Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಹೆಂಡತಿ ದುಡಿದ ದುಡ್ಡು ತಿಂದು ಮೆರೆಯುವುದು ಎಂದರೆ...

ಐ ರಿಯಲಿ ಹೇಟ್ ದೆಮ್.

ಈ ಕೆಟಗರಿಯ ಜನರ ಬಗ್ಗೆ ಹೇಳಿದರೆ ನೀವೂ ಅಸಹ್ಯ ಪಡುತ್ತೀರಿ. ಒಂದು ವೇಳೆ ನಿಮಗೆ ಗೊತ್ತಿಲ್ಲದಂತೆಯೇ ಇಂತಹದೊಂದು ಗುಣವನ್ನು ನೀವು ಬೆಳೆಸಿಕೊಂಡಿದ್ದೀರಿ ಅಂದರೆ ದಯವಿಟ್ಟು ಹೇಳುತ್ತೇನೆ, ಮೊದಲು ಈ ಗುಣವನ್ನು ಬಿಟ್ಟು ಬಿಡಿ. ಒಂದು ಸಲ ನೀವು ಹೊರಗೆ ಬಂದು ನೋಡಿದರೆ ನಾನು ಹೇಳಿದ್ದು ಎಷ್ಟು ನಿಜ ಅಂತ ನಿಮಗೇ ಅರ್ಥವಾಗಿಬಿಡುತ್ತದೆ. ಇಂತಹ ಕೆಟಗರಿಯ ನೂರಾರು ಜನರನ್ನು ನಾನು ಕಣ್ಣಾರೆ ನೋಡಿದ್ದೇನೆ. ಹೆಂಡತಿ ದುಡಿದ ದುಡ್ಡಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ, ಆಕೆಯ ಬೆವರಿನ ಫಲವನ್ನು ತನಗಿಚ್ಚೆ ಬಂದಂತೆ ಖರ್ಚು ಮಾಡಿ, ಸಾಲದೆಂಬಂತೆ ಆಕೆ ಪೈಸೆ ಪೈಸೆಗೂ ತನ್ನ ಬಳಿ ಕೈ ಚಾಚುವಂತೆ ಮಾಡುವ ಈ ಕೆಟಗರಿಯ ಗಂಡಸರನ್ನು ಕಂಡರೆ ನಿಜಕ್ಕೂ ನನಗೆ ಅಸಹ್ಯವಾಗುತ್ತದೆ.

ಅಂದ ಹಾಗೆ ಇವತ್ತಿನ ದಿನಗಳಲ್ಲಿ ಒಂದು ಸಂಸಾರ ಸಾಗಲು ಹೆಣ್ಣು ಮಕ್ಕಳು ದುಡಿಯುವುದು ಬಹಳಷ್ಟು ಸಲ ಅನಿವಾರ್ಯ. ಗಂಡನ ಸರಿಸಮಕ್ಕೆ ದುಡಿದು ಒಬ್ಬ ಹೆಣ್ಣು ಮಗಳು ನೆರವು ನೀಡಿದರೆ ಅದನ್ನು ತಪ್ಪು ಅಂತ ನಾನು ಹೇಳುವುದಿಲ್ಲ. ಯಾಕೆಂದರೆ ಇವತ್ತು ಜೀವನ ಸಾಗಿಸಲು ಪ್ರಾಮಾಣಿಕವಾಗಿ ದುಡಿದರೂ ಒಂದು ಮನೆಯ ಯಜಮಾನ ನಿರೀಕ್ಷಿತ ಮಟ್ಟದಲ್ಲಿ ಮನೆ ಸಾಗಿಸಲು ಸಾಧ್ಯವಾಗದೇ ಇರಬಹುದು. ಅಂತಹ ಸಂದರ್ಭಗಳಲ್ಲಿ ಆತನ ಹೆಗಲಿಗೆ ಹೆಗಲು ಕೊಟ್ಟು ಹೆಂಡತಿ ದುಡಿದರೆ ರೈಟ್. ಕಷ್ಟ ಸುಖಗಳಲ್ಲಿ ಸಮಭಾಗಿಯಾಗುತ್ತೇವೆ ಅಂತ ಮದುವೆಯ ಸಂದರ್ಭದಲ್ಲೇ ಪರಸ್ಪರ ಮಾತುಕೊಟ್ಟುಕೊಂಡ ಮೇಲೆ ಇಲ್ಲ, ಅದೆಲ್ಲ ಆಗುವುದಿಲ್ಲ ಅನ್ನುವುದು ಕಷ್ಟ.

ಅಂದ ಹಾಗೆ ಹೆಂಡತಿಯಾದವಳು ಹೊರಗೆ ಕೆಲಸ ಮಾಡಿದರೆ ಮಾತ್ರ ಗಂಡನ ಕಷ್ಟ ಸುಖದಲ್ಲಿ ಸಮಭಾಗಿ ಅಂತಲ್ಲ. ಮನೆಯಲ್ಲಿರುವ ಹೆಂಗಸು ಕೂಡಾ ಗಂಡನ ಸರಿಸಮನಾಗಿ, ತುಂಬ ಸಲ ಅವನಿಗಿಂತ ಹೆಚ್ಚಾಗಿ ಕೆಲಸ ಮಾಡುತ್ತಾಳೆ. ಅದು ಒಂದು ರೀತಿಯಾಯಿತು. ಆದರೆ ತಾವು ಕೈ ತುಂಬ ದುಡಿದ ಮೇಲೂ ಕೆಲಸಕ್ಕೆ ಹೋಗಿ ಹೆಂಡತಿ ದುಡಿಯುವ ದುಡ್ಡಿನ ಮೇಲೆ ತನ್ನದೇ ಏಕಸ್ವಾಮ್ಯ ಸಾಧಿಸಲು ಗಂಡ ಹೊರಡುವುದಿದೆಯಲ್ಲ? ಅದು ನಿಜಕ್ಕೂ ಅಕ್ಷಮ್ಯ ಅಪರಾಧ.

ನನ್ನ ಪರಿಚಿತರೊಬ್ಬರ ಕುಟುಂಬದ ಕತೆಯನ್ನೇ ಹೇಳುತ್ತೇನೆ ಕೇಳಿ. ಗಂಡ ದೊಡ್ಡ ಉದ್ಯೋಗದಲ್ಲಿದ್ದಾನೆ. ಸಿಂಪ್ಲಿ ಸಿಟ್ಟಿಂಗ್ ಮಂತ್ಲಿ ಗೆಟ್ಟಿಂಗ್ ಎಂಬಂತಹ ಕೆಲಸ. ತಿಂಗಳಾ ತಿಂಗಳು ಅನಾಮತ್ತಾಗಿ ಒಂದು ಲಕ್ಷ ರುಪಾಯಿ ಸಂಬಳ ಪಡೆಯುತ್ತಾನೆ. ಆತನ ಹೆಂಡತಿ ಕೂಡಾ ಒಳ್ಳೆಯ ಕೆಲಸದಲ್ಲಿದ್ದಾಳೆ. ಮೂವತ್ತೈದರಿಂದ ನಲವತ್ತು ಸಾವಿರ ರುಪಾಯಿ ವೇತನ ಪಡೆಯುತ್ತಾಳೆ. ಆದರೆ ಆಕೆ ನಿಜಕ್ಕೂ ಶ್ರಮ ಜೀವಿ. ದಿನಕ್ಕೆ ಎಂಟು ಗಂಟೆ ಕೆಲಸ ಮಾಡಬೇಕಿದ್ದರೂ ಕಚೆರಿಯ ಒತ್ತಡದ ಹಿನ್ನೆಲೆಯಲ್ಲಿ ಹನ್ನೆರಡು, ಹದಿನಾಲ್ಕು ಗಂಟೆಗಳ ಕಾಲ ಆಕೆ ಶ್ರಮ ಪಡುತ್ತಾಳೆ.

ಇಷ್ಟೆಲ್ಲ ಮಾಡಿ, ಮನೆಗೆ ಬಂದು ಗಂಡನಿಗೆ ಅಡುಗೆ ಬೇಯಿಸಿ, ಆತನನ್ನು ಮಲಗಿಸಿದ ನಂತರವೇ ವಿಶ್ರಾಂತಿಗೆ ಜಾರುತ್ತಾಳೆ. ವಿಪರ್ಯಾಸ ಎಂದರೆ ಆಕೆ ತನ್ನ ಪ್ರತಿ ತಿಂಗಳ ಖರ್ಚಿಗೆ ಗಂಡನ ಎದುರು ಕೈ ಚಾಚಬೇಕು.ಅರೇಸ್ಕೀ, ಗಂಡ ಬರೋಬ್ಬರಿ ಒಂದು ಲಕ್ಷ ರುಪಾಯಿ ದುಡಿಯುವುದಿಲ್ಲವಾ? ಅಂತ ನೀವು ಕೇಳಬಹುದು. ಆದರೆ ಅಲ್ಲೇ ಇರುವುದು ಸಮಸ್ಯೆ. ಆತ ತನ್ನ ದುಡಿಮೆಯ ಹಣವನ್ನು ಸಿಕ್ಕ ಸಿಕ್ಕ ಪ್ರಾಜೆಕ್ಟುಗಳಿಗೆ ಅಂತ ಖರ್ಚು ಮಾಡುತ್ತಾನೆ. ಸಾಲದೆಂಬಂತೆ ಹೆಂಡತಿಯ ವೇತನವನ್ನು ತನಗಿಚ್ಚೆ ಬಂದಂತೆ ವೆಚ್ಚ ಮಾಡುತ್ತಾನೆ. ಹೆಂಡತಿ ಪ್ರತಿ ದಿನ ಆಫೀಸಿಗೆ ಹೋಗುವಾಗ ಕೈಲಿ ನೂರು ರುಪಾಯಿ ಇಡುತ್ತಾನೆ. ತೀರಾ ಅಪರೂಪಕ್ಕೆ ಹಬ್ಬ, ಹರಿದಿನ ಬಂದರೆ ಸೀರೆ, ಗೀರೆ ತಗೋ ಹೋಗು ಅಂತ ಕೈಲಿ ಸಾವಿರ ರುಪಾಯಿ ಇಡುತ್ತಾನೆ.

ಮದುವೆಯಾಗಿ ಬಂದ ಹೊಸತರಲ್ಲಿ ಆಕೆ ಇದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಮಕ್ಕಳು ಹುಟ್ಟಿ ದೊಡ್ಡವಾದ ಮೇಲೂ ಇದೇ ಪರಿಪಾಠ. ತನ್ನ ಸಂಬಳದಲ್ಲಿ ಮಕ್ಕಳ ಫೀಸು, ಸ್ಕೂಲ್ ಡ್ರೆಸ್ಸು ಕೊಡಿಸುವುದಂತೂ ದೂರದ ಮಾತು. ಆದರೆ ಆ ಮಕ್ಕಳಿಗಾಗಿ ಕೈಲಿ ಒಂದಿಷ್ಟು ಕಾಸಿರಲಿ ಅಂತ ಹೆಂಡತಿ ಬಯಸಿದರೆ ಊಹೂಂ, ನೋ, ನೋ.ಇಷ್ಟ ಬಂದಂತೆ ಖರ್ಚು ಮಾಡಲು ಅದೇನು ಹಡಬಿಟ್ಟಿ ದುಡ್ಡಾ? ಹೋಗ್ಹೋಗು. ನಿನಗೇನು ಗೊತ್ತಾಗುತ್ತೆ? ಕೂತು ತಿಂದರೆ ಕುಡಿಕೆ ಹೊನ್ನೂ ಸಾಲದು ಕಣಮ್ಮ ಅಂತ ನೇರವಾಗಿಯೇ ಗದರುತ್ತಾನೆ.

ಆತನ ಪ್ರಕಾರ, ಈಗ ದುಡಿದದ್ದನ್ನೆಲ್ಲ ಆಸ್ತಿ ಖರೀದಿಗಾಗಿ ಬಳಸಬೇಕು.ಇಲ್ಲದಿದ್ದರೆ ಇಳಿ ವಯಸ್ಸಿನಲ್ಲಿ ಕಷ್ಟ ಬಂದರೆ ಏನು ಮಾಡಬೇಕು? ಹಾಗಂತ ಕೇಳುತ್ತಾ ಕೇಳುತ್ತಲೇ ಆತ ಐವತ್ತೈದರ ಗಡಿ ದಾಟಿದ್ದಾನೆ. ಈಗಲೂ ಅದೇ ಗತ್ತು, ಗೈರತ್ತು. ಅಲ್ರೀ, ಗಂಡ-ಹೆಂಡತಿ ಇಬ್ಬರೂ ಸೇರಿ ಸುಮಾರು ಒಂದೂವರೆ ಲಕ್ಷ ರುಪಾಯಿ ದುಡಿಯುತ್ತೀರಿ. ಇಷ್ಟಾದರೂ ಪೈಸೆ ಪೈಸೆಗೂ ಆ ಹೆಣ್ಣುಜೀವ ಲಾಟರಿ ಹೊಡೆಯುವಂತೆ ಯಾಕೆ ಮಾಡುತ್ತೀರಿ? ಹಾಗಂತ ನಾನೇ ಒಂದು ದಿನ ಈ ಪರಿಚಿತರಿಗೆ ನೇರವಾಗಿ ಕೇಳಿದೆ.

ನಾನು ಬಡವ, ಆಕೆ ಬಡವಿ, ಒಲವೇ ನಮ್ಮ ಬದುಕು ಎಂಬ ಪರಿಸ್ಥಿತಿ ಇದ್ದರೆ ನೀವು ನಡೆದುಕೊಳ್ಳುವುದು ಸರಿ. ಬಡತನ ಇದ್ದಾಗ ಒಲವು ಎಂಬ ಶ್ರೀಮಂತಿಕೆ ಎಲ್ಲವನ್ನೂ ಮರೆಸಿಬಿಡುತ್ತದೆ. ಆದರೆ ಕೈ ತುಂಬ ದುಡಿದೂ ಹೆಂಡತಿಯ ಕೈಗೆ ದುಡ್ಡು ಕೊಡಲು ಯಾಕೆ ಹಿಂಜರಿಯುತ್ತೀರಿ? ಅಂತ ಪ್ರಶ್ನೆ ಹಾಕಿದೆ. ಅದಕ್ಕಾತ, ಎಲ್ಲಾದರೂ ಉಂಟಾ ಸಾರ್, ಇಳಿ ವಯಸ್ಸಿನಲ್ಲಿ ಯಾರ ಎದುರು ನಿಂತು ಕೈ ಚಾಚಬೇಕು ಅಂತ ಹೇಳುತ್ತೀರಿ? ಈಗ ನಾನು ಟೈಟು ಮಾಡಿರುವುದರಿಂದ ಆಕೆಯ ಬದುಕಿಗೆ ಕಷ್ಟ ಏನಾಗಿಲ್ಲ. ಯಾಕೆಂದರೆ ತನಗೆ ಕಷ್ಟ ಅನ್ನಿಸಿದಾಗ ತನ್ನ ಅಣ್ಣ-ತಮ್ಮಂದಿರ ಬಳಿಯೋ, ಅಕ್ಕ-ತಂಗಿಯರ ಬಳಿಯೋ ಹೇಳಿಕೊಳ್ಳುತ್ತಾಳೆ. ಅವರೂ ಒಂದಷ್ಟು ಸಹಾಯ ಕೊಡುತ್ತಾರೆ. ಹೀಗಾಗಿ ಅವಳ ಹತ್ತಿರ ಖರ್ಚಿಗೆ ಕಾಸಿಲ್ಲ ಅಂದುಕೊಂಡರೆ ಅದು ತಪ್ಪು ಎಂದು ಬಿಟ್ಟ.

ಆತನ ಮಾತು ಕೇಳಿ ನಿಜಕ್ಕೂ ನನಗೆ ಅಸಹ್ಯವಾಗಿ ಹೋಯಿತು.ಅಲ್ಲ, ಪಾಪ ಆ ಹೆಣ್ಣು ಮಗಳು ಹಗಲು ರಾತ್ರಿ ದುಡಿದು, ತನ್ನ ಇಡೀ ಸಂಬಳವನ್ನು ಈ ಪಾಪಿಷ್ಟನ ಕೈಗೆ ಕೊಟ್ಟು, ತನ್ನ ಕಷ್ಟಕ್ಕಾಗಿ ಅಣ್ಣ-ತಮ್ಮಂದಿರ ಬಳಿ, ಅಕ್ಕ-ತಂಗಿಯರ ಬಳಿ ನಿಲ್ಲುವ ಸ್ಥಿತಿ ಸೃಷ್ಟಿಸಿದ್ದಾನಲ್ಲ? ಇವನಂತಹ ಪಾಪಿ ಬೇರೊಬ್ಬರುಂಟೇ ಅನ್ನಿಸಿಬಿಟ್ಟಿತು.

ಇರಬಹುದು, ಗಂಡ-ಹೆಂಡತಿಯ ದುಡಿಮೆಯಲ್ಲಿ ಎರಡು ಮನೆ, ನಾಲ್ಕು ಸೈಟು ಆಗಿರಬಹುದು. ಆದರೆ ದುಡಿಮೆ ಮಾಡುವ ಕಾಲದಲ್ಲಿ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಾಗಿರಲು ಏನು ಮಾಡಬೇಕೋ ಅದನ್ನು ಮಾಡದೇ ಇಳಿವಯಸ್ಸಿನ ಕಡೆ ಕೈ ತೋರಿಸುವ ಇಂತಹ ಗಂಡಸರಿದ್ದಾರಲ್ಲ? ಇಂತವರ ಕೈ ಹಿಡಿಯುವ ದೌರ್ಭಾಗ್ಯ ಯಾವ ಹೆಣ್ಣು ಮಕ್ಕಳಿಗೂ ಬರಕೂಡದು.

ನನ್ನ ಪ್ರಕಾರ, ಭವಿಷ್ಯದ ಬಗ್ಗೆ ಚಿಂತೆ ಇರಬಾರದು ಅಂತಲ್ಲ. ಆದರೆ ತನ್ನ ದುಡಿಮೆಯ ದುಡ್ಡನ್ನು ಸಂಪೂರ್ಣವಾಗಿ ಆಸ್ತಿ-ಪಾಸ್ತಿಯ ಮೇಲೆ ಸುರಿದು, ಹೆಂಡತಿಯ ದುಡಿಮೆಯ ಹಣದ ಒಂದು ಭಾಗದಲ್ಲೇ ಸಂಸಾರ ನಡೆಸಿ ಒಬ್ಬ ಮನುಷ್ಯ ಸಾಧಿಸುವ ಪುರುಷಾರ್ಥವಾದರೂ ಏನು? ಇದು ಈ ಕ್ಷಣಕ್ಕೂ ನನಗೆ ಅರ್ಥವಾಗದ ವಿಷಯ. ಯಾಕೆಂದರೆ ಬದುಕು ಎಂಬುದು ತುಂಬ ಸಲ ದೂರದ ನಡಿಗೆ ಹೌದಾದರೂ, ಹಲವು ಸಲ ಈ ನಡಿಗೆ ನಿರೀಕ್ಷೆಗೂ ಮುನ್ನವೇ ನಿಂತು ಬಿಡಬಹುದು ಅನ್ನುವ ಎಚ್ಚರಿಕೆಯೂ ಮನಸ್ಸಿನಲ್ಲಿರಬೇಕು.

ದಾಂಪತ್ಯ ಎಂಬುದು ಎರಡು ಜೀವಗಳು ಕಷ್ಟ, ಸುಖದಲ್ಲಿ ಸಮನಾಗಿ ಬೆರೆಯುವ ಒಪ್ಪಂದ ಎಂಬುದು ನಿಜವಾದರೂ ಗಂಡಸು ಅನ್ನಿಸಿಕೊಂಡವನು ತನ್ನಿಂದ ಸಾಧ್ಯವಿದ್ದಷ್ಟೂ ಕಂಫರ್ಟ್‌ನೆಸ್‌ನ್ನು ಹೆಂಡತಿಗೆ ಕೊಡಬೇಕು.ಅದನ್ನು ಬಿಟ್ಟು ನಾನಿಲ್ಲದೇ ನೀನಿರಲು ಸಾಧ್ಯವೇ ಇಲ್ಲ. ನಾನಿಲ್ಲದೇ ನಿನಗೊಂದು ಬದುಕಿರಲು ಸಾಧ್ಯವೇ ಇಲ್ಲ ಎಂಬಂತೆ ನಡೆದುಕೊಳ್ಳುವವನು ಹೆಂಡತಿಯಲ್ಲಿ ಒಂದು ಅಭದ್ರತೆಯನ್ನು ಮೂಡಿಸಬಹುದೇ ಹೊರತು ಕಂಫರ್ಟ್‌ನೆಸ್ ಕೊಡಲು ಸಾಧ್ಯವೇ ಇಲ್ಲ. ಅದರಲ್ಲೂ ಹೆಂಡತಿಯ ದುಡಿಮೆಯ ದುಡ್ಡನ್ನೇ ತನಗಿಚ್ಚೆ ಬಂದಂತೆ ಬಳಸಿ, ಅದರ ಮೇಲೆ ನಿನಗ್ಯಾವ ಹಕ್ಕೂ ಇಲ್ಲ. ನಾನೇ ಚಕ್ರಾಧಿಪತಿ ಎಂಬಂತೆ ನಡೆದುಕೊಳ್ಳುವ ಗಂಡಸಿದ್ದಾನಲ್ಲ? ಅವನಂತಹ ಅಯೋಗ್ಯರು ಬೇರೆ ಯಾರಿಲ್ಲ. ಅಂತಹ ಅಯೋಗ್ಯತನ ಒಂದು ಗಂಡು ಜೀವಕ್ಕೆ ಯಾವತ್ತೂ ಬಾರದಿರಲಿ ಮತ್ತು ಇಂತಹ ಅಯೋಗ್ಯರ ಜತೆ ಬಾಳುವ ದುರ್ಗತಿ ಕೂಡಾ ಯಾವ ಹೆಣ್ಣಿಗೂ ಬಾರದಿರಲಿ.

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 September, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books