮಾತಿಗೆ ತೊಡಗಿದ್ದೆ, ನೀನು ನೆಲಕ್ಕೆ ತಲೆ ಬಡಿದುಕೊಳ್ಳುತ್ತಿರುವ ಸಪ್ಪಳ ಕೇಳಿಸಿತು ಓಡಿ ಬಂದೆ. ನೋಡಿದರೆ ಆಗಲೇ ನೀನು ಬಡಿದುಕೊಂಡ ಏಟಿಗೆ ಹಣೆಯ ಮೇಲೆ ಉಬ್ಬುಗಳು ಬಂದಿದ್ದವು. ಅದಕ್ಕೆ ತಲೆ ನೇವರಿಸಿದೆ. ನೋಡಿಲ್ಲಿ' ಎಂದವರೇ ನನ್ನ ಕೈಗಳಿಂದ ಹಣೆಯ ಮೇಲಿನ ಉಬ್ಬುಗಳನ್ನು ಮುಟ್ಟಿಸಿದರು. 'ಅರೇ ಇದೇನಿದು? ಯಾಕೆ ಹೀಗಾಯ್ತು ಅಪ್ಪ?' ಅಂದೆ. ಅವರು ತುಂಬ ಆರ್ದ್ರ ಭಾವದಿಂದ ನನ್ನ ಕಡೆಗೆ ನೋಡಿ, ಕಾರುಣ್ಯದಿಂದ ಹಣೆಯ ಮೇಲೆ ಮುತ್ತಿಟ್ಟು 'ನನ್ನ ಕೆಲಸ ಆಯ್ತು ಮಗಳೆ' ಅಂದರು. ನನಗೆ ತಿಳಿಯಲಿಲ್ಲ.


ಅಂದಿನಿಂದ ನನಗೆ ಕಣ್ಣು ಮುಚ್ಚಿ ಕುಳಿತುಕೊಳ್ಳುವ ಹಸಿವು ಹೆಚ್ಚುತ್ತಾ ಹೋಯಿತು. ತೆರೆದ ಹೊತ್ತಿನ ಚಡಪಡಿಕೆ ಸಾಕೆನಿಸತೊಡಗಿತು. ಅವರು ಹೊರಗಣ ಚರ್ಮ ಹರಿದಿದ್ದರು. ಇನ್ನೂ ಕೋಶ ಪ್ರವೇಶ ಆಗಿರಲಿಲ್ಲ.

-ಆರ್ . ಬಿ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 24 October, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books