Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅನಂತಮೂರ್ತಿಯವರ ಮಾತಿಗೆ ಆ ಪರಿ ಪ್ರತಿಕ್ರಿಯಿಸಬೇಕಾ?

ನರೇಂದ್ರ ಮೋದಿ ಪ್ರಧಾನಿಯಾದರೆ ಈ ದೇಶದಲ್ಲಿ ಬದುಕಲು ನಾನು ಇಚ್ಛಿಸುವುದಿಲ್ಲ. ಯಾಕೆಂದರೆ ಆತ ಫ್ಯಾಸಿಸ್ಟ್ ಅಂತ ಜ್ಞಾನಪೀಠಿ ಅನಂತಮೂರ್ತಿ ಹೇಳಿದ್ದೇ ತಡ. ಪ್ರಳಯವೇ ಆಗಿ ಹೋಯಿತೇನೋ ಎಂಬಂತೆ ದಂಡುಗಟ್ಟಲೆ ಜನ ಅವರ ಮೇಲೆ ಮುಗಿಬಿದ್ದಿದ್ದಾರೆ. ಅರೇ ಇಸ್ಕೀ. ಅನಂತಮೂರ್ತಿ ಹೇಳಬಾರದಂತಹದ್ದೇನನ್ನು ಹೇಳಿದರು. ನರೇಂದ್ರಮೋದಿ ಈ ದೇಶದ ಪ್ರಧಾನಿಯಾಗುವುದನ್ನು ನೋಡಲು ನಾನು ಇಚ್ಛಿಸುವುದಿಲ್ಲ ಎಂದರು. ಅದರಲ್ಲೇನು ತಪ್ಪಿದೆ. 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಪ್ರಧಾನಿ ಆಗಬೇಕಿತ್ತು. ಆಗ ಬಿಜೆಪಿಯ ಸುಷ್ಮಾ ಸ್ವರಾಜ್ ಯಾವ ರೀತಿ ವರ್ತಿಸಿದರು? ಸೋನಿಯಾ ಏನಾದರೂ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಳ್ಳುತ್ತೇನೆ. ಅದು ಮಾಡುತ್ತೇನೆ, ಇದು ಮಾಡುತ್ತೇನೆ ಅಂತ ಒಬ್ಬ ಭಾರತೀಯ ನಾರಿಗೆ ಶೋಭೆ ತರದಂತಹ ಮಾತುಗಳನ್ನೆಲ್ಲ ಆಡಿದರು. ಅನಂತಮೂರ್ತಿ ಆ ಥರ ಎಲ್ಲಾದರೂ ಮಾತನಾಡಿದರಾ? ತಲೆ ಬೋಳಿಸಿಕೊಳ್ಳುತ್ತೇನೆ, ಗಡ್ಡ ಬೋಳಿಸಿಕೊಳ್ಳುತ್ತೇನೆ ಎಂದರಾ? ಮೋದಿ ಪ್ರಧಾನಿಯಾಗುವುದನ್ನು ನೋಡಲು ನಾನು ಇಚ್ಛಿಸುವುದಿಲ್ಲ. ಆತ ಪ್ರಧಾನಿಯಾದರೆ ಈ ದೇಶದಲ್ಲಿ ನಾನು ಬದುಕಲು ಇಷ್ಟಪಡುವುದಿಲ್ಲ ಎಂದು ಹೇಳಿದರು. ಹೇಳಲಿ ಬಿಡಿ. ಮೋದಿಯೇ ಪ್ರಧಾನಿಯಾಗಬೇಕು ಅನ್ನುವ ಹಪಹಪಿ ಯಾರಿಗಿದೆಯೋ ಅವರು ಇದಕ್ಕಿಂತ ಜೋರಾಗಿ ಅರಚಿಕೊಂಡು ಹೇಳಲಿ. ಜೋರ್ ಸೇ ಬೋಲೋ ಪ್ಯಾರ್ ಸೇ ಬೋಲೋ ನರೇಂದ್ರ ಮೋದಿ ಜಿಂದಾಬಾದ್ ಅಂತ ಕೂಗಿಕೊಳ್ಳುತ್ತಾ ಉರುಳು ಸೇವೆ ಮಾಡಿಕೊಳ್ಳಲಿ. ಬೇಡ ಅಂದವರು ಯಾರು?

ಒಂದು ವ್ಯವಸ್ಥೆಯಲ್ಲಿ ಒಬ್ಬರನ್ನು ಇಂತಿಂತಹ ಕಾರಣಕ್ಕೆ ನಾನು ಇಷ್ಟಪಡುವುದಿಲ್ಲ ಅಂತ ಹೇಳುವುದಕ್ಕೆ, ಇಂತಹ ಕಾರಣಗಳಿಗಾಗಿ ನಾನು ಇಷ್ಟಪಡುತ್ತೇನೆ ಅಂತ ಹೇಳುವುದಕ್ಕೆ ಯಾರದಾದರೂ ಪರ್ಮಿಷನ್ನು ಬೇಕಾ? ರಾಹುಲ್ ಗಾಂಧಿಯನ್ನು ಬಚ್ಚಾ ಅಂತ ಇದೇ ನರೇಂದ್ರ ಮೋದಿ ಕರೆಯುತ್ತಾರೆ. ಅದು ರಾಜಕೀಯ ಕಚ್ಚಾಟ. ಹಾಗಂತ ಹಾದಿ ಬೀದಿಯಲ್ಲಿ ಹೋಗುವವರೆಲ್ಲ ರಾಹುಲ್ ಗಾಂಧಿ ಬಚ್ಚಾ, ಬಚ್ಚಾ ಅಂತ ಹೇಳುತ್ತಾ ಹೋದರೆ ಅಸಹ್ಯ ಹುಟ್ಟುವುದಿಲ್ಲವೇ. ಸೀನಿಯಾರಿಟಿಯೇ ಮುಖ್ಯವಾದರೆ ನಲವತ್ತು ವರ್ಷಗಳ ಕಾಲ ಬಿಜೆಪಿಯನ್ನು ಕಟ್ಟಲು ದುಡಿದ, ಇವತ್ತಿಗೂ ಸಕ್ರಿಯರಾಗಿರುವ ಲಾಲ್‌ಕೃಷ್ಣ ಅಡ್ವಾಣಿ ಆ ಪಕ್ಷದ ಪ್ರಧಾನಿ ಕ್ಯಾಂಡಿಡೇಟ್ ಆಗಬೇಕಿತ್ತು. ಆದರೆ ಜಾಗತೀಕರಣದ ಲಾಭವನ್ನು ವ್ಯಾಪಕವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಈ ದೇಶದ ಬಹುತೇಕ ಕೈಗಾರಿಕೋದ್ಯಮಿಗಳು, ಬಂಡವಾಳಶಾಹಿಗಳು ಇದಕ್ಕೆಲ್ಲ ಈ ನರೇಂದ್ರಮೋದಿಯೇ ಸರಿ ಅಂತ ಭಾವಿಸಿದ್ದಾರೆ. ಅವರಿಗೆ ಹಾಕುವ ಬಂಡವಾಳಕ್ಕೆ ನೂರು ಪಟ್ಟು, ಸಾವಿರ ಪಟ್ಟು ಬಂಡವಾಳ ದೋಚಿಕೊಳ್ಳಲು ಅಗತ್ಯವಾದ ವಾತಾವರಣ ಸೃಷ್ಟಿಯಾಗಬೇಕು. ಇಂತಹ ವಾತಾವರಣವನ್ನು ನರೇಂದ್ರ ಮೋದಿ ಗುಜರಾತ್‌ನಲ್ಲಿ ಸೃಷ್ಟಿಸಿದ್ದಾರೆ. ಇನ್ನೇಕೆ ತಡ, ಅವರನ್ನು ಪ್ರಧಾನಿ ಹುದ್ದೆಯ ಮೇಲೆ ಕೂರಿಸಲೇಬೇಕು ಅಂತ ತೀರ್ಮಾನಿಸಿದ್ದಾರೆ.

ಇವತ್ತು ಜನಾಭಿಪ್ರಾಯ ರೂಪಿಸುವ ಬಹುತೇಕ ಮಾಧ್ಯಮಗಳು ಈ ಬಂಡವಾಳಶಾಹಿಗಳ ಹಿಡಿತದಲ್ಲೇ ಇವೆ. ಹೀಗಾಗಿ ಯಾರೇ ನರೇಂದ್ರ ಮೋದಿಯ ವಿರುದ್ಧ ಮಾತನಾಡಿದರೂ ಒಂದು ದೊಡ್ಡ ಸಮೂಹವೇ ಅವರ ವಿರುದ್ಧ ಮುಗಿಬೀಳುತ್ತದೆ. ಅದಾಗಲೇ ನಾಶವಾಗುತ್ತಿರುವ ದೇಶವನ್ನು ಕಾಪಾಡಲು ಶ್ರೀಕೃಷ್ಣನ ಅಪರಾವತಾರದಂತೆ ಮೋದಿ ಎದ್ದು ಬಂದಿದ್ದಾರೆ. ಅವರ ವಿರುದ್ಧ ಮಾತನಾಡಿದರೆ ಜೋಕೇ ಅನ್ನುವ ಧಾಟಿಯಲ್ಲಿ ಎಗರಾಡುತ್ತದೆ. ನರೇಂದ್ರಮೋದಿ ತಮ್ಮ ರಾಜ್ಯದಲ್ಲಿ ಅಭಿವೃದ್ಧಿಯನ್ನು ಸಾಧಿಸಿದ್ದಾರೆ. ಆದರೆ ಈ ಅಭಿವೃದ್ಧಿಗಾಗಿ ಅವರು ಎಷ್ಟು ಮಂದಿ ರೈತರನ್ನು ಬಲಿ ಕೊಟ್ಟಿದ್ದಾರೆ ಅನ್ನುವ ಕುರಿತು ಯಾರಾದರೂ ಮಾತನಾಡುತ್ತಿದ್ದಾರಾ? ಮೋದಿಯನ್ನು ಪ್ರಧಾನಿ ಹುದ್ದೆಗೇರಿಸಲು ಅಗತ್ಯವಾದ ರಣತಂತ್ರವನ್ನು ರೂಪಿಸುತ್ತಿರುವವರು ಈ ದೇಶದಲ್ಲಿ ಯಾವ್ಯಾವ ರೀತಿಯ ದಂಗೆಗಳನ್ನು ಎಬ್ಬಿಸಲು ಹೊರಟಿದ್ದಾರೆ ಅನ್ನುವ ಕುರಿತು ಮಾತನಾಡುತ್ತಿದ್ದಾರಾ? ಇಲ್ಲವಲ್ಲ. ಹಾಗಂತ ಮೋದಿ ಅವರಲ್ಲಿರುವ ಪಾಸಿಟಿವ್ ಅಂಶಗಳನ್ನು ನೋಡದೆ ಮಾತನಾಡುವುದು ಸಹ ತಪ್ಪು. ಆದರೆ ಯಾವುದು ತಪ್ಪು? ಯಾವುದು ಸರಿ? ಅನ್ನುವುದನ್ನು ಜನ ತೀರ್ಮಾನಿಸಲಿ ಬಿಡಿ. ಅನಂತಮೂರ್ತಿ ಒಂದು ಟೀಕೆ ಮಾಡಿದರು ಅಂದ ಮಾತ್ರಕ್ಕೆ ಪ್ರಳಯವೇ ಆಯಿತೇನೋ ಅನ್ನುವಂತೆ ವರ್ತಿಸುವುದೇಕೆ? ಅಷ್ಟಕ್ಕೂ ಹೀಗೆ ಹೇಳಿರುವ ಅನಂತಮೂರ್ತಿ ಅವರೇನಾದರೂ ರಾಹುಲ್ ಗಾಂಧಿಯ ಪರ ಬ್ಯಾಟಿಂಗ್ ಮಾಡುತ್ತಿದ್ದಾರಾ? ಇಲ್ಲವಲ್ಲ.

ಅಂದ ಹಾಗೆ ಇವತ್ತಿನ ಪರಿಸ್ಥಿತಿಯಲ್ಲಿ ಮೋದಿ ಯಾಕೆ ಇವತ್ತು ಡಿಫರೆಂಟ್ ಆಗಿ ಕಾಣುತ್ತಿದ್ದಾರೆ ಎಂದರೆ ಮನಮೋಹನ್‌ಸಿಂಗ್ ನೇತೃತ್ವದ ಸರ್ಕಾರ ಹಗರಣಗಳ ಮೇಲೆ ಹಗರಣಗಳನ್ನು ಮಾಡಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿ ಜನಸಾಮಾನ್ಯರು ತತ್ತರಿಸುವಂತೆ ಆಗಿದೆ. ಹೀಗಾಗಿ ಮೋದಿ ಪ್ರಧಾನಿಯಾದ ಕೂಡಲೇ ಪವಾಡ ನಡೆಯುತ್ತದೆ ಎಂಬಂತಹ ಭಾವನೆಯನ್ನು ಹುಟ್ಟು ಹಾಕಲಾಗುತ್ತಿದೆ. ಹಾಗಂತ ಮೋದಿ ಬಂದ ಕೂಡಲೇ ಪೆಟ್ರೋಲು, ಡೀಸೆಲು ರೇಟನ್ನು ಕಡಿಮೆ ಮಾಡಿ ಬಿಡುತ್ತಾರಾ? ಅದನ್ನು ತೀರ್ಮಾನಿಸುವುದು ತೈಲ ಪೂರೈಕೆ ಮಾಡುವ ರಾಷ್ಟ್ರಗಳು. ಒಂದು ಬ್ಯಾರಲ್ ತೈಲಕ್ಕೆ ಇಷ್ಟು ರೇಟು ಅಂತ ಅವು ತೀರ್ಮಾನಿಸಿದರೆ ಯುಪಿಎ ಸರ್ಕಾರ ಇದ್ದರೂ ಅಷ್ಟೇ. ಎನ್‌ಡಿಎ ಸರ್ಕಾರ ಇದ್ದರೂ ಅಷ್ಟೇ. ಹೋಗಲಿ, ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿದ್ದಾಗ ಹಗರಣಗಳು ನಡೆಯಲಿಲ್ಲವೇ? ನಾಳೆ ಮೋದಿ ನೇತೃತ್ವದಲ್ಲಿ ಅದೇ ಎನ್‌ಡಿಎ ಮೈತ್ರಿಕೂಟ ಬಂದು ಅಧಿಕಾರದ ಗದ್ದುಗೆಯ ಮೇಲೆ ಕುಳಿತರೆ ಈ ದೇಶ ಹಗರಣ ರಹಿತ ಸರ್ಕಾರವನ್ನು ನೋಡಲು ಸಾಧ್ಯವೇ? ನೋ ಛಾನ್ಸ್.

ಇವತ್ತು ನರೇಂದ್ರ ಮೋದಿಯ ಪರ ಹುಯಿಲೆಬ್ಬಿಸುವ ಕೆಲಸ ನಡೆಯುತ್ತಿದೆಯಲ್ಲ, ಅಂತಹ ಕೆಲಸದ ಮೇಲೆ ಅಗಾಧ ಪ್ರಮಾಣದ ಬಂಡವಾಳ ಹೂಡಿಕೆಯಾಗುತ್ತಿಲ್ಲವೇ? ಹೀಗೆ ಬಂಡವಾಳ ಹೂಡಿಕೆಯಾಗದೇ ಯಾಕೆ ಇಷ್ಟೊಂದು ಜನ ಅನಂತಮೂರ್ತಿ ಅವರ ಒಂದು ಹೇಳಿಕೆಗೆ ಈ ಮಟ್ಟದಲ್ಲಿ ರಿಯಾಕ್ಟ್ ಮಾಡುತ್ತಿದ್ದಾರೆ? ಇವತ್ತು ಈ ದೇಶದ ಸ್ಥಿತಿ ಹೇಗಾಗಿದೆ ಎಂದರೆ ಏನೇ ಕೆಲಸ ಮಾಡಬೇಕೆಂದರೂ ಅದರ ಹಿಂದೆ ಲಾಭದ ಉದ್ದೇಶವೊಂದು ಇದ್ದೇ ಇರುತ್ತದೆ. ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದಾಗಲೂ ಅಷ್ಟೇ. ಯುವ ಸಮೂಹದ ಆಕ್ರೋಶವನ್ನು, ಭ್ರಷ್ಟಾಚಾರದ ವಿಷಯದಲ್ಲಿ ರೋಸತ್ತ ಜನ ಸಮುದಾಯವನ್ನು ಎತ್ತಿ ಕಟ್ಟುವ ಕೆಲಸದ ಹಿಂದೆ ಕಾಣದ ಶಕ್ತಿಗಳು ಇದ್ದವು. ಇಂತಹ ಶಕ್ತಿಗಳು ಎಂದೂ ಮುನ್ನೆಲೆಗೆ ಬರುವುದೇ ಇಲ್ಲ. ಬದಲಿಗೆ ಜನರ ಭಾವನೆಗಳನ್ನು ತಮ್ಮ ಅಗತಕ್ಕೆ ತಕ್ಕಂತೆ ಬಳಸಿಕೊಂಡು, ಅದನ್ನೇ ಅಸ್ತ್ರವನ್ನಾಗಿ ರೂಪಿಸಿಕೊಂಡು ತಮ್ಮ ಗುರಿಯ ಮೇಲೆ ದಾಳಿ ನಡೆಸುವ ಕಲೆ ಇಂತಹ ಶಕ್ತಿಗಳಿಗೆ ಇರುತ್ತದೆ. ಇವತ್ತು ಇಂತವರು ಮೇಲೇಳಬೇಕು ಅಂದರೆ ಏನು ಮಾಡಬೇಕು? ಈ ಪ್ರಮಾಣದ ಬಂಡವಾಳ ಬೇಕೇ? ಕೋಮು ದಂಗೆಗಳ ಅಗತ್ಯವಿದೆಯೇ? ಯಾವ ರೀತಿಯ ಹಿಂಸಾಚಾರ ನಡೆದರೆ ಬೆಟರ್ರು ಎಂಬ ತನಕ ಹಲವು ಸಂಗತಿಗಳ ಕಡೆ ಇಂತಹ ಶಕ್ತಿಗಳು ಗಮನ ಹರಿಸುತ್ತವೆ.

ನರೇಂದ್ರ ಮೋದಿ ಪ್ರಧಾನಿಯಾಗಬೇಕು ಅಂತ ಹುಯಿಲೆದ್ದರೆ, ಇಲ್ಲ ರಾಹುಲ್‌ಗಾಂಧಿಯೇ ಪ್ರಧಾನಿ ಆಗಬೇಕು ಎಂಬ ಕೂಗು ಎದ್ದರೆ ಅಥವಾ ಇನ್ಯಾರೋ ಬಂದು ಈ ದೇಶದ ಹಣೆಬರಹ ಬರೆಯಬೇಕು ಅಂತ ಹಾಹಾಕಾರ ಎಬ್ಬಿಸಿದರೆ ನಾವು ನೋಡಬೇಕಾದ್ದು ಮೂಲದ ಕಡೆಗೆ. ಅಫ್‌ಕೋರ್ಸ್ ಇಂತಹವರು ಪ್ರಧಾನಿ ಆಗಬಾರದು ಎಂಬ ಕೂಗು ಎದ್ದರೂ ನಾವು ಮೂಲದ ಕಡೆಗೇ ನೋಡಬೇಕು. ಆ ದೃಷ್ಟಿಯಿಂದ ನೋಡಿದರೆ ಅನಂತಮೂರ್ತಿಯವರ ಮಾತಿನ ಹಿಂದೆ ಯಾವುದೇ ಕೈಗಾರಿಕೋದ್ಯಮಿ ಇರುವ ಕುರುಹುಗಳು ಕಾಣುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅನಂತಮೂರ್ತಿ ಇದೇ ಮೊದಲ ಬಾರಿ ಇಂತಹ ಮಾತುಗಳನ್ನು ಆಡುತ್ತಿಲ್ಲ. ಕಾಲಕಾಲಕ್ಕೆ ಅವರು ಆಡುವ ಮಾತುಗಳು ವಿವಾದದ ಕೇಂದ್ರ ಬಿಂದುವಾಗುತ್ತವೆ. ಇಂತಹ ಮಾತುಗಳು ಪರ, ವಿರೋಧದ ಚರ್ಚೆಗೆ ವೇದಿಕೆಯಾಗಬೇಕು. ಆ ಮೂಲಕ ಹೊಸ ಹೊಸ ವಿಚಾರಗಳು, ಚಿಂತನೆಗಳು ಹೊರಹೊಮ್ಮಬೇಕು. ಫೈನಲಿ, ಅನಂತಮೂರ್ತಿ ಹೇಳಿದರು ಎಂಬ ಕಾರಣಕ್ಕಾಗಿ ಮೋದಿ ಪರ ಇರುವವರು ರಾಹುಲ್ ಗಾಂಧಿಕೀ ಜೈ ಅನ್ನುವುದಿಲ್ಲ. ಅವರು ಹೇಳಿದರು ಎಂಬ ಕಾರಣಕ್ಕಾಗಿ ಮೋದಿ ಪ್ರಧಾನಿಯಾಗುವ ಸಾಧ್ಯತೆಯೇ ಕ್ಷೀಣವಾಗಿ ಹೋಯಿತು ಅಂತ ಹೇಳಲು ಸಾಧ್ಯವಿಲ್ಲ.

ಆದರೆ ನನಗೆ ಖೇದವಾಗುವುದೆಂದರೆ ಪರ, ವಿರೋಧದ ಚರ್ಚೆ ಒಂದು ಉನ್ನತ ಸ್ತರದಲ್ಲಿ ನಡೆಯಬೇಕು. ಅದು ಗಂಧದ ಜತೆಗಿನ ಗುದ್ದಾಟದಂತಿರಬೇಕು. ಇವತ್ತು ಮೋದಿಯೇ ಪ್ರಧಾನಿಯಾಗಬೇಕು ಎಂಬ ಕೂಗು ಕೇಳುತ್ತಿದ್ದರೆ ಯಾವ ಕಾರಣಕ್ಕಾಗಿ ಈ ಕೂಗು ಮೇಲೆದ್ದಿದೆ? ಇದರ ಹಿಂದೆ ಇರುವ ಶಕ್ತಿಗಳು ಯಾವುವು? ಅವುಗಳ ಉದ್ದೇಶವೇನು? ಅನ್ನುವುದನ್ನು ಅರ್ಥ ಮಾಡಿಕೊಳ್ಳುವ ಕೆಲಸವಾಗಬೇಕು. ಅದೇ ರೀತಿ ಇನ್ಯಾರೋ ಪ್ರಧಾನಿ ಕ್ಯಾಂಡಿಡೇಟ್ ಆಗಿ ಎಮರ್ಜ್ ಆಗುತ್ತಿದ್ದಾರೆ ಎಂದರೆ ಅದರ ಹಿಂದಿರುವ ಉದ್ದೇಶವೇನು ಅನ್ನುವುದನ್ನು ತಿಳಿಯುವ ಕೆಲಸವಾಗಬೇಕು. ಹಾಗಾದಾಗ ಜನಸಾಮಾನ್ಯರ ಜ್ಞಾನದ ಹರವನ್ನು ವಿಸ್ತರಿಸಿದಂತಾಗುತ್ತದೆ. ಅದನ್ನು ಬಿಟ್ಟು ಒಂದು ಹೇಳಿಕೆಯ ಬೆನ್ನು ಹತ್ತಿ, ರಾಡಿ ಮಾಡಿ, ದುರ್ವಾಸನೆ ಎಬ್ಬಿಸುವ ಲೆವೆಲ್ಲಿಗೆ ಹೋದರೆ ಏನರ್ಥ? ನಮ್ಮ ದೇಶದಲ್ಲಿರುವ ದೊಡ್ಡ ನ್ಯೂನ್ಯತೆ ಎಂದರೆ ಯಾವುದೇ ವಿಷಯ ಕೊಟ್ಟರೆ ರಾಡಿ ಎಬ್ಬಿಸುವುದು. ಆ ವಿಷಯದ ಆಳಕ್ಕಿಳಿದು ಪರಿಶೀಲಿಸುವ ಕೆಲಸ ಮಾಡುವುದಕ್ಕಿಂತ ಥೋ, ಛೀ ಅನ್ನುತ್ತಾ, ಹೇವರಿಕೆಯ ಧಾಟಿಯಲ್ಲಿ ಮಾತನಾಡುತ್ತಾ, ಕೊನೆಗೊಮ್ಮೆ ಇಡೀ ವಿಷಯದ ಮಹತ್ವವನ್ನೇ ಮರೆತುಬಿಡುವುದು.

ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎನ್ನುವ ಗಾದೆ ಹುಟ್ಟಿರುವುದು ಇಂತಹ ಕಾರಣಕ್ಕಾಗಿಯೇ ಇರಬೇಕು. ನಾವು ಭಾರತೀಯರು ಯಾವ ಪರಿ ಮಾತನಾಡುತ್ತೇವೆ ಎಂದರೆ ನಮ್ಮ ಮಾತಿನ ಶಕ್ತಿ ಜಾಸ್ತಿಯಾಗಿ, ರಟ್ಟೆ ಶಕ್ತಿ ಕಮ್ಮಿಯಾಗಿ ಕಂಡ ಕಂಡವರೆಲ್ಲ ಈ ದೇಶಕ್ಕೆ ನುಗ್ಗಿ ಬಡಿದು ಹಾಕಿದ ಮೇಲೂ ಆ ಪರಂಪರೆ ನಮ್ಮಲ್ಲಿ ಅನೂಚಾನವಾಗಿ ಮುಂದುವರಿದುಕೊಂಡು ಬಂದಿದೆ. ಅನಂತಮೂರ್ತಿ ಅವರ ಹೇಳಿಕೆಯ ವಿಷಯದಲ್ಲೂ ಅಷ್ಟೇ. ಇದೇ ಪರಂಪರೆ ಮುಂದುವರಿದುಕೊಂಡು ಹೋಗಿದೆ. ಟಿವಿ ಚಾನೆಲ್ಲುಗಳಲ್ಲಿ, ಪತ್ರಿಕೆಗಳಲ್ಲಿ, ವೆಬ್‌ಸೈಟುಗಳಲ್ಲಿ, ಎಲ್ಲಿ ನೋಡಿದರಲ್ಲಿ ಅನಂತಮೂರ್ತಿ ಹೀಗೆ ಹೇಳಿದರು. ಇದು ಸರಿಯಾ? ತಪ್ಪಾ? ಎಂಬುದರ ಬಗ್ಗೆ ಮಾತು, ಮಾತು, ಮಾತು. ಅರೇ, ಅನಂತಮೂರ್ತಿಯವರ ಕಣ್ಣಲ್ಲಿ ನರೇಂದ್ರಮೋದಿ ಒಬ್ಬ ಫ್ಯಾಸಿಸ್ಟ್. ಗೋಧ್ರಾ ಹತ್ಯಾಕಾಂಡದಲ್ಲಿ ತನ್ನದೇನೂ ತಪ್ಪಿಲ್ಲ ಎಂದು ಹೇಳುವ ಮೋದಿ ಆಗ ಗುಜರಾತ್‌ನ ಸಿಎಂ ಆಗಿರಲಿಲ್ಲವೇ? ತನ್ನ ಚಕ್ರಾಧಿಪತ್ಯದಲ್ಲಿರುವ ಒಂದು ರಾಜ್ಯದಲ್ಲಿ ಇಂತಹ ಘಟನೆ ನಡೆದಾಗ ಅದರ ನೈತಿಕ ಹೊಣೆಗಾರಿಕೆಯನ್ನು ಅವರು ಹೊರಬೇಕೋ, ಬೇಡವೋ ಅಂತ ಅವರು ಕೇಳಿದರೆ ಅದರಲ್ಲಿ ತಪ್ಪೇನಿದೆ?

ಹಾಗಂತ ಅವರು ಮಾತನಾಡಿದ್ದೇ ತಡ ಥೋ, ಥೋ, ಅನಂತಮೂರ್ತಿ ಈಗ ಗೋಧ್ರಾ ಹತ್ಯಾಕಾಂಡದ ಬಗ್ಗೆ ಮಾತನಾಡುತ್ತಿದ್ದಾರೆ. ಅದಕ್ಕಿಂತ ಮುನ್ನ ಈ ದೇಶದಲ್ಲಿ ಸಿಖ್ಖರ ಮಾರಣ ಹೋಮ ನಡೆಯಿತು ಆಗೇಕೆ ಅನಂತಮೂರ್ತಿ ಧ್ವನಿ ಎತ್ತಲಿಲ್ಲ? ಇಂತಲ್ಲಿ ಇಂತಹ ಜಾತಿಯ ಹುಡುಗ, ಇಂತಹ ಜಾತಿಯ ಹುಡುಗಿಯನ್ನು ಎತ್ತಿಕೊಂಡು ಹೋದ. ಆಗ ಅನಂತಮೂರ್ತಿ ಯಾಕೆ ಕಮಕ್ಕಿಮಕ್ಕೆನ್ನಲಿಲ್ಲ ಅಂತ ಕೇಳಿದರೆ ಅದಕ್ಕಿಂತ ಬಾಲಿಶತನ ಮತ್ತೊಂದಿಲ್ಲ. ಅಂದ ಹಾಗೆ ಅನಂತಮೂರ್ತಿ ಈ ದೇಶದಲ್ಲಿ ನಡೆಯುವ ಎಲ್ಲ ವಿದ್ಯಮಾನಗಳ ಕುರಿತು ಕಾಲ ಕಾಲಕ್ಕೆ ಹೇಳಿಕೆ ಕೊಡಲು ಯಾವುದೇ ಪಕ್ಷದ ಅಧಿಕೃತ ವಕ್ತಾರರಲ್ಲ. ಹೀಗಾಗಿ ಹಿಂದೆ ಯಾವತ್ತೋ ನಡೆದ ಸನ್ನಿವೇಶಕ್ಕೆ ಅವರು ಪ್ರತಿಕ್ರಿಯಿಸಿರಲಿಲ್ಲ ಎಂಬ ಕಾರಣಕ್ಕಾಗಿ ಈಗ ಪ್ರತಿಕ್ರಿಯಿಸುವ ಹಕ್ಕೇ ಅವರಿಗಿಲ್ಲ ಎಂದರೆ ಅದಕ್ಕೇನನ್ನೋಣ?

ಒಬ್ಬ ಜ್ಞಾನಪೀಠ ಪುರಸ್ಕೃತ ಸಾಹಿತಿ ತನ್ನ ಕಾಲಮಾನದಲ್ಲಿ ಎದುರಾಗುವ ಒಂದು ಸನ್ನಿವೇಶಕ್ಕೆ ಪ್ರತಿಕ್ರಿಯಿಸಿದಾಗ ಅದನ್ನು ನೋಡುವ ಬಗೆ ಹೇವರಿಕೆ ಹುಟ್ಟಿಸುವಂತಿರಬಾರದು. ನಡು ಬೀದಿಯಲ್ಲಿ ನಿಂತು ಶಿಳ್ಳೆ ಹೊಡೆದು ಹುಡುಗಿಯರನ್ನು ಚುಡಾಯಿಸುವ ಹುಡುಗ ಎಂಬಂತೆ ನೋಡಬಾರದು. ಅದು ನಾವು ಅನಂತಮೂರ್ತಿಯವರಿಗೆ ಮಾಡುವ ಅಗೌರವ ಅಲ್ಲ. ನಮ್ಮನ್ನು ನಾವು ಚಿಲ್ಲರೆಗಳ ಥರ ಪರಿವರ್ತಿಸಿಕೊಳ್ಳುವ ಕೆಲಸ. ಇದರ ಬದಲು ಈ ದೇಶ ಹೇಗಿರಬೇಕಿತ್ತು, ಹೇಗಾಗಿದೆ? ಇದಕ್ಕೆ ಕಾರಣವೇನು? ಭವಿಷ್ಯದಲ್ಲಿ ಒಳ್ಳೆಯ ದಿಸೆಯತ್ತ ನಡೆಯಲು ಏನು ಮಾಡಬಹುದು ಅನ್ನುವ ಕುರಿತು ಚರ್ಚೆ ನಡೆಯಬೇಕು. ಅನಂತಮೂರ್ತಿ ಅವರಂತಹ ಹಿರಿಯರು ಆಡಿದ ಒಂದು ಮಾತಿಗೆ ಈ ಮಟ್ಟದಲ್ಲಿ ಪ್ರತಿಕ್ರಿಯಿಸಿದರೆ, ಹೀಗೆ ಕೊಟ್ಟ ಪ್ರತಿಕ್ರಿಯೆಯಲ್ಲಿ ವಿಚಾರಕ್ಕಿಂತ ಹೆಚ್ಚಾಗಿ ಲದ್ದಿಯೇ ತುಂಬಿಕೊಂಡಿದ್ದರೆ ಏನು ಪ್ರಯೋಜನ. ಫೈನಲಿ, ಈಗ ನಡೆಯುತ್ತಿರುವ ಚರ್ಚೆಯಿಂದ ದೇಶ ಕೊಳ್ಳೆ ಹೊಡೆಯಲು ಕೂತವರನ್ನು ಹೊರತುಪಡಿಸಿ ನಿಮಗಾಗಲೀ, ನಮಗಾಗಲೀ ಏನು ಪ್ರಯೋಜನ? ಯೋಚಿಸಿ ನೋಡಿ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 30 September, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books