Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಚೌಡಿ ಬಿಟ್ಟವರು ಹೆಣ ಹೊರಲು ತಯಾರಿಲ್ಲ ಅಂದರೆ ಹೇಗೆ?

ಮುಂಬರುವ ಪಾರ್ಲಿಮೆಂಟ್ ಚುನಾವಣೆಯ ನಂತರ ಯಾವ ಮೈತ್ರಿಕೂಟ ಕೇಂದ್ರದ ಅಧಿಕಾರ ಸೂತ್ರ ಹಿಡಿಯುತ್ತದೆ? ಗೊತ್ತಿಲ್ಲ. ಆದರೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವರ್ಸಸ್ ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿ ನಡುವೆ ಆರಂಭವಾಗಿರುವ ಸಮರ ಭಾರತವನ್ನು ವ್ಯಗ್ರಗೊಳಿಸುತ್ತಿರುವುದು ಮಾತ್ರ ಸ್ಪಷ್ಟವಾಗಿದೆ. ಕಳೆದ ಎರಡೂವರೆ ದಶಕಗಳ ಅವಧಿಯಲ್ಲಿ ನಡೆದ ಎಲ್ಲ ಪಾರ್ಲಿಮೆಂಟ್ ಚುನಾವಣೆಗಳ ಸಂದರ್ಭದಲ್ಲೂ ದೇಶವನ್ನು ವ್ಯಗ್ರ ಸ್ಥಿತಿಗೆ ತರುವ ಪರಿಪಾಠ ನಡೆದುಕೊಂಡು ಬಂದಿದೆಯಾದರೂ ಈ ಸಲ ಅದು ವಿಕೋಪಕ್ಕೆ ಹೋಗುವ ಲಕ್ಷಣಗಳು ಕಾಣುತ್ತಿವೆ. ನನಗೆ ತುಂಬ ಆತಂಕವಾಗುತ್ತಿರುವುದೇ ಈ ಕಾರಣಕ್ಕಾಗಿ. ಸುಮಾರು ಹತ್ತು ವರ್ಷಗಳಷ್ಟು ಸುದೀರ್ಘ ಕಾಲದಿಂದ ಅಧಿಕಾರದಿಂದ ದೂರ ಇರುವ ಬಿಜೆಪಿಗೆ ಈ ಸಲದ ಚುನಾವಣೆ ಅಸ್ತಿತ್ವದ ಪ್ರಶ್ನೆಯಾಗಿ ಕಾಡುತ್ತಿದೆ. ಈ ಸಲ ಅದೇನಾದರೂ ಅಧಿಕಾರ ಹಿಡಿಯದೇ ಹೋದರೆ ಅದರ ತ್ರಾಣವೇ ಕುಸಿದು ಹೋಗುತ್ತದೆ. ಇದು ಗೊತ್ತಿರುವುದರಿಂದಲೇ ಅದು ನರೇಂದ್ರಮೋದಿ ಎಂಬ ಕಟ್ಟರ್ ಹಿಂದೂವಾದಿ ನಾಯಕನನ್ನು ತನ್ನೆದುರಿಗೆ ನಿಲ್ಲಿಸಿಕೊಂಡು ಸೆಡ್ಡು ಹೊಡೆಯುತ್ತಿದೆ.

ಅಂದ ಹಾಗೆ ನರೇಂದ್ರಮೋದಿಯ ಬೆನ್ನ ಹಿಂದೆ ದೇಶದ ಉದ್ಯಮಪತಿಗಳ ದಂಡೇ ಇರುವುದರಿಂದ ಈಗ ಮೋದಿ ಕುಳಿತರೂ ಸುದ್ದಿ, ನಿಂತರೂ ಸುದ್ದಿ. ರಾಹುಲ್ ಗಾಂಧಿಯನ್ನು ಬೈದರೂ ಸುದ್ದಿ, ಪ್ರಧಾನಿ ಮನ್‌ಮೋಹನ್‌ಸಿಂಗ್ ಅವರನ್ನು ಗೇಲಿ ಮಾಡಿದರೂ ಸುದ್ದಿ. ಮೋದಿ ಕೇವಲ ಕಟ್ಟರ್ ಹಿಂದೂವಾದಿಯಾಗಿದ್ದರೆ ಅವರಿಗೆ ಈ ಮಟ್ಟದ ಫೋರ್ಸು ಸಿಗಲು ಸಾಧ್ಯವಿರಲಿಲ್ಲ. ಆದರೆ ಅವರು ಒಂದು ಕಡೆಯಿಂದ ತಮ್ಮ ಹಿಂದೂವಾದವನ್ನು ರಾಷ್ಟ್ರೀಯವಾದ ಎಂದು ಕರೆದುಕೊಳ್ಳುತ್ತಲೇ ಮತ್ತೊಂದು ಕಡೆಯಿಂದ ಅಭಿವೃದ್ಧಿಯ ಕನಸನ್ನು ಜನತೆಯ ಮುಂದಿಡುತ್ತಿದ್ದಾರೆ. ಹೀಗಾಗಿ ದೇಶದ ರಾಜಕಾರಣಿಗಳ ಪೈಕಿ ಅತ್ಯಂತ ದೊಡ್ಡ ಮಟ್ಟದಲ್ಲಿ ಕನಸುಗಳನ್ನು ಮಾರಾಟ ಮಾಡುವ ನಾಯಕ ಅಂತ ಯಾರಾದರೂ ಇದ್ದರೆ ತಕ್ಷಣ ಕಣ್ಣಿಗೆ ಕಾಣುವುದು ಮೋದಿ ಮಾತ್ರ. ಮೋದಿ ಇವತ್ತು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಎಲ್ಲ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಎಲ್ಲ ಕಡೆ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಅವರು ಕಾಂಗ್ರೆಸ್‌ನ್ನು ಟೀಕಿಸುತ್ತಾರೆ. ಪ್ರಧಾನಿ ಮನ್‌ಮೋಹನ್‌ಸಿಂಗ್ ಅವರನ್ನು ಗೇಲಿ ಮಾಡುತ್ತಾರೆ.

ಆದರೆ ಅದಕ್ಕೆ ದೊಡ್ಡ ಮಟ್ಟದಲ್ಲಿ ಉತ್ತರಿಸುವ ತಾಕತ್ತೇ ಯುಪಿಎ ನಾಯಕರಲ್ಲಿ ಕಾಣುತ್ತಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಈ ಕನಸುಗಳ ಮಾರಾಟಗಾರನ ಎದುರು ಮಂಕಾದವರಂತೆ ಕಾಣುತ್ತಿದ್ದರೆ ಬೇರೆ ದಾರಿಯೇ ಕಾಣದ ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತ ಸಮುದಾಯವನ್ನು ಮಿತಿಮೀರಿ ಓಲೈಸುವ ಕೆಲಸ ಮಾಡುತ್ತಿದ್ದಾರೆ. ಭಾರತ ವ್ಯಗ್ರವಾಗುತ್ತಿರುವುದಕ್ಕೆ ಈ ಅಂಶವೇ ಮುಖ್ಯ ಕಾರಣ. ವಾಸ್ತವವಾಗಿ ಬಿಜೆಪಿಯನ್ನು ಕೋಮುವಾದಿಗಳು ಅಂತ ದೂರುವ ಕಾಂಗ್ರೆಸ್ ಸ್ವತಃ ತಾನೇ ಕೋಮುವಾದವನ್ನು ಪೋಷಿಸುತ್ತಾ ಬಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ದೆಹಲಿಯ ಗದ್ದುಗೆಯ ಮೇಲೆ ಕುಳಿತರೆ ಅಲ್ಪಸಂಖ್ಯಾತರು ನೆಮ್ಮದಿಯಿಂದ ಬದುಕಲು ಸಾಧ್ಯವೇ ಇಲ್ಲ ಎಂದು ಅರಚುತ್ತದೆ. ಅದು ಅರಚುವ ರೀತಿ ಹೇಗಿರುತ್ತದೆ ಎಂದರೆ ಅಲ್ಪಸಂಖ್ಯಾತ ಸಮುದಾಯ ಸದಾಕಾಲ ಒಂದು ರೀತಿಯ ಅಭದ್ರ ಮನಸ್ಥಿತಿಯಲ್ಲೇ ಇರುವಂತಾಗುತ್ತದೆ. ಯಾವ ಸಮುದಾಯದ ಮನಸ್ಸಿನಲ್ಲಿ ಅಭದ್ರತೆ ಬೇರೂರುತ್ತದೋ, ಆ ಸಮುದಾಯ ಸಹಜವಾಗಿಯೇ ವ್ಯಗ್ರ ಸ್ಥಿತಿಗೆ ತಲುಪುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ ಹೀಗೆ ಅಲ್ಪಸಂಖ್ಯಾತ ಸಮುದಾಯ ವ್ಯಗ್ರ ಸ್ಥಿತಿಗೆ ತಲುಪಿದ ಕಾಲಘಟ್ಟದಲ್ಲಿ ಬಹುಸಂಖ್ಯಾತ ಸಮುದಾಯವೂ ಒಂದು ವ್ಯಗ್ರ ಸ್ಥಿತಿಗೆ ತಲುಪುತ್ತದೆ.

ಯಾಕೆಂದರೆ ಕಾಂಗ್ರೆಸ್‌ನ ಅರಚುವಿಕೆ ಬಹುಸಂಖ್ಯಾತ ಸಮುದಾಯಕ್ಕೂ ಎಚ್ಚರಿಕೆಯ ಗಂಟೆಯಂತೆ ಕೇಳಿಸುತ್ತದೆ. ಅರೇ, ಈ ದೇಶದಲ್ಲಿ ಎಲ್ಲಾ ಪ್ರಜೆಗಳೂ ಒಂದೇ ಎಂದ ಮೇಲೆ ಕಾಂಗ್ರೆಸ್ ಯಾಕೆ ಈ ರೀತಿ ಅಲ್ಪಸಂಖ್ಯಾತರ ಪರ ಕೂಗು ಹಾಕುತ್ತದೆ? ಬಹುಸಂಖ್ಯಾತರ ಬಗ್ಗೆ ಈ ಪಕ್ಷಕ್ಕೆ ಒಂದು ಕನ್‌ಸರ್ನ್ ಕೂಡ ಇಲ್ಲವೇ? ಎಂದು ಯೋಚಿಸುತ್ತದೆ. ಇದುವರೆಗೂ ಬಹುಸಂಖ್ಯಾತ ಸಮುದಾಯದ ಈ ಯೋಚನೆ ಮತ ಹಾಕುವ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಸಾಂದ್ರವಾಗಿಲ್ಲ ಎಂಬುದು ಬೇರೆ ಮಾತು. ಇದಕ್ಕೆ ಬೇರೆ ಕಾರಣಗಳೂ ಇವೆ. ಅದೆಂದರೆ ಭಾರತದ ಜಾತಿ ಪದ್ಧತಿ. ಈ ಜಾತಿ ಪದ್ಧತಿಯ ಬೇರುಗಳು ಬಹುಸಂಖ್ಯಾತರ ಗುಡ್‌ದಾ, ಲಿವರ್ರು, ಕಲೀಜಾಗಳಲ್ಲೇ ಬಿರುಕು ಮೂಡಿಸಿರುವುದು. ಸಾವಿರಾರು ವರ್ಷಗಳ ಹಿಂದೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವರ್ಗೀಕರಣದೊಂದಿಗೆ ಶುರುವಾದ ತಾರತಮ್ಯ, ಹಿಂದೂ ಸಮಾಜದಲ್ಲಿ ಮೂಡಿಸಿದ ಬಿಕ್ಕಟ್ಟು ಇವತ್ತಿನ ತನಕ ಪರಿಹಾರವಾಗಿಲ್ಲ. ಹೀಗಾಗಿ ಇದು ಎಲ್ಲಿಯ ತನಕ ಮುಂದುವರಿದುಕೊಂಡು ಹೋಗುತ್ತದೋ ಅಲ್ಲಿಯ ತನಕ ತಾವು ಅಲ್ಪಸಂಖ್ಯಾತರನ್ನು ಓಲೈಸುತ್ತಲೇ ಬಹುಸಂಖ್ಯಾತ ಸಮುದಾಯದ ಕೆಳಸ್ತರಗಳಲ್ಲಿರುವ ಜಾತಿಗಳ ಬೆಂಬಲ ಪಡೆದು ಅಧಿಕಾರ ಹಿಡಿಯುತ್ತಿರಬಹುದು ಎಂದು ಕಾಂಗ್ರೆಸ್ ಭಾವಿಸಿದೆ.

ಅದರ ಈ ಭಾವನೆಗೆ ಆಗಾಗ ತೃತೀಯ ಶಕ್ತಿ ಹೊಡೆತ ಕೊಡುತ್ತದಾದರೂ ಫೈನಲಿ, ಅಲ್ಪಸಂಖ್ಯಾತರ ಹಿತದ ವಿಷಯದಲ್ಲಿ ಕಾಂಗ್ರೆಸ್ ಥರ ಅರಚಿಕೊಳ್ಳುವ ಪಕ್ಷಗಳ್ಯಾವುವೂ ಇಲ್ಲ. ಕಾರಣ; ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಇರಬಹುದು, ರಾಷ್ಟ್ರೀಯ ಜನತಾದಳದ ನಾಯಕ ಲಾಲೂ ಪ್ರಸಾದ್ ಯಾದವ್ ಇರಬಹುದು, ಒಟ್ಟಿನಲ್ಲಿ ತೃತೀಯ ಶಕ್ತಿಯ ಜತೆ ಗುರುತಿಸಿಕೊಂಡ ಬಹುತೇಕ ನಾಯಕರಿಗೆ ಪರ್ಸನಲ್ ಅಜೆಂಡಾ, ತಮ್ಮ ಫ್ಯಾಮಿಲಿಯ ಹಿತರಕ್ಷಣೆಯೇ ಮುಖ್ಯ ಆದ್ಯತೆ. ಹೀಗಾಗಿಯೇ ಅಲ್ಪಸಂಖ್ಯಾತ ಸಮುದಾಯವನ್ನು ತುಂಬ ವ್ಯವಸ್ಥಿತವಾಗಿ ಆತಂಕಕ್ಕೆ ದೂಡುವ ಮತ್ತು ಈ ಆತಂಕದಿಂದ ಅವರನ್ನು ಕಾಪಾಡಲು ತನಗಿಂತ ದೊಡ್ಡ ಶಕ್ತಿ ಬೇರೊಂದಿಲ್ಲ ಎಂಬ ಅಭಿಪ್ರಾಯವನ್ನು ಮೂಡಿಸಲು ಕಾಂಗ್ರೆಸ್ ಯಶಸ್ವಿಯಾಗುತ್ತಿತ್ತು. ಆದರೆ ಈ ಸಲ ಪರಿಸ್ಥಿತಿ ಹಾಗಿಲ್ಲ. ಯಾಕೆಂದರೆ ಅದು ಹಾಕುತ್ತಿರುವ ಕೂಗಿನಿಂದ ಅಲ್ಪಸಂಖ್ಯಾತ ಸಮುದಾಯ ಆತಂಕಕ್ಕೊಳಗಾಗಿರುವುದು ನಿಜ. ಅದೇ ಕಾಲಕ್ಕೆ ವ್ಯಗ್ರವಾಗುತ್ತಿರುವುದೂ ನಿಜ.

ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದೇ ಕಾಲಕ್ಕೆ ಬಹುಸಂಖ್ಯಾತ ಸಮುದಾಯ ಕೂಡ ದೊಡ್ಡ ಮಟ್ಟದಲ್ಲಿ ವ್ಯಗ್ರವಾಗುತ್ತಿದೆ. ಮುಜಫರ್ ನಗರದಲ್ಲಿ ನಡೆದ ಕೋಮು ಗಲಭೆಯ ಸ್ವರೂಪ ಇದಕ್ಕೊಂದು ಉದಾಹರಣೆ ಅಷ್ಟೇ. ಅರ್ಥಾತ್, ಬಹುಸಂಖ್ಯಾತ ಸಮುದಾಯದ ಕೆಳಸ್ತರದಲ್ಲಿರುವ ಜಾತಿಗಳಿಗೂ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾಗುವ ಕಾಂಗ್ರೆಸ್‌ನ ನಡವಳಿಕೆ ಇಷ್ಟವಾಗುತ್ತಿಲ್ಲ. ಈ ಮನಸ್ಥಿತಿ ವ್ಯಾಪಕವಾದರೆ ಗತಿ ಏನು? ಒಂದು ಕಡೆ ಜಾಗತೀಕರಣದ ಮೂರನೇ ಹಂತಕ್ಕೆ ಭಾರತವನ್ನು ಕರೆದೊಯ್ಯಲು ಮೋದಿಯೇ ಸಮರ್ಥ ನಾಯಕ ಅಂತ ಉದ್ಯಮಿಗಳ ಪಡೆ ನಿರ್ಧರಿಸಿ ತುಂಬ ದಿನಗಳೇ ಆಗಿವೆ. ಮತ್ತೊಂದು ಕಡೆ ಕಾಂಗ್ರೆಸ್ ವತಿಯಿಂದ ನಡೆಯುತ್ತಿರುವ ಅಲ್ಪಸಂಖ್ಯಾತರ ತುಷ್ಟೀಕರಣದಂತಹ ಕ್ರಿಯೆಯ ಬಗ್ಗೆ ಬಹುಸಂಖ್ಯಾತ ಸಮುದಾಯದ ಕೆಳಸ್ತರದ ಜನರಲ್ಲಿ ವ್ಯಾಪಕ ಆಕ್ರೋಶ ಹಬ್ಬುತ್ತಿದೆ. ಇದನ್ನು ಎನ್‌ಕ್ಯಾಷ್ ಮಾಡಿಕೊಳ್ಳಲು ಮೋದಿ ಪರ ಲಾಬಿ ವ್ಯವಸ್ಥಿತವಾಗಿ ಕೆಲಸ ಮಾಡುವುದು ಸಹಜ. ದೇಶದ ಬಹುತೇಕ ಮಾಧ್ಯಮಗಳು ಈ ಲಾಬಿಯ ಕೈಲಿರುವುದರಿಂದ ಬಹುಸಂಖ್ಯಾತ ಸಮುದಾಯದ ಕೆಳಸ್ತರದಲ್ಲಿರುವ ಜಾತಿಗಳಲ್ಲೂ ಒಂದು ರೀತಿಯ ಆತಂಕ ಹುಟ್ಟುಹಾಕುವ ಮತ್ತು ಈ ಆತಂಕದ ಮೂಲಕ ವ್ಯಗ್ರ ಸ್ಥಿತಿಗೆ ತಲುಪುವಂತೆ ಮಾಡಲು ಸಾಧ್ಯವಾಗುತ್ತಿದೆ.

ಇಂತಹ ವ್ಯಗ್ರತೆಯನ್ನು ಮೂಡಿಸಲು ಮೋದಿ ಪರ ಟೀಮ್ ಯಾವ ಮಟ್ಟದಲ್ಲಿ ಕೆಲಸ ಮಾಡುತ್ತಿದೆ ಎಂದರೆ, ಅಲ್ರೀ ಈ ಕಾಂಗ್ರೆಸ್‌ನವರು ಮಾತೆತ್ತಿದರೆ ಗುಜರಾತ್‌ನ ಗೋಧ್ರಾದಲ್ಲಿ ನಡೆದ ನರಮೇಧಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾರೆ. ಆ ಮೂಲಕ ಮೋದಿ ಪ್ರಧಾನಿಯಾದರೆ ದೇಶದಾದ್ಯಂತ ಗೋಧ್ರಾದಲ್ಲಿ ನಡೆದಂತಹದೇ ಹತ್ಯಾಕಾಂಡಗಳು ನಡೆಯುತ್ತವೆ ಎಂದು ದೂರುತ್ತಾರೆ. ಆದರೆ ಗೋಧ್ರಾ ಹತ್ಯಾಕಾಂಡಕ್ಕೆ ಮೂಲವಾಗಿದ್ದು ಏನು? ಸಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬರುತ್ತಿದ್ದ ಕರಸೇವಕರನ್ನು ಸಜೀವ ದಹನ ಮಾಡಿದ ಬೆಳವಣಿಗೆ ತಾನೇ? ಸಬರಮತಿಯಲ್ಲಿ ನಡೆದಿದ್ದು ಆಕ್ಷನ್. ಗೋಧ್ರಾದಲ್ಲಿ ಕಾಣಿಸಿದ್ದು ರಿಯಾಕ್ಷನ್. ಸಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬರುತ್ತಿದ್ದ ಕರಸೇವಕರನ್ನು ಸುಟ್ಟು ಹಾಕುವ ಬೆಳವಣಿಗೆ ನಡೆಯದೇ ಇದ್ದಿದ್ದರೆ ಗೋಧ್ರಾ ಹತ್ಯಾಕಾಂಡ ನಡೆಯುತ್ತಲೇ ಇರಲಿಲ್ಲ. ಸಾವಿರಾರು ವರ್ಷಗಳ ಹಿಂದೂ ಬದುಕಿನ ಇತಿಹಾಸವನ್ನೇ ತೆಗೆದುಕೊಳ್ಳಿ. ಅವರು ತಾವಾಗಿಯೇ ಒಂದು ಹತ್ಯಾಕಾಂಡಕ್ಕೆ ಕೈ ಹಾಕಿದ್ದು ಅಪರೂಪ. ಬದಲಿಗೆ ಒಂದು ಕ್ರಿಯೆಗೆ ಪ್ರತಿಕ್ರಿಯೆ ಕೊಡುತ್ತಾ ಬಂದ ಸಮುದಾಯ ಅದು. ಹೀಗಿರುವಾಗ ಗೋಧ್ರಾದಲ್ಲಿ ನಡೆದ ಘಟನೆಯನ್ನು ಖಂಡಿಸುವವರು ಅದಕ್ಕಿಂತ ಮುನ್ನ ಸಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ಘಟನೆಯನ್ನು ಇನ್ನಷ್ಟು ಉಗ್ರವಾಗಿ ಖಂಡಿಸಬೇಕಿತ್ತು.

ಆದರೆ ಕಾಂಗ್ರೆಸ್ ಈ ಕೆಲಸ ಮಾಡುವುದಿಲ್ಲ. ಯಾಕೆಂದರೆ ಅದಕ್ಕೆ ಗೊತ್ತಿದೆ. ಬಹುಸಂಖ್ಯಾತ ಹಿಂದೂ ಸಮುದಾಯ ತನ್ನಲ್ಲಿರುವ ಜಾತಿ ವ್ಯವಸ್ಥೆಯ ಒಳ ಕೊವೆಗಳಿಂದಾಗಿ ಭಿನ್ನ ಭಿನ್ನವಾಗಿದೆ. ಆದರೆ ಅಲ್ಪಸಂಖ್ಯಾತ ಸಮುದಾಯ ಸದಾಕಾಲ ಒಗ್ಗಟ್ಟಾಗಿರುತ್ತದೆ. ಹೀಗಾಗಿ ಶೇಕಡಾ ಎಂಭತ್ತರಷ್ಟಿರುವ ಬಹುಸಂಖ್ಯಾತ ಸಮುದಾಯದ ಅನೇಕ ಕೆಳ ಜಾತಿಗಳ ಬೆಂಬಲ ಪಡೆದು ಅದೇ ಕಾಲಕ್ಕೆ ಅಲ್ಪಸಂಖ್ಯಾತರ ಮತ ಪಡೆದರೆ ಗೆದ್ದು ಅಧಿಕಾರ ಹಿಡಿಯಬಹುದು ಎಂಬುದು ಕಾಂಗ್ರೆಸ್‌ನ ಹಳೇ ತಂತ್ರ. ಅದಕ್ಕಾಗಿ ಅದು ಈಗಲೂ ನರೇಂದ್ರ ಮೋದಿಯನ್ನು ನೋಡಿದ ಕೂಡಲೇ ಗೋಧ್ರಾ ಹತ್ಯಾಕಾಂಡದ ಬಗ್ಗೆ ಅರಚುತ್ತದೆಯೇ ಹೊರತು ಕಳೆದ ಎಂಟು- ಒಂಭತ್ತು ವರ್ಷಗಳ ಅವಧಿಯಲ್ಲಿ ಗುಜರಾತ್‌ನಲ್ಲಿ ಕೋಮು ಗಲಭೆಗಳು ಸಂಭವಿಸಿಲ್ಲ ಎಂಬ ಅಂಶವನ್ನು ಅಪ್ಪಿತಪ್ಪಿಯೂ ಉಲ್ಲೇಖಿಸುತ್ತಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪದೇಪದೇ ಕೋಮು ಗಲಭೆಗಳು ಸಂಭವಿಸಿವೆ. ಆದರೆ ಗುಜರಾತ್‌ನಲ್ಲಿ ಅಂತಹ ಕೋಮು ಗಲಭೆ ಸಂಭವಿಸುತ್ತಿಲ್ಲ. ಯಾಕೆ?

ಯಾಕೆಂದರೆ ಬಹುಸಂಖ್ಯಾತ ಸಮುದಾಯದ ಜತೆ ಹೊಂದಿಕೊಂಡು ಬಾಳುವುದರಲ್ಲಿ ತಮ್ಮ ಹಿತ ಅಡಗಿದೆ ಎಂಬುದು ಗುಜರಾತ್‌ನ ಅಲ್ಪಸಂಖ್ಯಾತರಿಗೆ ಮನದಟ್ಟಾಗಿದೆ. ಹೀಗಾಗಿ ನರೇಂದ್ರಮೋದಿ ಸತತ ಮೂರನೇ ಬಾರಿ ಮುಖ್ಯಮಂತ್ರಿ ಗದ್ದುಗೆಯ ಮೇಲೇರಿ ಕುಳಿತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಇಡೀ ದೇಶದಲ್ಲಿ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಒಗ್ಗೂಡಿ ಬಾಳುವುದರಲ್ಲಿ ದೇಶದ ಹಿತ ಅಡಗಿದೆ. ಫೈನಲಿ, ಈಗ ದೇಶಕ್ಕೆ ಬೇಕಾಗಿರುವುದೇನು? ಕೋಟ್ಯಂತರ ಯುವಕ-ಯುವತಿಯರಿಗೆ ಉದ್ಯೋಗ. ಇಂತಹ ಉದ್ಯೋಗವನ್ನು ಕೇವಲ ಕೃಷಿ ಕ್ಷೇತ್ರ ಸೃಷ್ಟಿಸಲು ಸಾಧ್ಯವೇ? ಜಾಗತೀಕರಣದ ಕಾಲಘಟ್ಟಕ್ಕೆ ಈ ದೇಶವನ್ನು ಎಂಟ್ರಿ ಮಾಡಿಸಿದ್ದೇ ತೊಂಭತ್ತಾರರಲ್ಲಿ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್, ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದ ಮನ್‌ಮೋಹನ್‌ಸಿಂಗ್ ಅವರಂತಹವರು ತಾನೇ ಜಾಗತೀಕರಣ ಎಂಬ ಚೌಡಿಯನ್ನು ಭಾರತದೊಳಕ್ಕೆ ಬಿಟ್ಟುಕೊಂಡಿದ್ದು?

ಈಗ ಆ ಚೌಡಿಯ ವೇಗಕ್ಕೆ ಪೂರಕವಾಗಿ ಹೆಜ್ಜೆ ಹಾಕಲು ಕಾಂಗ್ರೆಸ್ ಕೈಲಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ದೇಶದ ಬಹುತೇಕ ರಾಜ್ಯಗಳಲ್ಲಿ ಅಭಿವೃದ್ಧಿ ಎಂಬುದು ಕುಂಠಿತವಾಗಿ, ಎಲ್ಲೆಡೆ ನಿರಾಶೆಯ ವಾತಾವರಣ ಕಾಣುತ್ತಿದೆ. ಅಂದ ಹಾಗೆ ಚೌಡಿ ಬಿಟ್ಟವರೇ ಹೆಣ ಹೊರಬೇಕು ಎಂಬುದೊಂದು ಗಾದೆ ಇದೆ. ಹೀಗೆ ಜಾಗತೀಕರಣ ಎಂಬ ಚೌಡಿಯನ್ನು ಒಳಕ್ಕೆ ಬಿಟ್ಟುಕೊಂಡವರು ಇವತ್ತು ಅಭಿವೃದ್ಧಿ ಎಂಬುದನ್ನು ಹೆಣದ ಸಮಾನವಾಗಿ ಮಾಡಿದ್ದಾರೆ. ಆದರೆ ಅವರು ಇದನ್ನು ಹೊರಲು ತಯಾರಿಲ್ಲ. ಬದಲಿಗೆ ಹೆಣಕ್ಕೇ ಶೃಂಗಾರ ಮಾಡಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದಾರೆ. ಆದರೆ ಮೋದಿ ಹಾಗಲ್ಲ, ಭಾರತದಲ್ಲಿ ವಿಜೃಂಭಿಸುತ್ತಿರುವ ಚೌಡಿಯನ್ನು ನಿಭಾಯಿಸುವುದು ಅವರಿಗೆ ಗೊತ್ತಿದೆ. ಹಾಗೆಯೇ ಹೆಣವಾಗಿರುವ ಅಂದರೆ ಜಡವಾಗಿರುವ ಅಭಿವೃದ್ಧಿಗೆ ಚಾಲನೆ ಕೊಡುವುದು ಅವರಿಗೆ ಗೊತ್ತಿದೆ. ಗುಜರಾತ್‌ನಲ್ಲಿ ನಡೆದ ಅಭಿವೃದ್ಧಿಯೇ ಇದಕ್ಕೆ ಸಾಕ್ಷಿ.

ಇದು ಕಾಂಗ್ರೆಸ್‌ನವರಿಗೂ ಚೆನ್ನಾಗಿ ಗೊತ್ತಿರುವುದರಿಂದ ಅವರೀಗ ದೇಶವನ್ನು ವ್ಯಗ್ರ ಸ್ಥಿತಿಗೆ ತಳ್ಳುವ ಮೂಲಕ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಆದರೆ ಒಂದು ಕಡೆಯಿಂದ ಅವರು ಅಲ್ಪಸಂಖ್ಯಾತ ಸಮುದಾಯ ವ್ಯಗ್ರಗೊಳ್ಳುವಂತೆ ಮಾಡಿದರೆ ಮತ್ತೊಂದು ಕಡೆಯಿಂದ ಬಹುಸಂಖ್ಯಾತ ಸಮುದಾಯ ಕೂಡ ವ್ಯಗ್ರಗೊಳ್ಳುತ್ತಿದೆ. ಜಾತಿಯ ತಾರತಮ್ಯದ ಹೆಸರಿನಲ್ಲಿ ಇದುವರೆಗೂ ಬಹುಸಂಖ್ಯಾತ ಸಮುದಾಯದ ಕೆಳಸ್ತರಗಳಲ್ಲಿರುವ ಜಾತಿಗಳ ಬೆಂಬಲ ಪಡೆಯುವುದು ಸುಲಭವಾಗಿತ್ತು. ಆದರೆ ಈಗ ಕೆಳಸ್ತರದಲ್ಲಿದ್ದ ಜಾತಿಗಳ ಜನರ ಮಕ್ಕಳೂ ಈಗ ವಿದ್ಯಾವಂತರಾಗಿದ್ದಾರೆ, ಆಗುತ್ತಿದ್ದಾರೆ. ಅವರಿಗೂ ಈಗ ಉದ್ಯೋಗ ಬೇಕು. ಹೀಗೆ ಉದ್ಯೋಗ ಬೇಕು ಎಂಬುದೇ ಆದರೆ ನರೇಂದ್ರ ಮೋದಿ ತರದ ನಾಯಕ ದೇಶದ ಪ್ರಧಾನಿ ಆಗಬೇಕು ಎಂದು ಅವರೂ ಬಯಸುತ್ತಾರೆ.

ಇಂತಹ ಕಾಲಘಟ್ಟದಲ್ಲಿ ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರನ್ನು ವ್ಯಗ್ರಗೊಳಿಸಿದರೆ ಬಹುಸಂಖ್ಯಾತ ಸಮುದಾಯದ ಕೆಳಸ್ತರದಲ್ಲಿರುವ ಜಾತಿಗಳೂ ವ್ಯಗ್ರಗೊಳ್ಳುತ್ತವೆ. ಇಂತಹ ಸನ್ನಿವೇಶ ಭಾರತದ ಇತಿಹಾಸದಲ್ಲಿ ಹಿಂದೆಂದೂ ಉದ್ಭವಿಸಿರಲಿಲ್ಲ. ಉದ್ಭವಿಸಿದ್ದರೂ ಅದಕ್ಕೆ ಈ ಮಟ್ಟಿನ ವ್ಯಾಪಕತೆ ದಕ್ಕಿರಲಿಲ್ಲ. ಹೀಗಾಗಿಯೇ ವ್ಯಗ್ರಗೊಳ್ಳುತ್ತಿರುವ ದೇಶ ಲೋಕಸಭಾ ಚುನಾವಣೆಗೂ ಮುನ್ನ ಆಂತರಿಕ ದಂಗೆಗಳಿಂದ ತಲ್ಲಣಿಸಬಹುದೇ ಎಂಬುದು ನನ್ನ ಆತಂಕ. ಈ ಕುರಿತು ತಳಮಟ್ಟದಿಂದ ಹಿಡಿದು, ಮೇಲ್ಮಟ್ಟದ ತನಕ ಎಲ್ಲಾ ಹಂತಗಳಲ್ಲಿ ಚರ್ಚೆ ನಡೆಯಬೇಕು. ದೇಶದ ಅಂತರಾಳದಿಂದ ಹೊರಹೊಮ್ಮುತ್ತಿರುವ ಈ ವ್ಯಗ್ರತೆ ಕಡಿಮೆಯಾಗಬೇಕು ಎಂಬುದು ನನ್ನ ಆಸೆ. ಹಾಗಾಗಲಿ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 05 October, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books