Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ದೀನರಾಗಿ ಬಂದವರಿಗೆ ನೆರವು ನೀಡಿ ಆದರೆ ಧಿಮಾಕು ತೋರಿಸಬೇಡಿ

''ದೀನ ನಾ ಬಂದಿರುವೆ, ಬಾಗಿಲಲಿ ನಿಂದಿರುವೆ'' ಎಂಬ ದಾಸವಾಣಿಯನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. ದೇವರು ನಿಮಗೆ ದಕ್ಕಬೇಕೆಂದರೆ ಇಂತಹ ಕಾತರಿಕೆ ಇರಲೇಬೇಕು, ಇಂತಹ ಕಾತರಿಕೆ ಯಾವ ಎತ್ತರಕ್ಕೆ ತಲುಪಬಹುದು ಎಂಬುದಕ್ಕೆ ಈ ದಾಸವಾಣಿಗಿಂತ ಉತ್ತಮ ಉದಾಹರಣೆ ಬೇರಿಲ್ಲ. ದೇವರ ವಿಷಯದಲ್ಲಿ ಇಂತಹ ದೈನ್ಯಭಾವ ಇದ್ದರೆ ಪಾರಮಾರ್ಥಿಕ ಬದುಕು ಎತ್ತರಕ್ಕೆ ಏರುತ್ತಾ ಹೋಗುತ್ತದೆ. ಆದರೆ ಲೌಕಿಕ ಬದುಕಿನಲ್ಲಿ ನಾವು ತುಂಬ ಸಲ ದೈನ್ಯತೆಯ ಸ್ತರಕ್ಕೆ ತಲುಪುತ್ತೇವೆ. ಯಾವುದೋ ಕಷ್ಟ ನಮ್ಮ ಸೊಂಟಕ್ಕೆ ಅಮರಿಕೊಂಡು, ಭುಜವನ್ನೇರಿ, ನೆತ್ತಿಯ ಮೇಲೆ ಕುಳಿತು ಥಕ ಥೈ ಅನ್ನುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಇದರಿಂದ ನಮ್ಮನ್ನು ಪಾರು ಮಾಡುವವರು ಇದ್ದಾರೆ ಎಂದರೆ ಅಂತಹವರ ಬಳಿ ದೀನರಾಗಿಯೇ ಹೋಗುತ್ತೇವೆ. ಅದನ್ನು ಒಂದೊಂದು ಸಲ ನಾವು ವಿನಯ ಅಂತ ಕರೆಯಬಹುದು. ಹಂಬಲ್‌ನೆಸ್ ಅಂತ ಕರೆಯಬಹುದು. ಒಟ್ಟಿನಲ್ಲಿ ಯಾವುದೇ ಹೆಸರಿನಿಂದ ಕರೆದರೂ ನಾವು ನಮ್ಮ ಕಷ್ಟ ಪರಿಹರಿಸಿ ಅಂತ ಇನ್ನೊಬ್ಬರ ಬಳಿ ಮೊರೆಯಿಡುವುದು ಎಂದರೆ ದೈನ್ಯಭಾವ ನಮ್ಮನ್ನು ಆವರಿಸಿರುತ್ತದೆ ಅಂತಲೇ ಅರ್ಥ.

ಇದು ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲೂ ಬರುತ್ತದೆ. ದೀನನಾಗದ ಮನುಷ್ಯನೇ ಅಪರೂಪ ಎಂದು ಹೇಳಬಹುದೇನೋ? ಆದರೆ ಕಷ್ಟ ಬಂದಾಗ ಇಂತಹ ದೈನ್ಯಭಾವವನ್ನು ಪ್ರದರ್ಶಿಸುವ ನಾವು, ಇನ್ನೊಬ್ಬರು ದೀನಭಾವದಿಂದ ನಮ್ಮ ಎದುರು ಬಂದು ನಿಂತಾಗ ಅಪ್ಪಿತಪ್ಪಿಯೂ ಅವರ ಬಗ್ಗೆ ಕೊಂಕು ಮಾತನಾಡಕೂಡದು. ನಮ್ಮಿಂದಲೇ ನಿನ್ನ ಬದುಕು ಉದ್ಧಾರವಾಗಬೇಕಿದೆ ಎಂಬಂತೆ ವರ್ತಿಸಕೂಡದು. ವಾಸ್ತವವಾಗಿ ಹೇಳಬೇಕೆಂದರೆ ಇನ್ನೊಬ್ಬರ ಕಷ್ಟ, ನೋವಿಗೆ ಸ್ಪಂದಿಸುವ ಅವಕಾಶ, ಶಕ್ತಿ ನಿಮಗೆ ಸಿಕ್ಕರೆ ಅದು ನಿಮ್ಮ ಯೋಗ ಅಂತಲೇ ಹೇಳಬೇಕು. ಆದರೆ ನೆನಪಿಡಿ, ಇಂತಹ ಯೋಗ ದಕ್ಕಿದಾಗ ನಿರ್ವಂಚನೆಯಿಂದ, ನಿಸ್ವಾರ್ಥತೆಯಿಂದ ಅದನ್ನು ಮಾಡಿ ಮುಗಿಸಿಬಿಡಿ. ದೀನನಾಗಿ ಬಂದವನು ಆತ್ಮವಿಶ್ವಾಸದಿಂದ ವಾಪಸಾಗುವಂತೆ ಮಾಡಿ. ಆದರೆ ತುಂಬ ಸಲ ಏನಾಗುತ್ತದೆ ಅಂದರೆ ನಾವು ಇನ್ನೊಬ್ಬರಿಗೆ ಉಪಕಾರ ಮಾಡುವ ವಿಷಯದಲ್ಲಿ ಉದಾರವಾಗಿ ವರ್ತಿಸಿದರೂ ಆಳದಲ್ಲಿ ಒಂದು ಇಗೋ ಎಂಬುದು ಹೃದಯವನ್ನು ಆವರಿಸಿರುತ್ತದೆ. ನನ್ನ ಕೆಪ್ಯಾಸಿಟಿ ಹೇಗಿದೆ ಎಂದರೆ ಹತ್ತು ಜನರಿಗೆ ಒಳ್ಳೆಯದನ್ನು ಮಾಡುವ ಶಕ್ತಿ ನನಗಿದೆ ಎಂಬ ಭಾವ ಕರಿಮೋಡ ಆಕಾಶವನ್ನು ದಟ್ಟೈಸುವಂತೆ ನಮ್ಮ ಮನಸ್ಸಿನ ಸುತ್ತ ಆವರಿಸಿರುತ್ತದೆ.

ನನ್ನ ಪ್ರಕಾರ ಇದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ. ಯಾವತ್ತೂ ಅಷ್ಟೇ. ಇನ್ನೊಬ್ಬರಿಗೆ ಉಪಕಾರ ಮಾಡುವ ಸನ್ನಿವೇಶ ಬಂದರೆ, ಅಂತಹ ಉಪಕಾರ ಮಾಡಿ ಅವರ ಕಷ್ಟ ಪರಿಹರಿಸುವ ಶಕ್ತಿ ನಮಗಿದ್ದರೆ ಅದನ್ನು ಮಾಡಿ ಮುಗಿಸಿ ಮರೆತುಬಿಡಬೇಕು. ಅದನ್ನು ಬಿಟ್ಟು ನಿಮ್ಮ ಬಳಿ ದೀನನಾಗಿ ಬಂದವನ ಕಷ್ಟ ಪರಿಹರಿಸಿ, ಇಡೀ ಜೀವನದುದ್ದಕ್ಕೂ ಅವರು ನಮಗೆ ವಿಧೇಯರಾಗಿರಬೇಕು ಎಂದು ಬಯಸಬಾರದು. ಒಂದು ವೇಳೆ ನಿಮ್ಮಲ್ಲಿ ಅಂತಹ ಭಾವ ಮೂಡಿದೆ ಎಂದರೆ, ನೀವು ಅಡ್ಡ ದಾರಿ ಹಿಡಿದಿದ್ದೀರಿ ಎಂದೇ ಅರ್ಥ. ಯಾಕೆಂದರೆ ಇವತ್ತು ನಿಮ್ಮ ಮುಂದೆ ನಿಂತು, ದೀನ ನಾ ಬಂದಿರುವೆ, ಬಾಗಿಲಲಿ ನಿಂದಿರುವೆ, ದಯೆ ತೋರು ಪ್ರಭುವೇ... ಎಂದು ಹೇಳುವವರು ದಾಸರೂ ಅಲ್ಲ ಅಥವಾ ಅವರ ಮೊರೆ ಕೇಳಿ ಎಲ್ಲ ಸಂಕಷ್ಟಗಳನ್ನು ಪರಿಹರಿಸಲು ನಾವು ಶ್ರೀಮನ್ನಾರಾಯಣನೂ ಅಲ್ಲ. ಇದನ್ನರಿಯದೇ ನೀವು ಯಾವುದೋ ಒಂದು ಕಾಲಘಟ್ಟದಲ್ಲಿ ಅವನಿಗೆ ಒಂದು ಟೈಮಿನಲ್ಲಿ ಹೊಟ್ಟೆಗೆ ಗತಿಯಿರಲಿಲ್ಲ. ನಮ್ಮ ಮನೆ ಬಾಗಿಲ ಬಳಿ ಬಂದಿದ್ದ ಅನ್ನುವ ರೀತಿಯಲ್ಲಿ ಹಂಗಿಸಿ ತೋರಿಸಿದಿರೋ, ನೀವು ಮಾಡಿದ ಉಪಕಾರ ಎಂಬುದು ತನ್ನ ಮಹತ್ವವನ್ನೇ ಕಳೆದುಕೊಳ್ಳುತ್ತದೆ.

ಕರ್ನಾಟಕದ ರಾಜಕಾರಣದಲ್ಲಿ ಕಟ್ಟಾ ವೈರಿಗಳಂತೆ ಬಡಿದಾಡಿದ, ಒಕ್ಕಲಿಗರ ಪಾಳೇಪಟ್ಟಿನ ಸಾಮ್ರಾಜ್ಯಕ್ಕೆ ತಾವೇ ಅಧಿಪತಿಯಾಗಬೇಕು ಎಂದು ಬಯಸಿದ ಇಬ್ಬರು ನಾಯಕರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಈ ಪೈಕಿ ಒಬ್ಬ ರಾಜಕಾರಣಿ ಬಾಲ್ಯದಿಂದಲೂ ಹಣಕಾಸಿನ ಸ್ಥಿತಿಯಲ್ಲಿ ಉತ್ತಮವಾಗಿದ್ದವರು. ಮತ್ತೊಬ್ಬರು ಇವರ ಬಳಿ ಸಣ್ಣ ಪುಟ್ಟ ನೆರವುಪಡೆಯುವ ಸ್ಥಿತಿಯಲ್ಲಿದ್ದವರು. ಶುರು ಶುರುವಿನಲ್ಲಿ ದೀನ ನಾ ಬಂದಿರುವೆ, ಬಾಗಿಲಲಿ ನಿಂದಿರುವೆ, ದಯೆ ತೋರೋ ಪ್ರಭುವೇ... ಎನ್ನುತ್ತಿದ್ದ ರಾಜಕಾರಣಿ ಒಂದೊಂದೇ ಮೆಟ್ಟಿಲು ಹತ್ತುತ್ತಾ ಮೇಲೆ ಬಂದರು. ರೈಸ್ ಮಿಲ್ಲು, ಅದು, ಇದು ಅಂತ ಆಸ್ತಿ-ಪಾಸ್ತಿ ಇಟ್ಟುಕೊಂಡು ಇವರಿಗೆ ಕಾಲ ಕಾಲಕ್ಕೆ ಸಣ್ಣ ಪುಟ್ಟ ನೆರವು ನೀಡುತ್ತಿದ್ದ ರಾಜಕಾರಣಿಗೆ ಇದು ಸಹಿಸಲಾಗದ ವಿಷಯವಾಯಿತು. ಹಾಗಂತಲೇ ಅಲ್ಲಿ, ಇಲ್ಲಿ ತುಂಬ ಹಗುರವಾದ ಮಾತುಗಳನ್ನಾಡತೊಡಗಿದರು. ರೀ, ಅವನ್ಯಾವ ಲೀಡರು ಕಣ್ರೀ. ಒಂದು ಕಾಲದಲ್ಲಿ ಇವನ ಮನೆಯಲ್ಲಿ ಮೂರು ಹೊತ್ತು ತಿನ್ನಲು ಅನ್ನ ಇರಲಿಲ್ಲ. ಈಗ ಭಾರೀ ಸ್ಟೈಲು ಮಾಡ್ತಾನೆ ಎಂದು ಹೇಳತೊಡಗಿದರು.

ಈ ಮಾತು ಕೇಳಿದ ಮತ್ತೊಬ್ಬ ರಾಜಕಾರಣಿಯ ಮನಸ್ಸಿಗೆ ನೋವಾಯಿತು. ಆದರೆ ತಮ್ಮ ಪಾಡಿಗೆ ತಮ್ಮ ದಾರಿಯಲ್ಲಿ ನಡೆಯುತ್ತಾ ನಡೆಯುತ್ತಾ ಅವರು ರಾಜ್ಯ ರಾಜಕಾರಣದ ಮುಂಚೂಣಿಗೆ ಬಂದಾಗ ಇಂತಹ ಮಾತುಗಳು ಮತ್ತಷ್ಟು ಮೊನಚಾಗತೊಡಗಿದವು. ಅಯ್ಯೋ, ಇವನ ಕತೆ ಏನು ಕೇಳುತ್ತೀರಿ. ಇವನ ಹೆಂಡತಿಗೆ ಉಟ್ಟುಕೊಳ್ಳಲು ಇದ್ದಿದ್ದೇ ಒಂದು ಸೀರೆ. ಅದನ್ನೇ ವಾರಕ್ಕೊಂದು ಸಲ ಒಗೆದು ಹಾಕಿಕೊಳ್ಳುವ ಸ್ಥಿತಿ ಇತ್ತು. ಆಗೆಲ್ಲ ಇವರಿಗೆ ನೆರವು ಕೊಟ್ಟಿದ್ದೇ ನಾನು. ಈಗ ನೋಡಿದರೆ ಸಖತ್ತು ದವಲತ್ತು ಬಂದಿದೆ ಎಂದು ಹಂಗಿಸುವ ಮಟ್ಟಕ್ಕೆ ಹೋದರು. ಯಾವಾಗ ಇಂತಹ ಮಾತುಗಳು ಹೊರಬಿದ್ದವೋ ಆಗ ಹಟದ ಸ್ವಭಾವಕ್ಕೆ ಹೆಸರಾದ ರಾಜಕಾರಣಿ ಉಲ್ಟಾ ತಿರುಗಿ ಬಿದ್ದರು. ಕ್ರಮೇಣ ಅವರಿಬ್ಬರ ನಡುವಣ ದ್ವೇಷ ಪಾರಂಪರಿಕ ಮಟ್ಟದ್ದು ಎಂಬಂತಾಗಿಹೋಯಿತು. ಆದರೆ ಫೈನಲಿ, ನಾಶವಾಗಿದ್ದು ನನ್ನಿಂದಲೇ ನನ್ನಿಂದಲೇ, ಇವನ ಬದುಕೆಲ್ಲ ನಡೆದ್ಹೋಯಿತು ಎಂಬ ಅಹಂಕಾರದ ಮಾತನಾಡಿದ ರಾಜಕಾರಣಿ. ಹೀಗೆ ಹಂಗಿನ ಮಾತು ಕೇಳಿ ನೊಂದ ರಾಜಕಾರಣಿ ಮುಂದೆ ಸಿಎಂ ಆಗಿದ್ದು, ರಾಷ್ಟ್ರ ರಾಜಕಾರಣದ ಉತ್ತುಂಗಕ್ಕೇರಿದ್ದು, ತಮ್ಮ ಕೈಯ್ಯಾರೆ ಸಾವಿರಾರು ಮಂದಿಗೆ ಉಪಕಾರ ಮಾಡಿದ್ದು ಇತಿಹಾಸ. ಯಾಕೆ ಇದನ್ನು ಉದಾಹರಿಸಿದೆ ಎಂದರೆ ನಮ್ಮ ಬಳಿ ಕಷ್ಟ ಹೇಳಿಕೊಂಡು ಬಂದವರಿಗೆ ಉಪಕಾರ ಮಾಡುವ ಶಕ್ತಿ ನಮಗಿದ್ದರೆ, ನಾವು ಅದನ್ನು ಮಾಡಿದರೆ ಅದು ನಮ್ಮ ಯೋಗ ಎಂದೇ ಅರ್ಥ.
ಹೀಗಾಗಿ, ದೀನ ನಾ ಬಂದಿರುವೆ, ಬಾಗಿಲಲಿ ನಿಂದಿರುವೆ, ದಯೆ ತೋರೋ ಪ್ರಭುವೇ ಅಂತ ಬಂದವರ ಕಷ್ಟಕ್ಕೆ ಆಗಿ, ಅವರ ಮುಖದಲ್ಲಿ

ನಗು ನೋಡುವ ಅವಕಾಶ ದಕ್ಕಿದರೆ ನೀವು ಸುಖೀ ಮನುಷ್ಯ. ಹಾಗಂತ ಉಪಕಾರ ಮಾಡಲು ಹೋಗಿ ಮನೆ ಮಠ ಕಳೆದುಕೊಂಡು ಪಾಪರ್ ಆಗುವ ಮಟ್ಟಕ್ಕೆ ಹೋಗಿ ಅಂತಲ್ಲ. ನಾವೀಗ ಇರುವ ಲೆವೆಲ್ಲಿನಲ್ಲೇ ಹಲವರ ಕಷ್ಟಗಳಿಗೆ ತುರ್ತು ಪರಿಹಾರ ನೀಡುವ ಶಕ್ತಿ ಇರುತ್ತದೆ. ಅದನ್ನು ಬಳಸಿಕೊಂಡು ಉಪಕಾರ ಮಾಡಿ. ಅದರಿಂದ ಸುಖ ಪಡಿ. ಉಪಕಾರ ಮಾಡಿದೆ ಎಂಬ ಅಹಂ ಯಾವತ್ತೂ ಒಳಗೆ ಸುಳಿಯದಂತೆ ನೋಡಿಕೊಂಡು ಅದನ್ನು ಮರೆತು ಬಿಡಿ. ಹಾಗೆ ಮಾಡಿದರೆ ಯೂ ಆರ್ ರಿಯಲಿ ಗ್ರೇಟ್. ಹೊರ ಜಗತ್ತಿನ ಕಣ್ಣಿಗೆ ಕಾಣುವಂತೆ ದೊಡ್ಡ ದೊಡ್ಡ ಸಾಧನೆ ಮಾಡಿದವರೇ ಗ್ರೇಟ್ ಅಂತಲ್ಲ. ಯಾರ ಕಣ್ಣಿಗೆ ಕಾಣದಂತೆ ದೀನರಾಗಿ ಬಂದವರ ಕಷ್ಟ ಪರಿಹರಿಸಿ ಮರೆಯುವವರು ಅದಕ್ಕಿಂತ ಗ್ರೇಟ್ ಎಂಬುದು ನನ್ನ ಅಭಿಪ್ರಾಯ.

ನಾವು-ನೀವು ಹಾಗೆ ಬೆಳೆಯಬೇಕು. ಅದನ್ನು ಬಿಟ್ಟು ನಾನು ಅದು ಮಾಡಿದೆ, ನಾನು ಇದು ಮಾಡಿದೆ. ನನ್ನ ಬಳಿ ಉಪಕಾರ ತಗೊಂಡವನು ಇವತ್ತು ಮರೆತುಬಿಟ್ಟಿದ್ದಾನೆ. ಅವತ್ತು ಇವನು ತುತ್ತು ಅನ್ನಕ್ಕೆ ಪರದಾಡುವಾಗ ನಾನು ಹಂಡ್ರೆಡ್ ರುಪೀಸ್ ಕೊಡದಿದ್ದರೆ ಇವನು ಮೇಲೇಳುವ ಚಾನ್ಸೇ ಇರಲಿಲ್ಲ ಅಂತೆಲ್ಲ ಮಾತನಾಡುವ ಗುಣ ಬೆಳೆಸಿಕೊಂಡೆವೋ? ಆಗ ನಾವು ಆತ್ಮ ವಿನಾಶದ ಮೊದಲ ಹೆಜ್ಜೆ ಇಟ್ಟಿದ್ದೇವೆ ಎಂದೇ ಅರ್ಥ. ಯಾಕೆಂದರೆ ನಾವು ಮಾಡಿದ ಉಪಕಾರಕ್ಕಾಗಿ ಅವರು ಜೀವನ ಪೂರ್ತಿ ನಮಗೆ ಕೃತಜ್ಞರಾಗಿರಬೇಕು ಎಂದು ಬಯಸುವುದು ಕೂಡ ಒಂದು ದೊಡ್ಡ ರೋಗ. ಒಂದು ವೇಳೆ ಉಪಕಾರ ಪಡೆದುಕೊಂಡವರು ಕೃತಜ್ಞತಾ ಭಾವ ಇಟ್ಟುಕೊಂಡರೆ ಫೈನ್. ಅದು ಅವರ ವ್ಯಕ್ತಿತ್ವ ಬೆಳೆಯಲು ದಾರಿ ಮಾಡಿಕೊಡುತ್ತದೆ. ಒಂದು ವೇಳೆ ಅವರು ಮರೆತರು ಅಂತಿಟ್ಟುಕೊಳ್ಳಿ. ಅಥವಾ ನಮಗೆ ಇವರೇನು ಮಹಾ ಉಪಕಾರ ಮಾಡಿದ್ದು ಅಂತ ಆಡಿಕೊಂಡರು ಅಂತಿಟ್ಟುಕೊಳ್ಳಿ. ಅದರಿಂದ ನಮಗಾಗುವ ನಷ್ಟವೇನು? ನಷ್ಟದ ದಾರಿಯಲ್ಲಿ ನಡೆಯುವವರೂ ಅವರೇ.

ಆ ದೃಷ್ಟಿಯಿಂದ ನೋಡಿದರೆ ನಿಜವಾದ ಅರ್ಥದಲ್ಲಿ ಉಪಕಾರ ಮಾಡಿ ಸುಖಪಟ್ಟವರು ನಾವು. ಹೀಗಾಗಿ ಅಂತಹ ಸುಖ ನಮಗೆ ಪದೇಪದೆ ಸಿಕ್ಕಲಿ ಅಂತ ಬಯಸೋಣ. ನಮ್ಮ ಇತಿಮಿತಿಯಲ್ಲಿ ಅಂತಹ ಸುಖವನ್ನು ಮೇಲಿಂದ ಮೇಲೆ ಪಡೆಯೋಣ. ಇಷ್ಟೆಲ್ಲದರ ನಡುವೆಯೇ ನಾವು ಉಪಕಾರ ಮಾಡಿದ್ದೇವೆ ಎಂಬ ವೈರಸ್ಸು ನಮ್ಮ ಮನಸ್ಸನ್ನು ಆವರಿಸಿಕೊಳ್ಳದಂತೆ, ಕ್ಯಾನ್ಸರ್ ಥರ ಬೆಳೆಯದಂತೆ ನೋಡಿಕೊಂಡು ನೆಮ್ಮದಿಯಿಂದ ಇರೋಣ. ಅಲ್ಲವೇ?

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 11 September, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books