Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಹಲೋ : ಕಮಲ್ ಆಡಿದ ಮಾತು ಕೇಳಿ ಮತ್ತೆ ಮತ್ತೆ ಕಾಡಿದ್ದು ರಾಜ್!

ಇಲ್ಲ, ನನಗೆ ರಾಜಕೀಯ ಬೇಕಿಲ್ಲ. ನನ್ನ ಭಾವನೆ ಏನಿದೆಯೋ, ಅದನ್ನು ಬೆಳ್ಳಿ ಪರದೆಯ ಮೇಲೆ ತೋರಿಸುತ್ತೇನೆ. ಉಳಿದಿದ್ದನ್ನು ಜನರಿಗೆ ಬಿಡುತ್ತೇನೆ ಎಂದಿದ್ದಾರೆ ಭಾರತೀಯ ಚಿತ್ರರಂಗ ಕಂಡ ಮಹಾನ್ ಕಲಾವಿದ ಕಮಲ್‌ಹಾಸನ್. ಬರೋಬ್ಬರಿ ಮೂರು ದಶಕಗಳ ಹಿಂದೆ ಕನ್ನಡ ಚಿತ್ರರಂಗದ ನಟಸಾರ್ವಭೌಮ ಡಾ||ರಾಜ್‌ಕುಮಾರ್ ಕೂಡ ಇಂತಹದೇ ಮಾತುಗಳನ್ನಾಡಿದ್ದರು. ಹಾಗೆ ನೋಡಿದರೆ ತಮಗಿದ್ದ ಜನಪ್ರಿಯತೆ ಮತ್ತು ಗೋಕಾಕ್ ಚಳವಳಿಯ ಮೂಲಕ ನಾಡಿನ ಸ್ವಾಭಿಮಾನದ ಸಂಕೇತವಾಗಿ ರೂಪುಗೊಂಡ ಸನ್ನಿವೇಶವನ್ನು ಮಿಳಿತಗೊಳಿಸಿಕೊಂಡಿದ್ದರೆ ರಾಜ್‌ಕುಮಾರ್ ರಾಜಕೀಯದ ಉತ್ತುಂಗಕ್ಕೇರಬಹುದಿತ್ತು. ಆದರೆ ಯಾರೇನೇ ಮಾಡಿದರೂ ರಾಜ್‌ಕುಮಾರ್ ರಾಜಕೀಯಕ್ಕೆ ಬರಲು ಒಪ್ಪಲಿಲ್ಲ. ಅಂದ ಹಾಗೆ ಅವತ್ತಿನ ಸನ್ನಿವೇಶದಲ್ಲಿ ಅವರು ತೆಗೆದುಕೊಂಡ ನಿರ್ಧಾರ ಸರಿಯಾಗಿತ್ತು. ಆದರೆ ಇವತ್ತಿನ ಸ್ಥಿತಿಯಲ್ಲಿ ರಾಜ್ ಇದ್ದಿದ್ದರೆ, ಸಾರ್ವಜನಿಕ ಬದುಕನ್ನು ನಿಭಾಯಿಸುವ ಆರೋಗ್ಯ ಅವರಿಗೆ ಇದ್ದಿದ್ದರೆ ನಿಶ್ಚಿತವಾಗಿ ಹೇಳುತ್ತೇನೆ. ನಾಡಿನ ಹಿತದೃಷ್ಟಿಯಿಂದ ಅವರು ರಾಜಕೀಯ ಪ್ರವೇಶ ಮಾಡಬೇಕು ಅಂತ ಕನ್ನಡಿಗರು ಪಟ್ಟು ಹಿಡಿಯುತ್ತಿದ್ದರು.

ಯಾಕೆಂದರೆ ಇವತ್ತು ಬೆಂಗಳೂರಿನಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲೇ ಕನ್ನಡಿಗರ ಶಕ್ತಿ ಕಡಿಮೆಯಾಗಿದೆ. ನೋಡ ನೋಡುತ್ತಲೇ ಕರ್ನಾಟಕದ ಉದ್ದಗಲ ಉತ್ತರ ಭಾರತೀಯರ ಶಕ್ತಿ ಪ್ರದರ್ಶನ ಆರಂಭವಾಗಿದೆ. ನೀವು ಇರುವ ಏರಿಯಾಗಳನ್ನೇ ಒಂದು ಸಲ ಕೂಲಂಕುಶವಾಗಿ ಗಮನಿಸಿ ನೋಡಿ. ಕನ್ನಡ ಮಾತನಾಡುವವರಿಗಿಂತ ಪರಭಾಷಿಕರ ಸಂಖ್ಯೆ ಹೆಚ್ಚಿದೆ. ವ್ಯಾಪಾರ, ವ್ಯವಹಾರ ಅಂತ ಒಂದು ಕಡೆಯಿಂದ ಕರ್ನಾಟಕದ ನೆಲವನ್ನು ಆಕ್ರಮಿಸಿಕೊಳ್ಳುತ್ತಿರುವ ಈ ಪಕ್ಕಾ ಬಿಜಿನೆಸ್‌ಮನ್‌ಗಳಿಂದಾಗಿ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಕನ್ನಡಿಗರ ಏಕಸ್ವಾಮ್ಯ ಎಂಬುದು ಮಾಯವಾಗಿ ಪರಭಾಷಿಕರ ದರ್ಬಾರು ಜಾಸ್ತಿಯಾಗಿದೆ. ಕರ್ನಾಟಕದಲ್ಲಿ ಯಾವುದೇ ಕೈಗಾರಿಕೆ ಆರಂಭವಾಗಲಿ, ಅಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಮಾಣದ ಉದ್ಯೋಗ ಸಿಗಬೇಕು ಎಂಬ ಸರೋಜಿನಿ ಮಹಿಷಿ ವರದಿ ಇವತ್ತಿನ ತನಕ ಜಾರಿಗೆ ಬಂದಿಲ್ಲ. ಈ ಬಗ್ಗೆ ಮಾತನಾಡುವ ನೈತಿಕ ಸಾಮರ್ಥ್ಯ ಕರ್ನಾಟಕದಲ್ಲಿರುವ ಯಾವುದೇ ರಾಜಕೀಯ ಪಕ್ಷಗಳಿಗೆ ಉಳಿದಿಲ್ಲ. ಕಾಂಗ್ರೆಸ್ ಇರಬಹುದು, ಬಿಜೆಪಿ ಇರಬಹುದು, ಜೆಡಿಎಸ್ ಇರಬಹುದು, ಯಾರೇ ಇರಬಹುದು.

ಅಧಿಕಾರದಲ್ಲಿದ್ದಾಗ ಯಾವ ಪಕ್ಷಗಳೂ ಸರೋಜಿನಿ ಮಹಿಷಿ ವರದಿಯ ಈ ಮಹತ್ವದ ಅಂಶದ ಕಡೆ ಕಣ್ಣೆತ್ತಿಯೂ ನೋಡಲಿಲ್ಲ.
ಇವತ್ತು ಸಿಂಪಲ್ಲಾಗಿ ಒಂದು ಪ್ರಶ್ನೆ ಕೇಳುತ್ತೇನೆ. ಈ ನೆಲದಲ್ಲಿ ಯಾವುದೇ ಕಾರ್ಖಾನೆಯನ್ನು ಸ್ಥಾಪಿಸುವ ಕೆಲಸವಾಗಬಹುದು. ಅದು ಸಣ್ಣ ಕೈಗಾರಿಕೆಯೇ ಇರಲಿ, ದೊಡ್ಡ ಕೈಗಾರಿಕೆಯೇ ಇರಲಿ ಅದನ್ನು ನೋಂದಣಿ ಮಾಡಿಸಿಕೊಳ್ಳುವ ಕೆಲಸ ಆಗುತ್ತದಲ್ಲವೇ, ಅಲ್ಲಿಗೆ ನಮ್ಮ ರಾಜ್ಯದಲ್ಲಿರುವ ಕೈಗಾರಿಕೆಗಳೆಷ್ಟು ಅನ್ನುವ ಕುರಿತು ಸರ್ಕಾರಕ್ಕೆ ಒಂದು ಸ್ಪಷ್ಟ ಚಿತ್ರ ಇದೆ. ಇಂತಹ ಕಾರ್ಖಾನೆಗಳಲ್ಲಿ ಎಷ್ಟು ಮಂದಿ ಕನ್ನಡಿಗರಿಗೆ ಉದ್ಯೋಗ ಕೊಡಲಾಗಿದೆ ಅಂದರೆ ಸರ್ಕಾರ ಚಕ್ಕಂತ ಒಂದು ಉತ್ತರ ಹೇಳಬೇಕಲ್ಲ, ಕೇಳಿ ನೋಡಿ. ಸರ್ಕಾರ ನಡೆಸುತ್ತಿರುವವರ ನಾಲಿಗೆಯೇ ಹೊರಳುವುದಿಲ್ಲ. ಒಂದು ಕೈಗಾರಿಕೆಯಲ್ಲಿರುವ ಕೆಲಸಗಾರರ ಸಂಖ್ಯೆ ಎಷ್ಟು, ಈ ಪೈಕಿ ಎಷ್ಟು ಮಂದಿ ಕನ್ನಡಿಗರಿದ್ದಾರೆ ಅಂತ ಒಂದು ಸಮೀಕ್ಷೆ ಮಾಡುವುದು ಕಷ್ಟದ ಕೆಲಸವೇ? ಇಷ್ಟೂ ಕೆಲಸ ಒಂದು ಸರ್ಕಾರದಿಂದ ಆಗುವುದಿಲ್ಲ ಎಂದರೆ ಈ ನಾಡಿನ ನೆಲ, ಜನ, ಭಾಷೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ರಾಜಕಾರಣಿಗಳ ಮಾತಿಗೆ ಏನು ಕಿಮ್ಮತ್ತಿದೆ ಹೇಳಿ ನೋಡೋಣ?

ವಸ್ತುಸ್ಥಿತಿ ಎಂದರೆ ಜಾಗತೀಕರಣಕ್ಕೆ ಈ ದೇಶ ಯಾವಾಗ ಪ್ರವೇಶ ಕೊಟ್ಟಿತೋ, ಇದಾದ ನಂತರ ಕರ್ನಾಟಕದಲ್ಲೂ ಸಾವಿರಾರು ಕಾರ್ಖಾನೆಗಳು ತಲೆ ಎತ್ತಿವೆ. ಈ ಕಾರ್ಖಾನೆಗಳಿಗೆ ಸರ್ಕಾರ ಎಲ್ಲ ಸವಲತ್ತುಗಳನ್ನು ಕೊಟ್ಟಿದೆ, ಕೊಡುತ್ತಿದೆ. ಬಡಪಾಯಿ ರೈತರನ್ನು ಒಕ್ಕಲೆಬ್ಬಿಸಿ, ಅತ್ಯಂತ ಅಗ್ಗದ ದರದಲ್ಲಿ ಭೂಮಿ ಕೊಡಿಸಿ, ಡ್ಯಾಮುಗಳಲ್ಲಿರುವ ಬಹುತೇಕ ನೀರನ್ನು ಅವುಗಳಿಗೇ ಮೀಸಲಿಟ್ಟ ಮೇಲೂ, ಎಷ್ಟು ಜನ ಕನ್ನಡಿಗರಿಗೆ ಉದ್ಯೋಗ ಕೊಟ್ಟಿದ್ದೀರಿ ಅಂತ ಕೇಳಲು ಅಥವಾ ಇಷ್ಟು ಪ್ರಮಾಣದ ಕೆಲಸಗಳನ್ನು ಕನ್ನಡಿಗರಿಗೇ ಕೊಡಬೇಕು ಎಂದು ಹೇಳಲು ಸರ್ಕಾರಗಳಿಗೆ ಏನು ರೋಗ. ಇಂತಹ ಕೆಲಸ ಮಾಡಲು ಸಾಧ್ಯವಾಗದ ಪರಿಣಾಮ ಏನಾಗಿದೆ ಎಂದರೆ ಪರಭಾಷಿಕರು ದಂಡು ದಂಡಾಗಿ ಬಂದು ಕರ್ನಾಟಕವನ್ನು ಆವರಿಸಿಕೊಂಡಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಇನ್ನು ಹತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ಕನ್ನಡಿಗನೇ ಪರಕೀಯ ಎನ್ನುವ ದುಃಸ್ಥಿತಿ ಸೃಷ್ಟಿಯಾಗಿ ಬಿಡುತ್ತದೆ.

ನೂರು ವರ್ಷಗಳ ಹಿಂದೆ ತಮಿಳುನಾಡಿನಲ್ಲೂ ಇಂತಹದೇ ಸನ್ನಿವೇಶ ಸೃಷ್ಟಿಯಾಗಿತ್ತು. ಸರ್ಕಾರಿ ಉದ್ಯೋಗದಲ್ಲಿ ತಮಿಳರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಬ್ರಿಟಿಷ್ ಆಳ್ವಿಕೆಯ ಪರಿಣಾಮವಾಗಿ ಉತ್ತರ ಭಾರತೀಯರೇ ಆಯಕಟ್ಟಿನ ಜಾಗಗಳನ್ನು ಆಕ್ರಮಿಸಿಕೊಂಡಿದ್ದಾರೆ. ಹೀಗಾದರೆ ತಮಿಳು ಸಂಸ್ಕೃತಿಯ ಗತಿ ಏನು ಅಂತ ಕೂಗೆದ್ದಿತು ನೋಡಿ. ಆಗ ತಲೆ ಎತ್ತಿ ನಿಂತಿತ್ತು ಜಸ್ಟೀಸ್ ಪಾರ್ಟಿ. ಮುಂದೆ ಸಾಂಸ್ಕೃತಿಕ ಲೋಕದ ಗಣ್ಯರು ರಾಜಕೀಯ ಪ್ರವೇಶ ಮಾಡುವುದರೊಂದಿಗೆ ರಾಜ್ಯದ ರೂಪವೇ ಬದಲಾಗಿ ಹೋಯಿತು. ಇವತ್ತು ತಮಿಳುನಾಡಿನಲ್ಲಿ ಭದ್ರವಾಗಿ ನೆಲೆಯೂರಿರುವ ಡಿಎಂಕೆ ಹಾಗೂ ಎಐಎಡಿಎಂಕೆ ಇಂತಹ ನೆಲೆಗಟ್ಟಿನ ಮೇಲೇ ನಿಂತ ಪಕ್ಷಗಳು. ಆಂಧ್ರದಲ್ಲಿ ಇಂತಹ ಕೆಲಸವನ್ನು ಎನ್‌ಟಿಆರ್ ಮಾಡಿದರು. ಆದರೆ ಎನ್‌ಟಿಆರ್ ತೆಲುಗರ ಸ್ವಾಭಿಮಾನಕ್ಕೆ ಧಕ್ಕೆಯಾಯಿತು ಎಂಬ ಒಂದು ಅಂಶವನ್ನು ಮುಂದಿಟ್ಟುಕೊಂಡು ನುಗ್ಗಿ ಯಶಸ್ವಿಯಾದರು. ಮುಖ್ಯಮಂತ್ರಿಯೂ ಆದರು. ಅವರು ಸ್ಥಾಪಿಸಿದ ತೆಲುಗುದೇಶಂ ಪಕ್ಷವನ್ನು ಇವತ್ತು ಚಂದ್ರಬಾಬು ನಾಯ್ಡು ಮುನ್ನಡೆಸುತ್ತಿದ್ದಾರೆ.

ಆದರೆ ತಮಿಳರು ತಮ್ಮ ನೆಲ, ಜಲ, ಭಾಷೆ, ಸಂಸ್ಕೃತಿಯ ರಕ್ಷಣೆಗಾಗಿ ಹಾತೊರೆದ ರೀತಿ ಮತ್ತು ಅದನ್ನು ರಕ್ಷಿಸಿಕೊಂಡ ಬಗೆ ಮಾತ್ರ ಅನನ್ಯ. ಇಂತಹದೇ ಕೆಲಸವನ್ನು ಮಹಾರಾಷ್ಟ್ರದಲ್ಲಿ ಬಾಳ್ ಠಾಕ್ರೆ ಮಾಡಿದರು. ಇಡೀ ಮುಂಬೈಯನ್ನು ಗುಜರಾತಿಗಳು ಆಕ್ರಮಿಸಿಕೊಂಡಿದ್ದಾರೆ ಎಂಬ ಭಾವನೆ ದಟ್ಟವಾದಾಗ, ಮರಾಠಿಗರ ಹಿತಕ್ಕೆ ಧಕ್ಕೆಯಾಗುತ್ತಿದೆ, ಅವರು ಬದುಕುವುದು ಕಷ್ಟವಾಗುತ್ತಿದೆ, ಹೀಗೇ ಮುಂದುವರಿದರೆ ಈ ನೆಲದಲ್ಲಿ ಪರಭಾಷಿಕರ ಗುಲಾಮರಾಗಿ ಬಾಳುವ ಸ್ಥಿತಿ ಬರುತ್ತದೆ ಎಂಬ ಆಕ್ರೋಶಕ್ಕೆ ಧ್ವನಿಯಾದವರು ಬಾಳ್ ಠಾಕ್ರೆ. ಮುಂದೆ ನಡೆದಿದ್ದು ಇತಿಹಾಸ. ಶಿವಸೇನೆಯ ಪ್ರಭಾವ ಅಕ್ಷರಶಃ ಮಹಾರಾಷ್ಟ್ರದ ಉದ್ದಗಲ ವ್ಯಾಪಿಸಿತು. ಪರಿಣಾಮವಾಗಿ ಇವತ್ತಿಗೂ ಅಲ್ಲಿ ಮರಾಠಿಗರ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಿಲ್ಲ. ಪರಭಾಷಿಕರ ದಬ್ಬಾಳಿಕೆಗೆ ಅವಕಾಶ ದಕ್ಕಿಲ್ಲ. ಹೀಗೆ ಕಾಲಕಾಲಕ್ಕೆ ತಮಿಳುನಾಡು, ಮಹಾರಾಷ್ಟ್ರಗಳಂತಹ ರಾಜ್ಯಗಳಲ್ಲಿ ಕಾಣಿಸಿಕೊಂಡ ನಮ್ಮ ನೆಲ, ನಮ್ಮ ಜಲ, ನಮ್ಮ ಭಾಷೆ, ನಮ್ಮ ಸಂಸ್ಕೃತಿ ಎಂಬ ಸ್ವಾಭಿಮಾನ ಇವತ್ತಿಗೂ ಆ ರಾಜ್ಯಗಳನ್ನು ಕಾಯುತ್ತಿದೆ. ಹಿಂದೆ ತಮಿಳರು, ಮರಾಠಿಗರು ತಮ್ಮ ತಮ್ಮ ರಾಜ್ಯದಲ್ಲೇ ಯಾವ ಸಮಸ್ಯೆಯನ್ನು ಎದುರಿಸಿದರೋ ಅದರ ವಿರಾಠ್ ಸ್ವರೂಪ ಕರ್ನಾಟಕದಲ್ಲೂ ಅನಾವರಣವಾಗಿದೆ.


ಅದಕ್ಕೇ ನಾನು ಹೇಳಿದ್ದು: ಇವತ್ತಿನ ಸ್ಥಿತಿಯಲ್ಲಿ ರಾಜ್‌ಕುಮಾರ್ ಅವರಂತಹ ಮೇರು ವ್ಯಕ್ತಿತ್ವದ ನಾಯಕ ಇದ್ದಿದ್ದರೆ ಅವರು ರಾಜಕೀಯ ಪ್ರವೇಶಿಸುವುದು ಅನಿವಾರ್ಯವೇ ಆಗುತ್ತಿತ್ತು. ಅವರು ಒಪ್ಪುತ್ತಿದ್ದರೋ, ಇಲ್ಲವೋ ಅದು ಬೇರೆ ಮಾತು. ಆದರೆ ಇವತ್ತಿನ ಕರ್ನಾಟಕವನ್ನು ಉಳಿಸಲು ಅಂತಹ ಮೇರು ವ್ಯಕ್ತಿತ್ವ ಇರುವ ನಾಯಕ ಬೇಕಾಗಿದೆ. ಹಾಗಂತ ರಾಜ್ ಇಲ್ಲದ ಈ ಕಾಲಘಟ್ಟದಲ್ಲಿ ಬೇರೆ ಯಾರೂ ಇಂತಹ ಜವಾಬ್ದಾರಿಯನ್ನು ಹೊರಬಹುದು ಅನ್ನುವ ಪ್ರಶ್ನೆ ಏಳಬಹುದು. ಆದರೆ ನನ್ನ ಪ್ರಕಾರ ಪ್ರತಿಯೊಂದು ರಂಗಗಳೂ ಒಂದು ಫ್ರೆಷರ್ ಗ್ರೂಪ್ ಆಗಿ ಇಂತಹ ಕೆಲಸ ಮಾಡಬೇಕು. ಅದು ಚಿತ್ರರಂಗವೇ ಇರಬಹುದು, ರಂಗಭೂಮಿಯೇ ಇರಬಹುದು, ಸಾಹಿತ್ಯ ಕ್ಷೇತ್ರವೇ ಇರಬಹುದು, ಕನ್ನಡ ಪರ ಚಳವಳಿಗಳೇ ಇರಬಹುದು, ರೈತ ಪರ, ದಲಿತ ಪರ ಚಳವಳಿಗೇ ಇರಬಹುದು. ಒಟ್ಟಿನಲ್ಲಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಅನ್ನುವಂತಹ ವಾತಾವರಣವನ್ನು ಸೃಷ್ಟಿಸಲು ಎಲ್ಲ ರಂಗಗಳಲ್ಲಿರುವ ಜನ ಯತ್ನಿಸಬೇಕು.
ಇಂತಹ ಫ್ರೆಷರ್ ಗ್ರೂಪ್‌ಗಳು ಮೇಲೆದ್ದು ನಿಂತರೆ ಆಳುವ ಸರ್ಕಾರಗಳಿಗೆ ಒಂದು ಎಚ್ಚರಿಕೆ ಇರುತ್ತದೆ. ಅಮೆರಿಕಾದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಇಂತಹ ಫ್ರೆಷರ್ ಗ್ರೂಪ್‌ನ ನೇತಾರನಾಗಿದ್ದ. ಹೀಗಾಗಿ ಅಲ್ಲಿ ರಿಪಬ್ಲಿಕನ್ ಪಾರ್ಟಿಯೂ ಆತನ ಮಾತು ಕೇಳುತ್ತಿತ್ತು. ಡೆಮಾಕ್ರಟಿಕ್ ಪಾರ್ಟಿಯೂ ಆತನ ಮಾತು ಕೇಳುತ್ತಿತ್ತು. ಇಲ್ಲಿ ಅಂತಹ ಅವಕಾಶ ರೈತ ಚಳವಳಿಗೆ, ದಲಿತ ಚಳವಳಿಗೆ, ಕನ್ನಡ ಚಳವಳಿಗೆ ದಕ್ಕಿತ್ತು. ಆದರೆ ಈ ಚಳವಳಿಗಳಲ್ಲಿದ್ದ ಪ್ರಮುಖ ನಾಯಕರು ರಾಜಕೀಯದ ಕಡೆ ಮುಖ ಮಾಡಿದರು ನೋಡಿ. ಆ ಚಳವಳಿಗಳ ಆಳದಲ್ಲಿ ಕೇಂದ್ರೀಕೃತವಾಗಿದ್ದ ಶಕ್ತಿ ವಿಕೇಂದ್ರೀಕೃತವಾಯಿತು. ಪರಿಣಾಮವಾಗಿ ಯಾವ ಸರ್ಕಾರಗಳು ಬಂದರೂ ಅವನ್ನು ನಿಯಂತ್ರಿಸುವ ಫ್ರೆಷರ್ ಗ್ರೂಪ್‌ಗಳಾಗಿ ಉಳಿಯಲು ಅದಕ್ಕೆ ಸಾಧ್ಯವಾಗಲಿಲ್ಲ. ಯಾವಾಗ ಫ್ರೆಷರ್ ಗ್ರೂಪ್‌ಗಳು ಇರುವುದಿಲ್ಲವೋ, ಆಗ ಸರ್ಕಾರಗಳಿಗೆ ತಾವು ಹೇಳಿದ್ದೇ ಸರಿ, ಮಾಡುತ್ತಿರುವುದೇ ಸರಿ ಎಂಬ ಅಭಿಪ್ರಾಯ ಬಂದು ಬಿಡುತ್ತದೆ. ಈಗ ಆಗಿರುವುದು ಅದೇ. ಸರೋಜಿನಿ ಮಹಿಷಿ ವರದಿ ಇವತ್ತಿನ ತನಕ ಯಾಕೆ ಅನುಷ್ಟಾನಗೊಂಡಿಲ್ಲ ಎಂಬ ಪ್ರಶ್ನೆಗೂ ಅದರಲ್ಲೇ ಉತ್ತರ ಇದೆ.

ಹೀಗಾಗಿ ಮುಂದಿನ ದಿನಗಳಲ್ಲಿ ಚಿತ್ರರಂಗವೇ ಇರಬಹುದು, ಚಳವಳಿಗಳೇ ಇರಬಹುದು, ಯಾವುದೇ ರಂಗಗಳಿರಬಹುದು ಅವು ಸಕ್ರಿಯವಾಗಲೇಬೇಕು. ಇವತ್ತು ರಾಜ್‌ಕುಮಾರ್ ಅವರಂತಹ ಮೇರು ವ್ಯಕ್ತಿಗಳನ್ನು ಚಿತ್ರರಂಗದಲ್ಲಿ ಹುಡುಕುವುದು ಕಷ್ಟದ ಕೆಲಸ. ಆದರೆ ಇಂತಹ ನಾಯಕರು ಯಾವುದೇ ರಂಗಗಳಲ್ಲಿದ್ದರೂ ಅವರನ್ನು ಮುಂದೆ ತಂದು, ಅವರಿಗೊಂದು ಶಕ್ತಿ ಕೊಟ್ಟು ಬೆಳೆಸುವ ಕೆಲಸ ಆಗಬೇಕು. ಒಂದೊಂದು ಫ್ರೆಷರ್ ಗ್ರೂಪ್‌ಗಳೂ ರಾಜಕೀಯದಿಂದ ದೂರ ಉಳಿದು ತನ್ನ ಶಕ್ತಿಯನ್ನು ಬೆಳೆಸಿಕೊಳ್ಳುವುದರ ಜತೆಗೆ ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡುವ ಶಕ್ತಿ ಇರುವ ನಾಯಕರನ್ನು ತಯಾರಿಸುವ ಗರಡಿ ಮನೆಗಳಾಗಬೇಕು. ಒಂದು ವಿಚಾರಧಾರೆಯೊಂದಿಗೆ ನಾಯಕರನ್ನು ಸೃಷ್ಟಿಸುವ ಕೆಲಸ ನಿರಂತರವಾಗಿ ನಡೆಯುತ್ತಾ ಹೋದರೆ ಒಂದಲ್ಲ ಒಂದು ದಿನ ಕರ್ನಾಟಕದಲ್ಲಿ ಕನ್ನಡಿಗರು ಪರಕೀಯರಾಗುವ ಅಪಾಯ ತಪ್ಪುತ್ತದೆ.

ಅಂದ ಹಾಗೆ ರಾಜಕೀಯದ ವಿಷಯ ಬಂದಾಗ ನಟ ಕಮಲ್‌ಹಾಸನ್ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಅವರು ತಯಾರಿಸಿದ 'ವಿಶ್ವರೂಪಂ' ಚಿತ್ರ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಅಂತ ರಾಡಿ ಎಬ್ಬಿಸಿದ್ದು ಯಾರು ಅಂತ ಈ ದೇಶದ ಎಲ್ಲರಿಗೂ ಗೊತ್ತು. ಜನಪ್ರಿಯತೆಯ ಉತ್ತುಂಗದಲ್ಲಿರುವ ರಜನೀಕಾಂತ್, ಕಮಲ್‌ಹಾಸನ್ ಥರದವರು ರಾಜಕೀಯ ಪ್ರವೇಶ ಮಾಡುವುದನ್ನು ತಮಿಳುನಾಡಿನಲ್ಲಿ ಸೆಟ್ಲಾಗಿರುವ ಪಟ್ಟಭದ್ರ ಹಿತಾಸಕ್ತಿಗಳು ಇಷ್ಟಪಡುವುದಿಲ್ಲ. ಹೀಗಾಗಿಯೇ ಅವು ಕಮಲ್‌ಹಾಸನ್‌ಗೆ ಕೊಡಬಾರದ ಕಷ್ಟ ಕೊಟ್ಟವು. ಕಮಲ್‌ಹಾಸನ್ ಸೂಕ್ಷ್ಮ ಮನಸ್ಸಿನ ಕಲಾವಿದ. ಹೀಗಾಗಿ ಈ ಬೆಳವಣಿಗೆಯ ನಂತರ ರಾಜಕೀಯ ರಂಗದ ವಿಷಯದಲ್ಲಿ ಇನ್ನಷ್ಟು ಅಸಹ್ಯ ಅವರಲ್ಲಿ ಮೂಡಿರಬಹುದು. ರಾಜಕೀಯದ ಸಹವಾಸವೇ ಸಾಕಪ್ಪ ಅಂತ ಅವರಿಗನ್ನಿಸಿರಬಹುದು. ಹಾಗಂದ ಮಾತ್ರಕ್ಕೆ ಕಮಲ್‌ಹಾಸನ್ ಈ ಸಮಾಜದ ಮೇಲೆ ಬೀರುವ ಪರಿಣಾಮವೇನೂ ಕಡಿಮೆಯಾಗುವುದಿಲ್ಲ. ಒಬ್ಬ ಕಲಾವಿದ ಸಾಮಾಜಿಕ ಕಳಕಳಿ ಹೊಂದಿರುವುದರಿಂದ, ಅದರಲ್ಲೂ ಕಮಲ್‌ಹಾಸನ್ ಮೇರು ನಟರಾಗಿರುವುದರಿಂದ ಈ ಸಮಾಜಕ್ಕೆ ಯಾವುದರ ಅಗತ್ಯವಿದೆ? ಈ ಸಂಸ್ಕೃತಿಯ ಉಳಿವಿಗೆ ಯಾವುದರ ಅಗತ್ಯವಿದೆ? ಅನ್ನುವುದನ್ನು ತಮ್ಮ ಚಿತ್ರಗಳ ಮೂಲಕ ಹೇಳುತ್ತಲೇ ಹೋಗುತ್ತಾರೆ. ಅದರ ಪ್ರಭಾವವೂ ಸಮಾಜದ ಮೇಲಾಗುತ್ತದೆ. ಅಷ್ಟರ ಮಟ್ಟಿಗೆ ಅವರು ಮಾಡುವ ಕೆಲಸವೇ ಸಾಕು.

ಆದರೆ ಇಂತಹವರೆಲ್ಲ ಸೇರಿ ಒಂದು ಫ್ರೆಷರ್ ಗ್ರೂಪ್ ಸೃಷ್ಟಿಸಿಕೊಂಡರೆ, ತಮ್ಮ ತಮ್ಮ ವಿಚಾರಧಾರೆಗಳನ್ನು ಹೇಳುತ್ತಾ ಹೋದರೆ ತಮಿಳುನಾಡಿನ ಮಟ್ಟಿಗೆ ಅದು ದೊಡ್ಡ ಕೆಲಸವೇ. ಆದರೆ ಕರ್ನಾಟಕದ ಸ್ಥಿತಿ ತಮಿಳುನಾಡಿಗಿಂತ ಘೋರವಾಗಿದೆ. ಯಾಕೆಂದರೆ ಇಲ್ಲಿ ಕನ್ನಡಿಗನೇ ಪರಕೀಯ. ಪರಭಾಷಿಕರೇ ಸಾರ್ವಭೌಮರು ಎನ್ನುವಂತಹ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಈ ಸನ್ನಿವೇಶವನ್ನು ಎದುರಿಸಲು ಕರ್ನಾಟಕದ ಎಲ್ಲ ರಂಗಗಳು ಒಂದೊಂದು ಫ್ರೆಷರ್ ಗ್ರೂಪ್‌ಗಳಾಗಿ ಕೆಲಸ ಮಾಡದೇ ಹೋದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಯಾಕೆಂದರೆ ರಾಜ್‌ಕುಮಾರ್ ಅವರು ರಾಜಕೀಯ ಸೇರಲು ನಿರಾಕರಿಸಿದ ಕಾಲಘಟ್ಟದಲ್ಲಿ ಜಾಗತೀಕರಣ ಎಂಬ ಭೂತ ಈ ದೇಶವನ್ನು ಪ್ರವೇಶಿಸಿರಲಿಲ್ಲ. ಆದರೆ ಈಗ ಜಾಗತೀಕರಣದ ಭೂತ ದೇಶದೊಳಕ್ಕೆ ನುಗ್ಗಿ ಹದಿನೇಳು ವರ್ಷಗಳಷ್ಟು ಸುದೀರ್ಘ ಕಾಲವೇ ಆಗಿದೆ. ಈ ಭೂತವನ್ನು ಮತ್ತಷ್ಟು ದೊಡ್ಡದಾಗಿ ಬೆಳೆಸಲು ಬಂಡವಾಳಶಾಹಿಗಳು ಹಾತೊರೆಯುತ್ತಿದ್ದಾರೆ. ಅವರ ಆಸೆ ಯಾವ್ಯಾವ ರೂಪದಲ್ಲಿ ವ್ಯಕ್ತವಾಗುತ್ತಿದೆ ಎಂಬುದನ್ನು ಎಲ್ಲರೂ ಗಮನಿಸುತ್ತಲೇ ಇದ್ದಾರೆ.

ವಿಪರ್ಯಾಸವೆಂದರೆ ಈ ಆಸೆಯ ಮೂಲಕ ಅವರು ಸೃಷ್ಟಿಸುತ್ತಿರುವ ಬಣ್ಣದ ಲೋಕವನ್ನು ಪ್ರವೇಶಿಸಲು ಹಾತೊರೆಯುತ್ತಿರುವವರು ಒಂದು ಕಡೆಗಾದರೆ, ಇದಕ್ಕೆ ಪ್ರತಿಯಾಗಿ ಈ ಬಣ್ಣದ ಲೋಕಕ್ಕೆ ನುಗ್ಗಿದರೆ ನಿಮಗೆಲ್ಲ ಕೇಡು ಕಾದಿದೆ ಎಂದು ಹೆದರಿಸುತ್ತಿರುವ ಶಕ್ತಿಗಳ ಕಡೆ ನುಗ್ಗುತ್ತಿರುವವರ ದಂಡು ಮತ್ತೊಂದು ಕಡೆಗೆ. ಫೈನಲಿ, ಈ ಎಲ್ಲದರ ನಡುವೆ ಕನ್ನಡಿಗ ತನ್ನ ನೆಲದಲ್ಲಿ ಸ್ವಾಭಿಮಾನದಿಂದ ಬದುಕಲು, ಸಾರ್ವಭೌಮನಂತೆ ಬದುಕುವ ವಿಷಯದಲ್ಲಿ ಯಾವ ರಾಜಕೀಯ ಪಕ್ಷಗಳಿಗೂ ಆಸಕ್ತಿಯೇ ಇಲ್ಲ. ಇಂತಹ ಕಾಲಘಟ್ಟದಲ್ಲಿ ರಾಜ್‌ಕುಮಾರ್ ಅವರಂತಹ ಮೇರು ವ್ಯಕ್ತಿತ್ವಗಳು ಕಾಣಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ರಂಗಗಳು ಒಂದೊಂದು ಫ್ರೆಷರ್ ಗ್ರೂಪ್‌ಗಳಾಗಿ ಹೊಸ ನಾಯಕರನ್ನು ಸೃಷ್ಟಿಸದಿದ್ದರೆ, ಈ ನೆಲದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದನ್ನು ನಿಕ್ಕಿಗೊಳಿಸದಿದ್ದರೆ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ. ಹಾಗಾಗದಿರಲಿ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 15 October, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books