Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಸರ್ಕಾರ ಎಂಬ ವಿಮಾನ ಟೇಕ್ ಅಪ್ ಆಗದಿದ್ದರೆ ಹೇಗೆ?

ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ನೂರು ದಿನಗಳನ್ನು ಪೂರೈಸಿದೆ. ನೂರು ದಿನಗಳ ಹಿಂದೆ ಕರ್ನಾಟಕ ಎಂಬ ರನ್‌ವೇ ಮೇಲೆ ಬಂದು ನಿಂತ ಸಿದ್ದು ಪೈಲಟ್‌ಷಿಪ್‌ನ INC-2013 ವಿಮಾನ ಇನ್ನೂ ರನ್‌ವೇ ಮೇಲೆ ಮೆಲ್ಲಗೆ ಓಡುತ್ತಿದೆಯೇ ಹೊರತು ಟೇಕ್ ಅಪ್ ಆಗಿಲ್ಲ ಎಂಬ ಅಭಿಪ್ರಾಯ ಹೊರಹೊಮ್ಮುತ್ತಿದೆಯಾದರೂ ನನ್ನ ಪ್ರಕಾರ ಈ ವಿಮಾನ ಹಿಂದಿದ್ದ BJP-2008 ವಿಮಾನದಂತೆ ಇಲ್ಲ ಎಂಬುದೇ ಸಮಾಧಾನದ ಅಂಶ. ಯಾಕೆಂದರೆ ಯಡಿಯೂರಪ್ಪ ಪೈಲಟ್ ಆಗಿದ್ದ ಆ ವಿಮಾನ ರನ್‌ವೇ ಮೇಲೆ ಯಾವ ಮಟ್ಟದಲ್ಲಿ ಓಟ ಶುರು ಮಾಡಿತೆಂದರೆ ತನ್ನ ಗುರಿ ತಲುಪಲು ಅದಕ್ಕೆ ಐದು ವರ್ಷಗಳ ಅವಧಿಯೇ ಬೇಕಿಲ್ಲ. ಎರಡ್ಮೂರು ವರ್ಷಗಳಲ್ಲಿ ಗುರಿ ತಲುಪಿ ಕರ್ನಾಟಕವನ್ನು ಉದ್ಧಾರ ಮಾಡಿ ಬಿಡುತ್ತದೆ ಎಂಬ ಭ್ರಮೆ ಶುರುವಾಗಿತ್ತು. ಆದರೆ ಈ ಭ್ರಮೆ ಕರಗಲು ತುಂಬ ದಿನಗಳೇನೂ ಬೇಕಾಗಲಿಲ್ಲ. ಯಾಕೆಂದರೆ ರನ್‌ವೇ ಮೇಲೆ ಓಡುತ್ತಿದ್ದ ಬಿಜೆಪಿ ವಿಮಾನ ಟೇಕ್ ಅಪ್ ಆಗಿದ್ದೇನೋ ನಿಜ. ಆದರೆ ಐದು ವರ್ಷಗಳ ಅವಧಿಯಲ್ಲಿ ಅದು ಯಾವತ್ತೂ ನಿರಾತಂಕವಾಗಿ ಪ್ರಯಾಣಿಸಲೇ ಇಲ್ಲ. ಪದೇಪದೇ ಟೇಕ್ ಅಪ್ ಆಗುವುದು, ಪದೇಪದೇ ಅವಸರದಿಂದ ಕೆಳಗಿಳಿಯುವುದು ಅದರ ಸ್ವಭಾವವೇ ಆಗಿಹೋಗಿತ್ತು.

ಹೀಗಾಗಿ ಫೈನಲಿ, ಬಿಜೆಪಿಯ ವಿಮಾನ ಬಾನಂಗಣದಲ್ಲಿ, ಅರ್ಥಾತ್ ಜನರ ಮನಸ್ಸಿನಲ್ಲಿ ಒಂದು ಶಾಂತಿ, ನೆಮ್ಮದಿ, ಸ್ಥಿರತೆಯನ್ನು ಮೂಡಿಸಲು ಸಫಲವಾಗಲೇ ಇಲ್ಲ. ಇವತ್ತು ಸಿದ್ಧರಾಮಯ್ಯನವರ ಪೈಲಟ್‌ಷಿಪ್‌ನಲ್ಲಿ ಓಟ ಶುರು ಮಾಡಿರುವ ಕಾಂಗ್ರೆಸ್ ವಿಮಾನ ಟೇಕ್ ಅಪ್ ಆಗದೇ ಇರಬಹುದು, ರನ್‌ವೇ ಮೇಲೆ ಅದರ ಓಟ ನಿಧಾನವಾಗಿ ಸಾಗುತ್ತಿರಬಹುದು. ಆದರೆ ಒಂದಂತೂ ನಿಜ. ಅದು ನಿಧಾನ ಓಡುತ್ತಿದ್ದರೂ ಒಂದು ದಿನ ಟೇಕ್ ಅಪ್ ಆಗುತ್ತದೆ ಎಂಬ ವಿಶ್ವಾಸವಾದರೂ ಇದೆ. ಹಾಗಂತ ಒಂದು ಸರ್ಕಾರದ ಸಾಧನೆಯನ್ನು ಕೇವಲ ನೂರು ದಿನಗಳಲ್ಲಿ ಅಳೆಯಲು ಸಾಧ್ಯವಿಲ್ಲ. ಯಾಕೆಂದರೆ ಐದು ವರ್ಷಗಳ ಕಾಲ ಒಂದು ಲಯಕ್ಕೆ ಒಗ್ಗಿರುವ ಅಧಿಕಾರಷಾಹಿ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕನಿಷ್ಠ ಐದಾರು ತಿಂಗಳ ಅಗತ್ಯ ಇರುತ್ತದೆ. ಆ ದೃಷ್ಟಿಯಿಂದ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಬರುತ್ತಿದ್ದಂತೆಯೇ ತಮ್ಮ ಮಹತ್ವಾಕಾಂಕ್ಷೆಯ ಹಲವು ಯೋಜನೆಗಳನ್ನು ಪ್ರಕಟಿಸಿದ್ದು ಮತ್ತು ಅವನ್ನು ಅನುಷ್ಟಾನಗೊಳಿಸಿದ್ದು ಗಮನಾರ್ಹ ಎಂದೇ ಹೇಳಬೇಕು.

ಅನ್ನಭಾಗ್ಯ ಯೋಜನೆ ಇರಬಹುದು, ಅಹಿಂದ ವರ್ಗಗಳ ಸಾಲ ಮನ್ನಾ ಯೋಜನೆ ಇರಬಹುದು, ವಿವಿಧ ಯೋಜನೆಗಳಡಿ ಕಡುಬಡವರು ಕಟ್ಟುವ ಮನೆಗಳಿಗೆ ನೀಡುವ ಸಬ್ಸಿಡಿ ಹಣದ ಪ್ರಮಾಣವನ್ನು ಎಪ್ಪತ್ತು ಸಾವಿರದಿಂದ ಒಂದು ಲಕ್ಷ ಇಪ್ಪತ್ತು ಸಾವಿರ ರುಪಾಯಿಗಳಿಗೆ ಏರಿಸಿದ್ದೇ ಇರಬಹುದು. ಹಾಲು ಉತ್ಪಾದಕರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನದ ಪ್ರಮಾಣವನ್ನು ಪ್ರತಿ ಲೀಟರ್‌ಗೆ ಎರಡು ರುಪಾಯಿಗಳಿಂದ ನಾಲ್ಕು ರುಪಾಯಿಗಳಿಗೆ ಏರಿಕೆ ಮಾಡಿದ್ದೇ ಇರಬಹುದು. ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಕ್ಷೀರಭಾಗ್ಯ ಯೋಜನೆ ಇರಬಹುದು. ಇವೆಲ್ಲ ಒಂದು ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ಪ್ರಾರಂಭವಾದವೇ ಹೊರತು ಇವುಗಳಲ್ಲಿ ಹುಳುಕು ಹುಡುಕಲು ಸಾಧ್ಯವಿಲ್ಲ. ಆ ದೃಷ್ಟಿಯಿಂದ ಸಿದ್ಧರಾಮಯ್ಯನವರ ಸರ್ಕಾರಕ್ಕೆ ನೂರಕ್ಕೆ ನೂರು ಅಂಕ ಕೊಡಲು ಸಾಧ್ಯವಿಲ್ಲದಿದ್ದರೂ ಅರವತ್ತು ಅಂಕಗಳನ್ನಾದರೂ ಕೊಡುವ ಸ್ಥಿತಿ ಇದೆ.

ಅಂದ ಹಾಗೆ ಸಿದ್ದು ಪೈಲಟ್‌ಷಿಪ್‌ನಲ್ಲಿ ರನ್‌ವೇ ಮೇಲೆ ಓಡುತ್ತಿರುವ ವಿಮಾನ ಯಶಸ್ವಿಯಾಗಿ ಟೇಕ್ ಅಪ್ ಆಗಲು ಏನು ಮಾಡಬೇಕು ಅನ್ನುವುದು ಇವತ್ತಿನ ಮುಖ್ಯ ಪ್ರಶ್ನೆ. ಹಾಗೆ ನೋಡಿದರೆ ಈ ಸರ್ಕಾರದಲ್ಲಿ ಅನುಭವಿ ಮಂತ್ರಿಗಳ ದಂಡೇ ಇದೆ. ಉತ್ಸಾಹಿ ಯುವಕರ ಪಡೆ ಇದೆ. ಆದರೆ ಇದೆಲ್ಲವೂ ಸರಿಯಾಗಿ ವರ್ಕ್‌ಔಟ್ ಆಗಬೇಕೆಂದರೆ ಒಂದು ಹೊಂದಾಣಿಕೆ ಸಾಧಿತವಾಗಬೇಕು. ಯಾಕೆಂದರೆ ಸಚಿವ ಸಂಪುಟದಲ್ಲಿರುವ ಆರ್.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ ಸೇರಿದಂತೆ ಬಹುತೇಕರಿಗೆ ತಮ್ಮ ಖಾತೆಗಳ ಬಗ್ಗೆ ಹೇಳಿಕೊಳ್ಳುವಂತಹ ಉತ್ಸುಕತೆ ಇಲ್ಲ. ದೇಶಪಾಂಡೆ ಅವರ ಮನಸ್ಸಿದ್ದುದು ಕೈಗಾರಿಕಾ ಖಾತೆಯ ಮೇಲೆ. ಆದರೆ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿದೆ. ಈ ಖಾತೆಯ ಕುರಿತು ಹೇಳಿಕೊಳ್ಳುವಂತಹ ಆಸಕ್ತಿ ದೇಶಪಾಂಡೆ ಅವರಿಗಿಲ್ಲ. ಇದರ ಪರಿಣಾಮ ಏನಾಯಿತು ಅಂದರೆ ವೃತ್ತಿಪರ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ರಾಜ್ಯದ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಸೃಷ್ಟಿಯಾಯಿತು. ವೃತ್ತಿಪರ ಕೋರ್ಸುಗಳಿಗೆ ಸಂಬಂಧಿಸಿದಂತೆ ಕಾಲೇಜುಗಳು ಇಂತಿಷ್ಟು ಶುಲ್ಕವನ್ನು ಪಡೆಯಬೇಕು ಎಂದು ಕಡೆಯ ತನಕ ದೇಶಪಾಂಡೆ ಹೇಳಲೂ ಇಲ್ಲ. ಕಾಲೇಜುಗಳ ಆಡಳಿತ ಮಂಡಳಿ ಅವರನ್ನು ಲೆಕ್ಕಕ್ಕೂ ಇಟ್ಟುಕೊಳ್ಳಲಿಲ್ಲ.

ಇನ್ನು ಕಾನೂನು ಮತ್ತು ಪಶುಸಂಗೋಪನಾ ಖಾತೆ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಜಲಸಂಪನ್ಮೂಲ ಖಾತೆಯನ್ನು ಪಡೆಯುವ ಉತ್ಸಾಹ ಇತ್ತು. ಆದರೆ ಅದು ಸಿಗಲಿಲ್ಲ. ಹೀಗಾಗಿ ಅವರಿಗೆ ತಮ್ಮ ಖಾತೆಯ ಕುರಿತು ಹೇಳಿಕೊಳ್ಳುವಂತಹ ಪ್ರೀತಿ ಇಲ್ಲ. ಅನುಭವದ ಆಧಾರದ ಮೇಲೆ ಕೆಲಸ ಮಾಡುತ್ತಾರಾದರೂ ಜಲಸಂಪನ್ಮೂಲ ಖಾತೆ ಸಿಕ್ಕಿದ್ದರೆ ಏನಾದರೂ ಸಾಧನೆ ಮಾಡಿ ತೋರಿಸಬಹುದಿತ್ತು ಅನ್ನುವ ಮನಸ್ಸು ಅವರಿಗೆ ಇತ್ತು. ಆದರೆ ಈ ಖಾತೆ ಎಂ.ಬಿ.ಪಾಟೀಲ್ ಅವರಿಗೆ ಹೋಗಿದೆ. ಆದರೆ ಎಂ.ಬಿ.ಪಾಟೀಲ್ ಈ ಖಾತೆಯ ವಿಷಯದಲ್ಲಿ ಪರಿಪೂರ್ಣ ಆಸಕ್ತಿ ಇಟ್ಟುಕೊಂಡಂತೆ ಕಾಣುತ್ತಿಲ್ಲ. ಬದಲಿಗೆ ಅಧಿಕಾರಿಗಳು ಹೇಳುವುದನ್ನು ಗಿಳಿ ಪಾಠದಂತೆ ಒಪ್ಪಿಸುತ್ತಿದ್ದಾರೆಯೇ ಹೊರತು ಅವರು ದೊಡ್ಡ ಮಟ್ಟದ ಕೆಲಸ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಹೀಗೆ ನೋಡುತ್ತಾ ಹೋದರೆ ಸಿದ್ಧರಾಮಯ್ಯನವರ ಸಚಿವ ಸಂಪುಟದಲ್ಲಿರುವ ಬಹುತೇಕ ಸಚಿವರಿಗೆ ಅವರ ಖಾತೆಗಳ ಕುರಿತು ಆಸಕ್ತಿ ಇಲ್ಲ. ಹಾಗೆ ನೋಡಿದರೆ ಈ ಸರ್ಕಾರದಲ್ಲಿ ದಿ ಬೆಸ್ಟ್ ಮಂತ್ರಿ ಎಂದರೆ ಗ್ರಾಮೀಣಾಭಿವೃದ್ಧಿ ಖಾತೆ ಹೊಂದಿರುವ ಎಚ್.ಕೆ.ಪಾಟೀಲ್. ಮಂತ್ರಿಯಾದ ಶುರುವಿನಿಂದಲೂ ತಮ್ಮ ಖಾತೆಗೆ ಸಂಬಂಧಿಸಿದಂತೆ ಅವರು ಎಷ್ಟು ಕ್ರಿಯಾಶೀಲರಾಗಿದ್ದಾರೆ ಎಂದರೆ ಅವರ ಕೆಲಸ ಕಣ್ಣಿಗೆ ಕಾಣುವಂತೆ ಇದೆ.

ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಐದು ಸಾವಿರ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸುವ ಬಜೆಟ್ ಘೋಷಣೆಯ ಹಿಂದಿರುವುದು ಎಚ್.ಕೆ.ಪಾಟೀಲರ ಆಸಕ್ತಿ ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬರುವ ಮುನ್ನವೇ ಹಳ್ಳಿಗಾಡಿನಲ್ಲಿ ಇಂತಹ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ಮೂಲಕ ಪಾಟೀಲರು ಎಲ್ಲರ ಗಮನ ಸೆಳೆದಿದ್ದರು. ಅರ್ಥಾತ್ ಅವರೀಗ ಮಾಡುತ್ತಿರುವ ಕೆಲಸ ಅವರ ಮನಸ್ಸಿಗೆ, ಹೃದಯಕ್ಕೆ ಬೇಕಾದಂತಹದ್ದು. ಹೀಗಾಗಿ ಅದನ್ನು ಪಾಟೀಲರು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಇದೇ ಅಂತಲ್ಲ. ಬೇರೆ ಖಾತೆ ಕೊಟ್ಟಿದ್ದರೂ ಅವರು ಅಷ್ಟೇ ಸಮರ್ಥವಾಗಿ ನಿರ್ವಹಿಸುತ್ತಿದ್ದರೆ ಎಂಬುದು ಬೇರೆ ಮಾತು. ಆದರೆ ತಮ್ಮ ಖಾತೆಯ ಮೂಲಕ ಈ ರಾಜ್ಯಕ್ಕೆ, ಆ ಮೂಲಕ ಈ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಲ್ಲಿ ಪಾಟೀಲರು ಯಶಸ್ವಿಯಾಗುತ್ತಾರೆ ಎಂಬುವುದರಲ್ಲಿ ಯಾವ ಅನುಮಾನವೂ ಬೇಡ.

ಇದೇ ರೀತಿ ಆರೋಗ್ಯ ಸಚಿವ ಯು.ಟಿ.ಖಾದರ್ ಕೂಡ ಉತ್ಸಾಹಿ ಮಂತ್ರಿ. ಗುಟ್ಕಾ ನಿಷೇಧದ ವಿಷಯದಿಂದ ಹಿಡಿದು ಹಲವು ವಿಷಯಗಳಲ್ಲಿ ಅವರು ತೋರಿರುವ ಮತ್ತು ತೋರುತ್ತಿರುವ ಕಾಳಜಿ ಶ್ಲಾಘನಾರ್ಹ. ಹಾಗಂತ ಆರೋಗ್ಯ ಇಲಾಖೆಯಂತಹ ತುಕ್ಕು ಹಿಡಿದ ಒಂದು ಖಾತೆಯನ್ನು ಪಾಲಿಶ್ ಮಾಡಿ ಫಳ ಫಳ ಅನ್ನಿಸುವುದು ಸುಲಭದ ಮಾತಲ್ಲ. ಯಾಕೆಂದರೆ ಏನೇ ಮಾಡಿದರೂ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಬಿಬಿಎಸ್ ವೈದ್ಯರು ಮತ್ತು ತಜ್ಞ ವೈದ್ಯರ ಕೊರತೆ ನಿರಂತರವಾಗಿ ಕಾಡುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲೂ ಕೆಲಸ ಮಾಡುತ್ತಾರೆ. ಯಾಕ್ರೀ ಹೀಗೆ ಮಾಡ್ತೀರಿ ಅಂದರೆ ನೀವೂ ಬೇಡ, ನಿಮ್ಮ ಕೆಲಸವೂ ಬೇಡ ಎನ್ನುವಂತಹ ಗುಣ ಬಹುತೇಕ ವೈದ್ಯರಲ್ಲಿ ಬೆಳೆದು ಹೋಗಿದೆ. ಇದನ್ನು ನಿಯಂತ್ರಿಸಲು ಹೇಗೆ ಕಾನೂನಿನ ಅಗತ್ಯವಿದೆಯೋ, ಅದೇ ರೀತಿ ವೈದ್ಯರಿಗೆ ನೀಡುತ್ತಿರುವ ವೇತನದ ಪ್ರಮಾಣವನ್ನು ಹೆಚ್ಚಿಸಿ, ಇನ್ನು ದುಡ್ಡಿನ ಆಸೆಗೆ ಹೋಗಬೇಡಿ. ಜನರ ಸೇವೆ ಮಾಡಿ ಎಂದು ಹೇಳುವ ಮನೋಧಾರ್ಢ್ಯ ಒಂದು ಸರ್ಕಾರಕ್ಕೆ ಇರಬೇಕು.

ಅದೇ ರೀತಿ ಒಂದು ಕಾಲದಲ್ಲಿ ವಿರೋಧ ಪಕ್ಷದಲ್ಲಿದ್ದಾಗ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಹೇಗೆ ಕಾಡುತ್ತಿದೆ ಎಂದು ಇದೇ ಯು.ಟಿ.ಖಾದರ್ ಬಹಳ ಪರಿಣಾಮಕಾರಿಯಾಗಿ ವಿವರಿಸುತ್ತಿದ್ದರು. ಆದರೆ ಅವತ್ತು ಸರ್ಕಾರದ ವತಿಯಿಂದ ಯಾವ ಉತ್ತರ ಸಿಗುತ್ತಿತ್ತೋ, ಅದೇ ಉತ್ತರವನ್ನು ಅವರು ಕೊಡುತ್ತಿದ್ದಾರೆ. ಹಾಗೆ ಮಾಡುವ ಬದಲು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತವಾಗಿ ಔಷಧಿ ಸಿಗುವಂತಹ ಸ್ಥಿತಿ ಇದೆಯೇ ಅನ್ನುವುದನ್ನು ಪರಿಶೀಲಿಸಲು ಒಂದು ತನಿಖಾ ದಳವನ್ನು ರಚಿಸಿ ದಿಢೀರ್ ದಾಳಿ ನಡೆಸುವ ಕೆಲಸ ಆಗಬೇಕು. ಅಂತಹ ಕೆಲಸ ಮಾಡಲು ಯು.ಟಿ.ಖಾದರ್‌ಗೆ ಸಾಧ್ಯವಿದೆ. ಯಾಕೆಂದರೆ ಸಚಿವರಾಗಿ ಈ ರಾಜ್ಯದ ಜನರ ಸೇವೆ ಮಾಡಬೇಕು ಎಂಬ ಮನೋಭಾವ ಅವರಲ್ಲಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಷಯ ಬಂದರೂ ಅಷ್ಟೇ. ಯಾವತ್ತೂ ಹೆಚ್ಚು ಪ್ರಚಾರ ಬಯಸದೆ ಕೆಲಸ ಮಾಡುವ ರಾಮಲಿಂಗಾರೆಡ್ಡಿ ತಮ್ಮ ಕೆಲಸದ ಮೂಲಕ ಮಾತ್ರವಲ್ಲ, ತಮ್ಮ ಸಜ್ಜನಿಕೆಯ ಮೂಲಕವೂ ಒಂದು ಸರ್ಕಾರಕ್ಕೆ ಗೌರವ ತರುವಂತಹವರು. ಇವತ್ತು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಎಂಬ ಬಿಳಿ ಆನೆಗಳನ್ನು ನಿರ್ವಹಿಸುವುದರ ಜತೆಗೆ ಸಾರಿಗೆ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುವ ಇಚ್ಛಾಶಕ್ತಿ ಅವರಲ್ಲಿ ಕಾಣುತ್ತಿದೆ.

ಕೃಷಿ ಸಚಿವ ಕೃಷ್ಣ ಭೈರೇಗೌಡರ ವಿಷಯ ತೆಗೆದುಕೊಂಡರೂ ಅಷ್ಟೇ. ತಮ್ಮ ತಂದೆ ಭೈರೇಗೌಡರಂತೆಯೇ ಜನಪರ ಕಾಳಜಿಯುಳ್ಳ ನಾಯಕತ್ವ ಅವರಲ್ಲಿದೆ. ಕೃಷಿ ಸಚಿವರಾಗಿ ಸದ್ದಿಲ್ಲದೇ ಕೆಲಸ ಮಾಡುತ್ತಿರುವ ಅವರು ಇಲಾಖೆಯ ನೆಟ್ಟು, ಬೋಲ್ಟುಗಳನ್ನು ನೂರು ದಿನಗಳ ಅವಧಿಯಲ್ಲಿ ಸಾಕಷ್ಟು ಟೈಟು ಮಾಡಿದ್ದಾರೆ. ಇದೇ ರೀತಿ ಉತ್ತಮ ಕೆಲಸ ಮಾಡುವ ಶಕ್ತಿ ಇರುವ ಸಚಿವರಲ್ಲಿ ಲೋಕೋಪಯೋಗಿ ಮಂತ್ರಿ ಎಚ್.ಸಿ.ಮಹದೇವಪ್ಪ, ನಿರ್ಭಿಡೆಯಿಂದ ಕೆಲಸ ಮಾಡುವ ವಸತಿ ಮಂತ್ರಿ ಅಂಬರೀಷ್ ಥರದವರೂ ಇದ್ದಾರೆ. ಆದರೆ ಇಷ್ಟೆಲ್ಲದರ ನಡುವೆಯೂ ಕಾಣಿಸುವ ಕೊರತೆ ಎಂದರೆ ಮುಂದಿನ ಐದು ವರ್ಷಗಳಲ್ಲಿ ನಮ್ಮ ಖಾತೆಯ ಮೂಲಕ ನಾವು ಈ ರಾಜ್ಯದ ಅಭಿವೃದ್ಧಿಗೆ ಸಲ್ಲಿಸಬಹುದಾದ ಕೊಡುಗೆ ಏನು ಅನ್ನುವ ವಿಷಯದಲ್ಲಿ ಬಹುತೇಕ ಸಚಿವರು ಒಂದು ನೀಲ ನಕ್ಷೆ ರೆಡಿ ಮಾಡಿಕೊಳ್ಳದೇ ಇರುವುದು.

ಪ್ರತಿಪಕ್ಷದ ಸಾಲಿನಲ್ಲಿ ಕೂತಾಗ ಆಡಳಿತಾರೂಢ ಪಕ್ಷವನ್ನು ಬೇಕು ಬೇಕೆನಿಸುವಷ್ಟು ಟೀಕಿಸುವುದು ಬೇರೆ. ಆದರೆ ತಾವೇ ಅಧಿಕಾರದ ಸ್ಥಾನದಲ್ಲಿ ಕೂತಾಗ ಏನು ಮಾಡಬಹುದು ಎಂದು ಯೋಚಿಸುವುದು ಬೇರೆ. ಹಾಗೆ ನೋಡಿದರೆ ಈ ಸರ್ಕಾರದ ಬಹುತೇಕ ಮಂತ್ರಿಗಳು ಇಂತಹ ನೀಲ ನಕ್ಷೆಯನ್ನು ಸಿದ್ಧಪಡಿಸಿಕೊಂಡೇ ಇಲ್ಲ. ಈ ಹಿಂದಿನ ಸರ್ಕಾರಗಳು ಮಾಡಿದ ಒಳ್ಳೆಯ ಕೆಲಸ, ತಪ್ಪು ಕೆಲಸ, ಇದರ ಆಧಾರದ ಮೇಲೆ ತಾವು ಇಡಬೇಕಾದ ಹೆಜ್ಜೆಯನ್ನು ನಿರ್ಣಯಿಸಲು ಒಬ್ಬ ಮಂತ್ರಿಗೆ ಅಬ್ಬಬ್ಬಾ ಎಂದರೂ ಒಂದೂವರೆ, ಎರಡು ತಿಂಗಳ ಕಾಲಾವಕಾಶ ಸಾಕು. ಆದರೆ ಬಹುತೇಕ ಸಚಿವರು ಆ ಕೆಲಸ ಮಾಡಿಯೇ ಇಲ್ಲ. ಅಂದ ಮೇಲೆ ಮುಂದಿನ ನಾಲ್ಕು ವರ್ಷ ಒಂಬತ್ತು ತಿಂಗಳ ಅವಧಿಯಲ್ಲಿ ಇವರ ಹೆಜ್ಜೆ ಯಾವ ರೀತಿ ಇರುತ್ತದೆ ಅಂತ ನಿರೀಕ್ಷಿಸುವುದು ಕಷ್ಟ. ಉದಾಹರಣೆಗೆ ಕಂದಾಯ ಇಲಾಖೆಯನ್ನೇ ತೆಗೆದುಕೊಳ್ಳಿ. ರಾಜ್ಯದಲ್ಲಿ ಈ ವರ್ಷ ಒಂದೆಡೆ ಅತಿವೃಷ್ಟಿಯಿಂದ ಸಾವಿರಾರು ಕೋಟಿ ರುಪಾಯಿ ನಷ್ಟವಾಗಿದೆ. ಆದರೆ ಇದುವರೆಗೂ ಆಗಿರುವ ನಷ್ಟದ ಪ್ರಮಾಣ ಎಷ್ಟು ಅನ್ನುವ ಕುರಿತು ಒಂದು ಪ್ರಾಥಮಿಕ ವರದಿ ಸಿದ್ಧವಾಗಿಲ್ಲ.

ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿ, ಜೀವ ಹಾನಿ, ಆಸ್ತಿ ಹಾನಿಗಳಿಗೆ ಸಂಬಂಧಿಸಿದಂತೆ ವರದಿ ಪಡೆದು ಇಷ್ಟೊತ್ತಿಗಾಗಲೇ ಕೇಂದ್ರದ ನೆರವು ಕೋರಿ ಒಂದು ಪ್ರಾಥಮಿಕ ವರದಿಯನ್ನು ದಿಲ್ಲಿಗೆ ರವಾನಿಸುವ ಕೆಲಸ ಆಗಬೇಕಿತ್ತು. ಆದರೆ ಇದುವರೆಗೂ ಆ ಕೆಲಸ ಆಗಿಲ್ಲ. ನೆರೆಯ ಆಂಧ್ರ ಪ್ರದೇಶ, ತಮಿಳುನಾಡು ಸರ್ಕಾರಗಳು ಇಂತಹ ವಿಷಯದಲ್ಲಿ ಎಷ್ಟು ಚಟುವಟಿಕೆಯಿಂದ ಕೆಲಸ ಮಾಡುತ್ತವೆ ಎಂಬುದು ಇಡೀ ದೇಶಕ್ಕೇ ಗೊತ್ತು. ಆದರೆ ಪಕ್ಕದಲ್ಲೇ ಇರುವ ನಮ್ಮ ರಾಜ್ಯದ ಸಚಿವರಿಗೆ ಇದು ಅರ್ಥವಾಗುತ್ತಿಲ್ಲ. ನಷ್ಟಕ್ಕೊಳಗಾದವರಿಗೆ ತಕ್ಷಣ ಪರಿಹಾರ ನೀಡುವ ಕೆಲಸವಾದರೆ ಜನರಿಗೆ ಸರ್ಕಾರದ ಬಗ್ಗೆ ಒಂದು ಭರವಸೆಯಾದರೂ ಬರುತ್ತದೆ. ಅಂತಹ ಭರವಸೆ ಹುಟ್ಟದೇ ಹೋದಾಗಲೇ ಅಸಮಾಧಾನ ಸೃಷ್ಟಿಯಾಗುವುದು, ಒಂದು ಸರ್ಕಾರದ ಬಗ್ಗೆ ಅಪಸ್ವರದ ಮಾತುಗಳು ಕೇಳುವುದು.

ಇಂತಹವನ್ನೆಲ್ಲ ಗಮನಿಸುವುದು, ಆಡಳಿತ ಯಂತ್ರಕ್ಕೆ ಚುರುಕು ನೀಡುವುದು ಈ ಸರ್ಕಾರದ ತುರ್ತು ಕೆಲಸವಾಗಬೇಕು. ಇನ್ನು ರಾಜಕೀಯವಾಗಿ ಸಿದ್ದು ಸರ್ಕಾರಕ್ಕೆ ಪ್ರಾರಂಭದಿಂದಲೂ ಕಾಡುತ್ತಿರುವ ಬಾಲಗ್ರಹ ರೋಗವೆಂದರೆ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗ ಕಾಂಗ್ರೆಸ್ಸಿಗರು ಎಂಬ ಬೇಧ. ಈ ಬೇಧವನ್ನು ನಿವಾರಿಸದೇ ಹೋದರೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ನಿಜಕ್ಕೂ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ನೂರು ದಿನಗಳನ್ನು ಪೂರೈಸಿರುವ ಸಿದ್ಧರಾಮಯ್ಯನವರ ಸರ್ಕಾರ ಇದುವರೆಗೆ ಟೇಕ್ ಅಪ್ ಆಗಿಲ್ಲ ಎಂದು ಹೇಳಬಹುದಾದರೂ, ಅದು ಟೇಕ್ ಅಪ್ ಆಗಲು ಸಾಕಷ್ಟು ಅವಕಾಶಗಳೂ ಇವೆ. ನೂರು ದಿನಗಳ ಅವಧಿಯಲ್ಲಿ ಅದು ಜನರಲ್ಲಿ ರೇಜಿಗೆ ಹುಟ್ಟಿಸದ ರೀತಿಯಲ್ಲಿ ಮುನ್ನಡೆದುಕೊಂಡು ಹೋಗುತ್ತಿರುವುದೇ ಅದಕ್ಕೆ ಸಾಕ್ಷಿ. ಹಾಗಂತ ಅದು ಕೇವಲ ರನ್‌ವೇ ಮೇಲೆ ಓಡುತ್ತಾ ತಿರುಗುತ್ತಿದ್ದರೆ ಸಾಲದು. ಮುಂದಿನ ನೂರು ದಿನಗಳಲ್ಲಿ ಸರ್ಕಾರ ಎಂಬ ವಿಮಾನ ಟೇಕ್ ಅಪ್ ಆಗದಿದ್ದರೆ ಜನರ ಮನಸ್ಸಿನಲ್ಲಿ ಒಂದು ಅಸಹನೆ ಶುರುವಾಗುತ್ತದೆ. ಹಾಗಾಗದಿರಲಿ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 24 August, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books