Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಹೆಂಗಸರನ್ನು ಅರ್ಥ ಮಾಡಿಕೊಳ್ಳಲು ಯಾವ ತತ್ವಜ್ಞಾನಿಗೆ ಸಾಧ್ಯ?

ಹೊರಟಿದ್ದ ಬಸ್ಸಿನೊಳಕ್ಕೆ ಕಾಂಗರೂ ಮರಿಯಂತೆ ಹಾರಿ ಕೊನೆಯ ಸೀಟಿನಲ್ಲಿ ಕುಳಿತು ಸಿಗರೇಟು ಹಚ್ಚಿಕೊಂಡೆ. ಕಣ್ಣು ಉರಿಉರಿಯೆನ್ನಿಸತೊಡಗಿತು. ಅಗ್ಗದ ಸಿಗರೇಟಿನ ಹೊಗೆಯೇ ಹಾಗೆ. ಕಣ್ಣುರಿ ಮೂಡಿಸುತ್ತದೆ. ಸದಾ ಸೇದುವ wills ಖರೀದಿ ಮಾಡೋಣವೆಂದರೆ, ವಾಪಾಸಾಗಲು ಛಾರ್ಜಿಗೆ ಕಡಿಮೆಯಾದೀತೆಂಬ ಆತಂಕ. ಅರವತ್ತು ಕಿಲೋಮೀಟರು ದೂರದ ಆ ಊರಿಗೆ ಹೋಗುವುದಕ್ಕೆ ಬೇರ‍್ಯಾವ ಘನ ಉದ್ದೇಶವೂ ಇರಲಿಲ್ಲ.

ಸಿಟ್ಟು!

ನನ್ನ ಹದಿನೆಂಟರ ವಯಸ್ಸು, ಹದಿನೆಂಟರ ಮನಸ್ಸು, ಸಿಟ್ಟಿನಿಂದ, ವ್ಯಥೆಯಿಂದ, ಅವಮಾನದಿಂದ, ಸೇಡಿನಿಂದ ಕೊತಕೊತನೆ ಕುದಿಯುತ್ತಿತ್ತು. ನನ್ನ ಇಡೀ ವ್ಯಕ್ತಿತ್ವದಲ್ಲಿರುವ ಅತೀ ದೊಡ್ಡ ನ್ಯೂನ್ಯತೆಯೆಂದರೆ... ಅದೊಂದೇ. ಬಂದ ಸಿಟ್ಟನ್ನು ಯಾವ ಕಾರಣಕ್ಕೂ ಅದುಮಿಟ್ಟುಕೊಳ್ಳಲಾರೆ. ಕಾಡು ಮೃಗದಂತೆ physically ಆಗಿಬಿಡುತ್ತೇನೆ. ಕೈಗೇನು ಸಿಕ್ಕರೆ ಅದನ್ನೆತ್ತಿ ಯಾರ ಮೇಲೆ ಬೇಕಾದರೂ ಎಸೆಯುತ್ತೇನೆ. ಒಂದು ಕ್ಷಣದ ಮಟ್ಟಿಗೆ ನಾನು ಮನುಷ್ಯನೇ ಅಲ್ಲ... ಹಾಗಾಗಿಬಿಟ್ಟಿರುತ್ತೇನೆ.

ಇದನ್ನು ನನ್ನ plus point ಅಂದುಕೊಂಡಿದ್ದೆ. ಸಿಟ್ಟು ಬರೋದೇ ಗಂಡಸುತನವೆಂದುಕೊಂಡಿದ್ದೆ. ಮನೆಯ ಕುರ್ಚಿ, ರೇಡಿಯೋ, ಪಾತ್ರೆ ಇತ್ಯಾದಿಗಳ ಮೇಲೆಲ್ಲ ನನ್ನ ಪೌರುಷದ ಕಲೆಗಳಿವೆ. ಮೊಟ್ಟಮೊದಲ ಬಾರಿಗೆ ಅವಳನ್ನು ನಾವು ನಿಲ್ಲುತ್ತಿದ್ದ ಮರದ ಕೆಳಗೆ, ಅದೇ ಜಾಗದಲ್ಲಿ, ಅದೇ ಭಂಗಿಯಲ್ಲಿ ಇನ್ನೊಬ್ಬನೊಂದಿಗೆ ನೋಡಿದ ಘಳಿಗೆ ಅದು ಹ್ಯಾಗೆ react ಮಾಡಿದ್ದೆ! ಓಫ್.

ಅವರಿಬ್ಬರೂ ನನ್ನನ್ನು ನೆಲಕ್ಕಿಳಿಯುತ್ತಿರುವ ಸಿಡಿಲನ್ನು ನೋಡಿದಂತೆ ನೋಡಿದ್ದರು. ದಟ್ಟ ನೀಲಿ ಬಣ್ಣದ ಬಿಗಿಯಾದ ಜೀನ್ಸ್‌ಪ್ಯಾಂಟ್ ಧರಿಸಿದ್ದೆ. ತಿಳಿ ಲಿಂಬೆ ಬಣ್ಣದ ಟೀಷರ್ಟ್ ಮೈಮೇಲಿತ್ತು. ಸಿಟ್ಟು ದಾವಾನಲದಂತೆ ನನ್ನ ಧಮನಿಗಳಲ್ಲಿ ಓಡುತ್ತಿತ್ತು. ನನ್ನ ಸೈಕಲ್ಲನ್ನು ಎರಡೂ ಕೈಗಳಲ್ಲಿ ಎತ್ತಿದವನೇ ರಸ್ತೆಯ ತಿರುವಿನಲ್ಲಿದ್ದ ಪುಟ್ಟ ಬ್ರಿಡ್ಜ್ ಒಂದಕ್ಕೆ ಬಲವಾಗಿ ಅಪ್ಪಳಿಸಿದೆ. ಎರಡು ತುಂಡಾಗಿ ಹೋಗಿತ್ತು. ಅವರೆಡೆಗೆ ರಾಕ್ಷಸನಂತೆ ನೋಡಿದೆ. ಹುಡುಗಿ ಒಂದೇ ಒಂದು ಮಾತನ್ನೂ ಆಡದೆ ತಲೆ ಬಗ್ಗಿಸಿಕೊಂಡು ತನ್ನ ಮನೆಯತ್ತ ನಡೆದು ಹೋದಳು. ಅವನ ಕಣ್ಣುಗಳಲ್ಲಿ ಸಾವಿನ ಭಯವಿತ್ತು. ಆತ ತನ್ನ ಹಾಸ್ಟೆಲಿನೆಡೆಗೆ ಓಡಿ ಹೋದ. ಅವತ್ತು ನನ್ನ ಕೈಗೆ ಸಿಕ್ಕಿದಿದ್ದರೆ... ನಾನು ಅನೇಕ ವರ್ಷಗಳವರೆಗೂ ಜೈಲಿನಲ್ಲಿರಬೇಕಾಗಿರುತ್ತಿತ್ತು.

ಮರುದಿನ ಮುಂಜಾನೆ ಹಾಸಿಗೆಯಿಂದೇಳುವ ಹೊತ್ತಿಗೆ ಸಿಟ್ಟು ವಿಷಾದದ ರೂಪು ಪಡೆದಿತ್ತು. ನನಗ್ಯಾರ ಮೇಲೂ ಸಿಟ್ಟಿರಲಿಲ್ಲ. ಎಂಥದೋ ದೈನೇಸಿತನ. Self pity. ಬಿಡು. ನಾನೇ ಅವಳ ಕೈ ಹಿಡಿಯಲು ಅರ್ಹತೆಯಿಲ್ಲದ ಅಯೋಗ್ಯ. ಅವಳ ತಪ್ಪೇನೂ ಇಲ್ಲ. ಸಂಪತ್ತು, ಆಸ್ತಿ, ಉತ್ತಮ ಭವಿತವ್ಯ, ಸಾಮಾಜಿಕ ಪ್ರಿಸ್ಟೀಜು-ಎಲ್ಲವೂ ಇರುವ ಹುಡುಗ ಸಿಕ್ಕಿರುವಾಗ ಈ ಅಲೆಮಾರಿ, ಒರಟ, ವಿಧವೆ ತಾಯಿಯ ನಿರ್ಗತಿಕ ಮಗನ ಕೈ ಯಾಕಾದರೂ ಹಿಡಿದಾಳು? ನನ್ನ ಹಣೆಬರಹದಲ್ಲಿ ಅವಳ ಒಲವು ಬರೆದಿಲ್ಲ. ಮುಗಿಯಿತು. ಮುಗೀತು. ಎಲ್ಲ ಮುಗಿದೇ ಹೋಯಿತು!

ಹಾಗಂತ ನಿರ್ಧರಿಸಿದವನೇ, ನನ್ನ ವಿಷಾದದಲ್ಲಿ ಪೂರ್ತಿಯಾಗಿ ಮುಳುಗಿಬಿಟ್ಟೆ. ಹುಚ್ಚನಂತೆ, ನಿರ್ಗತಿಕನಂತೆ, ಕೆಲಸಕ್ಕೆ ಬಾರದ ಕ್ರಿಮಿಯಂತೆ ನನ್ನನ್ನು ನಾನು ನಿಂದಿಸಿಕೊಂಡು ಎಲ್ಲೆಲ್ಲೋ ಅಲೆದೆ. ಶೃಂಗೇರಿಗೆ ಬಾಳೆಹೊನ್ನೂರಿನಿಂದ ನಡೆದುಕೊಂಡೇ ಹೋದೆ. ಅಲ್ಲಿ ಚಿ.ನಾ.ವಿಶ್ವನಾಥ ಶಾಸ್ತ್ರಿಗಳೆಂಬ ವೃದ್ಧರೊಂದಿಗೆ ಒಂದು ದಿನ ಅವರ ಮನೆಯಲ್ಲೇ ಉಳಿದು, ದೇವರು ಎಲ್ಲಿ ಸಿಗುತ್ತಾನೆಂದು ವಿಚಾರಿಸಿದೆ. ಶಾಸ್ತ್ರಿಗಳು ನನ್ನ ಗಾಯ ಗುರುತಿಸಿದವರಂತೆ ಬೆನ್ತಡವಿ ಸಮಾಧಾನ ಹೇಳಿದರು. ಆಗುಂಬೆಯ ತುದಿಯಲ್ಲಿ ನಿಂತು ಸೂರ್ಯಾಸ್ತ ನೋಡುತ್ತಾ ಗಳಗಳನೆ ಅತ್ತೆ. ಶಂಕರ್ ಬಸ್ಸಿನ ಕ್ಲೀನರೊಬ್ಬ ಪಕ್ಕದಲ್ಲಿ ಕೂತು ಒಂದಾದ ಮೇಲೊಂದು ಬೀಡಿ ಕೊಡುತ್ತಾ, ತಾನೂ ಸೇದುತ್ತಾ ''ಈ ಹುಡ್ಗೀರೂಂದ್ರೆ ಹಿಂಗೆ ಬ್ರದರ್. ವಂಚನೆ ಮಾಡ್ತಾರೆ!'' ಎಂದು ತನ್ನದೊಂದು ದುಃಖ ಹೇಳಿಕೊಂಡು ನಿಟ್ಟುಸಿರುಗರೆದ. ಅಲ್ಲಿಂದ ಉಡುಪಿಗೆ ಹೋದೆ. ಅಲ್ಲೊಂದು ಧರ್ಮಶಾಲೆಯಲ್ಲುಳಿದು ಕಂಡಕಂಡವರೊಂದಿಗೆ ದೇವರ ಬಗ್ಗೆ ಚರ್ಚೆ ಮಾಡಿದೆ. ಮುಂದೆ ಜೋಗಕ್ಕೆ ಹೋಗಿ ಕೆಲವು ತಾಸುಗಳ ಕಾಲ ನೆಲದಲ್ಲಿ ಕಾಲು ಹೂತು ಹೋದವನಂತೆ ನಿಂತು ಜಲಪಾತದ ಯಾವ ತುದಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲಿ ಅಂತ ಯೋಚಿಸಿದೆ. ಅದು ಸಾಧ್ಯವಾಗಲಿಲ್ಲ.

ಅಲ್ಲಿಂದ ತಿರುಪತಿಗೆ ಹೋಗಿ ತಲೆ ಬೋಳಿಸಿಕೊಂಡೆ. ಧರ್ಮಾವರಂ ರೈಲ್ವೇ ಜಂಕ್ಷನ್ನಿನಲ್ಲಿ ಹುಚ್ಚನಂತೆ ರೈಲುಗಳ ಡಬ್ಬಿಗಳನ್ನು ಹತ್ತತ್ತಿ ಇಳಿದೆ. ಕತ್ತಲ ಡಬ್ಬಿಯೊಂದರಲ್ಲಿ ಮಲಗಿದ್ದ ಹೆಂಗಸು ವಿಕಾರವಾಗಿ ನಕ್ಕು ಹತ್ತಿರಕ್ಕೆ ಕರೆದಾಗ ಹೇಸಿಗೆಯೆನಿಸಿ ಪ್ಲಾಟ್‌ಫಾರಂಗೆ ಜಿಗಿದೆ. ಧರ್ಮಾವರದಿಂದ ಗುಂತಕಲ್ಲಿಗೆ ಬಂದು ಅಲ್ಲಿಂದ ನಮ್ಮೂರಿನ ರೈಲೇರಿದಾಗ ಯಥಾಪ್ರಕಾರ ನನ್ನಲ್ಲಿ ಉಳಿದಿದ್ದು... ಸಿಟ್ಟಿನ ಇನ್ನೊಂದು ದಾರುಣ ರೂಪವಾದ ವಿಷಾದವೊಂದೇ!

ಈ ದರಿದ್ರ ವಿಷಾದವು ಹಿಮಾಲಯದಿಂದ ಹಿಂತಿರುಗಿದ ನಂತರವೂ ನನ್ನ ಬೆನ್ನು ಬಿಡಲಿಲ್ಲ. ಅದನ್ನು overcome ಮಾಡುವ ಪ್ರಯತ್ನಗಳು ವಿಫಲವಾದಾಗಲೆಲ್ಲ ನನ್ನೊಳಗೆ ಸಿಟ್ಟು ಜಾಗೃತವಾಗುತ್ತಿತ್ತು. ಕಡೆಗೊಂದು ದಿನ ನಿರ್ಧರಿಸಿದೆ; ಅವಳನ್ನೆ ನಿಲೆಹಾಕಿ ಕೇಳಬೇಕು. ನಡುರಸ್ತೆಯಲ್ಲಿ ನಿಲ್ಲಿಸಿ ಝಾಡಿಸಬೇಕು. ಬಾಯಿಗೆ ಬಂದದ್ದು ಬೈಯ್ಯಬೇಕು. 'ಹೀಗೇಕೆ ಮಾಡಿದೆ?'


ಅಂಥದ್ದೊಂದು ನಿರ್ಧಾರ ಕೈಗೊಂಡ ತಕ್ಷಣ ಛಾರ್ಜಿಗಿದೆಯೋ ಇಲ್ಲವೋ ಅಂತ ನೋಡಿಕೊಳ್ಳದೆ ಧಡಧಡನೆ ಬಸ್‌ಸ್ಟ್ಯಾಂಡಿಗೆ ಹೋದೆ. ಬಸ್ಸಿನಲ್ಲಿ ಕೂತವನ ಕಣ್ಣು ಸಣ್ಣಗೆ ಉರಿಯತೊಡಗಿದ್ದವು. ಆದರೆ ಮನಸ್ಸಿನ ಉರಿ, ಉದ್ವೇಗಗಳ ಮುಂದೆ ಕಣ್ಣುರಿಯದ್ಯಾವ ಲೆಕ್ಕ?

ಅರವತ್ತು ಕಿಲೋಮೀಟರುಗಳ ಆ ದೂರ ಸಾವಿರ ಗಾವುದ ದೂರಕ್ಕೆ ಸಮವಾಗಿತ್ತು. ಬಸ್ಸಿಳಿದವನೇ ಅವಳ ಅಕ್ಕನ ಮನೆಯತ್ತ ಓಡಿದೆ. ಅವಳು ಹೆರಿಗೆಗೆ ಬಂದಿದ್ದಾಳೆ ಮತ್ತು ಅಲ್ಲೇ ಇದ್ದಾಳೆ... ಅಂತ ಗೊತ್ತಿತ್ತು. ತಟ್ಟಿದ ಬಾಗಿಲನ್ನು ತೆರೆದವಳೇ ಅವಳು. ಎರಡು ತಿಂಗಳ ಬಾಣಂತಿ. ಕಾಲಿಗೆ ರಬ್ಬರು ಚಪ್ಪಲಿ, ಮೈಗೆಲ್ಲ ಅರಿಶಿನ, ಆರಡಿ ದೂರದಲ್ಲಿ ನಿಂತರೂ ಮೂಗಿಗಡರುವ ಅದೆಂಥದೋ ವಿವರಿಸಲಾಗದ ವಾಸನೆ.

ಅವಳಿಗೆ ನನ್ನ ಸಿಟ್ಟು ಗೊತ್ತು. ಅದರ ಅಪಾಯವೂ ಗೊತ್ತು. ಹಠಾತ್ತನೆ ಬಂದು ಬಾಗಿಲಲ್ಲಿ ನಿಂತ ರಾಕ್ಷಸ ರೋಷದ ಮಾಜಿ ಮಿತ್ರನನ್ನು ಕಂಡು ಥರಥರನೆ ನಡುಗಿ ಧರೆಗಿಳಿದು ಹೋಗುತ್ತಾಳೆಂದುಕೊಂಡಿದ್ದೆ.

''ಅರೆ... ಇದ್ಯಾವಾಗ ಬಂದೆ? ಬಾ.. ಬಾ.. ನಿನ್ನ ನೋಡಿ ಯಾವ ಕಾಲವಾಯ್ತು ಮಾರಾಯಾ? ಅಮ್ಮ ಹ್ಯಾಗಿದಾಳೆ? ಕೂತ್ಕ.
ಕಣ್ಣೇನಾಗಿದೆ ನಿಂಗೆ? ಓ.... ನಿಂಗೆ 'ಕಣ್ಣು ಬಂದಿದೆ' ಇರು ಇರು. ಹಾಗೇ ಬಿಟ್ರೆ ಸಂಜೆ ಹೊತ್ತಿಗೆ ಕಣ್ಣು ಮೆತ್ತಿಕೊಂಡು ಹೋಗ್ತದೆ. ಬಂದೆ ಇರು.....'' ಅಂದವಳೇ ಒಳಕ್ಕೆ ಹೋದಳು.

ಅಯ್ಯೋ ಮಾಯಾವಿ ಹೆಂಗಸೇ.... ಅಂದುಕೊಂಡೆ. ಬರಲಿ ಈಚೆಗೆ, ಬಾಯಿಗೆ ಬಂದದ್ದು ಬೈತೇನೆ. ಮನೆಯಲ್ಲೂ ಯಾರಿಲ್ಲ. ಇಡೀ ವರ್ಷದ ಆಕ್ರೋಶ ತೀರಿಸಿಕೊಳ್ತೇನೆ. ಏನೆಂದುಕೊಂಡುಬಿಟ್ಟಿದ್ದಾಳೆ... ಹಾದರಗಿತ್ತಿ. ಕೂತೇ ಇದ್ದೆ.

ಅವಳು ಎರಡು ನಿಮಿಷಗಳ ನಂತರ ಬಂದಳು. ರಬ್ಬರು ಚಪ್ಪಲಿ ಪಟಪಟಿಸುತ್ತಿತ್ತು. ಕೈಯಲ್ಲಿ ಒಳಲೆ. ''ಇಲ್ಲೇ ಚಾಪೆ ಮೇಲೆ ಅಡ್ಡಾಗು. ಔಷ್ಧೀ ಹಾಕ್ತೀನಿ ಅಂದಳು. ದನಿ ಆeಯಂತಿತ್ತು. ತೆಪ್ಪಗೆ ಮಲಗಿದೆ. ತಲೆಯ ಪಕ್ಕದಲ್ಲಿ ಕುಳಿತು ಹಣೆಯ ಮೇಲೆ ಕೈಯಿಟ್ಟಳು. ''ಜ್ವರ ಇದೆ ನಿಂಗೆ'' ಅಂದಳು. ಅವಳ ಅಂಗೈಯಲ್ಲಿ ಅದೆಷ್ಟೋ ಶತಮಾನಗಳ ತಂಪಿದೆ ಅನ್ನಿಸಿತು. ಹಾದರಗಿತ್ತಿ ಅಂತ ಬೈದುಕೊಂಡಿದ್ದನ್ನು ವಾಪಸು ತೆಗೆದುಕೊಂಡೆ. ತಲೆ ಪಕ್ಕ ಕುಳಿತು, ಹಣೆ ನೇವರಿಸಿ, ಕಣ್ಣಿನ ರೆಪ್ಪೆಯನ್ನು ಬೆರಳ ತುದಿಯಲ್ಲಿ ಹಿಡಿದು ಹಿಂದಕ್ಕೆಳೆದಳು. ಒಳಲೆಯ ತುದಿ ಕಾಣಿಸಿತು. ಮರುಕ್ಷಣವೇ ಉರಿಯುವ ಕಣ್ಣಿನೊಳಕ್ಕೆ ಬಿದ್ದಿದ್ದು ಹಿಮದ ನೀರಿನಂತ ತಂಪು ದ್ರವ. ಅದು ಕಣ್ಣ ತುಂಬ ತುಂಬಿಕೊಂಡು, ಪಕ್ಕಕ್ಕೆ ಜಾರಿ ಕಿವಿಯೊಳಕ್ಕೆ ಧುಮುಕುತ್ತಿತ್ತು. ತನ್ನ ಸೆರಗಿನಲ್ಲೇ ಒರೆಸಿದಳು. ಕಣ್ಣಿಗೆ ಬಿದ್ದ ದ್ರವಕ್ಕೆ ಏನೋ ಹಿತವಾದ ವಾಸನೆ. ಯಾವ ಔಷಧಿಯದು?

''ಬಾಟ್ಲಿಗೆ ತುಂಬಿ ಕೊಡಕ್ಕಾಗಲ್ಲ, ಅದು ಎದೆ ಹಾಲು!'' ಅಂದಳು. ಮೂಗು, ಮೈಯ್ಯಿ, ಮನಸ್ಸುಗಳೆಲ್ಲ ತಾಯ ಹಾಲಿನಿಂದ ಘಮ್ಮೆಂದು ಹೋದವು. ಸುಮ್ಮನೆ ಎದ್ದು ಕುಳಿತೆ. ಬೈಗಳು ಮರೆತು ಹೋಗಿದ್ದವು. ಅವಳನ್ನೇ ನೋಡುತ್ತ ಕುಳಿತೆ. ಕಣ್ಣುರಿ ಹಿಡಿತಕ್ಕೆ ಬಂದಿತ್ತು.
''ಹ್ಯಾಗಿದೀಯ?'' ಅಂದಳು.

''......'' ಉತ್ತರಿಸಲಿಲ್ಲ.

''ನಾನು ಹ್ಯಾಗಿದಿನೀಂತ ಕೇಳಲ್ವಾ?'' ಅಂದಳು.

ಕೇಳಲಿಲ್ಲ. ಕೇಳದೇನೇ ಎಲ್ಲವನ್ನೂ ಹೇಳಿಕೊಂಡಳು. ಒಂದೂವರೆ ವರ್ಷದಲ್ಲಿ ತಾನನುಭವಿಸಿದ ನರಕವನ್ನ, ಹಿಂಸೆಯನ್ನ, ತನ್ನ ಮದುವೆಯ ವೈಫಲ್ಯವನ್ನ, ಗಂಡನ ಡ್ರಗ್ ಅಡಿಕ್ಷನ್ನನ್ನ,, ಶ್ರೀಮಂತಿಕೆಯೊಳಗಿನ ಕ್ರೌರ್ಯವನ್ನ..... ಬಿಟ್ಟೂ ಬಿಡದೆ ಹೇಳಿಕೊಂಡಳು. ಎದೆ ಬಿರಿದು ಜರಡಿಯಾಗುವಂತೆ ಅತ್ತಳು. ಮಧ್ಯೆ ಮಧ್ಯೆ ಎದ್ದು ಅಳತೊಡಗಿದ ಮಗುವಿಗೆ ನನ್ನೆದುರು ಕುಳಿತೇ ರವಿಕೆ ಸಡಿಲಿಸಿಕೊಂಡು ಹಾಲೂಡಿಸಿದಳು.

''ನಂದೇನು ಕೇಳ್ತಿ ಬಿಡು. ಈ ಜಲುಮಕ್ಕೆ ಮುಗಿಯೋ ಕರ್ಮವಲ್ಲ. ನೀನು ಹ್ಯಾಗಿದ್ದೀ ಹೇಳು? ಒಳ್ಳೇ ಹುಡ್ಗೀನ ನೋಡಿ ಮದುವೆ ಮಾಡ್ಕ'' ಅಂದಳು.

ನಾನು ಒಂದೇ ಒಂದು ಮಾತನ್ನೂ ಆಡಲಿಲ್ಲ. ಅವತ್ತು ಹಾಗ್ಯಾಕೆ ಮಾಡಿದೆ? ಅಂತ ಕೇಳಲಿಲ್ಲ. ನಡುರಸ್ತೆಯಲ್ಲಿ ನಿಂತು ಝಾಡಿಸಲಿಲ್ಲ. ಬಾಯಿಗೆ ಬಂದದ್ದು ಬೈಯ್ಯಲಿಲ್ಲ. ಅವಳ ನೋವು, ನಿರಾಸೆ, ಖಿನ್ನತೆಗಳನ್ನು ಕಂಡು ಕರಗಿ ಹೋಗಿದ್ದೆ. ಅಷ್ಟರಲ್ಲಿ ಅವಳ ಗಂಡ ಬಂದಿದ್ದ. ನನ್ನನ್ನು ಕಂಡು ಬಾಗಿಲಲ್ಲೇ ನಿಂತವನಿಗೆ,

''ಅದ್ಯಾಕೆ ಅಲ್ಲೇ ನಿಂತ್ರಿ? ಬಂದಿರೋನು ರವೀ ಅಲ್ವಾ? ಈ ಕಡೆ ಕೂತ್ಕಳ್ಳಿ. ಅವನಿಗೆ ಕಣ್ಣಾಗಿದೆ. ನಾನೇ ಇವಾಗೊಂದಿಷ್ಟು ಹಾಲು ಹಾಕಿದೆ. ಎದೆ ಹಾಲಿಗಿಂತ ಔಷಧಿಯಿಲ್ಲ. ನೀವು ಮಾತಾಡ್ತಾ ಇರ್ರಿ. ಎರಡು ನಿಮಿಷದಾಗೆ ಅಡುಗೆ ಮಾಡಿಬಿಡ್ತೀನಿ'' ಎಂದು ಎದ್ದು ಹೋಗೇಬಿಟ್ಟಳು. ಅವನು ನನ್ನೆದುರಿಗೆ ಅದೇಕೋ ತಪ್ಪಿತಸ್ಥನಂತೆ ಕೂತಿದ್ದ. ಅವಳ ಅಡುಗೆಗಾಗಿ ಕಾಯದೆ ನಾನು ಹೊರಟು ಬಂದು ಬಿಟ್ಟೆ. ಬಸ್ಸಿನಲ್ಲಿ ಹಿಂತಿರುಗುವಾಗ ಕೇಳಿಕೊಂಡೆ, ನನ್ನ ಸಿಟ್ಟೇನಾಯಿತು?

ಗೊತ್ತಿಲ್ಲ, ಅದು ಕರಗಿ ಹೋದದ್ದು ಅವಳ ಎದೆ ಹಾಲಿನಲ್ಲೋ, ಕರೆದು ಕೂಡಿಸಿದ ಅಭಿಮಾನದಲ್ಲೋ, ಅವಳ ದುಃಖದಲ್ಲೋ? ನಾನು ಅವಳಿಗಿಂತ ದುಃಖಿತನಾಗಿದ್ದೆ. ಸಿಟ್ಟು ಪಾತಾಳ ಸೇರಿತ್ತು. ನಾನೀಗ ನನ್ನ ವಿಷಾದಕ್ಕಾಗಿ, ನನ್ನ ದೌರ್ಭಾಗ್ಯಕ್ಕಾಗಿ ಅಳಬೇಕಾಗಿರಲಿಲ್ಲ. ಅವಳ ದೌರ್ಭಾಗ್ಯ ಅಷ್ಟು ದೊಡ್ಡದಿತ್ತು.

ಊರಿಗೆ ಬಂದವನೇ ಮತ್ತೊಂದು ಹುಚ್ಚಾಟ ಆರಂಭಿಸಿದೆ. ನನ್ನ ಪರಿಚಯದ ಹುಡುಗಿಯೊಬ್ಬಳಿಗೆ propose ಮಾಡಿಕೊಂಡು ಪತ್ರ ಬರೆದೆ. ಅದನ್ನವಳಿಗೆ ತಲುಪಿಸುವ ದಾರಿ ಕಾಣದೆ, ಅವಳಿಗೂ-ನನಗೂ ಒಟ್ಟಾಗಿಯೇ ಪರಿಚಯವಿದ್ದ ಮತ್ತೊಬ್ಬ ಹುಡುಗಿಗೆ ಕೊಟ್ಟೆ. ಹಾಗೆ ಕೊಡುತ್ತಲೇ ಹೋದೆ. ಆ ಪರಿಚಯದ ಹುಡುಗಿ ಪತ್ರಗಳನ್ನು ತಲುಪಿಸುತ್ತಲೇ ಹೋದಳು. ಅವಳೊಂದಿಗೆ ನನ್ನ ದೌರ್ಭಾಗ್ಯವನ್ನೆಲ್ಲ ಹೇಳಿಕೊಳ್ಳುತ್ತಾ ಬಂದೆ. ಒಂದು ನಿಷ್ಕಳಂಕ ಗೆಳೆತನ ನಮ್ಮಿಬ್ಬರ ಮಧ್ಯೆ ಬೆಳೆದು ನಿಂತಿತು. ಕಡೆಗೊಂದು ದಿನ ನನ್ನ ಎರಡನೆಯ (ನಾನು propose ಮಾಡಿದ್ದ) ಹುಡುಗಿ ಸ್ಪಷ್ಟವಾಗಿ ಹೇಳಿ ಕಳಿಸಿದಳು.............

''I am sorry. ನಿನ್ನನ್ನು ಕಟ್ಟಿಕೊಂಡು ಹೆಣಗೋದು ನನ್ನಿಂದಾಗದು!''
ಅವತ್ತು ಭೂಮಿ ಬಾಯಿ ಬಿಡಲಿಲ್ಲ. ಎದೆ ಒಡೆದು ಹೋಗಲಿಲ್ಲ. ಸಿಟ್ಟು ಧಮನಿಗಳಲ್ಲಿ ನೆತ್ತರಾಗಿ ಧುಮುಕಲಿಲ್ಲ. ನನ್ನ ಪತ್ರ ಒಯ್ದು ಕೊಡುತ್ತಿದ್ದ ಗೆಳತಿಯನ್ನು ಕೂಡಿಸಿಕೊಂಡು ಕೇಳಿದೆ;

''ಹೆಂಗಸರು ಹೀಗ್ಯಾಕೆ ಮಾಡ್ತಾರೆ?''

ಪಾಪ ಅವಳೇನು ಉತ್ತರಿಸಿಯಾಳು? ಪ್ರೀತಿಸಿದ ಹುಡುಗನನ್ನು ವಿನಾಕಾರಣ ತಿರಸ್ಕರಿಸುವ, ಮತ್ಯಾವನನ್ನೋ ಕಾರಣವೇ ಗೊತ್ತಿಲ್ಲದೆ ಪ್ರೀತಿಸುವ, ಅವನ ದೌರ್ಭಾಗ್ಯವನ್ನೆಲ್ಲ ಸಹಿಸುತ್ತ ಬದುಕುವಾಗ-ಹಠಾತ್ತನೆ ಮನೆಗೆ ಕೆಂಗಣ್ಣು ಮಾಡಿಕೊಂಡು ಬರುವ ಹುಡುಗನಿಗೆ ಎದೆಹಾಲು ಹುಯ್ದು ತಂಪೆರೆಯುವ ಅರ್ಥ ಮಾಡಿಕೊಳ್ಳದೇನೇ 'ನಿನ್ನೊಂದಿಗೆ ಹೆಣಗಲಾರೆ' ಎಂದು ತಿರಸ್ಕರಿಸುವ-ವಿಚಿತ್ರ ಮನಃಸ್ಥಿತಿಯ
ಹೆಂಗಸರನ್ನು ಅರ್ಥ ಮಾಡಿಕೊಳ್ಳಲು ಯಾವ ತತ್ವeನಿಗೆ ಸಾಧ್ಯ?

ಆ ಗೆಳತಿ ತೆಪ್ಪಗೆ ಕೂತಿದ್ದಳು.

ಇವತ್ತು ಮತ್ತೆ ನೆನಪಾಗುತ್ತಿದೆ. ಡಾಕ್ಟರು ಬರೆದುಕೊಟ್ಟ ಜೆಂಟಮೈಸಿನ್ eye dropsಗೆ ಅವಳ ಎದೆಹಾಲಿನ ತಂಪಿಲ್ಲ. ಕಣ್ಣು ಕೆಂಡಗಳಂತೆ ಉರಿಯುತ್ತಿವೆ. ಮೊನ್ನೆ ಸಮಾರಂಭದಲ್ಲಿ ಆತ್ಮೀಯವಾಗಿ ತಬ್ಬಿಕೊಂಡ ನೂರಾರು ಮಿತ್ರರ ಪೈಕಿ ಯಾರಿಗಿತ್ತೋ ಗೊತ್ತಿಲ್ಲ.... madras eye ಎನ್ನುವ ಕಿರಿಕಿರಿ ಎರಡು ದಿನದಿಂದ ಕಾಡುತ್ತಿದೆ. ಅವತ್ತು ನನ್ನ ಪತ್ರಗಳನ್ನು ಒಯ್ದೊಯ್ದು ಕೊಡುತ್ತಿದ್ದ ಆ ಗೆಳತಿ, ಇವತ್ತು ಬಿಸಿನೀರಲ್ಲಿ ಕರ್ಚೀಪು ತೋಯಿಸಿ ತಂದು ಕಣ್ಣೊರೆಸುತ್ತಿದ್ದಾಳೆ. 'ಇದನ್ನೆಲ್ಲಿಂದ ಹಚ್ಚಿಕೊಂಡು ಬಂದ್ರಿ?' ಅಂತ ಪ್ರೀತಿಯಿಂದ ತಲೆಗೆ ಮೊಟ್ಟುತ್ತಾಳೆ. ಮೂವತ್ನಾಲ್ಕು ವರ್ಷದ ಹಿಂದೆ ಹೀಗೇ ಕೆಂಗಣ್ಣಾಗಿತ್ತೆಂಬುದು ಅವಳಿಗೆ ನೆನಪೂ ಇಲ್ಲ. ಅವತ್ತು ಅವಳು ಕೇವಲ ಗೆಳತಿಯಾಗಿದ್ದವಳು, ಇವತ್ತು ಹೆಂಡತಿಯಾಗಿದ್ದಾಳೆ. ಕೆಂಗಣ್ಣು ಬಂದಾಗಲೆಲ್ಲ ಎಲ್ಲಿಂದ ಎದೆಹಾಲು ಹುಯ್ದಾಳು? ನಮ್ಮ ಮೂರನೆಯ ಮಗನಿಗೇ ಇಪ್ಪತ್ತೇಳು ವರ್ಷ!

-ನಿಮ್ಮವನು ಆರ್.ಬಿ

(ದಯವಿಟ್ಟು ಇಡೀ ಬರಹವನ್ನು 'ಕಥೆ' ಎಂದು ಭಾವಿಸಿ ಓದಿಕೊಳ್ಳಬೇಕೆಂದು ವಿನಂತಿ. ಇದು ನಿಜವಿರಲೂಬಹುದು ಎಂಬ ಅನುಮಾನ ಮೂಡಿದರೆ ಮೂವತ್ತೈದು ವರ್ಷಕ್ಕೆ ಮುಂಚೆ ಕೆಂಗಣ್ಣು ಬಂದಾಗ ಅದಕ್ಕೆ ಸಾಕ್ಷಿಯಾಗಿದ್ದ ನನ್ನ ಮನೆಯಾಕೆಯನ್ನು ಕೇಳಬಹುದಾಗಿ ವಿನಂತಿ!)

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 27 August, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books