Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಛೆ, ಕನಸುಗಳೇ ಇಲ್ಲದಿದ್ದರೆ ಅದೂ ಒಂದು ಬಾಳೆ?

ಆಸೆಯೇ ದುಃಖಕ್ಕೆ ಕಾರಣ ಅಂತಾನೆ ಬುದ್ಧ. ಆಸೆಗಳೇ ಇಲ್ಲದಿದ್ದರೆ, ಕನಸುಗಳೇ ಬೀಳದಿದ್ದರೆ ಬದುಕಲಿಕ್ಕೆ ಕಾರಣವೇನಿದೆ ಅಂತಾನೆ ಮನುಷ್ಯ. ಆಸೆಗಳಿಲ್ಲದ ಮನುಷ್ಯ ನನ್ನ ಕಣ್ಣಿಗೆ ಸಂತನಾಗಿ ಕಾಣಿಸುವುದಿಲ್ಲ; ಅವನು dead ಅನ್ನಿಸ್ತಾನೆ.

ತುಂಬ ದೊಡ್ಡವೇನಲ್ಲ. ಆಫೀಸಿಗೆ ಹೊರಟ ಗುಮಾಸ್ತೆಗೆ ಸಿಟಿ ಬಸ್ಸಿನಲ್ಲಿ ಸೀಟು ಸಿಗಲಿ ಅನ್ನೋ ಆಸೆ. ಬಸ್ಟಾಪಿನಲ್ಲಿ ಸಾವಿರ ಕಣ್ಣುಗಳ ಸೂಪರ್‌ವಿಷನ್‌ಗೆ ಸಿಕ್ಕು ಕಂಗಾಲಾದ ಹುಡುಗಿಗೆ ತನ್ನ ಗೆಳೆಯ ಬೇಗ ಬರಲಿ ಅನ್ನೋ ಆಸೆ. ಗಂಡನ ಮುಂಗೈಗೆ ಮುತ್ತು ಕೊಟ್ಟು ಲೇಬರ್ ವಾರ್ಡಿನೊಳಕ್ಕೆ ನಡೆದು ಹೋಗುವ, ದಿನವಾದ ತುಂಬು ಬಸುರಿಗೆ ಗಂಡು ಮಗುವಾಗಲಿ ಎಂಬ ಆಸೆ. ಪೋಣಿಸಬೇಕಿರುವ ದಾರದ ತುದಿಗೆ ಸೂಜಿಯ ಕಣ್ಣು ಸಿಗಲಿ ಎಂಬ ಅರೆಕುರುಡಿ ಮುದುಕಿಯ ಆಸೆ. ಸುರಿಯುವ ಮಳೆ ಬೇಗ ನಿಂತು-ಗಿರಾಕಿ ಸಿಕ್ಕು-ಅಂದುಕೊಂಡಷ್ಟು ಕಾಸು ಸಿಕ್ಕರೆ ಮಗುವಿಗೆ ಊಟ ಮತ್ತು ಲಾಲಿಪಪ್ ಎರಡೂ ಒಯ್ಯಬಹುದೆಂಬ ಬಚ್ಚ ಸೂಳೆಯ ಸಣ್ಣ ಆಸೆ...
ಇವು ಇರಬಾರದ, ಪಡಬಾರದ ಆಸೆಗಳೇ?

ಇವುಗಳನ್ನೇನಾ ಆ ಬುದ್ಧನೆಂಬ ಒಂಬತ್ತನೇ ಭಗವಂತ-ದುಃಖಕ್ಕೆ ಕಾರಣಗಳು ಅಂದದ್ದು. Damn that Buddha. ಅಂಥಾ ಪರಿ ತಪಸ್ಸುಮಾಡಿದ ಮನುಷ್ಯನಿಗೆ ಇಷ್ಟು ಸಣ್ಣ ಸತ್ಯಗಳು ಅರ್ಥವಾಗಲಿಲ್ಲವೇ? Waste of Time.

ಆಸೆಗಳಿಲ್ಲದ, ಕನಸುಗಳಿಲ್ಲದ, ಪ್ರೀತಿಯೇ ಇಲ್ಲದ ಮನುಷ್ಯ ತುಂಬ ದಿನ ಬದುಕಿರಬಾರದು. ಅವನಿಂದ ಉಳಿದವರಿಗಿರಲಿ, ಅವನಿಗೇ ಪ್ರಯೋಜನವಿರುವುದಿಲ್ಲ. ಅದೇಕೋ ನನಗೆ ಜೈನ ದಿಗಂಬರ ಮುನಿಗಳನ್ನು ನೋಡಿದಾಗ ಹಾಗೆನ್ನಿಸುತ್ತದೆ.

ಹಲವಾರು ವರ್ಷಗಳ ಹಿಂದಿನ ಮಾತು. ನಾನು ಧರ್ಮಸ್ಥಳಕ್ಕೆ ಹೋಗಿದ್ದೆ. ಪತ್ರಿಕೆಯೊಂದಕ್ಕಾಗಿ ವೀರೇಂದ್ರ ಹೆಗ್ಗಡೆಯವರನ್ನು ಸಂದರ್ಶಿಸುವುದಿತ್ತು. ಅದು ಮುಗಿಸಿ ಹಾಗೇ ಧರ್ಮಸ್ಥಳದ ಆಸುಪಾಸಿನಲ್ಲಿ ಅಲೆಯುತ್ತಿದ್ದಾಗ ಜೈನ ಬಸದಿಯೊಂದರ ಆವರಣದಲ್ಲಿ ಆತ ಕಾಣಿಸಿದ್ದ...

ನಗ್ನ ಮುನಿ!

ಅಂಗಾಲಿನಿಂದ ಹಿಡಿದು ನೆತ್ತಿಯ ತನಕ ಒಂದು ದಾರದ ಎಳೆಯೂ ಇಲ್ಲದ ನಗ್ನ ಸನ್ಯಾಸಿ. ಕೈಯಲ್ಲೊಂದು ಕಮಂಡಲವಿತ್ತು. ಚಿಕ್ಕ ಸಡಗರವೂ ಇಲ್ಲದೆ ಬಸದಿಯ ಪ್ರಾಂಗಣದಲ್ಲಿ ನೆರಳಿನಂತೆ ಓಡಾಡಿಕೊಂಡಿದ್ದ. ನನ್ನ ಹಳೆಯ ಆಸಕ್ತಿ ಜಾಗೃತವಾಯಿತು. ಸನ್ಯಾಸಿಗಳು, ವಿರಕ್ತರು, ಬೂದಿ ಬಡುಕರು, ಹಟಯೋಗಿಗಳು, ಅಘೋರಿಗಳು, ಲಾಮಾಗಳು, ಭಿಕ್ಷುಗಳು, ಖೈದಿಗಳು, ರೌಡಿಗಳು, ಹಿಜಡಾಗಳು, ಮಂತ್ರಿಗಳು, ಸಾಹಿತಿಗಳು(!)-ಹೀಗೆ ನಾರ್ಮಲ್ ಅಲ್ಲದ ಜೀವಿಗಳನ್ನು ಮಾತಿಗೆಳೆಯುವುದೊಂದು ಹಳೆಯ ರೋಗ.

''ನಮಷ್ಕಾರ್ ಮಹರಾಜ್‌'' ಅಂದೆ.

ಆತ ಪ್ರತಿಯಾಗಿ ಸುಮ್ಮನೆ ನಕ್ಕ. ನನ್ನೊಂದಿಗಿದ್ದ ಚಿಕ್ಕ ವಯಸ್ಸಿನ ಫೊಟೋಗ್ರಾಫರ್ ಹುಡುಗಿಗೆ ಹೇಳಿದೆ;

''ನೋಡೂ, ನಂಗೆ ಆತನನ್ನು ಮಾತನಾಡಿಸಬೇಕಿದೆ. ಆತ ಬೆತ್ತಲೆಯಾಗಿದ್ದಾನೆ. ನಿಂಗೆ ನಾಚಿಕೆ ಅಥವಾ ಅಸಹ್ಯವಾಗೋ ಹಾಗಿದ್ದರೆ ಹೊರಗೇ ಉಳಿದುಬಿಡು. He is nude'' ಅಂದೆ. ಆಕೆ ನನ್ನೊಂದಿಗೆ ಬರುತ್ತೇನೆಂದಳು. ಲಕ್ಷಣವಾಗಿ ನಮ್ಮಿಬ್ಬರ ಎದುರಿಗೆ ಚಕ್ಕಳಮಕ್ಕಳ ಹಾಕಿಕೊಂಡು ಕುಳಿತ ನಗ್ನ ಸನ್ಯಾಸಿ ಮಾತಾಡತೊಡಗಿದ. ಜೈನ ಧರ್ಮದ ಬಗ್ಗೆ, ಸನ್ಯಾಸದ ಹಂತಗಳ ಬಗ್ಗೆ, ಹಸಿವು-ರೋಗಗಳ ಬಗ್ಗೆ, ಸ್ವರ್ಗ-ನರಕಗಳ ಬಗ್ಗೆ......

''ನೀವು ಸ್ನಾನ ಮಾಡಿ ಎಷ್ಟು ವರ್ಷಗಳಾದವು?'' ಕೇಳಿದೆ.

''....'' ಆತ ಸುಮ್ಮನಾದ.

''ದೇಹಕ್ಕೆ ಮನಸ್ಸಿಗೆ ಅಸಹ್ಯವಾಗುವುದಿಲ್ಲವೇ?''

''ಸ್ನಾನ ಒಂದೇ ರೀತಿಯದಿರುವುದಿಲ್ಲ. ಮಗನೇ, ನೀರು-ಸೋಪಿನ ಸ್ನಾನವಷ್ಟೇ ಸ್ನಾನವಲ್ಲ. ಗಾಳಿಯ ಸ್ನಾನ, ಬಿಸಿಲಿನ ಸ್ನಾನ, ಮನೋ ಸ್ನಾನ...'' ಆತ ವಿವರಿಸತೊಡಗಿದ. ಜೈನ ದಿಗಂಬರರು ಸ್ನಾನ ಮಾಡುವುದಿಲ್ಲ. ಹಲ್ಲು ಉಜ್ಜುವುದಿಲ್ಲ. ಸೂರ್ಯ ಮುಳುಗಿದ ಮೇಲೆ ಹೆಜ್ಜೆ ಇಡುವುದಿಲ್ಲ. ಶೇವ್ ಮಾಡುವುದಿಲ್ಲ. ಅವರು ಕೂದಲುಗಳನ್ನು ಕಿತ್ತು ತೆಗೆಯುತ್ತಾರೆ.

''ಯಾಕಿಷ್ಟು ಕಾಠಿಣ್ಯ?'' ಕೇಳಿದೆ.

''ದೇಹವನ್ನು ದಂಡಿಸಬೇಕು. ಸ್ನಾನ ಮಾಡಿದರೆ ಅಲ್ಲಿಗೆ ಮುಗಿಯೋದಿಲ್ಲ. ದೇಹ ಸೋಪು ಕೇಳುತ್ತದೆ. ಎಣ್ಣೆ, ಪೌಡರು, ಬಟ್ಟೆ, ಬಾಚಣಿಕೆ, ಬಣ್ಣ, ಇಸ್ತ್ರಿ, ಘಮ, ಗುಂಡಿ... ಓಹ್ ಅದರ ಬೇಡಿಕೆಗಳು ದೊಡ್ಡವಾಗುತ್ತಾ ಹೋಗುತ್ತವೆ. ಇದನ್ನು ದಂಡಿಸಿಟ್ಟಿದ್ದೇನೆ. ನಗ್ನವಾಗಿಟ್ಟಿದ್ದೇನೆ. ಸ್ನಾನವಿಲ್ಲದೆಯೂ ಸ್ವಚ್ಛವಾಗಿಟ್ಟಿದ್ದೇನೆ....'' ಜೈನ ಮುನಿ ಉದ್ವೇಗವಿಲ್ಲದ ದನಿಯಲ್ಲಿ ಹೇಳುತ್ತಾ ಹೋದ.

''ಸಾಧೂ ಮಹರಾಜ್, ಒಂದು ಪ್ರಶ್ನೆ ಕೇಳಲಾ?''

''ಕೇಳು.''

''ನಿಂಗೆ ಉದ್ರೇಕವಾಗುವುದಿಲ್ಲವೆ? ಹೆಂಗಸರನ್ನು ನೋಡಿದಾಗ.....''

ಆತ ರೇಗಲಿಲ್ಲ. ಅದೇ ತಣ್ಣನೆಯ ದನಿಯಲ್ಲಿ ವಿವರಿಸತೊಡಗಿದ. ಜೈನ ಸನ್ಯಾಸಿಗಳು ಇದ್ದಕ್ಕಿದ್ದಂತೆ ಮುಂಜಾನೆ ಬಟ್ಟೆ ಕಳಚಿ ಬಯಲಿಗೆ ಬಂದು ಬಿಡುವುದಿಲ್ಲ. ನಗ್ನ ಸನ್ಯಾಸಿಗಳಾಗುವ ಹೊತ್ತಿಗೆ ಹತ್ತಾರು ಹಂತಗಳ ಸನ್ಯಾಸ ಜೀವನ ಅನುಭವಿಸಿರುತ್ತಾರೆ. ಬಟ್ಟೆ ಉಟ್ಟುಕೊಂಡೇ ನಿಗ್ರಹ ಸಾಧಿಸಿರುತ್ತಾರೆ. ಲಂಗೋಟಿ ಕೂಡ ಕಿತ್ತು ಹಾಕುವ ಮುನ್ನ ಅವರು ತಮ್ಮ ನಿಗ್ರಹವನ್ನು ಆಸೆಯ ತುದಿಗೆ ತಂದು ಸ್ಥಗಿತಗೊಳಿಸಿರುತ್ತಾರೆ. ಅದೆಲ್ಲ ಎಂಥ ಕಠೋರವಾದದ್ದು ಎಂಬುದು-ಹೀಗೆ ಸುಮ್ಮನೆ ಬರೆದರೆ ಅರ್ಥವಾಗುವುದಿಲ್ಲ.

ನಗ್ನತೆಯ ಬಗ್ಗೆ ಥಿಯರಿಗಳೇ ಇವೆ. ಅವು ಸಾಯಲಿ; ಎಂಥ ನಿರ್ಲಜ್ಜರಾದರೂ ನಾವು ಸಲೀಸಾಗಿ ಇನ್ನೊಬ್ಬರ ಮುಂದೆ ನಗ್ನರಾಗಲು ಹಿಂಜರಿಯುತ್ತೇವೆ. ಹೆಂಡತಿಯ ಮುಂದೆ, ವೈದ್ಯರ ಮುಂದೆ, ಕಡೆಗೆ ಭಗವಂತನೇ ಇದಿರಾದರೆ ಅವನ ಮುಂದೆ ಕೂಡ ಬೆಳ್ಳಂಬೆಳಕಿನಲ್ಲಿ ನಗ್ನರಾಗಲು ನಾಚುತ್ತೇವೆ. ಕಡೇ ಪಕ್ಷ ಕತ್ತಲಾಗಲಿ ಅಥವಾ ''ನಗ್ನ''ತೆ ನಾಚಿಕೆಯಾಗದಷ್ಟು ''ದೊಡ್ಡ''ದಾಗಲಿ ಅಂತ ಒದ್ದಾಡುತ್ತೇವೆ. ಹುಟ್ಟಿದಂದಿನಿಂದಲೇ ನಮಗೆ ನಗ್ನತೆಯ ವಿರುದ್ಧ ಪಾಠವಾಗಿರುತ್ತದೆ.

ಬಟ್ಟೆ ಬಿಚ್ಚುವುದೂ ಕಷ್ಟ.

ಅದರಲ್ಲೂ ನಮ್ಮದೇ ಬಟ್ಟೆ!

ಅಂಥದ್ದರಲ್ಲಿ ಈ ಜೈನ ಸನ್ಯಾಸಿ ಉದ್ದೋಉದ್ದಕ್ಕೆ, ಆಗಷ್ಟೇ ಹುಟ್ಟಿದ ಮಗುವಿನಂತೆ ಧಿಗ್ಗನೆ ಬೆತ್ತಲೆಯಾಗಿ ಬಯಲಿಗೆ ಬಂದುಬಿಟ್ಟನಲ್ಲ? ಅದರಲ್ಲೂ ಸಾವಿರಾರು ಜನ ಹೆಂಗಸರಿರುವ ಬಯಲಿಗೆ? ಬಟ್ಟೆ ಹಾಕಿಕೊಂಡವರೆಲ್ಲ ತುಂಬಿರುವ ಬಯಲಿಗೆ? ನಾಚಿಕೆಯಾಗಲೇ ಇಲ್ಲವೇ? ಅಮೇಲಾಮೇಲೆ ಅಭ್ಯಾಸವಾಗಿರಬಹುದು. ಮೊದಲ ಸಲ ಬಿಚ್ಚಿದಾಗ?

''ಏನೂ ಅನ್ನಿಸಲಿಲ್ಲ ಮಗನೇ. ಆಸೆಗಳನ್ನು ತ್ಯಜಿಸಿದ ದೇಹಕ್ಕೆ ಬಟ್ಟೆ ಕಳಚುವುದು ಎಷ್ಟು ಹೊತ್ತಿನ ಕೆಲಸ? ಅದಕ್ಕೆ ಮುಂಚೆ ಬಿಳಿ ಬಟ್ಟೆ ತೊಡುತ್ತಿದ್ದೆ. ಅದಕ್ಕೆ ಬಣ್ಣಗಳಿರಲಿಲ್ಲ. ಆಮೇಲೆ 'ಬಿಳಿ' ಎಂಬುದು ಕೂಡು ಒಂದು ಬಣ್ಣ ಅನ್ನಿಸತೊಡಗಿತು. ಬಟ್ಟೆ ಬಿಚ್ಚಿ ಹಾಕಿದೆ. ಈಗ ಎಲ್ಲವೂ ನಿರಾಕಾರ. ಎಲ್ಲವೂ ವರ್ಣಹೀನ. ಬಟಾಬಯಲಿನಲ್ಲಿ ನಿಂತ ಬೆತ್ತಲೆ ದೇಹ. ಅದಕ್ಕೊಂದು ಆಕಾರವಿಲ್ಲ. ಮಹಾವೀರನ ಪಾದದ ಮುಂದೆ ಬೆತ್ತಲೆ ನಿಂತವನಿಗೆ ನಾನು-ಅವನು ಎಂಬ ಪ್ರಭೇದ ಕೂಡ ಗೊತ್ತಾಗುವುದಿಲ್ಲ...'' ನಗ್ನ ಮುನಿ ಹೇಳುತ್ತಲೇ ಹೋದ. ಅದೆಲ್ಲ ಅರ್ಥವಾಗಲಿಲ್ಲವೆನ್ನಿಸಿತೇನೋ? ನನ್ನೊಂದಿಗಿದ್ದ ಹುಡುಗಿ ಎದ್ದು ಹೋಗಿ ಅನತಿ ದೂರದಿಂದ ಆತನ ಫೊಟೋಗಳನ್ನು ತೆಗೆಯತೊಡಗಿದಳು. ಆತನಿಗೆ ಅದರ ಪರಿವೆ ಕೂಡ ಇರಲಿಲ್ಲ.

ನಿಮಗೆ ಆ ಸ್ಥಿತಿ ಅರ್ಥವಾಗಬೇಕು. ಅದು ಸುಲಭದ ಮಾತಲ್ಲ. ನಿಮ್ಮ ಕಾಂಕ್ರೀಟು ಮನೆಯ ಕತ್ತಲ ಕೋಣೆಯಲ್ಲಿ, ಮೌಲ್ಡು ಮಾಳಿಗೆಯ ಆಡಿಯಲ್ಲಿ, ಬಾತ್ ಟಬ್ಬಿನ ಸಮ್ಮುಖದಲ್ಲಿ, ಪೂರ್ತಿ ಕತ್ತಲಿರುವ ಮಂಚದ ಮನೆಯಲ್ಲಿ ಕೈಗೆ ತಾಕುವ ನಗ್ನತೆಗೂ, ಈ ವಿಶಾಲ ಬೆಳಕಿನ ಮೈದಾನದಲ್ಲಿ ಮಗುವಿನಂತೆ ಬೆತ್ತಲಾಗಿ ನಿಲ್ಲುವ ನಗ್ನತೆಗೂ ಅಜಗಜಾಂತರ ವ್ಯತ್ಯಾಸವಿದೆ. ಮಂಚದ ಮನೆಯಲ್ಲೇ ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಿ. ಬೆತ್ತಲೆಯಾಗಿ ಎಷ್ಟೋ ಹೊತ್ತು ಇರಲಾರಿರಿ. ಬಟ್ಟೆ ಬೇಕೆನಿಸುತ್ತದೆ. ಕಡೇ ಪಕ್ಷ-ಆಲಿಂಗನದ ಬಟ್ಟೆ. ಆಮೇಲೆ ಅದೂ ಬೇಡವಾಗಿ, ಬೇಸರವಾಗಿ, ವಾಕರಿಕೆಯಾಗಿ ನಮಗೊಬ್ಬರಿಗೇ ಅಲ್ಲ-ಅಲ್ಲಿರುವ ಇಬ್ಬರಿಗೂ ಬಟ್ಟೆ ಬೇಕೆನಿಸುತ್ತದೆ. ಇಂದು-ನಿನ್ನಿನ ಡಿಮ್ಯಾಂಡಲ್ಲ ಇದು. ಗವಿಯೊಳಗೆ ಬೆತ್ತಲೆಯಾಗಿದ್ದ ಮನುಷ್ಯ ಈಚೆಗೆ ಬಂದಾಗಿನಿಂದ ಅವನಿಗೆ ಅಡರಿಕೊಂಡ ಬಟ್ಟೆ. ಅದನ್ನು ಕಿತ್ತು ಹಾಕಲು ಶತಶತಮಾನಗಳಿಂದಲೂ ಪ್ರಯತ್ನಿಸುತ್ತಿದ್ದಾನೆ ಮನುಷ್ಯ. ವಿಪರೀತ ಆಸೆಯಾದಾಗ ಸರಸರನೆ ಕಿತ್ತು ಹಾಕುತ್ತಾನೆ. ಆಸೆ ಮುಗಿದ ತಕ್ಷಣ ಗಬಕ್ಕನೆ ಬಟ್ಟೆ ಎಳೆದುಕೊಳ್ಳುತ್ತಾನೆ!

Shame Shamed!

ಅರಮನೆಯ ಸಮೇತ ಆಸೆಗಳನ್ನೆಲ್ಲ ತ್ಯಜಿಸಿ ಹೋದ ಬುದ್ಧ ಎಷ್ಟೊಂದು ದೊಡ್ಡವನು ಅಂದುಕೊಳ್ಳುತ್ತಿದ್ದಂತೆಯೇ, ಬುದ್ಧನದೇನು ದೊಡ್ಡಸ್ತಿಕೆ? ಆತ ಬಟ್ಟೆ ಹಾಕಿಕೊಳ್ಳುತ್ತಿದ್ದ. ಹಾಗೆ ನೋಡಿದರೆ ಮಹಾವೀರನೇ ದೊಡ್ಡವನು. ಬಟಾಬಯಲಿನಲ್ಲಿ ಬೆತ್ತಲೆಯಾಗಿ ನಿಂತ ಮಹಾನ್ ವಿರಾಗಿ. ಬಟ್ಟೆ ಹಾಕಿಕೊಂಡ ಲಕ್ಷಾಂತರ ಅವಿವೇಕಿಗಳ ಮಧ್ಯೆ ಬೆತ್ತಲೆ ನಿಂತ ವಿವೇಕಿ. ಮಗುವಿನಂತೆ, ಮಂಜಿನಂತೆ, ಪಕ್ಷಿಯಂತೆ, ಪ್ರಾಣಿಯಂತೆ, ಸರ್ಪದಂತೆ, ಭಗವಂತನಂತೆ, ಸಾವಿನಂತೆ...... ಬೆತ್ತಲೆಯಾದ ಮಹಾನ್ ಯೋಗಿ.

ನಮ್ಮ ಮಾತು ಮುಂದುವರೆಯುತ್ತಿದ್ದಂತೆಯೇ ನಗ್ನ ಮುನಿಗೆ ಊಟದ ಹೊತ್ತಾಯಿತು. ಆತ ಕಮಂಡಲದಲ್ಲಿದ್ದ ನೀರು ಕುತ್ತಿಗೆಗೆ ಸುರಿದುಕೊಂಡು ಗುಳಗುಳಿಸಿದ. ತನ್ನ ಕಟ್ಟು ಮಸ್ತಾದ ನಗ್ನ ದೇಹವನ್ನು ಬಸದಿಯ ಪಕ್ಕದಲ್ಲಿದ್ದ ಊಟದ ಮನೆಗೆ ನಡೆಸಿಕೊಂಡು ಹೋದ. ನನಗೆ ಆಶ್ಚರ್ಯವಾದದ್ದೇ ಅಲ್ಲಿ! ಒಬ್ಬರಲ್ಲ ಇಬ್ಬರಲ್ಲ........ ಸುಮಾರು ಹತ್ತು ಜನ ಹೆಂಗಸರಿದ್ದರು ಅಲ್ಲಿ. ಅವರ‍್ಯಾರೂ ಸನ್ಯಾಸಿನಿಯರಲ್ಲ. ರಂಗುರಂಗಿನ ಬಟ್ಟೆ ತೊಟ್ಟು, ಸಿಂಗಾರ-ಬಂಗಾರ ಮಾಡಿಕೊಂಡು ಬಂದಿದ್ದ ಗೃಹಿಣಿಯರು, ಹುಡುಗಿಯರು. ಅವರೆಲ್ಲ ಈ ನಗ್ನ ಮುನಿಯ ಸುತ್ತ ನಿಂತರು. ಈತ ಎಲ್ಲ ಹೆಂಗಸರ ಮಧ್ಯೆ ಪುಟ್ಟ ಹುಡುಗನಂತೆ, ಆಗಷ್ಟೆ ನೀರು ಸುರಿದುಕೊಂಡು ಬಚ್ಚಲಿಂದ ಓಡಿ ಬಂದು ಅಡುಗೆಮನೆಯಲ್ಲಿ ಅಮ್ಮನ ಮುಂದೆ ಝಲ್ಲಂತ ನಿಲ್ಲುವ ಮಗನಂತೆ ನಿಂತು ಬಿಟ್ಟಿದ್ದ. ತನ್ನೆರಡೂ ಕೈಗಳನ್ನು ಬೊಗಸೆ ಮಾಡಿ ಮುಂದಕ್ಕೆ 'ದೇಹೀ' ಎಂಬಂತೆ ಚಾಚಿದ. ಆ ಹೆಂಗಸರು ಒಬ್ಬೊಬ್ಬರಾಗಿ ತನ್ನ ಬಟ್ಟಲುಗಳಲ್ಲಿದ್ದುದನ್ನು ಈತನ ಬೊಗಸೆಗೆ ಬಡಿಸತೊಡಗಿದರು. ಒಂದೇ ಒಂದು ಮಾತಾಡದೆ, ಅದು ಬೇಕು, ಇದು ಬೇಡ ಅನ್ನದೆ ಆತ ಹಾಕಿದ್ದಷ್ಟನ್ನೂ ತಿಂದು ಮುಗಿಸಿದ.

ಅವತ್ತಿಗದು ಮುಗಿಯಿತು. ಮರುದಿನದ ತನಕ ಊಟವಿಲ್ಲ. ಮರುದಿನ ಕೂಡ ಊಟ ಸಿಕ್ಕೇ ಸಿಗುತ್ತದೆಂಬ ಖಾತ್ರಿಯಿಲ್ಲ. ಯಾರೂ ಕರೆದು ಊಟ ನೀಡದಿದ್ದರೆ ಉಪವಾಸವೇ ಇರಬೇಕೆನ್ನುತ್ತದೆ ಜೈನ ಕಾಠಿಣ್ಯ.

ಅದಲ್ಲ ನನ್ನ ಕಾಡಿದ್ದು. ಅಷ್ಟೊಂದು ಹೆಂಗಸರ ನಡುವೆ ನಿಂತ ನಗ್ನಮುನಿ ಅಷ್ಟೊಂದು ನಿಶ್ಚಲವಾಗಿ, ತಣ್ಣಗೆ, ಉದ್ವೇಗಗೊಳ್ಳದೆ, ಸ್ಥಿರವಾಗಿ ಉಳಿದುಬಿಟ್ಟನಲ್ಲಾ? ಅದು ಸಾಧ್ಯವಾದದ್ದು ಹೇಗೆ? ಊಟವಾಗುವಷ್ಟು ಹೊತ್ತೂ ನಾನು ಆತನ 'ನಗ್ನತೆ'ಯನ್ನೇ ಗಮನಿಸುತ್ತಿದ್ದೆ.

ಉಹುಂ.

ಬದರೀನಾಥದಾಚೆಗಿನ ಹಿಮವರ್ಷದಲ್ಲಿ ಷೀಟು ಮಾಳಿಗೆಯ ಕೋಣೆಯಲ್ಲಿ ನನಗೂ ಈ ಆಲೋಚನೆ ಬಂದಿರಲಿಲ್ಲವೇ? ಬಟ್ಟೆ ಬಿಚ್ಚಿ ಹಾಕಿ ಹಿಮವರ್ಷದಲ್ಲಿ ನಿಲ್ಲಬೇಕೆನಿಸಿತ್ತು. ಅಲ್ಲಿ ಹನ್ನೆರಡು ತಿಂಗಳೂ ಬೆತ್ತಲೆ ಅಲೆಯುವ ಯೋಗಿಗಳಂತೆ ಹನ್ನೆರಡು ನಿಮಿಷವಾದರೂ ನಿಂತು ಬರಬೇಕೆನಿಸಿತ್ತು. ಆಗ ನನ್ನ ಗಮನವಿದ್ದುದೆಲ್ಲಾ ಆ ಭಯಾನಕ ಚಳಿಯನ್ನ, ಹಿಮವರ್ಷವನ್ನ ತಡೆಯುವ ದೇಹದ ತಾಕತ್ತಿನೆಡೆಗೆ. ಅಂಥ ಹಿಮವರ್ಷದಲ್ಲೂ ಕಿಬ್ಬೊಟ್ಟೆಯಾಳದಿಂದ ಏಳುವ ಕಾಮಾಗ್ನಿಯ ಬಗ್ಗೆ ಗಮನವೇ ಇರಲಿಲ್ಲ. ಹಿಮಕಂದರಗಳಲ್ಲಿ ಬೆತ್ತಲೆ ಅಲೆಯುವ ಸನ್ಯಾಸಿಗಳು concentrate ಮಾಡುವುದು ಕೇವಲ ಚಳಿಯಂತಹ ಯಕಃಶ್ಚಿತ್ ಕಿರುಕುಳದ ಮೇಲಲ್ಲ. ಅದು ಆತ್ಮವನ್ನು ನಿಗ್ರಹಿಸುವ, ಕಟ್ಟಿಡುವ, ಹರಿಬಿಡುವ, ಅದನ್ನು ಬಿಟ್ಟು ನಿಂತೇ ಅದರ ಬಗ್ಗೆ ಯೋಚಿಸುವ ಅಸಾಧಾರಣ ನಗ್ನತೆಯದು ಎಂಬುದು ಆವತ್ತಿನ ನನ್ನ ಹದಿನೆಂಟರ ಮನಸ್ಸಿಗೆ ತೋಚಿರಲಿಲ್ಲ.

ಧರ್ಮಸ್ಥಳದ ಕೋಣೆಯಲ್ಲಿ ಒಬ್ಬನೇ ಬೆತ್ತಲೆಯಾಗಿ ಓಡಾಡಲು ಪ್ರಯತ್ನಿಸಿದೆ. ಪಕ್ಕದ ರೂಮಿನ ಫೊಟೋಗ್ರಾಫರ್ ಹುಡುಗಿ ನೆನಪಾಗಿ ನಾಚಿಕೆಯಾಯಿತು. ಟವೆಲ್ಲು ಸುತ್ತಿಕೊಂಡೆ. ಮರುದಿನ ಹಿಂತಿರುಗುವಾಗ,

''ನಾನು nude ಆಗಿರೋಕೆ ಪ್ರಯತ್ನಿಸಿದೆ'' ಅಂದೆ.

''Surprisingly..... ನಾನೂ ಪ್ರಯತ್ನಿಸಿದೆ'' ಅಂತ ಗೊಳ್ಳನೆ ನಕ್ಕಳು.

ನಾನು ನೆನಪಾದೆನಾ ಎಂದು ಕೇಳುವುದು ನಗ್ನತೆಗಿಂತ ಅಸಭ್ಯವಾದುದು ಅನ್ನಿಸಿ ಸುಮ್ಮನಾದೆ. ಊರಿಗೆ ಹಿಂತಿರುಗಿದ ಮೇಲೆ ಜೈನ ಮುನಿಯ ಸಂದರ್ಶನ ಬರೆದು ಲಂಕೇಶ್ ಪತ್ರಿಕೆಗೆ ಕೊಟ್ಟೆ. ಆ ಕ್ರಿಶ್ಚಿಯನ್ ಹುಡುಗಿ ಜೈನ ವಿರಾಗಿಯ ಫೊಟೋಗಳನ್ನು ಝಳಝಳ ತೊಳೆದು ಕವರಿನಲ್ಲಿಟ್ಟು ಕೊಟ್ಟಿದ್ದಳು. ಪತ್ರಿಕೆಯವರು ಎರಡನ್ನೂ ಕಳೆದು ಹಾಕಿದರು.

ಇವತ್ತೇಕೋ ಎಲ್ಲ ನೆನಪಾಯಿತು.

ಮಳೆಯ ಸೆಳಕುಗಳೆಲ್ಲ ಕಳುವಾಗಿರುವ ಈ ರಣ ಬೇಸಗೆಯಲ್ಲಿ ಬೆತ್ತಲೆಗಿಂತ ಕಂಫರ್ಟಬಲ್ ಆದ ಉಡುಗೆ ಮತ್ತೊಂದಿಲ್ಲ ಅನ್ನಿಸುತ್ತಿದೆ. ಹಿಂದೆಯೇ ಜಗತ್ತಿನ ಎಲ್ಲವನ್ನೂ ತಿರಸ್ಕರಿಸಿ ಉದ್ದೋಉದ್ದಕ್ಕೆ nude ಆಗಿ ಅಲೆಯುವ ನಗ್ನ ಮುನಿಗಳ ಆ ಭಯಾನಕ ವಿರಕ್ತಿ ಮನುಷ್ಯನಿಗೆ ಅವಶ್ಯಕವೇ ಎಂಬ ಪ್ರಶ್ನೆ ಎಡೆಬಿಡದೆ ಕಾಡುತ್ತಿದೆ. ಬಟ್ಟೆ ಬಿಚ್ಚಿದ ಮಾತ್ರಕ್ಕೆ ಕಾಮವೊಂದನ್ನು ಅದುಮಿ, ಮನಸ್ಸಿನಿಂದ ಗದುಮಿ ಬಾಗಿಲು ಹಾಕಿಕೊಂಡ ಮಾತ್ರಕ್ಕೆ ಆತನಿಗೆ ದೈವ ಸಾಕ್ಷಾತ್ಕಾರವಾಗಿಬಿಟ್ಟೀತೇ? ಹುಚ್ಚರು, ಕುಡುಕರು, ಗತಿಯಿಲ್ಲದವರು-ಅವರೆಲ್ಲ ನಗ್ನವಾಗೇ ಇರುತ್ತಾರೆ. ಅವರಿಗೆ ದೈವ ಸಾಕ್ಷಾತ್ಕಾರವಾಗಿರುತ್ತದೆಯೇ? ಇಷ್ಟಕ್ಕೂ ನಗ್ನತೆಗೂ ದೈವ ಸಾಕ್ಷಾತ್ಕಾರಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಬಟ್ಟೆ ಹಾಕಿಕೊಂಡೂ ನಗ್ನರಾಗಿ ಕಾಣಿಸುವ ಸೊನಾಲಿ ಬೇಂದ್ರೆ, ಕರಿಷ್ಮಾ ಕಪೂರ್, ಜ್ಯೋತಿ ಲಕ್ಷ್ಮಿ, ಡಿಸ್ಕೋ ಶಾಂತಿ... ಇವರಿಗೆ ದೈವ ಸಾಕ್ಷಾತ್ಕಾರ ಆಗಿದೆ ಅಂತೀರಾ? Atleast ಅರ್ಧಂಬರ್ಧವಾದರೂ?

ನಗ್ನತೆಯೆಂಬುದೊಂದು ಶುದ್ಧ ನಾನ್ಸೆನ್ಸ್. ಮನಸ್ಸಿಗೆ ನಗ್ನತೆ ಕೂಡ ಒಂದು ಆಸೆಯೇ. ಅತ್ಯಂತ ಸುಂದರವಾದ ಉಡುಪಿನಲ್ಲಿ ಒಂದು ಆಕೃತಿಯನ್ನು ನೋಡಬೇಕೆನಿಸುವುದು ಎಷ್ಟು ತೀವ್ರವಾದ ಆಸೆಯೋ, ಅದೇ ಆಕೃತಿಯನ್ನು ಉಡುಪೇ ಇಲ್ಲದೆ ನೋಡಬೇಕಂತ ಅನಿಸುವುದೂ ಅಷ್ಟೇ ತೀವ್ರವಾದ ಆಸೆ. ನೋಡಲಿಕ್ಕೆ ಮನಸಾದರೆ, ಅವಕಾಶವಾದರೆ, ಅದರಿಂದ ಮತ್ತೊಬ್ಬರಿಗೆ ತೊಂದರೆಯಾಗುವುದಿಲ್ಲವೆಂದು ಖಾತರಿಯಾದರೆ ನೋಡಿದರಾಯಿತು. ನೋಡಲಾಗದಿದ್ದರೆ, ನೋಡುವುದು ಇಷ್ಟವಾಗದಿದ್ದರೆ ನೋಡದಿದ್ದರಾಯಿತು. There ends the matter. ಇದು ತೀರಾ ತಡೆಯಲಾಗದ ದುಃಖಕ್ಕೆ ಕಾರಣವಾಗುವಂತಹ ಆಸೆಯೇನಲ್ಲ. ಸೋನಾಕ್ಷಿ ಸಿನ್ಹಾಳ ಸಿನೆಮಾ ನೋಡದಿದ್ದರೆ ಉಂಟಾಗುವುದು ದುಃಖವಲ್ಲ. ನಿರಾಸೆ! ಅದು ಆಸೆಯ counterpart ಅಷ್ಟೆ. ಅದೇ ಸಿನೆಮಾ ಮಾರನೆಯ ದಿನ ನೋಡಿದರೆ ನಿರಾಸೆ ಕ್ಯಾನ್ಸಲ್ಲಾಗಿ ಆಸೆ ವಿಜೃಂಭಿಸುತ್ತದೆ, ತಣಿಯುತ್ತದೆ.

ಬುದ್ಧನಿಗೆ ಈ ಮಾತ್ರದ ಕಾಮನ್‌ಸೆನ್ಸ್ ಇರಲಿಲ್ಲವೇ?

ಉಡುಪನ್ನು ಆಸೆಯೆಂದೂ, ಕನಸನ್ನು ದುರಾಸೆಯೆಂದೂ, ನಗ್ನತೆಯನ್ನು ವೈರಾಗ್ಯವೆಂದೂ ಭಗವಂತ ಬರಿ ಮೈಗೆ ಮಾತ್ರ ಒಲಿಯುತ್ತಾನೆಂದೂ ಪೊರಪಾಟಾದವರ ಮುಂದೆ ಇಡೀ ಮನುಷ್ಯ ಸಂಕುಲದ ಕನಸುಗಳನ್ನೆಲ್ಲ ಸುರಿದು ತೋರಿಸಬೇಕೆನಿಸುತ್ತದೆ. ಉಬ್ಬು ಹಲ್ಲಿನ ಹುಡುಗಿಗೆ ಕ್ಲಿಪ್ಪು ಹಾಕಿಸಿಕೊಳ್ಳುವ ಕನಸು. ಗೇಟಿನಲ್ಲಿ ನಿಂತು ಟಿಕೆಟ್ ಹರಿಯುವ ಹುಡುಗನಿಗೆ ಬಾಲ್ಕನಿಯಲ್ಲಿ ಕುಳಿತು ಪೂರ್ತಿ ಸಿನೆಮಾ ನೋಡುವ ಕನಸು. ಮೊಟ್ಟ ಮೊದಲ ಪದ್ಯ ಬರೆದ ಕವಿಗೆ ಅದು ಪ್ರಿಂಟಾಗಿ ಮೈ ತುಂಬ ಹರಡುವ ಕನಸು.
ಮುನಿಸಿಪಾಲಿಟಿ ಕಾರಕೂನನಿಗೆ ಸಂಜೆ ಹೊತ್ತಿಗೆ ಸಿಗುವ ಪುಟ್ಟದೊಂದು ಕನಸು. ಮೂರು ಪಾಸಾದ ಮಗುವಿಗೆ ನಾಲ್ಕನೇ ಕ್ಲಾಸಿನ ಶಾಲೆಯ ಹೊಸ ಯೂನಿಫಾರ‍್ಮಿನ ಕನಸು. ಬಾಗಿಲಲ್ಲಿ ಕೂತ ಅಜ್ಜಿಗೆ ಎಂದೋ ಕಳೆದುಹೋಗಿ ಸೂಳೆಮನೆ ಸೇರಿದ ಮೊಮ್ಮಗಳು ಯಾರನ್ನೋ ಮದುವೆಯಾಗಿ ಹಿಂತಿರುಗಿಯಾಳೆಂಬ ಕನಸು. ಗಬ್ಬದ ಆಕಳು ಹೆಣ್ಣು ಕರು ಹಾಕಲೆಂಬ ಗೌಳಿಯ ಕನಸು. ಈ ವರ್ಷ ಪಾಸಾದರೆ ಸಾಕು, ಮುಂದಿನ ವರ್ಷ ಚೆನ್ನಾಗಿ ಓದುತ್ತೇನೆ ಎಂದು ಕೈ ಮುಗಿಯುವ ಹನುಮಂತ ದೇವರ ಮುಂದಿನ ವಿದ್ಯಾರ್ಥಿಯ ಕನಸು....

ಛೆ, ಕನಸುಗಳೇ ಇಲ್ಲದಿದ್ದರೆ ಅದೂ ಒಂದು ಬಾಳೆ? ಆಸೆಗಳೇ ಕನಸುಗಳ ಬೇರುಗಳಲ್ಲವೇ? ನಮ್ಮನ್ನು ಪ್ರತಿ ಹಗಲು, ಪ್ರತಿ ರಾತ್ರಿ ಮಲಗಲು ಬಿಡದೆ ಚೇಸ್ ಮಾಡುವ ಕನಸುಗಳಿಲ್ಲದಿದ್ದರೆ...... ಬಹುಶಃ ಆಗ ನಾವೆಲ್ಲ ಬಟ್ಟೆ ಬಿಚ್ಚಿ ಹಾಕಿ ಬಟಾಬಯಲಲ್ಲಿ ಬಂದು ನಿಲ್ಲುತ್ತಿದ್ದೆವೇನೋ? ಹತ್ತಾರು ಹೆಂಗಸರು ಸುತ್ತ ನಿಂತು ಬಡಿಸುವಾಗ, ಅವರೆಲ್ಲರ ಸೌಂದರ್ಯ ಮೈ ಮುಖಗಳಿಗೆ ರಾಚುವಾಗ... ಆಗಲೂ ತನ್ನ ನಿಗ್ರಹ ತನ್ನ ಕೈಯಲ್ಲೇ ಇರುವಂತೆ ಮಾಡಿಕೊಳ್ಳಬೇಕು ಎಂಬ ಒಂದೇ ಒಂದು ಆಸೆಗಾಗಿ ಆ ನಗ್ನ ಮುನಿ ಎಷ್ಟೊಂದು ವರ್ಷ ಇಡೀ ದೇಹವನ್ನು ದಂಡಿಸಿರಬೇಕು? What a foolish fellow. ನಿಗ್ರಹ ಬಟ್ಟೆ ಹಾಕಿಕೊಂಡೇ ಸಾಧಿಸಬಹುದಾಗಿತ್ತು. ಇಷ್ಟಕ್ಕೂ ನಿದ್ರೆ, ನೀರಡಿಕೆ, ಹಸಿವು, ಬೆಳಕುಗಳನ್ನೆಲ್ಲ ದೇಹಕ್ಕೆ ಪೂರೈಸುವ ಮನುಷ್ಯ ಅದೇಕೆ ಕಾಮವನ್ನು ಮಾತ್ರ ಕಟ್ಟಿ ಹಾಕಬಯಸುತ್ತಾನೆ. ಅದು ಕಟ್ಟಿ ಹಾಕಿದಷ್ಟೂ ಒದರುತ್ತದೆ. ಬಿಚ್ಚದೆ ಹೋದರೆ ಕಟ್ಟಿದಲ್ಲೇ ನಾಯಿಯಂತೆ ಸತ್ತು ಹೋಗುತ್ತದೆ. ಸುಮ್ಮನೆ ಬಿಚ್ಚಿ ಬೀದಿಗೆ ಬಿಟ್ಟರೆ ಬೀಡಾಡಿಯಾಗುತ್ತದೆ. ಬುದ್ಧಿವಂತಿಕೆಯಿರುವುದು ಕಟ್ಟುವುದರಲ್ಲೂ ಅಲ್ಲ. ಬಿಚ್ಚುವುದರಲ್ಲೂ ಅಲ್ಲ...

ಬಿಚ್ಚಿದ್ದಾಗಲೂ ಬೀಡಾಡಿಯಾಗದೆ ಇರುವುದರಲ್ಲಿ!

ಈ ಮಧ್ಯೆ ನನ್ನ ಮನೆಯ ಅಟ್ಟ ಸೇರಿ ಹೋಗಿದ್ದ ಹಳೆಯ ವೇದಾಂತದ ಪುಸ್ತಕಗಳನ್ನೆಲ್ಲ ಕೆಳಕ್ಕಿಳಿಸಿ ಧೂಳು ಕೊಡವುತ್ತಿದ್ದೇನೆ. ಅಂತೆಯೇ ರಾತ್ರಿಯ ಮೌನದಲ್ಲಿ ಒಬ್ಬನೇ ಕುಳಿತು ರಮಣ, ರಜನೀಶ್, ಹಟಯೋಗ, ನಚಿಕೇತನ ಉಪನಿಷತ್ತು ಇತ್ಯಾದಿಗಳನ್ನೆಲ್ಲ ಓದಿ ಟಠಿಛಿo ಮಾಡುತ್ತಿದ್ದೇನೆ. ಇದ್ಯಾವುದೂ ನನ್ನ ವೇದಾಂತೀ outlookನ ಪರಿಣಾಮವಲ್ಲ. ಹೊಸ ಪತ್ರಿಕೆಯ ಬರವಣಿಗೆಗೆ ಸಾಮಗ್ರಿ ಹುಡುಕುತ್ತಿರುವ ಪ್ರತಿಫಲ. ಪುರಾಣಗಳಿಂದ ಹಿಡಿದು ಪೋಲಿ ಜೋಕುಗಳ ತನಕ ಎಲ್ಲವನ್ನೂ ಓದಬೇಕು. ಪತ್ರಿಕೋದ್ಯಮಿಯಾಗಿರುವ ಅನಿವಾರ್ಯತೆಯೇ ಅಂತಹುದು. ಆತ ಎಲ್ಲವನ್ನೂ ತಿನ್ನಬೇಕು. ತಿಂದೂ ಬಾಯಿ ಶುದ್ಧವಿಟ್ಟುಕೊಳ್ಳಬೇಕು. ತಲೆಗೆಡದಂತೆ ನೋಡಿಕೊಳ್ಳಬೇಕು. ಎಂಥ ವೇದಾಂತಿಯ ಸಿದ್ಧಾಂತವನ್ನು ಓದಿದಾಗ್ಯೂ, ಅದರಲ್ಲೇ ತೇಲಿ ಮುಳುಗಿ ಈಸಿದಾಗ್ಯೂ-ಅದರಿಂದ ಅಂತರಂಗದ ಮಟ್ಟದಲ್ಲಿ influence ಆಗಬಾರದು ಅಂತ ನಿರ್ಧರಿಸಿಕೊಂಡು ಬಿಟ್ಟಿದ್ದೇನೆ. ಶ್ರದ್ಧೆಯಿಟ್ಟು ಓದಿದರೆ ರಮಣ ಮಹರ್ಷಿಯ ಪ್ರತಿ ಸಾಲೂ ಸತ್ಯವೆನಿಸಿಬಿಡುತ್ತದೆ. ಮಾರನೆಯ ರಾತ್ರಿ ರಜನೀಶ್‌ನನ್ನು ಕೈಗೆತ್ತಿಕೊಳ್ಳಿ. ರಮಣರಿಗೆ ತದ್ವಿರುದ್ಧದ ದಿಕ್ಕಿನಲ್ಲಿ ಮಾತಾನಾಡುವ ಆತ ಕೂಡ ಸರಿ ಎನ್ನಿಸಿಬಿಡುತ್ತಾನೆ. ಇನ್ನೊಂದು ದಿನ ರಾಮಕೃಷ್ಣ ಪರಮಹಂಸರ ಮಾತೇ ಸರಿ ಅನಿಸುತ್ತದೆ. ಹಾಗೆಯೇ ಜಿಡ್ಡು ಕೃಷ್ಣಮೂರ್ತಿ, ಯೂಜಿ ಕೃಷ್ಣಮೂರ್ತಿ ಕೂಡ ಅಷ್ಟರ ಮಟ್ಟಿಗೆ ಹೌದೆನಿಸುತ್ತದೆ. ಎಲ್ಲ ಓದಿ ಮುಗಿಸಿ ನಿಮ್ಮ ನಿಜದ ಬದುಕಿಗೆ ಅವರು ಹೇಳಿದ್ದನ್ನೆಲ್ಲ.... ಉಹುಂ ಯಾರೂ ನನ್ನ ಪರ್ಸನಲ್ ಬದುಕಿಗೆ 'ಗುರು'ವೆನಿಸುವುದಿಲ್ಲ.

ಏಕೆಂದರೆ, ಅದು ನನ್ನದು. ನಿಜಕ್ಕೂ ಪರ್ಸನಲ್ ಆದದ್ದು. ಅಲ್ಲಿರುವುದು ನಾನೇ. ನಾನೊಬ್ಬನೇ. ನನ್ನ ಕನಸುಗಳನ್ನು ನಾನೇ ಕಾಣಬೇಕು. ನನ್ನ ದಾರಿ ನಾನೇ ಹುಡುಕಬೇಕು. ನನ್ನ ಹೊಟ್ಟೆ ನೋವಿಗೆ ನಾನೇ ಅಜವಾನ ತಿನ್ನಬೇಕು. ಅಲ್ಲಿ ಕನಸುಗಳದೊಂದೇ ಬೆಳಕು. ಈಗ್ಗೆ ಕೆಲವು ವರ್ಷಗಳ ಹಿಂದೆ ನಾನು ತುಂಬ ಇಷ್ಟ ಪಡುವ ಲೇಖಕ ಸತ್ಯಕಾಮರನ್ನು ಕೈ ಹಿಡಿದು ಕೇಳಿದ್ದೆ.

''ಗುರುವೆಂದರೇನು?''

''ಅದು ಹೆಗಲ ಮೇಲಿನ ಹೆಣ! ಅದನ್ನು ಇಳಿಸಲೇಬೇಕು. ಗುರಿ ತಲುಪಲು ಗುರುವೆಂಬುವವನು ಮೆಟ್ಟಿಲಾಗುತ್ತಾನೆಯೇ ಹೊರತು, ಅವನೇ ಗುರಿಯಾಗಬಾರದು. ಅದು ನಿಂತ ನೀರು. ಅದರೊಂದಿಗೆ ನೀನೂ ನಿಂತು ಮಲೆತು ಹೋಗಬಾರದು!'' ಅಂದಿದ್ದರು.
ಇವತ್ತಿಗೂ ಅವರ ಮಾತು ಸತ್ಯವೆನಿಸುತ್ತದೆ. ನನ್ನ ಬದುಕಿನ ಧಡೋಂಧಡಕಿಯಲ್ಲಿ, ಏರುಪೇರಿನ ಜೈಂಟ್ ವೀಲಿನಲ್ಲಿ, ಹಳಿ ತಪ್ಪಿದ ರೈಲಿನಲ್ಲಿ, ದಾರಿ ಕಾಣದ ಕಾವಳದಲ್ಲಿ ಈ ತನಕ ನನಗೆ ಗೆಳೆಯರು ಸಿಕ್ಕಿದ್ದಾರೆ. ಗೆಳತಿಯರು ಸಿಕ್ಕಿದ್ದಾರೆ. ಅಣ್ಣಂದಿರು, ತಮ್ಮಂದಿರು, ತಂಗಿಯರು, ಅಕ್ಕಂದಿರು, ಪರಿಚಿತರು... ಎಲ್ಲ ಸಿಕ್ಕಿದ್ದಾರೆ. ಸಿಕ್ಕದವರು ಇಬ್ಬರೇ...

ಇನ್ನೊಬ್ಬ ತಾಯಿ ಮತ್ತು ಗುರು!

ಈ ಮಧ್ಯೆ ನಾನು ಹುಡುಕುವುದನ್ನೂ ಬಿಟ್ಟಿದ್ದೇನೆ. ಲೌಕಿಕವಾದ ಸಂಕಟಗಳಿಗೆ-ಸಮಸ್ಯೆಗಳಿಗೆ ಗೆಳೆಯರಲ್ಲಿ ಪರಿಹಾರ ಹುಡುಕುತ್ತೇನೆ. ಒಳ ಬದುಕಿನ ಕ್ಲಿಷ್ಟ ಸಮಸ್ಯೆಗಳಿಗೆ ಅನುಭವದಲ್ಲಿ ಪರಿಹಾರ ಹುಡುಕಿಕೊಳ್ಳುತ್ತೇನೆ. ನನ್ನ ಕನಸು-ಕನವರಿಕೆಗಳನ್ನೆಲ್ಲ ನಿವಂದಿಗೆ ಹೇಳಿಕೊಳ್ಳುತ್ತೇನೆ. ಪ್ರತಿ ಬುಧವಾರ ಕಿಟಕಿ ಬಾಗಿಲುಗಳನ್ನೆಲ್ಲ ಹಾಕಿ ಒಬ್ಬನೇ ಕುಳಿತು ಬರೆದು ಮುಗಿಸುವ ಈ 'ಖಾಸ್‌ಬಾತ್‌' ನನ್ನಲ್ಲಿ ಎಂಥ ದೊಡ್ಡ ರಿಲೀಫ್ ಸೃಷ್ಟಿಸುತ್ತದೆಂದರೆ-ಆಮೇಲಿನ ಮೂರು ದಿನ ನಾನು ದೈತ್ಯನಂತೆ ದಣಿವಿಲ್ಲದೆ ದುಡಿಯುತ್ತೇನೆ. ತಪ್ಪೋ, ಒಪ್ಪೋ, ತಬ್ಬಲಿತನವೋ ಮತ್ತೊಂದೋ ಹೇಳಿಕೊಂಡಷ್ಟೂ ಮನಸ್ಸು ನಿರಾಳವಾಗುತ್ತದೆ. ಬಿಚ್ಚಿಟ್ಟಷ್ಟೂ ಮೈ ಹಗುರಾಗುತ್ತದೆ. ಅದಕ್ಕೆಂದೇ 'ಖಾಸ್‌ಬಾತ್-96’ ಪುಸ್ತಕದ ಮೊದಲ ಪುಟದಲ್ಲಿ ನಾನು ಈ ಸಾಲು ಬರೆದದ್ದು.....

''ಬೆತ್ತಲೆಯಾದಷ್ಟೂ ಮನುಷ್ಯ ಮಾನವಂತನಾಗುತ್ತಾನೆ''

ಅದು ದಿಗಂಬರ ಜೈನ ಸನ್ಯಾಸಿಯ ಬೆತ್ತಲೆಯಲ್ಲ ಎಂಬುದು ನಿಮಗೀಹೊತ್ತಿಗೆ ಮನವರಿಕೆಯಾಗಿದ್ದರೆ ಸಾಕು.

-ನಿಮ್ಮವನು ಆರ್.ಬಿ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 24 September, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books