Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಕಮರದ ಕಾಡಿನ ಕಾವಳದಲ್ಲಿ ಗೋಪಿ ಹಕ್ಕಿಯ ವಿಕ್ಷಪ್ತ ಗಾನ

ಚಳ್ಳಕೆರೆ ದಾಟಿ ಸುಮಾರು ದೂರ, ಹಾನಗಲ್ಲು ಎಂಬ ರಸ್ತೆ ಬದಿಯ ಊರು ತಲುಪುವ ಮುನ್ನ-ತಾರು ಕಿತ್ತು ಹೋದ ಅಡ್ನಾಡಿ ರಸ್ತೆಯ ಮೇಲೆ ಒಂದು ಕಡೆ ಗಕ್ಕನೆ ಕಾರು ನಿಲ್ಲುತ್ತದೆ. ಆತ ಕಾರಿನಿಂದ ಇಳಿಯುತ್ತಾನೆ. ಐವತ್ನಾಲ್ಕು ವರ್ಷದ ಮನುಷ್ಯ. ಜೊತೆಯಲ್ಲೊಬ್ಬ ಹುಡುಗಿ ಇಳಿಯುತ್ತಾಳೆ. ಆ ಹುಡುಗಿ ಆತನ ಮಗಳಿರಬಹುದು. ರಾತ್ರಿಯ ಕತ್ತಲಲ್ಲಿ ಮುಖಗಳು ಅಸ್ಪಷ್ಟ. ಹೋಲಿಕೆಗಳು ಬೇಗ ಸಿಗುವುದಿಲ್ಲ. ನಡೆಯುವ, ನಿಲ್ಲುವ, ತೋಳು ತಬ್ಬಿ ಹಿಡಿಯುವ, ನಿಂತಲ್ಲೇ ಬೆದರಿ ಕಂಪಿಸುವ ರೀತಿ ನೋಡಿದರೆ ಮಗಳೇ ಇರಬೇಕು ಅನಿಸುತ್ತದೆ. ಕಾರಿನಲ್ಲಿ ಇನ್ನೂ ಇದ್ದಾರೆ. ಒಬ್ಬ ಹೆಂಗಸು. ಇಬ್ಬರು ಮಕ್ಕಳು. ಅವರೆಲ್ಲ ನಿದ್ದೆ ಹೋಗಿದ್ದಾರೆ. ಇಳಿದ ಇವರಿಬ್ಬರೂ ರಸ್ತೆಯ ಬಲಕ್ಕೆ ಮಣ್ಣ ಹಾದಿ ಹಿಡಿದು ಸುಮ್ಮನೆ ನಡೆಯತೊಡಗುತ್ತಾರೆ. ನಡಿಗೆ ನೋಡಿದ ಮೇಲಂತೂ ಅನುಮಾನವೇ ಇಲ್ಲ. ಅವಳು ಮಗಳೇ!


''ಇಲ್ಯಾಕೆ ನಿಲ್ಲಿಸಿದಿರಿ? ಕತ್ತಲಲ್ಲಿ....?'' ಮಗಳು ಕೇಳುತ್ತಾಳೆ.

''ಬೆಳಕಿನಲ್ಲಿ ಕಾಣದ ಬದುಕು ಕತ್ತಲಿನಲ್ಲಿ ಕಾಣ್ತದೆ ಮಗಳೇ'' ಅನ್ನುತ್ತಾನೆ ಆತ.

''ಯಾವ ಊರಿಗೆ ಹತ್ತಿರವಿದ್ದೀವಪ್ಪಾ?''

''ನನ್ನೂರಿಗೆ ಮಗಳೇ... ನಾನು ಹುಟ್ಟಬೇಕಿದ್ದ ಊರಿಗೆ, ಹುಟ್ಟಿ ಬೆಳೆಯಬೇಕಿದ್ದ ಊರಿಗೆ. ನಿನ್ನ ಅಜ್ಜಿಯ ಬದುಕು ಹೂವಾಗಿ
ಅರಳಬೇಕಿದ್ದ ಊರಿಗೆ...''

''ಆ ಊರಿನ ಹೆಸರೇನಪ್ಪಾ?''

''ಹಾನಗಲ್ಲು!''

ಮುಂದೆ ಸ್ವಲ್ಪ ಹೊತ್ತು ಅವರಿಬ್ಬರೂ ಮಾತಾಡಲಿಲ್ಲ. ಸುಮ್ಮನೆ ನಡೆಯತೊಡಗಿದರು. ಹುಣ್ಣಿಮೆಯ ಮುನ್ನಾ ದಿನವಾದ್ದರಿಂದ, ಚಂದಿರನ ಮಂದ ಬೆಳಕಿತ್ತು. ಜೀನ್ಸ್ ತೊಟ್ಟ ಹುಡುಗಿ ಅಪ್ಪನ ಕೈ ಬಿಡಿಸಿಕೊಂಡು ಸ್ವತಂತ್ರವಾಗಿ ನಡೆಯತೊಡಗಿದಳು. ಮರಗಳು ದೂರ ದೂರಕ್ಕಿವೆ. ಆದರೆ ಬಲಿಷ್ಠವಾಗಿವೆ. ಕಪ್ಪಗಿನ ದಪ್ಪ ದಪ್ಪ ಕಾಂಡಗಳಿವೆ. ಇದೇನು ಕಾಡೇ? ಕಾಡೇ ಇರಬಹುದು. ಹಿಂದೊಮ್ಮೆ ಇಲ್ಲಿ ಕಾಡಿತ್ತೇನೋ?

''ಇತ್ತು ಮಗಳೇ. ನನಗೇ ಚೆನ್ನಾಗಿ ನೆನಪಿದೆ. ಚಳ್ಳಕೆರೆ-ಮೊಳಕಾಲ್ಮೂರುಗಳ ಮಧ್ಯೆ ಬರುತ್ತಿದ್ದ ಬಸ್ಸಿನಲ್ಲಿ ಕುಳಿತು ಕಿಟಕಿಗೆ ಕಣ್ತೆರೆದರೆ ಕಣ್ಣಿಗೆ ಕಾಣುವಷ್ಟೂ ದೂರಕ್ಕೆ ಕಾಡೇ ಕಾಡು......! ಎಲೆ, ಹಸಿರು, ಹುಲಿ, ಸಿಂಹ ಇರುವಂತ ಕಾಡಲ್ಲ. ಆದರೆ ಇಲ್ಲಿವೆಯಲ್ಲ, ಭೀಮಗಾತ್ರ ಮರಗಳು? ಇವೇ ಮರಗಳಿಂದ ತುಂಬಿ ಹೋಗಿದ್ದ ಕಾಡಿತ್ತು''.

''ಇದ್ಯಾತರ ಮರ... ಅಪ್ಪಾ?''

''ಕಮರದ ಮರ ಅಂತಾರೆ. ನೀನು ಒನಕೆ ನೋಡಿದ್ದೀಯಾ? I am sarry. ನೀನು ಹುಟ್ಟುವ ಹೊತ್ತಿಗೆ ಒನಕೆ ಸತ್ತು ಮಿಕ್ಸಿ ಹುಟ್ಟಿತ್ತು. ಓಬವ್ವನ ಕಥೇಲಿ ಓದಿದ್ದೀಯಲ್ಲ? that wooden club ...... ಹಾಂ, ಅದೇ ಒನಕೆ. ಅಂಥ ಒನಕೇನ ಮಾಡೋದೇ ಕಮರದ ಮರದಿಂದ. ತುಂಬ ಗಟ್ಟಿಯಾದ ಮರ. ಅಂಥ ಮರಗಳ ಕಾಡಿದು. ಕಮರದ ಕಾಡು ಅಂತಾರೆ'' ಅಪ್ಪ ವಿವರಿಸುತ್ತಿದ್ದ.

''ಈ ಕಾಡಲ್ಲಿ ಅನಿಮಲ್ಸ್ ಇರಲ್ವಾ?''

''ಇರ‍್ತವೆ. ಹುಲಿ, ಸಿಂಹಗಳಲ್ಲದಿದ್ರೂ ತೋಳ, ಕಿರುಬ, ಕಪ್ಪಲ್ಲಾಟ...ಇರ‍್ತಾವೆ. And to kill a young girl ..... ಒಬ್ಬ ಚಿಕ್ಕ ಹುಡುಗೀನ ಕೊಲ್ಲೋಕೆ.... ಅವು ಸಾಕು!'' ಆತ ಮಾತು ನಿಲ್ಲಿಸಿ ಸಿಗರೇಟಿಗಾಗಿ ಜೇಬಿಗೆ ಕೈ ಹಾಕಿದ. ಹುಡುಗಿ ಗಬಕ್ಕನೆ ಓಡಿ ಬಂದು ಆತನ ತೋಳು ತಬ್ಬಿಕೊಂಡಳು. ಅವಳ ಕಣ್ಣುಗಳಲ್ಲಿ ಒಂದು ನಿಶ್ಚಿತವಾದ ಭಯ ತೇಲುತ್ತಿತ್ತು.

''And my dear daughter, ಹುಡುಗೀನ ಕೊಲ್ಲೋಕೆ ತೋಳ, ಕಿರುಬಗಳೇ ಬೇಕಾಗಿಲ್ಲ. ಗಂಡ ಸಾಕು. ಅದನ್ನು ಹೇಳೋಣಾಂತಲೇ ಇಲ್ಲಿಗೆ ಕರ‍್ಕೊಂಡು ಬಂದೆ. ಈ ಕಮರದ ಕಾಡು ಮುಂಚೆ ತುಂಬ ದಟ್ಟವಾಗಿತ್ತುಅಂತ ಹೇಳಿದ್ನಲ್ಲಾ? ಇಂಥ ದಟ್ಟವಾದ ಕಾಡಲ್ಲಿ, ನಿನ್ನ ಹಂಗೇ ಹುಡುಗಿಯೊಬ್ಬಳು ಒಂದು ಇಡೀ ರಾತ್ರಿ ಕಳೆದಿದ್ಲು......! ಬಹುಶಃ ಅರವತ್ತಾರು ವರ್ಷದ ಹಿಂದೆ. ಸಹಾಯ ಮಾಡೋಣಾಂದ್ರೆ ನಾನು ಆಗಿನ್ನೂ ಹುಟ್ಟೇ ಇರಲಿಲ್ಲ.

ಆ ಹುಡುಗಿ ಹೆಸರು ಪಾರ್ವತಿ ಅಂತ. ಹತ್ತು ಮಕ್ಕಳ ಪೈಕಿ ಬಹುಶಃ ಒಂಬತ್ತನೆಯವಳಿರಬೇಕು. ಬ್ರಾಹ್ಮಣರ ಮನೆಯಲ್ಲಿ ಮಕ್ಕಳು ಅಗ್ಗವಾಗಿ ಹುಟ್ತಾರೆ ಅಥವಾ ಹುಟ್ಟಿ ಅಗ್ಗವಾಗ್ತಾರೆ. ಅದರಲ್ಲೂ ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿತು ಅಂತಾರೆ. ಹೆಸರಿಟ್ಟದ್ದೇ ಕಡೆ; ಆಮೇಲೆ ನಡೆದ ಸಮಾರಂಭ ಮದುವೇದೇ! ಇದ್ದೂರಿನಲ್ಲಿ ಮೂರನೇ ಕ್ಲಾಸು ಓದಿಸಿದರು. ಆಮೇಲೆ ಕರೆದು ಕೂಡಿಸಿ ಪಾತ್ರೆ ತಿಕ್ಕಿಕೊಂಡು ಮನೇಲಿರು ಅಂದ್ರು. ಪಾರ್ವತಿ ತುಂಬಾ ಮುದ್ದಾಗಿದ್ಲು ಕಣೇ; ನಾನು ನೋಡೋ ಹೊತ್ತಿಗೇನೇ ಅಷ್ಟು ಲಕ್ಷಣವಾಗಿದ್ಲು. ಇನ್ನು ಹದಿನಾಲ್ಕನೇ ವರ್ಷದಲ್ಲಿ ಎಷ್ಟು ಚೆಂದಗಿರಬೇಡ? ಹೂವು ಹೂವಿನ ಲಂಗ ಹಾಕ್ಕೊಂಡು ಚೀಟಿ ರವಿಕೆ ಏರಿಸ್ಕೊಂಡು ಬೆಳಗೆರೆ ಕೆರೆ ಪಕ್ಕದ ಕಾಲುವೇಲಿ ಬಟ್ಟೆ ಹಿಂಡ್ತಾ ಕನಸು ಕಾಣ್ತಿದ್ಲು. ಹತ್ತು ಮಕ್ಕಳನ್ನು ಹೆತ್ತ ತಂದೆಗೆ ಅದ್ಯಾತರದೋ ವೈರಾಗ್ಯ. ಹಗಲು ಮೂರ‍್ಹೊತ್ತೂ ಕವಿತೆ ಬರೀತಿದ್ದ. ಹಾಡು ಹೇಳಿಕೊಂಡು ತಿರುಗುತ್ತಿದ್ದ. ಆತನ ಹೆಂಡ್ತೀಗೆ ಮಕ್ಕಳ ಚಿಂತೆ. ಉಳಿದೋರದೆಲ್ಲ ಆದವು; ಪಾರ್ವತಿಗೂ ಒಂದು ಮದುವೆ ಆಂಥ ಆಗಿಬಿಡ್ಲಿಅಂತ ಆಸೆ.

ಯಾರೋ ಹುಡುಕಿದರಂತೆ. ಯಾರೋ ಒಪ್ಪಿದರಂತೆ. ಮದುವೆ ನಡೆಯೋ ಹೊತ್ತಿಗೆ ತಲೆಗೆ ಪೇಟ ಸುತ್ಕೊಂಡು ಒಬ್ಬ ಐವತ್ತು ವರ್ಷದ ಮನುಷ್ಯ ವಾಲಗದೋರ ಸಮೇತ ಬಂದು ಮನೆಯೆದುರಿಗೆ ನಿಂತು ''ಎಲ್ಲಿದ್ದಾಳೆ ಪಾರ್ವತಿ?'' ಅಂದನಂತೆ. ಬಿಲೀವ್ ಮಿ ಮಗಳೇ, ಹದಿನಾಲ್ಕು ವರ್ಷದ ಪಾರ್ವತೀನ ಐವತ್ತು ವರ್ಷದ ಲಕ್ಷ್ಮಪ್ಪನಿಗೆ, ಹಾನಗಲ್ಲಿನ ಜಮೀನುದಾರಂಗೆ, ಮೂವರು ಹೆಂಡತೀರ‍್ನ ಗೊತ್ತಿಲ್ಲದ ಜಾಗಕ್ಕೆ ಕಳಿಸಿ ಮನೆ ತುಂಬಾ ವಯಸ್ಸಾಗಿರೋ ಮಕ್ಕಳ್ನಿಟ್ಟುಕೊಂಡಿದ್ದ ಮನುಷ್ಯನಿಗೆ ಮದುವೆ ಮಾಡೇಬಿಟ್ರಂತೆ.

''ಪಾರ್ವತಿ ಮಾತಾಡ್ಲಿಲ್ಲ. ಕೆರೆ ಪಕ್ಕದ ಕಾಲುವೇಲಿ ಬಟ್ಟೆ ಹಿಂಡಿ, ಬಟ್ಟೆ ಒಣಗಿಸಿ, ಬಟ್ಟೆ ಮಡಚಿಕೊಂಡು ಮನೆಗೆ ಬಂದಳು. ಕಣ್ಣು ಮಂಜು ಮಂಜಾದವು. ಅಮ್ಮಾ ಕಣ್ಣುರೀತಿದೆ ಅಂದ್ಲು. ಹರಿಶಿನದ ಬಟ್ಟೆ ಮಾಡಿ ತೋಯಿಸಿ ಕಣ್ಣಿಗೆ ಪಟ್ಟಿ ಹಾಕಿದರು. ಹಾಗೇ ಕರ‍್ಕೊಂಡ್ಹೋಗಿ ಹಸೇ ಮೇಲೆ ಕೂಡಿಸಿದ್ರು. ಯಾವ ಬಾಯಲ್ಲಿ ಮಂತ್ರ ಹೇಳಿದರೋ? ಯಾರು ಕೂತು ಓಲಗ ಊದಿದರೋ? ಕೆಟ್ಟ ಘಳಿಗೇಲಿ ಮದುವೆ ಆಗೇ ಹೋಯ್ತು. ಹದಿನಾಲ್ಕರ ಪಾರ್ವತಿಗದು ಪೂರ್ತಿ ಅರ್ಥವಾಯಿತೋ ಇಲ್ವೋ? ಕಣ್ಣುರಿ ಕಡಿಮೆಯಾಗಿ ಅರಿಶಿನದ ಪಟ್ಟು ಕಳಚಿ ಕೆಂಗಣ್ಣು ವಾಸಿಯಾಗಿ ಕಣ್ಣು ಬಿಡುವ ಹೊತ್ತಿಗೆ ಗಂಡನೂ ಇಲ್ಲ. ವಾಲಗದವರೂ ಕಾಣೆ. ಮನೆ ಮುಂದಿನ ಚಪ್ಪರ ಬಾಡಿತ್ತು. ಪಾರ್ವತಿಯ ಪುಟ್ಟ ಕುತ್ತಿಗೆಯಲ್ಲಿ ಫಳಫಳ ಕರಿಮಣಿ. ತುದಿಯಲ್ಲೊಂದು ತಾಳಿ!''

''ಹದಿನಾಲ್ಕರ ಪಾರ್ವತಿಗೆ ಹದಿನೇಳಾಗಲು ಎಷ್ಟು ಹೊತ್ತು ಬೇಕು? ಮೂರೇ ವರ್ಷ. ಹುಡುಗಿ ನವಿಲಾದಳು. ಜಲಪಾತದಂತೆ ನಗುತ್ತಿದ್ದಳು. ಹಾಡಿದರೆ ಜೀವ ವೀಣೆ. 'ಅಮ್ಮಾ ನಮ್ಮ ಮನೆಗೆ ಯಾರೋ ಮುದುಕರು ಬರ‍್ತಿದ್ದಾರೆ' ಅದೊಂದು ದಿನ ಅಂಗಳದಿಂದ ಬಡಬಡನೆ ಅಡಿಗೆ ಮನೆಗೆ ಹೋಗಿ ತಾಯಿಗೆ ಹೇಳಿದಳು. ಅವಸರದಿಂದ ಈಚೆಗೆ ಬಂದ ತಾಯಿ ಹಣೆಹಣೆ ಚಚ್ಚಿಕೊಂಡಳಂತೆ. ಬಂದಿದ್ದು ಅಳಿಯ!

ಪಾರ್ವತೀನ ಕಳಿಸಿಕೊಡಿ ಅಂದ. ಇವರು ಖುಷಿಯಾಗೇ ಕಳಿಸಿಕೊಟ್ಟರು ಬೆಳಗೆರೆಯಿಂದ ಚಳ್ಳಕೆರೆಗೆ, ಅಲ್ಲಿಂದ ಹಾನಗಲ್ಲಿಗೆ... ಇದೇ ಕಮರದ ಕಾಡು ದಾಡಿದರೆ ಸಿಗುವ ರಸ್ತೆ ಬದಿಯ ಚಿಕ್ಕ ಊರಿಗೆ. ರಸ್ತೆ ಪಕ್ಕದ್ದೇ ಲಕ್ಷ್ಮಪ್ಪನ ಮನೆ. ಆ ಕಾಲಕ್ಕೆ ಆ ಊರಿಗೆ ಅದೇ ದೊಡ್ಡ ಮನೆ. ಐವತ್ತರ ಶ್ಯಾನುಭೋಗನಿಗೆ ಅಳೆದಷ್ಟು ಆಸ್ತಿ. ಮನೆಯಲ್ಲಿ ಸೇರುಗಟ್ಟಲೆ ಬಂಗಾರ. ಗಡಿಗೆಗಳ ತುಂಬಾ ಹಾಲು ಮೊಸರು. ಕಣಜದ ತುಂಬಾ ಕಾಳು. ಅಂಗಳದಲ್ಲಿ ಆಳು. ಪಾರ್ವತಿ ಒಳ ಮನೆಯ ಅಲ್ಮೆರಾ ತೆಗೆದರೆ ಅದರ ತುಂಬ ಸೀರೆಗಳು. ಮೊದಲ ಹೆಂಡತಿಯವು.... ಎರಡನೆಯವಳವು... ಮೂರನೆಯವಳವು! ಬೇಕಾದರೆ ನೀನು ತಂದುಕೊ! ಈ ಮನೆಯಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಮನೆ ತುಂಬ ಮಕ್ಕಳಿದ್ದಾರೆ. ದೊಡ್ಡವನೇ ವೆಂಕಟೇಶ. ನಿನಗಿಂತ ಕೊಂಚ ದೊಡ್ಡವನು. ಮಗ ಅಂತ ತಿಳಕೋ. ಸಾಕಮ್ಮ ನಿನ್ನದೇ ವಯಸ್ಸಿನವಳು. ಸ್ವಂತ ಮಗಳಿಗಿಂತ ಚೆನ್ನಾಗಿ ನೋಡಿಕೋ.ಉಳಿದ ಮಕ್ಕಳು ತುಂಬ ಚಿಕ್ಕವು. ಅವುಗಳ ಪಾಲಿಗೆ ನೀನೇ ಅಮ್ಮ. ಎಲ್ಲ ಸಂಭಾಳಿಸು. ಈ ಮನೆಯಲ್ಲಿ ಯಾವುದಕ್ಕೂ ಕಡಿಮೆಯಿಲ್ಲ.''

ಪಕ್ಕದಲ್ಲೆ ಕಮರದ ಕಾಡು. ಹಿತ್ತಲಲ್ಲಿ ದೊಡ್ಡ ಬಾವಿ. ನೀನೆಲ್ಲಿ ಬಾವಿಗಳನ್ನು ನೋಡಿದ್ದೀ ಮಗಳೇ? ಅವು ಸೇದುವ ಬಾವಿಗಳಲ್ಲ. ಇಳಿಯೋ ಬಾವಿಗಳು. ಬಿದ್ದರೆ ಪ್ರಾಣ ಕಳೆಯೋ ಬಾವಿಗಳು. ಬೀಳುವ ನಿರ್ಧಾರಕ್ಕೆ ಒಮ್ಮೆಲೇ ಬರಲಿಲ್ಲ ಪಾರ್ವತಿ. ಅದೆಷ್ಟು ದಿನ ನರಳಿದಳೋ, ಏನೆಲ್ಲ ಅನುಭವಿಸಿದಳೋ? ಜಮೀನ್ದಾರನ ಚಿತ್ರಹಿಂಸೆಗಳಿಗೆ ಎಷ್ಟು ವೆರೈಟಿಗಳಿದ್ದವೋ ಲೆಕ್ಕವಿಟ್ಟವರ‍್ಯಾರು? ಹೆಂಡತಿಯನ್ನು ಕಾಡಲು ನಿಶ್ಚಯಿಸಿದವನು ಬಡಿಯಲೇಬೇಕೆಂದಿಲ್ಲ. ಮಾತು ಸಾಕು. ಮೊದಲ ಹೆಂಡತಿಯ ಪ್ರಸ್ತಾಪ ಸಾಕು. ಮೂರನೆಯಾಕೆ ಹೇಗೆ ಸತ್ತಳು ಎಂಬ ವಿವರಣೆ ಸಾಕು. ಮದುವೆ ಮಾಡಿಕೊಟ್ಟ ಮೇಲೆ ಅಪ್ಪ-ಅಣ್ಣ-ಅಮ್ಮಂದಿರು ಒಂದು ಬಾರಿಗೂ ತಿರುಗಿ ಕೂಡ ನೋಡಲಿಲ್ಲವೆಂಬ ದುಃಖ ಸಾಕು. ಜಗತ್ತೇ ಕಾಣದ ಹದಿನೇಳರ ಹುಡುಗಿ ಪ್ರಾಣ ಕಳೆದುಕೊಳ್ಳಲಿಕ್ಕೆ ಈ ಪೈಕಿ ಯಾವುದಾದರೂ ಒಂದು ಸಾಕು ಅಲ್ಲವೇ ಮಗಳೇ?''

''ಹೇಳ್ತೀನಿ ಕೇಳು ಮಗಳೇ: ಭಯಗಳೇ ಒಮ್ಮೊಮ್ಮೆ ಭಯಂಕರ ಆಕರ್ಷಣೆಗಳಾಗಿಬಿಡುತ್ತವೆ. ಬದುಕಿನ ಕರ್ಕಶಗಳಿಗೆ ಈಡಾದ ಹುಡುಗಿಗೆ ಇಳಿಯುವ ಬಾವಿಯೊಳಗಿನ ಮಧ್ಯಾಹ್ನದ ಮೌನ ಇಷ್ಟವಾಗಿಬಿಡುತ್ತದೆ. ಬುಟ್ಟಿಯೊಳಗೆ ಹೆಡೆ ಮುದುರಿ ಮಲಗಿದ ಕರಿನಾಗರ ಆತ್ಮೀಯವೆನಿಸತೊಡಗುತ್ತದೆ. ಅಟ್ಟದ ಮೇಲಿಟ್ಟ ಎಂಡ್ರಿನ್ ವಿಷದ ಸೀಸೆ ನಾಲಗೆಯಲ್ಲಿ ನೀರೊಡೆಸುತ್ತದೆ. ದರಿದ್ರ ವಾಸನೆಯ ಸೀಮೆಎಣ್ಣೆಗೆ ಮೂಗರಳತೊಡಗುತ್ತದೆ. ಸಾವೆಂಬುದು ಸಹಿಸಲಾರದ ಆಕರ್ಷಣೆಯಾದಾಗ, ಅದರಿಂದ ತಪ್ಪಿಸಿಕೊಳ್ಳಲಾಗದೆ, ಸತ್ತು ಹೋಗಲೂ ಆಗದೆ ಹದಿನೇಳರ ಹುಡುಗಿಯರು ಇಂಥ ಕಮರದ ಕಾಡುಗಳಿಗೆ ನಟ್ಟಿರುಳಿನಲ್ಲಿ ಓಡಿ ಬಂದು ಬಿಡುತ್ತಾರೆ. ತೋಳವೋ, ಕಿರುಬವೋ, ಒನಕೆ ಮಾಡುವ ದೈತ್ಯ ಮರದ ಕಾಂಡಕ್ಕೆ ಸುತ್ತಿಕೊಂಡ ಕರಿನಾಗರವೋ.... ಯಾವುದು ಕೊಂದರೇನಂತೆ? ಶ್ಯಾನುಭೋಗನ ಮೂರನೇ ಹೆಂಡತಿ ಸತ್ತ ರೀತಿಯಲ್ಲೇ ನಾಲ್ಕನೆಯವಳೂ ಸಾಯಬೇಕೆಂಬ ನಿಯಮವೆಲ್ಲಿದೆ ಮಗಳೇ?''

''ಹಾನಗಲ್ಲಿನ ಮಂದ ಬೆಳಕಿನ ಸರಹದ್ದು ದಾಟಿ ಅದ್ಯಾವ ನಡುರಾತ್ರಿಯ ಹೊತ್ತಿಗೆ ಬಂದು ಈ ಕಮರದ ಕಾಡು ಸೇರಿದಳೋ? ಅವತ್ತು ರಾತ್ರಿ ಆ ಪುಟ್ಟ ಪಾರ್ವತಿಯ ದಿಗಿಲುಗಳೇನಿದ್ದವೋ? ಕಾಡುಗಳ ಬಗ್ಗೆ ಓದುವುದು ಚೆಂದ. ಕೇಳುವುದು ಚೆಂದ. ನಿಶ್ಯಬ್ದ ಮಧ್ಯಾಹ್ನಗಳಲ್ಲಿ ಸುಮ್ಮನೆ ಒಬ್ಬಳೇ ಹೊಕ್ಕು ನೋಡು? ಎದೆ ಸ್ತಬ್ಧವಾಗಿಬಿಡುತ್ತದೆ. ಮರಗಳ ನಡುವೆ ಬೀಸುವ ಜೋರು ಗಾಳಿ, ಅದು ಹುಟ್ಟಿಸುವ ಮರ್ಮರ, ಕಾಲ ಕೆಳಗೆ ಹುಡಿಯಾಗುವ ಒಣಗಿದೆಲೆಗಳ ಆಕ್ರಂದನ.... ಎಷ್ಟು ಹೆದರಿದ್ದಳೋ ಪಾರ್ವತಿ? ಇಂಥ ಕಾಡುಗಳಲ್ಲೊಂದು ವಿಲಕ್ಷಣ ಹಕ್ಕಿಯಿರುತ್ತದೆ ಮಗಳೇ. ನಮ್ಮ ಕಡೆ ಅದನ್ನು 'ಗೋಪಿ ಹಕ್ಕಿ' ಅಂತಾರೆ. ಕೋಗಿಲೆಯೂ ಮುನಿದು ಮಲಗಿದ ನಿಶ್ಯಬ್ದ ರಾತ್ರಿಗಳಲ್ಲಿ ಈ ಗೋಪಿ ಹಕ್ಕಿ ಮಕ್ಕಳು ಅಳುವಂತೆ ಕೆಟ್ಟ ರಾಗದಲ್ಲಿ ಹಾಡತೊಡಗುತ್ತದೆ. ಗೋರಿಗಳ ಕೆಳಗಿನ ಹೆಣಗಳೂ ಹೆದರಿ ಬೆವತು ಹೋಗುವಂತಹ ನಿಷ್ಕರುಣ ರಾಗ. ಗೋಪಿ ಹಕ್ಕಿಗೊಂದು ವಿಚಿತ್ರ ಶಕ್ತಿಯಿರುತ್ತೆ ಗೊತ್ತಾ ಮಗಳೇ? ಕಾಡು ಹೊಕ್ಕು ದಾರಿ ಸವೆಸುವವರ ಪೈಕಿ ಯಾರದಾದರೂ ಹೆಸರನ್ನು ಅದ್ಹೇಗೋ ತಿಳಿದುಕೊಂಡು ಬಿಡುತ್ತೆ. ಆ ಹೆಸರಿನ ವ್ಯಕ್ತಿ ತನ್ನ ಗುಂಪಿನಿಂದ ಬೇರ್ಪಟ್ಟು ಒಬ್ಬಂಟಿಯಾಗುವುದನ್ನೇ ಕಾಯುತ್ತೆ. ಒಬ್ಬಂಟಿಯಾದದ್ದೇ ತಡ 'ಪಾರ್ವತೀ.... ಪಾರ್ವತೀ... ಪಾರ್ವತೀ...' ಅಂತ ಕೂಗೋಕೆ ಶುರು ಮಾಡುತ್ತೆ. ಎಷ್ಟು ಸ್ಪಷ್ಟವಾಗಿ ಕೂಗುತ್ತೆ ಗೊತ್ತಾ ಮಗಳೇ? ಕಮರದ ಕಾಡಿನ ಕತ್ತಲಲ್ಲಿ, ಬದುಕಿನ ಅಸಹಾಯಕ ಕಾವಳದಲ್ಲಿ ತತ್ತರಿಸಿ ಹೋಗಿದ್ದ ಪಾರ್ವತಿ ಗೋಪಿ ಹಕ್ಕಿಯ ಕೂಗು ಕೇಳಿದ ನಂತರವೂ ಭಯದಿಂದ ಎದೆಯೊಡೆಯದೆ ಬದುಕಿದ್ದೇ ದೊಡ್ಡದು......''.

ಆತ ಮಾತು ನಿಲ್ಲಿಸಿ ಸಿಗರೇಟಿಗೆ ಕಡ್ಡಿ ಕೊರೆದ.

''ಸಾಕಪ್ಪಾ... ಪಾರ್ವತಿಯ ಕಥೆ ಹೇಳ್ಬೇಡಿ. ನಂಗೆ ಭಯವಾಗುತ್ತೆ......'' ಅಂದಳು ಮಗಳು. ತೋಳು ತಬ್ಬಿದ ಕೈಗಳು ಬಲವಾಗಿ ಬಿಗಿದುಕೊಂಡಿದ್ದವು.

'ನಿನಗ್ಯಾವ ಭಯವಮ್ಮಾ. ಈ ಕಮರದ ಕಾಡಿನಲ್ಲೂ ನಾನು ನಿನ್ನೊಂದಿಗಿದ್ದೇನೆ. ಯಾವ ಹಕ್ಕಿಯ ಯಾವ ಘೂಕರಿಕೆಗೂ ಬೆದರದವನು. ಆದರೆ ಅವತ್ತು ಪಾರ್ವತಿಗೆ ಈ ಮಾತನ್ನು ಹೇಳುವವರ‍್ಯಾರಿದ್ದರು? ಯಾವ ಮರದ ಕೆಳಗೆ ನಿಂತು ಬಿಕ್ಕಳಿಸಿದಳೋ? ಯಾವ ಹೆಬ್ಬೇರು ಎಡವಿ ಮುಗ್ಗರಿಸಿದಳೋ? ಬೆಳಗಾಗುವ ಹೊತ್ತಿಗೆ ಆಕೆಯ ಕಣ್ಣುಗಳು ಕೆಂಡಗಳಾಗಿದ್ದವಂತೆ. ಮುಳ್ಳು ಕಂಟಿಗಳಿಗೆ ತಗುಲಿ ಮೈಯ್ಯೆಲ್ಲಾ ರಾಮಾರಕ್ತ. ಕಮರದ ಕಾಡಿನ ಮಧ್ಯಭಾಗ ಸೇರಿದ್ದಳಂತೆ. ಅಲ್ಲಾದರೂ ಸಾವು ಎಲ್ಲಿಂದ ಬರಬೇಕು. ಸುಮ್ಮಸುಮ್ಮನೆ ಸತ್ತು ಹೋಗಲು ಸಾಧ್ಯವೇ? ರೆಕ್ಕೆ ಫಡಫಡಿಸುವ ಗೋಪಿಹಕ್ಕಿಗೂ ಪಾರ್ವತಿಯ ಹೆಸರು ಕೂಗಿ ಕೂಗಿ ಸಾಕಾಗಿರಬೇಕು. ಅದು ಟೊಂಗೆಯೊಂದರ ಮೇಲೆ ಸ್ಥಿರವಾಯಿತು.

ಅಷ್ಟು ಹೊತ್ತಿಗಾಗಲೇ ಶ್ಯಾನುಭೋಗ ಹುಶಾರಾಗಿದ್ದ. ನಾಲ್ಕನೆಯ ಬಾರಿಗೆ ವೈಧವ್ಯ ಕರುಣಿಸಲು ಯಾಕೋ ಹಿಂಜರಿದಿದ್ದ. ಹೆಂಡತಿಯನ್ನು ಹುಡುಕಿಸಲು ಆಳುಗಳನ್ನು ಕಳಿಸಿದ. ತಾನೇ ಕೈಯ್ಯಲ್ಲೊಂದು ದೊಣ್ಣೆ ಹಿಡಿದು ಹೊರಟ. ಕಮರದ ಕಾಡಿನ ಸೀಳು ದಾರಿಗಳನ್ನು ಚೆನ್ನಾಗಿ ಬಲ್ಲವನು. ಕಾಡಿನ ನಡುಮಧ್ಯಕ್ಕೆ ಬಂದವನಿಗೆ ಫಕ್ಕನೆ ಕೇಳಿಸಿತು ಗೋಪಿ ಹಕ್ಕಿಯ ವಿಕಾರ
ಕೂಗು....ಪಾರ್ವತೀ.....!

ಉರಿಬಿಸಿಲಲ್ಲಿ, ಗಿಡದ ಸಣ್ಣ ನೆರಳಿನ ಕೆಳಗೆ ಕಾಲ ಮೇಲೆ ಕಾಲು ಊರಿಕೊಂಡು ನಿಂತ ಕಬ್ಬಕ್ಕಿಯಂತಹ ಪಾರ್ವತಿ ಕಾಣಿಸಿದಳು. ಅಲ್ಲಿಂದ ಹೊಡಹೊಡೆದೇ ಎಳೆದುಕೊಂಡು ಬಂದನಂತೆ. ಬಂದವನೇ ರಸ್ತೆ ಪಕ್ಕದ ದೊಡ್ಡ ಮನೆಯ ಹಿತ್ತಲಲ್ಲಿದ್ದ ಹಿಟ್ಟಿನ ಗಿರಣಿಯ ಕತ್ತಲ ಕೋಣೆಯಲ್ಲಿ ಕೂಡಿ ಹಾಕಿದನಂತೆ. ಮೂರು ದಿನ ಊಟ ಕೊಡಲಿಲ್ಲವಂತೆ. 'ಇನ್ನು ಪ್ರಾಣ ಹೋದರೂ ನಾನು ಸಾಯೋದಿಲ್ಲ' ಅಂತ ಪಾರ್ವತಿ ಆಣೆ ಮಾಡಿದ ಮೇಲೆ ಬಾಗಿಲು ತೆರೆದನಂತೆ.''

''ಮೂರ್ಖ ಮುದುಕ. ಸಾವಿಗೆ ಯಾರಾದರೂ ಕಾವಲು ಕೊಡಲು ಸಾಧ್ಯವೇ? ಮರಣಕ್ಕೆ ಬೇಲಿಯುಂಟೇ ಮಗಳೇ? ಕದ ತೆರೆದ ಹದಿನೈದನೆಯ ದಿನ ಅದೇ ಪಾರ್ವತಿ ನಟ್ಟಿರುಳಲ್ಲಿ ಹೋಗಿ ಬಾವಿಗೆ ಹಾರಿಕೊಂಡಳು. ಎರಡು ಬೊಗಸೆ ನೀರು ಕುಡಿದು, ಮೂರನೆಯ ಬೊಗಸೆಯಲ್ಲಿ ಸಾವು ಬಂದೀತೆಂದು ಕಾತರಿಸಿದಳು. ಬಂದದ್ದು ಸಾವಲ್ಲ. ಗಂಡನೊಂದಿಗೆ ಬಾಳಲಾಗದೆ ಬಾವಿಗೆ ಹಾರಿಕೊಂಡಳೆಂಬ ಅಪವಾದ. ಹೆಣ್ಣು ಬದುಕೇ ಅಂತದ್ದು ಮಗಳೇ; ಬದುಕಿದರೂ ಅಪವಾದ. ಬಾವಿಗೆ ಬಿದ್ದರೂ ಅಪವಾದ.''

''ಅವತ್ತು ಆಳುಮಗನೊಬ್ಬ ಪಾರ್ವತಿಯನ್ನು ಬದುಕಿಸಿಬಿಟ್ಟ. ಈಗ ನೀನೇ ಹೇಳು? ಕಮರದ ಕಾಡು, ಇಳಿಯುವ ಬಾವಿ ಎರಡರಿಂದಲೂ ತಿರಸ್ಕೃತಳಾದ ಹದಿನೇಳರ ಪಾರ್ವತಿ ಅಂದು ಬಾವಿಯ ದಡದ ಮೇಲೆ ಒಬ್ಬಂಟಿಯಾಗಿ ಕುಳಿತು ಏನು ನಿರ್ಧರಿಸಿರಬೇಕು? ಸಾವಿನ ಗೊಡವೆಯೇ ಬೇಡ; ಬದುಕನ್ನೇ ಬಲಗೈಲಿ ಹಿಡಿದು ಪಳಗಿಸುತ್ತೇನೆ. ಈ ಶ್ಯಾನುಭೋಗನ ಹಂಗೂ ಬೇಡ, ಇವನ ನೆರಳೂ ಬೇಡ. ಬದುಕಿನ ಬಯಲಲ್ಲೇ ಮನೆ ಕಟ್ಟಿ ಕೊಳ್ಳುತ್ತೇನೆ.

ಹಾಗಂತ ನಿರ್ಧರಿಸಿ ಬರಿಗೈಯ್ಯಲ್ಲಿ ಮನೆ ಬಿಟ್ಟು ಹೊರಟ ಪಾರ್ವತಿ, ಅದೆಷ್ಟೊ ವರ್ಷಗಳ ನಂತರ ಚಳ್ಳಕೆರೆಯಿಂದ ಬಳ್ಳಾರಿಗೆ ಬರುವ ಇಲಾಹಿ ಬಸ್ಸಿನ ಕಿಟಕಿಯಲ್ಲಿ ತನ್ನ ಮಗನನ್ನು ತಬ್ಬಿ ಹಿಡಿದು ಕುಳಿತು ರಸ್ತೆ ಪಕ್ಕದ ದೊಡ್ಡಮನೆಯನ್ನು ತೋರಿಸಿ ಇದೇ ಕಣೋ ಆತನ ಮನೆ! ಆತ ಇಲ್ಲ. ಸತ್ತು ಹೋಗಿದ್ದಾನೆ. ಆತ ಸತ್ತು ಹೋದ ಯಾವ ಆರು ತಿಂಗಳಿಗೋ ನನಗೆ ಸುದ್ದಿ ಬಂತು. ಆಗಲೇ ನಾನು ಹಣೆಗಿಟ್ಟುಕೊಂಡಿದ್ದನ್ನು ಕೆಡಿಸಿಕೊಂಡಿದ್ದು. ಇದೆಲ್ಲ ಆಸ್ತಿ ಆತನದೇ. ಮೊದಲ ಹೆಂಡತಿಯ ಮಗನಿದ್ದಾನೆ. ವೆಂಕಟೇಶ ಅಂತ. ಒಳ್ಳೆಯವನಿರಬಹುದು. ಇರಲೂಬಹುದು. ಆದರೆ ಬೇಡ ಮಗನೇ.... ನಿನಗೆ ಅವರ ಗೊಡವೆ ಬೇಡ. ಅವರ ಆಸ್ತಿ ಬೇಡ. ನಾನೇ ಅದನ್ನೆಲ್ಲ ಕೇಳಲಿಲ್ಲ. ನಿನಗದಿನ್ಯಾಕೆ?

ಹಾಗಂತ ಚಿಕ್ಕ ವಯಸ್ಸಿನ ಮಗನಿಗೆ ಹೇಳಿದಳಲ್ಲ ಪಾರ್ವತಿ? ಶ್ಯಾನುಭೋಗನ ಆಸ್ತಿಯೊಂದೇ ಏಕೆ, ಜಗತ್ತಿನಲ್ಲಿ ಯಾರ ಆಸ್ತಿಯೂ ನನಗೆ ಬೇಡ. ನನ್ನ ಬದುಕೇ ನನಗೊಂದು ಆಸ್ತಿ. ಅದನ್ನು ಪ್ರತಿ ಕ್ಷಣ ಅನುಭವಿಸುತ್ತೇನೆ ಅಂತ ನಿರ್ಧರಿಸಿತು ಪಾರ್ವತಿಯ ಕೂಸು. ಮುಂದೆ ಅದೆಷ್ಟು ಕಲಿತಳು! ಅದೆಷ್ಟು ಓದಿದಳು, ಓದಿಸಿದಳು. ಅರ್ಧ ಬಳ್ಳಾರಿಗೇ ಆಕೆ ಪಾರ್ವತಮ್ಮ ಟೀಚರ್ರು. ಆಕೆ ಕಲಿಸಿದ ಪಾಠವೇ ಇವತ್ತಿಗೂ ಆಕೆಯ ಮಗನಿಗೆ ಬುತ್ತಿಯಾಗಿದೆ. ಇಂದು ಕಮರದ ಕಾಡಿನ ಕಾವಳದಲ್ಲಿ ನಿಂತು ಆತ ತನ್ನ ಮಗಳಿಗಿಷ್ಟು ತಿನಿಸುತ್ತಿದ್ದಾನೆ. ಯಾರ ಆಸ್ತಿಯೂ ಯಾವತ್ತಿಗೂ ಬೇಡವೆಂಬ ನಿರ್ಧಾರ ನಿನ್ನದಾಗಬೇಕು. ಕತ್ತಲಿಗೆ, ಸಾವಿಗೆ, ಗಂಡನಿಗೆ, ಕಮರದ ಕಾಡಿನ ಮೌನಕ್ಕೆ, ಗೋಪಿ ಹಕ್ಕಿಯ ಗಾನಕ್ಕೆ .....ಯಾವುದಕ್ಕೂ ಹೆದರದ ಧೈರ್ಯವಂತೆ ನೀನಾಗಬೇಕು ಮಗಳೇ.....'' ಅಂದ.

ಆ ಹುಡುಗಿ ಅದೇಕೋ ಕಮರದ ಮರದ ಕಾಂಡವೊಂದನ್ನು ಪ್ರೀತಿಯಿಂದ ಅಂಗೈಯಲ್ಲಿ ತಾಕಿದಳು. ಅಜ್ಜಿಯ ಮೃದುತ್ವ ಕೈಗೆ ತಾಕಿತೇನೋ!

ಪ್ರಿಯ ಓದುಗರೆ,
ಮೊನ್ನೆ ಬಳ್ಳಾರಿಗೆ ಹೋಗಿದ್ದೆ. ಹೋಗುವ ಹಾದಿಯಲ್ಲಿ ಮೊಳಕಾಲ್ಮೂರು ಸಮೀಪದ ಹಾನಗಲ್ಲಿನ ಬಳಿ ಕಮರದ ಕಾಡಿನ ಪಕ್ಕದಲ್ಲಿ ಕಾರು ನಿಲ್ಲಿಸಿದ್ದೆ. ಜೊತೆಗೆ ನನ್ನ ಮಗಳಿದ್ದಳು.

-ನಿಮ್ಮವನು ಆರ್.ಬಿ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 18 September, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books