Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಹೆಸರೇ ಇಲ್ಲದ ಒಂದು ಸಂಬಂಧವೂ ಇರಬಾರದೆ?

ಆಕೆ ನಿಮ್ಮನ್ನು ಪ್ರೀತಿಸುತ್ತಾಳೆ.

ತುಂಬ ಪ್ರೀತಿಸುತ್ತಾಳೆ. ವಿಪರೀತ ಪ್ರೀತಿಸುತ್ತಾಳೆ. ಭಯಂಕರವಾಗಿ ಪ್ರೀತಿಸುತ್ತಾಳೆ. ಬೇಸರವಾಗುವಷ್ಟು ಪ್ರೀತಿಸುತ್ತಾಳೆ. ತಪ್ಪಿಸಿಕೊಂಡು ಓಡಿ ಹೋಗಬೇಕೆನ್ನಿಸುವಷ್ಟು ಪ್ರೀತಿಸುತ್ತಾಳೆ. ಉಸಿರು ಸಿಕ್ಕಿ ಹಾಕಿಕೊಳ್ಳುವಷ್ಟು ಪ್ರೀತಿಸುತ್ತಾಳೆ. ತಬ್ಬುಗೆಯಲ್ಲಿ ಚರ್ಮ ಕೊಳೆತು ಹೋಗುವಷ್ಟು ಪ್ರೀತಿಸುತ್ತಾಳೆ. ನಿಮ್ಮನ್ನು ನೀವು ಭೇಟಿಯಾಗದಷ್ಟು ಪ್ರೀತಿಸುತ್ತಾಳೆ. ನಿಮ್ಮ ಪಾಡಿಗೆ ನೀವಿರಲಾರದಷ್ಟು ಗಾಢವಾಗಿ ಪ್ರೀತಿಸುತ್ತಾಳೆ.

ಓಹ್.... ಹಿಂಸೆಯಾಗುವಷ್ಟು ಪ್ರೀತಿಸುತ್ತಾಳೆ!

ಇಂಗ್ಲಿಷಿನಲ್ಲಿದನ್ನು possessive ಅನ್ನುತ್ತಾರೆ. ಕನ್ನಡದಲ್ಲಿ ಬಹುಶಃ ಏನೂ ಅನ್ನುವುದಿಲ್ಲ. ನಾನು ಕಳೆದ ಮೂರ‍್ನಾಲ್ಕು ದಿನಗಳಿಂದ ಈ ತರಹದ ಭಯಂಕರ ಪ್ರೀತಿಯ ಉದಾಹರಣೆ ಮಹಾಭಾರತ, ರಾಮಾಯಣಗಳಲ್ಲೇನಾದರೂ ಸಿಕ್ಕೀತೋ ಎಂದು ವಿಚಾರಿಸಿದೆ. ದಶರಥನೆಡೆಗೆ ಕೈಕೇಯಿಗೆ, ಅರ್ಜುನನೆಡೆಗೆ ಸುಭದ್ರೆಗೆ, ಕೃಷ್ಣನೆಡೆಗೆ ಸತ್ಯಭಾಮೆಗೆ ಇದ್ದ possessiveness ಇದೇ ತರಹದ್ದಾ ಎಂದು ಯೋಚಿಸಿದೆ.

ಇಷ್ಟೊಂದಲ್ಲ-ಎನಿಸಿತು.

ಇದೊಂದು ತರಹದ 'ಪೀಡೆ ಪ್ರೀತಿ'. ಮತ್ತೂ ಒಂದು ರೀತಿಯಲ್ಲಿ ಹೇಳಬೇಕೆಂದರೆ 'ಕೋತಿ ಪ್ರೀತಿ'. ತಾಯಿಕೋತಿ ತನ್ನ ಮಗುವನ್ನು ಕಚ್ಚಿಕೊಂಡೇ ಇರುವಂತಹ, ಕೊಂಚ ಆಡಲು ಬಿಟ್ಟರೂ ಮತ್ತೆ ಗಬಕ್ಕನೆ ತನ್ನೆಡೆಗೆ ಎಳೆದುಕೊಳ್ಳುವಂತಹ, ಹೊಟ್ಟೆಗೆ ಮೆತ್ತಿಕೊಂಡೇ ಓಡಾಡುವಂತಹ sticker ಪ್ರೀತಿ.

ನೀವು ಅನುಭವಿಸಿದ್ದೀರಾ?

ಗಂಡ ಅಥವಾ ಗೆಳೆಯ ಹೇಳಿದ ಹೊತ್ತಿಗೆ ಮನೆಗೆ ಬರಲಿಲ್ಲ ಅಂದರೆ ಹುಡುಗಿ ಗಾಬರಿಗೊಳ್ಳುವುದು, ಬೇಸರ ಪಡುವುದು ಸಹಜ. ಕಿಟಕಿಗೆ ನಿಂತು, ಕಂಪೋಂಡಿಗೆ ಒರಗಿ, ಆಫೀಸಿಗೆ ಫೋನು ಮಾಡಿ ವಿಲಿವಿಲಿಗುಟ್ಟುವುದು ಲೋಕಾರೂಢಿ. ಆದರೆ ಗಂಡನ ಪ್ರತಿ ಚಲನೆ, ಪ್ರತಿ ತಿರುವು, ಪ್ರತಿ ಹೆಜ್ಜೆಯನ್ನೂ ಅನುಸರಿಸಿ, ವಿಶ್ಲೇಷಿಸಿ ಅರ್ಥೈಸಿಕೊಂಡು, ಅನರ್ಥೈಸಿಕೊಂಡು ಅನಾಹುತಕಾರಿ ಗಾಬರಿಗಳಿಗೆ ಈಡಾಗುವುದಿದೆಯಲ್ಲ? ಅದು ನಿಜವಾಗಿಯೂ 'ಪೀಡೆ ಪ್ರೀತಿ'ಯೇ!

ಸಾಮಾನ್ಯವಾಗಿ ಶ್ರೀಮಂತರ ಮನೆಯ ಹುಡುಗಿಯರು ಬಲು ಚೆಂದನೆಯ ಕೆಳ ಮಧ್ಯಮ ವರ್ಗದ ಹುಡುಗರನ್ನು ಮದುವೆಯಾದಾಗ ಇಂಥ 'ಪೀಡೆ ಪ್ರೀತಿ'ಗೆ ಗುರಿಯಾಗುತ್ತಾರೆ. ಅವರಿಗೆ ಅದೇನೋ ಆತಂಕ. ಕೈ ಹಿಡಿದ ಹುಡುಗ ಯಾವುದೋ ಮರಾಮೋಸದಲ್ಲಿ ತಮ್ಮ ಕೈಯ್ಯಿಂದ 'ಪುಸುಗಿ'ಬಿಡುತ್ತಾನೇನೋ ಎಂಬ ಗಾಬರಿ. ಒಂದೇ ಸವನೆ ಬೆನ್ನು ಬಿದ್ದು ಪ್ರಾಣ ತಿನ್ನುತ್ತಾರೆ. ಎಲ್ಲಿಗೆ ಹೋಗಿದ್ದೆ? ಎಷ್ಟೊತ್ತಿಗೆ? ಅಲ್ಲೆಷ್ಟು ಹೊತ್ತಿದ್ದೆ? ಆಮೇಲೆಲ್ಲಿಗೆ ಹೋದೆ? ಅಲ್ಯಾರು ಸಿಕ್ಕರು? ಎಷ್ಟೊತ್ತಿಗೆ ಹರಟೆ? ದಾರೀಲೆಲ್ಲಿ ನಿಂತೆ? ಓಹ್... ಪ್ರಶ್ನೆಗಳು ಪ್ರಾಣ ತಿನ್ನುತ್ತವೆ. ಗಂಡ ಉತ್ತರಿಸಲಾಗದೆ ತತ್ತರಿಸುತ್ತಾನೆ. ಹುಡುಗಿ ಪ್ರಶ್ನೆಯಿಂದ ಪ್ರಶ್ನೆಗೆ ಜಿಗಿಯುತ್ತಾ ಉತ್ತರಗಳನ್ನು stitch ಮಾಡುತ್ತಾ ಇಡೀ ದಿನದ story ಸಂಗ್ರಹಿಸುವ ಉತ್ಸಾಹದಲ್ಲಿ ಅವನನ್ನು ಅರ್ಧ ಕೊಂದಿರುತ್ತಾಳೆ. ಉಳಿದರ್ಧವನ್ನು ಹಾಸಿಗೆಯಲ್ಲಿ ಮುಗಿಸಿ ಹಾಕುತ್ತಾಳೆ.

ಏನಿದು ವೈಪರೀತ್ಯ? ಇದೆಂಥಾ ಪ್ರೀತಿ?

ಪ್ರೀತಿ ಹುಟ್ಟುವುದು ಸ್ವಚ್ಛಂದ ಮನಸ್ಸಿನಲ್ಲಿ. ಯಾವುದೋ ಆನಂದವನ್ನು ದೊರಕಿಸಿಕೊಳ್ಳುವ ತುಡಿತದಲ್ಲಿ. ಅದನ್ನು ಇಷ್ಟಿಷ್ಟೇ ನೀರು, ಹಿಡಿ ಹಿಡಿ ಗೊಬ್ಬರ ಮತ್ತು ನವಿರಾದ ಗಾಳಿ ಬೆಳಕುಗಳಲ್ಲಿ ಪೋಷಿಸಿದರೆ ಸೊಗಸಾಗಿ ಚಿಗುರಿಕೊಳ್ಳುತ್ತದೆ. ಹಿತವಾಗಿ ನಳನಳಿಸುತ್ತದೆ. ಅದು ಬಿಟ್ಟು ಅನುಮಾನದ, ಆತಂಕದ possessivenessನ ಕೊಚ್ಚೆ ಸುರಿದರೆ ಹುಟ್ಟುವ ಮೊದಲೇ ಮುರುಟಿ ಹೋಗುತ್ತದೆ. ಅನೇಕ ಹುಡುಗಿಯರಿಗಿದು ಗೊತ್ತಿರುವುದಿಲ್ಲ. ನೀವೇ ಪರೀಕ್ಷಿಸಿ ನೋಡಿ ಶ್ರೀಮಂತರ ಮನೆಯ ಹುಡುಗಿಯರನ್ನು ಮದುವೆಯಾದ ಹುಡುಗರು ಅಥವಾ ತೀರಾ 'ರಫ್‌' ಆದ ಹುಡುಗರನ್ನು ಮದುವೆಯಾದ ಹುಡುಗಿಯರು-ಮುಖಗಳಲ್ಲಿ ವಿಲಕ್ಷಣವಾದ ದುಗುಡ ಧರಿಸಿಕೊಂಡು ಬದುಕುತ್ತಿರುತ್ತಾರೆ. ಅವರು 'ಪೀಡೆ ಪ್ರೀತಿ'ಯ ಬಲಿಪಶುಗಳು.

ಅಂಥ ಹೆಣ್ಣು ಮಗಳೊಬ್ಬಳು ಹಲವು ವರ್ಷಗಳ ಹಿಂದೆ ಪತ್ರ ಬರೆದಿದ್ದಳು. 'ರವೀ, ದಣಿದಿದ್ದೇನೆ ಒಂದೇ ಒಂದು ದಿನ ನಿನ್ನ ಜೊತೆಗಿರಲಾ?'

ಏನುತ್ತರಿಸಲಿ? ನಾನಾಗ ಹುಬ್ಬಳ್ಳಿಯಲ್ಲಿದ್ದೆ. ಜೊತೆಗೆ ಮಗಳಿದ್ದಳು. ಚಿಕ್ಕ ಮನೆಯೊಂದರಲ್ಲಿ ನಾನು, ಟೇಪ್ ರೆಕಾರ್ಡರು, ನನ್ನ ಮಗಳು, ನಾಯಿ ಮತ್ತು ಮೋಟಾರ್ ಸೈಕಲ್ಲು. ಧಾರಾಳವಾಗಿ ಬನ್ನಿ ಎಂದು ಬರೆದೆ. ಆಕೆ ಬಂದೇ ಬಿಟ್ಟಳು. ನನ್ನದೇ ವಯಸ್ಸು. ಒಂದು ಮಗುವಿನ ತಾಯಿ. ಯಾರದೋ ಗಂಡನ ಹೆಂಡತಿ. ಓದಿಕೊಂಡವಳು. ಕಾಲೇಜಿನಲ್ಲಿ ನನಗಿಂತ ಬುದ್ಧಿವಂತೆ. ರೂಪದ ಸುದ್ದಿ ಯಾಕೆ? ಸ್ನೇಹ ಸಂಬಂಧಗಳ ವಿಷಯ ಬಂದಾಗ ರೂಪದ್ದೊಂದು ಕನ್ಸಿಡರೇಷನ್ನೇ ಅಲ್ಲ.

ಮನೆಗೆ ಬಂದಾಕೆ ಮನಸಾರೆ ಹರಟಿದಳು. ಇದ್ದೆರಡು ಕೋಣೆಯಲ್ಲೇ ಸಾವಿರ ಸಲ ಸಡಗರದಿಂದ ಓಡಾಡಿದಳು. ನಿಮ್ಮನೇಲಿ ಹಾಲುಕ್ಕಿಸಿದರೆ ಯಾರೂ ಬಯ್ಯೋಲ್ಲವಾ? ನೀರು ಚೆಲ್ಲಿದರೆ ರೇಗಲ್ಲವಾ? ಪಕ್ಕದ ಮನೆಯವರೊಂದಿಗೆ ಮಾತಾಡಿದರೆ ಮೂಳೆ ಮುರಿಯಲ್ವಾ? ಲೇಟಾಗಿ ಬಂದರೆ ಬಾಗಿಲಲ್ಲಿ ನಿಲ್ಲಿಸಲ್ವಾ? ಎದುರು ಮಾತಾಡಿದರೆ ಡೈವೋರ್ಸ್ ಪೇಪರ್‌ಗೆ ಸಹಿ ಹಾಕಿಸಿಕೊಳ್ಳಲ್ವಾ? ರವೀ... ನಿಮ್ಮ ಮನೆಯಲ್ಲಿ ನಾನು ಇವತ್ತೊಂದೇ ಒಂದು ದಿನ ಹೆಂಡತಿ, ಅಮ್ಮ, ಅಡುಗೆಯವಳು, ಕೆಲಸದವಳು -ಇದ್ಯಾವುದೂ ಆಗಿರದೆ ''ಕೇವಲ ನಾನಾಗಿ ಇರಬಹುದಾ?'' ಅಂತ ಕೇಳಿದಳು.

ದೊಡ್ಡದಾಗಿ ನಕ್ಕುಬಿಟ್ಟೆ. ರೇಗದ-ಜಗಳವಾಡದ ಮುನಿಸುಗುಟ್ಟದ ದಾಂಪತ್ಯಗಳು ಎಲ್ಲಿರುತ್ತವೆ? ಆದರೆ ಅವುಗಳ ಹಿಂದೆ ನಂಜಿರಬಾರದು. ಅನುಮಾನವಿರಬಾರದು. ಒಂದು 'ಪೀಡೆ'ತನವಿರಬಾರದು. Otherwise, ಗಂಡ ಹೆಂಡಿರ ಮಧ್ಯದ ಜಗಳ ಮೈಥುನದಷ್ಟೇ ಆರೋಗ್ಯಕರವಾದುದು. ಕಂಪಲ್ಸರಿಯಾದುದು. ನೀವು ಕೂತ್ಕೊಳ್ಳಿ -ಅಂದವನೇ ನಾನೇ ಅಡುಗೆ ಮಾಡಿದೆ. ಮಗಳಿಗೆ ಸ್ನಾನ ಮಾಡಿಸಿ, ತಲೆ ಬಾಚಿ, ಪೋನಿ ಕಟ್ಟಿ, ಇಸ್ತ್ರಿ ಸ್ಕರ್ಟು ಹಾಕಿ, ನೆರಿಗೆ ತೀಡಿ, ಷೂ ಕಟ್ಟಿ, ಊಟದ ಟಬ್ಬಿ ಚೀಲದಲ್ಲಿಟ್ಟು, ಚೀಲವನ್ನು ನನ್ನ ಹೆಗಲಿಗೆ ಹಾಕಿಕೊಂಡು, ಮೊಬೈಕಿನ ಪೆಟ್ರೋಲ್ ಟ್ಯಾಂಕಿನ ಮೇಲೆ ಅವಳನ್ನು ಕೂಡಿಸಿಕೊಂಡು 'ಪಾಪ್ಪಾ ಕೆಹತೇ ಹೈ ಬಡಾ ನಾಮ್ ಕರೇಗಾ' ಎಂದು ಯುಗಳ ಸ್ವರದಲ್ಲಿ ಹಾಡುತ್ತಾ ಹೋಗಿ ಶಾಲೆಗೆ ಬಿಟ್ಟು ಬಂದೆ. ಹಿಂತಿರುಗುವ ಹೊತ್ತಿಗೆ ಆಕೆ ನನ್ನ ಕಥೆಯೊಂದರ aborted script ಓದುತ್ತಿದ್ದಳು. ಈಗ ಹೇಳಿ ಮೇಡಂ, ನಿಮಗೆ ಅಷ್ಟೊಂದು ದಣಿಯುವಂಥಾದ್ದು ಏನಾಗಿದೆ? ಕೇಳಿದೆ.

''ಪ್ರೀತಿ ಉಸಿರುಗಟ್ಟಿಸಿದೆ!'' ಅಂದಳು.

Exactly, ನಾನು ಈ ಮುಂಚೆ ಹೇಳಿದ ಕೇಸೇ. ಆಕೆಯನ್ನು ನಾನು ಚೆನ್ನಾಗಿ ಬಲ್ಲೆ. ಮದುವೆಗೆ ಮುಂಚಿನಿಂದಲೂ ಬಲ್ಲೆ. ಚೆಲ್ಲುತನದ ಹುಡುಗಿಯಲ್ಲ. ಜಗಳಗಂಟಿಯಲ್ಲ. ಚೆನ್ನಾಗಿ ಹಾಡುತ್ತಿದ್ದಳು. ಪ್ರೀತಿಸಿ ಮದುವೆಯಾಗುವ ಹುಡುಗಿಯರ ಕ್ಯಾಟಗರಿಗೆ ಸೇರಿದವಳು. ಮನೆಯ ಬಗ್ಗೆ, ಅಪ್ಪ-ಅಮ್ಮನ ಬಗ್ಗೆ ಗೌರವ ಪ್ರೀತಿಗಳಿದ್ದಾಗ್ಯೂ ನನ್ನ ಗಂಡನನ್ನು ನಾನು ಹುಡುಕಿಕೊಳ್ತೀನಿ ಎಂದು ನಿರ್ಧರಿಸಿಕೊಂಡಿದ್ದವಳು. ಜೊತೆಗಿದ್ದ ನಮ್ಮ ಬಗ್ಗೆ ಆಕೆಗೊಂದು ತೆಳುವಾದ ತಾತ್ಸಾರವಿತ್ತು. ಪಡ್ಡೆಗಳ ಹಾಗೆ ಬೀಡಿ ಸೇದುತ್ತಾ, ಅವರಿವರನ್ನು ಚುಡಾಯಿಸಿಕೊಂಡು ಓಡಾಡುವ ಇವರೆಂಥಾ ಒಳ್ಳೆ ಗಂಡಂದಿರಾಗಲು ಸಾಧ್ಯ? Immatured fellows ಎಂಬ ನಿರ್ಲಕ್ಷ್ಯವಿತ್ತು. ಆಕೆ ಯಾವುದೋ ಅಗೋಚರ ಸರದಾರನಿಗಾಗಿ ಕಾಯುತ್ತಿದ್ದಳು. ನಮ್ಮ ಗ್ರೂಪಿನ ಒಂದಿಬ್ಬರು ಗೆಳೆಯರು ಎರಡೆರಡು ತಿಂಗಳು ಆಕೆಯ ಬೆನ್ನು ಬಿದ್ದು ಸುತ್ತಾಡಿದರು. ಗೆರೆ ಹೊಡೆದು ಸುಸ್ತಾದರು. ಆಮೇಲೆ ನಾವೆಲ್ಲ ಓದು ಮುಗಿಸಿ ಚೆದುರಿಯೇ ಹೋದೆವೆಲ್ಲ. ಯಾವಾಗಲೋ ಗೊತ್ತಾಯಿತು; ಆಕೆ ದೊಡ್ಡ ಆಫೀಸರನೊಬ್ಬನನ್ನು ಮದುವೆಯಾಗಿದ್ದಳು.

ಆಮೇಲೆ ನೋಡಿದ್ದು ಅವತ್ತೇ; ನನ್ನ ಮನೆಯಲ್ಲಿ. ಪತ್ರಿಕೆಗಳಲ್ಲಿ ಕೆಲಸ ಮಾಡುವ ಮಿತ್ರರನ್ನು ಪತ್ತೆ ಮಾಡುವುದು ಸುಲಭ. ಪುಟ್ಟದೊಂದು ಪತ್ರ ಹಾಕಿ ಬಂದೇ ಬಿಟ್ಟಿದ್ದಳು.


ರವೀ, ನಂಗಿವತ್ತು ಜಗತ್ತಿನಿಂದ ರಜೆ ಸಿಕ್ಕಿದೆ. I want to be on my own. ಆತನ ಅಂಕೆಯಿಲ್ಲ. ಸದಾ ಅನುಮಾನಿಸುವ ಕಣ್ಣುಗಳಿಲ್ಲ. ತಣ್ಣಗಿನ ಪ್ರಶ್ನೆಗಳಿಲ್ಲ. ಬೆದರಿಕೆಯ ಮಾತುಗಳಿಲ್ಲ. ಜವಾಬ್ದಾರಿಯ ಜಂಜಡಗಳಿಲ್ಲ. ಹಾಲುಕ್ಕೀತು, ನೀರು ಚೆಲ್ಲೀತು, ಅವನಿಗೆ ಕಂಡೀತು, ಮನೆಗೆ ಮರಳುವುದು ತಡವಾದೀತು -ಉಹುಂ, ಯಾವ ಆತಂಕವೂ ಇಲ್ಲ. ಈ ಒಂದೇ ಒಂದು ದಿನದ ರಜೆ ನನ್ನ ಪಾಲಿನ ಭಾಗ್ಯ. ನಿನ್ನೊಂದಿಗೆ ಕಳೆಯುತ್ತೇನೆ ಅಂದಳು. ನಕ್ಕು ಬಿಟ್ಟೆ. ನನಗೆ ಬರುವ ಒಂದೆರಡು ವೆಜಿಟೇರಿಯನ್ ಅಡುಗೆಗಳನ್ನೇ ಸೊಗಸಾಗಿ, ರುಚಿಯಾಗಿ ಮಾಡಿದ್ದೆ. ಪ್ರೀತಿಯಿಂದ ಬಡಿಸಿದೆ. ವರ್ಷಗಟ್ಟಲೆ ಮಾಡಿ-ಬಡಿಸಿ-ದುಡಿದು ದಣಿದ ಹೆಣ್ಣು ಜೀವಕ್ಕೆ ಹಾಗೆ ಕೂಡಿಸಿ ಊಟ ಹಾಕುವ ಸೌಭಾಗ್ಯವನ್ನು ನಾನು ತುಂಬ ಎಂಜಾಯ್ ಮಾಡುತ್ತೇನೆ. ಅದರಲ್ಲೂ ಬಸುರಿ ಹೆಣ್ಣುಮಕ್ಕಳು, ನಿರ್ಗತಿಕ ಬಾಣಂತಿಯರು, ಮಕ್ಕಳು ಕೈ ಬಿಟ್ಟ ತಾಯಂದಿರು-ಇಂಥ ಸೇವೆ(?)ಯನ್ನು ಮನಸಾರೆ ಇಷ್ಟಪಡುತ್ತಾರೆ. ಆಕೆ ಚೆನ್ನಾಗಿ ಉಂಡಳು. ರಾತ್ರಿ ನಿದ್ರೆಗೆಟ್ಟು ಪ್ರಯಾಣಿಸಿದ್ದಳು. ಕಣ್ಣೆಳೆಯುತ್ತಿದ್ದವು. ಆತ ಆಫೀಸಿನಿಂದ ಬಂದು ಬಿಡುತ್ತಾನೆಂಬ ಆತಂಕವಿಲ್ಲದೆ ಮೈ ಮರೆತು ಮಲಗುತ್ತೇನೆಂದಳು. ನೋಡ ನೋಡ್ತಿದ್ದಂತೆಯೇ ಗೋಡೆ ಪಕ್ಕದಲ್ಲಿ ಉರುಳಿಕೊಂಡು ಮುಸುಕೆಳೆದು ಮಗುವಿನಂತೆ ಮಲಗಿಯೇಬಿಟ್ಟಳು. ಮಧ್ಯಾಹ್ನವೆಲ್ಲ ಹರಟೆ, ಕಾಲೇಜಿನ ನೆನಪು. ಹಾಡುಗಳ ಕಲರವ. ವಿಚಾರಣೆಗಳ ವಿನಿಮಯ. ಸಂಜೆ ಬಂದ ಮಗಳೊಂದಿಗೆ ಪಾರ್ಕು, ಹೊಟೇಲ್ಲು, ಸುತ್ತಾಟ. ರಾತ್ರಿ ಮಲಗುವ ಮುನ್ನ ಆಕೆಯಲ್ಲಿ ಪ್ರಶ್ನೆಗಳಿದ್ದವು;

''ರವೀ, ನಾನು ನಿನ್ನ ಮನೆಗೇ ಯಾಕೆ ಬಂದೆ?''

''ಗೊತ್ತಿಲ್ಲ''

''ನೀನು ನನಗೇನಾಗಬೇಕು?''

''ಏನಾದರೂ ಏಕಾಗಬೇಕು? ಸಂಬಂಧಗಳಿಗೆಲ್ಲ ಒಂದೊಂದು ಹೆಸರಿರಲೇಬೇಕಾ? ಹೆಂಡತಿ, ತಾಯಿ, ಅಕ್ಕ, ಪ್ರೇಯಸಿ, ಗೆಳತಿ, ಸೂಳೆ... ಥೂ! ಹೆಸರೇ ಇಲ್ಲದ ಒಂದು ಸಂಬಂಧವೂ ಇರಬಾರದೆ? ನೀನು ನೀನೇ. ನಾನು ನಾನೇ. ನಾವು ಒಬ್ಬರಿಗೊಬ್ಬರು ಏನೂ ಆಗಬೇಕಾಗಿಲ್ಲ. ಏನಾದರೂ ಆದರೇನೇ ರಗಳೆ!'' ಅಂದೆ. ಸ್ವಲ್ಪ ಹೊತ್ತು ಆಕೆ ಸುಮ್ಮನೇ ಇದ್ದಳು. ಆಮೇಲೆ ಇದ್ದಕ್ಕಿದ್ದಂತೆ

''ನಿನಗೆ ನಾನೇನು ಕೊಡಲಿ?''

''ಏನು ಕೊಡ್ತೀಯ? ಯಾಕೆ ಕೊಡ್ತೀಯ? ಇಷ್ಟಕ್ಕೂ ಕೊಡುವಂಥದ್ದು ನಿನ್ನಲ್ಲಿ ಏನಿದೆ? ದುಡ್ಡು ನಿನ್ನ ಗಂಡನದು, ಅಧಿಕಾರ, ಸಂಪತ್ತು, social status, ಅಸ್ತಿತ್ವ ಎಲ್ಲವೂ ನಿನ್ನ ಗಂಡನವೇ. ನಿನ್ನದೂಂತ ನಿನ್ನಲ್ಲಿ ಏನಿದೆ? ಸ್ವಂತಕ್ಕೊಂದು ಕನಸೂ ಇಲ್ಲದಂತೆ ಮಾಡಿಬಿಟ್ಟಿದ್ದಾನೆ ನಿನ್ನ ಗಂಡ. ಈ ಅಷ್ಟ ದರಿದ್ರನ ಮನೆಗೆ ಒಂದು ಹಿಡಿ ನೆಮ್ಮದಿ ಹುಡುಕಿಕೊಂಡು ನೀನೇ ಬಂದಿದ್ದೀಯ. ಸಾಲದೆಂಬಂತೆ ಕೊಡುವ ಮಾತನ್ನಾಡ್ತಿದೀಯ. ಏನಿದೆ ಕೊಡೋಕೆ?'' ಕೇಳಿದೆ.

'ಏನೂ ಇಲ್ಲ ಅಂತೀಯಾ? ಮೂವತ್ತೆರಡು ವರ್ಷದ, ಬೆಳೆದ ಹೆಂಗಸು ನಾನು. ನನ್ನ ಹತ್ರ ಕೊಡೋಕೆ ಏನೇನೂ ಇಲ್ವಾ? ಇಷ್ಟು ದಿನ ನಾನು ಬಾಳಿದ್ದು, ಬದುಕಿದ್ದು ಏನೇನೂ ಅಲ್ಲ ಅಂತೀಯಾ?' ಕನಲಿ ಕೇಳಿದಳು.

ಸುಮ್ಮನಿದ್ದೆ.

ಮೂವತ್ತೆರಡರ ಹೆಂಗಸು ಏನು ತಾನೇ ಕೊಡಬಲ್ಲಳು. ಹೆಚ್ಚೆಂದರೆ ಗುಪ್ತಕಾಮದ ಅನೈತಿಕ ಸಂತೋಷ ಕೊಟ್ಟಾಳು. ಅವಳತ್ತ ನೋಡಿದೆ. ಗೋಡೆಗೊರಗಿ ಕುಳಿತು ಸದ್ದಿಲ್ಲದೆ ಅಳುತ್ತಿದ್ದಳು. ಮತ್ತೊಂದು ಗೋಡೆಯ ಪಕ್ಕದಲ್ಲಿ ನನ್ನ ಮಗಳು ಮಲಗಿದ್ದಾಳೆ. ಎದ್ದು ಹೋಗಿ ಆಕೆಯ ಪಕ್ಕದಲ್ಲಿ ಕುಳಿತು ನಿಧಾನವಾಗಿ, ಆರ್ದ್ರಗೊಂಡ ದನಿಯಲ್ಲಿ ಮಾತನಾಡತೊಡಗಿದೆ;

''ನಿನ್ನ ಸಮಸ್ಯೆಯೇನೆಂಬುದು ನನಗೆ ಗೊತ್ತು. ಬೇಲಿಯ ಮಧ್ಯೆ ಅರಳಲಾಗದೆ ಸುಸ್ತಾಗಿದ್ದೀಯ. ಇದು ಬದುಕುವ ರೀತಿಯಲ್ಲ. ವ್ಯಕ್ತಿತ್ವವೇ ಇಲ್ಲದೆ ಎಷ್ಟು ವರ್ಷ ಬದುಕಿದರೂ ವ್ಯರ್ಥವೇ. ನಿನ್ನದೂಂತ ಒಂದು ದಿಕ್ಕು ಮೂಡಿಸಿಕೋ. ಅದರಲ್ಲಿ ಏನೇ ದಣಿವಾದರೂ ನಿಲ್ಲದೆ ಮುಂದಕ್ಕೆ ಹೋಗು. ಯಾವ ಹೆಂಗಸೂ ಸಾಧನೆಗಳಿಲ್ಲದೆ ಬರಿಗೈಲಿ ಸತ್ತು ಹೋಗಬಾರದು. ಕೊಡುವ-ಪಡೆಯುವ ಮಾತು ಮರೆತುಬಿಡು. ನಾನು ಕೊಡಬಲ್ಲಷ್ಟು ಸಿರಿವಂತನಲ್ಲ. ನಿನ್ನಿಂದ ಪಡೆಯುವಷ್ಟು ಆಸೆಬುರುಕನೂ ಅಲ್ಲ. ಇಲ್ಲದನ್ನು ಹುಡುಕಬೇಡ. ಪರಸ್ಪರರಿಗೆ ನಾವು ಕೊಡಬಹುದಾದ್ದು comfort ಮಾತ್ರ. ಅದಕ್ಕಿಂತ ಹೆಚ್ಚಿನದನ್ನು ಕೊಡಲು ಹೊರಟರೆ ನಮ್ಮ ಸಂಬಂಧಕ್ಕೊಂದು 'ಹೆಸರು' ಮೂಡುತ್ತದೆ. ಗಂಡನಿಂದ ತಪ್ಪಿಸಿಕೊಂಡು ಬಂದು ಮತ್ತೊಬ್ಬ ಗಂಡನ ಕೈಗೆ ಸಿಕ್ಕು ಬೀಳಬೇಡ. ನೆಮ್ಮದಿಯಾಗಿ ಮಲಗು. ನಾಳಿನ ಮುಂಜಾವು ನಿನ್ನ ಬದುಕಿನ ಮೊದಲ ಮುಂಜಾವಾಗಿ ಅರಳುತ್ತದೆ. ಎದ್ದು ಊರಿಗೆ ಹೊರಡು. ನಾನು-ನನ್ನ ಮಗಳು ತಡವಾಗಿ ಏಳುತ್ತೇವೆ ಎಬ್ಬಿಸುವ ಗೊಡವೆ ಬೇಡ. ಗುಡ್‌ನೈಟ್‌''

ಮರುದಿನ ಅವಳು ಮಲಗಿದ್ದ ಜಾಗದಲ್ಲಿ ಅವಳ ಹಳದಿ ದುಪಟ್ಟಾ ಮತ್ತು ದೊಡ್ಡ ಹಾಳೆಯಲ್ಲಿ ಬರೆದ Thanks ಎಂಬ ಆರಕ್ಷರಗಳ ರುಜು ಮಾತ್ರ ಇದ್ದವು.

-ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 21 August, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books