Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ನೀನೇ ಹನುಮಪ್ಪ ಅಂದ್ರೆ ಬಾಲದಲ್ಲಿ ಪ್ರಸಾದ ಕೊಟ್ರು ಅನ್ನುವುದು ಏಕೆ?

ನೀನೇ ಹನುಮಪ್ಪ ಅಂದ್ರೆ ಬಾಲದಲ್ಲಿ ಪ್ರಸಾದ ಕೊಟ್ರು ಎಂಬುದೊಂದು ಗಾದೆ ಮಾತನ್ನು ನೀವು ಕೇಳಿರಬಹುದು. ಒಬ್ಬ ವ್ಯಕ್ತಿಯೇ ನಿಮ್ಮ ಬದುಕಿನ ಕೇಂದ್ರ ಬಿಂದುವಾದಾಗ, ಆ ವ್ಯಕ್ತಿಗಾಗಿ ನೀವು ಹಗಲಿರುಳು ದುಡಿಯುವಾಗ, ಅವರಿಗಾಗಿಯೇ ನನ್ನ ಬದುಕನ್ನು ಮುಡಿಪಾಗಿಟ್ಟಿದ್ದೇನೆ ಎಂದು ತೀರ್ಮಾನ ಮಾಡಿ ಜೀವನ ನಡೆಸುತ್ತಿರುವಾಗ ಸಹಜವಾಗಿಯೇ ಆ ವ್ಯಕ್ತಿಯ ಮೇಲೆ ನಿಮಗೊಂದು ನಿರೀಕ್ಷೆ ಇರುತ್ತದೆ. ನನ್ನ ಬದುಕಿನ ಮಹತ್ವದ ಸಮಯವನ್ನು ನಾನು ಈ ವ್ಯಕ್ತಿಗಾಗಿ ಮೀಸಲಿಟ್ಟಿದ್ದೇನೆ. ಹೀಗಾಗಿ ನನಗೆ ಕಷ್ಟ ಬಂದಾಗ ಅದನ್ನು ಪರಿಹರಿಸಲು ಅವರು ಮುನ್ನುಗ್ಗುತ್ತಾರೆ ಎಂಬ ನಂಬಿಕೆಯೂ ನಿಮಗಿರುತ್ತದೆ. ಆಗಲೇ ನೀವು ಆತನನ್ನು ಹನುಮಪ್ಪ ಅಂತ ನಂಬುವ ಸ್ಥಿತಿ ಬರುವುದು. ಕೆಲವು ಸಲ ನೀವು ಯಾರಿಗಾಗಿ ದುಡಿಯುತ್ತಿದ್ದೀರೋ, ಯಾರಿಗಾಗಿ ನಿಮ್ಮ ಬದುಕಿನ ಅಮೂಲ್ಯ ಸಮಯವನ್ನು ಕೊಡುತ್ತಿದ್ದೀರೋ ಅದಕ್ಕೆ ಪ್ರತಿಯಾಗಿ ಅವರು ನಿಮಗೆ ಸ್ವಲ್ಪ ಮಟ್ಟಿಗೆ ನೆರವು ಕೊಡಬಹುದು. ನಿಮ್ಮ ಕಷ್ಟ ನೋಡಿ ಅಯ್ಯೋ ಅನ್ನಬಹುದು.

ಒಂದು ವೇಳೆ ಅವರಿಂದ ಈ ಮಟ್ಟದ ಸ್ಪಂದನೆ ದೊರೆತರೆ ನಿಮಗೆ ನಿಮ್ಮ ಬದುಕು ಸಾರ್ಥಕ ಅನ್ನಿಸುತ್ತದೆ. ಆದರೆ ಒಂದು ಸಲ ಅವರು ತಿರುಗಿ ಬಿದ್ದರೋ, ನಿನ್ನದು ಇದ್ದಿದ್ದೇ ರಗಳೆ ಅನ್ನತೊಡಗಿದರೋ ಅಥವಾ ನನ್ನ ಜತೆ ಇರುವುದಾದರೆ ಇರು, ಇಲ್ಲ ನಿನ್ನ ದಾರಿ ನೋಡಿಕೋ ಎಂದರೆ ಅರ್ಥ ಮಾಡಿಕೊಂಡು ಬಿಡಿ ಹನುಮಪ್ಪ ನಿಮಗೆ ಕೈಯಲ್ಲಿ ಪ್ರಸಾದ ಕೊಡಲು ತಯಾರಿಲ್ಲ. ಬಾಲದಲ್ಲಿ ಪ್ರಸಾದ ಕೊಡಲು ರೆಡಿಯಾದ ಅಂತಲೇ ಅರ್ಥ. ಯಾವಾಗ ಈ ಸ್ಥಿತಿ ಬರುತ್ತದೋ ನೀವು ಖಿನ್ನರಾಗುತ್ತೀರಿ. ಅಯ್ಯೋ, ನಾನು ನಂಬಿದ, ನಂಬಿ ಹಗಲು ರಾತ್ರಿ ಸೇವೆ ಮಾಡಿದ ವ್ಯಕ್ತಿ ಇವರೇನಾ? ಇವರಿಗಾಗಿ ನನ್ನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಂಡೆನಾ? ಎಂಬ ಪಶ್ಚಾತ್ತಾಪವೊಂದು ನಿಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಯಾವ ಮಟ್ಟಕ್ಕೆ ಎಂದರೆ, ಕೊನೆಗೊಂದು ದಿನ ನೀವು ಯಾರನ್ನು ಕಂಡರೂ ಅನುಮಾನದಿಂದ ನೋಡುವ ಸ್ಥಿತಿಗೆ ತಲುಪುತ್ತೀರಿ. ಪ್ರತಿಯೊಬ್ಬರೂ ತಮ್ಮ ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ದುಡಿಸಿಕೊಳ್ಳುತ್ತಾರೆ. ಆಮೇಲೆ ನಿರ್ದಾಕ್ಷಿಣ್ಯವಾಗಿ ಗೇಟ್‌ಪಾಸ್ ಕೊಡುತ್ತಾರೆ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತೀರಿ.

ನನ್ನ ಪ್ರಕಾರ ಯಾವ ವ್ಯಕ್ತಿಗೂ ಇಂತಹ ಭ್ರಮನಿರಸನದ ಸ್ಥಿತಿ ಬರಕೂಡದು. ಹಾಗೆ ಬರಕೂಡದು ಎಂದರೆ ಒಬ್ಬ ವ್ಯಕ್ತಿಯನ್ನು ಬದುಕಿನ ಕೇಂದ್ರ ಬಿಂದುವನ್ನಾಗಿಟ್ಟುಕೊಂಡು ನೀನೇ ಹನುಮಪ್ಪ ಅನ್ನುವಂತೆ ನಡೆದುಕೊಳ್ಳಬಾರದು. ಹಾಗೆ ನಡೆದುಕೊಂಡಿರೋ, ಒಂದಲ್ಲ ಒಂದು ದಿನ ಬಾಲದಲ್ಲಿ ಪ್ರಸಾದ ಪಡೆಯಲು ರೆಡಿ ಆಗಬೇಕು ಅಂತಲೇ ಅರ್ಥ. ನನ್ನ ಗೆಳೆಯರೊಬ್ಬರು ದೊಡ್ಡ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಕಾರ್ಖಾನೆಯ ಮಾಲೀಕರಿಗೆ ಇವರು ಎಷ್ಟು ಕ್ಲೋಸ್ ಆಗಿದ್ದರು ಎಂದರೆ ಅಯ್ಯೋ, ನಾನು ಒಂದು ದಿನ ಕಾಣದೇ ಇದ್ದರೆ ನಮ್ಮ ಓನರ್ ಚಡಪಡಿಸಿಬಿಡುತ್ತಾನೆ ಕಣಯ್ಯಾ. ಏಳಲಿ, ಕೂರಲಿ, ಕೊನೆಗೆ ನಡೆಯಬೇಕು ಅಂತ ತೀರ್ಮಾನಿಸಲಿ ಎಲ್ಲ ಸಂದರ್ಭದಲ್ಲೂ ನಾನು ಜತೆಗಿರಲೇಬೇಕು ಅಂತ ಬಿಗುಮಾನದಿಂದ ಹೇಳಿಕೊಳ್ಳುತ್ತಿದ್ದ. ಹೀಗೆ ಹೇಳಿಕೊಳ್ಳುತ್ತಾ ಹೇಳಿಕೊಳ್ಳುತ್ತಾ ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಅವರಿಗಾಗಿ ದುಡಿದ. ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಕೆಲಸದಿಂದ ಹಿಡಿದು, ಅವರ ಮನೆಗೆ ರೇಷನ್ನು ತಂದು ಹಾಕುವ ಜವಾಬ್ದಾರಿಯ ತನಕ ಎಲ್ಲ ಕೆಲಸಗಳನ್ನೂ ಮಾಡಿದ. ಆ ಮಾಲೀಕನ ವಿಶ್ವಾಸ ಎಂಬುದು ಆತನನ್ನು ಯಾವ ರೀತಿ ಕಟ್ಟಿ ಹಾಕಿತ್ತು ಎಂದರೆ, ಕೊನೆ ಕೊನೆಗೆ ಆತ ಇಲ್ಲದೆ ನಾನು ಬದುಕಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ತಲುಪಿಬಿಟ್ಟ.

ಯಾವಾಗ ವಯಸ್ಸು ಐವತ್ತರ ಗಡಿ ದಾಟಿತೋ ಆಗ ಸಹಜವಾಗಿಯೇ ಈತನಲ್ಲಿನ ಕೆಲಸದ ಹುರುಪು ಕಡಿಮೆಯಾಯಿತು. ಅನುಭವದ ಆಧಾರದ ಮೇಲೆ ಎಲ್ಲವನ್ನು ನಿರ್ವಹಿಸುತ್ತಿದ್ದನಾದರೂ, ಮುಂಚಿನಂತೆ ಜೀತಗಾರನ ರೀತಿ ದುಡಿಯುವ ಶಕ್ತಿ ಇರಲಿಲ್ಲ. ಯಾವಾಗ ಇದು ಕಣ್ಣಿಗೆ ಕಾಣತೊಡಗಿತೋ ಆಗ ಮಾಲೀಕರ ಮುಖದ ಚಹರೆ ಬದಲಾಯಿತು. ಶುರುವಿನಲ್ಲಿ ಅದು ಸಣ್ಣ ಮಟ್ಟದ ತಾತ್ಸಾರ. ಆನಂತರ ಒಂದು ಹಂತದ ರೇಜಿಗೆ, ತದ ನಂತರ ಅಯ್ಯೋ ಇದ್ದರೆ ಇರ‍್ತಾನೆ, ಹೋದರೆ ಹೋಗ್ತಾನೆ ಬಿಡ್ರಿ ಎಂಬಂತಹ ಮಾತುಗಳು ಆತನ ಬಾಯಿಂದ ಹೊರಬರತೊಡಗಿದವು. ಮೊದ ಮೊದಲು ಮಾಲೀಕ ಆಡುತ್ತಿದ್ದ ಇಂತಹ ಮಾತುಗಳು ಬೇರೆಯವರ ಮೂಲಕ ಕಿವಿಗೆ ಬಿದ್ದಾಗ ಈತ ಅಷ್ಟೇನೂ ಹಚ್ಚಿಕೊಳ್ಳಲಿಲ್ಲ. ಆದರೆ ಬರಬರುತ್ತಾ ತನ್ನನ್ನು ಕಂಡರೆ ಮಾಲೀಕ ಗುರ್ರೆನ್ನತೊಡಗಿದಾಗ ಈತ ಕಂಗಾಲಾದ.

ಯಾವುದೋ ಟೆನ್ಷನ್ನಿಗೆ ಹೀಗೆ ಮಾಡುತ್ತಿರಬೇಕು ಎಂದು ಸಮಾಧಾನ ತಂದುಕೊಂಡ. ಆದರೆ ದಿನದಿಂದ ದಿನಕ್ಕೆ ಮಾಲೀಕ ತೋರುವ ತಾತ್ಸಾರ ಜಾಸ್ತಿಯಾಗುತ್ತಲೇ ಹೋಯಿತೇ ವಿನಾ ಕಡಿಮೆಯಾಗಲಿಲ್ಲ. ನೋಡ ನೋಡುತ್ತಿದ್ದಂತೆಯೇ ಈತನ ಜಾಗದಲ್ಲಿ ಬೇರೊಬ್ಬರು ಪ್ರತಿಷ್ಠಾಪಿತರಾದರು.

ಯಾಕೆ ಅಂತ ಕೇಳಲು ಹೋದರೆ ಈ ಕಾರ್ಖಾನೆಗೆ ಮಾಲೀಕ ನೀನೋ, ನಾನೋ ಇಷ್ಟ ಇದ್ದರೆ ಮುಚ್ಕೊಂಡು ಕೆಲಸ ಮಾಡು. ಇಲ್ಲದಿದ್ದರೆ ಕೆಲಸ ಬಿಟ್ಹೋಗು ಅಂತ ನೇರಾನೇರವಾಗಿಯೇ ಹೇಳಿದ. ಈತನಿಗೆ ಆಕಾಶವೇ ಕಳಚಿ ನೆತ್ತಿಯ ಮೇಲೆ ಬಿದ್ದಂತಾಯಿತು. ಇದಾದ ಕೆಲವೇ ದಿನಗಳಲ್ಲಿ ಆತ ಅನಿವಾರ್ಯವಾಗಿ ಕಾರ್ಖಾನೆಯಿಂದ ಹೊರಬರುವ ಸ್ಥಿತಿ ಸೃಷ್ಟಿಯಾಯಿತು. ಈ ಬೆಳವಣಿಗೆಯಿಂದ ಆತ ಎಷ್ಟು ನೊಂದುಕೊಂಡ ಎಂದರೆ ಅಯ್ಯೋ, ಇದೇ ವ್ಯಕ್ತಿಯನ್ನು ನಾನು ದೇವರು ಎಂಬಂತೆ ನೋಡಿದ್ದು. ಇದೇ ವ್ಯಕ್ತಿಗಾಗಿ ನನ್ನ ಬದುಕಿನ ಅಮೂಲ್ಯ ಕಾಲವನ್ನು ಮೀಸಲಿಟ್ಟಿದ್ದು. ಈತನಿಗಾಗಿ ಅಷ್ಟೆಲ್ಲ ದುಡಿದರೂ ಫೈನಲಿ, ಈ ರಿಸಲ್ಟಿಗಾಗಿ ನಾನು ಇಷ್ಟೆಲ್ಲ ವರ್ಷ ಕಾಯಬೇಕಾಯಿತಾ ಅಂತ ಪರಿತಪಿಸಿದ. ಇಂತಹ ಬೆಳವಣಿಗೆ ಯಾರ ಜೀವನದಲ್ಲಿ ಬೇಕಾದರೂ ನಡೆಯಬಹುದು. ನೀನೇ ಹನುಮಪ್ಪ ಅಂತ ಒಬ್ಬ ವ್ಯಕ್ತಿಯನ್ನು ನಂಬುವ ಜನರ ಪೈಕಿ ನೈಂಟಿ ಪರ್ಸೆಂಟಿಗಿಂತ ಹೆಚ್ಚು ಜನರಿಗೆ ಇಂತಹ ಅನುಭವ ಆಗಿಯೇ ಆಗುತ್ತದೆ ಎಂಬುದು ನನ್ನ ಅನುಭವದ ಮಾತು. ಹಾಗಂತ ಎಲ್ಲರೂ ಇದೇ ರೀತಿ ಜನರನ್ನು ಬಳಸಿಕೊಂಡು ಒದ್ದೋಡಿಸಿಬಿಡುತ್ತಾರೆ ಎಂದು ಭಾವಿಸಬೇಕಿಲ್ಲ. ಆದರೆ ಅದಕ್ಕೂ ಮುನ್ನ ನಿಮಗೆ ನಿಮ್ಮ ಇತಿಮಿತಿ ಅರ್ಥವಾಗಿರಬೇಕು. ನಿಮ್ಮ ದಾರಿ ಎತ್ತ ಸಾಗುತ್ತಿದೆ ಅನ್ನುವುದನ್ನು ಕಾಲ ಕಾಲಕ್ಕೆ ಕೂತು ನೋಡಿಕೊಳ್ಳುವ ವಿವೇಚನೆ ಇರಬೇಕು.

ನನ್ನ ಪರಿಚಿತ ರಾಜಕಾರಣಿಯೊಬ್ಬರ ಮನೆಯಲ್ಲಿ ಒಬ್ಬ ಕೆಲಸದವನಿದ್ದಾನೆ. ಆತ ಅವರ ಮನೆಯಲ್ಲಿ ಕೆಲಸ ಮಾಡುತ್ತಾ ಐವತ್ತು ವರ್ಷಗಳೇ ಆದವು. ಈ ರಾಜಕಾರಣಿಯ ತಂದೆ ಶಿಕ್ಷಣ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು ಮಾಡಿದವರು. ಅವರು ಸಕ್ರಿಯರಾಗಿದ್ದಾಗ ಈತ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದ. ಈಗ ಮಗನ ಕಾಲದಲ್ಲೂ ಮುಂದುವರಿದಿದ್ದಾನೆ. ಆತ ತನ್ನ ಒಡೆಯನಿಗೆ ಎಷ್ಟು ನಿಷ್ಠ ಎಂದರೆ, ಒಂದೊಂದು ಸಲ ಊಟದ ಟೈಮು ಮೀರಿದರೆ ಆತ ತನ್ನ ಒಡೆಯನನ್ನೇ ಆಕ್ಷೇಪಿಸುತ್ತಾನೆ. ಕೆಲಸ ಎಲ್ಲ ಇದ್ದಿದ್ದೇ ಸ್ವಾಮಿ, ಮೊದಲು ಹೊತ್ತು ಹೊತ್ತಿಗೆ ಊಟ ಮಾಡಿ ಎನ್ನುತ್ತಾನೆ. ಆತನಿಗೆ ತನ್ನ ಒಡೆಯನ ಬಳಿ ಇಷ್ಟು ಸಲಿಗೆ ಇರುವುದನ್ನು ನೋಡಿದವರು ಯೋ, ನೀನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಿಕೊಳ್ಳಬಹುದು. ಯಾಕಯ್ಯ ಈ ವಯಸ್ಸಿನಲ್ಲೂ ಕೆಲಸ ಮಾಡುತ್ತಿದ್ದೀಯ ಅನ್ನುತ್ತಾರೆ. ಅದಕ್ಕೆ ಆತನ ಉತ್ತರ ಒಂದೇ: ಸ್ವಾಮಿ, ದೇವರು ನನಗೆ ಹೊಟ್ಟೆಗೆ-ಬಟ್ಟೆಗೆ ಕಡಿಮೆ ಮಾಡಿಲ್ಲ. ಬಹಳ ಹಿಂದೆಯೇ ನಮ್ಮ ಯಜಮಾನರು ಮನೆ ಮಾಡಿಕೊಟ್ಟಿದ್ದಾರೆ. ಜೀವನಕ್ಕೆ ಭದ್ರತೆ ಕಲ್ಪಿಸಿಕೊಟ್ಟಿದ್ದಾರೆ. ಈಗಾಗಲೇ ಮಕ್ಕಳೆಲ್ಲ ಓದಿ ಕೆಲಸಕ್ಕೆ ಸೇರಿವೆ. ನಾನೇನು ಮಾಡಲಿ? ನನ್ನನ್ನು ಚೆನ್ನಾಗಿ ನೋಡಿಕೊಂಡ ಈ ಕುಟುಂಬದವರ ಸೇವೆ ಮಾಡಿಕೊಂಡಿರುತ್ತೇನೆ ಅನ್ನುತ್ತಾನೆ.

ಹೇಳಿದಂತೆ ಆತ ಸುಖವಾಗಿಯೂ ಇದ್ದಾನೆ. ಆದರೆ ಎಲ್ಲರಿಗೂ ಜೀವನದಲ್ಲಿ ಇಂತಹ ಯೋಗ್ಯ ಮಾಲೀಕರು ಸಿಗುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ. ಅದು ಸಾವಿರಕ್ಕೆ ಒಬ್ಬರಿಗೋ, ಇಬ್ಬರಿಗೋ ಸಿಗುವ ಭಾಗ್ಯ. ಹೀಗಾಗಿ ಸಾವಿರಕ್ಕೊಬ್ಬ ಭಾಗ್ಯಶಾಲಿ ನಾನೇ ಯಾಕಿರಬಾರದು ಅಂತ ನಂಬುವುದು, ನೀನೇ ಹನುಮಪ್ಪ ಅಂತ ಹೇಳಿ ಒಬ್ಬ ವ್ಯಕ್ತಿಯನ್ನೇ ಬದುಕಿನ ಕೇಂದ್ರ ಬಿಂದುವನ್ನಾಗಿಟ್ಟುಕೊಂಡು ಬದುಕುವುದು ಮೂರ್ಖತನ. ಅಂತಹ ಮೂರ್ಖತನ ಮಾಡುವ ಬದಲು ನಿಮ್ಮ ಬದುಕಿನ ಹರವನ್ನು ಹೆಚ್ಚಿಸಿಕೊಳ್ಳಿ. ಯಾರೊಬ್ಬರೂ ನಿಮ್ಮ ಬದುಕಿನ ಕೇಂದ್ರ ಬಿಂದುವಾಗದಂತೆ ನೋಡಿಕೊಳ್ಳಿ. ಕೇಂದ್ರ ಬಿಂದು ಅಂತಿದ್ದರೆ ನಿಮ್ಮ ಇಡೀ ಗಮನ ಆ ಬಿಂದುವಿನ ಮೇಲೇ ಇರುತ್ತದೆ. ಬದುಕಿಗೆ ವೈಶಾಲ್ಯ ಅಂತ ದಕ್ಕಿಸಿಕೊಂಡರೆ ಇಂತಹ ಅಪಾಯ ಇರುವುದಿಲ್ಲ. ಅಲ್ಲವೇ?

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 September, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books