Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಎಲ್ಲೋ ಜೋಗಪ್ಪ ನಿನ್ನ ಅರಮನೆ?

ಮರದೊಳಡಗಿದ ಬೆಂಕಿಯಂತೆ
ಎಲ್ಲೋ ಅಡಗಿದೆ ಬೇಸರ
ಏನೋ ತೀಡಲು ಏನೋ ಕಾಡಲು
ಹೊತ್ತಿ ಉರಿವುದು ಕಾತರ..!

ಅಡಿಗರ ಕವಿತೆಯನ್ನು ಎದೆಗಿಳಿಸಿಕೊಂಡು ಬೆರಳಲ್ಲಿ ಸಿಗರೇಟು ತುದಿಯ ನಿಗಿನಿಗಿ ಕೆಂಡ ಸವರುತ್ತಾ ಕುಳಿತಿದ್ದೆ. ಈ ಘಟನೆ ನಡೆದಿದ್ದು ಈಗ್ಗೆ ಹದಿನೇಳು ವರ್ಷಗಳ ಹಿಂದೆ.

'ಏನಾಗಿದೆ ನಿಂಗೆ?' ಆಕೆ ನನ್ನೆಡೆಗೆ ಕಾಫಿ ಸರಿಸುತ್ತಾ ಕೇಳಿದಳು. ಉತ್ತರಿಸಬೇಕೆನಿಸಲಿಲ್ಲ. ಆಕೆ ತನ್ನ ಹರಿದು ಹೋದ ತಾಳಿಸರಕ್ಕೆ ಹೊಸ ಪಿನ್ನು ಹಾಕಿ ಸರಿಪಡಿಸಿಕೊಳ್ಳತೊಡಗಿದಳು. ಅದನ್ನಾಕೆ ಕಟ್ಟಿಸಿಕೊಂಡು ಆವತ್ತಿಗೆ ಹದಿನೇಳು ವರ್ಷಗಳಾಗಿದ್ದವು. ಅದು ಹರಿದಿದೆ, ತುಂಡಾಗಿದೆ, ಸವೆದಿದೆ, ಅಕ್ಕಸಾಲಿಗರ ಮನೆಗೆ ಹೋಗಿ ಬಂದಿದೆ, ಹಠಾತ್ತನೆ ಕಳೆದು ಹೋಗಿ ಧಾವಂತ ಹೆಚ್ಚಿಸಿದೆ, ಬಚ್ಚಲು ಮನೆಯ ಗೂಡಿನಲ್ಲಿ ಪ್ರತ್ಯಕ್ಷವಾಗಿ ನೆಮ್ಮದಿ ತಂದಿದೆ.

ಎರಡು ಬಂಗಾರದ ಬಟ್ಟಿನ, ಕರಿಮಣಿ ಸರದ ತುದಿಯ ತಾಳಿ!

ಅದನ್ನು ಕಟ್ಟಿದ ಮನುಷ್ಯನನ್ನು ನೋಡಿಕೊಂಡಷ್ಟು ಚೆನ್ನಾಗಿ, ಆಕೆ ತಾಳಿಯನ್ನು ನೋಡಿಕೊಂಡಿಲ್ಲ. ಅದಕ್ಕೆ ಬಂಗಾರದ ಎಳೆ ಇರಲಿಲ್ಲವೆಂಬ ಕಾರಣವೋ ಮತ್ತೇನು ಅಸಡ್ಡೆಯೋ? ತಾಳಿಯೆಂದರೆ ಆಕೆಗೆ ಅಂಥ ಮಮಕಾರವೇನೋ ಇದ್ದಂತಿಲ್ಲ. ಬಳೆ, ಓಲೆ, ಉಂಗುರಗಳಾದರೂ ಅಷ್ಟೆ. ಈ ಮೂವತ್ತ್ನಾಲ್ಕು ವರ್ಷಗಳಲ್ಲಿ ಆಕೆ ಅಂಥ ಮುಚ್ಚಟೆಪಟ್ಟು ಧರಿಸಿದ್ದು ನಾನು ನೋಡಿಲ್ಲ. ಆಕೆಯ ಕಾಲುಂಗುರ ಯಾವಾಗ ಮತ್ತು ಎಲ್ಲಿ ಕಳೆದು ಹೋಯಿತೋ, ಬಹುಶಃ ಆಕೆಗೂ ನೆನಪಿರಲಿಕ್ಕಿಲ್ಲ.

''ಇವತ್ತು ಆಫೀಸಿಗೆ ಹೋಗೋ ವಿಚಾರ ಇಲ್ವಾ ನಿಂಗೆ?'' ಅಂದಳು.

ಉತ್ತರಿಸಲಿಲ್ಲ. 'ನೀನು' ಅಂತಾಳೆ. ಮಕ್ಕಳು ಅಥವಾ ಮನೆಗೆ ಬಂದವರು ಎದುರಿಗಿದ್ದರೆ 'ನೀವು' ಅಂತಾಳೆ. ಈ ಏಕವಚನ, ಬಹುವಚನ, ಹಿತವಚನ ಇತ್ಯಾದಿಗಳೆಲ್ಲ ಮೂವತ್ತ್ನಾಲ್ಕು ವರ್ಷಗಳ ವನವಾಸದ ಮೌನದಲ್ಲಿ ಅರ್ಥ ಕಳೆದುಕೊಂಡಿವೆ. ಮೊದಲು ನಮ್ಮಿಬ್ಬರ ನಡುವೆ ಉರ್ದು ಇತ್ತು. ಈಗ ಮಕ್ಕಳಿದ್ದಾರೆ.

ಲಲಿತೆಯ ಬಗ್ಗೆ ಅಟ್‌ಲೀಸ್ಟ್ ಈ 'ಖಾಸ್‌ಬಾತ್‌' ಅಂಕಣದಲ್ಲಿ ಯಾವತ್ತೂ ಬರೆಯಬಾರದು ಅಂದುಕೊಂಡಿದ್ದೆ. ನಿನ್ನ ಬಗ್ಗೆ, ಗೆಳೆಯರ ಬಗ್ಗೆ, ಆಗ ತಾಯಿಯ ಬಗ್ಗೆ ಅಷ್ಟೊಂದು ಬರ‍್ಕೋತಿಯಾ. ಹೆಂಡತಿಯ ಬಗ್ಗೆ ಯಾಕೆ ಬರೆಯಲ್ಲ? ಅಂತ ಕೇಳಿದವರಿದ್ದಾರೆ. ಮುಂದೆ ಯಾವತ್ತಾದರೂ ನನ್ನ ಆತ್ಮವೃತ್ತಾಂತವೆಂಬ ಅತಿ ಭಯಾನಕ ಪುಸ್ತಕವನ್ನು ನಾನು ಬರೆದದ್ದೇ ಆದರೆ.. ಅದರಲ್ಲೊಂದು ತಣ್ಣನೆಯ, ಮಧುರವಾದ, ಆಪ್ಯಾಯತೆಯ ಅಧ್ಯಾಯವಿರುತ್ತದೆ. ಅದರ ಹೆಸರು ಲಲಿತೆ! ಒಂದು ಭೂಮಿ ತೂಕದ ವ್ಯಕ್ತಿತ್ವ ನನ್ನನ್ನು ಸಹಿಸಿಕೊಂಡಿದೆ, ಭರಿಸಿಕೊಂಡಿದೆ, ಆವರಿಸಿಕೊಂಡಿದೆ- ಅದರ ಹೆಸರು ಲಲಿತೆ!

ಅವತ್ತು ರಾತ್ರಿ ನಡೆದದ್ದನ್ನು ನಾನು ನಿಮಗೆ ಹೇಳಬೇಕು. ನಾನು ಪ್ರೆಸ್ ಕ್ಲಬ್ಬಿನಲ್ಲಿ ಕುಳಿತು ಆರನೇ ಲಾರ್ಜು ಕುಡಿಯುತ್ತಿದ್ದೆ. ಕೆಲವೇ ಗಂಟೆಗಳಿಗೆ ಮುಂಚೆ ಸುಮಾರು ಹತ್ತು ಸಾವಿರ ರುಪಾಯಿ ಸಂಬಳದ ನೌಕರಿಗೆ ಗೋಲಿ ಹೊಡೆದು ಬಂದು ಕುಳಿತಿದ್ದೆ. ಯಥಾಪ್ರಕಾರ unemployment ಎಂಬ ರಿಟೈರ್‌ಮೆಂಟ್ ಇಲ್ಲದ ಹುದ್ದೆ. ಮನಸ್ಸು ಕಳವಳಗೊಂಡಿತ್ತು. ಬೆಂಗಳೂರಿನಲ್ಲಿ ಉಳಿಯಲು ಜಾಗೆಯಿರಲಿಲ್ಲ. ಕೈಯ್ಯಲ್ಲಿ ಹಣವಿರಲಿಲ್ಲ. ಇದ್ದ ಚೂರು ಪಾರು ದುಡ್ಡು ಮುಗಿದು ಹೋಗುವ ಮುನ್ನ ಊರು ಸೇರಿಬಿಡಬೇಕು. ಮನಸ್ಸಿನ ಕಳವಳಗಳು ಶೃತಿ ಮೀರುವ ಮೊದಲೇ ಲಲಿತೆಯ ಸನ್ನಿಧಿ ತಲುಪಿಬಿಡಬೇಕು. ಸರಿ, ಏಳನೇ ಲಾರ್ಜು ಸಾಲ ಹೇಳಿ ಒಂದು gulpಗೇ ಮುಗಿಸಿ ಹುಬ್ಬಳ್ಳಿಯ ಬಸ್ಸು ಹತ್ತಿಬಿಟ್ಟೆ.

ರಾತ್ರಿ ನಾನು ಬೆಂಗಳೂರಿನಲ್ಲಿ ಬಸ್ಸು ಹತ್ತುತ್ತಿದ್ದ ಕ್ಷಣಗಳಲ್ಲೇ, ಅಲ್ಲಿ ಹುಬ್ಬಳ್ಳಿಯ ನನ್ನ ಹೆಂಚಿನ ಮನೆಯಲ್ಲಿ ಭಯಾನಕ ಘಟನೆಯೊಂದು ಸಂಭವಿಸಿರಬಹುದೆಂಬ ಸಣ್ಣ ಗುಮಾನಿಯೂ ನನಗಿರಲಿಲ್ಲ. ಬೆಳಗಿನ ಜಾವ ನಾನು ಮನೆಯ ಬಾಗಿಲು ತಟ್ಟಿದಾಗ ಮನೆಯೊಳಗೆ ದಿಗಿಲು ಹುಟ್ಟಿಸುವಂತಹ ಮೌನವಿತ್ತು. ಯಾವತ್ತೂ ಹಾಗಾಗಿರಲಿಲ್ಲ. ಬಾಗಿಲು ತಟ್ಟುವ ಅವಕಾಶವನ್ನೇ ಕೊಟ್ಟವಳಲ್ಲ ಲಲಿತೆ. ಹೆಜ್ಜೆ ಸಪ್ಪಳವೇ ಸಾಕು. ಮೊದಲ ಮೆಟ್ಟಿಲು ಹತ್ತುವ ಹೊತ್ತಿಗೇ ಎದ್ದು ಬಂದಿರುತ್ತಿದ್ದಳು. ಆದರೆ ಅವತ್ತು ಇಡೀ ಐದು ನಿಮಿಷ!

ಆಕೆ ಬಂದು ವರಾಂಡದ ದೀಪ ಹಾಕಿ ಬಾಗಿಲು ತೆರೆದಾಗ, ನನ್ನ ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ಅಷ್ಟೊಂದು ಭಯದಿಂದ, ಆತಂಕದಿಂದ ಚೀತ್ಕರಿಸಿದ್ದೆ. ಆಕೆಯ ಮುಖ ಒಡೆದು ಹೋಗಿತ್ತು. ಮೇಲಿನ ತುಟಿ ಮೂರು ಭಾಗವಾಗಿತ್ತು. ಆರು ಹಲ್ಲು ಕಿತ್ತು ಹೋಗಿದ್ದವು. ಕುತ್ತಿಗೆ ಸುಟ್ಟು ಹೋಗಿತ್ತು. ನಾನು ಚಿಕ್ಕ ಹುಡುಗನಂತೆ ಅಳತೊಡಗಿದೆ. 'ಮಕ್ಕಳು ಗಾಬರಿಯಾಗ್ತಾರೆ... ಸುಮ್ನಿರು' ಎಂದು ಅತಿ ಕಷ್ಟದಿಂದ ಹೇಳಿ ಒಳಕ್ಕೆ ಕರೆದೊಯ್ದಳು. ಅಡುಗೆ ಮನೆಗೆ ಒಯ್ದು ಕುಕ್ಕರ್ ತೋರಿಸಿದಳು. ಅದು ಹಿಂದಿನ ರಾತ್ರಿ, ಅಲ್ಲಿ ನಾನು ಬಸ್ಸೇರುತ್ತಿದ್ದ ಹೊತ್ತಿನಲ್ಲೇ ಭಯಂಕರವಾಗಿ ಸಿಡಿದು ಬಿಟ್ಟಿತ್ತು. ಅಪಘಾತ, ಹೆಣ, ರಕ್ತಪಾತ, ಸಾವು... ಎಲ್ಲವನ್ನೂ ನೋಡಿದ ಮನುಷ್ಯ. ಸಣ್ಣ ಏಟಿಗೆ ಧೃತಿಗೆಡುವವನಲ್ಲ. ಅಂಥವನು ದಿಕ್ಕು ತೋಚದೆ ಕೂತು ಬಿಟ್ಟಿದ್ದೆ ನೋಡಿ! ನನಗೇ ಅಂಥದೊಂದು ಅಪಘಾತವಾಗಿದ್ದರೂ ನಾನಷ್ಟು ಹೆದರುತ್ತಿರಲಿಲ್ಲ.

ಅವಳ ಮುಖ destroy ಆಗಿ ಹೋಗಿತ್ತು. ಕುಕ್ಕರ್‌ನ ಸ್ಫೋಟ ಎಷ್ಟು ಭಯಾನಕವಾಗಿತ್ತೆಂದರೆ, ನಮ್ಮ ನೆರೆಹೊರೆಯವರು ಓಡಿ ಬಂದು ಮನೆಯಲ್ಲಿ ಬದುಕಿದ್ದವರನ್ನೆಲ್ಲ ಒಮ್ಮೆ ಎಣಿಸಿ confirm ಮಾಡಿಕೊಂಡಿದ್ದರು. ಅಡುಗೆ ಮನೆಯ false roof ಕಿತ್ತು ಹೋಗಿತ್ತು. ನನ್ನ ಲಲಿತೆ ನಿತ್ರಾಣಗೊಂಡು ಕುರ್ಚಿಗೊರಗಿ ಕುಳಿತಿದ್ದರೆ, ಚಿಕ್ಕ ಮಗಳು ಕಂಪಿಸುತ್ತಾ ನಡೆದುದನ್ನೆಲ್ಲ ವಿವರಿಸತೊಡಗಿದ್ದಳು. ಅವಳ ವಿವರಣೆಯೆಲ್ಲ ಮುಗಿದ ಮೇಲೆ ಲಲಿತೆ ಅಂದದ್ದೇನು ಗೊತ್ತೇ?

ತಕ್ಷಣ ಒಂದು ಕವಿತೆ ನೆನಪಾಯಿತು. ಯಾವುದೋ ದೇಶದ ಕವಿತೆಯದು. ಅದರ ಇಂಗ್ಲಿಷ್ ಅನುವಾದ ಓದಿದ್ದೆ. ಆಕೆ ಆರೇಳು ಮಕ್ಕಳ ತಾಯಿ. ಮನೆ ತುಂಬ ಬಡತನ. ಕಷ್ಟಪಟ್ಟು ಮಕ್ಕಳಿಗೆ ಅನ್ನ ಹೊಂಚುವಾಗ ಪರಮ ಕಾರ್ಕೋಟಕ ವಿಷದ ಚೇಳೊಂದು ಆಕೆಯನ್ನು ಕುಟುಕಿಬಿಡುತ್ತದೆ. ಒಂದೇ ನೋವು! ಮಂತ್ರವಾದಿ, ವೈದ್ಯ, ನಾಟಿ ಔಷಧಿಯವನು, ನೆರೆಹೊರೆಯವರು ಎಲ್ಲ ಬರುತ್ತಾರೆ. ಏನೆಲ್ಲ ಮಾಡುತ್ತಾರೆ. ಅಬ್ಬಾ, ಇಡೀ ಪದ್ಯದ ತುಂಬಾ ನೋವಿನದೇ ವರ್ಣನೆ. ಎಷ್ಟೋ ಹೊತ್ತಿನ ನಂತರ ವಿಷವೆಲ್ಲ ಇಳಿದು ನಿರುಮ್ಮಳಗೊಂಡ ಮೇಲೆ ಆಕೆ ಉದ್ಗರಿಸುತ್ತಾಳೆ 'ಸದ್ಯ, ಈ ಚೇಳು ಮಕ್ಕಳಿಗೆ ಕಚ್ಚಲಿಲ್ವಲ್ಲ!''

ಅವತ್ತು ಲಲಿತೆ ಅಂದದ್ದೂ ಅದನ್ನೇ. ಇಡೀ ಮೂವತ್ತ್ನಾಲ್ಕು ವರ್ಷದ ಒಡನಾಟದಲ್ಲಿ ಅನ್ನುತ್ತ ಬಂದಿರುವುದೂ ಅದನ್ನೇ. ಲೆಕ್ಕದ ಪ್ರಕಾರ ಮೂವತ್ತ್ನಾಲ್ಕು ವರ್ಷ. ಆದರೆ ಮೂವತ್ತೆಂಟು ವರ್ಷಗಳಾಗಿ ಹೋದವು. 1975ರ ಜನವರಿ ಮೊದಲ ದಿನ ನನಗವಳ ಪರಿಚಯವಾದದ್ದು. ಆದವಳ birthday ಕೂಡ. 'ಇಡೀ ಜಗತ್ತೇ ಆಚರಿಸುತ್ತಲ್ಲ ಮೇಡಂ?' ಅಂತ ತಮಾಷೆ ಮಾಡಿದ್ದೆ. ಅವಳೇ ನನ್ನ ಜಗತ್ತಾಗುತ್ತಾಳೆ ಅಂದುಕೊಂಡಿರಲಿಲ್ಲ. ನನ್ನ ವೈಫಲ್ಯ, ಸೋಲು, ಹತಾಶೆ, ನಿರಾಶೆ, ಕಳವಳಗಳಿಗೆಲ್ಲ ಸಾಕ್ಷಿಯಾಗಿ ನಿಂತವಳು. ಕಷ್ಟಗಳನ್ನೆಲ್ಲ 'ನಾನಿದ್ದೇನೆ ಅನುಭವಿಸು...' ಅಂದು ಜೊತೆಗೆ ಬಂದು ನಿಂತವಳು. ಎಲ್ಲ ಹೆಂಡತಿಯರೂ ಹಾಗೇನೇ. ಅದರಲ್ಲೇನಿದೆ ಗ್ರೇಟ್‌ನೆಸ್ ಅಂತೀರೇನೋ. ಆದರೆ ಎಲ್ಲ ಗಂಡಂದಿರಂಥವನು ನಾನಾಗಲಿಲ್ಲವಲ್ಲ? ಎಲ್ಲರ ಮದುವೆಯಂತಹುದೂ ಅಲ್ಲ. ಎಲ್ಲರ ಸಂಸಾರದಂತಹುದಂತೂ ಅಲ್ಲವೇ ಅಲ್ಲ. ಅವಳ ತಂದೆ ತಾಯಿ ಮದುವೆ ಮಾತುಕತೆಗೆಂದು ನಮ್ಮ ಮನೆಗೆ ಬಂದ ದಿನ ನನ್ನನ್ನು ಪೊಲೀಸರು ಹಿಡಿದುಕೊಂಡು ಹೋಗಿದ್ದರು! ಮದುವೆಯ ದಿನ ನಾನು ನಯಾ ಪೈಸೆಯ ಕಮಾಯಿ ಇಲ್ಲದ ಪಡ್ಡೆ ಹುಡುಗ. ಅದಕ್ಕೆ ಮುಂಚೆ ಜೊತೆಗೆ ಓಡಾಡುತ್ತಿದ್ದಾಗ 'ಎಲ್ಲಾ ಬಿಟ್ಟು ಗೂಳಿಯಂಥೋನ ಜೊತೆ ಓಡಾಡ್ತೀಯಲ್ಲಮ್ಮಾ?' ಎಂಬ ಮೂದಲಿಕೆ. ಒಂದು ನೌಕರಿಗೆ, ಒಂದು ವೃತ್ತಿಗೆ, ಒಂದು ಮನೆಗೆ, ಒಂದು ಊರಿಗೆ, ಕಡೆಯ ಪಕ್ಷ ಒಂದು ನಿಶ್ಚಿತ ಜೀವನ ವಿಧಾನಕ್ಕೆ ಅಂಟಿಕೊಳ್ಳದ ಈ ಅಲೆಮಾರಿ ಜೋಗಿ ಜಂಗಮನನ್ನು ಕಟ್ಟಿಕೊಂಡು ಹೆಣಗುವ ಸೌಭಾಗ್ಯ ಎಲ್ಲರಿಗೂ ಎಲ್ಲಿಂದ ಬಂದೀತು? ಆಕೆ ಕೆಲಕಾಲ ನನ್ನ ಶಿಕ್ಷಕಿಯಾಗಿದ್ದಳು. ಅದು ಬಹುಶಃ ನಮ್ಮ ಸ್ನೇಹಕ್ಕೊಂದು ನೆಪವಾಗಿತ್ತು. ಆಕೆ ನನಗಿಂತ ಹಿರಿಯಳು. ನನ್ನ ತಾಯಿಗೆ ತುಂಬ ಆತ್ಮೀಯಳಾಗಿದ್ದವಳು. ತುಂಬಿದ ಮನೆಯಲ್ಲಿ ಬೆಳೆದವಳು. ನನಗಾಗಿ ಎಲ್ಲರನ್ನೂ ಎಲ್ಲವನ್ನೂ ಬಿಟ್ಟು ಹೊರಟವಳು.

ಏನು ನಂಬಿಕೊಂಡು ಬಂದಳು?

ಕೇವಲ ಪ್ರೀತಿಯನ್ನ!

ಇವತ್ತು ಉಳಿದಿರುವುದೇನು?

ಕೇವಲ ಪ್ರೀತಿ!

ಅವಳಿಗೆ ನನ್ನ ತಾಯಿ ಮಾಡಿಸಿಟ್ಟ ಬಳೆಗಳೆರಡನ್ನೂ ನಾನು ಮಾರಿ ಕುಡಿದು ಹಾಕಿದೆ. ಇದ್ದ ನೌಕರಿಗಳನ್ನೆಲ್ಲ ಬಿಟ್ಟೆ. ಕೆಲವನ್ನು ಕಳೆದುಕೊಂಡೆ. ಸಂಬಳವಿಲ್ಲದೆ ಮುಖ ಒಣಗಿಸಿಕೊಂಡು ಮನೆಗೆ ಬಂದಾಗಲೂ 'ಶೂನ್ಯದಿಂದ' ಎಂಬಂತೆ ಇದ್ದುದನ್ನೇ ಹೊಂದಿಸಿ ಅಡುಗೆ ಮಾಡಿ ಬಡಿಸಿದಳು ಲಲಿತೆ. ಅನೇಕ ಸಲ ನಮ್ಮ ಐದು ಜನರ ಸಂಸಾರ ಅವಳ ಸಂಬಳದ ಮೇಲೇ ನಡೆದಿದೆ. ಆಗ ಅವಳ ಸಂಬಳ ಎಷ್ಟಿತ್ತು ಅಂತ ಗೊತ್ತಿಲ್ಲ. ಇದ್ದಾಗ ಖರ್ಚು ಮಾಡುತ್ತಾ, ಇಲ್ಲದಾಗ ನನ್ನ ಜೇಬಿನಿಂದ ಕದಿಯುತ್ತಾ, ನಿಮ್ಮ ಜೇಬಿನಲ್ಲಿ ಹಣವೇ ಇರಲಿಲ್ಲ ಎಂದು ವಾದಿಸುತ್ತಾ... ಈ ಜಗತ್ತಿನ ಅತಿ ಜಾಣ ಪಿಕ್‌ಪಾಕೆಟರ್ ಆಕೆ! ಮಕ್ಕಳ ಫೀಸಿಗೂ, ನನ್ನ ಸಿಗರೇಟಿಗೂ, ತಿಂಗಳ ರೇಷನ್ನಿಗೂ ವ್ಯವಸ್ಥೆ ಮಾಡಿ ತನ್ನ ತಾಳಿಸರಕ್ಕೆ ಪಿನ್ನು ಹಾಕಿಕೊಳ್ಳುತ್ತಿದ್ದಳು.

ಬಹುಶಃ ಅವಳಿಗೆ ಇದೆಲ್ಲ ಗೊತ್ತಿತ್ತು. ಇವನಿಗೊಂದು ನೌಕರಿ ನೆಲೆ ಇರುವುದಿಲ್ಲ. ಕುಡಿತ ಇವನನ್ನು ಬಿಟ್ಟು ಕದಲುವುದಿಲ್ಲ. ಸಿಟ್ಟು ಕರಗುವುದಿಲ್ಲ. ಇವನೊಬ್ಬ ಜವಾಬ್ದಾರಿಯುತ ಗಂಡನಾಗಲಾರ.

ಎಲ್ಲವೂ ಗೊತ್ತಿತ್ತು. ಗೊತ್ತಿದ್ದೇ ಆದಳು. ಸಂಜೆಯಾದ ಕೂಡಲೇ ನಾನು ಜುಬ್ಬಾ ಏರಿಸಿಕೊಂಡು ಮೊಬೈಕಿನ ಚಾವಿ ತಿರುವುತ್ತಿದ್ದರೆ, ಮನೆ ಮುಂದಿನ ಜಗುಲಿಯ ಮೇಲೆ ಕುಳಿತು, 'ಕೊಟ್ಟ ಮಾತಿಗೆ ತಪ್ಪಲಾರೆನು, ಕೆಟ್ಟ ಯೋಚನೆ ಮಾಡಲಾರೆನು, ನಿಷ್ಠೆಯಿಂದಲೆ ಪೋಪನಲ್ಲಿಗೆ. ಕಟ್ಟಕಡೆಗಿದು ಖಂಡಿತಾ!' ಎಂದು ಬೇಕಂತಲೇ ನನ್ನ ಮಗಳಿಗೆ ಗೋವಿನ ಹಾಡು ಹೇಳಿಕೊಡುತ್ತಿದ್ದಳು. ನಿಷ್ಠೆಯಿಂದ ಹೋಗುತ್ತಿದ್ದುದು ಬಾರ್‌ಗೆ ಅಂತ ಅವಳಿಗೂ, ಅಮ್ಮನಿಗೂ ಚೆನ್ನಾಗಿ ಗೊತ್ತಿತ್ತು. ಅದನ್ನು ತಿದ್ದಲಾಗದ ದೌರ್ಭಾಗ್ಯ ಎಂದು ಒಪ್ಪಿಕೊಂಡಿದ್ದರಿಂದ ಇಬ್ಬರೂ ನಕ್ಕು ಸುಮ್ಮನಾಗಿಬಿಡುತ್ತಿದ್ದರು. ಆದರೆ ಮಾರನೆಯ ದಿನ ಮುಂಜಾನೆ ಅವಳ ಮುಖದಲ್ಲಿ 'ಕುಡುಕನ ಹೆಂಡತಿ' ಅನ್ನಿಸಿಕೊಂಡ ನೋವು, ಅವಮಾನಗಳು ಮಡುವುಗಟ್ಟಿ ನಿಂತಿರುತ್ತಿದ್ದವು. 'Sorry ಅನ್ನುವ ನೈತಿಕ ಸ್ಥೈರ್ಯ ಕೂಡ ನನ್ನಲ್ಲಿರುತ್ತಿರಲಿಲ್ಲ. ಎಷ್ಟೋ ಸಲ ಬೇಕಂತಲೇ ಅವಳು ಶಾಲೆಗೆ ಹೋಗುವ ತನಕ ಏಳದೆ ಬಿದ್ದುಕೊಂಡಿರುತ್ತಿದ್ದೆ. ಒಂದು ದಿನಕ್ಕೂ ನಿಲೆ ಹಾಕಿ 'ಹೀಗೇಕೆ?' ಎಂದು ಕೇಳಲಿಲ್ಲ. ವಾದಿಸಲಿಲ್ಲ. ದಂಡಿಸಲಿಲ್ಲ. ನನ್ನ ಉಪಟಳ ವಿಪರೀತವಾದಾಗ ಕತ್ತಲಲ್ಲಿ ಒಬ್ಬಳೇ ಕುಳಿತು ಕಣ್ಣೀರು ಕೆಡವಿದ್ದು ಬಿಟ್ಟರೆ, ಮತ್ತೊಂದು ಮಾಡಲಿಲ್ಲ.

ಆದರೆ ಇದ್ದಕ್ಕಿದ್ದಂತೆ ಒಂದು ದಿನ ದೈವ ಭಕ್ತಿ ಬೆಳೆಸಿಕೊಂಡು ಬಿಟ್ಟಳು. ಮೊದಲು ಗಣಪತಿಯೊಬ್ಬನೇ ಇದ್ದ. 'ಶನಿ ದೇವರ ಪೂಜೆ ಮಾಡಿ... ಗಂಡನಿಗೆ ಬುದ್ಧಿ ಬರ‍್ತದೆ' ಅಂತ ಯಾರೋ ಹೇಳಿದರಂತೆ, ಶನಿ ಮಹಾರಾಜನ ಫೊಟೋ ಕಾಗೆ ಸಮೇತ ಬಂದು ಮನೆಯಲ್ಲಿ ಸ್ಥಾಪಿತವಾಯಿತು. ನಾನಿರುವಾಗ ಮತ್ತೊಬ್ಬ ಶನಿ ಯಾತಕ್ಕೆ? ಅಂದೆ. ಕೇಳಲಿಲ್ಲ. ಎಳ್ಳೆಣ್ಣೆಯ ದೀಪ ಹಚ್ಚಿ ಬಾಡಿಗೆ ಮನೆಯ ಗೋಡೆಗಳನ್ನು ಕರ್ರಗೆ ಮಾಡಿದಳು. 'ಬುದ್ಧಿ' ಎಂಬುದು ನನಗೂ ಬರಲಿಲ್ಲ. ಶನಿಗೂ ಬರಲಿಲ್ಲ. ಮನೆಯ ಮೂಲೆಯಲ್ಲಿ ನಾನು ತಂದು ಒಟ್ಟುತ್ತಿದ್ದ ಖಾಲಿ ಬಾಟಲುಗಳನ್ನು ಅಸಹ್ಯದಿಂದ, ಅವಮಾನದಿಂದ ಆಚೆಗೆ ಹಾಕುತ್ತಿದ್ದಳು. ಖಾಲಿ ಬಾಟಲಿ ಮಾರಿ ಬಂದ ಹಣವನ್ನು ಎಡಗೈಯಲ್ಲೂ ಮುಟ್ಟುತ್ತಿರಲಿಲ್ಲ. ಸರಿ ಸುಮಾರು 1975ರಿಂದ ಗಂಟುಬಿದ್ದ ಅಭ್ಯಾಸ 1995ನ್ನು ತಲುಪುವ ಹೊತ್ತಿಗೆ ನಮ್ಮ ಮನೆಯ ಪ್ರತಿ ಮೂಲೆಯನ್ನೂ ಘಾಸಿಗೊಳಿಸಿತ್ತು. ಪ್ರತಿ ಗೋಡೆಯನ್ನೂ ಕೆಡವಿ ಹಾಕಿತ್ತು. ಪ್ರೀತಿಯೆಂಬ ವಸ್ತುವೊಂದು ಅಸ್ತಿತ್ವದಲ್ಲಿರದೆ ಹೋಗಿದ್ದರೆ ನಾವೆಲ್ಲ ಏನಾಗಿಬಿಡುತ್ತಿದ್ದೆವೋ?

ಹಾಗಾಗಲಿಲ್ಲ. 1995ರ ಮೇ ಇಪ್ಪತ್ತೆರಡರ ರಾತ್ರಿ ನಾನು ಭೂಗತ ಲೋಕದ ಕೆಲವರೊಂದಿಗೆ ಕಾಕ್ಸ್‌ಟೌನ್‌ನ ಮನೆಯೊಂದರಲ್ಲಿದ್ದೆ. ಬೆಳಗಾದರೆ ಮನೆಯಲ್ಲಿ ಹಬ್ಬ. ನಮ್ಮ ಮದುವೆಯ ಆನಿವರ್ಸರಿ. ದೇವರಲ್ಲಿ ನಂಬುಗೆಯಿಲ್ಲದ ನಾನು ಇಷ್ಟದಿಂದ ಆಚರಿಸಿಕೊಳ್ಳುವ ಹಬ್ಬಗಳೆಂದರೆ ಆನಿವರ್ಸರಿ ಮತ್ತು ನಮ್ಮ ಹುಟ್ಟುಹಬ್ಬಗಳು. ಇಪ್ಪತ್ತೆರಡರ ರಾತ್ರಿ ಕಾಕ್ಸ್‌ಟೌನ್‌ನ ಮನೆಯಲ್ಲಿ ಒಂದು ವಿಲಕ್ಷಣ ಘಟನೆ ನಡೆದಿತ್ತು. ಅದು ನನ್ನ ಜೀವನದ ಬಹುದೊಡ್ಡ ತಿರುವಾದೀತೆನಿಸಿರಲಿಲ್ಲವಾದರೂ ನನ್ನೊಳಗೊಂದು ಹೊಸ ದೀಪ ಹೊತ್ತಿಕೊಂಡಿತ್ತು. ಇಪ್ಪತ್ಮೂರರ ಮುಂಜಾನೆ ದಡಬಡಿಸಿ ಎದ್ದವನೇ ಪದ್ಮನಾಭನಗರದ ಮನೆಗೆ ಓಡಿ ಬಂದೆ. ಬಾಗಿಲಲ್ಲಿ ನಿಂತಿದ್ದಳು. ಕೈಯಲ್ಲಿ ಬಿಡಿಗಾಸಿಲ್ಲದವನು ಆನಿವರ್ಸರಿಗೆ ಗಿಫ್ಟೇನು ತರುತ್ತಾನೆ? ಅವಳಿಗೆ ಗೊತ್ತು. ಯಾವತ್ತೂ ಗಿಫ್ಟು ಕೇಳಿದವಳಲ್ಲ.

ಅವತ್ತು ಮನೆಯೊಳಕ್ಕೆ ಬಂದವನೇ 'ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ' ಅಂದೆ. ಮಕ್ಕಳು ಇಬ್ಬರನ್ನೂ ಕೂಡಿಸಿಕೊಂಡು ಕಾಫಿ ಮಾಡಿಕೊಟ್ಟು, ಮುತ್ತು ಕೊಟ್ಟು ಕಾರ್ಡು ಕೈಗಿರಿಸಿದರು. ನಾನು ಗದ್ಗದಿತನಾಗಿದ್ದೆ. ಎಲ್ಲರನ್ನೂ ಒಂದು ತೆಕ್ಕೆಗೆ ಅವಚಿಕೊಂಡು ಹೇಳಿದೆ, 'ಇವತ್ತು ನಿಜಕ್ಕೂ ಗ್ರೇಟ್ ಡೇ; ನಾನಿನ್ಮೇಲೆ ಕುಡಿಯೋದಿಲ್ಲ. ನನ್ನ ಬದುಕಲ್ಲಿನ್ನು ಆ ಅಧ್ಯಾಯ ಮುಗಿದು ಹೋಯಿತು. ಇವತ್ತಿಗೆ ನಾನು ಕೊಡಬಹುದಾದ ಗಿಫ್ಟು ಇದೊಂದೇ!'

ಲಲಿತೆ ನಗಲಿಲ್ಲ. ಮಾತಾಡಲಿಲ್ಲ. ಥ್ಯಾಂಕ್ಸ್ ಅನ್ನಲಿಲ್ಲ. ನನ್ನ ಬೆನ್ನಿಗೊಂದು ಗುದ್ದಿ ಅಡುಗೆ ಮನೆಗೆ ಎದ್ದು ಹೋದಳು. 'ಕೊಂಚ ಹೊತ್ತಿನ ನಂತರ ಎಳ್ಳೆಣ್ಣೆ ದೀಪದ ವಾಸನೆ ಹರಡಿತ್ತು. ಅವಳ ಕಣ್ಣಂಚಿನಲ್ಲಿ ನೀರು! ಆ ಸಂತಸದ ನೀರು ಇವತ್ತಿಗೂ ಅಲುಗಿಲ್ಲ. ಕುಡಿತ ಬಿಟ್ಟ ಮಾರನೆಯ ದಿನವೇ ಕ್ಲಬ್ಬಿಗೆ ಹೋದೆ. ಆಮೇಲೆ ಪಾರ್ಟಿಗಳನ್ನು ಕೊಟ್ಟಿದ್ದೇನೆ. ಗೆಳೆಯರನ್ನು ಕರೆಕರೆದು ಕುಡಿಸಿದ್ದೇನೆ. ಉಹುಂ... ನಾನು ಮುಟ್ಟಿರಲಿಲ್ಲ. ರವಿಯ will power ದೊಡ್ಡದು ಅಂದ ಗೆಳೆಯರಿದ್ದರು. 'ಯಾಕೇಂದ್ರೆ, ಮೊದಲು wills ಸೇದ್ತಿದ್ದೆ' ಅಂತ ತಮಾಷೆ ಮಾಡಿ ಸುಮ್ಮನಾಗಿದ್ದೇನೆ. ಆನಂತರ ಕುಡಿತ ಮತ್ತೆ ಆರಂಭವಾಯಿತು. ವರ್ಷಗಟ್ಟಲೆ ಕುಡಿದೆ. ಆದರೀಗ ಐದು ತಿಂಗಳಿನಿಂದ ಕುಡಿತವನ್ನು ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ.

ನನಗೆ ಗೊತ್ತು; ನಾನು ಯಾರಿಗಾಗಿಯೋ ಕುಡಿತ ಬಿಡಲಿಲ್ಲ. ನನಗಾಗಿ ಬಿಟ್ಟೆ. ಆದರೆ 'ಕುಡುಕನ ಹೆಂಡತಿ' ಎಂಬ ಅವಮಾನದಿಂದ ಅವಳನ್ನು ಮುಕ್ತನಾಗಿಸಿದೆ. ಗಂಡನಾಗಿ ಮತ್ತೇನನ್ನು ಕೊಡಲಾಗದಿದ್ದರೂ ಅದೊಂದು ನೆಮ್ಮದಿಯನ್ನು ವಾಪಸು ಮಾಡಿದೆನಲ್ಲ?
ಬರೆಯುತ್ತ ಕುಳಿತರೆ ಇದು ಒಂದು ಸಂಚಿಕೆಗೆ ಮುಗಿಯುವ 'ಖಾಸ್‌ಬಾತ್‌' ಅಲ್ಲ. ನಮ್ಮ ಈ ಮೂವತ್ನಾಲ್ಕು ವರ್ಷಗಳ ಬಾಳುವೆಯಲ್ಲಿ ನಡೆದ ಸಾವಿರಾರು ಘಟನೆಗಳ ಪೈಕಿ ಎರಡನ್ನು ಮಾತ್ರ ವಿವರಿಸಿ ಇವತ್ತಿನ ಮಾತು ಮುಗಿಸುತ್ತೇನೆ;

ಅದೊಂದು ಹಂತದಲ್ಲಿ ಹಾಗಾಯಿತು. ಹುಡುಗಿಯೊಬ್ಬಳು ನನ್ನನ್ನು ವಿಪರೀತವಾಗಿ ಹಚ್ಚಿಕೊಂಡು ಬಿಟ್ಟಿದ್ದಳು. ಅದು ಅವಳ ಹದಿ ವಯಸ್ಸಿನ ಅಪ್ಪಟ infatuation. ಅವಳಿಗಿಂತ ಕೊಂಚ ದೊಡ್ಡವನು ನಾನು. ನನಗಿಂತ ದೊಡ್ಡವಳು ಲಲಿತೆ. ಈ ವಿಷಯ ಲಲಿತೆಗೆ ಗೊತ್ತಾಗಲಿಕ್ಕಿಲ್ಲ ಅಂದುಕೊಂಡಿದ್ದೆ. ಗೊತ್ತಾಯಿತು. ಅವಳು ರೇಗುತ್ತಾಳೆ ಅಂದುಕೊಂಡಿದ್ದೆ. ರೇಗಲಿಲ್ಲ. ಸುಮಾರು ಎರಡು ವಾರದ
ನಂತರ ಆ ಹುಡುಗಿಯಿಂದ ನನಗೊಂದು ಪತ್ರ ಬಂದಿತ್ತು; 'ರವೀ, ಸುಡುವ ಸೂರ್ಯನನ್ನು ಹೇಗೆ ಆಕಾಶ ಮಾತ್ರ ಭರಿಸಬಲ್ಲದೋ...
ಹಾಗೆ ನಿನ್ನನ್ನು ಲಲಿತೆ ಮಾತ್ರ ಭರಿಸಬಲ್ಲಳು. Let's not meet again'

ಆಮೇಲೆ ಆ ಹುಡುಗಿ ನನಗೆ ಕಂಡಿಲ್ಲ. ಅವಳ ಬಗ್ಗೆ ನಾವಿಬ್ಬರೂ ಮಾತು ಕೂಡ ಆಡಿಲ್ಲ;

ಎರಡನೆಯ ಘಟನೆ 1979ರಲ್ಲಿ ನಡೆದದ್ದು. ಲಲಿತೆ ನೆತ್ತರ ಮಡುವಿನಲ್ಲಿ ಬಿದ್ದಿದ್ದಳು. ಅವಳನ್ನೆತ್ತಿಕೊಂಡು ಮುಖ ತೊಳೆದು, ತಲೆ ಬಾಚಿ, ಜಡೆ ಹಾಕಿ, ಬೆಚ್ಚಗೊಂದು ಶಾಲು ಹೊದಿಸಿ, ಅಂಗೈಯಲ್ಲಿಟ್ಟುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದೆ. 'ಬದುಕುವುದು ಕಷ್ಟ. ಬದುಕಿದರೂ ಕಷ್ಟ. ನಿಮ್ಮ ಹೆಂಡತಿ ತುಂಬ ತೊಂದರೆಯಲ್ಲಿದ್ದಾರೆ' ಅಂದರು ಡಾಕ್ಟರ್. ಬಳ್ಳಾರಿಯ ಹೆರಿಗೆ ಆಸ್ಪತ್ರೆಯ ಗೋಡೆಗಳಿಗೆ ಗೊತ್ತು ನಾನೆಷ್ಟು ಕನಲಿ ಹೋಗಿದ್ದೆ ಅಂತ. ಅಂದು ಅಲ್ಲಿದ್ದ ಡಾ.ಉಷಾ ರಂಗನ್ ಎಂಬ ದರಿದ್ರ ಹೆಂಗಸು ಲಂಚ ಕೇಳಿದ್ದಳು. ನನ್ನ ಹತ್ತಿರ ಐದು ರುಪಾಯಿ ಕೂಡ ಇರಲಿಲ್ಲ. ನನ್ನ ಅನಾರೋಗ್ಯಗೊಂಡ ಹೆಳವ ತಾಯಿಯನ್ನು ಬಿಟ್ಟರೆ ನನಗ್ಯಾರೂ ಇರಲಿಲ್ಲ. ಲಂಚದ ವಿರುದ್ಧ ಆಕ್ರೋಶ ಹುಟ್ಟಿದ್ದೇ ಅವತ್ತು. ಡಾ. ಉಷಾ ರಂಗನ್‌ಳ ಛೇಂಬರಿನೊಳಕ್ಕೆ ನುಗ್ಗಿ ಅಕ್ಷರಶಃ ಜೀವದ ಬೆದರಿಕೆ ಹಾಕಿದ್ದೆ. ನನ್ನ ಲಲಿತೆಗೆ ಏನಾದರೂ ಆಗಿಬಿಟ್ಟರೆ ನಿನ್ನ ಜೀವ ಉಳಿಸೋದಿಲ್ಲ ಎಂದು ಹೇಳಿದ್ದೆ. ಕ್ರುದ್ಧ ಜ್ವಾಲಾಮುಖಿಯಂತಾಗಿದ್ದೆ. ಹಾಗೆ ಕುದಿಯುತ್ತಲೇ ಬಂದು ಲಲಿತೆಯನ್ನು ತೊಡೆಯ ಮೇಲೆ ಮಲಗಿಸಿಕೊಂಡು ಹೇಳಿದೆ 'ನೀನು ನನ್ನನ್ನು ಮದುವೆಯಾಗಬಾರದಿತ್ತು. ಇಂಥ ನಿರ್ಭಾಗ್ಯನನ್ನ!'

ಸುಮ್ಮನೆ ನಕ್ಕಿತ್ತು ಭೂಮಿ ತೂಕದ ಸಹನೆ!

ಇವತ್ತಿಗೂ ನಗುತ್ತದೆ. ನಾನು ನಾಯಿ ಕಡಿದವನಂತೆ ಕಿರಿಚಾಡುವಾಗ, ಕೆಲಸದ ಒತ್ತಡದಲ್ಲಿ ನಲುಗಿ ಹೋದಾಗ, ಬದುಕಿನ ಧಡಕಿಗಳ ನಡುವೆ ಕಳೆದು ಹೋದಾಗ... ಆಗೆಲ್ಲ ನಗುತ್ತಲೇ ಇರುತ್ತದೆ. ದಣಿದು ದಿಕ್ಕೆಟ್ಟು, ಸೋತು ಕಂಗಾಲಾದಾಗ 'ಇಗೋ ಇಲ್ಲಿದ್ದೇನೆ' ಅನ್ನುತ್ತದೆ. ಕೈ ಹಿಡಿದು ಕರೆದುಕೊಳ್ಳುತ್ತದೆ.

ಅವಳು ಬದುಕಿನ ಮೊಟ್ಟ ಮೊದಲ ಮೆಟ್ಟಿಲ ಮೇಲೆ ನಿಂತು ಕೇಳಿದ ಪ್ರಶ್ನೆ;

'ಎಲ್ಲೋ ಜೋಗಪ್ಪ ನಿನ್ನ ಅರಮನೆ!'

ಅದಕ್ಕಿನ್ನು ಉತ್ತರ ಸಿಕ್ಕಿಲ್ಲ.

ಆದರೆ ಅನಂತರದ ದಿನಗಳಲ್ಲಿ ನಾನು ಅವಳ ಕೈಗೆ ದುಡ್ಡು ಕೊಟ್ಟು ಹೇಳಿದೆ;

'ಪಿನ್ನು ಹಾಕಿದ್ದು ಸಾಕು. ತಾಳಿ ಸರ ಮಾಡಿಸಿಕೋ!'

ಈಗ ಹೇಳಿ; ನಿಮ್ಮ ಮನೆಯ ಕಥೆಯೂ ಇದೇನಾ?

-ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 03 September, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books