Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಡೈರೆಕ್ಟರ್ ಸ್ಪೆಷಲ್ ಕೆಟಗರಿಯ ಜನರನ್ನು ದೂರ ಇಡದಿದ್ದರೆ...

ನನ್ನ ಸುತ್ತ ಇರುವವರು, ನನ್ನ ಸುತ್ತ ಬರುವವರು, ನನ್ನ ಸುತ್ತ ಇರಬಯಸುವವರು ಸದಾಕಾಲ ನನ್ನ ಮಾತು ಕೇಳಬೇಕು ಎಂಬ ಧೋರಣೆ ಹೊಂದಿರುವವರನ್ನು, ಅದಕ್ಕಾಗಿ ಕಿರಿಕ್ಕು ಮಾಡುತ್ತಿರುವವರನ್ನು ನೀವು ನೋಡುತ್ತಲೇ ಇರುತ್ತೀರಿ. ಇವರೆಲ್ಲ ಡೈರೆಕ್ಟರ್ ಸ್ಪೆಷಲ್ ಕೆಟಗರಿಯ ಜನ. ಅರ್ಥಾತ್ ತಮ್ಮ ನಿರ್ದೇಶನದ ಪ್ರಕಾರವೇ ಎಲ್ಲರ ಬದುಕು ನಡೆಯಬೇಕು ಎಂದು ಬಯಸುವ ಜನ. ಒಂದು ಕುಟುಂಬವನ್ನು ಸಲಹುವ ಜವಾಬ್ದಾರಿ ಹೊತ್ತವರು ತಮ್ಮ ಇತಿಮಿತಿಯಲ್ಲಿ ಇಂತಹ ಕೆಲಸ ಮಾಡಿದರೆ ಅದು ತಪ್ಪೇನೂ ಅಲ್ಲ. ಆದರೆ ಬಹಳಷ್ಟು ಕುಟುಂಬಗಳಲ್ಲಿ ಇಂತಹ ಡೈರೆಕ್ಟರ್ ಸ್ಪೆಷಲ್ ಕೆಟಗರಿಯ ಜನ ಅಗತ್ಯಕ್ಕಿಂತ ಹೆಚ್ಚಾಗಿರುತ್ತಾರೆ. ಇಂತಹವರು ಕುಟುಂಬದಲ್ಲಿ ಮಾತ್ರವಲ್ಲ, ನಾವು ಕೆಲಸ ಮಾಡುವ ಜಾಗದಲ್ಲಿ, ಗೆಳೆಯರ ವರ್ತುಲದಲ್ಲಿ ಹೀಗೆ ಎಲ್ಲೆಂದರಲ್ಲಿ ಇಂತಹ ಜನ ಇರಬಹುದು.

ಹೊರ ಜಗತ್ತಿನಲ್ಲಿ ಇಂತಹ ಡೈರೆಕ್ಟರ್ ಸ್ಪೆಷಲ್ ಕೆಟಗರಿಯ ಅರ್ಥಾತ್ ನಾನು ಹೇಳಿದಂತೆ ಆಗಬೇಕು ಅನ್ನುವ ಜನರನ್ನು ನಾವು ದೂರ ತಳ್ಳಿಬಿಡುತ್ತೇವೆ. ಆದರೆ ಕುಟುಂಬಗಳಲ್ಲಿ ಇಂತಹವರೇ ಶಾಶ್ವತ ಸಮಸ್ಯೆಗಳಾಗಿ ಕಾಡುತ್ತಾರೆ. ಮದುವೆಯಾಗಿ ಮನೆಗೆ ಬಂದ ಹೆಣ್ಣು ಮಗಳಿಗೆ ಇಂತಹವರು ಅತ್ತೆಯ ರೂಪದಲ್ಲೋ, ಮಾವನ ರೂಪದಲ್ಲೋ, ಮೈದುನ, ನಾದಿನಿಯರ ರೂಪದಲ್ಲಿ ಕಾಡಬಹುದು. ಇಂತಹವರು ಒಬ್ಬರೋ, ಇಬ್ಬರೋ ಇದ್ದರೂ ಸಾಕು, ಕುಟುಂಬ ಹೈರಾಣಾಗಿ ಬಿಡುತ್ತದೆ. ಪರಿಣಾಮವಾಗಿ ಹೊರಗಿನಿಂದ ಬಂದ ಹೆಣ್ಣು ಮಗಳಿರಬಹುದು ಅಥವಾ ಮನೆಯ ಇತರ ಸದಸ್ಯರೇ ಇರಬಹುದು. ಇಂತಹವರ ಕಾಟಕ್ಕೆ ಸುಸ್ತಾಗಿ ಹೋಗುತ್ತಾರೆ. ತುಂಬ ಜನರ ಸಂಸಾರವನ್ನು ನೋಡಿ. ಗೃಹಲಕ್ಷ್ಮೀ ಅನ್ನಿಸಿಕೊಂಡವಳು ಎದ್ದರೂ ತಪ್ಪು, ಕೂತರೂ ತಪ್ಪು, ಒಟ್ಟಿನಲ್ಲಿ ತಾವು ಹೇಳಿದಂತೆ ಕೇಳದಿದ್ದರೆ ಏನು ಮಾಡಿದರೂ ತಪ್ಪು ಎನ್ನುವಂತೆ ನಡೆದುಕೊಳ್ಳುವ ಜನರ ಮಧ್ಯೆ ಏಕಾಂಗಿ ಭಾವದಿಂದ ನರಳುತ್ತಾಳೆ.

ಇದು ಕೇವಲ ಒಂದು ಮನೆಗೆ ಸೊಸೆಯಾಗಿ ಬಂದವಳಿಗೇ ಆಗಬೇಕೆಂದಿಲ್ಲ. ಯಾರಿಗೆ ಬೇಕಾದರೂ ಆಗಬಹುದಾದ ಕಿರಿಕಿರಿ. ನನ್ನ ಗೆಳೆಯನೊಬ್ಬನ ಕತೆಯನ್ನೇ ಹೇಳುತ್ತೇನೆ ಕೇಳಿ. ಅಂದ ಹಾಗೆ ನನ್ನ ಈ ಗೆಳೆಯನ ಮದುವೆ ಆಗಿದ್ದು ಇಪ್ಪತ್ತು ವರ್ಷಗಳ ಹಿಂದೆ. ಆತನನ್ನು ಮದುವೆಯಾದ ಹೆಣ್ಣು ಮಗಳು ವಿದ್ಯಾವಂತೆ. ಡಬಲ್ ಡಿಗ್ರಿ ಹೋಲ್ಡರು. ಆದರೆ ಓದಿಕೊಂಡವಳು ಎಂಬ ಅಹಂಕಾರವಾಗಲೀ, ಮನೆ ಕೆಲಸ ಮಾಡಬೇಕು ಎಂಬ ವಿಷಯದಲ್ಲಿ ಸೋಮಾರಿತನವನ್ನಾಗಲೀ ತೋರಿಸಿದ ಹೆಣ್ಣು ಮಗಳಲ್ಲ. ನನ್ನ ಗೆಳೆಯ ಸ್ವಭಾವತಃ ಒಳ್ಳೆಯವನು. ಹೀಗಾಗಿ ಆತನಿಗೆ ತಕ್ಕ ಜೋಡಿ ಸಿಕ್ಕಿತು ಅಂತ ನಾವು ಕೆಲ ಗೆಳೆಯರು ಮಾತನಾಡಿಕೊಂಡು ಸಂತಸಪಟ್ಟಿದ್ದೆವು. ಆದರೆ ವರ್ಷ ಕಳೆಯುವಷ್ಟರಲ್ಲಿ ಅವನ ಮನೆ ಥೇಟು ಕುರುಕ್ಷೇತ್ರ. ಅರೇ, ಗಂಡನೂ ಒಳ್ಳೆಯ ಮನುಷ್ಯ. ಹೆಂಡತಿಯೂ ಒಳ್ಳೆಯ ಸ್ವಭಾವದವಳು. ಇಂತಹವರ ಮಧ್ಯೆ ಬಿಕ್ಕಟ್ಟು ಬಂದಿದೆ ಅಂದರೆ ಏನರ್ಥ? ಈ ಪ್ರಶ್ನೆಯನ್ನು ಒಂದು ದಿನ ನಾನೇ ನನ್ನ ಗೆಳೆಯನಿಗೆ ಕೇಳಿದೆ. ಅದಕ್ಕಾತ ಅಯ್ಯೋ, ಸ್ವಲ್ಪವೂ ಹೊಂದಾಣಿಕೆ ಮಾಡಿಕೊಂಡು ಹೋಗುವ ಸ್ವಭಾವ ಇಲ್ಲ ಗುರೂ. ಮನೆ ಅಂದಮೇಲೆ ಒಂದು ಮಾತು ಬರುತ್ತೆ, ಹೋಗುತ್ತೆ. ಹಾಗಂತ ತಕರಾರು ತೆಗೆಯುತ್ತಾ ಕೂತುಬಿಟ್ಟರೆ ಹೇಗೆ? ಇದೇ ಸಮಸ್ಯೆಯ ಮೂಲ ಅಂದುಬಿಟ್ಟ. ಆತ ಹೇಳಿದ್ದೂ ನಿಜ ಅನ್ನಿಸಿತು.

ಆದರೆ ಒಂದು ಕಡೆಯಿಂದ ಕಾರಣ ಹುಡುಕುತ್ತಾ ಹೋದರೆ ಈ ಎಲ್ಲ ಸಮಸ್ಯೆಗಳಿಗೆ ಕುಟುಂಬದಲ್ಲಿರುವ ಡೈರೆಕ್ಟರ್ ಸ್ಪೆಷಲ್ ಕೆಟಗರಿಯ ಸದಸ್ಯರೇ ಮೂಲ ಕಾರಣ ಎಂಬುದು ಮನದಟ್ಟಾಗಿ ಹೋಯಿತು. ಅಂದಹಾಗೆ ನನ್ನ ಗೆಳೆಯನಿಗೆ ನಾಲ್ಕು ಜನ ಅಕ್ಕ-ತಂಗಿಯರು. ಈ ಪೈಕಿ ಮೂರು ಜನ ಮನೆಯಲ್ಲೇ ಇದ್ದಾರೆ. ಅದರಲ್ಲಿ ಇಬ್ಬರು ವಯಸ್ಸಿನಲ್ಲಿ ನನ್ನ ಗೆಳೆಯನ ಹೆಂಡತಿಗಿಂತ ಚಿಕ್ಕವರು. ಆದರೆ ಬಲೇ ಪರಾಕ್ರಮಶಾಲಿಗಳು. ಅಣ್ಣನ ಹೆಂಡತಿಯನ್ನು ಬಾಯಿ ತುಂಬ ಅತ್ತಿಗೆ ಅಂತ ಕರೆಯುವುದು ಅವರಿಗೆ ಅಗೌರವ. ಹೀಗಾಗಿ ಅತ್ತಿಗೆ ಅಂತ ಕರೆಯದೇ ಹೆಸರು ಹಿಡಿದೇ ಕರೆಯುತ್ತಿದ್ದರು. ಮನೆಗೆ ಕಾಲಿಟ್ಟ ದಿನವೇ ಅವರಿಂದ ಏಕವಚನದ ಪ್ರಯೋಗ ಶುರು. ಕಾಲಕ್ರಮೇಣ ಮನೆಗೆ ಸೊಸೆಯಾಗಿ ಬಂದವಳು ಅಂದಮೇಲೆ ಇಡೀ ಮನೆಯ ಕೆಲಸ ಅವಳ ಜವಾಬ್ದಾರಿ. ಅವಳೇ ಎಲ್ಲವನ್ನೂ ಮಾಡಬೇಕು ಎಂಬ ಧೋರಣೆ.

ಮೊದಲೇ ನನ್ನ ಗೆಳೆಯನದು ತುಂಬು ಕುಟುಂಬ. ತಂದೆ-ತಾಯಿ, ತಮ್ಮ, ಅಕ್ಕ-ತಂಗಿ ಅಂತ ಮನೆಯಲ್ಲಿ ಮೊದಲಿದ್ದವರು ಏಳು ಮಂದಿ. ಹೆಂಡತಿ ಬಂದ ಮೇಲೆ ಲೆಕ್ಕ ಎಂಟಕ್ಕೇರಿತು. ಈ ಎಲ್ಲರಿಗೂ ಅಡುಗೆ ಮಾಡುವ ಸಂಪೂರ್ಣ ಜವಾಬ್ದಾರಿ ಮಾತ್ರ ಈತನ ಹೆಂಡತಿಯ ಹೆಗಲ ಮೇಲೇ ಬಿತ್ತು. ಮನೆಯ ಹೆಣ್ಣು ಮಕ್ಕಳು ಅನ್ನಿಸಿಕೊಂಡವರು ಒಬ್ಬರಿಗೊಬ್ಬರು ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡಿದರೆ ಅಡುಗೆಯ ಕೆಲಸ ಸಲೀಸಾಗುತ್ತಿತ್ತು. ಆದರೆ ಮನೆಗೆ ಬಂದ ಸೊಸೆಯಲ್ಲವೇ? ಕೆಲಸ ಮಾಡಲಿ ಬಿಡು ಎಂಬ ಧೋರಣೆ ಎಲ್ಲ ಹೆಣ್ಣು ಮಕ್ಕಳಲ್ಲೂ ಇತ್ತು. ಹೀಗಾಗಿ ಬಂದ ಶುರುವಿನಲ್ಲಿ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದ ನನ್ನ ಗೆಳೆಯನ ಪತ್ನಿ ಕ್ರಮೇಣ ಗುರುಗುಟ್ಟತೊಡಗಿದಳು. ಅದರಲ್ಲಿ ಅವಳ ತಪ್ಪೇನೂ ಇರಲಿಲ್ಲ. ಕಣ್ಣ ಮುಂದೆ ಎಲ್ಲವನ್ನೂ ತಾನು ಮಾಡುತ್ತಿದ್ದರೆ ಉಳಿದವರು ಕೆಲಸವನ್ನೇ ಮಾಡದೆ ಕೂತರೆ ಹೇಗೆ ಅನ್ನುವುದು ಅವಳ ನಸನಸೆ.

ಹಾಗಂತ ಒಂದು ದಿನ ಗಂಡನ ಬಳಿ ಹೇಳಿದಳು. ಆತ ಮರುದಿನ ಎಲ್ಲರೆದುರು, ಮನೆ ಕೆಲಸ ಅವಳೊಬ್ಬಳೇ ಮಾಡಬೇಕಾ? ಎಲ್ಲರೂ ನಿಮ್ಮ ನಿಮ್ಮ ಕೈಲಾದಷ್ಟು ಕೆಲಸ ಮಾಡಿ. ಆಕೆಗೂ ಅನುಕೂಲವಾಗುತ್ತದೆ ಅಂದ. ಆತ ಅಷ್ಟು ಹೇಳಿದ್ದೇ ತಡ ಶುರುವಾಯಿತು ರಂಪ. ಅರೇಸ್ಕೀ, ಬಂದು ಕೆಲವು ತಿಂಗಳೂ ಆಗಿಲ್ಲ, ಆಗಲೇ ಗಂಡನನ್ನು ಹೇಗೆ ಕಂಟ್ರೋಲಿಗೆ ತಗಂಡಿದಾಳೆ ನೋಡ್ರೀ ಅಂತ ಬಹಿರಂಗವಾಗಿಯೇ ಹೇಳತೊಡಗಿದರು. ಅಷ್ಟೇ ಅಲ್ಲ, ಇದು ನನ್ನ ಗೆಳೆಯನ ಗಂಡಸುತನದ ಸತ್ವಪರೀಕ್ಷೆಯಾಗಿಯೂ ಪರಿವರ್ತನೆಯಾಯಿತು. ಇವನು ಗಂಡಸಾಗಿದ್ದರೆ ತನ್ನ ಹೆಂಡತೀನ ಕಂಟ್ರೋಲಿನಲ್ಲಿಟ್ಟುಕೊಳ್ಳುತ್ತಿದ್ದ. ಆದರೆ ಇವನು ಹೆಂಡತಿ ಹೇಳಿದಂತೆ ಕುಣಿಯುತ್ತಿರುವುದನ್ನು ನೋಡಿದರೆ ಯಾಕೋ ಅನುಮಾನ ಎಂಬ ಧಾಟಿಯಲ್ಲಿ ಮಾತನಾಡತೊಡಗಿದರು. ಕಾಲಕ್ರಮೇಣ ಪರಿಸ್ಥಿತಿ ಯಾವ ತಿರುವು ಪಡೆಯಿತೆಂದರೆ ನನ್ನ ಗೆಳೆಯನೂ ತಮ್ಮ ಸಹೋದರಿಯರ ಮನಸ್ಥಿತಿಗೇ ತಲುಪಿಬಿಟ್ಟ. ಅರೇ ಹೌದಲ್ಲ, ಮನೆಗೆ ಸೊಸೆಯಾಗಿ ಬಂದವಳು. ಎಲ್ಲರ ಜತೆಗೂ ಕೊಂಚ ಮಟ್ಟಿಗೆ ಹೊಂದಿಕೊಂಡು ಹೋಗಬೇಕಪ್ಪ. ಮನೆ ಅಂದಮೇಲೆ ಸಣ್ಣ ಪುಟ್ಟ ಕಿರಿಕಿರಿ ಇದ್ದೇ ಇರುತ್ತೆ. ಏನು ಮಾಡ್ಲಿಕ್ಕಾಗುತ್ತೆ ಎಂಬ ಮಟ್ಟಕ್ಕೆ ತಲುಪಿದ.

ಗಂಡನೇ ಈ ರೀತಿ ಬದಲಾದ ಮೇಲೆ ಹೆಂಡತಿ ಏನು ಮಾಡಬೇಕು? ಶುರು ಶುರುವಿನಲ್ಲಿ ಸಣ್ಣ ಲೆವೆಲ್ಲಿನಲ್ಲಿ ಪ್ರತಿಭಟಿಸುತ್ತಿದ್ದವಳು ತದನಂತರ ದೊಡ್ಡ ಮಟ್ಟದಲ್ಲೇ ಜಗಳ ಮಾಡುತ್ತಿದ್ದಳು. ಆದರೆ ಗಂಡನೂ ಸೇರಿದಂತೆ ಮನೆಯ ಎಲ್ಲರದೂ ಒಂದು ಪಾರ್ಟಿಯಾದರೆ, ಈಕೆಯದು ಮಾತ್ರ ಸ್ವತಂತ್ರ ಪಾರ್ಟಿ. ಇದಾದ ನಂತರದ ದಿನಗಳಲ್ಲಿ ಎಲ್ಲ ಕಿರಿಕಿರಿಯ ನಡುವೆಯೂ ನನ್ನ ಗೆಳೆಯ ಹೆಣ್ಣು ಮಗುವಿನ ತಂದೆಯಾದ. ಅದರಷ್ಟೇ ಮುಖ್ಯವಾಗಿ ಅವನ ತಂಗಿಯರ ಪೈಕಿ ಇಬ್ಬರ ಮದುವೆ ಆಯಿತು. ಆದರೆ ಸಮಸ್ಯೆ ಅಲ್ಲಿಗೆ ಮುಗಿಯಲಿಲ್ಲ. ಗಂಡನ ಮನೆಗೆ ಹೋದ ಇಬ್ಬರು ಪದೇಪದೇ ತಮ್ಮ-ತಮ್ಮ ಗಂಡಂದಿರ ಸಮೇತ ತವರು ಮನೆಗೆ ಬಂದು ಝಂಡಾ ಊರತೊಡಗಿದರು. ಅಲ್ಲಿಗೆ ಎಡ ಮಗ್ಗುಲಲ್ಲಿ ಹೋಗಿದ್ದು ಬಲ ಮಗ್ಗುಲಲ್ಲಿ ವಾಪಸು ಬಂದಂತಾಯಿತು. ಆ ಹೆಣ್ಣು ಮಕ್ಕಳಿಗೋ ಇಡೀ ತವರು ಮನೆಯ ಮೇಲೆ ತನ್ನ ಅಧಿಕಾರ ಚಲಾಯಿಸುವ ವಾಂಛೆ. ಸಾಲದೆಂಬಂತೆ ಅವರ ಗಂಡಂದಿರಿಗೂ ಅಳಿಯತನ ಮಾಡಿಸಿಕೊಳ್ಳುವ ರೋಗ. ಒಟ್ಟಿನಲ್ಲಿ ನನ್ನ ಗೆಳೆಯನ ಹೆಂಡತಿಗೆ ಸಂಸಾರ ಎಂಬುದು ಥೇಟು ನರಕವಾಗಿ ಹೋಯಿತು.


ಆದರೆ ನನ್ನ ಗೆಳೆಯನಿಗೆ ತನ್ನ ಕುಟುಂಬದವರ ಡೈರೆಕ್ಟರ್ ಸ್ಪೆಷಲ್ ಗುಣ ಅಷ್ಟೇನೂ ದೊಡ್ಡದಾಗಿ ಕಾಣಲಿಲ್ಲ. ಬದಲಿಗೆ ಸಿಕ್ಕ ಸಿಕ್ಕಾಗಲೆಲ್ಲ ನಮ್ಮ ಬಳಿ ಹೆಂಡತಿಯ ಬಗ್ಗೆಯೇ ಕಂಪ್ಲೇಂಟು ಹೇಳತೊಡಗಿದ. ಇಡೀ ಮನೆಯೇ ಒಂದು. ಇವಳೊಬ್ಬಳೇ ಒಂದು ಎಂದರೆ ಇವಳಲ್ಲೇ ಏನೋ ಡಿಫೆಕ್ಟು ಇರಬೇಕಲ್ವಾ ಅನ್ನತೊಡಗಿದ. ಇದ್ಯಾಕೋ ಬಗೆಹರಿಯುವ ಕೇಸಲ್ಲ ಅನ್ನಿಸಿತು. ಈ ಮಧ್ಯೆಯೇ ಒಂದು ದಿನ ಇದ್ದಕ್ಕಿದ್ದಂತೆ ನನ್ನ ಗೆಳೆಯನ ಹೆಂಡತಿ ತನ್ನ ಡಿಗ್ರಿ ಸರ್ಟಿಫಿಕೇಟುಗಳನ್ನು ಮುಂದಿಟ್ಟುಕೊಂಡು ಕೆಲಸಕ್ಕೆ ಸೇರಿಬಿಟ್ಟಳು. ಯಥಾಪ್ರಕಾರ ಮನೆಯಲ್ಲಿ ವರಾತ ಶುರು. ಆಕೆ ಯಾರಿಗಾಗಿ ದುಡಿಯಬೇಕು? ಅದಕ್ಕಿಂತ ಮುಖ್ಯವಾಗಿ ಆಕೆ ದುಡಿಯಲು ಹೋದರೆ ಈ ಮನೆಯನ್ನು ನಡೆಸುವವರು ಯಾರು? ಎಂಬ ಮಂತ್ರಪಠಣ. ಆದರೆ ಇಂತಹ ಯಾವ ಮಾತುಗಳಿಗೂ ಜಪ್ಪಯ್ಯ ಅನ್ನದ ಆಕೆ ತನ್ನ ಪಾಡಿಗೆ ಕೆಲಸಕ್ಕೆ ಹೋಗಲು ಶುರುವಿಟ್ಟುಕೊಂಡಿದ್ದಷ್ಟೇ ಅಲ್ಲ. ನಾಲ್ಕೇ ತಿಂಗಳಲ್ಲಿ ಒಂದು ಬಾಡಿಗೆ ಮನೆ ಮಾಡಿಕೊಂಡು ತನ್ನ ಗಂಡನಿಗೇ ನೇರವಾಗಿ ಹೇಳಿಬಿಟ್ಟಳು: ನಿನ್ನ ಮನೆಯಲ್ಲಿ ಜೀತ ಮಾಡಲು ನಾನು ಹುಟ್ಟಿಲ್ಲ, ಸಂಸಾರ ಬೇಕೆಂದರೆ ಈ ಮನೆಗೆ ಬಂದಿರು. ಇಲ್ಲದಿದ್ದರೆ ನಿನ್ನ ಕುಟುಂಬದವರ ಜತೆಗೇ ಇದ್ದುಬಿಡು.

ಆಕೆ ಕೊಟ್ಟ ಈ ಹೊಡೆತ ಯಾವ ಫೋರ್ಸಿನಲ್ಲಿತ್ತು ಎಂದರೆ ನನ್ನ ಗೆಳೆಯ ಕಂಗಾಲಾಗಿ ಹೋದ. ಆ ಸಂದರ್ಭದಲ್ಲಿ ಆತನ ಎದುರಿಗಿದ್ದಿದ್ದು ಎರಡೇ ದಾರಿ. ಒಂದೋ ಡೈವೋರ್ಸು ಕೊಡುವುದು, ಇಲ್ಲವೇ ಆಕೆಯ ಜತೆ ಹೋಗಿ ಬಾಳುವೆ ಮಾಡುವುದು. ಆದರೆ ಡೈರೆಕ್ಟರ್ ಸ್ಪೆಷಲ್ ಕೇಸುಗಳು ಅವರ ಸಂಸಾರ ಒಂದಾಗಲು ಬಿಡಲೇ ಇಲ್ಲ. ಇದಾಗಿ ಹಲವು ವರ್ಷಗಳೇ ಕಳೆದು ಹೋಗಿವೆ. ನನ್ನ ಗೆಳೆಯನ ಹೆಂಡತಿ ತನ್ನ ಕಾಲ ಮೇಲೆ ತಾನು ನಿಂತಿರುವುದಲ್ಲದೇ ತನ್ನ ಮಗಳನ್ನು ಮೆಡಿಕಲ್ ಕಾಲೇಜಿಗೆ ಸೇರಿಸಿದ್ದಾಳೆ. ಡೈರೆಕ್ಟರ್ ಸ್ಪೆಷಲ್ ಕೇಸುಗಳ ಮಾತು ಕೇಳಿ ಹಟ ಮಾಡಿದ ನನ್ನ ಗೆಳೆಯ ಇವತ್ತು ಏಕಾಂಗಿಯಾಗಿ ಅನ್ನ ಬೇಯಿಸಿಕೊಳ್ಳುವ ಸ್ಥಿತಿಗೆ ತಲುಪಿದ್ದಾನೆ. ಇಂತಹ ಡೈರೆಕ್ಟರ್ ಸ್ಪೆಷಲ್ ಕೇಸುಗಳು ನಿಮ್ಮ ಮನೆಯಲ್ಲೂ ಇರಬಹುದು. ಯಾವ ರೂಪದಲ್ಲಾದರೂ ಇರಬಹುದು. ಅಂತಹವರು ಇದ್ದಾರೆ ಎಂದರೆ ಮೊದಲು ಅಂತಹವರನ್ನು ರೋಗಿಗಳು ಅಂತ ನಿಮ್ಮಲ್ಲೇ ನೀವು ತೀರ್ಮಾನ ಮಾಡಿಕೊಳ್ಳಿ.

ಅಂತಹವರ ಮಾತನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಕೇಳಿಸಿಕೊಳ್ಳಿ. ಅದಕ್ಕಿಂತ ಮುಖ್ಯವಾಗಿ, ನಿಮ್ಮ ಮಾತಿಗೆ ಜಾಗ ಕೊಡಲು ನನ್ನ ಕಿವಿಯೇನೂ ಸಿಕ್ಸ್‌ಟಿ ಫಾರ್ಟಿ ಸೈಟಲ್ಲ ಅಂತ ಸ್ಪಷ್ಟವಾಗಿ ಹೇಳಿ. ಇಲ್ಲದಿದ್ದರೆ ನಿಮ್ಮ ಬದುಕಿನ ಸುತ್ತ ಇಂತಹವರು ಹಾವುಗಳಂತೆ ಸುತ್ತಿಕೊಳ್ಳುವುದಷ್ಟೇ ಅಲ್ಲ, ಕಚ್ಚಿ ಕಚ್ಚಿ ತಮ್ಮ ಮನಸ್ಸಿನಲ್ಲಿರುವ ವಿಷವನ್ನೆಲ್ಲ ನಿಮ್ಮ ಮನಸ್ಸಿಗೆ ಸೇರಿಸಿ ಜೀವನವೇ ನರಕವಾಗುವಂತೆ ಮಾಡುತ್ತಾರೆ. ಅಂತಹ ನರಕಕ್ಕೆ ಬೀಳುವ ಸ್ಥಿತಿ ನಿಮಗೆ ಬಾರದಿರಲಿ.

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 01 October, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books