Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು

ಕೊಟ್ಟ ಮಾತಿಗೆ ತಪ್ಪಿ ನಡೆಯುವವರು ಯಾರು?

ಈ ಪ್ರಶ್ನೆಗೆ ಉತ್ತರ ಹುಡುಕಲು ತುಂಬ ದೂರ ಹೋಗಲೇಬೇಕಿಲ್ಲ. ಕೊಟ್ಟ ಮಾತಿಗೆ ತಪ್ಪುತ್ತಾರೆ ಅಂತ ನಾವು ಹೇಳುತ್ತಿರುತ್ತೇವಲ್ಲ ಅವರನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಇದರಲ್ಲಿ ಎರಡು ವೆರೈಟಿಯ ಜನ ಇರುತ್ತಾರೆ. ಒಂದೋ ತಮ್ಮ ಬಗ್ಗೆ ಅಪಾರ ಆತ್ಮವಿಶ್ವಾಸ ಇರುವವರು. ಇನ್ನೊಬ್ಬರು ತಕ್ಷಣಕ್ಕೆ ಬಚಾವಾಗಬೇಕು ಎಂಬ ಕಾರಣಕ್ಕಾಗಿ ಅಡ್ಡೇಟಿನ ಮೇಲೆ ಗುಡ್ಡೇಟು ಹೊಡೆಯುವವರು. ಈ ಪೈಕಿ ಮೊದಲನೆಯ ಕೆಟಗರಿಗೆ ಸೇರಿದವರು ಕೊಟ್ಟ ಮಾತಿಗೆ ತಪ್ಪಿ ನಡೆದಾಗ ತಮ್ಮ ಬಗ್ಗೆ ತಾವೇ ಅಸಹ್ಯಪಟ್ಟುಕೊಳ್ಳುತ್ತಾರೆ. ಅಯ್ಯೋ, ಹೇಳಿದ ಮಾತನ್ನು ನಡೆಸಿಕೊಡಲು ಸಾಧ್ಯವಾಗಲಿಲ್ಲವಲ್ಲ ಎಂದು ಕೊರಗುತ್ತಾರೆ. ಎರಡನೇ ಕೆಟಗರಿಯವರು ಹಾಗಲ್ಲ, ಅವರು ಉದ್ದೇಶಪೂರ್ವಕವಾಗಿಯೇ ಮಾತು ಕೊಟ್ಟಿರುತ್ತಾರೆ. ಅಸಲಿಗೆ ಈ ಮಾತನ್ನು ಈಡೇರಿಸಬೇಕು ಅಂತ ಅವರು ಕನಸಿನಲ್ಲೂ ಅಂದುಕೊಂಡಿರುವುದಿಲ್ಲ. ತಕ್ಷಣದ ಲಾಭಕ್ಕಾಗಿ, ಇನ್ನೊಬ್ಬರನ್ನು ವಂಚಿಸಲು ಒಂದು ಮಾತು ಕೊಟ್ಟು ತಪ್ಪಿದರೇನು ಮಹಾ ಎಂಬ ಧೋರಣೆಯಿಂದಲೇ ನಡೆದುಕೊಳ್ಳುತ್ತಾರೆ.

ಮೊದಲನೇ ಕೆಟಗರಿಯಲ್ಲಿ ನಿಮಗೆ ದಂಡುಗಟ್ಟಲೆ ಜನ ಸಿಗುತ್ತಾರೆ. ಇವರು ಉದ್ದೇಶಪೂರ್ವಕವಾಗಿಯೋ ಅಥವಾ ಇನ್ನೊಬ್ಬರಿಗೆ ಮಾತು ಕೊಟ್ಟು ಕೈ ಕೊಡಬೇಕು ಅಂತಲೋ ಅಂದುಕೊಂಡಿರುವುದಿಲ್ಲ. ತಮ್ಮ ಬಗ್ಗೆ ಒಂದು ಆತ್ಮವಿಶ್ವಾಸ ಇರುವುದರಿಂದ ಜತೆಗಿರುವವರಿಗೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತು ಕೊಟ್ಟು ಬಿಡುತ್ತಾರೆ. ಅಯ್ಯೋ, ಅದೇನು ಮಹಾ ಬಿಡು ಗುರು, ಜುಜುಬಿ ಹತ್ತು ಸಾವಿರ ರುಪಾಯಿ ತಾನೇ. ನಾಳೆ ಬಾ, ನನ್ನ ಫ್ರೆಂಡೊಬ್ಬ ನನಗೆ ಬ್ಯಾಲೆನ್ಸ್ ಕೊಡಬೇಕು. ತಂದುಕೊಡಲು ಹೇಳುತ್ತೇನೆ. ಡೋಂಟ್ ವರಿ ಅಂತಲೋ, ಇನ್ಯಾವುದೋ ರೀತಿಯಲ್ಲಿ ಒಂದು ಮಾತು ಅಂತ ಕೊಟ್ಟು ಬಿಡುತ್ತಾರೆ. ಈ ರೀತಿ ಮಾತು ಕೊಡುವುದರಲ್ಲಿ ಮದಿರೆಯ ಆರಾಧಕರು ಒಂದು ಕೈ ಮೇಲೇ ಅಂತ ಹೇಳಬಹುದು. ಎರಡು ಪೆಗ್ಗು ವ್ಹಿಸ್ಕಿಯೋ, ರಮ್ಮೋ, ಬ್ರಾಂದಿಯೋ ಕರುಳಿಗೆ ಇಳಿದರೆ ಸಾಕು, ಬಹುತೇಕ ಜನ ಧಾರಾಳಿಗಳಾಗಿ ಹೋಗುತ್ತಾರೆ. ತಮ್ಮನ್ನು ತಾವು ರಿಸರ್ವ್ ಬ್ಯಾಂಕ್ ಅಂತಲೋ, ದಾನಶೂರ ಕರ್ಣ ಅಂತಲೋ ಭಾವಿಸಿಕೊಳ್ಳುವ ಇಂತಹವರು ಮಾತು ಕೊಡುವುದರಲ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತಾರೆ.

ಕುಡಿದ ಅಮಲಿನಲ್ಲಿದ್ದಾಗ ಯಾರೋ ಬಂದು ಅಣ್ಣಾ, ತುಂಬ ಕಷ್ಟ ಆಗೋಗಿದೆ. ಮಕ್ಕಳ ಫೀಸು ಕಟ್ಟಬೇಕು. ಒಂದಿಪ್ಪತ್ತೈದು ಸಾವಿರ ರುಪಾಯಿ ಬೇಕಣ್ಣ, ಹೇಗೋ ಮಾಡಿ ಹತ್ತು ಸಾವಿರ ಅಡ್ಜಸ್ಟು ಮಾಡಿದ್ದೇನೆ. ಇನ್ನೂ ಹದಿನೈದು ಸಾವಿರ ರುಪಾಯಿ ಬೇಕು. ಇನ್ನು ಮಕ್ಕಳ ಪುಸ್ತಕ, ಸ್ಕೂಲ್ ಡ್ರೆಸ್ಸು, ವ್ಯಾನ್ ಚಾರ್ಜು, ತಿಂಗಳ ಖರ್ಚು ಇವೆಲ್ಲ ಹೇಳುತ್ತಾ ಹೋದರೆ ದೊಡ್ಡ ರಾಮಾಯಣ ಕಣಣ್ಣೋ, ಸದ್ಯಕ್ಕೆ ಒಂದು ಹದಿನೈದು ಸಾವಿರ ಬೇಕಲ್ಲಣ್ಣೋ ಅಂದರೆ ಸಾಕು. ಮದಿರೆಯ ಅಮಲಿನಲ್ಲಿದ್ದವನು ಥೇಟು ಬಭ್ರುವಾಹನ. ಹಾಗಂತಲೇ, ಏನಂದೇ ಬರೀ ಹದಿನೈದು ಸಾವಿರ ರುಪಾಯಿಯೇ? ಬೆಳಗ್ಗೆಯೇ ಬಾ, ತಗೊಂಡು ಹೋಗಿಬಿಡು. ನಿನ್ನ ಕಷ್ಟ ಬೇರೆ, ನನ್ನ ಕಷ್ಟ ಬೇರೇನಾ ಅಂದು ಬಿಡುತ್ತಾರೆ. ಮರುದಿನ ಬೆಳಗ್ಗೆ ಹೋಗಿ ಇಂತಹವರ ಕಣ್ಣ ಮುಂದೆ ನಿಂತುಕೊಂಡರೆ ಎಲ್ಲಿದೆ ಹದಿನೈದು ಸಾವಿರ ರುಪಾಯಿ. ನಾನು ಹಂಗೆ ಹೇಳಿದ್ನಾ? ಇದ್ರೂ ಇರಬಹುದು ಬಿಡು. ಆದರೆ ಈಗ ನನ್ನತ್ರ ಎಲ್ಲಿದೆ ದುಡ್ಡು? ಅಯ್ಯೋ ರಾಮ, ಈಗ ಮತ್ತೆ ರಾತ್ರಿಗೆ ಪಾನಕ ಹಾಕಬೇಕು ಅಂದ್ರೂ ಟೈಟಿದೆ ಗುರೂ ಅಂತ ಮುಖ ತಪ್ಪಿಸಿಕೊಳ್ಳುವ ಮಾತಾಡುತ್ತಾರೆ.

ಅಲ್ಲಿಗೆ ಸುಖಾಸುಮ್ಮನೆ ಕೊಟ್ಟ ಮಾತಿಗೆ ತಪ್ಪಿ ನಡೆದ ಗೆಳೆಯ ಅಂತ ಎದುರಿಗಿದ್ದವನು ಊರೆಲ್ಲ ಹೇಳಿಕೊಂಡು ತಿರುಗಬೇಕು. ಆ ಥರದ ಡೆವಲಪ್‌ಮೆಂಟುಗಳು ತಮಗೆ ತಾವೇ ಘಟಿಸತೊಡಗುತ್ತವೆ. ನನ್ನ ಪ್ರಕಾರ ನೀವು ಕುಡಿಯುವವರೇ ಆಗಿದ್ದರೆ, ಒಂದಳತೆ ಜಾಸ್ತಿ ಆದರೂ ಸೈ ಅಂತ ಕುಡಿಯುವವರೇ ಆಗಿದ್ದರೆ ಎದುರಿಗಿರುವವರಿಗೆ ಯಾವುದೇ ಭರವಸೆ ಕೊಡುವುದಿಲ್ಲ. ಕೊಟ್ಟರೂ ಅಸಾಧ್ಯವಾದುದನ್ನು ಮಾಡಿಬಿಡುತ್ತೇನೆ ಅಂತ ಮಾತು ಕೊಡುವುದಿಲ್ಲ ಎಂದು ತೀರ್ಮಾನಿಸಿಯೇ ಕುಡಿಯಲು ಕೂತುಕೊಳ್ಳಿ. ಕುಡಿದಾಗ ಬರುವ ಧೈರ್ಯ, ಆತ್ಮವಿಶ್ವಾಸ ಎಷ್ಟು ಅಗಾಧವೆಂಬುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ನನ್ನ ಗೆಳೆಯನ ತಂದೆಯೊಬ್ಬ ಸಖತ್ತು ಎಣ್ಣೆ ಮಾಸ್ಟರು. ಬೆಳಗ್ಗೆಯಿಂದ ಸಂಜೆಯ ತನಕ ಇನ್ನೊಬ್ಬರನ್ನು ತಲೆ ಎತ್ತಿ ನೋಡದ ಪಾಪದ ಪ್ರಾಣಿ. ಆದರೆ ರಾತ್ರಿ ಎಣ್ಣೆ ಹಾಕಿದರೋ ಡಿಟ್ಟೋ ಗಬ್ಬರ್ ಸಿಂಗ್. ಹೀಗಾಗಿ ಅವರು ಕುಡಿದ ಮೇಲೆ ಅವರ ಬಾಯಿಗೆ ತಗಲಿಕೊಳ್ಳಲು ಜನ ಇಷ್ಟಪಡುತ್ತಿರಲಿಲ್ಲ.

ಒಂದು ಸಲ ಅವರ ಊರಿನಲ್ಲಿ ದೇವಿಯ ಜಾತ್ರೆ ನಡೆಯಿತು. ಆ ಜಾತ್ರೆಯ ಹೆಸರಿನಲ್ಲಿ ಆಡಳಿತ ಮಂಡಳಿಯವರು ದುಡ್ಡು ತಿಂದರು ಎಂಬ ಆರೋಪಗಳು ಕೇಳಿ ಬಂದವು. ಆ ಆರೋಪಗಳೇನೂ ಸುಳ್ಳಾಗಿರಲಿಲ್ಲ. ಆದರೆ ಅದನ್ನು ಆಡಳಿತ ಮಂಡಳಿಯಲ್ಲಿದ್ದವರ ಎದುರು ಬಹಿರಂಗವಾಗಿ ಹೇಳಲು ಯಾರೂ ತಯಾರಿರಲಿಲ್ಲ. ಆದರೆ ಒಂದು ದಿನ ನನ್ನ ಗೆಳೆಯನ ತಂದೆ ನಾಲ್ಕು ಪೆಗ್ಗು ಏರಿಸಿಕೊಂಡು ಬಂದರು ನೋಡಿ. ಸೀದಾ ದೇವಸ್ಥಾನದ ಮುಂದೆ ನಿಂತು; ತಿಗಣೆಯಿಲ್ಲದ ಮನೆಯಿಲ್ಲ, ಕಳ್ಳರಿಲ್ಲದ ದೇವಸ್ಥಾನವಿಲ್ಲ, ಇಲ್ಲಿರುವಂತಹ ಕಳ್ಳರು ಇನ್ನೆಲ್ಲೂ ಇಲ್ಲ ಎಂದು ಕೂಗಿ ಬಿಟ್ಟರು. ಆಡಳಿತ ಮಂಡಳಿಯ ಜನ ಸುಸ್ತು. ಹೋಗಿ ಹೊಡೆದರೆ ಕುಡುಕನಿಗೆ ಹೊಡೆದರು ಎಂಬಂತಾಗುತ್ತದೆ. ಹೀಗಾಗಿ ಯಾರೂ ಕಮಕ್ಕಿಮಕ್ಕೆನ್ನಲಿಲ್ಲ. ಮರುದಿನ ಬೆಳಗ್ಗೆ ಹೋಗಿ ಕೇಳಬೇಕೆಂದರೆ ಆಸಾಮಿ ಮುಖ ಎತ್ತಿ ಮಾತನಾಡಿದರೆ ತಾನೇ. ಕರುಳಿಗಿಳಿಯುತ್ತಿದ್ದ ಮದ್ಯ ಅವರಿಗೆ ಎಷ್ಟು ಶಕ್ತಿ ಕೊಡುತ್ತಿತ್ತೆಂದರೆ ಇದೇ ಭರದಲ್ಲಿ ಅವರು ಅಪಾರ ಭರವಸೆಗಳನ್ನು ಜನರಿಗೆ ಕೊಡುತ್ತಿದ್ದರು.

ನಿನ್ನ ಕಷ್ಟ ಪರಿಹಾರ ಮಾಡಲು ನಾನೇನು ಮಾಡಬೇಕು ಹೇಳವ್ವಾ ತಂಗಿ ಅಂತ ಅಕ್ಕಪಕ್ಕದ ಮನೆ ಹೆಂಗಸರ ಬಳಿ ಒಬ್ಬ ಅಣ್ಣನ ಥರ ನಿಂತು ಕೇಳುತ್ತಿದ್ದರು. ಕೆಲ ದಿನಗಳ ಕಾಲ ಒಂದಷ್ಟು ಹೆಂಗಸರು ತಮ್ಮ ತಮ್ಮ ಸಂಕಷ್ಟಗಳನ್ನು ಈವಪ್ಪನ ಎದುರು ಹೇಳಿಕೊಂಡರು. ಅಯ್ಯೋ, ಅದೇನು ಮಹಾಬಿಡು ತಂಗಿ ಐನೂರು ರುಪಾಯಿಯಲ್ಲಿ ಮುಗಿಯುವ ಕೆಲಸ. ನಾನು ನಾಳೆಯೇ ಕೊಟ್ಟು ಬಿಡುತ್ತೇನೆ. ಕಷ್ಟ ಬಗೆ ಹರಿಸಿಕೋ. ಒಟ್ಟಿನಲ್ಲಿ ನನ್ನ ತಂಗಿ ಚೆಂದಾಗಿರಬೇಕು ಅಂತಲೋ, ಸಾಲಗಾರರ ಕಾಟದಿಂದ ತತ್ತರಿಸಿದವರು ಕಷ್ಟ ಹೇಳಿಕೊಂಡಾಗ ಅದನ್ನು ಪರಿಹರಿಸುತ್ತೇನೆ ಅಂತಲೋ ಏನೋ ಒಂದು ಭರವಸೆಯನ್ನು ಇವರೂ ಕೊಟ್ಟರು. ಆದರೆ ಇವರ ಭರವಸೆ ಯಾವತ್ತೂ ಈಡೇರಲೇ ಇಲ್ಲ. ಹೀಗಾಗಿ ಅಕ್ಕಪಕ್ಕದ ಹೆಂಗಸರು, ಈ ಅಣ್ಣ ಮಾತು ಕೊಡುತ್ತಾರೆಯೇ ಹೊರತು ಈಡೇರಿಸುವುದಿಲ್ಲ ಅಂತ ಗೊಣಗಿಕೊಂಡು ಸುಮ್ಮನಾದರು. ಆದರೆ ನೋಡ ನೋಡುತ್ತಿದ್ದಂತೆಯೇ ಅವರ ವ್ಯಕ್ತಿತ್ವ ನಗೆಪಾಟಲಿನ ವಸ್ತುವಾಯಿತು.

ಬಹುತೇಕ ಮದ್ಯಪ್ರಿಯರು ಹೀಗೆ ನಗೆಪಾಟಲಿಗೆ ಗುರಿಯಾಗುವಂತಹ ಕೆಲಸ ಮಾಡುತ್ತಲೇ ಇರುತ್ತಾರೆ. ಇವರ ಮುಖ್ಯ ದೋಷವೆಂದರೆ ಕರುಳಿಗೆ ಮದ್ಯ ಇಳಿದರೆ ದಿಢೀರ್ ಕರ್ಣನಾಗುವುದು. ಇವರನ್ನು ಹೊರತುಪಡಿಸಿದರೆ ಮೆದು ಹೃದಯದ ಜನ ಕೂಡ ಇನ್ನೊಬ್ಬರ ಕಷ್ಟ ನೋಡಲಾಗದೇ ಮಾತು ಕೊಟ್ಟುಬಿಡುತ್ತಾರೆ. ಆಮೇಲೆ ಕೊಟ್ಟ ಮಾತು ಈಡೇರಿಸಲು ಸಾಧ್ಯವಾಗದೇ ತಮ್ಮಲ್ಲೇ ಕೊರಗುತ್ತಿರುತ್ತಾರೆ. ಇಂತಹವರ ಪೈಕಿ ನೀವು ಒಬ್ಬರಾಗಿದ್ದರೆ ಇನ್ನು ಮುಂದೆ ಮಾತು ಕೊಡುವ ಮುನ್ನ ನೂರು ಬಾರಿ ಯೋಚಿಸಿ. ಮಾತು ಕೊಡುವುದು ಎಂದರೆ ಇನ್ನೊಬ್ಬರಲ್ಲಿ ಅಗಾಧ ಆತ್ಮವಿಶ್ವಾಸ ಹುಟ್ಟಿಸುವುದು ಎಂದರ್ಥ. ನೀವು ಹುಟ್ಟಿಸುವ ಆತ್ಮವಿಶ್ವಾಸವನ್ನು ನೆಚ್ಚಿಕೊಂಡ ಮನುಷ್ಯ, ತನ್ನ ಕಷ್ಟಗಳಿಗೆಲ್ಲ ಇವರಿಂದ ಪರಿಹಾರ ದೊರೆಯುತ್ತದೆ ಎಂದು ಭಾವಿಸತೊಡಗುತ್ತಾನೆ. ಅಂತಹವರಿಗೆ ನೀವು ಮಾತು ತಪ್ಪಿದಾಗ ಬರೀ ನೋವಷ್ಟೇ ಆಗುವುದಿಲ್ಲ. ಹತಾಶೆ, ಆಕ್ರೋಶಗಳೂ ಸೇರಿಕೊಂಡು ಬಿಡುತ್ತವೆ. ತುಂಬ ಸಲ ಇದೇ ಕಾರಣಕ್ಕಾಗಿ ಗೆಳೆತನಗಳು ಬರಖಾಸ್ತಾಗಿ ಬಿಡುತ್ತವೆ. ಯಾವತ್ತೂ ಇಂತಹದಕ್ಕೆ ಅವಕಾಶ ಮಾಡಿಕೊಡಬೇಡಿ.

ಹತ್ತಾರು ಜನರ ಸಮ್ಮುಖದಲ್ಲಿ ಕುಳಿತು ಮನಸೋ ಇಚ್ಛೆ ಗುಂಡು ಹಾಕಿ ಮಾತು ಕೊಡುವುದು ಆ ಕ್ಷಣಕ್ಕೆ ಪಸಂದಾಗಿರುತ್ತದೆ. ಆದರೆ ಅದನ್ನು ಈಡೇರಿಸುವ ಸನ್ನಿವೇಶ ಎದುರಾದಾಗ ಬಹಳಷ್ಟು ಸಲ ತಲೆ ತಪ್ಪಿಸಿಕೊಂಡು ಓಡಾಡುವ ಸ್ಥಿತಿ ಬರುತ್ತದೆ. ಒಂದು ಸಲ ನೀವು ಈ ರೀತಿ ಕೊಟ್ಟ ಮಾತಿಗೆ ತಪ್ಪಿ, ತಲೆ ತಪ್ಪಿಸಿಕೊಂಡು ತಿರುಗತೊಡಗಿದಿರೋ ಕಾಲ ಕ್ರಮೇಣ ಅದೇ ಒಂದು ಗಿಲ್ಟ್ ಆಗಿ ನಿಮ್ಮನ್ನು ಕಾಡತೊಡಗುತ್ತದೆ. ನಿಮ್ಮ ವ್ಯಕ್ತಿತ್ವದ ಬಗ್ಗೆ ಇನ್ನೊಬ್ಬರು ಹಗುರಾಗಿ ಮಾತನಾಡಲು ಕಾರಣವಾಗುತ್ತದೆ. ಹೀಗಾಗಿ ನೀವು ಗುಂಡು ಹಾಕಿದ ಭರದಲ್ಲಿ ಮಾತು ಕೊಡುತ್ತೀರೋ, ಸಜ್ಜನಿಕೆಗಾಗಿ ಮಾತು ಕೊಡುತ್ತೀರೋ, ಒಟ್ಟಿನಲ್ಲಿ ಏನೇ ಮಾತು ಕೊಡಬೇಕೆಂದರೂ ನಿಮ್ಮ ಲಿಮಿಟ್ಟು ಏನು ಅಂತ ಗಮನದಲ್ಲಿಟ್ಟುಕೊಳ್ಳಿ. ನೀವೆಷ್ಟೇ ಒಳ್ಳೆಯವರಾದರೂ, ಇನ್ನೊಬ್ಬರಿಗೆ ಹೆಲ್ಪು ಮಾಡಬೇಕು ಎಂಬ ಮನಸ್ಸು ನಿಮಗಿದ್ದರೂ, ನಿಮ್ಮ ಇತಿಮಿತಿ ನಿಮಗೆ ಅರ್ಥವಾಗದಿದ್ದರೆ ಬದುಕಿನುದ್ದಕ್ಕೂ ಹಿಂಸೆ ಅನುಭವಿಸುತ್ತೀರಿ. ಗೆಳೆಯರನ್ನು ಕಳೆದುಕೊಳ್ಳುತ್ತೀರಿ. ಆದ್ದರಿಂದ ಮಾತು ಕೊಡುವ ಮುನ್ನ ತುಂಬ ಎಚ್ಚರದಿಂದ ಮಾತು ಕೊಡಿ.

ಇನ್ನು ಎರಡನೇ ಕೆಟಗರಿಯವರ ಬಗ್ಗೆ ಹೇಳುವುದೇನೂ ಬೇಡ. ಅಂತಹವರು ತಮ್ಮ ವ್ಯಕ್ತಿತ್ವಕ್ಕೆ ತಾವೇ ಬೆಲೆ ಕೊಡದವರು. ಏನೋ ಟೈಮಿಗೆ ಒಂದು ಮಾತು ಕೊಟ್ಟು, ಒಂದಷ್ಟು ಲಾಭ ಮಾಡಿಕೊಂಡು ಜಾಗ ಖಾಲಿ ಮಾಡಿಕೊಂಡು ಹೋದರೆ ಅವರ ಕೆಲಸ ಮುಗಿಯಿತು. ಹೀಗಾಗಿ ಎರಡನೇ ಕೆಟಗರಿಯವರು ನಿಮ್ಮ ಅಕ್ಕಪಕ್ಕ ಇದ್ದರೆ ನೀವೇ ಅವರ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಇಲ್ಲ, ಮೊದಲನೇ ಕೆಟಗರಿಯವರಾದರೆ ನಿಮ್ಮ ಬಗ್ಗೆ ನೀವೇ ಎಚ್ಚರ ವಹಿಸಿ. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಅಂತ ಹಿರಿಯರು ಹೇಳಿದ್ದನ್ನು ನೆನಪಿಸಿಕೊಳ್ಳಿ. ಒಂದು ಸಲ ನೀವು ಈ ವಿಷಯದಲ್ಲಿ ಎಚ್ಚರಿಕೆ ವಹಿಸಿದರೆ ನಿಮ್ಮ ವ್ಯಕ್ತಿತ್ವಕ್ಕೆ ಗೌರವ ದಕ್ಕುತ್ತದೆ. ನೀವಾಡುವ ಮಾತಿಗೆ ತೂಕ ಬರುತ್ತದೆ. ಹಾಗಾಗಲಿ, ಅಲ್ಲವೇ?

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 26 August, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books