Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ರುಪಾಯಿ ಮೌಲ್ಯದ ಕುಸಿತಕ್ಕೆ ಜೀವನ ಮೌಲ್ಯಗಳ ಕುಸಿತವೂ ಕಾರಣವಲ್ಲವೇ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಯಾವ ಪರಿ ಉರುಳಿ ಬೀಳುತ್ತಿದೆ ಎಂದರೆ ಇನ್ನು ಸ್ವಲ್ಪ ದಿನ ಕಳೆದರೆ ಕೆಳಗೆ ಬೀಳುತ್ತಿರುವ ರುಪಾಯಿ ಕಣ್ಣಿಗೇ ಕಾಣದಂತಾಗಿ ಬಿಡಬಹುದು ಅಂತ ಹಾಹಾಕಾರ ಹಬ್ಬಿದೆ. ನಿಜ, ರುಪಾಯಿಯ ಮೌಲ್ಯ ಒಂದೇ ಸಮನೆ ಕೆಳಗಿಳಿಯುತ್ತಿದೆ. ಆದರೆ ರುಪಾಯಿಯ ಮೌಲ್ಯ ಮನುಷ್ಯನ ಜೀವನ ಮೌಲ್ಯಗಳಿಗಿಂತ ಹೆಚ್ಚಿನ ವೇಗದಲ್ಲಿ ಕುಸಿಯುತ್ತಿದೆಯೇ? ನಿಶ್ಚಿತವಾಗಿಯೂ ಇಲ್ಲ.

ಅಂದ ಹಾಗೆ ರುಪಾಯಿಯ ಮೌಲ್ಯ ಯಾಕೆ ಕುಸಿಯುತ್ತಿದೆ ಅನ್ನುವುದಕ್ಕೆ ಹಲವು ಕಾರಣಗಳನ್ನು ಕೊಡಬಹುದು. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಆಹಾರ ಭದ್ರತಾ ಕಾಯ್ದೆಯಿಂದ ಹಿಡಿದು ಸಿರಿಯಾದ ಮೇಲೆ ಯುದ್ಧ ಮಾಡಲು ಅಮೆರಿಕಾ ಹವಣಿಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಹಿಂಜರಿಯುತ್ತಿದ್ದಾರೆ ಎಂಬುದರ ತನಕ ಅನೇಕ ಕಾರಣಗಳನ್ನು ಕೊಡಬಹುದು. ಮತ್ತು ಈ ಕಾರಣಗಳು ನಿಜವೂ ಇರಬಹುದು. ಆದರೆ ಸಮಸ್ಯೆ ಎಂಬ ಹಾಲಾಹಲದ ಆಳದಲ್ಲೇ ಅಮೃತ ಎಂಬ ಉತ್ತರ ಕಂಡು ಹಿಡಿಯಲು ಸಾಧ್ಯವಿದೆ. ಉದಾಹರಣೆಗೇ ತೆಗೆದುಕೊಳ್ಳೋಣ. ಡಾಲರ್ ಎದುರು ರುಪಾಯಿ ಮೌಲ್ಯ ಯಾಕೆ ಕುಸಿಯುತ್ತಿದೆ? ಇದಕ್ಕೆ ಸಿಂಪಲ್ಲಾದ ಉತ್ತರವೆಂದರೆ ನಮ್ಮ ದೇಶ ಪರದೇಶಗಳಿಗೆ ಅಗತ್ಯವಾದ ವಸ್ತುಗಳನ್ನು ಉತ್ಪಾದಿಸುವುದಕ್ಕಿಂತ ಹೆಚ್ಚಾಗಿ, ಪರದೇಶಗಳಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಖರೀದಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಯಾವಾಗ ಮಾರುವ ವಸ್ತುಗಳು ಕಡಿಮೆಯಾಗಿ, ಖರೀದಿ ಮಾಡುವ ವಸ್ತುಗಳ ಪ್ರಮಾಣ ಜಾಸ್ತಿಯಾಗುತ್ತದೋ ಆಗ ಸಹಜವಾಗಿಯೇ ಹೆಚ್ಚಿನ ಹಣ ಕೊಡಬೇಕಾಗುತ್ತದೆ.

ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಕೊಟ್ಟು ಯಾವುದೇ ವಸ್ತುವನ್ನು ಖರೀದಿಸಲು ಸಾಧ್ಯವಿಲ್ಲವಲ್ಲ. ಇದಕ್ಕಾಗಿ ಬಹಳಷ್ಟು ಸಂದರ್ಭಗಳಲ್ಲಿ ಡಾಲರುಗಳ ಅಗತ್ಯ ಬೀಳುತ್ತದೆ. ಒಂದು ಕಡೆಯಿಂದ ನಾವು ಬೇರೆ ದೇಶಗಳಿಗೆ ನಮ್ಮಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಹೆಚ್ಚೆಚ್ಚಾಗಿ ರಫ್ತು ಮಾಡಿದರೆ ತಾನೇ ನಮ್ಮಲ್ಲಿ ಡಾಲರುಗಳ ಸಂಗ್ರಹ ಆಗುವುದು. ನೆರೆಯ ಚೀನಾ ಯಾವ ಮಟ್ಟದಲ್ಲಿ ಇದನ್ನು ಮಾಡುತ್ತದೆ ಎಂದರೆ ಆ ದೇಶಕ್ಕೆ ಹೋಗಿ ಬಂದ ನನ್ನ ಗೆಳೆಯನೊಬ್ಬ ಹೇಳುವ ಪ್ರಕಾರ, ಇನ್ನು ಸ್ವಲ್ಪ ವರ್ಷ ಕಳೆದರೆ ಅಮೆರಿಕಾ ತನ್ನ ಸೊಂಟ ಬಲಪಡಿಸಿಕೊಳ್ಳಲು ಚೀನಾದಿಂದಲೇ ಡಾಲರುಗಳನ್ನು ಸಾಲವಾಗಿ ಪಡೆದುಕೊಳ್ಳುವ ಸ್ಥಿತಿ ಬರುತ್ತದೆ. ಕಾರಣವಾಗಿ ಚೀನಾ ರಫ್ತು ವಹಿವಾಟಿನಲ್ಲಿ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಜಗತ್ತಿನ ನೂರಾರು ದೇಶಗಳಿಗೆ ತನ್ನಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಮಾರುತ್ತದೆ. ಕೃಷಿ ಉತ್ಪನ್ನಗಳಿಂದ ಹಿಡಿದು ಎಲೆಕ್ಟ್ರಾನಿಕ್ ಉತ್ಪನ್ನಗಳವರೆಗೆ ಚೀನಾ ದೇಶದಿಂದ ರಫ್ತಾಗುವ ವಸ್ತುಗಳ ಮೌಲ್ಯ ಅಗಾಧವಾದದ್ದು. ಆದರೆ ಭಾರತದಿಂದ ರಫ್ತಾಗುವ ವಸ್ತುಗಳ ಶೇಕಡಾವಾರು ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.

ನೀವು ಗಮನಿಸಬೇಕಿರುವುದೆಂದರೆ ಚೀನಾದ ಜನರ ಬದುಕಿನಲ್ಲಿರುವ ಸರಳತೆ. ಎಷ್ಟೇ ಶ್ರೀಮಂತನಾದರೂ ಆತನ ಒಂದು ದಿನದ ಸರಾಸರಿ ವೆಚ್ಚ ಮಧ್ಯಮ ವರ್ಗದ ಜನರ ಜೀವನ ವೆಚ್ಚಕ್ಕಿಂತ ಹೆಚ್ಚಿಲ್ಲ. ಆಸೆಯೇ ದುಃಖಕ್ಕೆ ಕಾರಣ ಅಂತ ಇಲ್ಲಿ ಹುಟ್ಟಿದ ಬುದ್ಧ ಹೇಳಿದ. ಆದರೆ ಆತ ಚೀನಾದಂತಹ ದೇಶಗಳ ಪಾಲಿಗೆ ರೋಲ್ ಮಾಡೆಲ್ಲಾದ. ಆದರೆ ನಮ್ಮಲ್ಲಿ ಸರಳತೆ ಎಂಬುದು ರುಪಾಯಿ ಮೌಲ್ಯಕ್ಕಿಂತ ನೂರು ಪಟ್ಟು ವೇಗದಲ್ಲಿ ಕುಸಿಯುತ್ತಿದೆಯಲ್ಲ. ಇವತ್ತು ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವ ದೇಶಗಳ ಪೈಕಿ ಭಾರತ ಮುಂಚೂಣಿ ಸ್ಥಾನದಲ್ಲಿದೆ. ನಲವತ್ತು ವರ್ಷಗಳ ಹಿಂದೆ ಅಮೆರಿಕಾ ಈ ಜಗತ್ತಿನಲ್ಲಿ ಉತ್ಪಾದನೆಯಾಗುತ್ತಿದ್ದ ತೈಲದ ಪೈಕಿ ಶೇಕಡಾ ಇಪ್ಪತ್ತಕ್ಕಿಂತ ಹೆಚ್ಚಿನ ಪ್ರಮಾಣದ ತೈಲವನ್ನು ಖರ್ಚು ಮಾಡುತ್ತಿತ್ತು. ಆದರೆ ಆ ದೇಶದಲ್ಲೀಗ ತೈಲ ಬಳಕೆಯ ಶೇಕಡಾವಾರು ಪ್ರಮಾಣ ಕಡಿಮೆಯಾಗಿದೆ.

ಒಂದು ಕಾಲದಲ್ಲಿ ತೈಲ ಉತ್ಪನ್ನಗಳಿಗೆ ಗಲ್ಫ್ ದೇಶಗಳ ಮೇಲೆ ಅವಲಂಬಿತವಾಗಬೇಕಿದ್ದ ಅಮೆರಿಕಾ, ರಷ್ಯಾದಂತಹ ದೇಶಗಳು ಇವತ್ತು ಪೆಟ್ರೋಲ್ ಉತ್ಪನ್ನಗಳ ವಿಷಯದಲ್ಲಿ ಸ್ವಾವಲಂಬಿಯಾಗಿರುವುದಷ್ಟೇ ಅಲ್ಲ, ಜಗತ್ತಿನ ನಲವತ್ತು, ಐವತ್ತು ದೇಶಗಳಿಗೆ ತೈಲ ರಫ್ತು ಮಾಡುವ ಸ್ಥಿತಿಗೆ ತಲುಪಿಬಿಟ್ಟಿವೆ. ತೀರಾ ಇತ್ತೀಚೆಗೆ ಇರಾನ್ ವಿರುದ್ಧ ಗುಡುಗತೊಡಗಿದ್ದ ಅಮೆರಿಕಾ ನೇರಾ ನೇರವಾಗಿ ಭಾರತಕ್ಕೆ ಹೇಳಿತ್ತು. ನೀವು ಇರಾನ್‌ನಿಂದ ಪಡೆಯುತ್ತಿರುವ ತೈಲದ ಮೇಲೆ ಹೆಚ್ಚು ಅವಲಂಬಿತರಾಗಬೇಡಿ. ನಿಮಗೆ ಬೇಕಾದ ತೈಲವನ್ನು ನಾವು ಕೊಡುತ್ತೇವೆ ಅಂತ ಪಟ್ಟು ಹಿಡಿದಿತ್ತು. ಅದು ಯಥಾಪ್ರಕಾರ ಇರಾನ್‌ನನ್ನು ಮಣಿಸಲು ಅಗತ್ಯವಾದ ತಂತ್ರದ ಒಂದು ಭಾಗವಾದರೆ, ಮತ್ತೊಂದು ಕಡೆಯಿಂದ ತನ್ನಲ್ಲಿನ ತೈಲವನ್ನು ಮಾರಾಟ ಮಾಡುವ ಅದರ ವ್ಯಾಪಾರಿ ತಂತ್ರವೂ ಹೌದು. ಹೀಗೆ ಒಂದು ಕಡೆಯಿಂದ ಪ್ರಮುಖ ದೇಶಗಳು ತಮ್ಮ ಶಕ್ತಿಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳಲು ರಫ್ತು ವಹಿವಾಟಿನ ಮೇಲೆ ಹೆಚ್ಚಿನ ಉತ್ತೇಜನ ನೀಡಿದರೆ ಭಾರತ ಮಾತ್ರ ಆಮದು ವಹಿವಾಟಿನ ಮೇಲೇ ಅವಲಂಬಿತವಾಗುತ್ತಾ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಕುಗ್ಗಿಸಿಕೊಳ್ಳುತ್ತಿದೆ.

ಉದಾಹರಣೆಗೆ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಆಹಾರ ಭದ್ರತಾ ಕಾಯ್ದೆಯನ್ನೇ ನೋಡಿ. ಈ ಕಾಯ್ದೆ ಜಾರಿಗೆ ಬಂದರೆ ಒಂದು ಕುಟುಂಬಕ್ಕೆ ತಲಾ ಮೂವತ್ತೈದು ಕೆಜಿ ಆಹಾರ ಧಾನ್ಯ ಅಗ್ಗದ ದರದಲ್ಲಿ ದೊರೆಯುತ್ತದೆ. ನಿಜಕ್ಕೂ ಕಡುಬಡವರಿಗೆ ಆಹಾರದ ಭದ್ರತೆ ಒದಗಿಸೋಣ. ಆದರೆ ದುಡಿಯುವ ಶಕ್ತಿ ಇದ್ದವರಿಗೆ ಇಂತಹ ಸವಲತ್ತುಗಳನ್ನು ನೀಡುವ ಭರದಲ್ಲಿ ಅವರ ದುಡಿಯುವ ಆಸಕ್ತಿಯನ್ನೇ ಕಿತ್ತುಕೊಂಡರೆ ಗತಿ ಏನು? ಇವತ್ತು ಕರ್ನಾಟಕದ ಯಾವುದೇ ಮೂಲೆಗೆ ಹೋಗಿ ನೋಡಿ. ಹೊಲ, ಗದ್ದೆಗಳಲ್ಲಿ ಕೆಲಸ ಮಾಡಲು ಜನ ಸಿಗುವುದಿಲ್ಲ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಆರಂಭವಾದ ನಂತರ ಶುರುವಾದ ಆತಂಕವಿದು. ಈಗ ಅನ್ನ ಭಾಗ್ಯ ಯೋಜನೆಯ ಮೂಲಕ ಇದು ಮತ್ತಷ್ಟು ಎತ್ತರಕ್ಕೆ ತಲುಪಲಿದೆ. ಕೇಂದ್ರದ ಆಹಾರ ಭದ್ರತಾ ಕಾಯ್ದೆ ಜಾರಿಗೆ ಬಂದರಂತೂ ಮುಗಿದೇ ಹೋಯಿತು.

ಅಲ್ಲಿಗೆ ನಮ್ಮ ಕೃಷಿ ವ್ಯವಸ್ಥೆ ಏನಾಗುತ್ತದೆ? ಕೃಷಿಯನ್ನು ನಂಬಿಕೊಂಡು ಬದುಕಬಹುದು ಎಂದು ಯಾವ ರೈತ ಭಾವಿಸುತ್ತಾನೆ? ಇಂತಹ ಭಾವನೆ ದಟ್ಟವಾದರೆ ಕೃಷಿ ಉತ್ಪನ್ನದ ಪ್ರಮಾಣ ಹೆಚ್ಚಾಗುವುದು ಹೇಗೆ? ಒಂದು ಸಲ ಇಂತಹ ಯೋಜನೆಗಳನ್ನು ಜಾರಿಗೆ ತಂದ ಮೇಲೆ ನಮ್ಮಲ್ಲಿ ಕೃಷಿ ಉತ್ಪನ್ನ ಹೆಚ್ಚಾಗುತ್ತದೋ ಇಲ್ಲವೋ? ಆದರೆ ಯೋಜನೆಯಡಿ ಮತದಾರರನ್ನು ಓಲೈಸುವ ಸಲುವಾಗಿಯಾದರೂ ಆಹಾರ ಧಾನ್ಯಗಳನ್ನು ಕಡಿಮೆ ದರದಲ್ಲಿ ವಿತರಣೆ ಮಾಡಲೇಬೇಕಲ್ಲ? ಆಗ ಈ ದೇಶಕ್ಕೆ ಅಗತ್ಯವಾದ ಆಹಾರ ಪದಾರ್ಥವನ್ನು ಎಲ್ಲಿಂದ ತರಬೇಕು? ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲು ಹೊರಟ ಸಿದ್ಧರಾಮಯ್ಯನವರ ಸರ್ಕಾರ ಮೊದಲ ತಿಂಗಳೇ ಅಕ್ಕಿ ಬೇಕು ಅಕ್ಕಿ ಅಂತ ಛತ್ತೀಸ್‌ಘಡ ರಾಜ್ಯದ ಮೊರೆ ಹೋಯಿತು. ಸದ್ಯಕ್ಕೇನೋ ಅಲ್ಲಿ ಅಕ್ಕಿ ಬೆಳೆಯಲಾಗುತ್ತಿದೆ. ಆದರೆ ಬೇಡಿಕೆಯ ಪ್ರಮಾಣ ಒಂದೇ ಸಮನೆ ಏರುತ್ತಾ ಹೋದರೆ ಆ ರಾಜ್ಯ ಸಹಜವಾಗಿಯೇ ಅಕ್ಕಿಯ ಬೆಲೆಯನ್ನು ಹೆಚ್ಚು ಮಾಡುತ್ತದೆ.

ಈಗ ಅಕ್ಕಿಯ ಜತೆ ರಾಗಿ, ಜೋಳ ಕೊಡುತ್ತೇವೆ ಎಂದು ಸರ್ಕಾರ ಹೊರಟಿದೆ. ಆ ಮೂಲಕ ನಮ್ಮ ಮಾರುಕಟ್ಟೆಯಲ್ಲೇ ಅದನ್ನು ಖರೀದಿ ಮಾಡುತ್ತೇವೆ ಎಂದು ಸರ್ಕಾರ ಹೇಳಿದಾಗ ಸಹಜವಾಗಿಯೇ ಮಾರುಕಟ್ಟೆಯಲ್ಲಿ ಅದರ ಬೆಲೆ ಹೆಚ್ಚಾಗುತ್ತದೆ. ಆಗ ವಧ್ಯಮ ವರ್ಗ ತಲ್ಲಣಿಸುತ್ತದೆ. ಇವೆಲ್ಲ ಫೈನಲಿ ಎಲ್ಲಿಗೆ ತಲುಪುತ್ತವೆ ಅಂದರೆ ನಮಗೆ ಬೇಕಾದ ಅಕ್ಕಿ, ಗೋಧಿ, ರಾಗಿ, ಜೋಳ ಎಲ್ಲವನ್ನೂ ಪರದೇಶಗಳಿಂದ ಆಮದು ಮಾಡಿಕೊಳ್ಳುವ ಸ್ಥಿತಿಯನ್ನು ಸೃಷ್ಟಿಸುತ್ತದೆ. ಒಂದು ಸಲ ತಿನ್ನುವ ಅನ್ನಕ್ಕೂ ವಿದೇಶಗಳ ಮೊರೆ ಹೋಗಬೇಕಾದ ಸ್ಥಿತಿ ಬಂದರೆ ಗತಿ ಏನು? ನಾವೀಗ ನಡೆಯುತ್ತಿರುವುದು ಆ ದಾರಿಯಲ್ಲೇ ಅಲ್ಲವೇ? ಇದು ಒಂದು ಕಡೆಗಾಯಿತು. ಮತ್ತೆ ತೈಲದ ವಿಷಯಕ್ಕೇ ಬರೋಣ. ತೈಲ ಉತ್ಪಾದನೆಗೆ ನಮ್ಮ ದೇಶದಲ್ಲೇ ಸಾಕಷ್ಟು ಅವಕಾಶಗಳಿವೆ. ಒಂದು ವರದಿಯ ಪ್ರಕಾರ, ದೇಶದಲ್ಲಿ ತೈಲ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು ನಮಗೆ ಸಾಧ್ಯವಾದರೆ, ತೀರಾ ಹಂಡ್ರೆಡ್ ಪರ್ಸೆಂಟ್ ಅಲ್ಲವಾದರೂ ದೇಶದ ಒಟ್ಟಾರೆ ಬೇಡಿಕೆಯ ಪ್ರಮಾಣದ ಶೇಕಡಾ ಐವತ್ತರಷ್ಟನ್ನಾದರೂ ನಾವು ಪಡೆಯಲು ಸಾಧ್ಯವಾದರೆ ಲಕ್ಷಾಂತರ ಕೋಟಿ ರುಪಾಯಿ ಉಳಿಯುತ್ತದೆ.

ಆ ಪ್ರಮಾಣದ ತೈಲ ಉತ್ಪಾದನೆ ನಮ್ಮಿಂದ ಸಾಧ್ಯವಾದರೆ ಡಾಲರುಗಳಿಗಾಗಿ ಪರದಾಡುವುದು ಎಷ್ಟೋ ಪಾಲು ತಗ್ಗಿ ಹೋಗುತ್ತದೆ. ಇದನ್ನು ಮಾಡಬೇಕಿರುವುದು ಕೇಂದ್ರ ಸರ್ಕಾರ. ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಆಗಬೇಕಿರುವ ಎರಡನೇ ಕೆಲಸಕ್ಕೆ ಜನರೇ ಪಾತ್ರಧಾರಿಗಳಾಗಬೇಕು. ಜಾಗತೀಕರಣ ಮೂಡಿಸಿದ ಬೆಚ್ಚನೆ ಭಾವದಲ್ಲಿ ಮೇಲ್ಮಧ್ಯಮ ವರ್ಗಕ್ಕೆ ತಲುಪಿರುವ ಜನ ಮನೆಗೆ ಎರಡು, ಮೂರು ಕಾರುಗಳನ್ನು ಖರೀದಿಸಿ, ಒಂದೊಂದು ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವ ಮನಸ್ಥಿತಿಯಿಂದ ಹೊರಗೆ ಬರಬೇಕು. ಕೆಲಸಕ್ಕಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವಾಗ ಆದಷ್ಟೂ ಹೆಚ್ಚು ಸಮೂಹ ಸಾರಿಗೆ ವ್ಯವಸ್ಥೆಯನ್ನು ನೆಚ್ಚಿಕೊಂಡರೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೇಡಿಕೆ ತಗ್ಗಲು ನೆರವು ಕೊಟ್ಟಂತಾಗುತ್ತದೆ. ಇದು ಒಂದು ದೇಶದ ಜನರ ಮನಸ್ಸಿನಲ್ಲಿ ಮೂಡಬೇಕಾದ ಎಚ್ಚರಿಕೆ. ಹೀಗೆ ನಾವು ಮಾಡುವ ಉಳಿತಾಯ ನಮ್ಮ ದೇಶಕ್ಕೆ ನಾವು ಕೊಡುವ ಬೆಂಬಲ ಎಂಬ ಭಾವನೆ ಜನರಲ್ಲಿ ಬಂದರೆ ಸಹಜವಾಗಿಯೇ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಬೇಡಿಕೆ ತಗ್ಗುತ್ತದೆ. ಆ ಮೂಲಕ ಡಾಲರು, ಡಾಲರು ಅಂತ ಅಸಹಾಯಕವಾಗಿ ಕೂಗಬೇಕಾದ ದುಃಸ್ಥಿತಿ ಇಲ್ಲದಂತಾಗುತ್ತದೆ.

ಉಳಿದಂತೆ ಬಂಗಾರದ ವಿಷಯ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಕುಸಿಯಿತು ಎಂದಾಕ್ಷಣವೇ ಭಾರತದಲ್ಲಿ ಬಂಗಾರಕ್ಕೆ ಯಾವ ಮಟ್ಟಿನ ಬೇಡಿಕೆ ಶುರುವಾಯಿತು ಎಂದರೆ ಬಂಗಾರ ಮಾರುವ ಅಂಗಡಿಗಳ ಮುಂದೆ ಜನ ನಿಲ್ಲುತ್ತಿದ್ದ ರೀತಿ ನೋಡಿದರೆ ದಿಗಿಲಾಗುತ್ತಿತ್ತು. ಬಂಗಾರದ ಬೆಲೆ ಮೂವತ್ತು ಸಾವಿರದಿಂದ ಇಪ್ಪತ್ತಾರು ಸಾವಿರಕ್ಕೆ ಬಂತು ಎಂದಾಕ್ಷಣ ಈಗಲೇ ಖರೀದಿ ಮಾಡಿಟ್ಟುಕೊಂಡು ಬಿಡೋಣ ಎಂದು ಜನ ಯಾವ ಪರಿಯಲ್ಲಿ ನುಗ್ಗಿದರೆಂದರೆ ಈಗ ಮಾರುಕಟ್ಟೆಯಲ್ಲಿ ಹತ್ತು ಗ್ರಾಂ ಬಂಗಾರದ ಮೌಲ್ಯ ಮೂವತ್ತೆರಡು ಸಾವಿರ ರುಪಾಯಿಗಳಿಗೆ ಬಂದು ತಲುಪಿದೆ. ಹೀಗೆ ಮುಗಿ ಬಿದ್ದು, ಮುಗಿ ಬಿದ್ದು ಬಂಗಾರ ಖರೀದಿ ಮಾಡಿದ ಪರಿಣಾಮವೇನಾಗಿದೆ ಎಂದರೆ ವಿದೇಶಗಳಿಂದ ಸಾವಿರಾರು ಟನ್ ಬಂಗಾರ ಆಮದು ಮಾಡಿಕೊಳ್ಳುವ ಸ್ಥಿತಿ ಸೃಷ್ಟಿಯಾಗಿ ಅದಕ್ಕೂ ದಂಡಿಯಾಗಿ ಡಾಲರುಗಳನ್ನು ಪಾವತಿಸಬೇಕಾದ ಸಂಕಷ್ಟ ಎದುರಾಯಿತು. ಹೀಗೆ ತೈಲ, ಬಂಗಾರಕ್ಕಾಗಿಯೇ ದೇಶದ ಸಂಗ್ರಹದಲ್ಲಿದ್ದ ಬಹುಪಾಲು ವಿದೇಶಿ ಹಣ ಖಾಲಿಯಾದ ಮೇಲೆ ಸಹಜವಾಗಿಯೇ ಡಾಲರುಗಳಿಗೆ ಕೊರತೆ ಎದುರಾಗಿದೆ.

ಇಷ್ಟಾದರೂ ನಮ್ಮ ತೈಲದ ಮೇಲಿನ ಬೇಡಿಕೆ, ಬಂಗಾರದ ಮೇಲಿನ ಮೋಹ ಕಡಿಮೆಯಾಗಿದೆಯೇ? ನಿಶ್ಚಿತವಾಗಿಯೂ ಇಲ್ಲ. ಒಂದು ಕಡೆಯಿಂದ ದುಡಿಯುವ ವರ್ಗದಲ್ಲಿ ನಿರುತ್ಸಾಹ ಮೂಡಿಸುವ ಸರ್ಕಾರ, ಮತ್ತೊಂದು ಕಡೆ ಲಂಗು ಲಗಾಮಿಲ್ಲದಂತೆ ಐಷಾರಾಮಕ್ಕಾಗಿ ವೆಚ್ಚ ಮಾಡುವ ಜನ ಸಮುದಾಯ ಇದ್ದರೆ ರುಪಾಯಿಯ ಮೌಲ್ಯ ಕುಸಿಯದೇ ಇನ್ನೇನಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ನೀತಿಯಿಂದಾಗಿ ಹೀಗೆಲ್ಲ ಆಗುತ್ತಿದೆ ಅಂತ ದೂರುತ್ತಾ ಕೂತರೆ ಏನು ಪ್ರಯೋಜನ. ವಿಪರ್ಯಾಸವೆಂದರೆ ಅರ್ಥ ಸಚಿವ ಪಿ.ಚಿದಂಬರಂ ಇವತ್ತಿನ ಸನ್ನಿವೇಶದಲ್ಲಿ ಎಷ್ಟು ಅಸಹಾಯಕರಾಗಿದ್ದಾರೆಂದರೆ, ರುಪಾಯಿಯ ಮೌಲ್ಯ ಕುಸಿಯುತ್ತಿದೆ ಎಂಬ ಕೂಗು ಎದ್ದಾ ಕ್ಷಣ ಡೋಂಟ್ ವರೀ, ವಿದೇಶಿ ಬಂಡವಾಳ ಹರಿದು ಬರುತ್ತದೆ. ಅದು ಹರಿದು ಬರುತ್ತಿದ್ದಂತೆಯೇ ರುಪಾಯಿಯ ಮೌಲ್ಯ ಹೆಚ್ಚಾಗುತ್ತದೆ ಅಂತ ಕೂಗಿ ಕೂ ಹೇಳುತ್ತಿದ್ದಾರೆ.

ಯಾವುದೇ ದೇಶ ಮೊಟ್ಟ ಮೊದಲು ಮಾಡಬೇಕಾದ ಕೆಲಸವೆಂದರೆ ಸ್ವದೇಶಿ ಬಂಡವಾಳ ಹೂಡಿಕೆದಾರರ ಪ್ರಮಾಣವನ್ನು ಹೆಚ್ಚಿಸುವುದು. ಹೀಗೆ ಬಂಡವಾಳ ಹೂಡಲು ಅಗತ್ಯವಾದ ವಾತಾವರಣವನ್ನು ನಿರ್ಮಿಸುವುದು. ಯಾವಾಗ ಇಂತಹ ಕೆಲಸವಾಗುತ್ತದೋ ಆಗ ಸಹಜವಾಗಿಯೇ ನಮ್ಮ ಬಂಡವಾಳ, ನಮ್ಮ ಉತ್ಪನ್ನ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇರೆ ದೇಶಗಳ ಜತೆ ಪೈಪೋಟಿ ನಡೆಸುವ ಸ್ಥಿತಿ ಎಲ್ಲಿಯ ತನಕ ನಮಗೆ ಬರುವುದಿಲ್ಲವೋ ಅಲ್ಲಿಯ ತನಕ ನಾವು ವಿದೇಶಿ ಕರೆನ್ಸಿಯ ಕೊರತೆ ಎದುರಿಸುತ್ತಲೇ ಇರುತ್ತೇವೆ. ಮೊದಲು ಅಂತಹ ಪರಿಸ್ಥಿತಿಯನ್ನು ನಿವಾರಿಸುವ ಕಡೆ ಕೇಂದ್ರ ಸರ್ಕಾರ ಗಮನ ಕೊಡಬೇಕು. ಮತ್ತು ಮೇಲ್ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗ ಕೂಡ ಈ ದಿಸೆಯಲ್ಲಿ ಮನಃಪೂರ್ವಕವಾಗಿ ತನ್ನ ಸಹಕಾರ ಕೊಡಬೇಕು. ಎಲ್ಲಿಯ ತನಕ ಈ ಕೆಲಸ ಆಗುವುದಿಲ್ಲವೋ ಅಲ್ಲಿಯ ತನಕ ರುಪಾಯಿಯ ಮೌಲ್ಯ ಕುಸಿಯುತ್ತಲೇ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಜನಸಾಮಾನ್ಯರಿಂದ ಹಿಡಿದು, ಸರ್ಕಾರಗಳ ತನಕ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಹಾಗಾಗಲಿ ಅಂತ ಬಯಸೋಣ. ನಾವೂ ನಮ್ಮ ಕೈಲಾದಷ್ಟು ಸಹಕಾರ ಕೊಡೋಣ. ಆಗ ಸಹಜವಾಗಿಯೇ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತದೆ. ಹಾಗಾಗಲಿ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 31 August, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books