Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಭೂತಕಾಲ ಎಂಬ ಮಚ್ಚಿನ ಏಟಿಗೆ ಯಾವತ್ತೂ ಕೊರಳು ಕೊಡಬೇಡಿ

ಅದೇನು ಕರ್ಮ ಮಾಡಿ ಹುಟ್ಟಿದ್ದೇನೋ? ಮನೆಯಲ್ಲಿ ನೆಮ್ಮದಿ ಎಂಬುದೇ ಇಲ್ಲದಂತಾಗಿ ಹೋಗಿದೆ ಗುರೂ.. ಒಬ್ಬರ ಮುಖ ನೋಡಿದರೆ ಮತ್ತೊಬ್ಬರಿಗೆ ಆಗುವುದಿಲ್ಲ ಎಂಬ ಪರಿಸ್ಥಿತಿ ಬಂದು ಮನೆಯೊಳಗೆ ಕಾಲಿಡಲೂ ಇಷ್ಟವಾಗದ ಸ್ಥಿತಿ ಬಂದುಬಿಟ್ಟಿದೆ ಎಂದು ನಿಮ್ಮ ಬಳಿ ಯಾರಾದರೂ ಹೇಳಿಕೊಳ್ಳುತ್ತಿದ್ದರೆ ಅಥವಾ ನೀವೇ ನಿಮ್ಮ ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದರೆ ಒಂದು ಸಲ ತಿರುಗಿ ನೋಡಿ. ಅಂತಹ ಮನೆಯಲ್ಲಿ ಭೂತಕಾಲವನ್ನೇ ಹಿರಿದು ಮಚ್ಚನ್ನಾಗಿ ಮಾಡಿಕೊಂಡವರು, ಅದನ್ನೇ ಮಸೆಯುತ್ತಿರುವ ಯಾವುದಾದರೂ ಒಬ್ಬ ವ್ಯಕ್ತಿ ಇದ್ದೇ ಇರುತ್ತಾರೆ. ಅದು ಗಂಡಸೇ ಇರಬಹುದು, ಹೆಂಗಸೇ ಇರಬಹುದು. ಒಟ್ಟಿನಲ್ಲಿ ಭೂತಕಾಲವನ್ನು ಮಚ್ಚನ್ನಾಗಿ ಪರಿವರ್ತಿಸಿಕೊಂಡು ಸಿಕ್ಕಸಿಕ್ಕಂತೆ ಬೀಸುವವರು ಇದ್ದೇ ಇರುತ್ತಾರೆ.

ಹಾಗಂತ ಭೂತಕಾಲವನ್ನು ಮಚ್ಚನ್ನಾಗಿ ಪರಿವರ್ತಿಸಿ ಸಿಕ್ಕಸಿಕ್ಕವರ ಮೇಲೆಲ್ಲ ಬೀಸುತ್ತಾರಲ್ಲ? ಅವರೇನೂ ಕೆಟ್ಟವರು ಅಂತಲ್ಲ. ಆದರೆ ಅವರು ಸಿಕ್ಕಸಿಕ್ಕವರ ಮೇಲೆಲ್ಲ ಮಚ್ಚು ಬೀಸಲು ಮನೆಯಲ್ಲಿದ್ದವರೂ ಕಾರಣರಾಗಿರುತ್ತಾರೆ. ಅವರು ಇಂತಹ ಮಚ್ಚು ಹಿಡಿದುಕೊಂಡ ಶುರುವಿನಲ್ಲೇ ಕೂತು ವಿಷಯ ಇತ್ಯರ್ಥ ಮಾಡಿಕೊಳ್ಳುವ ಜಾಣ್ಮೆ ಇಲ್ಲದೆ ಹೋದರೆ ಅಂತಹ ಮನೆ ನಿತ್ಯ ನರಕ ಎಂದೇ ಅರ್ಥ. ಅಂದ ಹಾಗೆ ಅವರು ಈ ರೀತಿ ಮಚ್ಚು ಬೀಸಲು ಇಂತಹ ವಿಷಯಗಳೇ ಆಗಬೇಕೆಂದಿಲ್ಲ. ಕಾಲ ಕಾಲಕ್ಕೆ ಉದ್ಭವವಾಗುವ ಸಮಸ್ಯೆಗಳನ್ನು ಬಗೆಹರಿಸುವ ವಿವೇಕ ಇಲ್ಲದೇ ಹೋದರೆ ಸಣ್ಣಸಣ್ಣ ವಿಷಯಗಳೂ ಮನಸ್ಸೆಂಬ ಮಣ್ಣಿಗೆ ಬಿದ್ದು ಮೊಳಕೆ ಒಡೆಯುತ್ತವೆ.

ನೋಡನೋಡುತ್ತಿದ್ದಂತೆಯೇ ಹೆಮ್ಮರವಾಗಿ ಬೆಳೆದುಬಿಡುತ್ತವೆ. ಮುಂದೆ ಆ ಮರವನ್ನು ಕಡಿದು ಹಾಕಲು ನೀವು ಕೊಡಲಿಯನ್ನೇ ಹಿಡಿದುಕೊಳ್ಳಬೇಕು. ಅರ್ಥಾತ್ ಅಂತಹವರಿಂದ ದೂರವಾಗಬೇಕು. ಆದರೆ ಬಹಳ ಸಲ ನೀವು ಆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅನೇಕ ಸಲ ಈ ರೀತಿ ಭೂತಕಾಲದ ನೆನಪು ಎಂಬ ಮಚ್ಚನ್ನು ನಿಮ್ಮ ತಂದೆಯೋ, ತಾಯಿಯೋ, ಗಂಡ ಅಥವಾ ಹೆಂಡತಿಯೋ ಒಟ್ಟಿನಲ್ಲಿ ತೀರಾ ಬೇಕಾದವರೇ ಹಿಡಿದುಕೊಂಡು ನಿಂತಿರುತ್ತಾರೆ.

ನನ್ನ ಗೆಳೆಯನೊಬ್ಬನ ಮನೆಯಲ್ಲಿ ಇಂತಹದೇ ಮಚ್ಚಿನಾಟ ನಡೆಯುತ್ತಿತ್ತು. ಅವರಿವರಲ್ಲ, ಸ್ವತಃ ಅವನ ತಾಯಿಯೇ ಹಳೇ ವಿಷಯಗಳನ್ನೆಲ್ಲ ಕೆದಕುತ್ತಾ ಸೊಸೆಯ ಮೇಲೆ ರೇಗುತ್ತಿದ್ದಳು. ಅತ್ತ ತಾಯಿಯನ್ನು ಬಿಟ್ಟುಕೊಡಲಾಗದ, ಇತ್ತ ಹೆಂಡತಿಯನ್ನು ಬಿಟ್ಟು ಕೊಡಲಾಗದ ನನ್ನ ಗೆಳೆಯ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು ಎಂದು ತಿಳಿಯದೇ ಪರದಾಡುತ್ತಿದ್ದ. ಆತನ ಪರದಾಟ ನೋಡಲಾಗದೆ ನಾನೇ ಒಂದು ದಿನ ಸಮಸ್ಯೆಯ ಮೂಲ ಏನೆಂದು ಕೇಳಿದೆ. ಅದಕ್ಕಾತ, ನನಗೂ ಗೊತ್ತಾಗುತ್ತಿಲ್ಲ ಗುರೂ, ಒಟ್ಟಿನಲ್ಲಿ ಇದ್ದಕ್ಕಿದ್ದಂತೆ ಗಲಾಟೆ ಶುರುವಾಗುತ್ತದೆ. ಈ ಗಲಾಟೆಯ ಮೂಲ ಕಾರಣ ಏನು ಅಂತ ನೋಡಿದರೆ ತೀರಾ ಜುಜುಬಿ ಕಾರಣಗಳಿಗೆ ಶುರು ಆಗಿರುತ್ತದೆ. ನಿನ್ನ ಹೆಂಡತಿ ನನಗೆ ಹೊತ್ತಿಗೆ ಸರಿಯಾಗಿ ಬಡಿಸಲಿಲ್ಲ. ತಿಂದು ತಿಂದು ಅಹಂಕಾರ ಎಂಬುದು ನೆತ್ತಿಗೆ ಹತ್ತಿ ಹೋಗಿದೆ. ಅದಕ್ಕೇ ಈ ತರಹ ನಡೆದುಕೊಳ್ಳುತ್ತಾಳೆ ಅಂತ ತಾಯಿಯೋ, ಎಷ್ಟೇ ಕೆಲಸ ಮಾಡಿದರೂ ನಿಮ್ಮಮ್ಮನಿಗೆ ನನ್ನ ಮುಖ ಕಂಡರಾಗುವುದಿಲ್ಲ. ಇಲ್ಲಿರುವುದಕ್ಕಿಂತ ಸತ್ತು ಹೋಗುವುದೇ ಬೆಟರ್ರು ಅಂತ ಹೆಂಡತಿಯೋ ಅಥವಾ ಇದೇ ಮಾದರಿಯಲ್ಲಿ ಇನ್ಯಾರೋ ಒಬ್ಬರು ಗಲಾಟೆ ಶುರು ಹಚ್ಚಿಕೊಂಡಿರುತ್ತಾರೆ ಎಂದ. ಹೀಗೆ ಯಾರೋ ಒಬ್ಬರು ಬೀಸುವ ಮಚ್ಚಿನ ಹೊಡೆತ ಫೈನಲಿ ಬಂದು ಬೀಳುವುದು ನನ್ನ ಕೊರಳಿಗೆ. ಹೀಗಾಗಿ ತುಂಬ ಸಲ ಏನು ಮಾಡಬೇಕೋ ತಿಳಿಯದೆ ಮಂಕಾಗಿ ಬಿಡುತ್ತೇನೆ. ಆಫೀಸಿಗೆ ಹೋದರೆ ಅಲ್ಲಿನ ಒತ್ತಡವೂ ಸೇರಿ ಒಟ್ಟಿನಲ್ಲಿ ಯಾವ ಕೆಲಸವನ್ನೂ ನೆಟ್ಟಗೆ ಮಾಡಲಾಗದ ಸ್ಥಿತಿ ಬಂದಿದೆ ಅಂತ ಅಲವತ್ತುಕೊಂಡ.

ಆತ ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡ ಮೇಲೆ ಒಂದು ಉಪಾಯ ಹೇಳಿದೆ: ಗುರೂ, ಒಂದು ಕೆಲಸ ಮಾಡು. ನಿಮ್ಮ ಮನೆಯಲ್ಲಿರುವವರು ಮೊದಲು ಅನಗತ್ಯ ವಿಷಯಗಳ ಕುರಿತು ಮಾತನಾಡುವುದನ್ನು ಕಡಿಮೆ ಮಾಡುವಂತೆ ನೋಡಿಕೋ. ಸಮಸ್ಯೆ ಮುಕ್ಕಾಲು ಪಾಲು ಮುಗಿದು ಹೋಗುತ್ತದೆ. ಅಂದ ಹಾಗೆ, ಗಲಾಟೆ ಯಾರೇ ಶುರು ಮಾಡಬಹುದು. ಆದರೆ ಎದುರಿಗಿದ್ದವರು ಸುಮ್ಮನಿದ್ದು ಬಿಡಬೇಕು.ನಂತರ ಕ್ರಮಕ್ರಮೇಣ ಅಗತ್ಯವಿರುವ ವಿಷಯಗಳನ್ನು ಹೊರತುಪಡಿಸಿ ಬೇರೆ ಯಾವ ವಿಷಯಗಳ ಕುರಿತೂ ಮನೆಯಲ್ಲಿ ಹೆಚ್ಚಿನ ಚರ್ಚೆ ಆಗದಂತೆ ನೋಡಿಕೊಳ್ಳಬೇಕು.

ತುಂಬ ಮನೆಗಳಲ್ಲಿ ಏನಾಗುತ್ತದೆ ಅಂದರೆ ವಿನಾಕಾರಣ ಮಾತನಾಡುವವರ ಸಂಖ್ಯೆ ಜಾಸ್ತಿ ಇರುತ್ತದೆ. ನಾವಾಡುವ ಮಾತಿನಲ್ಲಿ ನಮ್ಮ ಹಿತ ಅಡಗಿದೆಯಾ? ನಮ್ಮ ಮನೆಯವರ ಹಿತ ಅಡಗಿದೆಯಾ? ಅನ್ನುವುದನ್ನು ಗಮನಿಸುವ ಪ್ರವೃತ್ತಿಯೇ ಕುಟುಂಬದ ಬಹುತೇಕ ಸದಸ್ಯರಿಗೆ ಇರುವುದಿಲ್ಲ. ನಾವಾಡುವ ಮಾತು ಎದುರಿಗಿದ್ದವರ eನವನ್ನು ಬೆಳೆಸದಿದ್ದರೆ, ನಮ್ಮ ಮನೆಗೆ ಒಳ್ಳೆಯದನ್ನು ಮಾಡದಿದ್ದರೆ ಅಂತಹ ಮಾತುಗಳನ್ನು ಆಡುವುದರಲ್ಲಿ ಅರ್ಥವೇ ಇಲ್ಲ. ಆದರೆ ಬಹಳ ಕುಟುಂಬಗಳಲ್ಲಿ ಒಂದು ವಿಷಯದ ಬಗ್ಗೆ ಅನಗತ್ಯ ಚರ್ಚೆ ಶುರುವಾಗುತ್ತದೆ. ಯಾರದೋ ಮದುವೆಗೆ ಹೋಗಿ ಬರಬೇಕು ಅಂತ ಒಬ್ಬರು ಹೇಳಿದರು ಅಂತಿಟ್ಟುಕೊಳ್ಳಿ. ಅವರು ಹಾಗೆ ಹೇಳುವುದೇ ತಡ, ಇನ್ಯಾರೋ ಮಧ್ಯೆ ಬಾಯಿ ಹಾಕಿ, ಅವರ ಮದುವೆಗಾ? ಆ ನನ್ನ ಮಕ್ಕಳ ಮದುವೆಗೆ ಹೋಗಿ ಏನು ಮಾಡುವುದಿದೆ? ನಮ್ಮ ಮನೆಯಲ್ಲಿ ಇಂತಹ ಪ್ರೋಗ್ರಾಮು ನಡೆದಿತ್ತಲ್ಲ? ಆಗ ಯಾರಾದರೂ ಇಣುಕಿ ಹಾಕಿದ್ರಾ? ಹೋಗಿ ಹೋಗಿ ಅವರ ಮನೆ ಮದುವೆಗೆ ಹೋಗಬೇಕು ಅನ್ನುತ್ತೀರಲ್ಲ? ಅಂದು ಬಿಡುತ್ತಾರೆ. ಸರಿ, ಮಾತು ಮಾತು ಮಥಿಸಿ ಅಮೃತ ಹುಟ್ಟುವ ಬದಲು ಹಾಲಾಹಲ ಮೇಲೇಳಲು ದಾರಿ ಮಾಡಿಕೊಟ್ಟಂತಾಗಿಬಿಡುತ್ತದೆ. ಅರೇಸ್ಕೀ, ಅವರು ಬರ‍್ಲಿಲ್ಲ ಅಂದರೆ ನಾವು ಹೋಗಬಾರದು ಅಂತ ಅರ್ಥಾನಾ? ಪಾಪ, ನಮ್ಮ ಮನೆ ಪ್ರೋಗ್ರಾಮು ನಡೆಯುವ ಟೈಮಿನಲ್ಲಿ ಅವರಿಗೆ ಹುಷಾರಿರಲಿಲ್ಲ. ಬರಲು ಸಾಧ್ಯವಾಗಲಿಲ್ಲ. ಹಾಗಂತ ನಾವೂ ಈಗ ಹೋಗದೇ ಇದ್ದರೆ ಏನರ್ಥ? ಅನ್ನುವ ರೇಂಜಿಗೆ ಚರ್ಚೆ ಬೆಳೆಯುತ್ತದೆ. ಆನಂತರ ಶುರು ಆಗುವುದು ಫುಲ್ಲು ಭೂತಕಾಲದ ಮಚ್ಚಿನೇಟು. ಇವತ್ತು ಅವರ ಮದುವೆಗೆ ಹೋಗಬೇಕು ಅಂತ ಹೇಳ್ತೀಯಲ್ಲ? ಅವರು ಏನು ಮಾಡಿದ್ರು ಗೊತ್ತಾ? ಇಪ್ಪತ್ತು ವರ್ಷದ ಹಿಂದೆ ಅವರು ಆಡಿದ ಮಾತನ್ನು ನೆನಪಿಸಿಕೊಂಡರೆ ಈಗಲೂ ನನ್ನ ಮೈ ಉರಿಯುತ್ತದೆ. ಅದಕ್ಕಾಗೇ ನಾನು ಹೇಳಿದ್ದು. ಹಳೆಯದನ್ನು ಮರೆತು ಬಾ ಅಂದ ಕೂಡಲೇ ಹೋಗಿ ಬಿಟ್ಟರೆ ಅದಕ್ಕೇನಾದರೂ ಮರ್ಯಾದೆ ಇರುತ್ತದೆಯೇ? ಅಂತ ಒಬ್ಬರು ಹೇಳುತ್ತಾರೆ. ಮಾತು ಇದೇ ಧಾಟಿಯಲ್ಲಿ ನಡೆಯುತ್ತಾ ನಡೆಯುತ್ತಾ, ಇಡೀ ಮನೆಯ ಸದಸ್ಯರನ್ನು ಒಳಗೆ ಸೆಳೆದುಕೊಳ್ಳುತ್ತಾ, ಫೈನಲಿ ಎಲ್ಲರ ಮನಸ್ಸು ಕದಡಿ ಹೋಗುವಂತಾಗಿ ಬಿಡುತ್ತದೆ.

ಅಂದ ಹಾಗೆ ಮನಸ್ಸು ಈ ಪರಿ ಕದಡಲು ಕಾರಣವಾಗಿದ್ದು ಏನು ಅಂತ ನೋಡಿದರೆ ತೀರಾ ಸಣ್ಣ ವಿಷಯ. ಕಡ್ಡಿಯೇ ಗುಡ್ಡವಾಗುವುದು ಅನ್ನುವುದು ಇದಕ್ಕೇನೇ. ಹೀಗಾಗಿ ಮನೆಯಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತಾಪವಾದರೆ ಅದು ಚರ್ಚೆಯ ಮಟ್ಟಕ್ಕೆ ಬೆಳೆಯದಂತೆ ನೋಡಿಕೊಳ್ಳಿ. ಒಂದು ವೇಳೆ ಚರ್ಚೆ ಅನಿವಾರ್ಯ ಅನ್ನುವಂತಹದಾಗಿದ್ದರೆ ಅದು ನಿಮ್ಮ ನಿಮ್ಮ ಮನೆಯ ಹಿತ ಕಾಪಾಡುವ ವಿಷಯವಾ ಅನ್ನುವುದನ್ನು ಮೊದಲು ಕನ್‌ಫರ್ಮ್ ಮಾಡಿಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಮನೆಯಲ್ಲಿ ಯಾವುದೇ ಆರೋಗ್ಯಕರ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿರಲಿ. ಅಂತಹ ಚರ್ಚೆ ಆರಂಭವಾದಾಗ ಎಲ್ಲರೂ ಜತೆ ಕೊಡಿ. ಒಳ್ಳೆಯ ವಿಷಯದ ಬಗ್ಗೆ ಚರ್ಚೆ ನಡೆದಾಗ ಮನೆಯಲ್ಲಿರುವ ಎಲ್ಲರಿಗೂ ಒಂದು ರೀತಿಯ ಮುದ ಸಿಗುತ್ತದೆ. ಏನೋ ಹೊಸತನ್ನು ತಿಳಿದುಕೊಂಡೆವು ಎಂಬ ತೃಪ್ತಿ ಇರುತ್ತದೆ. ತಿಳಿದುಕೊಳ್ಳುವ ವಿಷಯ ಬಂದಾಗ ಇಂತದೇ ಅಂತಲ್ಲ. ಆರೋಗ್ಯ ರಕ್ಷಣೆಯ ವಿಷಯದಿಂದ ಹಿಡಿದು, ಕುಟುಂಬದ ಶಕ್ತಿ ಹೆಚ್ಚು ಮಾಡುವ ತನಕ ಯಾವುದೇ ವಿಷಯ ಇರಬಹುದು. ಒಟ್ಟಿನಲ್ಲಿ ನಿಮ್ಮ ಚರ್ಚೆ ಅಗತ್ಯದ ವಿಷಯಗಳನ್ನೇ ಕೇಂದ್ರೀಕರಿಸಿಕೊಂಡಿರಲಿ. ಅನಗತ್ಯ ವಿಷಯಗಳ ಪ್ರಸ್ತಾಪ ಮಾಡಿ ಯಾರಾದರೂ ಕೈಲಿ ಭೂತಕಾಲ ಎಂಬ ಮಚ್ಚು ಹಿಡಿದುಕೊಳ್ಳಲು ಯತ್ನಿಸಿದರೋ ಅಂತಹ ಮಾತಿಗೆ ತಕ್ಷಣವೇ ಪೂರ್ಣ ವಿರಾಮ ಹಾಕಿ. ಮೌನ ಧರಿಸಿಬಿಡಿ. ಮಚ್ಚು ಬೀಸುವವರು ಮತ್ತೆ ಮತ್ತೆ ಇಂತಹ ಪ್ರಯತ್ನ ಮಾಡಿದರೂ ನೀವು ಮಾತ್ರ ದೊಡ್ಡ ಮಟ್ಟದ ಪ್ರತಿಕ್ರಿಯೆ ನೀಡದೆ ನಿಮ್ಮ ಪಾಡಿಗೆ ಎಂಬಂತೆ ನೀವಿದ್ದು ಬಿಡಿ. ಎಲ್ಲರೂ ಖುಷಿ ಖುಷಿಯಾಗಿರುವ ಕಾಲದಲ್ಲಿ ಪ್ರತಿಯೊಬ್ಬರಿಗೂ ಈ ಕುರಿತಂತೆ ಟಿಪ್ಸ್ ಕೊಡಿ. ಇಂತವರನ್ನು ಕಂಡರೆ ನಿಮಗಾಗುವುದಿಲ್ಲ ಎಂದರೆ ಅನಗತ್ಯವಾಗಿ ವಾದಕ್ಕಿಳಿಯಲೇಬೇಡಿ. ನಿಮ್ಮ ಪಾಡಿಗೆ ನೀವಿದ್ದು ಬಿಡಿ ಎಂದು ಸ್ಪಷ್ಟವಾಗಿ ಹೇಳಿ.

ನನ್ನ ಪ್ರಕಾರ, ಸಣ್ಣ ಸಣ್ಣ ವಿಷಯಗಳಿಗೆ ಪ್ರತಿಕ್ರಿಯಿಸುವುದಕ್ಕಿಂತ ಅಪಾಯಕಾರಿಯಾದ ಚಾಳಿ ಮತ್ತೊಂದಿಲ್ಲ. ಅದಕ್ಕೇ ದೊಡ್ಡವರು, ಮಾತು ಬೆಳ್ಳಿ ಮೌನ ಬಂಗಾರ ಅಂತ ಹೇಳಿರುವುದು. ಒಂದು ಸಲ ನೀವು ಮೌನಕ್ಕೆ ಹೆಚ್ಚಿನ ಮಹತ್ವ ಕೊಟ್ಟು ನೋಡಿ. ಮನೆಯಲ್ಲೇ ಅಂತಲ್ಲ. ಹೊರಜಗತ್ತಿನಲ್ಲಿ ಎದುರಾಗುವ ತುಂಬ ಸಮಸ್ಯೆಗಳು ತಂತಾನೇ ನಿವಾರಣೆಯಾಗುತ್ತವೆ.ಅಥವಾ ಅವು ಹತ್ತಿರ ಸುಳಿಯಲೇ ಅಂಜುತ್ತವೆ.

ಯಾಕೆಂದರೆ ಮಾತು ಎಂಬುದು ತನ್ನನ್ನು ಬೆಳೆಸಲು ಅಗತ್ಯವಾದ ಗೊಬ್ಬರ, ನೀರನ್ನು ಬೇಡುತ್ತದೆ. ಅನಗತ್ಯವಾದ ಮಾತಿಗೆ ನೀವು ಗೊಬ್ಬರ, ನೀರು ಹಾಕಿದರೆ ಅದು ಬೆಳೆಯುವುದಷ್ಟೇ ಅಲ್ಲ, ಅದರ ರೆಂಬೆ ಕೊಂಬೆಗಳು ನಿಮ್ಮ ನೆತ್ತಿಯ ಮೇಲೇ ಬೀಳುತ್ತವೆ. ಅದೇ ಕಾಲಕ್ಕೆ ಅಗತ್ಯವಾದ, ನಿಮ್ಮನ್ನು ಬೆಳೆಸುವ ಮಾತಿಗೆ ನೀರು, ಗೊಬ್ಬರ ಹಾಕಿದರೆ ಪುಷ್ಟಿಯಾಗಿ ಬೆಳೆದು ನೆರಳು ಕೊಡುತ್ತದೆ. ಫಲ ನೀಡುತ್ತದೆ. ಇದಕ್ಕೆ ಬೇಕಿರುವುದೆಂದರೆ ವಿವೇಚನೆ ಮಾತ್ರ. ಯಾವ ಮಾತು ಅನಗತ್ಯವಾದುದು, ಯಾವುದು ಅಗತ್ಯವಾದುದು ಎಂಬ ತಿಳಿವಳಿಕೆ ನಿಮ್ಮಲ್ಲಿದ್ದಾಗ ಎದುರಿಗಿದ್ದವರು ತಮ್ಮ ಪಾಡಿಗೆ ತಾವಿರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಒಂದು ಸಲ ಅವರು ತಮ್ಮ ಪಾಡಿಗೆ ತಾವಿರುವುದನ್ನು ಪ್ರಾಕ್ಟೀಸು ಮಾಡಿದರೆ ಅಥವಾ ಅವರಿಗೆ ಪ್ರಾಕ್ಟೀಸಾಗುವಂತೆ ನೀವು ನೋಡಿಕೊಂಡರೆ ನಿಮ್ಮ ಮನೆ ಶಾಂತವಾಗಿರುತ್ತದೆ. ಎಲ್ಲರ ಮುಖದಲ್ಲಿ ನಗು ಅರಳುತ್ತಿರುತ್ತದೆ. ಯಾವಾಗ ಮನೆ,ಮನಸ್ಸು ಶಾಂತವಾಗಿರುತ್ತದೋ ಅಂತಹ ಮನೆಯೇ ನಂದನವನ ಆಗುತ್ತದೆ. ಹಾಗಾಗಲಿ ಅಂತ ನನ್ನ ಗೆಳೆಯನಿಗೆ ವಿವರಿಸಿದೆ.

ಇಂದಿನಿಂದಲೇ ಆ ಪ್ರಯೋಗ ಮಾಡುತ್ತೇನೆ ಗುರೂ ಅಂತ ಹೇಳಿ ಹೊರಟು ಹೋದ. ಅಂತಹ ಸಮಸ್ಯೆ ಕಾಡುತ್ತಿದ್ದರೆ ನೀವೂ ಆ ಪ್ರಯೋಗ ಮಾಡಬಹುದು. ಮಾಡಿ ನೋಡಿ. ಆಮೇಲೆ ಹೇಳಿ.

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 23 September, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books