Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಹುಟ್ಟುವ ಮಕ್ಕಳ ತಂದೆ ಯಾರಾದರೇನು?

ಅವು ನಾಡಿನ ಆಸ್ತಿಯಲ್ಲವೇ?
ಇವರ ತಂದೆ ಯಾರೋ ಗೊತ್ತಿಲ್ಲ. ಇವರ ಜಾತಿ ಯಾವುದೋ ಗೊತ್ತಿಲ್ಲ. ಇಂತಹವರಿಗೆ ನೀವು ಮತ ಕೊಡುತ್ತೀರಾ? ಹಾಗಂತ ಮೊನ್ನೆ ಒಬ್ಬ ರಾಜಕಾರಣಿ ಮಾತನಾಡಿದಾಗ ನನಗೆ ಖೇದವಾಯಿತು. ಆದರೆ ಅಚ್ಚರಿಯಾಗಲಿಲ್ಲ. ಯಾಕೆಂದರೆ ನಮ್ಮ ಸಮಾಜಕ್ಕೆ ಅಂಟಿಕೊಂಡಿರುವ ರೋಗದ ಪ್ರತಿಬಿಂಬ ಅದು. ಆದರೆ ಈ ರೋಗ ಬಹಿರಂಗವಾಗಿ ಕಾಣಿಸಿಕೊಂಡಾಗ ಅದಕ್ಕೆ ವಿವಿಧ ಮೂಲೆಗಳಿಂದ ವ್ಯಕ್ತವಾದ ಪ್ರತಿಕ್ರಿಯೆ ನೋಡಿ ಸಂತಸವಾಯಿತು. ಯಾರ ತಂದೆ ಯಾರಾದರೇನು? ಅವರ ಜಾತಿ ಯಾವುದಾದರೇನು? ನಾವು ಒಬ್ಬ ವ್ಯಕ್ತಿಯನ್ನು ಗುರುತಿಸಬೇಕಿರುವುದು ಅವರ ತಂದೆ ಯಾರು ಅನ್ನುವುದರ ಮೂಲಕವೋ, ಜಾತಿಯ ಮೂಲಕವೋ ಅಲ್ಲ. ಸಾಧನೆಯಿಂದ ಗಮನಿಸಬೇಕು ಅನ್ನುವುದು ಬಹುತೇಕರ ಅಭಿಪ್ರಾಯವಾಗಿತ್ತು.

ನಮ್ಮ ಸಮಾಜ ಇಷ್ಟರ ಮಟ್ಟಿಗೆ ಸೆನ್ಸಿಟಿವ್ ಆಗಿದೆಯಲ್ಲ, ನಿಜಕ್ಕೂ ಇದಕ್ಕಾಗಿ ನಾವು ಸಂತಸಪಡಬೇಕು. ಇಂತಹವರ ಸಂಖ್ಯೆ ಹೆಚ್ಚಾಗಲಿ ಎಂದು ಬಯಸಬೇಕು. ನನ್ನ ಪ್ರಕಾರ ಭಾರತೀಯರಿಗಿರುವ ದೊಡ್ಡ ರೋಗವೆಂದರೆ ಇನ್ನೊಬ್ಬರ ವಿಷಯ ಹಿಡಿದುಕೊಂಡು ಕಟ್ಟೆ ಪಂಚಾಯ್ತಿ ಮಾಡುವುದು. ಇವತ್ತಿಗೂ ನೀವು ಗಮನಿಸಿ. ಒಂದು ಏರಿಯಾಕ್ಕೆ ಯಾರೋ ಬಂದು ಸೆಟ್ಲಾದರೆ ಅದ್ಹೇಗೋ ಮಾಡಿ ಅವರ ಕುಲ, ಗೋತ್ರ, ಜಾತಕಗಳನ್ನು ಕೆದಕುವ ತನಕ ನೆರೆಹೊರೆಯವರಿಗೆ ನಿದ್ರೆ ಬರುವುದಿಲ್ಲ. ಈ ವಿಶೇಷ ಗುಣದಿಂದಲೇ ಭಾರತೀಯರು ಪದೇಪದೇ ಗುಲಾಮಗಿರಿಯನ್ನು ಅನುಭವಿಸಿದ್ದು ಅನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಕಂಡವರ ವಿಷಯದ ಬಗ್ಗೆ ಉತ್ಸುಕತೆ ಇಟ್ಟುಕೊಳ್ಳುವುದನ್ನು ಬಿಟ್ಟು ಸಾಧನೆಯ ಕಡೆ ಗಮನ ಕೊಡಲಿ ನೋಡಿ. ಭಾರತದ ಶಕ್ತಿ ಈಗಿರುವುದಕ್ಕಿಂತ ಹತ್ತು ಪಟ್ಟು ಜಾಸ್ತಿಯಾಗುತ್ತದೆ. ಯಾರು ಯಾರಿಗೆ ಹುಟ್ಟಿದರು ಅನ್ನುವುದು ನಮಗೆ ಗೊತ್ತಾಗ್ಲೇ ಬೇಕು, ಯಾರು ಯಾರ ಜತೆ ಸಂಬಂಧವಿಟ್ಟುಕೊಂಡಿದ್ದಾರೆ ಅನ್ನುವುದು ನಮಗೆ ತಿಳಿಲೇಬೇಕು ಎಂಬಂತಹ ವಿಷಯಗಳ ಬಗ್ಗೆಯೇ ನಮ್ಮ ಸಮಾಜಕ್ಕೆ ಹೆಚ್ಚಿನ ಉತ್ಸುಕತೆ.

ಈ ಉತ್ಸುಕತೆ ಸಾವಿರಾರು ವರ್ಷಗಳಿಂದ ನಮ್ಮ ರಕ್ತದಲ್ಲಿ ಮುಂದುವರಿದುಕೊಂಡು ಬಂದಿರುವುದರ ಪರಿಣಾಮ ಏನಾಗಿದೆ ಎಂದರೆ, ಈ ದೇಶಕ್ಕೆ ದೊಡ್ಡ ಕೊಡುಗೆ ನೀಡಬಲ್ಲ ಅಸಂಖ್ಯಾತ ಜನರನ್ನು ನಿಶ್ಯಕ್ತಗೊಳಿಸುವ ಒಂದು ವ್ರಣ ಬೆಳೆದು ಕುಳಿತು ಬಿಟ್ಟಿದೆ. ಈ ವ್ರಣದಿಂದಾಗಿ ಈ ದೇಶದ ರೋಗ ನಿರೋಧಕ ಶಕ್ತಿಯೇ ಕಡಿಮೆಯಾಗಿ ಹೋಗಿದೆ. ನನ್ನ ಪ್ರಕಾರ, ಒಂದು ಸಮಾಜದಲ್ಲಿರುವ ಜನರ ಮನಸ್ಥಿತಿ ಹೇಗಿರಬೇಕೆಂದರೆ ಇವತ್ತಿಗಿಂತ ನಾಳೆಯನ್ನು ಚೆಂದಗೊಳಿಸುವುದು ಹೇಗೆ? ನಾವಷ್ಟೇ ಅಲ್ಲ, ನಮ್ಮ ಸುತ್ತ ಇರುವ ಜನರ ಜೀವನವನ್ನು ಚೆಂದಗೊಳಿಸಲು ನಾವು ಏನು ಮಾಡಬಹುದು ಅನ್ನುವ ಹಪಹಪಿ ಇರಬೇಕು. ಆದರೆ ನಮ್ಮ ಸಮಾಜದಲ್ಲಿ ಅನಗತ್ಯ ವಿಷಯಗಳ ಕುರಿತು ಇರುವ ಹಪಹಪಿ ಸಾಧನೆ ಮಾಡುವ ವಿಷಯದಲ್ಲಿ ಇಲ್ಲ. ಯಾರಾದರೂ ಸಾಧನೆಯ ದಾರಿಯಲ್ಲಿದ್ದರೆ ಯಥಾಪ್ರಕಾರ ಅದೇ ರೋಗ. ಇವರ ಅಪ್ಪ ಯಾರೋ ಗೊತ್ತಿಲ್ಲ. ಇವರ ಅಮ್ಮ ಯಾರೋ ಗೊತ್ತಿಲ್ಲ. ಇವರ ಜಾತಿ ಯಾವುದೋ ಗೊತ್ತಿಲ್ಲ. ಇವರು ಹಿಂಗಂತೆ, ಇವರು ಹಂಗಂತೆ. ಏನೇ ಸಾಧನೆ ಮಾಡಿದ್ದರೂ ಏನು ತಾನೇ ಪ್ರಯೋಜನ?

ಅರೇ ಇಸ್ಕೀ. ಯಾರು ಯಾರಿಗೆ ಹುಟ್ಟಿದ್ದರೂ ಏನು? ಹೆಸರು ಹೇಳಲಿಲ್ಲ ಅಂದ ಮಾತ್ರಕ್ಕೆ ಅದು ಮಕ್ಕಳ ಬಹುದೊಡ್ಡ ತಪ್ಪಾಗಿಬಿಡುತ್ತದಾ? ತುಂಬ ಸಲ ಪರಿಸ್ಥಿತಿ ಎಂತಹ ಕಠಿಣ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಅಂದರೆ ಈ ಮಗು ನನ್ನದು ಅಂತ ಹೇಳಿಕೊಳ್ಳುವ ಸ್ಥಿತಿಯಲ್ಲಿ ತಂದೆಯೋ, ತಾಯಿಯೋ ಇರುವುದಿಲ್ಲ. ಹಾಗಂತ ಹುಟ್ಟಿಸಿದ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಹಿಂಜರಿದು ಓಡಿ ಹೋದರೆ ಅದು ನಿಜಕ್ಕೂ ಅದು ತಪ್ಪು. ಅಕ್ಷಮ್ಯ ಅಪರಾಧ. ಯಾಕೆಂದರೆ ಒಂದು ಮಗು ಭೂಮಿಗೆ ಬಂದ ಮೇಲೆ ಅದರ ಪಾಲನೆ, ಪೋಷಣೆಯ ಹೊಣೆಯನ್ನು ತಂದೆ-ತಾಯಿಗಳು ಹೊರಲೇಬೇಕು. ಆದರೆ ಹಲವು ಎಪಿಸೋಡುಗಳಲ್ಲಿ ತಂದೆಯಾದವನು ಜಾಗ ಖಾಲಿ ಮಾಡಿಬಿಡುತ್ತಾನೆ. ಆದರೆ ತಾಯಂದಿರು ಹಾಗೆ ಓಡಿ ಹೋಗುವುದು ಕಡಿಮೆ. ಯಾಕೆಂದರೆ ಅದು ಅವರ ಜೀವದ ಒಂದು ಭಾಗ. ಹೀಗಾಗಿ ತಂದೆಯ ಪ್ರೀತಿಯಲ್ಲೋ, ತಾಯಿಯ ಪ್ರೀತಿಯಲ್ಲೋ ಕೊರತೆ ಅನುಭವಿಸುವ ಮಕ್ಕಳ ಬಗ್ಗೆ ಈ ಸಮಾಜಕ್ಕೆ ಒಂದು ಅಕ್ಕರೆ ಇರಬೇಕು.

ಈ ನೆಲದ ಮೇಲೆ ಒಂದು ಮಗು ಹುಟ್ಟಿದ ಮೇಲೆ ಅದು ಈ ನಾಡಿನ ಆಸ್ತಿ ಎಂದು ಎಲ್ಲಿಯ ತನಕ ನಾವು ಪರಿಗಣಿಸುವುದಿಲ್ಲವೋ ಮತ್ತು ಅದನ್ನೇ ಮಾನದಂಡವಾಗಿಟ್ಟುಕೊಂಡು ಅದನ್ನು ಬೆಳೆಸಲು ಸಹಕಾರ ನೀಡುವುದಿಲ್ಲವೋ ಅಲ್ಲಿಯವರೆಗೂ ಈ ದೇಶದ ಮನಸ್ಥಿತಿ ಒಂದು ರೀತಿಯ ವೈಕಲ್ಯಕ್ಕೊಳಪಟ್ಟೇ ಮುಂದುವರಿಯುತ್ತದೆ. ಇಂತಹ ವೈಕಲ್ಯ ಯಾವ ಸಮಾಜದಲ್ಲಿ ಉಸಿರಾಗಿ, ರಕ್ತವಾಗಿ ಬೆರೆತಿರುತ್ತದೋ ಅಂತಹ ಸಮಾಜವನ್ನು ಚಿಂದಿ ಮಾಡುವುದು ಬಹಳ ಸುಲಭ. ಯಾಕೆಂದರೆ ಅನಗತ್ಯ ವಿಷಯಗಳ ಬಗ್ಗೆ ಗಮನ ಹರಿಸುವುದೇ ಬದುಕಿನ ಮುಖ್ಯ ಅಧ್ಯಾಯವಾದಾಗ ಅಂತಹ ಸಮಾಜದ ಮೇಲೆ ದಾಳಿ ಮಾಡುವುದು ಬಹಳ ಸುಲಭ. ಈ ನೆಲದಲ್ಲಿ ಹುಟ್ಟಿದ ಮಕ್ಕಳ ಶಕ್ತಿಯನ್ನು ಬೆಳೆಸುತ್ತಾ ಹೋಗುವ ಕಡೆ ಗಮನ ಕೊಟ್ಟಿದ್ದರೆ ಈ ದೇಶ ನೂರಾರು ವರ್ಷಗಳ ಕಾಲ ಪರಕೀಯರ ಹಿಡಿತದಲ್ಲಿ ಇರುತ್ತಿರಲಿಲ್ಲ. ಬದಲಿಗೆ ಎಂತಹ ದಾಳಿಗಳನ್ನಾದರೂ ಎದುರಿಸುವ ಶಕ್ತಿಯನ್ನು ಹೊಂದಿರುತ್ತಿತ್ತು. ಆದರೆ ಉದ್ದಕ್ಕೂ ನೋಡಿ. ಭಾರತದ ಮೇಲೆ ಆಕ್ರಮಣ ಮಾಡಿದವರು, ವ್ಯಾಪಾರಕ್ಕೆ ಅಂತ ಬಂದವರಿಗೆ ಇಲ್ಲಿ ನಿರಾಯಾಸವಾಗಿ ನೆಲೆಯೂರಲು ಅವಕಾಶ ಸಿಕ್ಕಿದ್ದು ನಮ್ಮಲ್ಲಿನ ಒಡಕಿನಿಂದ.

ಇಂತಹ ಒಡಕಿನ ಮೂಲವೆಂದರೆ ಅನಗತ್ಯ ವಿಷಯಗಳ ಕುರಿತಾದ ಆಸಕ್ತಿ. ನನ್ನ ಬಳಿ ಮಾತನಾಡಲು ಬರುವ ಬಹಳಷ್ಟು ಜನರನ್ನು ನೋಡುತ್ತೇನಲ್ಲ. ಈ ಪೈಕಿ ನೈಂಟಿ ಪರ್ಸೆಂಟಿಗಿಂತ ಜಾಸ್ತಿ ಜನರ ಬಳಿ ಮಾತನಾಡಲು ಬೇರೆ ವಿಷಯಗಳೇ ಇರುವುದಿಲ್ಲ. ಯಥಾಪ್ರಕಾರ, ಯಾರು ಯಾರ ಜತೆ ಓಡಿ ಹೋದರು, ಯಾರು ಯಾರನ್ನು ಹುಟ್ಟಿಸಿ ನಾಪತ್ತೆಯಾದರು, ಯಾರ ಜತೆಗೆ ಯಾರಿಗೆ ಸಂಬಂಧವಿದೆ ಬರೀ ಇಂತಹ ವಿಷಯಗಳೇ. ಇದನ್ನು ಬಿಟ್ಟು ನಾವು ಮಾಡಬಹುದಾದ ಸಾಧನೆ ಏನು? ನಮಗಿಂತ ಚಿಕ್ಕವರು ಬೆಳೆಯಲು ಕೊಡಬಹುದಾದ ಬೆಂಬಲ ಏನು? ಅನ್ನುವಂತಹ ವಿಷಯಗಳ ಬಗ್ಗೆ ಒಂದು ಸಮಾಜ ಗಮನ ಕೊಟ್ಟರೆ ಅನುಮಾನವೇ ಬೇಡ. ಸಹಜವಾಗಿಯೇ ಒಂದು ಊರು, ಒಂದು ರಾಜ್ಯ, ಒಂದು ದೇಶ ಉದ್ಧಾರದ ದಾರಿಯಲ್ಲಿ ನಡೆಯತೊಡಗುತ್ತದೆ. ಇವತ್ತು ಈ ದೇಶ ಈ ಮಟ್ಟಿಗಾದರೂ ಬೆಳೆದಿದ್ದರೆ ಅಂತಹ ಚಿಂತನೆ ಇರುವವರು, ಅದನ್ನು ಅನುಷ್ಟಾನಗೊಳಿಸುವವರು ಸ್ವಲ್ಪ ಮಟ್ಟಿಗಾದರೂ ಇದ್ದಾರೆ ಎಂಬುವುದರಿಂದಾಗಿಯೇ ಹೊರತು, ಇಡೀ ವ್ಯವಸ್ಥೆಯ ಗರಿಷ್ಟ ಶಕ್ತಿಯ ಬಳಕೆಯಿಂದಲ್ಲ. ಹಾಗೊಂದು ವೇಳೆ ಇಡೀ ವ್ಯವಸ್ಥೆಯ ಶಕ್ತಿ ಹೀಗೆ ಪಾಸಿಟಿವ್ ಆಗಿ ಬಳಕೆಯಾದರೆ ಅನುಮಾನವೇ ಬೇಡ.

ಈ ದೇಶದ ಬಡತನ ತೊಲಗಲು, ದೌರ್ಬಲ್ಯ ತೊಲಗಲು ಬಹಳ ಕಾಲ ಬೇಕಿಲ್ಲ. ಹೀಗಾಗಿ ನಾನು ಹೇಳುವುದು. ಮೊದಲಿಗೆ ನಾವು ನಮ್ಮನ್ನೇ ಈ ವಿಷಯದಲ್ಲಿ ಪರೀಕ್ಷೆಗೊಳಪಡಿಸಿಕೊಳ್ಳಬೇಕು. ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಅನಗತ್ಯ ವಿಷಯಗಳ ಬಗ್ಗೆ ಎಷ್ಟು ಗಮನ ಕೊಡುತ್ತೇವೆ? ಸಾಧನೆಯ ಕಡೆ ಎಷ್ಟು ಗಮನ ಕೊಡುತ್ತೇವೆ? ಅನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಉತ್ತರ ಹುಡುಕುತ್ತಾ ಹೋಗಬೇಕು. ಒಂದು ಸಲ ಇಂತಹ ಪ್ರಯತ್ನಕ್ಕೆ ಕೈ ಹಾಕಿದರೆ ನಿಮಗೇ ನಿಮ್ಮ ನಿಜವಾದ ಶಕ್ತಿ ಎಷ್ಟು, ಅದು ಯಾವ ರೀತಿ ವ್ಯಯವಾಗುತ್ತಿದೆ ಅನ್ನುವುದು ಅರ್ಥವಾಗಿ ಬಿಡುತ್ತದೆ. ಒಂದು ವೇಳೆ ನಿಜಕ್ಕೂ ನಿಮ್ಮ ಶಕ್ತಿ ಇಂತಹ ವಿಷಯಗಳ ಬಗೆಗಿನ ಉತ್ಸುಕತೆಯಿಂದ ಕುಗ್ಗುತ್ತಿದೆ ಎಂಬುದು ಕನ್‌ಫರ್ಮ್ ಆದರೆ ಇನ್ನು ಮುಂದೆ ಇಂತಹ ವಿಷಯಗಳ ಬಗ್ಗೆ ಯೋಚಿಸುವುದಿಲ್ಲ ಎಂದು ತೀರ್ಮಾನ ಮಾಡಿ.

ಒಂದು ಸಲ ಇಂತಹ ತೀರ್ಮಾನವನ್ನು ನೀವು ಜಾರಿಗೊಳಿಸಿದರೆ ಸಹಜವಾಗಿಯೇ ನಿಮ್ಮ ಸುತ್ತ ಮುತ್ತ ಇರುವ ಕೆಲವರಾದರೂ ಅದರಿಂದ ಇಂಪ್ರೆಸ್ ಆಗುತ್ತಾರೆ. ಯಾರು ಯಾರಿಗೆ ಹುಟ್ಟಿದರು, ಯಾರಿಗೆ ಯಾರ ಜತೆ ಸಂಬಂಧವಿದೆ, ಯಾರು ಯಾರ ಜತೆ ಓಡಿ ಹೋದರು ಅನ್ನುವಂತಹ ವಿಷಯಗಳ ಬಗ್ಗೆ ಚಿಲ್ಲರೆಯಾಗಿ ಮಾತನಾಡುವುದನ್ನು ತನ್ನಿಂತಾನೇ ಕಡಿಮೆ ಮಾಡುತ್ತಾರೆ. ಕೇಳುವ ಆಸಕ್ತಿ ನಿಮಗಿಲ್ಲವಾದಾಗ ಪಾಪ, ಅವರಾದರೂ ಇಂತಹ ವಿಷಯಗಳನ್ನು ಕಟ್ಟಿಕೊಂಡು ಏನು ಮಾಡುತ್ತಾರೆ. ನೀವು ಇಂತಹ ವಿಷಯಗಳ ಬಗ್ಗೆ ಉತ್ಸುಕತೆ ಬೇಕಿಲ್ಲ ಎಂದು ನಿಮ್ಮ ಮನೆ ಮಂದಿಗೆ ಸ್ಪಷ್ಟವಾಗಿ ಹೇಳಿದರೆ ಅವರು, ಅಕ್ಕಪಕ್ಕದವರು ಬಂದು ಆಡುವ ಇಂತಹ ಮಾತುಗಳಿಗೆ ಕಿವಿ ಕೊಡುವುದನ್ನು, ಆಗಾಗ ಇಂತಹ ವಿಷಯಗಳಿಗಾಗಿ ಬಾಯಿ ಬಿಚ್ಚುವುದನ್ನು ಕಡಿಮೆ ಮಾಡುತ್ತಾರೆ. ನಿಮ್ಮ ಮನೆಯಲ್ಲಿ ಯಾರೂ ಇಂತಹ ವಿಷಯಗಳ ಬಗ್ಗೆ ಉತ್ಸುಕತೆ ಹೊಂದಿಲ್ಲ ಎಂಬುದು ಮನದಟ್ಟಾದರೆ ಇಂತಹ ಮಾತನಾಡುವ ಉತ್ಸುಕತೆ ಹೊಂದಿರುವವರಿಗೆ ಸಹಜವಾಗಿಯೇ ನಿರಾಸೆಯಾಗುತ್ತದೆ. ಇಂತಹವರು ಬದಲಾದರೆ ಸಂತೋಷ. ಬದಲಾಗದಿದ್ದರೆ ಅವರ ದಾರಿ ಅವರಿಗೆ. ನಿಮ್ಮ ದಾರಿ ನಿಮಗೆ.

ನೆನಪಿಡಿ, ಒಂದು ಸಲ ಕಂಡವರ ವಿಷಯ ಮಾತನಾಡುವುದನ್ನು ಕಡಿಮೆ ಮಾಡಿದ ಕೂಡಲೇ ಬೆಳವಣಿಗೆಯ ಮಾರ್ಗ ಓಪನ್ ಆಗಿಬಿಡುತ್ತದೆ. ಆ ಮಾರ್ಗದಲ್ಲಿ ಹೆಚ್ಚೆಚ್ಚು ವೇಗವಾಗಿ ನಡೆಯಲು ನಿಮ್ಮಿಂದ ಸಾಧ್ಯವಾಗುತ್ತದೆ. ಇವತ್ತು ನಮ್ಮ ಸಮಾಜದಲ್ಲಿ ಬೆಳೆಯಬೇಕಿರುವ ಗುಣ ಇದು. ಅಲ್ಲವೇ?

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 20 August, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books