Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ನಾವೇ ಹೀರೋ ಆಗಬೇಕೆ ಹೊರತು ಮತ್ತೊಬ್ಬರಲ್ಲ!

ನಿಮ್ಮ ಪಾಲಿಗೆ ನಿಜವಾದ ಹೀರೋ ಯಾರು? ಈ ಪ್ರಶ್ನೆ ಕೇಳಿದರೆ ಪ್ರತಿಯೊಬ್ಬರೂ ತಮಗಿಷ್ಟವಾದವರ ಹೆಸರನ್ನು ಹೇಳಬಹುದು. ನನ್ನ ಪಾಲಿಗೆ ಶಾರೂಖ್ ಖಾನೇ ರಿಯಲ್ ಹೀರೋ ಅಂತಲೋ, ಹೃತಿಕ್ ರೋಷನ್ ಅಂತಲೋ, ರಣಬೀರ್ ಕಪೂರ್ ಅಂತಲೋ, ಐಟಿ ದಿಗ್ಗಜ ನಾರಾಯಣಮೂರ್ತಿ ಅಂತಲೋ, ಅಜೀಂ ಪ್ರೇಮ್‌ಜೀ ಅಂತಲೋ ಹೀಗೆ ತಮ್ಮ ಪಾಲಿಗೆ ಇಂತಹವರೇ ರಿಯಲ್ ಹೀರೋಗಳು ಅಂತ ಬಣ್ಣಿಸಬಹುದು. ಕೆಲವರಂತೂ ತಮ್ಮ ನೆಚ್ಚಿನ ಹೀರೋಗಳನ್ನು ಆರಾಧಿಸುವುದಷ್ಟೇ ಅಲ್ಲ, ಅವರಂತೆಯೇ ವರ್ತಿಸಲು, ಬದುಕಲು ಯತ್ನಿಸುತ್ತಾರೆ. ಅವರಂತೆಯೇ ಡ್ರೆಸ್ಸು, ಅವರಂತೆಯೇ ಮಾತುಕತೆ, ಅವರಂತೆಯೇ ನಡಿಗೆ ಹೀಗೆ ಪ್ರತಿಯೊಂದು ವಿಷಯದಲ್ಲೂ ಅವರು ತಮ್ಮ ಹೀರೋ ಹೇಗಿದ್ದಾನೋ ಹಾಗೆ ಬದುಕಲು ಯತ್ನಿಸುತ್ತಾರೆ.

ಹೆಣ್ಣು ಮಕ್ಕಳೂ ಅಷ್ಟೇ. ಬಹುತೇಕರು ತಮಗೆ ಇಷ್ಟವಾದ ನಟಿಯರಂತೆ ವರ್ತಿಸಲು ಯತ್ನಿಸುತ್ತಾರೆ. ಒಂದು ವಯಸ್ಸಿನ ತನಕ ಇವೆಲ್ಲ ಓಕೆ. ನಾವೂ ಅಷ್ಟೇ ಯುವಕರಾಗಿದ್ದ ಕಾಲದಲ್ಲಿ ನಮಗೆ ಅಮಿತಾಬ್ ಬಚ್ಚನ್ ಅಂದರೆ ಆರಾಧ್ಯ ದೈವ. ಅದೇ ರೀತಿ ನಮ್ಮ ವರನಟ ರಾಜ್‌ಕುಮಾರ್ ಹೀಗೆ ಕಾಲ ಕಾಲಕ್ಕೆ ನಮಗೆ ಇವರೇ ರಿಯಲ್ ಹೀರೋಗಳು. ಅಮಿತಾಬ್ ಬಚ್ಚನ್ ಹಾಕುತ್ತಿದ್ದ ಬೆಲ್ ಬಾಟಮ್ ಪ್ಯಾಂಟ್‌ನ್ನು ನೋಡಿ ನಾವು ಕೆಲ ಗೆಳೆಯರು ಅದೆಷ್ಟು ಮರುಳಾಗಿದ್ದೆವೆಂದರೆ ಸೀದಾ ಟೇಲರ್ ಹತ್ತಿರ ಹೋಗಿ ನಲವತ್ತೈದು ಇಂಚಿನ ಬೆಲ್ ಬಾಟಮ್ ಪ್ಯಾಂಟ್ ಹೊಲಿಸಿದ್ದೆವು. ಮೂಲಂಗಿ ಪ್ಯಾಂಟುಗಳು ಮೂಲೆಗುಂಪಾದ ಕಾಲಘಟ್ಟವದು. ನಾವು ಹುಡುಗರು ಅಮಿತಾಬ್ ಬಚ್ಚನ್ ಥರ ನಲವತ್ತೈದು ಇಂಚಿನ ಬೆಲ್ ಬಾಟಮ್ ಪ್ಯಾಂಟ್ ಹಾಕಿಕೊಂಡು ಓಡಾಡುತ್ತಿದ್ದರೆ ನಮ್ಮ ಸುತ್ತ ಮುತ್ತ ಇರುತ್ತಿದ್ದ ಹಿರಿಯರು, ಬೇಷ್ ಕಣ್ರಲೇ ನಿಮ್ಮಂತಹ ನೂರು ಜನ ಇದ್ದರೆ ಈ ಊರಿನ ರಸ್ತೆಗಳಲ್ಲಿರುವ ಕಸ ತೆಗೆಯಲು ಮುನ್ಸಿಪಾಲಿಟಿಯವರ ಅಗತ್ಯವೇ ಇಲ್ಲ ಅನ್ನುತ್ತಿದ್ದರು.

ಯಾಕೆಂದರೆ ನಾವು ಹಾಕಿಕೊಂಡ ಬೆಲ್ ಬಾಟಮ್ ಪ್ಯಾಂಟುಗಳು ರಸ್ತೆಯನ್ನು ಗುಡಿಸಿಕೊಂಡು ಹೋಗುತ್ತಿದ್ದವು. ನಲವತ್ತೈದು ಇಂಚಿನ ಬೆಲ್ ಬಾಟಮ್ ಪ್ಯಾಂಟ್ ಅಂದರೆ ಅದೇನು ತಮಾಷೆಯ ಮಾತೇ. ಸರಿ, ಇವೆಲ್ಲ ಒಂದು ಕಾಲಘಟ್ಟದ ತನಕ ಚೆಂದವೇ. ಯಾಕೆಂದರೆ ಆ ವಯಸ್ಸಿನಲ್ಲಿ ನಮ್ಮ ಬದುಕಿಗೆ ಇನ್ನೂ ಒಂದು ಗುರಿ ಅಂತಲೋ, ಆದರ್ಶ ಅಂತಲೋ ನಿಕ್ಕಿ ಆಗಿರುವುದಿಲ್ಲ. ಎಲ್ಲವನ್ನೂ ಕುತೂಹಲದಿಂದ ನೋಡುವ ಕಾಲಘಟ್ಟವದು. ಹೀಗಾಗಿ ಕೆಲ ದಿನಗಳ ಮಟ್ಟಿಗೆ ಅಮಿತಾಬ್ ಬಚ್ಚನ್, ಸ್ವಲ್ಪ ದಿನ ಸಂಜಯ್‌ಕುಮಾರ್, ಈ ಮಧ್ಯೆ ನಮ್ಮವರೇ ಆದ ರಾಜ್‌ಕುಮಾರ್ ಹೀಗೆ ಆಯಾ ಕಾಲಕ್ಕೆ ಒಬ್ಬೊಬ್ಬರು ಬಂದು ಮನಸ್ಸಿನ ಪರದೆಯ ಮೇಲೆ ಹೀರೋಗಳಾಗಿ ಬಿಡುತ್ತಿದ್ದರು. ಆದರೆ ಮೂವತ್ತು ಕಳೆದು, ಮೂವತ್ತೈದರ ಪಡಸಾಲೆಗೆ ತಲುಪಿದ ಮೇಲೂ ನಾವು ಯಾರನ್ನೋ ಅನುಕರಿಸುತ್ತಲೇ ಬದುಕುತ್ತಿದ್ದೇವೆ ಎಂದರೆ ನಮ್ಮಲ್ಲಿ ಸ್ವಂತಿಕೆ ಎಂಬುದು ಬರಲಿಲ್ಲ ಅಂತಲೇ ಅರ್ಥ. ಯಾಕೆಂದರೆ ನನ್ನ ಪ್ರಕಾರ, ನಮ್ಮ ಬದುಕಿಗೆ ನಾವೇ ರಿಯಲ್ ಹೀರೋಗಳು. ಇಷ್ಟ ಆಗುವವರು ನೂರು ಜನ ಇರಬಹುದು. ಮತ್ತು ಹಲವಾರು ಕಾರಣಗಳಿಗಾಗಿ, ಕಾಲ ಕಾಲಕ್ಕೆ ನಮಗೆ ಇಷ್ಟವಾಗುವವರು ನೂರು ಮಂದಿ ಸಿಗಬಹುದು. ಆದರೆ ಯಾವತ್ತೂ ನೆನಪಿಡಿ ನಿಮ್ಮ ಬದುಕಿಗೆ ನೀವೇ ರಿಯಲ್ ಹೀರೋಗಳು. ನೋಡಲು ಸುಂದರವಾಗಿ ಕಾಣುವವರು, ಸಾವಿರಾರು ರುಪಾಯಿ ಮೌಲ್ಯದ ಬಟ್ಟೆ ತೊಡುವವರು, ಲಕ್ಷ ರುಪಾಯಿ ಮೌಲ್ಯದ ಶೂ ಹಾಕುವವರು ಮಾತ್ರವೇ ಹೀರೋಗಳಲ್ಲ.

ಒಂದು ಕುಟುಂಬಕ್ಕೆ, ಸಾಧ್ಯವಾದರೆ ಇನ್ನಷ್ಟು ಹೆಚ್ಚು ಮಂದಿಗೆ, ಇದಕ್ಕೂ ಹೆಚ್ಚಿನ ಶಕ್ತಿ ಬಂದರೆ ಒಂದು ಸಮಾಜಕ್ಕೆ, ಒಂದು ವ್ಯವಸ್ಥೆಗೆ ಉತ್ತಮವಾದುದನ್ನು ಕೊಡುವ ಗುಣ ಯಾರಿಗೆ ಬರುತ್ತದೋ ಅವರು ರಿಯಲ್ ಹೀರೋಗಳು. ಆದರೆ ಅಂತಹವರ ಬದುಕಿನಿಂದ ನಾವು ಪ್ರೇರಣೆ ಪಡೆಯಬೇಕೇ ಹೊರತು ಅವರ ವ್ಯಕ್ತಿತ್ವದ ನಕಲಿ ಪ್ರತಿಗಳಂತಾಗಬಾರದು. ಒಳ್ಳೆಯ ಸಂಗತಿಗಳು ಜಗತ್ತಿನ ಯಾವುದೇ ಮೂಲೆಯಿಂದ ಬರಲಿ ಅದನ್ನು ಸ್ವೀಕರಿಸಿ ಎಂಬ ಮಾತಿದೆ. ನಾವು ಯಾರನ್ನು ಹೀರೋಗಳ ಥರ ನೋಡುತ್ತೇವೋ ಅಂತಹವರಲ್ಲಿರುವ ಒಳ್ಳೆಯ ಗುಣಗಳನ್ನು ನಾವು ಆ ರೀತಿ ಸ್ವೀಕರಿಸಬೇಕು, ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ರಾಷ್ಟ್ರಪಿತ ಅನ್ನಿಸಿಕೊಂಡ ಗಾಂಧೀಜಿಯೂ ಏಕಾಏಕಿ ಈ ದೇಶದ ಪಾಲಿಗೆ ಹೀರೋ ಥರ ಕಾಣಲಿಲ್ಲ. ಲಿಯೋ ಟಾಲ್‌ಸ್ಟಾಯ್ ಅವರಿಂದ ಹಿಡಿದು ಜಗತ್ತಿನ ಹಲವಾರು ಮಹಾನುಭಾವರಿಂದ ಅವರು ಪ್ರೇರಣೆ ಪಡೆದಿದ್ದರು. ಅವರ ಬದುಕಿನ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳ ಹೆಸರು ಬರೆಯುತ್ತಾ ಹೋದರೆ ಅದು ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ.

ಇನ್ಫೋಸಿಸ್ ಎಂಬ ಸಂಸ್ಥೆಯನ್ನು ಕಟ್ಟಿದ ನಾರಾಯಣಮೂರ್ತಿ ಏಕಾಏಕಿಯಾಗಿ ಐಟಿ ಜಗತ್ತಿನ ಐಕಾನ್ ಆಗಲಿಲ್ಲ. ಅದರ ಹಿಂದೆ ಅಪಾರ ಪರಿಶ್ರಮವಿತ್ತು. ನೋಡಲು ಚೆಂದ ಕಾಣುವ, ತೆರೆಯ ಮೇಲೆ ಬಂದಾಗ ಖುಷಿ ಕೊಡುವ ಹೃತಿಕ್ ರೋಷನ್ನೋ, ಶಾರೂಖ್ ಖಾನೋ ಸುಮ್ಮ ಸುಮ್ಮನೆ ಆ ಲೆವೆಲ್ಲಿಗೆ ಬರಲಿಲ್ಲ. ನಿರಂತರ ಪರಿಶ್ರಮ, ಸಾಧಿಸಬೇಕೆಂಬ ಛಲ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇಂತಹವರನ್ನು ಅನುಕರಿಸಿದ ಮಾತ್ರಕ್ಕೆ ನಾವ್ಯಾರೂ ಹೀರೋಗಳಾಗುವುದಿಲ್ಲ. ಬದಲಿಗೆ ಇವರು ಹೇಗೆ ರೂಪುಗೊಂಡರು? ಇಷ್ಟು ಎತ್ತರಕ್ಕೆ ಬೆಳೆದ ಮೇಲೂ ಹೇಗೆ ನಡೆದುಕೊಳ್ಳುತ್ತಿದ್ದಾರೆ? ಈ ವ್ಯವಸ್ಥೆಯ ಬಗ್ಗೆ ಅವರಿಗಿರುವ ಕನ್‌ಸರ್ನ್ ಯಾವ ಮಟ್ಟದ್ದು? ಎಂಬುದನ್ನು ಗಮನಿಸುತ್ತಾ ಹೋದಾಗ ಒಂದು ಪ್ರೇರಣೆ ದಕ್ಕುತ್ತದೆ. ಇಂತಹ ಪ್ರೇರಣೆ ನಿಮಗೆ ಒಬ್ಬಿಬ್ಬರಿಂದಲ್ಲ, ನೂರಾರು ಜನರಿಂದ ಸಿಕ್ಕಿರುತ್ತದೆ. ದೊಡ್ಡ ದೊಡ್ಡ ಹೀರೋಗಳು ಅಂತ ನಾವು ಯಾರನ್ನು ನೋಡುತ್ತೇವೋ ಅವರು ಮಾತ್ರವೇ ನಮಗೆ ಪ್ರೇರಣೆಯಾಗುವುದಿಲ್ಲ. ನಮ್ಮ ಅಕ್ಕಪಕ್ಕದಲ್ಲೇ ಇರುವ ಸಾಮಾನ್ಯ ವ್ಯಕ್ತಿಗಳೂ ತಮ್ಮ ಬದುಕಿನ ಮೂಲಕ ನಮಗೆ ಪಾಠ ಕಲಿಸುತ್ತಾ ಇರುತ್ತಾರೆ.

ತಮ್ಮ ತಮ್ಮ ಕಾಯಕದ ಮೂಲಕ, ತಮ್ಮ ತಮ್ಮ ಬದ್ಧತೆಗಳ ಮೂಲಕ, ಬಡಬಗ್ಗರ ಬಗ್ಗೆ, ಮನುಷ್ಯ ಸಂಬಂಧಗಳ ಬಗ್ಗೆ ತಮಗಿರುವ ಕಾಳಜಿಯ ಮೂಲಕ ಜೀವನದ ಮೌಲ್ಯವನ್ನು ತಿಳಿಸುತ್ತಲೇ ಇರುತ್ತಾರೆ. ಅದು ನಮ್ಮ ಕಣ್ಣಿಗೆ ಕಾಣುತ್ತಲೇ ಇರುತ್ತದೆ. ಆದರೆ ತುಂಬ ಸಲ ನಮಗೆ ಅದು ಮುಖ್ಯ ಅನ್ನಿಸುವುದೇ ಇಲ್ಲ. ಹೀಗಾಗಿ ತುಂಬ ಚೆಂದಗೆ ಕಾಣುವ, ಸಖತ್ತಾಗಿ ಡ್ರೆಸ್ಸು ಮಾಡಿಕೊಳ್ಳುವ, ಐಷಾರಾಮಿ ಕಾರಿನಲ್ಲಿ ತಿರುಗುವ, ಸದಾಕಾಲ ಲವಲವಿಕೆಯಿಂದಿರುವ ಜನ ನಮ್ಮ ಪಾಲಿಗೆ ರಿಯಲ್ ಹೀರೋಗಳಾಗುತ್ತಾರೆ. ಅವರಂತೆಯೇ ಬದುಕಲು ನಾವು ಹಾತೊರೆಯುತ್ತೇವೆ. ಆದರೆ ಹಾಗೆ ಬದುಕಲು ಹೋದರೆ ನಾವು ಶಾರೂಖ್ ಖಾನ್‌ನ ನಕಲೋ, ಸಲ್ಮಾನ್ ಖಾನ್‌ನ ನಕಲೋ ಅಥವಾ ಇನ್ಯಾವುದೇ ವ್ಯಕ್ತಿಯ ನಕಲು ಪ್ರತಿಯಾಗಬಹುದು. ಇನ್ನೊಬ್ಬರ ನಕಲು ಪ್ರತಿ ಆದರೆ ನಮ್ಮ ಬದುಕಿಗೆ ನಿಜವಾದ ಹೊಳಪು ಅಂತ ಸಿಗುವುದೇ ಇಲ್ಲ. ಯಾಕೆಂದರೆ ಇನ್ನೊಬ್ಬರನ್ನು ನಕಲು ಮಾಡಿ ಬದುಕುವ ವ್ಯಕ್ತಿ ನಾಲ್ಕು ದಿನಗಳ ಮಟ್ಟಿಗೆ ಜನರ ಗಮನ ಸೆಳೆಯಬಹುದೇ ವಿನಾ ಖಾಯಂ ಆಗಿ ಹೀರೋ ಆಗಿರಲು ಸಾಧ್ಯವಿಲ್ಲ.

ಇದರ ಬದಲು ನೀವು ಏನೇ ಕೆಲಸ ಮಾಡಿ, ಲಾಂಡ್ರಿ ಇಡಿ, ಹಣ್ಣು-ತರಕಾರಿ ಮಾರಾಟ ಮಾಡಿ, ಐಟಿ ಉದ್ಯೋಗಿಯಾಗಿ ಅಥವಾ ಇನ್ಯಾವುದೇ ಕೆಲಸ ಮಾಡಿ. ಆದರೆ ನಾಲ್ಕು ಜನರ ಬದುಕಿಗೆ ಶಕ್ತಿ ತುಂಬುವ ಕೆಲಸ ಮಾಡಿ. ಹಾಗೆ ಮಾಡಿದಾಗ ನಿಮಗೆ ನಿಮ್ಮ ಬದುಕಿನ ಮಹತ್ವ ಏನು ಅನ್ನುವುದು ಅರಿವಾಗುತ್ತದೆ. ಒಂದು ಸಲ ನಿಮ್ಮ ಬದುಕಿಗೆ ಮಹತ್ವವಿದೆ ಎಂಬುದು ನಿಮಗೆ ಮನದಟ್ಟಾದರೆ, ನಾಲ್ಕು ಜನರ ಪಾಲಿಗೆ ನೀವು ಬೇಕು ಎಂಬುದು ಮನವರಿಕೆಯಾದರೆ ನೀವು ನಿಜವಾದ ಅರ್ಥದಲ್ಲಿ ಹೀರೋಗಳಾಗಿ ಬೆಳೆಯುತ್ತಿದ್ದೀರಿ ಎಂದೇ ಅರ್ಥ. ಅರ್ಥಾತ್, ನಿಮ್ಮ ಬದುಕು ನಾಲ್ಕು ಜನರ ಪಾಲಿಗೆ ಪ್ರಯೋಜನಕಾರಿ ಆಗುತ್ತಿದೆ ಎಂದಾದಾಗ ಸಹಜವಾಗಿಯೇ ಈ ವ್ಯವಸ್ಥೆಗೆ ನೀವು ಪಾಸಿಟಿವ್ ಅಂಶವಾಗುತ್ತೀರಿ. ಒಂದು ವ್ಯವಸ್ಥೆಗೆ ಪಾಸಿಟಿವ್ ಆಗಿ ಬೆಳೆಯುವವರೇ ನಿಜವಾದ ಹೀರೋಗಳು. ಹೀಗೆ ಹೀರೋಗಳಾದವರು ಜನರ ಗಮನವನ್ನು ಸೆಳೆಯುವ ಅನಗತ್ಯ ಪ್ರಯತ್ನವನ್ನೇನೂ ಮಾಡಬೇಕಿಲ್ಲ. ಜನ ತಾವಾಗಿಯೇ ಅಂತಹವರನ್ನು ಗಮನಿಸುತ್ತಾರೆ. ಒಂದು ವೇಳೆ ಅವರು ಗಮನಿಸಿಲ್ಲ ಎಂದರೂ ಆಗುವ ನಷ್ಟವೇನಿಲ್ಲ.

ಯಾಕೆಂದರೆ ನಾಲ್ಕು ಜನರ ಪಾಲಿಗೆ ನಾವು ಉಪಕಾರಿಗಳಾಗಿ ಬದುಕುತ್ತೇವಲ್ಲ ಆ ಸಮಾಧಾನ ನಮ್ಮ ಮನಸ್ಸಿನಲ್ಲಿದ್ದರೆ ಸಾಕು. ಆ ಮಟ್ಟಿಗೆ ನಮ್ಮ ಜೀವನಕ್ಕೆ ನಾವೇ ಹೀರೋಗಳು. ಅದಕ್ಕೆ ಅಗತ್ಯವಾದ ಪ್ರೇರಣೆ ನೂರು ಕಡೆಯಿಂದ ಸಿಗಬಹುದು. ಅಂತಹ ಪ್ರೇರಣೆಯನ್ನು ಪಡೆಯೋಣ. ಹೀರೋಯಿಸಂ ಅನ್ನು ಬೆಳೆಸಿಕೊಳ್ಳೋಣ. ಅದನ್ನು ಬಿಟ್ಟು ಡಿಟ್ಟೋ ರಾಜ್‌ಕುಮಾರ್ ಥರ ಮಾತನಾಡುವುದರಿಂದ, ಶಾರೂಖ್ ಖಾನ್, ಹೃತಿಕ್ ರೋಷನ್ ಥರ ಸ್ಟೈಲು ಮಾಡುವುದರಿಂದ, ವಿಜಯ್ ಮಲ್ಯನ ಥರ ಶೋಕಿ ಮಾಡುವುದರಿಂದ ಏನು ಪ್ರಯೋಜನ? ಹಾಗೆ ಇನ್ನೊಬ್ಬರ ನಕಲಿನಂತೆ ಬದುಕಿದರೆ ನಾವು ಅಬ್ಬಬ್ಬಾ ಅಂದರೆ ಜೋಕರ್‌ಗಳಾಗಬಹುದು. ಹೀಗೆ ಜೋಕರ್‌ಗಳಾಗಬೇಕೋ ಅಥವಾ ಪ್ರಕೃತಿ ನಮಗೆ ದಯಪಾಲಿಸಿದ ಶಕ್ತಿಯನ್ನು ಬೆಳೆಸಿಕೊಂಡು ಹೀರೋ ಆಗಬೇಕೋ ಅನ್ನುವುದು ಅವರವರಿಗೆ ಬಿಟ್ಟಿದ್ದು. ಆದರೆ ನೂರು ಕಡೆಯಿಂದ ಪ್ರೇರಣೆ ಸಿಗಲು ದಾರಿ ಇರುವಾಗ ಜೋಕರ್‌ಗಳಾಗಲು ಯಾಕೆ ಇಷ್ಟಪಡಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಹೀರೋ ಆಗುವ ಅರ್ಹತೆಯನ್ನು ಪ್ರಕೃತಿ ದಯಪಾಲಿಸಿರುವಾಗ ಮತ್ತೊಬ್ಬರ ನಕಲು ಪ್ರತಿಯಂತೆ ಯಾಕೆ ಬದುಕಬೇಕು? ಅಲ್ಲವೇ?

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 October, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books