Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಮುಖ್ಯಮಂತ್ರಿ ಸಿದ್ಧರಾಮಯ್ಯ ಎಚ್ಚೆತ್ತುಕೊಳ್ಳಬೇಕಾದ ಕಾಲ ಬಂದಿದೆ

ಒಂದು ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅದು ತನ್ನದೇ ಶೈಲಿಗೆ ಹೊಂದಿಕೊಳ್ಳಲು ಆರು ತಿಂಗಳ ಕಾಲಾವಕಾಶ ಬೇಕು. ಹೀಗಾಗಿ ಹೊಸ ಸರ್ಕಾರಕ್ಕೆ ಹನಿಮೂನ್ ಪೀರಿಯೆಡ್ ಅಂತ ಕೊಡಬೇಕು ಅನ್ನುವ ವಾದಗಳಿರಬಹುದು. ಆದರೆ ನನ್ನ ಪ್ರಕಾರ ಹೊಸತಾಗಿ ಅಸ್ತಿತ್ವಕ್ಕೆ ಬಂದ ಸರ್ಕಾರ ಮೈ ಕೊಡವಿಕೊಂಡು ಎದ್ದು ನಿಲ್ಲಲು ಮೂರು ತಿಂಗಳು ಸಾಕು. ಅದರಲ್ಲೂ ಆಡಳಿತ ನಡೆಸಿದ ಅನುಭವ ಇರುವ ನಾಯಕ ಮುಖ್ಯಮಂತ್ರಿಯಾದರೆ, ಅನುಭವಿಗಳು ಮತ್ತು ಯುವಕರ ಪಡೆ ಅವರ ಜತೆಗಿದೆ ಎಂದರೆ ಹನಿಮೂನ್ ಪೀರಿಯೆಡ್ ಆರು ತಿಂಗಳಷ್ಟು ಸುದೀರ್ಘದ್ದಾಗಿರಬೇಕಿಲ್ಲ. ನಿಜಕ್ಕೂ ಅಷ್ಟು ಕಾಲಾವಧಿ ಬೇಕಾಗಿದ್ದಿದ್ದರೆ ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದ ದಿನವೇ ರಾಜ್ಯದ ಬಡ, ಮಧ್ಯಮ ವರ್ಗದ ಜನರಿಗೆ ಸಾವಿರಾರು ಕೋಟಿ ರುಪಾಯಿಗಳ ಬಂಪರ್ ಕೊಡುಗೆ ಘೋಷಿಸಲು ಸಾಧ್ಯವಿರಲಿಲ್ಲ.


ಯಾಕೆಂದರೆ ಯಾರೇ ಮುಖ್ಯಮಂತ್ರಿ ಗದ್ದುಗೆಯ ಮೇಲೆ ಬಂದು ಕುಳಿತುಕೊಳ್ಳಲಿ ಬರ ಬರುತ್ತಿದ್ದಂತೆಯೇ ಸಾವಿರಾರು ಕೋಟಿ ರುಪಾಯಿಗಳ ಹೊರೆಯನ್ನು ಬೊಕ್ಕಸದ ಮೇಲೆ ಹೇರಲು ತಯಾರಾಗುವುದಿಲ್ಲ. ಆದರೆ ಸಿದ್ಧರಾಮಯ್ಯ ಆ ಕೆಲಸ ಮಾಡಿದ್ದಾರೆ. ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ ಹಲವು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವ ಮೂಲಕ ಬಡ ಬಗ್ಗರ ಬಗ್ಗೆ ತಮಗಿರುವ ಕಳಕಳಿಯನ್ನೂ ತೋರಿಸಿದ್ದಾರೆ. ಇಷ್ಟಾದರೂ ಅವರ ಸರ್ಕಾರ ಟೇಕಾಫ್ ಆಗಿದೆ ಎಂಬ ಭಾವನೆ ಮೂಡುತ್ತಿಲ್ಲ.

ಅಲ್ರೀ, ಒಂದು ರುಪಾಯಿಗೆ ಕೆಜಿಯಂತೆ ಅಕ್ಕಿ ಕೊಡುವ ಯೋಜನೆ ಆರಂಭವಾಯಿತು. ಅಹಿಂದ ವರ್ಗಗಳ ಸಾಲ ಮನ್ನಾ ಆಯಿತು, ಹಾಲು ಉತ್ಪಾದಕರಿಗೆ ಕೊಡುತ್ತಿದ್ದ ಪ್ರೋತ್ಸಾಹ ಧನದ ಪ್ರಮಾಣವನ್ನು ಎರಡು ರುಪಾಯಿಗಳಿಂದ ನಾಲ್ಕು ರುಪಾಯಿಗಳಿಗೆ ಏರಿಸಲಾಯಿತು. ಶಾಲಾ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದಾಯಿತು. ಇಷ್ಟಾದರೂ ಸರ್ಕಾರ ಟೇಕ್ ಆಫ್ ಆಗಿಲ್ಲ ಎಂದರೆ ಇದು ವಿನಾಕಾರಣದ ಟೀಕೆ ಅಲ್ಲವೇ ಅಂತ ಯಾರಾದರೂ ಕೇಳಬಹುದು. ಇವೆಲ್ಲವೂ ಜನಪ್ರಿಯ ಯೋಜನೆಗಳು ಎಂಬುದು ನಿಜ. ಹಾಗಂದ ಮಾತ್ರಕ್ಕೆ ಇಂತಹ ಯೋಜನೆಗಳಿಂದ ಸರ್ಕಾರ ಎಂಬ ವಿಮಾನ ಟೇಕ್ ಆಫ್ ಆಯಿತು ಅಂತ ಹೇಳಲು ಸಾಧ್ಯವಿಲ್ಲ. ಹಾಗೇನಾದರೂ ಸರ್ಕಾರ ಟೇಕ್ ಆಫ್ ಆಗಿದೆ ಎಂದು ಹೇಳಬೇಕಿದ್ದರೆ ಅಭಿವೃದ್ಧಿಯ ದಿಸೆಯಲ್ಲಿ ಸರ್ಕಾರ ಮಹತ್ವದ ಹೆಜ್ಜೆಗಳನ್ನಿಡಬೇಕಿತ್ತು. ಒಂದು ರಾಜ್ಯದ ಅಭಿವೃದ್ಧಿ ಎಂಬುದು ಅದರ ಒಟ್ಟಾರೆ ಆಂತರಿಕ ಉತ್ಪನ್ನದ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಈ ಆಂತರಿಕ ಉತ್ಪನ್ನ ಅರ್ಥಾತ್ ಜಿಡಿಪಿ ಪ್ರಮಾಣ ಹೆಚ್ಚಾಗಬೇಕೆಂದರೆ ಕೃಷಿ ವಲಯದಲ್ಲಿ, ಕೈಗಾರಿಕಾ ವಲಯದಲ್ಲಿ, ಸೇವಾ ವಲಯದಲ್ಲಿ ಪ್ರಗತಿಯ ಚಿತ್ರ ಕಾಣಬೇಕು. ಆದರೆ ಸಿದ್ಧರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಐದು ತಿಂಗಳಾಯಿತು.

ಯಾವ ವಲಯದಲ್ಲಿ ಅಭಿವೃದ್ದಿ ಏರುಗತಿ ಕಂಡಿದೆ? ಈ ವರ್ಷ ಮಳೆ ಚೆನ್ನಾಗಿ ಬಂದಿರುವುದರಿಂದ ಕೃಷಿ ಉತ್ಪನ್ನಗಳು ಹೆಚ್ಚುತ್ತವೆ ಎಂದು ಅಂದಾಜಿಸಬಹುದೇ ಹೊರತು ಕೈಗಾರಿಕಾ ವಲಯಕ್ಕೆ ಸಿದ್ಧರಾಮಯ್ಯ ಅವರ ಸರ್ಕಾರ ಎಷ್ಟರ ಮಟ್ಟಿಗೆ ಒತ್ತು ನೀಡಿದೆ. ಸ್ವತಃ ಸಿದ್ಧರಾಮಯ್ಯನವರು ಚೀನಾಕ್ಕೆ ಹೋಗಿ ಬಂದರು. ಅಲ್ಲಿಗೆ ಹೋಗಿ ಬಂದ ಮೇಲೆ ವಿವಿಧ ಉದ್ಯಮಗಳ ಪ್ರಮುಖರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದೇನೆ. ರಾಜ್ಯದಲ್ಲಿ ಬಂಡವಾಳ ಹೂಡಿ ಎಂದು ಹೇಳಿದ್ದೇನೆ. ಅವರು ಈ ವಿಷಯದಲ್ಲಿ ಪಾಸಿಟಿವ್ ಆಗಿದ್ದಾರೆ ಎಂದು ಹೇಳಿದರು. ಆದರೆ ವಾಸ್ತವದಲ್ಲಿ ಸಿದ್ಧರಾಮಯ್ಯ ಚೀನಾಕ್ಕೆ ಹೋಗಿ ಬೇರೆ-ಬೇರೆ ಉದ್ಯಮಪತಿಗಳಿಗೆ ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟು, ಅವರ ವಿಸಿಟಿಂಗ್ ಕಾರ್ಡ್‌ನ್ನು ಇಸಿದುಕೊಂಡು ಬಂದರೇ ವಿನಾ ಈ ಪ್ರವಾಸದಿಂದ ದೊಡ್ಡ ಲಾಭವೇನೂ ಆಗಲಿಲ್ಲ.

ಸಿದ್ಧರಾಮಯ್ಯ ಚೀನಾಕ್ಕೆ ಹೋದರು. ಫೈನ್, ಆದರೆ ಇಲ್ಲಿಗೇ ಬಂದು ಸಾವಿರಾರು ಕೋಟಿ ರುಪಾಯಿ ಬಂಡವಾಳ ಹೂಡಲು ಬೋಯಿಂಗ್‌ನಿಂದ ಹಿಡಿದು ಹಲವಾರು ಕಂಪನಿಗಳು ಉತ್ಸುಕವಾಗಿವೆ. ಬೋಯಿಂಗ್ ಕಂಪನಿ ದಕ್ಷಿಣ ಏಷ್ಯಾವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರು ಮಾಡುವ ಆಸಕ್ತಿ ತೋರಿದೆ.


ಇದಕ್ಕಾಗಿ ಸರ್ಕಾರದ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿ ತನಗಿರುವ ಉತ್ಸುಕತೆಯನ್ನು ವ್ಯಕ್ತಪಡಿಸಿದೆ. ಆದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೀಗ ನಿವೃತ್ತಿಯಾಗುವ ಟೈಮು. ಹೀಗಾಗಿ ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರಲು ಅವರಿಂದ ಆಗುತ್ತಿಲ್ಲ. ಹೋಗಲಿ, ಈ ವಿಷಯ ಸಿದ್ಧರಾಮಯ್ಯನವರ ಗಮನಕ್ಕೆ ಬಂದೇ ಇಲ್ಲವೇ? ಬಂದಿದೆ. ಆದರೆ ಪಾಪ, ಅವರಿಗೂ ಪುರುಸೊತ್ತಿಲ್ಲ. ಇವತ್ತು ಬೋಯಿಂಗ್ ಕಂಪನಿ ದಕ್ಷಿಣ ಏಷ್ಯಾವನ್ನು ಗಮನದಲ್ಲಿಟ್ಟುಕೊಂಡು ತನ್ನ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಬೆಂಗಳೂರಿನಲ್ಲೇ ಜಾಗ ಕೊಡಿ ಎಂದು ಕೇಳುತ್ತಿಲ್ಲ. ಬೆಂಗಳೂರಿನಿಂದ ಹೊರಗಡೆ ಜಾಗ ಕೊಡಿ ಎಂದು ಕೇಳುತ್ತಿದೆ. ನೀವು ನಮಗೆ ಸವಲತ್ತು ಕೊಡಿ, ಹತ್ತು ಸಾವಿರ ಮಂದಿಗೆ ನಾವು ಉದ್ಯೋಗ ಕೊಡುತ್ತೇವೆ ಎಂದು ಹೇಳುತ್ತಿದೆ. ಇದೇ ರೀತಿ ಇಂಡಿಯನ್ ಇನ್ವೆಸ್ಟ್‌ಮೆಂಟ್ ಎಂಬ ಟ್ರೂಪು ಮೇಲಿಂದ ಮೇಲೆ ಸರ್ಕಾರದ ಪ್ರಮುಖರನ್ನು ಸಂಪರ್ಕಿಸುತ್ತಾ, ನೀವು ಯೆಸ್ ಅನ್ನಿ. ಕನಿಷ್ಠ ಇಪ್ಪತ್ತು ಸಾವಿರ ಕೋಟಿ ರುಪಾಯಿ ಬಂಡವಾಳ ಹರಿದು ಬರುವಂತೆ ಮಾಡುತ್ತೇವೆ ಎಂದು ಹೇಳುತ್ತಿದೆ.

ಯಾಕೆಂದರೆ ಇವತ್ತು ಕೈಗಾರಿಕೆಗಳನ್ನು ಸ್ಥಾಪಿಸಲು ಕರ್ನಾಟಕದಲ್ಲಿರುವಷ್ಟು ಅನುಕೂಲ ದೇಶದ ಬಹುತೇಕ ರಾಜ್ಯಗಳಲ್ಲಿಲ್ಲ. ಹಾಗಂತ ಕೈಗಾರಿಕೆಗಳನ್ನು ಸ್ಥಾಪಿಸುವ ಭರದಲ್ಲಿ ರೈತರ ಕೃಷಿ ಭೂಮಿಯನ್ನೇನೂ ವಶಪಡಿಸಿಕೊಳ್ಳುವ ಅಗತ್ಯವಿಲ್ಲ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಗಣನೀಯ ಪ್ರಮಾಣದ ಒಣ ಭೂಮಿ ಲಭ್ಯವಿದೆ. ಇಂತಹ ಒಣ ಭೂಮಿಯನ್ನು ಅರ್ಥಾತ್, ನೀರಾವರಿ ಸೌಲಭ್ಯ ಇಲ್ಲದ ಭೂಮಿಯ ಪೈಕಿ ಒಂದು ಪಾಲನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡು ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಮಾಡಿಕೊಟ್ಟರೆ ಸಾವಿರಾರು ಕೋಟಿ ರುಪಾಯಿ ಬಂಡವಾಳ ಹರಿದು ಬರುತ್ತದೆ. ಆ ಮೂಲಕ ರಾಜ್ಯದ ಲಕ್ಷಾಂತರ ಯುವಕ-ಯುವತಿಯರಿಗೆ ಕೆಲಸ ಸಿಗುತ್ತದೆ. ಆದರೆ ಈ ಕೆಲಸ ಮಾಡುವ ಮುನ್ನ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಯಾವ ಕೈಗಾರಿಕೆಗಳನ್ನು ಸ್ಥಾಪಿಸಬಹುದು ಎಂಬ ಕುರಿತು ಸರ್ಕಾರ ಒಂದು ಮ್ಯಾಪಿಂಗ್ ಮಾಡಿಡಬೇಕು. ಇವತ್ತು ಆರ್ಥಿಕತೆಯ ವಿಷಯ ಬಂದಾಗ ಬೆಂಗಳೂರಿಗೆ ಒಂದು ಬ್ರ್ಯಾಂಡ್ ನೇಮ್ ಇದೆಯೇ ಹೊರತು ಬೇರೆ ಯಾವ ಜಾಗಗಳಿಗೂ ಇಂತಹ ಬ್ರ್ಯಾಂಡ್ ನೇಮು ದಕ್ಕಿಲ್ಲ.

ಒಂದು ಕಾಲದಲ್ಲಿ ಗುಜರಾತ್‌ನಲ್ಲೂ ಇಂತಹದೇ ಪರಿಸ್ಥಿತಿ ಇತ್ತು. ಕೈಗಾರಿಕೆ ಎಂದರೆ ಸೂರತ್, ರಾಜ್‌ಕೋಟ್, ಬನಸ್ಕಾಂತ ಸೇರಿದಂತೆ ಮೂರ‍್ನಾಲ್ಕು ಜಿಲ್ಲೆಗಳ ಕಡೆ ನೋಡುವ ಸ್ಥಿತಿ ಇತ್ತು. ಆದರೆ ಇವತ್ತು ಗುಜರಾತ್‌ನಲ್ಲಿ ಬಂಡವಾಳ ಹೂಡಲು ಮುಂದಾಗುವ ಉದ್ಯಮಿಗಳು ಅಹ್ಮದಾಬಾದ್ ಸುತ್ತಮುತ್ತಲಲ್ಲೇ ಜಾಗ ಬೇಕು ಎಂದು ಕೇಳುವುದಿಲ್ಲ. ಬದಲಿಗೆ ಗುಜರಾತ್‌ನ ಯಾವುದೇ ಜಿಲ್ಲೆಗೆ ಹೋಗಲು ಸಜ್ಜಾಗುತ್ತಾರೆ. ಯಾಕೆಂದರೆ ಅಲ್ಲಿ ಸಂಪರ್ಕ ವ್ಯವಸ್ಥೆ ಎಷ್ಟು ಅದ್ಭುತವಾಗಿದೆ ಎಂದರೆ ಯಾವುದೇ ಉದ್ಯಮಿ ಒಂದು ಕೈಗಾರಿಕೆಯನ್ನು ಸ್ಥಾಪಿಸಿದರೆ ತನ್ನ ಉತ್ಪನ್ನಗಳನ್ನು ಸಾಗಿಸುವ ವಿಷಯದಲ್ಲಿ ಆತನಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆ ರಾಜ್ಯದ ಯಾವುದೇ ಪ್ರದೇಶಗಳಿಗೆ ಹೋದರೂ ಉತ್ತಮವಾದ ರಸ್ತೆಗಳಿವೆ. ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಆರು ಕಡೆ ವಿಮಾನ ನಿಲ್ದಾಣ, ಆರು ಕಡೆ ಏರ್‌ಸ್ಟ್ರಿಪ್ಪುಗಳು ಇವೆ. ಐದು ಸಾವಿರ ಕಿಲೋಮೀಟರುಗಳಿಗಿಂತ ಉದ್ದದ ರೈಲ್ವೇ ಮಾರ್ಗವಿದೆ. ಜಗತ್ತಿನ ಅತ್ಯುತ್ತಮ ಬಂದರುಗಳಿವೆ.

ಒಬ್ಬ ಕೈಗಾರಿಕೋದ್ಯಮಿಯನ್ನು ಆಕರ್ಷಿಸಲು ಇನ್ನೇನು ಬೇಕು? ಅಧಿಕಾರಷಾಹಿ ವ್ಯವಸ್ಥೆಯಿಂದ ಯಾವುದೇ ಅಡ್ಡಿಯಾಗದಂತೆ ಒಂದು ಕೈಗಾರಿಕೆ ಆರಂಭಿಸಲು, ಕೈಗಾರಿಕೆ ಆರಂಭವಾದ ಮೇಲೆ ಉತ್ಪನ್ನವಾಗುವ ವಸ್ತುಗಳನ್ನು ಸಾಗಿಸಲು ಅನುಕೂಲ ಸಿಗುತ್ತದೆ ಎಂದರೆ ಉದ್ಯಮಿಗಳು ಸಹಜವಾಗಿಯೇ ನಿಶ್ಚಿಂತೆಯಿಂದ ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಆದರೆ ಅಧಿಕಾರಕ್ಕೆ ಬಂದು ಐದು ತಿಂಗಳು ಕಳೆದರೂ ಸಿದ್ಧರಾಮಯ್ಯ ಕೈಗಾರಿಕಾ ಸ್ನೇಹಿ ವಾತಾವರಣವೊಂದನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಒಂದೆರಡು ಬಾರಿ ಸಭೆ ಸೇರಿ ಕೆಲ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ನೀಡಿದ್ದಾರಾದರೂ ದೊಡ್ಡ ಪ್ರಮಾಣದ ಬಂಡವಾಳ ರಾಜ್ಯಕ್ಕೆ ಹರಿದು ಬರುವಂತೆ ಮಾಡಲು ಆಸಕ್ತಿ ತೋರುತ್ತಿಲ್ಲ. ಕೇಳಿದರೆ, ಮುಂದಿನ ವರ್ಷ ಜಾಗತಿಕ ಆರ್ಥಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುತ್ತೇವೆ. ಆಗ ಬೇರೆ ಬೇರೆ ದೇಶದ ಕೈಗಾರಿಕೋದ್ಯಮಿಗಳು ಬರುತ್ತಾರೆ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆಯೇ ಹೊರತು ಈಗಾಗಲೇ ಬಂಡವಾಳ ಹೂಡಲು ಆಸಕ್ತಿ ತೋರಿಸುತ್ತಿರುವವರಿಗೆ ಪಾಸಿಟಿವ್ ಆದ ಮೆಸೇಜನ್ನು ರವಾನಿಸಲು ಅವರಿಗೆ ಸಾಧ್ಯವಾಗಿಲ್ಲ.

ಉದಾಹರಣೆಗೆ ಬೆಂಗಳೂರಿನ ಕಸ ವಿಲೇವಾರಿಯ ಸಮಸ್ಯೆಯನ್ನೇ ನೋಡಿ. ಇಲ್ಲಿ ಉತ್ಪಾದನೆಯಾಗುವ ಕಸದಿಂದ ಇಡೀ ಬೆಂಗಳೂರಿಗೆ ಸಾಲುವಷ್ಟು ಕರೆಂಟು ಉತ್ಪಾದನೆ ಮಾಡುತ್ತೇವೆ. ನಮಗೆ ಇಂತಿಷ್ಟು ಅಂತ ಜಾಗ ಕೊಡಿ. ಅನುಕೂಲ ಒದಗಿಸಿ ಕೊಡಿ. ಆಮೇಲೆ ನೋಡಿ ಎಂದು ಜರ್ಮನಿ ಮತ್ತು ಜಪಾನ್‌ನ ಕಂಪನಿಗಳು ಪದೇಪದೇ ಹೇಳುತ್ತಿವೆ. ಅಷ್ಟೇ ಅಲ್ಲ, ನಮ್ಮ ಬಾಯಿ ಮಾತನ್ನು ನಂಬಿ ನಮಗೆ ನೀವು ಅವಕಾಶ ಕೊಡಬೇಡಿ. ತಜ್ಞರ ತಂಡವನ್ನು ಕಳಿಸಿಕೊಡಿ. ನಾವು ಕಸವನ್ನೇ ಬಳಸಿಕೊಂಡು ಕರೆಂಟು ಉತ್ಪಾದನೆ ಮಾಡುತ್ತಿರುವ ಘಟಕಗಳನ್ನು ತೋರಿಸುತ್ತೇವೆ. ಅದನ್ನು ನೋಡಿ ನಿಮಗೆ ಸಮಾಧಾನವಾದರೆ ನಮಗೆ ಅವಕಾಶ ಕೊಡಿ ಎಂದು ಹೇಳುತ್ತಿವೆ. ಅಂದ ಹಾಗೆ ಬೆಂಗಳೂರು ಒಂದರಲ್ಲೇ ಪ್ರತಿನಿತ್ಯ ಸಾವಿರಾರು ಟನ್ ಕಸ ಉತ್ಪಾದನೆಯಾಗುತ್ತದೆ. ಈ ಕಸದಲ್ಲಿ ಒಣ ಕಸ ಮತ್ತು ಹಸಿ ಕಸವನ್ನು ವಿಂಗಡಿಸಿ ಎಂದು ಬಿಬಿಎಂಪಿ ಜನರ ಬಳಿ ಗೋಗರೆಯುತ್ತದೆ. ಆದರೆ ಎಷ್ಟೇ ಹೇಳಿದರೂ ಈ ರೀತಿ ಕಸವನ್ನು ವಿಂಗಡಿಸಿ ಹಾಕುವ ಪದ್ಧತಿಗೆ ಸೆಟ್ ಆಗಲು ಬಹಳ ಕಾಲ ಬೇಕು.

ಆದರೆ ಜಪಾನ್ ಮತ್ತು ಜರ್ಮನಿಯ ಕಂಪನಿಗಳು ಕಸವನ್ನು ಬಳಸಿಕೊಂಡು ಕರೆಂಟು ಉತ್ಪಾದನೆ ಮಾಡುವ ಘಟಕಗಳಿವೆಯಲ್ಲ, ಆ ಘಟಕಗಳಿಗೆ ಒಣ ಕಸ, ಹಸಿ ಕಸ ಎಂದು ವಿಂಗಡಿಸಿ ಹಾಕಬೇಕಾದ ಅಗತ್ಯವಿಲ್ಲ. ಬದಲಿಗೆ ಲಭ್ಯವಾಗುವ ಕಸವನ್ನು ನಿಗದಿ ಮಾಡಿದ ಪ್ರಮಾಣದಲ್ಲಿ ಒಂದೊಂದು ಘಟಕಗಳಿಗೆ ಪೂರೈಸಿದರೆ ಇಡೀ ಬೆಂಗಳೂರಿಗೆ ಸಾಕಾಗಿ ಮಿಗುವಷ್ಟು ವಿದ್ಯುತ್‌ನ್ನು ಉತ್ಪಾದನೆ ಮಾಡುತ್ತವೆ. ಪ್ಲಾಸ್ಟಿಕ್ ಹೈಡ್ರೋ ಕಾರ್ಬನ್ ಆದ್ದರಿಂದ ಇದು ಕೂಡ ಅಂತಹ ಘಟಕಗಳಲ್ಲಿ ಪೆಟ್ರೋಲು, ಡೀಸೇಲಿನ ರೀತಿ ಕೆಲಸ ಮಾಡುತ್ತದೆ. ಅಂದ ಹಾಗೆ ಇವತ್ತು ಬೆಂಗಳೂರಿಗೆ ಸಾಕಾಗುವಷ್ಟು ವಿದ್ಯುತ್‌ನ್ನು ಕಸದಿಂದ ಉತ್ಪಾದಿಸಿದರೆ ರಾಜ್ಯದ ಒಟ್ಟಾರೆ ವಿದ್ಯುತ್ ಬೇಡಿಕೆಯ ಇಪ್ಪತ್ತರಿಂದ ಇಪ್ಪತ್ತೈದು ಪರ್ಸೆಂಟಿನಷ್ಟು ವಿದ್ಯುತ್‌ನ್ನು ಉಳಿಸಿದಂತಾಗುತ್ತದೆ. ಅಷ್ಟರ ಮಟ್ಟಿಗೆ ನಾವು ಹೊರರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುವುದು ತಪ್ಪುತ್ತದೆ.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಒಂದೇ ಒಂದು ಮೆಗಾ ವ್ಯಾಟ್ ವಿದ್ಯುತ್‌ನ್ನು ಉತ್ಪಾದಿಸಲು ಬಂಡವಾಳ ಹೂಡಲಿಲ್ಲ ಎಂದು ಇದೇ ಸಿದ್ಧರಾಮಯ್ಯ ಆರೋಪ ಮಾಡುತ್ತಿದ್ದರು. ಅರ್ಥಾತ್ ಖಾಸಗಿ ರಂಗದ ಮೂಲಕ ವಿದ್ಯುತ್ ಉತ್ಪಾದನೆ ಮಾಡಿರಬಹುದು. ಆದರೆ ಸಾರ್ವಜನಿಕ ರಂಗದಲ್ಲಿ ವಿದ್ಯುತ್ ಉತ್ಪಾದಿಸಲು ಆದ್ಯತೆ ನೀಡಲಿಲ್ಲ ಎಂದು ಟೀಕೆ ಮಾಡುತ್ತಿದ್ದರು. ಅದು ನಿಜವೂ ಹೌದು. ಬಿಜೆಪಿ ಸರ್ಕಾರ ಸಾರ್ವಜನಿಕ ರಂಗದಲ್ಲಿ ಬಂಡವಾಳ ಹೂಡಿ ವಿದ್ಯುತ್ ಉತ್ಪಾದನೆ ಮಾಡಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು. ಆದರೆ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರ್ಕಾರ ಹದಿನೈದರಿಂದ ಇಪ್ಪತ್ತು ಸಾವಿರ ಕೋಟಿ ರುಪಾಯಿಗಳಷ್ಟು ಹಣವನ್ನು ಹೊರ ರಾಜ್ಯಗಳಿಂದ, ಖಾಸಗಿಯವರಿಂದ ವಿದ್ಯುತ್ ಖರೀದಿಸಲು ವಿನಿಯೋಗಿಸಿತು. ಈಗ ಸಿದ್ಧರಾಮಯ್ಯನವರ ಸರ್ಕಾರವೂ ಇದೇ ದಾರಿ ಹಿಡಿದರೆ ವಿದ್ಯುತ್ ಖರೀದಿಗೆ ಕೊಡಬೇಕಾದ ಬಂಡವಾಳದ ಪ್ರಮಾಣ ದೊಡ್ಡದಾಗುತ್ತದೆ. ಅಂದ ಹಾಗೆ ಗುಜರಾತ್‌ನಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಮೂಲಕವೇ ಗಣನೀಯ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಅಂತಲ್ಲ, ಅಲ್ಲಿ ಖಾಸಗಿ ಕಂಪನಿಗಳು ದಂಡಿಯಾಗಿ ವಿದ್ಯುತ್ ಉತ್ಪಾದಿಸಲು ಅವಕಾಶ ಮಾಡಿಕೊಡಲಾಗಿದೆ.

ಕೇವಲ ಅದಾನಿ ಗ್ರೂಫ್ ಒಂದೇ ಸುಮಾರು ಐದು ಸಾವಿರ ಮೆಗಾ ವ್ಯಾಟ್‌ನಷ್ಟು ವಿದ್ಯುತ್‌ನ್ನು ಉತ್ಪಾದಿಸುತ್ತಿದೆ. ಅದೇ ರೀತಿ ಹಲವಾರು ಖಾಸಗಿ ಕಂಪನಿಗಳು ಗುಜರಾತ್‌ನಲ್ಲಿ ವಿದ್ಯುತ್ ಉತ್ಪಾದಿಸುತ್ತಿರುವುದರ ಪರಿಣಾಮವಾಗಿ ಅಲ್ಲಿ ವಿದ್ಯುತ್ ಕೊರತೆ ಇಲ್ಲ. ಇಲ್ಲಿ ಸಾರ್ವಜನಿಕ ರಂಗದಲ್ಲಿ ಗಣನೀಯ ಪ್ರಮಾಣದ ವಿದ್ಯುತ್ ಉತ್ಪಾದಿಸುವುದರ ಜತೆಗೆ ಖಾಸಗಿ ರಂಗದಲ್ಲೂ ವಿದ್ಯುತ್ ಉತ್ಪಾದನೆಗೆ ಅವಕಾಶ ಮಾಡಿಕೊಡಬೇಕು. ತೀರಾ ವಿದ್ಯುತ್ತಿಗಾಗಿ ಅವರನ್ನೇ ಅವಲಂಬಿಸುವ ಸ್ಥಿತಿ ತಂದುಕೊಳ್ಳಬಾರದು ಎಂಬುದು ಬೇರೆ ವಿಷಯ. ಆದರೆ ಆರ್ಥಿಕ ಅಭಿವೃದ್ಧಿಯ ದಾರಿಯಲ್ಲಿ ನಡೆಯುವಾಗ ಇಲ್ಲಿ ಆರಂಭವಾಗುವ ಕೈಗಾರಿಕೆಗಳಿಗೆ ಅಗತ್ಯವಾದ ವಿದ್ಯುತ್‌ನ್ನು ಪೂರೈಸಲು ಖಾಸಗಿ ರಂಗಕ್ಕೆ ಪ್ರೋತ್ಸಾಹ ನೀಡಲೇಬೇಕು. ಕಸ ವಿಲೇವಾರಿಯಂತಹ ಸಮಸ್ಯೆಯನ್ನು ವಿದ್ಯುತ್ ಉತ್ಪಾದಿಸುವ ಮೂಲಕ ಪಾಸಿಟಿವ್ ಆಗಿ ಪರಿವರ್ತಿಸಿಕೊಳ್ಳಲು ಸಾಧ್ಯವಿದೆ ಎಂದಾದಾಗ ಆ ಮಾರ್ಗವನ್ನು ಬಳಸಿಕೊಳ್ಳಲು ಹಿಂಜರಿಕೆಯ ಅಗತ್ಯವೇನಿಲ್ಲ. ಹೀಗೆ ಕೃಷಿ ಭೂಮಿಯ ವಿಸ್ತಾರ ಕಡಿಮೆಯಾಗದಂತೆ ನೋಡಿಕೊಂಡು ಅದೇ ಕಾಲಕ್ಕೆ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದರೆ ಜಾಗತೀಕರಣದ ಓಟದಲ್ಲಿ ಕರ್ನಾಟಕ ಹಿಂದೆ ಬೀಳದಂತೆ ನೋಡಿಕೊಳ್ಳಬಹುದು.

ಹೇಗಿದ್ದರೂ ಜಾಗತೀಕರಣ ಎಂಬುದು ನಾವು ಒಪ್ಪಿಕೊಂಡಿರುವ ವಿಷ. ಆದರೆ ಆ ವಿಷವನ್ನು ನಾವು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಮದ್ದಾಗಿ ಬಳಸಿಕೊಳ್ಳುವ ಅನಿವಾರ್ಯತೆಯೂ ನಮ್ಮ ಮುಂದಿದೆ. ಇವತ್ತು ಪರಿಸ್ಥಿತಿ ಹೇಗಾಗಿದೆ ಎಂದರೆ ಅಭಿವೃದ್ಧಿಯ ಹೆಸರಿನಲ್ಲಿ ಬೆಂಗಳೂರು ಒಂದೇ ಸಮನೆ ಬೆಳೆಯುತ್ತಾ ಡೆಡ್ ಸಿಟಿ ಆಗುತ್ತಿದ್ದರೆ, ರಾಜ್ಯದ ಬೇರೆ ಪ್ರದೇಶಗಳು ಆರ್ಥಿಕವಾಗಿ ಅಭಿವೃದ್ಧಿ ಕಾಣದೆ ಸೊರಗುತ್ತಿವೆ. ಇಂತಹ ಸಂದರ್ಭದಲ್ಲಿ ಆ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಇಲ್ಲದೆ ಹೋದರೆ ಆ ಪ್ರದೇಶಗಳಲ್ಲಿರುವ ಯುವಕ- ಯುವತಿಯರ ಪೈಕಿ ಗಣನೀಯ ಸಂಖ್ಯೆಯ ಜನ ಬೆಂಗಳೂರಿನ ಕಡೆ ವಲಸೆ ಬರುತ್ತಾರೆ. ಹಾಗಾದಾಗ ಬೆಂಗಳೂರು ಎಂಬುದು ಒಂದೇ ಸಮನೆ ಬೆಳೆಯುತ್ತಾ, ಕೊಳೆಯುತ್ತಾ ಹೋಗುತ್ತದೆ. ಹಾಗಾಗದಂತೆ ನೋಡಿಕೊಳ್ಳಬೇಕೆಂದರೆ ಸಿದ್ಧರಾಮಯ್ಯನವರ ಸರ್ಕಾರ ಕೈಗಾರಿಕೀಕರಣಕ್ಕೆ ಒಂದು ಮಟ್ಟದಲ್ಲಿ ಒತ್ತು ನೀಡಲೇಬೇಕು.

ಅನ್ನ ಕೊಡುವ ಭೂಮಿಯನ್ನು ಕಿತ್ತುಕೊಳ್ಳದೆ, ಒಣ ಭೂಮಿಯನ್ನು ಮಾತ್ರವೇ ಒದಗಿಸಿ ರಾಜ್ಯದ ಎಲ್ಲ ಜಿಲ್ಲೆಗಳ ಜನರಿಗೆ ಅವರದೇ ನೆಲದಲ್ಲಿ ಉದ್ಯೋಗ ಸೃಷ್ಟಿಸಿ ಕೊಟ್ಟರೆ ಸಹಜವಾಗಿಯೇ ಅವರು ಬೆಂಗಳೂರಿನ ಕಡೆ ವಲಸೆ ಬರುವುದು ತಪ್ಪುತ್ತದೆ. ಇಂತಹ ಪರಿಸ್ಥಿತಿಯನ್ನು ನಿರ್ಮಿಸುವುದೇ ಸಿದ್ಧರಾಮಯ್ಯನವರ ಸರ್ಕಾರದ ಮುಂದಿರುವ ಪ್ರಮುಖ ಸವಾಲು. ಈ ಸವಾಲನ್ನು ಅವರು ಸಮರ್ಥವಾಗಿ ಎದುರಿಸಿದರೆ ಅದೇ ಅಸ್ತ್ರವನ್ನು ಹಿಡಿದುಕೊಂಡು ದೇಶಾದ್ಯಂತ ನುಗ್ಗುತ್ತಿರುವ ಬಿಜೆಪಿಯ ನರೇಂದ್ರ ಮೋದಿಗೆ ಒಂದು ಮಟ್ಟದಲ್ಲಿ ಬ್ರೇಕ್ ಹಾಕಲು ಸಾಧ್ಯವಾಗುತ್ತದೆ. ಈ ಕೆಲಸ ಮಾಡದೇ ಮೋದಿ ಒಬ್ಬ ನರಹಂತಕ ಎಂದು ಬೈಯ್ಯುತ್ತಾ ಕುಳಿತರೆ, ಅಲ್ಪಸಂಖ್ಯಾತರಲ್ಲಿ ಭೀತಿ ಮೂಡಿಸಿ ಹೆಚ್ಚು ಪಾರ್ಲಿಮೆಂಟ್ ಸೀಟುಗಳನ್ನು ಗಳಿಸಬಹುದು ಎಂದು ಸಿದ್ಧರಾಮಯ್ಯ ಭಾವಿಸಿದರೆ ಅವರ ಲೆಕ್ಕಾಚಾರ ಸಂಪೂರ್ಣವಾಗಿ ತಲೆ ಕೆಳಗಾಗಲಿದೆ. ಅಲ್ಲವೇ?

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 21 October, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books