Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಲೆವೆಲ್ಲನ್ನು ಅಳೆಯುವುದು ದುಡ್ಡಲ್ಲ ನಮ್ಮಲ್ಲಿರುವ ವಿಶ್ವಾಸಾರ್ಹತೆ

ಅಬ್ಬಾ, ನೀವು ಬಂದಿರಲ್ಲ, ನನಗೆ ನೂರಾನೆ ಬಲ ಬಂದಂತಾಯಿತು! ಕೆಲ ಜನರನ್ನು ನೋಡಿದ ಕೂಡಲೇ ನಾವು, ನೀವು ಇಂತಹ ಮಾತುಗಳನ್ನಾಡುತ್ತೇವೆ, ಆಡಿರುತ್ತೇವೆ. ಹೀಗೆ ಕೆಲ ವ್ಯಕ್ತಿಗಳನ್ನು ಕಂಡ ಕೂಡಲೇ ಎದುರಿಗಿದ್ದವರಲ್ಲಿ ಒಂದು ನಿರುಮ್ಮಳ ಭಾವ ಮೂಡುತ್ತದಲ್ಲ, ಅದು ಬರೀ ವಿಶ್ವಾಸವಲ್ಲ. ಆ ವ್ಯಕ್ತಿ ನಮ್ಮಲ್ಲಿ ಮೂಡಿಸಿರುವ ವಿಶ್ವಾಸಾರ್ಹತೆ. ಅದು ಯಾವುದೇ ಸಂದರ್ಭವಿರಬಹುದು. ಮನೆ ಕಟ್ಟುವ ಕೆಲಸ ಇರಬಹುದು, ಮಕ್ಕಳ ಮದುವೆ ಮಾಡುವ ಸಂದರ್ಭ ಇರಬಹುದು, ಇನ್ಯಾವುದೋ ಮಹತ್ವದ ಜವಾಬ್ದಾರಿ ಹೊತ್ತಾಗಲೇ ಇರಬಹುದು. ಒಟ್ಟಿನಲ್ಲಿ ಇಂತಹ ವ್ಯಕ್ತಿಗಳು ಎದುರಾದಾಗ ಒಂದು ನಿರುಮ್ಮಳ ಭಾವ ಆವರಿಸುತ್ತದಲ್ಲ, ನನ್ನ ಪಾಲಿಗೆ ಅದು ರಿಯಲಿ ಫ್ರೆಶಿಯಸ್.

ಬೇಕಿದ್ದರೆ ಗಮನಿಸಿ ನೋಡಿ. ಕೆಲ ವ್ಯಕ್ತಿಗಳು ಈ ರೀತಿ ನಮ್ಮೆದುರು ಬಂದು ನಿಂತಾಗ, ನೀನು ಬಂದಿದ್ದು ನನಗೆ ನೂರಾನೆ ಬಲ ಬಂದಂತಾಯಿತು ಎನ್ನುತ್ತೇವಲ್ಲ, ಆಗ ನಾವೇನೂ ಎಲ್ಲ ಜವಾಬ್ದಾರಿಯನ್ನು ಅವರ ನೆತ್ತಿಯ ಮೇಲೇ ಹೊರಿಸಿ ನಾಪತ್ತೆಯಾಗುವುದಿಲ್ಲ. ಬದಲಿಗೆ ಅವರ ಉಪಸ್ಥಿತಿಯೇ ನಮ್ಮಲ್ಲಿ ಒಂದು ಧೈರ್ಯವನ್ನು ಮೂಡಿಸಿಬಿಡುತ್ತದೆ. ಅಲ್ಲಿಯ ತನಕ ನೆತ್ತಿಯ ಮೇಲೆ ಕಲ್ಲು ಹೊತ್ತವರಂತೆ ಆಡುತ್ತಿದ್ದ ನಾವು ಇದ್ದಕ್ಕಿದ್ದಂತೆ, ತಲೆಯ ಮೇಲೆ ತಲೆ ಬಿದ್ದು ಹೋಗಲಿ, ಈ ಕೆಲಸ ಫಿನಿಷ್ ಆಗುವವರೆಗೆ ಬಿಡುವುದಿಲ್ಲ ಅಂತ ಜಿದ್ದಿಗೆ ಬಿದ್ದು ಕೆಲಸ ಮಾಡುತ್ತೇವೆ. ನಮ್ಮಲ್ಲಿ ಇಂತಹ ಧೈರ್ಯ ಮೂಡಿಸುವ ವ್ಯಕ್ತಿಗಳಿದ್ದಾರಲ್ಲ, ಅಂತಹವರು ನೂರಕ್ಕೋ, ಇನ್ನೂರಕ್ಕೋ ಒಬ್ಬರು ಅಲ್ಲ. ಸಾವಿರಕ್ಕೆ ಒಬ್ಬರು. ನನ್ನ ಪ್ರಕಾರ ಬದುಕಿನಲ್ಲಿ ಒಂದು ಲೆವೆಲ್ಲು ಅಂದರೆ ಅದು. ಒಬ್ಬ ವ್ಯಕ್ತಿಯ ಹತ್ತಿರ ಕೋಟಿಗಟ್ಟಲೆ ಹಣ ಇರಬಹುದು, ಐಷಾರಾಮಿ ಕಾರಿರಬಹುದು, ಬಂಗಲೆ ಇರಬಹುದು. ಆದರೆ ಅದು ಲೆವೆಲ್ ಅಲ್ಲ. ಯಾಕೆಂದರೆ ಅದನ್ನು ಹೊಂದಿರುವ ವ್ಯಕ್ತಿ ಎದುರಿಗಿರುವವರಲ್ಲಿ ಒಂದು ವಿಶ್ವಾಸ ಮೂಡಿಸಿಬಿಡುತ್ತಾನೆ ಅಂತ ಹೇಳಲು ಸಾಧ್ಯವಿಲ್ಲ.

ನಾನೇ ಬಲ್ಲ ವ್ಯಕ್ತಿಯೊಬ್ಬ ಇದ್ದಾನೆ. ಬೆಂಗಳೂರಿನ ನಾಲ್ಕೈದು ಬಡಾವಣೆಗಳಲ್ಲಿ ಮನೆಗಳ ಮೇಲೆ ಮನೆ ಕಟ್ಟಿಸಿದ್ದಾನೆ. ಒಂದು ಪ್ರಾಜೆಕ್ಟು ಮುಗಿಯಿತೋ, ಮತ್ತೊಂದು ಪ್ರಾಜೆಕ್ಟಿಗೆ ಕೈ ಹಾಕುತ್ತಾನೆ. ಹಾಗಂತ ಆತ ಬಿಲ್ಡ್‌ರು ಅಂದುಕೊಳ್ಳಬೇಡಿ. ಮನೆಯ ಮೇಲೆ ಮನೆ ಕಟ್ಟಿಸುವುದು ಆತನಿಗೆ ಹವ್ಯಾಸ. ಮನೆಗಳ ಮೇಲೆ ಮನೆ ಕಟ್ಟುತ್ತಾ, ಅದನ್ನು ಬಾಡಿಗೆಗೆ ಕೊಡುತ್ತಾ, ಹೊಸ ಹೊಸ ಪ್ರಾಜೆಕ್ಟಿಗೆ ಕೈ ಹಾಕುವ ಈತ ತನ್ನ ಮನೆಯಲ್ಲಿ ಬಾಡಿಗೆಗೆ ಇರುವವರು ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಬರೀ ಬಾಡಿಗೆ ಮನೆಯಲ್ಲಿರುವವರು ಮಾತ್ರವಲ್ಲ, ಕೈ ಹಿಡಿದ ಹೆಂಡತಿಯೇ ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಯಾವಾಗ ನೋಡಿದರೂ ಆತನದು ವರಾತವೇ. ಏನೋ ಒಂದು ಕಾರಣ ಹುಡುಕಿ ಕಿರುಕುಳ ನೀಡುವುದು ಅವನ ಜಾಯಮಾನ. ಹೀಗಾಗಿ ಆತನ ಮುಖ ಕಂಡರೆ ಬಾಡಿಗೆ ಮನೆಯಲ್ಲಿರುವ ಜನ ಥೋ, ಈ ಮುಸುಡಿ ಯಾಕಪ್ಪಾ ಬಂತು? ಅಂತ ಗೊಣಗಿಕೊಳ್ಳುತ್ತಾರೆ. ಲೆಕ್ಕ ಹಾಕಿದರೆ ಆತ ಇಪ್ಪತ್ತೋ, ಇಪ್ಪತ್ತೈದು ಕೋಟಿಗೋ ಬಾಳಬಹುದು. ಆದರೆ ಮನೆಗಳ ಮೇಲೆ ಮನೆ ಕಟ್ಟುವ ತನ್ನ ಹವ್ಯಾಸದಿಂದ, ಬಾಡಿಗೆಗೆ ಮನೆಗಳನ್ನು ಕೊಟ್ಟು ಕೊಟ್ಟು ಹೊಸ ಮನೆಗಳನ್ನು ಕಟ್ಟುತ್ತಲೇ ಇರುವುದರಿಂದ ಆತ ಯಾವತ್ತೂ ನೆಮ್ಮದಿಯಿಂದ ಊಟ ಮಾಡಿದ್ದನ್ನು ನಾನು ಕಂಡಿಲ್ಲ. ತನ್ನ ವರ್ತುಲದಲ್ಲಿರುವ ಯಾರೊಬ್ಬರಿಗೂ ಒಂದು ಕಂಫರ್ಟ್‌ನೆಸ್ ಕೊಡಲು ಆತನಿಂದ ಸಾಧ್ಯವಾಗಿಲ್ಲ ಎಂದ ಮೇಲೆ, ತಾನು ತಿನ್ನುವ ಅನ್ನವನ್ನೇ ನೆಮ್ಮದಿಯಾಗಿ ತಿನ್ನಲು ಆತನಿಂದ ಸಾಧ್ಯವಾಗುತ್ತಿಲ್ಲ ಎಂದ ಮೇಲೆ, ದುಡ್ಡು ಅನ್ನುವುದು ಮನುಷ್ಯನ ಲೆವೆಲ್ಲಿಗೆ ಒಂದು ಮಾನದಂಡ ಅಂತ ಹೇಳುವುದು ಹೇಗೆ?

ದುಡ್ಡಿದ್ದವರೆಲ್ಲ ಹೀಗೇ ಅಂತ ನಾನು ಹೇಳುವುದಿಲ್ಲ. ಆದರೆ ದುಡ್ಡು ಎಂಬುದು ಒಬ್ಬ ಮನುಷ್ಯನ ಲೆವೆಲ್ಲಿಗೆ ಮಾನದಂಡವಲ್ಲ ಅನ್ನುವುದು ನನ್ನ ವಾದ. ಆದರೆ ಅದೇ ಕಾಲಕ್ಕೆ ಎದುರಿಗಿರುವವರಲ್ಲಿ ಒಂದು ಆತ್ಮವಿಶ್ವಾಸ ಮೂಡಿಸುವ ಶಕ್ತಿ ಇದೆಯಲ್ಲ, ಅದು ನಿಶ್ಚಿತವಾಗಿಯೂ ಒಬ್ಬ ವ್ಯಕ್ತಿಯನ್ನು ಅಳೆಯಲು ಇರುವ ಅತ್ಯಂತ ಮುಖ್ಯವಾದ ಮಾನದಂಡ. ಇಂತಹ ವಿಶ್ವಾಸಾರ್ಹತೆಯನ್ನು ಮೂಡಿಸುವ ವ್ಯಕ್ತಿಗಳಲ್ಲಿ ಮುಖ್ಯವಾಗಿ ಕಾಣುವುದು ನಿಸ್ವಾರ್ಥ ಮನೋಭಾವ, ಪ್ರಾಮಾಣಿಕತೆ, ಶ್ರದ್ಧೆ ಮತ್ತು ಒಬ್ಬರ ಒಳಿತಿಗಾಗಿ ನಾನು ಭುಜ ಕೊಡಬೇಕು ಎಂಬ ಪ್ರೀತಿ. ಇಂತಹ ಅಮೂಲ್ಯ ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಸಹಜವಾಗಿಯೇ ತಮ್ಮ ವರ್ತುಲದಲ್ಲಿರುವವರಿಗೆ ಆತ್ಮವಿಶ್ವಾಸ ತುಂಬಬಲ್ಲರು. ಇಂತಹ ಗುಣಗಳನ್ನು ಹೊಂದಿರುವವರಿಗೆ ಯಾವ ಕೆಲಸವೂ ಕಷ್ಟದ ಕೆಲಸವಲ್ಲ. ಇಂತಹವರು ಒಂದು ಮದುವೆ ಮನೆಗೆ ಬಂದರೆ ಆ ಸಮಾರಂಭದ ಜವಾಬ್ದಾರಿ ಹೊತ್ತವರು ಇದ್ದಕ್ಕಿದ್ದಂತೆ ಒಂದು ರಿಲೀಫ್ ಪಡೆಯುತ್ತಾರೆ. ಅದು ಮದುವೆಯೇ ಆಗಬೇಕೆಂದಿಲ್ಲ. ಜವಾಬ್ದಾರಿ ಬೇಡುವ ಯಾವುದೇ ಸಂದರ್ಭಗಳಿರಬಹುದು. ಇಂತಹ ವಿಶ್ವಾಸಾರ್ಹ ವ್ಯಕ್ತಿಗಳ ಎಂಟ್ರಿಯಾದ ಕೂಡಲೇ ಜವಾಬ್ದಾರಿಯೆಲ್ಲ ತನ್ನ ತಲೆಯ ಮೇಲೇ ಬಿದ್ದಿದೆ ಅಂತ ಯೋಚಿಸುವವರಿಗೆ ಇದ್ದಕ್ಕಿದ್ದಂತೆ ಬಲ ಬಂದು ಬಿಡುತ್ತದೆ.

ಇವರ ಉಪಸ್ಥಿತಿಯಲ್ಲಿ ಅವರು ಮತ್ತಷ್ಟು ಚುರುಕಾಗಿ ಕೆಲಸ ಮಾಡುತ್ತಾರೆ. ನಗು ನಗುತ್ತಲೇ ಎಲ್ಲವನ್ನೂ ನಿರ್ವಹಿಸುತ್ತಾರೆ. ಅರ್ಥಾತ್, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಜವಾಬ್ದಾರಿ ಹೊರುವ ಸಾಮರ್ಥ್ಯವಿರುತ್ತದೆ. ಆದರೆ ಆ ಸಾಮರ್ಥ್ಯವನ್ನು ಬಳಸಿಕೊಳ್ಳುವ ಆತ್ಮವಿಶ್ವಾಸವನ್ನು ತುಂಬಬಲ್ಲ ವ್ಯಕ್ತಿಗಳು ಬೇಕಾಗುತ್ತಾರೆ. ಯಾರು ಹೀಗೆ ಮೇಲಿಂದ ಮೇಲೆ ಜವಾಬ್ದಾರಿಗಳನ್ನು ಹೊತ್ತು ಹೊತ್ತು ಮಾಗಿರುತ್ತಾರೋ, ಸಹಜವಾಗಿಯೇ ಅವರಲ್ಲಿ ದೊಡ್ಡದೊಂದು ಆತ್ಮವಿಶ್ವಾಸ ನೆಲೆಯೂರಿರುತ್ತದೆ. ಈ ಆತ್ಮವಿಶ್ವಾಸ ಅವರ ಮುಖದಲ್ಲಿ, ಮಾತಿನಲ್ಲಿ, ಕ್ರಿಯೆಯಲ್ಲಿ ಎದ್ದು ಕಾಣುತ್ತಿರುತ್ತದೆ. ಇಂತಹ ವ್ಯಕ್ತಿಗಳನ್ನು ಕಂಡ ಕೂಡಲೇ ನಮಗೆ ನೂರಾನೆ ಬಲ ಬಂತು ಅನ್ನಿಸುವುದು, ಹೇಗಿದ್ದರೂ ಇವರು ಜತೆಗಿದ್ದಾರಲ್ಲ? ಇನ್ನು ಚಿಂತಿಸುವ ಅಗತ್ಯವೇ ಇಲ್ಲ ಅಂತನ್ನಿಸುವುದು ಇದೇ ಕಾರಣಕ್ಕಾಗಿ. ಅಂದಹಾಗೆ ನಿರ್ದಿಷ್ಟ ವ್ಯಕ್ತಿಗಳನ್ನು ಕಂಡ ಕೂಡಲೇ ನಮಗೆ ಯಾಕಿಷ್ಟು ಧೈರ್ಯ ಬರುತ್ತದೆ? ಅನ್ನುವುದನ್ನು ಪರೀಕ್ಷಿಸಿ ನೋಡಿ. ಎದುರಿಗಿದ್ದ ವ್ಯಕ್ತಿಯಲ್ಲಿ ಬೇರೂರಿರುವ ವಿಶ್ವಾಸಾರ್ಹತೆ ನಿಮ್ಮ ಮನಸ್ಸನ್ನು ಆವರಿಸಿ ಟಾನಿಕ್ಕಿನ ಥರ ಕೆಲಸ ಮಾಡಿರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಅದಕ್ಕಾಗಿಯೇ ನಾನು ಹೇಳುವುದು: ನಮ್ಮಲ್ಲಿ ಇಂತಹ ವಿಶ್ವಾಸ ಮೂಡಿಸುವ ಶಕ್ತಿ ಒಬ್ಬ ವ್ಯಕ್ತಿಯಲ್ಲಿ ಹೇಗೆ ಬಂತು? ಅಂತ ನಾವು ಗಮನಿಸಿದರೆ, ಅರ್ಥ ಮಾಡಿಕೊಂಡರೆ ನಾವೂ ಅವರಂತೆಯೇ ಒಂದು ಲೆವೆಲ್ಲಿಗೆ ಬರಲು ಸಾಧ್ಯ.

ದುಡ್ಡು, ದುಗ್ಗಾಣಿ ಎಲ್ಲವೂ ನಾವು-ನಾವು ಮಾಡುವ ಕೆಲಸಕ್ಕೆ, ಶ್ರಮಕ್ಕೆ, ಟೈಮಿಗೆ ತಕ್ಕಂತೆ ಸಿಗುತ್ತವೆ. ಆದರೆ ಅದು ಇದೆ ಎಂದ ಮಾತ್ರಕ್ಕೆ ನಾವು ಎಲ್ಲರಲ್ಲೂ ಒಂದು ಆತ್ಮವಿಶ್ವಾಸ ಹುಟ್ಟಿಸಿಬಿಡುತ್ತೇವೆ ಅಂತ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ಬಳಿ ಇರುವ ದುಡ್ಡನ್ನು ನೋಡಿ ಆತ್ಮವಿಶ್ವಾಸ ಮೂಡಿಸಿಕೊಳ್ಳುವುದು ಹಾಗಿರಲಿ, ಕರುಬುವವರೇ ಜಾಸ್ತಿ. ಹೀಗಾಗಿ ದುಡ್ಡು, ಕಾರು, ಬಂಗಲೆ ಇಂಥವನ್ನು ನಿಮ್ಮ ವ್ಯಕ್ತಿತ್ವವನ್ನು ಅಳೆಯುವ, ಲೆವೆಲ್ಲು ತರುವ ಮಾನದಂಡಗಳು ಅಂತ ಪರಿಗಣಿಸಬೇಡಿ. ಅವು ನಿಮ್ಮ ಮಟ್ಟಿಗೆ ಕಂಫರ್ಟ್ ಕೊಡಬಹುದು. ಅದನ್ನು ಬಳಸಿ ನೀವೂ ನಾಲ್ಕು ಜನರಿಗೆ ಕಂಫರ್ಟ್‌ನೆಸ್ ಕೊಡಬಹುದು. ಆದರೆ ನಿಮ್ಮನ್ನು ಕಂಡ ಕೂಡಲೇ ಎದುರಿಗಿದ್ದ ಜನರಲ್ಲಿ ಒಂದು ಆತ್ಮವಿಶ್ವಾಸ ತಾನೇ ತಾನಾಗಿ ಉಕ್ಕುವುದಿದೆಯಲ್ಲ? ನಿಜಕ್ಕೂ ಅದು ದೊಡ್ಡ ಲೆವೆಲ್ಲು. ಇಂತಹ ಲೆವೆಲ್ಲನ್ನು ನೀವು ತಲುಪಿದಿರಿ ಎಂದರೆ ಬದುಕಿನಲ್ಲಿ ಬರುವ ಯಾವುದೇ ಸಮಸ್ಯೆಗಳಿಗೂ ನೀವು ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ಧೈರ್ಯವಾಗಿ ಅದನ್ನು ಎದುರಿಸುತ್ತೀರಿ. ಕಷ್ಟ ಬಂದಾಗ ಅದನ್ನು ಹೇಗೆ ಎದುರಿಸಬೇಕು ಎಂದು ಇನ್ನೊಬ್ಬರಿಗೆ ತೋರಿಸುವ ಶಕ್ತಿ ಪಡೆಯುತ್ತೀರಿ. ನಿಮ್ಮಲ್ಲಿ ಇಂತಹ ಶಕ್ತಿ ಇದೆ ಎಂಬುದು ಮನದಟ್ಟಾದರೆ ಸಾಕು, ಜವಾಬ್ದಾರಿ ಹೊತ್ತು ತೊಳಲಾಡುವ ವ್ಯಕ್ತಿಗಳು ನಿರುಮ್ಮಳರಾಗುತ್ತಾರೆ, ಧೈರ್ಯದಿಂದ ಮುನ್ನುಗ್ಗುತ್ತಾರೆ.

ನೀವು ಬಂದಿರಲ್ಲ? ಇನ್ನು ನನಗೆ ನೂರಾನೆ ಬಲ ಬಂದಂತಾಯಿತು ಅಂತ ಜನ ತಟ್ಟಂತ ಹೇಳುವುದು ಇದೇ ಕಾರಣಕ್ಕಾಗಿ. ಅಂತಹ ವಿಶ್ವಾಸಾರ್ಹತೆ ನಮ್ಮಲ್ಲಿ ಬೆಳೆಯಬೇಕು. ಅದು ಎಷ್ಟರ ಮಟ್ಟಿಗೆ ಬೆಳೆಯುತ್ತಾ ಹೋಗುತ್ತದೋ, ಅಷ್ಟರ ಮಟ್ಟಿಗೆ ನಾವು ಈ ವ್ಯವಸ್ಥೆಗೆ ಬೇಕಾದವರಾಗುತ್ತೇವೆ. ಹಾಗೆ ಈ ವ್ಯವಸ್ಥೆಗೆ ಬೇಕಾದ ವ್ಯಕ್ತಿಗಳಾಗಿ ಬದುಕುವುದಿದೆಯಲ್ಲ ಅದು ಕಣ್ರೀ ನಿಜವಾದ ಲೆವೆಲ್ಲು. ಅಂತಹ ಲೆವೆಲ್ಲಿಗೆ ಬೆಳೆಯಲು ನಾವು ಯತ್ನಿಸೋಣ. ಏನನ್ನುತ್ತೀರಿ?

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 22 October, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books