Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ವಿದೇಶಿ ಬಂಡವಾಳ ತರಲು ಹೊರಟ ಸಿದ್ಧರಾಮಯ್ಯನಿಗೊಂದು ಮಾತು...

ಮುಖ್ಯಮಂತ್ರಿ ಸಿದ್ಧರಾಮಯ್ಯ ವಿದೇಶಿ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಚೀನಾ ಪ್ರವಾಸಕ್ಕೆ ತೆರಳಿದ್ದಾರೆ. ಆರ್ಥಿಕ ಕುಸಿತದ ಹೊಡೆತಕ್ಕೆ ಜಗತ್ತಿನ ಬಹುಪಾಲು ದೇಶಗಳು ತತ್ತರಿಸಿದಂತೆಯೇ ಭಾರತ ಕೂಡ ತತ್ತರಿಸಿದೆ. ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣ ಕುಸಿಯುವುದು, ಹೂಡಿರುವ ಬಂಡವಾಳವನ್ನು ಹಿಂಪಡೆಯುವ ಕೆಲಸ ವ್ಯಾಪಕವಾಗಿ ನಡೆಯುವುದು ಆರ್ಥಿಕ ಕುಸಿತಕ್ಕೆ ಕಾರಣವಾಗುವ ಬಹುದೊಡ್ಡ ಅಂಶ. ಬಂಡವಾಳ ಹೂಡಿಕೆದಾರರು ಯಾವ ಕಾರಣಕ್ಕಾಗಿ ತಮ್ಮ ಬಂಡವಾಳವನ್ನು ಹಿಂಪಡೆಯಲು ಬಯಸುತ್ತಾರೆ ಅಥವಾ ಒಂದು ವ್ಯವಸ್ಥೆಯಲ್ಲಿ ಹೆಚ್ಚಾಗುತ್ತಲೇ ಹೋಗಬೇಕಾದ ಬಂಡವಾಳ ಹೂಡಿಕೆಯ ಪ್ರಮಾಣ ಯಾವ ಕಾರಣಕ್ಕೆ ಕಡಿಮೆಯಾಗುತ್ತದೆ? ಕೈಗಾರಿಕೆಗಳ ಬೆಳವಣಿಗೆಗೆ ನಿರುತ್ತೇಜಕ ವಾತಾವರಣ ಇರುವುದೇ ಬಹುಮುಖ್ಯ ಕಾರಣ. ಇವತ್ತು ಭಾರತದಲ್ಲಿ ಅಂತಹ ವಾತಾವರಣ ಸೃಷ್ಟಿಯಾಗಿದೆ. ಕೇಂದ್ರದ ಯುಪಿಎ ಸರ್ಕಾರದ ಭ್ರಷ್ಟಾಚಾರ ಹಗರಣಗಳು ಯಾವ ಮಟ್ಟದಲ್ಲಿ ಬಂಡವಾಳ ಹೂಡಿಕೆದಾರರನ್ನು ಕಂಗೆಡಿಸಿವೆ ಎಂದರೆ ಭಾರತದಲ್ಲಿ ಹಣ ಹೂಡುವುದು ತುಂಬ ಲಾಭ ತರುವ ವಿಚಾರವಲ್ಲ ಎಂಬ ಅಭಿಪ್ರಾಯ ಮೂಡುತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕೈಗಾರಿಕೆಯನ್ನು ಸ್ಥಾಪಿಸಲು ಅಗತ್ಯವಾದ ಭೂಮಿ, ನೀರು, ವಿದ್ಯುತ್ ಕೊಡುವ ಸಂದರ್ಭದಲ್ಲಿ ಬಂಡವಾಳ ಹೂಡಿಕೆದಾರರ ಜತೆ ಒಪ್ಪಂದ ಮಾಡಿಕೊಳ್ಳುವ ಸರ್ಕಾರಗಳು ಕೈಗಾರಿಕಾ ಸ್ನೇಹಿ ವಾತಾವರಣವನ್ನು ಸೃಷ್ಟಿಸಬೇಕು. ಆದರೆ ಒಂದು ಸಾವಿರ ಕೋಟಿ ರುಪಾಯಿ ಬಂಡವಾಳ ಹೂಡಿಕೆ ಮಾಡಲು ಬರುವವರು ನೂರು ಕೋಟಿ ರುಪಾಯಿ ಕಿಕ್‌ಬ್ಯಾಕ್ ಕೊಡುವ ಅನಿವಾರ್ಯತೆಯನ್ನು ಸೃಷ್ಟಿ ಮಾಡಿದರೆ ಏನಾಗುತ್ತದೆ? ಅಂತಹದೇ ವಾತಾವರಣ ಭಾರತದಲ್ಲಿದೆ. ಅಂತಹದೇ ವಾತಾವರಣ ಕರ್ನಾಟಕದಲ್ಲಿದೆ. ಕರ್ನಾಟಕದಲ್ಲಿ ಇದುವರೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಗಳನ್ನೇ ತೆಗೆದುಕೊಳ್ಳಿ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಉನ್ನತ ಮಟ್ಟದ ಸಮಿತಿಗಳು ಎಷ್ಟು ಕೈಗಾರಿಕೆಗಳಿಗೆ ಅನುಮತಿ ನೀಡಿವೆ ಅನ್ನುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳಿ. ಏಕಗವಾಕ್ಷಿ ಯೋಜನೆಯಡಿ ಕೊಟ್ಟಿರುವ ಪರವಾನಗಿಯ ಲೆಕ್ಕ ತೆಗೆದುಕೊಳ್ಳಿ.

ಈ ಲೆಕ್ಕದ ದೃಷ್ಟಿಯಿಂದ ನೋಡಿದರೆ ಎಸ್ಸೆಂ ಕೃಷ್ಣ ಅವರ ಕಾಲದಿಂದ ಹಿಡಿದು ಇಲ್ಲಿಯ ತನಕ ಕರ್ನಾಟಕದಲ್ಲಿ ಸಾವಿರಾರು ಕೈಗಾರಿಕೆಗಳು ತಲೆ ಎತ್ತಬೇಕಿತ್ತು. ಕನಿಷ್ಠ ಪಕ್ಷ ಇಪ್ಪತ್ತರಿಂದ ಮೂವತ್ತು ಲಕ್ಷ ಕೋಟಿ ರುಪಾಯಿ ಬಂಡವಾಳ ಹೂಡಿಕೆಯಾಗಬೇಕಿತ್ತು. ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಗಬೇಕಿತ್ತು. ಆದರೆ ವಾಸ್ತವವಾಗಿ ಈ ಪ್ರಮಾಣದ ಕೈಗಾರಿಕೆಗಳು ಪ್ರಾರಂಭವಾಗಿವೆಯೇ, ಇಷ್ಟು ಪ್ರಮಾಣದ ಬಂಡವಾಳ ಹೂಡಿಕೆಯಾಗಿದೆಯೇ, ನಿರುದ್ಯೋಗದ ಸಮಸ್ಯೆ ಕಡಿಮೆಯಾಗಿದೆಯೇ ಎಂದು ಗಮನಿಸಿ ನೋಡಿದರೆ ನಿಮಗೆ ನಿರಾಸೆಯಾಗುವುದು ಹಂಡ್ರೆಡ್ ಪರ್ಸೆಂಟ್ ಗ್ಯಾರಂಟಿ. ಯಾಕೆಂದರೆ ಬಂಡವಾಳ ಹೂಡಿಕೆದಾರರ ಸಮಾವೇಶಗಳ ಮೂಲಕ, ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಕೈಗಾರಿಕಾ ಉನ್ನತ ಮಟ್ಟದ ಸಮಿತಿಗಳ ಮೂಲಕ, ಏಕಗವಾಕ್ಷಿ ಯೋಜನೆಯಡಿ ಕ್ಲಿಯರ್ ಮಾಡಿದ ಫೈಲುಗಳ ಲೆಕ್ಕಕ್ಕೂ ಇಲ್ಲಿ ಆರಂಭವಾಗಿರುವ ಕೈಗಾರಿಕೆಗಳ ಲೆಕ್ಕಕ್ಕೂ ಅರ್ಥಾತ್ ಸಂಬಂಧವಿಲ್ಲ. ಇನ್ನು ಬಂಡವಾಳ ಹೂಡಿಕೆ, ಇಪ್ಪತ್ತು ಲಕ್ಷ ಮಂದಿಗೆ ಉದ್ಯೋಗ ದಕ್ಕಿದೆ ಎಂಬುದೆಲ್ಲ ಕೇವಲ ಬೂಸು.

ಯಾಕೆ ಹೀಗಾಗುತ್ತದೆ ಎಂದರೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಹೆಸರಿನಲ್ಲಿ ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಬರುವವರ ಪೈಕಿ ಅರ್ಧಕ್ಕೂ ಹೆಚ್ಚು ಮಂದಿಗೆ ಕೈಗಾರಿಕೆಗಳನ್ನು ಪ್ರಾರಂಭಿಸುವ ಉದ್ದೇಶವೇ ಇರುವುದಿಲ್ಲ. ಇಂತಹವರ ಪೈಕಿ ಬಹುತೇಕರು ನಮ್ಮ ಮಂತ್ರಿಗಳು, ಅಧಿಕಾರಿಗಳು, ಸ್ಥಳೀಯ ಬಂಡವಾಳಶಾಹಿಗಳೇ ಇರುತ್ತಾರೆ. ಈ ಪೈಕಿ ಬಹುತೇಕರ ಕಣ್ಣು ನೆಟ್ಟಿರುವುದು ಭೂಮಿಯ ಮೇಲೆ. ಯಾಕೆಂದರೆ ಮಾಡಿಟ್ಟ ಹಣವನ್ನು ಭೂಮಿಯ ಮೇಲೆ ಬಂಡವಾಳವನ್ನಾಗಿ ಹೂಡಿದರೆ ಅದು ಒಂದಕ್ಕೆ ಹತ್ತು ಪಟ್ಟು ಲಾಭ ತರುತ್ತದೆ. ಹೀಗಾಗಿ ಬಹುತೇಕ ಬಂಡವಾಳ ಹೂಡಿಕೆದಾರರು, ವಿಶೇಷವಾಗಿ ನಮ್ಮಲ್ಲಿರುವ ಪ್ರಭಾವಿಗಳಿಗೆ ಭೂಮಿಯ ಮೇಲೇ ಹೆಚ್ಚಿನ ಕಣ್ಣು. ಹೋಗಲಿ, ಹೀಗೆ ಭೂಮಿಯನ್ನು ಪಡೆದು ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರಾ ಎಂದರೆ ಅಲ್ಲಿ ನೆಪ ಮಾತ್ರಕ್ಕೆ ಒಂದು ಕಟ್ಟಡ ಎದ್ದಿರುತ್ತದೆ. ನೋಡುವವರ ಕಣ್ಣಿಗೆ ಅದು ಕೈಗಾರಿಕೆ. ವಾಸ್ತವದಲ್ಲಿ ಅಲ್ಲಿ ಕೈಗಾರಿಕೆಯೂ ಇರುವುದಿಲ್ಲ, ಕೆಲಸಗಾರರೂ ಇರುವುದಿಲ್ಲ. ಬಂಡವಾಳ ಹೂಡಿಕೆಯೂ ಆಗುವುದಿಲ್ಲ.

ಸಿಬಿಐ ಮೂಲಕವೂ, ಇನ್ಯಾವುದೋ ತನಿಖಾ ಸಂಸ್ಥೆಯ ಮೂಲಕ ಒಂದು ಪ್ರಾಮಾಣಿಕವಾದ ತನಿಖೆ ನಡೆಸಿದರೆ ಕೈಗಾರಿಕೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಕೊಟ್ಟ ಬಹುತೇಕ ಭೂಮಿ ಇರುವುದು ರಿಯಲ್ ಎಸ್ಟೇಟ್ ಡಾನುಗಳ ಕೈಲೇ ಹೊರತು ನಿಜವಾದ ಕೈಗಾರಿಕೋದ್ಯಮಿಗಳ ಕೈಲಲ್ಲ. ಮೈಸೂರು-ಬೆಂಗಳೂರಿನ ಮಧ್ಯೆ ಭಾರೀ ರಸ್ತೆ ಮಾಡುತ್ತೇವೆ ಅಂತ ಇಪ್ಪತ್ತು ಸಾವಿರ ಎಕರೆ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳಲಾಯಿತಲ್ಲ ಹೀಗೆ ವಶಪಡಿಸಿಕೊಂಡ ಭೂಮಿಯ ಪೈಕಿ ಬಹುತೇಕ ಭೂಮಿ ಕೃಷಿ ಭೂಮಿ. ಲಕ್ಷಾಂತರ ಮಂದಿಯ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತಿದ್ದ, ಈ ನಾಡಿನ ಜನರ ಹೊಟ್ಟೆ ತುಂಬಿಸಲು ನೆರವಾಗುತ್ತಿದ್ದ ಭೂಮಿ. ಇವತ್ತು ಹೋಗಿ ನೋಡಿ. ಈ ಭೂಮಿಯಲ್ಲಿ ರಸ್ತೆಯೂ ಆಗಿಲ್ಲ. ಬೆಳೆ ಬೆಳೆಯುವ ಕೆಲಸವೂ ಆಗುತ್ತಿಲ್ಲ. ಅಲ್ಪಸ್ವಲ್ಪ ಪರಿಹಾರದ ಮೊತ್ತ ಪಡೆದ ರೈತ ಅದನ್ನು ಖರ್ಚು ಮಾಡಿಕೊಂಡು ಎಷ್ಟೋ ದಿನಗಳಾದವು. ಇದಕ್ಕೆ ಯಾರು ಹೊಣೆ? ಜನತಾದಳ ಸರ್ಕಾರದಿಂದ ಹಿಡಿದು ಕಾಂಗ್ರೆಸ್, ಬಿಜೆಪಿಯ ತನಕ ಎಲ್ಲ ಸರ್ಕಾರಗಳೂ ಈ ಅನ್ಯಾಯದಲ್ಲಿ ಸಮಾನ ಪಾಲುದಾರಿಕೆ ಹೊಂದಿವೆ.

ಬೆಂಗಳೂರು-ಮೈಸೂರು ಮಧ್ಯೆ ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಎಷ್ಟು ಅನ್ನುವುದನ್ನು ಗಮನಿಸಿ ಆ ಪ್ರಮಾಣದ ಭೂಮಿ ನೀಡಿದ್ದರೆ ಅದರ ಮಾತು ಬೇರೆ ಇರುತ್ತಿತ್ತು. ಒಂದು ರಸ್ತೆಯ ನಿರ್ಮಾಣ ಎಂದರೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಆದರೆ ಈ ಯೋಜನೆಗೆ ಅಗತ್ಯಕ್ಕಿಂತಲೂ ಹೆಚ್ಚಿನ ಭೂಮಿ ಕೊಡುವುದರ ಮೂಲಕ ಏಕಕಾಲಕ್ಕೆ ರೈತರ ಬದುಕು ಮೂರಾಬಟ್ಟೆಯಾಯಿತು. ಇತ್ತ ರಸ್ತೆಯೂ ಆಗಲಿಲ್ಲ. ಅತ್ತ ಕೃಷಿ ವ್ಯವಸ್ಥೆಯ ಮೇಲೂ ವ್ಯತಿರಿಕ್ತ ಪರಿಣಾಮವಾಯಿತು. ಹೀಗೆ ನೋಡುತ್ತಾ ಹೋದರೆ ಕೇವಲ ಬೆಂಗಳೂರು-ಮೈಸೂರು ರಸ್ತೆ ಒಂದೇ ಅಂತಲ್ಲ. ಇಂತಹ ನೂರಾರು ಯೋಜನೆಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಭೂಮಿ ಕೊಡಲಾಗಿದೆ. ಈ ಭೂಮಿಯ ಪೈಕಿ ಬಹುತೇಕ ಭೂಮಿ ರಿಯಲ್ ಎಸ್ಟೇಟ್ ಡಾನುಗಳ ವಶದಲ್ಲಿದೆ. ಅಲ್ಲಿ ಕೈಗಾರಿಕೆಯೂ ಇಲ್ಲ. ಉದ್ಯೋಗಗಳೂ ಸೃಷ್ಟಿಯಾಗಿಲ್ಲ. ವಿಪರ್ಯಾಸವೆಂದರೆ ಯಾವ ಉದ್ಯಮಕ್ಕೆ ಎಷ್ಟು ಪ್ರಮಾಣದ ಭೂಮಿಯ ಅಗತ್ಯವಿದೆ, ಇಷ್ಟು ಭೂಮಿ ಕೊಟ್ಟ ಮೇಲೆ ಅದು ಕೃಷಿ ಚಟುವಟಿಕೆಗಿಂತ ಎಷ್ಟು ಪ್ರಮಾಣದ ಆದಾಯವನ್ನು ಹೆಚ್ಚಿಸುತ್ತದೆ, ಎಷ್ಟು ಮಂದಿಗೆ ಉದ್ಯೋಗ ಕೊಡುತ್ತದೆ ಅನ್ನುವ ಕುರಿತು ನಿಖರವಾದ ಒಂದು ಲೆಕ್ಕಾಚಾರವೇ ನಮ್ಮ ಕೈಗಾರಿಕಾ ನೀತಿಯಲ್ಲಿ ಇಲ್ಲ.

ಮಾತೆತ್ತಿದರೆ ಲಕ್ಷಾಂತರ ಕೋಟಿ ರುಪಾಯಿ ಬಂಡವಾಳ ತರುತ್ತೇವೆ. ಲಕ್ಷಾಂತರ ಮಂದಿಗೆ ಉದ್ಯೋಗ ಸೃಷ್ಟಿಸುತ್ತೇವೆ ಎನ್ನುವ ಮಾತುಗಳು ಹೊರಬರುತ್ತವೆಯೇ ವಿನಾ ಆ ಮೂಲಕ ನಮ್ಮ ಕೃಷಿ ವ್ಯವಸ್ಥೆಯ ಮೇಲೆ ಯಾವ ಮಟ್ಟದ ಹೊಡೆತ ಬೀಳುತ್ತಿದೆ ಅನ್ನುವ ಕಡೆ ಗಮನವನ್ನೇ ಹರಿಸುವ ಕೆಲಸ ಆಗುತ್ತಿಲ್ಲ. ಮೂರು ವರ್ಷಗಳ ಹಿಂದೆ ನೂರಾ ಇಪ್ಪತ್ತು ಲಕ್ಷ ಟನ್ ಆಹಾರ ಧಾನ್ಯ ಬೆಳೆದ ಕರ್ನಾಟಕ ಇವತ್ತು ನೂರು ಲಕ್ಷ ಟನ್ ಆಹಾರ ಧಾನ್ಯ ಬೆಳೆಯಲೂ ತೇಕಾಡುತ್ತಿದೆ. ದಿನದಿಂದ ದಿನಕ್ಕೆ ಆಹಾರ ಧಾನ್ಯಗಳ ಬೇಡಿಕೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆ ಆಗುವುದಿಲ್ಲವಲ್ಲ. ಈ ಕುರಿತು ನಮ್ಮಲ್ಲಿ ಚಿಂತನೆ ನಡೆಯುತ್ತಿಲ್ಲ. ಕೈಗಾರಿಕೆಗಳನ್ನು ಸ್ಥಾಪಿಸುವ ಭರದಲ್ಲಿ ಕೃಷಿಯನ್ನೂ ಒಂದು ಕೈಗಾರಿಕೆ ಎಂದು ಭಾವಿಸುವ ಮನಸ್ಸೇ ನಮಗಿಲ್ಲದಂತಾಗಿದೆ. ಹೀಗಾಗಿ ರೈತನಿಗೆ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಕೊಡುತ್ತೇವೆ ಎಂದರೂ ಕೃಷಿಯನ್ನು ಅವಲಂಬಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.


ಒಂದು ಕಾಲದಲ್ಲಿ ಬೆಂಗಳೂರಿನ ಹೊರವಲಯ ಅನ್ನಿಸಿಕೊಂಡಿದ್ದ ಯಲಹಂಕ, ದೇವನಹಳ್ಳಿ, ಜಿಗಣಿ, ನೆಲಮಂಗಲದಂತಹ ಪ್ರದೇಶಗಳನ್ನು ಹೋಗಿ ನೋಡಿ. ಅಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿತ್ತು ಅನ್ನುವುದಕ್ಕೆ ನಿಮಗೆ ಯಾವ ಪುರಾವೆಗಳೂ ಸಿಗುವುದಿಲ್ಲ. ಕೈಗಾರಿಕೋದ್ಯಮ ಬೆಳೆಯಬೇಕು ಎಂಬ ಭರದಲ್ಲಿ ಅಲ್ಲಿರುವ ಬಹುತೇಕ ರೈತರು ಭೂಮಿ ಕಳೆದುಕೊಂಡಿದ್ದಾರೆ. ಭೂಮಿ ಉಳಿಸಿಕೊಂಡವರು ಅದನ್ನು ಸೈಟುಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಿ ಕಾಲ ಕಳೆಯುತ್ತಿದ್ದಾರೆ. ಯಾವಾಗ ಒಂದು ವ್ಯವಸ್ಥೆ ತನ್ನ ಮಡಿಲಿನಿಂದಲೇ ಬಂಡವಾಳ ಹೂಡಿಕೆದಾರನನ್ನು ಸೃಷ್ಟಿಸುವುದಿಲ್ಲವೋ ಆಗ ಆ ವ್ಯವಸ್ಥೆ ಗಂಡಾಂತರದ ಹಾದಿಯತ್ತ ಸಾಗುತ್ತಿದೆ ಎಂದೇ ಅರ್ಥ. ಯಾಕೆಂದರೆ ನಿಮ್ಮ ನೆಲವನ್ನು ಬೇರೆ ರಾಜ್ಯದವರೋ, ಬೇರೆ ದೇಶದವರೋ ಬಂದು ಪಡೆಯುತ್ತಾರೆ. ಕೈಗಾರಿಕೆಗಳನ್ನು ಸ್ಥಾಪಿಸುತ್ತಾರೆ. ಹಾಕಿದ ಬಂಡವಾಳಕ್ಕೆ ಪ್ರತಿಫಲ ಪಡೆಯುತ್ತಾರೆ. ಆದರೆ ನಮ್ಮಲ್ಲಿ ದುಡ್ಡು ಮಾಡುವ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ತಮ್ಮ ಸಂಪತ್ತಿನಿಂದ ಭೂಮಿ ಖರೀದಿಸುವುದು ಮುಖ್ಯವೇ ಹೊರತು ಕೈಗಾರಿಕೆಗಳನ್ನು ಸ್ಥಾಪಿಸುವುದು ಆದ್ಯತೆಯ ವಿಷಯವೇ ಅಲ್ಲ. ಹೀಗಾಗಿ ಕರ್ನಾಟಕದಲ್ಲಿ ಕನ್ನಡಿಗ ಉದ್ಯಮಿಗಳ ಸಂಖ್ಯೆ ವಿರಳ.

ಯಾವಾಗ ಇಂತಹ ಸ್ಥಿತಿ ನಿರ್ಮಾಣವಾಗುತ್ತದೋ ಆಗ ನಾವು ಆರ್ಥಿಕ ವ್ಯವಸ್ಥೆಗೆ ಚೈತನ್ಯ ನೀಡಲು ಬೇರೆ ರಾಜ್ಯದ, ಬೇರೆ ದೇಶಗಳ ಬಂಡವಾಳ ಹೂಡಿಕೆದಾರರನ್ನು ನೆಚ್ಚಿಕೊಳ್ಳುವ ಸ್ಥಿತಿ ಸೃಷ್ಟಿಯಾಗುತ್ತದೆ. ಲಾಭವಿಲ್ಲದೆ ಅವರೇಕೆ ಬಂದು ಬಂಡವಾಳ ಹೂಡುತ್ತಾರೆ? ಆದರೆ ಹಾಗೆ ಬಂದು ಬಂಡವಾಳ ಹೂಡುವವರಿಗೆ ಅವರು ಹಾಕುವ ಬಂಡವಾಳ ಎಷ್ಟು, ಅದರಿಂದ ಸೃಷ್ಟಿಯಾಗುವ ಉದ್ಯೋಗ ಎಷ್ಟು, ಅವರು ಸ್ಥಾಪಿಸುವ ಉದ್ಯಮಕ್ಕೆ ಅಗತ್ಯವಾದ ಭೂಮಿ ಎಷ್ಟು ಅನ್ನುವುದರ ಕರಾರುವಾಕ್ಕು ಲೆಕ್ಕ ಹಾಕಬೇಕು. ಆ ಪ್ರಮಾಣದ ವ್ಯವಸ್ಥೆ ಮಾಡಿಕೊಡಲು ಯಾವ ಅಡ್ಡಿಯೂ ಆಗದಂತೆ ನೋಡಿಕೊಳ್ಳಬೇಕು. ಕೇಂದ್ರದ ಯುಪಿಎ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಇದನ್ನು ಮಾಡಲಾಗುತ್ತಿಲ್ಲ ಎಂಬ ಕಾರಣಕ್ಕಾಗಿಯೇ ನಮಗೆ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರಮೋದಿ ಹೀರೋ ಥರ ಕಾಣುತ್ತಿರುವುದು.


ಅಲ್ಲಿ ಒಂದು ಕೈಗಾರಿಕೆಯನ್ನು ಸ್ಥಾಪಿಸಲು ಒಬ್ಬ ಉದ್ಯಮಿ ಮುಂದೆ ಬಂದ ಅಂತಿಟ್ಟುಕೊಳ್ಳಿ. ಈ ಕುರಿತ ಸಮಗ್ರ ಯೋಜನಾ ವರದಿ ನರೇಂದ್ರಮೋದಿ ಅವರ ಟೇಬಲ್ಲಿನ ಮೇಲೆ ಬರುತ್ತದೆ. ಮೋದಿ ಅದನ್ನು ಗಮನಿಸುತ್ತಾರೆ. ಉದ್ಯಮಿಯ ಹಿನ್ನೆಲೆ ಏನು, ಆತ ನಿಜಕ್ಕೂ ಬಂಡವಾಳ ಹೂಡಲು ಆಸಕ್ತನಾಗಿದ್ದಾನಾ, ಆತ ಹಾಕುವ ಬಂಡವಾಳದ ಮೂಲಕ ನನ್ನ ರಾಜ್ಯಕ್ಕೆ ಲಾಭ ಆಗುತ್ತದಾ, ಇದು ರಿಯಲ್ ಎಸ್ಟೇಟ್ ದಂಧೆಯ ಉದ್ದೇಶ ಇಟ್ಟುಕೊಂಡಿಲ್ಲ ಅನ್ನುವುದನ್ನು ಪರಿಶೀಲಿಸುತ್ತಾರೆ. ಈ ವಿಷಯದಲ್ಲಿ ಅವರಿಗೆ ತೃಪ್ತಿಯಾಯಿತು ಎಂದರೆ ನಿಗದಿತ ದಿನ ಉದ್ಯಮಿಯ ಭೇಟಿಗೆ ಮುಹೂರ್ತ ಫಿಕ್ಸಾಗುತ್ತದೆ. ಆ ದಿನ ನರೇಂದ್ರಮೋದಿಯ ಜತೆ ಮಾತುಕತೆ ನಡೆಸುವ ಉದ್ಯಮಿ ನಗುನಗುತ್ತಾ ಹೊರಗೆ ಬರುತ್ತಾನೆ. ಯಾಕೆಂದರೆ ತಾನು ಸ್ಥಾಪಿಸಲು ಉದ್ದೇಶಿಸಿರುವ ಭೂಮಿ, ನೀರು, ವಿದ್ಯುತ್ ಪಡೆಯಲು ಆತ ಹತ್ತಾರು ಕಡೆ ಅಲೆದಾಡುವ ಸ್ಥಿತಿ ಇರುವುದಿಲ್ಲ.

ನಿಮ್ಮ ಕಾರ್ಖಾನೆ ಇಂತಹ ದಿನ ಪ್ರಾರಂಭವಾಗಬೇಕು ಎಂದು ನರೇಂದ್ರಮೋದಿ ಗಡುವು ನೀಡುತ್ತಾರೆ. ನಿಮಗೆ ಗೊತ್ತಿರಲಿ. ನರೇಂದ್ರಮೋದಿ ನಿಗದಿ ಮಾಡಿದ ಮುಹೂರ್ತಕ್ಕಿಂತ ಮುನ್ನವೇ ಬಹುತೇಕ ಕೈಗಾರಿಕೆಗಳು ಆರಂಭವಾಗುತ್ತವೆ. ಇವತ್ತು ಇಡೀ ದೇಶದಲ್ಲಿ ಬಂಡವಾಳ ಹೂಡಿಕೆಗೆ ಗುಜರಾತ್ ಮಾತ್ರವೇ ಪ್ರಶಸ್ತ ರಾಜ್ಯ ಅಂತ ಕೈಗಾರಿಕೋದ್ಯಮಿಗಳು ಯಾಕೆ ಭಾವಿಸುತ್ತಾರೆ ಅಂದರೆ ಅವರು ರಾಜಕಾರಣಿಗಳಿಗೆ, ಅಧಿಕಾರಶಾಹಿ ವ್ಯವಸ್ಥೆಗೆ ಲಂಚ ಕೊಡಬೇಕಿಲ್ಲ. ಅದಕ್ಕಾಗಿ ಪರದಾಡಬೇಕಿಲ್ಲ. ಐದಾರು ಜತೆ ಚಪ್ಪಲಿ ಹರಿದುಕೊಳ್ಳಬೇಕಿಲ್ಲ. ಹಾಗಂತ ಉದ್ಯಮಿಗಳು ನರೇಂದ್ರಮೋದಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲ ಅಂದುಕೊಂಡರೆ ಅದೂ ತಪ್ಪು. ಚುನಾವಣೆ ಬಂದ ಕಾಲಕ್ಕೆ ನರೇಂದ್ರಮೋದಿ ಕೇಳುವುದಿರಲಿ, ಈ ಉದ್ಯಮಿಗಳ ಪೈಕಿ ಬಹುತೇಕರು ಎಲೆಕ್ಷನ್ ಫಂಡು ಕೊಡುತ್ತಾರೆ.

ಮುಂಬರುವ ಪಾರ್ಲಿಮೆಂಟ್ ಚುನಾವಣೆಯ ಹೊತ್ತಿಗೆ ನರೇಂದ್ರಮೋದಿ ಬಿಜೆಪಿಯ ಪ್ರಧಾನಿ ಕ್ಯಾಂಡಿಡೇಟ್ ಆಗಲಿ ಎಂಬ ಮಾತು ಯಾಕೆ ಈ ಮಟ್ಟದಲ್ಲಿ ಕೇಳಿ ಬರುತ್ತಿದೆ ಹೇಳಿ? ಅದು ಕಾರ್ಪೋರೇಟ್ ವಲಯದ ಬಯಕೆ. ಅದೇ ಕಾರಣಕ್ಕಾಗಿ ಮೋದಿ ಹೆಸರಿನ ಮುಂದೆ ಬೇರೆ ನಾಯಕರ ಹೆಸರು ಕೇಳಿ ಬರುತ್ತಿಲ್ಲ. ಲಾಲ್‌ಕೃಷ್ಣ ಅಡ್ವಾಣಿಯವರಂತಹ ನಾಯಕರ ಹೆಸರೇ ಮೋದಿ ಹವಾದ ಮುಂದೆ ಹಾರಿ ಹೋಗಿದೆ ಎಂದರೆ ಕಾರ್ಪೋರೇಟ್ ವಲಯ ಯಾವ ಮಟ್ಟಿಗೆ ಮೋದಿ ಮೋದಿ ಎಂದು ಜಪಿಸುತ್ತಿರಬೇಕು? ಅಂದ ಹಾಗೆ ಇವತ್ತು ಮೋದಿ ವಿರುದ್ಧ ಕಿಡಿ ಕಾರುವ ಒಂದು ವರ್ಗವೂ ಇದೆ. ಅದು ಗೋಧ್ರಾ ಹತ್ಯಾಕಾಂಡದ ಮಾತಾಡುತ್ತಾ, ಎನ್‌ಕೌಂಟರ್ ಪ್ರಕರಣಗಳ ಹೆಸರಿನಲ್ಲಿ ಕೂಗಾಡುತ್ತಾ ಹಾಹಾಕಾರ ಎಬ್ಬಿಸುತ್ತಿದೆ. ಆದರೆ ಈ ಬೆಳವಣಿಗೆಗಳ್ಯಾವುದೂ ಮೋದಿಯ ನಾಗಾಲೋಟವನ್ನು ತಡೆಯುವುದು ಕಷ್ಟ.


ಯಾಕೆಂದರೆ ಕೇಂದ್ರದ ಯುಪಿಎ ಸರ್ಕಾರದ ಹಗರಣಗಳು ದಿನಕ್ಕೊಂದರಂತೆ ಬೀದಿಗೆ ಬರುತ್ತಿವೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಪಟ್ಟ ಫೈಲುಗಳೇ ನಾಪತ್ತೆಯಾಗುತ್ತವೆ ಮತ್ತು ಇವು ನಾಪತ್ತೆಯಾಗುವುದಕ್ಕೂ ನನಗೂ ಏನು ಸಂಬಂಧ? ನಾನೇನು ಆ ಫೈಲುಗಳನ್ನು ಕಾಯುತ್ತಾ ಕೂರಲು ಸಾಧ್ಯವೇ? ಎಂದು ಪ್ರಧಾನಿ ಮನ್‌ಮೋಹನ್‌ಸಿಂಗ್ ಪಕ್ಕಾ ಯಬಡೇಸಿಯಂತೆ ಮಾತಾಡುತ್ತಾರೆ. ಅಲ್ರೀ, ಲಕ್ಷಾಂತರ ಕೋಟಿ ರುಪಾಯಿ ಹಗರಣ ನಡೆದಿದೆ. ಅದಕ್ಕೆ ಸಂಬಂಧಪಟ್ಟ ಕಡತಗಳು ನಾಪತ್ತೆಯಾಗಿವೆ ಎಂದರೆ ಅದಕ್ಕೂ ನನಗೂ ಏನು ಸಂಬಂಧ ಅಂತ ಕೇಳುತ್ತಾರಲ್ಲ ಇವರನ್ನು ಈ ದೇಶ ಪ್ರಧಾನಿ ಅಂತ ನೋಡುತ್ತಿದೆಯೋ ಅಥವಾ ವಾಚ್‌ಮನ್ ಅಂತ ನೋಡುತ್ತಿದೆಯೋ ಹಾಗೆಂಬ ಪ್ರಶ್ನೆಗಳು ಯಾವ ರೀತಿ ಹರಿದಾಡುತ್ತಿವೆ ಎಂದರೆ ಮುಂದಿನ ಕೆಲ ದಿನಗಳಲ್ಲಿ ಕೇಂದ್ರದ ಯುಪಿಎ ಸರ್ಕಾರ ಮಕಾಡೆ ಮಲಗುವುದು ಗ್ಯಾರಂಟಿ ಅನ್ನಿಸತೊಡಗಿದೆ.

ಇವತ್ತು ಚೀನಾಕ್ಕೆ ಹೋಗಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುತ್ತೇವೆ ಅಂತ ಕೂತಿರುವ ಸಿದ್ಧರಾಮಯ್ಯ ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಒಂದು ನಾಡಿನ ಅಭಿವೃದ್ಧಿಗಾಗಿ ಕೈಗಾರಿಕೆಗಳ ಅಗತ್ಯವಿದೆ ಅನ್ನುವುದು ನಿಜ. ಆದರೆ ಹತ್ತು ಜನರ ಉದ್ಯೋಗ ಕಳೆಯುವ ಒಂದು ಕೈಗಾರಿಕೆ ನೂರು ಜನರಿಗೆ ಉದ್ಯೋಗ ಕೊಡುವ ಶಕ್ತಿ ಹೊಂದಿರಬೇಕು. ಇಲ್ಲದಿದ್ದರೆ ಅಂತಹ ಕೈಗಾರಿಕೆಗಳ ಅಗತ್ಯವೇ ನಮಗಿಲ್ಲ. ಅದೇ ರೀತಿ ಕೈಗಾರಿಕೆಗಳನ್ನು ಸ್ಥಾಪಿಸುವವರ ಚರಿತ್ರೆಯೂ ಒಂದು ಸರ್ಕಾರದ ಗಮನದಲ್ಲಿರಬೇಕು. ಮೊನ್ನೆ ಮೊನ್ನೆಯ ತನಕ ಪೈಸೆ ಪೈಸೆಗೂ ಲಾಟರಿ ಹೊಡೆಯುತ್ತಿದ್ದವರು ಇವತ್ತು ಅಧಿಕಾರ ಹಿಡಿದು ಕೋಟಿಗಟ್ಟಲೆ ಸಂಪಾದಿಸಿದ ಮಾತ್ರಕ್ಕೆ ಅವರು ಕೈಗಾರಿಕೋದ್ಯಮಿಗಳಾಗಲು ಸಾಧ್ಯವಿಲ್ಲ. ಬದಲಿಗೆ ರಿಯಲ್ ಎಸ್ಟೇಟ್ ಡಾನುಗಳಾಗಬಹುದು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧರಾಮಯ್ಯ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲಿ. ಅಂತಹ ಮುನ್ನೆಚ್ಚರಿಕೆ ಇಟ್ಟುಕೊಂಡು ಕೆಲಸ ಮಾಡಿದರೆ ಸಹಜವಾಗಿಯೇ ಒಂದು ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಹಾಗಾಗದಿರಲಿ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 14 September, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books