Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಮಂತ್ರಿಗಳಿಗೆ ಪರೀಕ್ಷೆಯೇ ಬೇಡ ಎಂದರೆ ಸರ್ಕಾರ ತೇರ್ಗಡೆಯಾಗುವುದು ಹೇಗೆ?

ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿರುವ ಸಚಿವರು ಮತ್ತು ಶಾಸಕರ ಸಾಧನೆಯನ್ನು ಪ್ರತೀ ಮೂರು ತಿಂಗಳಿಗೊಮ್ಮೆ ಪರೀಕ್ಷೆಗೆ ಒಳಪಡಿಸುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ನಿರ್ಧಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪರಮೇಶ್ವರ್ ಈ ರೀತಿ ಸಚಿವರು ಹಾಗೂ ಶಾಸಕರ ಸಾಧನೆಯನ್ನು ಪ್ರತೀ ಮೂರು ತಿಂಗಳಿಗೆ ಒಮ್ಮೆ ಪರೀಕ್ಷೆಗೊಳಪಡಿಸುವುದಾಗಿ ಹೇಳಿದ್ದೇ ತಡ, ಕಾಂಗ್ರೆಸ್ ಪಕ್ಷದಲ್ಲೇ ಈ ಕುರಿತು ವಿರೋಧ ವ್ಯಕ್ತವಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಇಂತಹ ಮೌಲ್ಯಮಾಪನದ ಅಗತ್ಯವಿಲ್ಲ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕು ತಿಂಗಳಷ್ಟೇ ಆಗಿರುವುದರಿಂದ ಸಚಿವರ ಸಾಧನೆಯನ್ನು ಪರಾಮರ್ಶೆಗೊಳಪಡಿಸುವುದು ತರಾತುರಿಯ ಕ್ರಮವಾಗುತ್ತದೆ ಎಂಬುದು ಅವರ ಭಾವನೆ. ಆದರೆ ನನಗನ್ನಿಸುವ ಪ್ರಕಾರ ಇಂತಹ ಪರೀಕ್ಷೆಗೆ ಒಳಪಡಲು ಸಚಿವರಾಗಲೀ, ಶಾಸಕರಾಗಲೀ ಅಳುಕುವ ಅಗತ್ಯವೇನಿದೆ?

ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿದೆ ನಿಜ. ಅಷ್ಟರೊಳಗಾಗಿ ಇಡೀ ಕರ್ನಾಟಕವನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ ಎಂಬುದೂ ನಿಜ. ಯಾವುದೇ ಸರ್ಕಾರದಿಂದ ಜನ ಈ ಮಟ್ಟದ ಪವಾಡವನ್ನು ನಿರೀಕ್ಷೆ ಮಾಡುವುದಿಲ್ಲ ಎಂಬುದೂ ನಿಜ. ಗಮನಿಸಬೇಕಾದ ಸಂಗತಿ ಎಂದರೆ ಸಚಿವರ ಸಾಧನೆಯ ಪರಾಮರ್ಶೆ ವಿಷಯ ಹೊಸತೇನಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರಗಳಿದ್ದಾಗ, ಜನತಾದಳ ಅಧಿಕಾರದಲ್ಲಿದ್ದಾಗ, ಈ ಹಿಂದೆ ಅಸ್ತಿತ್ವದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರ ಸಾಧನೆಯ ಮೌಲ್ಯಮಾಪನ ಕಾರ್ಯ ನಡೆದಿತ್ತು. ಈಗ ಸಿದ್ಧರಾಮಯ್ಯನವರ ಸರ್ಕಾರದ ಸಚಿವರ ಸಾಧನೆಯ ಕುರಿತೂ ಪರೀಕ್ಷೆ ನಡೆಯಬೇಕು. ಅದರಲ್ಲಿ ತಪ್ಪೇನಿದೆ? ಪರೀಕ್ಷೆ ಎಂದರೆ ವಾರ್ಷಿಕ ಪರೀಕ್ಷೆಯೇ ಆಗಬೇಕೇ? ಇದು ಸೆಮಿಸ್ಟರ್ ಯುಗ. ಹೀಗಾಗಿ ಮೇಲಿಂದ ಮೇಲೆ ಸಚಿವರ ಮತ್ತು ಶಾಸಕರ ಸಾಧನೆಯ ಪರಾಮರ್ಶೆ ನಡೆದರೆ ಒಂದು ಎಚ್ಚರಿಕೆಯಾದರೂ ಇರುತ್ತದೆ. ಕೆಲಸ ಮಾಡಬೇಕೆನ್ನುವ ಉಮ್ಮೇದಿಯಾದರೂ ಹುಟ್ಟುತ್ತದೆ.

ಆದರೆ ಇವತ್ತು ಪರಮೇಶ್ವರ್ ಇಂತಹದೊಂದು ಮಾತನಾಡಿದ ಕೂಡಲೇ, ಇದು ತೀರಾ ಅವಸರದ ಕ್ರಮವಾಯಿತು ಎಂಬಂತೆ ಮಾತನಾಡಿದರೆ ಸರ್ಕಾರ ಟೇಕ್ ಆಫ್ ಆಗುವುದು ಹೇಗೆ? ಇವತ್ತು ನಿಜ ಹೇಳಬೇಕೆಂದರೆ ಸಿದ್ಧರಾಮಯ್ಯನವರ ಸಚಿವ ಸಂಪುಟದಲ್ಲಿರುವ ಬಹುತೇಕ ಸಚಿವರು ನೆಟ್ಟಗೆ ಕೆಲಸ ಮಾಡುತ್ತಿಲ್ಲ. ಒಬ್ಬೊಬ್ಬರನ್ನೇ ತೆಗೆದುಕೊಳ್ಳುತ್ತಾ ಹೋಗಿ. ರಾಜ್ಯದ ಬಹುತೇಕ ಭಾಗಗಳಲ್ಲಿ ಈ ಸಲ ಅತಿವೃಷ್ಟಿಯಾಗಿದೆ. ಇನ್ನೂ ಕೆಲವು ಕಡೆ ಅನಾವೃಷ್ಟಿಯಾಗಿದೆ. ಸಿದ್ಧರಾಮಯ್ಯನವರೂ ಸೇರಿದಂತೆ ಅವರ ಸಂಪುಟದ ಎಷ್ಟು ಮಂದಿ ಸಚಿವರು ನೆರೆ ಬಂದ ಜಾಗಕ್ಕೆ, ಬರ ಬಿದ್ದ ಜಾಗಕ್ಕೆ ಹೋಗಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ? ಇದೇ ರೀತಿ ರಾಜ್ಯದ ನಾಲ್ಕೈದು ಜಿಲ್ಲೆಗಳಲ್ಲಿ ಅಡಿಕೆಗೆ ಕೊಳೆ ರೋಗ ಬಂದು ರೈತ ಕಂಗಾಲಾಗಿದ್ದಾನೆ. ಹತ್ತಾರು ಜಿಲ್ಲೆಗಳಲ್ಲಿ ತೆಂಗು ಬೆಳೆ ನಾಶವಾಗಿ ರೈತ ಸಂಕಷ್ಟದಲ್ಲಿದ್ದಾನೆ. ಆತನಿಗೆ ಪರಿಹಾರ ನೀಡುವ ಕೆಲಸ ಸರ್ಕಾರದಿಂದ ಆಗಿದೆಯೇ? ಇದೇ ಸಿದ್ಧರಾಮಯ್ಯ ಹಾಗೂ ಪರಮೇಶ್ವರ್ ವಿರೋಧ ಪಕ್ಷದಲ್ಲಿದ್ದಾಗ ಮಂಗಳೂರಿಗೆ ಹೋಗಿ ಭರ್ಜರಿ ಭಾಷಣ ಮಾಡಿ ಅಡಿಕೆ ಬೆಳೆಗಾರರಿಗೆ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿ ಬಂದರು.

ಇವತ್ತು ಅವರದೇ ಸರ್ಕಾರವಿದೆ. ರೈತರಿಗೆ ಪರಿಹಾರ ಎಂಬುದು ಇನ್ನೂ ಮರೀಚಿಕೆ. ಆಳಕ್ಕೆ ಹೋಗಿ ನೋಡಿದರೆ ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರಿಗೆ ಪರಿಹಾರ ಕೊಡುವುದಿಲ್ಲ ಎಂದು ಹೇಳಿ ತುಂಬ ದಿನಗಳೇ ಆಗಿಹೋಗಿವೆ. ಆದರೆ ಸಿದ್ಧರಾಮಯ್ಯ ಸಂಪುಟದಲ್ಲಿರುವ ಸಚಿವರು ಇನ್ನೂ ಬರುತ್ತೆ, ಇನ್ನೇನು ಸದ್ಯದಲ್ಲೇ ಪರಿಹಾರ ಸಿಗುತ್ತೆ, ಒಂಬೈನೂರಾ ಎಪ್ಪತ್ತೈದು ಕೋಟಿ ರುಪಾಯಿ ಕೊಡಿ ಅಂದಿದ್ದೇವೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡುವುದಾಗಿ ಹೇಳಿದೆ ಅಂತ ಪುಂಗಲು ಹೊಡೆಯುತ್ತಾ ಕುಳಿತಿದ್ದಾರೆ. ಹೀಗೆ ಪುಂಗಲು ಹೊಡೆಯುವ ಬದಲು, ಕೇಂದ್ರ ಸರ್ಕಾರವನ್ನು ಕಾಯುವ ಬದಲು ರಾಜ್ಯ ಸರ್ಕಾರವೇ ತನ್ನ ನಿಧಿಯಿಂದ ಇನ್ನೂರು-ಮುನ್ನೂರು ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿ ನೊಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ತಕ್ಕ ಮಟ್ಟಿನ ಪರಿಹಾರವನ್ನು ಕೊಟ್ಟರೆ ಏನಾಗುತ್ತಿತ್ತು. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಇದುವರೆಗೂ ಸಿದ್ಧರಾಮಯ್ಯ ಚಕಾರ ಎತ್ತುತ್ತಿಲ್ಲ.

ಇನ್ನು ರಾಜ್ಯದ ರಸ್ತೆಗಳ ಸ್ಥಿತಿಯನ್ನೇ ನೋಡಿ. ಬೆಂಗಳೂರಿನಿಂದ ಹಿಡಿದು ಬೀದರ್ ತನಕ ಯಾವುದೇ ಭಾಗಕ್ಕೆ ಹೋಗಿ ನೋಡಿದರೂ ಹಳ್ಳ-ಕೊಳ್ಳಗಳ ಮಧ್ಯೆ ರಸ್ತೆಯನ್ನು ಹುಡುಕಬೇಕಾದ ಪರಿಸ್ಥಿತಿ. ಕೇಳಿದರೆ ಮಳೆಗಾಲ ಮುಗಿಯಲಿ ಒಂದು ಸಾವಿರ ಕೋಟಿ ರುಪಾಯಿ ರಿಲೀಸು ಮಾಡುತ್ತೇವೆ. ಗುಂಡಿಗಳನ್ನೆಲ್ಲ ಮುಚ್ಚುತ್ತೇವೆ ಅಂತ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಹೇಳುತ್ತಾರೆ. ಗುಂಡಿ ಮುಚ್ಚಲು ಒಂದು ಸಾವಿರ ಕೋಟಿ ರುಪಾಯಿ ಬಿಡುಗಡೆ ಮಾಡಿದರೆ ಈ ಪೈಕಿ ಎಷ್ಟು ಹಣ ರಾಜಕಾರಣಿಗಳು, ಅಧಿಕಾರಿಗಳ ಜೇಬಿಗೆ ಸೇರುತ್ತದೆ ಅನ್ನುವುದನ್ನು ಅರಿಯದಷ್ಟು ದಡ್ಡರೇನಲ್ಲ ನಮ್ಮ ಜನ. ಹೀಗೆ ಇಡೀ ರಾಜ್ಯಾದ್ಯಂತ ರಸ್ತೆಗಳ ಸ್ಥಿತಿ ಹೆದರಿಕೆ ಹುಟ್ಟಿಸುವಂತಿದೆ. ಇಂತಹ ಕೆಟ್ಟ ರಸ್ತೆಗಳನ್ನು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿದ್ಧರಾಮಯ್ಯ ಗುಡುಗಿದ್ದರೂ ಸಾಕಿತ್ತು.

ಯಾಕೆಂದರೆ ಬೆಂಗಳೂರಿನ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ನಿರ್ಮಾಣಕ್ಕಾಗಿ ಕಳೆದ ಐದು ವರ್ಷಗಳಲ್ಲಿ ಖರ್ಚು ಮಾಡಿದ ಹಣದ ವಿವರ ನೋಡಿದರೆ ಗಾಬರಿಯಾಗುತ್ತದೆ. ಇರುವ ರಸ್ತೆಯಿಂದ ಹಿಡಿದು ಇಲ್ಲದ ರಸ್ತೆಯ ತನಕ ಎಲ್ಲ ರಸ್ತೆಗಳ ಅಭಿವೃದ್ಧಿಯ ಹೆಸರಿನಲ್ಲಿ ಬಹುತೇಕ ಶಾಸಕರು ದುಡ್ಡು ದೋಚಿ ಹಾಕಿದ್ದಾರೆ. ಇಷ್ಟು ಪ್ರಮಾಣದ ಹಣ ಖರ್ಚು ಮಾಡಿದರೂ ರಸ್ತೆಗಳು ಇಷ್ಟು ಕೆಟ್ಟ ಸ್ಥಿತಿಯಲ್ಲಿವೆ ಎಂದರೆ ಅದಕ್ಕೆ ಗುತ್ತಿಗೆದಾರರೇ ಹೊಣೆ. ಅವರಿಂದಲೇ ದಂಡ ವಸೂಲು ಮಾಡುತ್ತೇವೆ ಅಂತ ಹೇಳಿದ್ದರೆ ನಮ್ಮ ರಾಜಕಾರಣಿಗಳ ನಿಜ ಬಣ್ಣ ಬಯಲಾಗಿ ಬಿಡುತ್ತಿತ್ತು. ಆದರೆ ಆ ಕೆಲಸ ಮಾಡುವ ಬದಲು ಗುಂಡಿ ಮುಚ್ಚಲು ಸಾವಿರ ಕೋಟಿ ಬಿಡುಗಡೆ ಮಾಡುತ್ತಾರೆ. ಆ ಹಣವೂ ಗುಂಡಿಗೇ ಹೋಗುತ್ತದೆ. ರಸ್ತೆ ಉದ್ಧಾರವಾಗುವುದು ದೂರದ ಮಾತು. ಇನ್ನು ಕಂದಾಯ ಖಾತೆಯನ್ನು ತೆಗೆದುಕೊಳ್ಳಿ. ಇಂತಹ ಮಹತ್ವದ ಖಾತೆಯನ್ನು ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ನೀಡಲಾಗಿದೆ. ಅವರು ಸಜ್ಜನ ನಾಯಕ ಎಂಬುದು ಬೇರೆ ಮಾತು. ಆದರೆ ರಾಜ್ಯದ ಬಹುತೇಕ ಭಾಗಗಳಲ್ಲಿ ನೆರೆ ಬಂದಿದೆ, ಬರ ಬಿದ್ದಿದೆ. ಆದರೆ ಕಾಲ ಕಾಲಕ್ಕೆ ಏನೇನು ಕ್ರಮ ಕೈಗೊಳ್ಳಲಾಗುತ್ತಿದೆ ಅಂತ ಕೇಳಬೇಕೆಂದರೆ ಸಂಬಂಧಪಟ್ಟ ಸಚಿವರೇ ಸಿಗುವುದಿಲ್ಲ.

ಕೇಂದ್ರದ ಅಧ್ಯಯನ ತಂಡ ಸದ್ಯದಲ್ಲೇ ರಾಜ್ಯಕ್ಕೆ ಆಗಮಿಸಿ ನೆರೆ ಹಾಗೂ ಬರದ ಪರಿಸ್ಥಿತಿಯನ್ನು ಅಧ್ಯಯನ ಮಾಡುತ್ತದೆ ಅಂತ ಸಿದ್ಧರಾಮಯ್ಯ ಹೇಳುತ್ತಾರೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಇಲಾಖೆ ಏನು ಮಾಡುತ್ತಿದೆ ಅಂತ ಕಂದಾಯ ಸಚಿವರು ಕಾಲ ಕಾಲಕ್ಕೆ ಹೇಳಬೇಕಲ್ಲ, ಆ ಕೆಲಸ ಇದುವರೆಗೂ ನಡೆದಿಲ್ಲ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುರಿದ ಮಳೆಯಿಂದ ಆಗಿರುವ ಬೆಳೆ, ಆಸ್ತಿ-ಪಾಸ್ತಿ ಹಾನಿಯ ಪ್ರಮಾಣ ಐದರಿಂದ ಆರು ಸಾವಿರ ಕೋಟಿ ರುಪಾಯಿ. ಈ ಪ್ರಮಾಣದ ಹಣವನ್ನು ಕೇಂದ್ರ ಸರ್ಕಾರ ಒದಗಿಸಲು ಸಾಧ್ಯವಿಲ್ಲ. ಆ ಮಾತು ಬೇರೆ. ಆದರೆ ಕನಿಷ್ಠ ಪಕ್ಷ ತುರ್ತು ಪರಿಹಾರ ಕಾಮಗಾರಿಗಳಿಗಾಗಿ ಅಂತ ನೆರವು ಕೊಡುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕಿತ್ತು. ಕೇಂದ್ರದಲ್ಲಿ ತಮ್ಮದೇ ಸರ್ಕಾರ ಇರುವುದರಿಂದ ಸಿದ್ಧರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಒಂದು ಮಟ್ಟದ ಪ್ರಭಾವ ಬೀರಿ ಹಣ ತರುವ ಶಕ್ತಿಯೂ ಇತ್ತು. ಆದರೆ ಆ ಕೆಲಸ ಎಲ್ಲಿ ಆಗಿದೆ? ಇನ್ನು ಕೇಂದ್ರದ ಅಧ್ಯಯನ ತಂಡ ಬಂದು ಅದು ವರದಿ ಸಲ್ಲಿಸಿದರೂ ತುರ್ತು ಪರಿಹಾರ ಸಿಗುತ್ತದೆ ಎಂಬ ಭರವಸೆ ಇಲ್ಲ. ಯಾಕೆಂದರೆ ಹಿಂದೆ ಅನೇಕ ಬಾರಿ ಪ್ರಕೃತಿ ವಿಕೋಪದಿಂದ ತಲ್ಲಣಿಸಿದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತಕ್ಷಣ ನೆರವು ನೀಡಿದ ಉದಾಹರಣೆ ಕಡಿಮೆ.

ಇನ್ನು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರಂತಹ ಕೆಲವರು ಇದ್ದುದರಲ್ಲೇ ಬೆಟರ್ರು. ಆದರೆ ಜಯಚಂದ್ರ ಅವರ ಸಮಸ್ಯೆ ಎಂದರೆ ಅವರ ಆಸಕ್ತಿ ಇರುವುದು ಜಲಸಂಪನ್ಮೂಲ ಖಾತೆಯ ಮೇಲೆ. ಆದರೆ ಅವರಿಗೆ ಕೊಟ್ಟಿರುವುದು ಕಾನೂನು ಇಲಾಖೆ. ಹೀಗಾಗಿ ಅವರು ತಮ್ಮ ಆಸಕ್ತಿಯ ವಿಷಯದ ಬಗ್ಗೆಯೇ ಜಾಸ್ತಿ ಮಾತನಾಡುತ್ತಾರೆ. ಕಾವೇರಿ ನದಿಗೆ ಮೇಕೆದಾಟಿನ ಸಮೀಪ ಆಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸುತ್ತೇವೆ ಅಂತ ಅವರು ತರಾತುರಿಯ ಹೇಳಿಕೆ ನೀಡುವ ಅಗತ್ಯವೇ ಇರಲಿಲ್ಲ. ಯಾಕೆಂದರೆ ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ತೀರ್ಪು ನೀಡಿದರೂ ಕರ್ನಾಟಕ, ತಮಿಳುನಾಡುಗಳ ಮಧ್ಯದ ಸಂಘರ್ಷ ಇನ್ನೂ ನಿಂತಿಲ್ಲ. ಪರಿಸ್ಥಿತಿ ಹೀಗಿರುವಾಗ ಮೇಕೆದಾಟು ಯೋಜನೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದರೆ ಅದಕ್ಕೆ ತಮಿಳ್ನಾಡಿನ ಮುಖ್ಯಮಂತ್ರಿ ಜಯಲಲಿತಾ ಅಡ್ಡಗಾಲು ಹಾಕುತ್ತಾರೆ, ಅಗತ್ಯ ಬಿದ್ದರೆ ಸುಪ್ರೀಂಕೋರ್ಟ್‌ಗೆ ಹೋಗುವುದರಿಂದ ಹಿಡಿದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ತನಕ ಏನೇನು ಸಾಧ್ಯವೋ ಅದನ್ನೆಲ್ಲ ಮಾಡುತ್ತಾರೆ ಎಂಬುದು ಗೊತ್ತಿಲ್ಲದ ಸಂಗತಿ ಏನಾಗಿರಲಿಲ್ಲ. ಇಷ್ಟಾದರೂ ಜಯಚಂದ್ರ ಆ ಯೋಜನೆಯ ಕುರಿತು ಅಪಾರ ಆಸಕ್ತಿಯಿಂದ ಮಾತನಾಡಿದರು. ಇದಾದ ಮರುದಿನವೇ ಜಯಲಲಿತಾ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರು. ಕಾವೇರಿ ನ್ಯಾಯಮಂಡಳಿಯ ಆದೇಶವನ್ನು ಉಲ್ಲಂಘಿಸಿ ಕರ್ನಾಟಕ ಜಾರಿ ಮಾಡುತ್ತಿರುವ ಯೋಜನೆಗಳನ್ನು ಸ್ಥಗಿತಗೊಳಿಸಲು ಸೂಚನೆ ಕೊಡಿ ಎಂದು ಪ್ರಧಾನಿ ಮನ್‌ಮೋಹನ್‌ಸಿಂಗ್ ಅವರನ್ನು ಒತ್ತಾಯಿಸಿದರು.

ಇವತ್ತು ಕೇಂದ್ರದ ಯುಪಿಎ ಸರ್ಕಾರ ಕೂಡ ಯಾವ ಪರಿಸ್ಥಿತಿಯಲ್ಲಿದೆ ಎಂದರೆ ಜಯಲಲಿತಾ ಅವರ ವಿರೋಧವನ್ನು ಕಟ್ಟಿಕೊಳ್ಳಲು ಅದು ತಯಾರಿಲ್ಲ. ತಮಿಳ್ನಾಡಿನಲ್ಲಿ ಕರುಣಾನಿಧಿ ನೇತೃತ್ವದ ಡಿಎಂಕೆಯ ಶಕ್ತಿ ಕುಗ್ಗಿ ಹೋಗಿರುವುದರಿಂದ ಜಯಲಲಿತಾ ಅವರ ಎಐಎಡಿಎಂಕೆ ಜತೆ ಸ್ನೇಹ ಕುದುರಿಸಿಕೊಳ್ಳುವುದು ಅದರ ಯೋಚನೆ. ಇಂತಹ ಸ್ಥಿತಿಯಲ್ಲಿ ಮೇಕೆದಾಟಿನಲ್ಲಿ ಡ್ಯಾಮು ಕಟ್ಟುವ ಕೆಲಸಕ್ಕೆ ನಾವು ಮುಂದಾದರೆ ಕೇಂದ್ರ ಸರ್ಕಾರವೇ ಅಡ್ಡಗಾಲು ಹಾಕುತ್ತದೆ. ಈ ಸೂಕ್ಷ್ಮವನ್ನು ಸಿದ್ಧರಾಮಯ್ಯನವರ ಸಂಪುಟದಲ್ಲಿರುವ ಸಚಿವರು ಅರ್ಥ ಮಾಡಿಕೊಳ್ಳಬೇಕು. ಅದರಲ್ಲೂ ಅಂತಾರಾಜ್ಯ ಜಲವಿವಾದಗಳಿಗೆ ಮೂಲವಾಗಿರುವ ನದಿ ಪಾತ್ರದ ಯೋಜನೆಗಳ ಕುರಿತು ಎಷ್ಟು ಕಡಿಮೆ ಮಾತನಾಡುತ್ತಾರೋ ಅಷ್ಟೂ ಒಳ್ಳೆಯದು. ಹೀಗೆ ನೋಡುತ್ತಾ ಹೋದರೆ ಸರ್ಕಾರದ ಬಹುತೇಕ ಸಚಿವರು ಏನು ಮಾಡುತ್ತಿದ್ದಾರೆ ಅನ್ನುವುದೇ ಅರ್ಥವಾಗದ ಸ್ಥಿತಿ. ನಗರಾಭಿವೃದ್ಧಿ ಸಚಿವ ವಿನಯ್‌ಕುಮಾರ್ ಸೊರಕೆ ತಮ್ಮ ಗುರಿಯ ಬಗ್ಗೆ ಹೇಳುವುದನ್ನು ಕೇಳಿದರೆ ಇನ್ನೇನು ರಾಜ್ಯದ ಎಲ್ಲ ನಗರ ಪ್ರದೇಶಗಳು ಉದ್ಧಾರವಾಗಿ ಬಿಡುತ್ತವೆ ಅನ್ನಬೇಕು. ಹಾಗೆ ಮಾತನಾಡುತ್ತಾರೆ. ಆದರೆ ವಾಸ್ತವದಲ್ಲಿ ಅವರು ಜಾರಿ ಮಾಡುವುದಾಗಿ ಹೇಳುತ್ತಿರುವ ಯೋಜನೆಗಳ ಪೈಕಿ ಬಹುತೇಕವು ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಸ್ತಾಪ ಆದಂತಹವು.

ವಸತಿ ಸಚಿವ ಅಂಬರೀಷ್ ಆರಂಭದಲ್ಲಿ ಗುಡುಗಿದ್ದೇ ಬಂತು. ಆಮೇಲೆ ತಾವುಂಟು ಮೂರು ಲೋಕವುಂಟು ಎಂಬಂತೆ ಅವರೂ ನಾಪತ್ತೆಯಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ರಮ್ಯಾ ಅವರನ್ನು ಗೆಲ್ಲಿಸಿಕೊಂಡು ಬಂದ ಸಂಭ್ರಮದಲ್ಲಿ ನಾಪತ್ತೆಯಾದ ಅಂಬಿಗೀಗ ಮಂತ್ರಿಗಿರಿ ಹೇಳಿಕೊಳ್ಳುವಂತಹ ಕಿಕ್ಕು ಕೊಡುತ್ತಿಲ್ಲ. ಅದರ ಪರಿಣಾಮ ಆಗುತ್ತಿರುವುದು ಇಲಾಖೆಯ ಮೇಲೆ. ಈ ಮಧ್ಯೆ ಹೇಳಬೇಕಾದ ಮಹತ್ವದ ಅಂಶವೆಂದರೆ ಸರ್ಕಾರದ ಬಹುತೇಕ ಮಂತ್ರಿಗಳಿಗೆ ತಮ್ಮ ತಮ್ಮ ಇಲಾಖೆಯ ಮೇಲೆ ನಿಯಂತ್ರಣವೇ ಇಲ್ಲ. ಈ ಹಿಂದೆ ಎಸ್ಸೆಂ ಕೃಷ್ಣ, ದೇವೆಗೌಡ, ಜೆ.ಎಚ್.ಪಟೇಲರಂತಹವರು ಸಿಎಂಗಳಾಗಿದ್ದಾಗ ತಮ್ಮ ಖಾತೆಗೆ ಇಂತಹ ಅಧಿಕಾರಿಯನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತಂದು ಕೂರಿಸಿ ಎಂದು ಸಚಿವರು ಬಾಯಿಬಿಟ್ಟು ಹೇಳುತ್ತಿದ್ದರು. ಪ್ರಧಾನ ಕಾರ್ಯದರ್ಶಿಯಿಂದ ಹಿಡಿದು ತಮ್ಮ ಇಲಾಖೆಯ ಆಯಕಟ್ಟಿನ ಜಾಗಗಳ ತನಕ ತಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಳ್ಳುವ ಶಕ್ತಿ ಇಲ್ಲದೇ ಹೋದರೆ ಅಂತಹ ಮಂತ್ರಿಗಳು ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮದೇ ದೃಷ್ಟಿಕೋನ ಇರಿಸಿಕೊಳ್ಳಲು ಸಾಧ್ಯವಿಲ್ಲ. ಹೇಳಿದರೆ ನಿಮಗೆ ಅಚ್ಚರಿಯಾಗಬಹುದು. ಈ ಸರ್ಕಾರದ ಬಹುತೇಕ ಮಂತ್ರಿಗಳು ತಮಗೆ ಇಂತಹ ಅಧಿಕಾರಿಗಳು ಬೇಕು ಎಂದು ಕೇಳುವ ಉಸಾಬರಿಗೇ ಹೋಗಿಲ್ಲ.

ಅಧಿಕಾರಕ್ಕೆ ಬಂದ ಹೊಸತರಲ್ಲಿ ಸಿದ್ಧರಾಮಯ್ಯ ಯಾವ ಅಧಿಕಾರಿಯನ್ನು ತಮ್ಮ ಖಾತೆಯ ನೆತ್ತಿಯ ಮೇಲೆ ಕೂರಿಸುತ್ತಾರೋ ಕೂರಿಸಲಿ ಎಂಬ ಮನೋಭಾವ ಬಹುತೇಕ ಸಚಿವರಲ್ಲಿರುವುದರಿಂದ ಅವರ‍್ಯಾರೂ ಈ ವಿಷಯದಲ್ಲಿ ಪರ್ಟಿಕ್ಯುಲರ್ ಆಗಿಲ್ಲ. ಇದರ ಪರಿಣಾಮ ಏನಾಗಿದೆ ಎಂದರೆ ಸಚಿವರ ಮಾತನ್ನು ಸಂಬಂಧಪಟ್ಟ ಇಲಾಖೆಯ ಉನ್ನತಾಧಿಕಾರಿಗಳು ಕೇಳುತ್ತಿಲ್ಲ. ಯಾವಾಗ ಅವರ ಇಲಾಖೆಯ ಅಧಿಕಾರಿಗಳೇ ಸಚಿವರ ಮಾತನ್ನು ಕೇಳುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೋ, ಆಗ ಆಡಳಿತ ಯಂತ್ರ ಸಡಿಲವಾಗುತ್ತದೆ. ಸಂಬಂಧಪಟ್ಟ ಸಚಿವರು ಬಿಗಿಯಾಗಿದ್ದರೆ, ಹಣದ ಆಸೆಗೆ ಬಾಯಿ ಬಿಡದಿದ್ದರೆ, ವಿಷಯ ತಿಳಿದುಕೊಂಡಿದ್ದರೆ ಓಕೆ. ಈ ಗುಣಗಳು ಕಾಣದಿದ್ದರೆ ಅಂತಹ ಮಂತ್ರಿಗಳು ಹೆಸರಿಗಷ್ಟೇ ಮಂತ್ರಿಗಳು. ಇಂತಹ ವಿಪರ್ಯಾಸಗಳ ನಡುವೆ ಸಿದ್ಧರಾಮಯ್ಯ ಕೂಡ ತಪ್ಪು ಮಾಡುತ್ತಿದ್ದಾರೆ. ಅವರ ಕೈಲೀಗ ಹಣಕಾಸು ಇಲಾಖೆ ಇದೆ. ಇಂಧನ ಖಾತೆ ಇದೆ. ಭಾರೀ ಕೈಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಖಾತೆಗಳಿವೆ. ಹೀಗೆ ಪ್ರಮುಖ ಖಾತೆಗಳನ್ನು ತಮ್ಮ ಕೈಲಿಟ್ಟುಕೊಂಡಿರುವ ಸಿದ್ಧರಾಮಯ್ಯನವರಿಗೆ ಎಲ್ಲ ಖಾತೆಗಳನ್ನು ನೋಡಿಕೊಳ್ಳುವಷ್ಟು ಪುರುಸೊತ್ತಿಲ್ಲ.

ಹೀಗಾಗಿ ಪರಿಸ್ಥಿತಿ ಏನಾಗಿದೆ ಎಂದರೆ ಮೇಲು ನೋಟಕ್ಕೆ ಸರ್ಕಾರದ ಮುಖಕ್ಕೆ ಮಸಿ ಮೆತ್ತಿಕೊಂಡಿಲ್ಲ ಎಂಬಂತೆ ಭಾಸವಾಗುತ್ತಿದೆಯಾದರೂ ಆಳದಲ್ಲಿ ಅಭಿವೃದ್ಧಿಯ ಕೆಲಸಗಳಿಗೆ ದೊಡ್ಡ ಮಟ್ಟದಲ್ಲಿ ಚಾಲನೆಯೇ ಸಿಗುತ್ತಿಲ್ಲ. ಇದರಿಂದಾಗಿ ಎಲ್ಲ ಕಡೆ ಅಸಮಾಧಾನದ ಕೂಗು ಕೇಳುತ್ತಿದೆ. ಇಂತಹ ಅಸಮಾಧಾನದ ಕೂಗು ಹೆಚ್ಚಾಗುವ ಮುನ್ನವೇ ಪರಿಸ್ಥಿತಿಯನ್ನು ಸರಿದಾರಿಗೆ ತರಲು ಪಕ್ಷ ಮುಂದಾಗಬೇಕಲ್ಲ. ಯಾಕೆಂದರೆ ಪಕ್ಷದ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ತಾನೇ ಅಧಿಕಾರ ಹಿಡಿದಿದ್ದು. ಅಂದ ಮೇಲೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳು ಈಡೇರಿವೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸುವ ಕೆಲಸ ಮಾಡಬೇಕಲ್ಲ. ಒಂದು ವೇಳೆ ನಿರೀಕ್ಷಿತ ವೇಗದಲ್ಲಿ ಕೆಲಸ ಆಗಿದ್ದರೆ ಸಂತೋಷ. ಆಗದೇ ಇದ್ದರೆ ಯಾವ ಕಾರಣಕ್ಕಾಗಿ ಆಗಿಲ್ಲ, ಈ ಕಾರ್ಯಕ್ರಮಗಳು ಜಾರಿಯಾಗಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬ ಕುರಿತು ಒಂದು ಗಮನ ಕೊಡಬೇಕಲ್ಲ? ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅದನ್ನೇ ಮಾಡಲು ಹೊರಟಿದ್ದಾರೆ.

ಹಾಗಂತ ಅವರು ಸಿದ್ಧರಾಮಯ್ಯನವರ ಮೇಲಿನ ಸಿಟ್ಟಿಗೆ ಈ ಕೆಲಸ ಮಾಡುತ್ತಿದ್ದಾರೆ ಅಂದುಕೊಳ್ಳುವುದು ತಪ್ಪು.ಯಾಕೆಂದರೆ ಈ ಮೌಲ್ಯಮಾಪನಕ್ಕೆ ಶಾಸಕರೂ ಒಳಪಡಬೇಕು ಎಂದು ಅವರು ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ? ಕನಿಷ್ಠ ಪಕ್ಷ ಮೂರು ತಿಂಗಳಿಗೆ ಒಮ್ಮೆಯಾದರೂ ನಮ್ಮ ಸಚಿವರು, ಶಾಸಕರು ಜನರಿಗಾಗಿ ಏನು ಮಾಡಿದ್ದಾರೆ ಎಂಬುದು ನಾಡಿನ ಜನರಿಗೂ ಗೊತ್ತಾಗಲಿ. ಒಂದು ಸಲ ಜನ ನಮ್ಮ ಸಾಧನೆಯನ್ನು ಗಮನಿಸುತ್ತಿದ್ದಾರೆ ಅನ್ನುವುದು ಸಚಿವರು, ಶಾಸಕರ ಗಮನಕ್ಕೆ ಬಂದರೆ ಕನಿಷ್ಠ ಪಕ್ಷ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಕಣ್ಣಿಗೆ ಕಾಣುವಂತಹದ್ದೇನನ್ನಾದರೂ ಮಾಡಬೇಕು ಎಂಬ ಎಚ್ಚರಿಕೆಯಾದರೂ ಹುಟ್ಟುತ್ತದೆ. ಸಿದ್ಧರಾಮಯ್ಯ ಕೂಡ ಇದನ್ನೇ ಹೇಳಿದ್ದರಲ್ಲವೇ. ಬದಲಾವಣೆ ಎಂದರೆ ಕೇವಲ ಬಾಯಿ ಮಾತಿನ ಬದಲಾವಣೆಯಲ್ಲ. ಕಣ್ಣಿಗೆ ಕಾಣುವಂತಹ ಬದಲಾವಣೆ ತರಬೇಕು. ತರುತ್ತೇವೆ ಎಂದಿದ್ದರಲ್ಲ? ಅಂತವರು ಈಗೇಕೆ ಪರಮೇಶ್ವರ್ ಬಾಯಿಂದ ಪರೀಕ್ಷೆಯ ಮಾತು ಬರುತ್ತಿದ್ದಂತೆಯೇ ಬೇಡ, ಬೇಡ ಅಂತ ಗುನುಗುತ್ತಿದ್ದಾರೆ. ಅದೇ ಅರ್ಥವಾಗದ ವಿಷಯ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 21 September, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books