Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ತಲೆ ಎತ್ತಲಿರುವ ತೃತೀಯ ರಂಗಕ್ಕೆ ಕಮ್ಯುನಿಸ್ಟರು ಅಪ್ರಸ್ತುತರಾಗಲಿದ್ದಾರೆಯೇ?

ರಾಷ್ಟ್ರ ರಾಜಕಾರಣದ ಪಡಸಾಲೆಯಲ್ಲಿ ತಲೆ ಎತ್ತಲು ಹೊರಟಿರುವ ತೃತೀಯ ರಂಗದ ಸ್ವರೂಪ ಬದಲಾಗಲಿದೆಯೇ, ಇಲ್ಲಿಯ ತನಕ ಇದರ ಮೂಲ ಶಕ್ತಿಯಂತೆ ಕಂಗೊಳಿಸುತ್ತಿದ್ದ ಕಮ್ಯುನಿಸ್ಟರು ಮುಂಬರುವ ಸಂಸತ್ ಚುನಾವಣೆಯ ನಂತರ ಈ ರಂಗಕ್ಕೆ ಅಪ್ರಸ್ತುತರಾಗಲಿದ್ದಾರೆಯೇ?

ಭಾರತದ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಹಾಗನ್ನಿಸುತ್ತಿರುವುದಂತೂ ನಿಜ. ಎಲ್ಲಕ್ಕಿಂತ ಮುಖ್ಯವಾಗಿ ಕಮ್ಯುನಿಸ್ಟರ ಸ್ಥಿತಿಯನ್ನೇ ತೆಗೆದುಕೊಳ್ಳಿ. ದಶಕಗಳಷ್ಟು ಕಾಲ ಪಶ್ಚಿಮ ಬಂಗಾಳ ಎಂಬ ಭದ್ರಕೋಟೆಯನ್ನು ಆಳಿದ ಕಮ್ಯುನಿಸ್ಟರೀಗ ತಮ್ಮ ಕೋಟೆಯಿಂದ ಹೊರಬಿದ್ದು ಎರಡು ವರ್ಷಗಳೇ ಕಳೆದಿವೆ. ಸ್ಟ್ರೀಟ್ ಫೈಟರ್ ಮಮತಾ ಬ್ಯಾನರ್ಜಿಯ ಆರ್ಭಟದ ಮುಂದೆ ಮಂಕಾದ ಕಮ್ಯುನಿಸ್ಟರು ಇತ್ತೀಚೆಗೆ ನಡೆದ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ತಲೆ ಎತ್ತಲಾಗದೆ ಮಕಾಡೆ ಮಲಗಿದ್ದಾರೆ. ಹೀಗೆ ಒಂದು ಕಡೆಯಿಂದ ಪಶ್ಚಿಮ ಬಂಗಾಳ ಎಂಬ ಕೋಟೆಯನ್ನು ವಶಪಡಿಸಿಕೊಂಡ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಕಮ್ಯುನಿಸ್ಟರನ್ನು ಎಗ್ಗು ಸಿಗ್ಗಿಲ್ಲದೆ ಬಡಿದು ಹಾಕಿದ್ದಾರೆ. ಹಾಗೆ ನೋಡಿದರೆ ಪ್ರಧಾನಿಯಾಗುವ ಕನಸಿನೊಂದಿಗೆ ತೃತೀಯ ರಂಗದ ನೆಲೆಗಟ್ಟನ್ನು ವಿಸ್ತರಿಸಲು ಹವಣಿಸುತ್ತಿರುವ ಉತ್ತರ ಪ್ರದೇಶದ ಮುಲಾಯಂಸಿಂಗ್ ಯಾದವ್ ಅವರಿಗಿಂತ ಮುಂಚಿತವಾಗಿ ತೃತೀಯ ರಂಗ ತಲೆ ಎತ್ತಬೇಕು ಎಂದು ಬಹಿರಂಗವಾಗಿ ಘೋಷಿಸಿದ್ದು ಇದೇ ಮಮತಾ ಬ್ಯಾನರ್ಜಿ.

ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ತಿರುಗಿ ಬಿದ್ದ ಮಮತಾ ಬ್ಯಾನರ್ಜಿಗೆ ಆದಷ್ಟು ಬೇಗ ದಿಲ್ಲಿಯಲ್ಲಿರುವ ಕಾಂಗ್ರೆಸ್ ನೇತೃತ್ವದ ಕೋಟೆಯನ್ನು ಒಡೆದು ಹಾಕುವ ತವಕ. ಆದ್ದರಿಂದಲೇ ಒಂದು ಕಡೆಯಿಂದ ಎನ್‌ಡಿಎ ಮೈತ್ರಿ ಕಡಿದುಕೊಳ್ಳಲು ಬಿಹಾರದ ನಿತೀಶ್ ಕುಮಾರ್ ಸಜ್ಜಾಗುತ್ತಿದ್ದಂತೆಯೇ, ತೃತೀಯ ರಂಗ ಕಟ್ಟೋಣ ಅಂತ ಅವರು ಕಿವಿ ಕಚ್ಚಿದ್ದರು. ಅಷ್ಟೇ ಅಲ್ಲ, ಒರಿಸ್ಸಾದ ನವೀನ್ ಪಾಟ್ನಾಯಕ್ ಜತೆಗೂ ಮಾತುಕತೆ ನಡೆಸಿ ತೃತೀಯ ರಂಗ ಕಟ್ಟೋಣ. ಯುಪಿಎ ದುರಾಡಳಿತಕ್ಕೆ ಅಂತ್ಯ ಹಾಡೋಣ ಅಂತ ಹೇಳಿದ್ದೂ ಅವರೇ. ಹೀಗೆ ಒಂದು ಕಡೆಯಿಂದ ಮಮತಾ ಬ್ಯಾನರ್ಜಿ ಅವರು ತಮ್ಮ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೃತೀಯ ರಂಗದ ಭಾಗವನ್ನಾಗಿಸಲು ಪ್ರಯತ್ನ ಆರಂಭಿಸುತ್ತಿದ್ದಂತೆಯೇ ರಾಷ್ಟ್ರ ರಾಜಕೀಯದಲ್ಲಿ ಒಂದು ಕಾವು ಕಾಣಿಸಿಕೊಂಡಿದ್ದು ರಹಸ್ಯವೇನೂ ಅಲ್ಲ.

ಯಾವಾಗ ಮಮತಾ ಬ್ಯಾನರ್ಜಿ ಈ ರೀತಿ ತೃತೀಯ ರಂಗದ ಕನಸು ಹೊತ್ತು ಯುಪಿಎ ಮತ್ತು ಎನ್‌ಡಿಎ ವಿರೋಧಿ ಶಕ್ತಿಗಳ ಜತೆ ಮಾತುಕತೆ ನಡೆಸತೊಡಗಿದರೋ ಇದರ ಬೆನ್ನಲ್ಲೇ ಹೊರಬಿತ್ತು ಕಮ್ಯುನಿಸ್ಟರ ಹತಾಶ ಹೇಳಿಕೆ. ತೃತೀಯ ರಂಗ ಕಟ್ಟುವ ವಿಷಯದಲ್ಲಿ ನಾವು ಮುಲಾಯಂಸಿಂಗ್ ಯಾದವ್ ಹಾಗೂ ದೇವೆಗೌಡರನ್ನು ನಂಬಲು ಸಾಧ್ಯವಿಲ್ಲ ಅಂತ ಆ ಪಕ್ಷದ ಹಿರಿಯ ನಾಯಕ ಸೀತಾರಾಂ ಯೆಚೂರಿ ಸ್ಪಷ್ಟವಾಗಿ ಹೇಳಿ ಬಿಟ್ಟರು. ಅಲ್ಲಿಗೆ ಕಮ್ಯುನಿಸ್ಟರ ದಾರಿ ಪಕ್ಕಾ ಆದಂತಾಯಿತು. ಅಷ್ಟೇ ಅಲ್ಲ, ದೇಶದಲ್ಲಿ ತಲೆ ಎತ್ತಲಿರುವ ತೃತೀಯ ರಂಗದ ಮುಂಚೂಣಿಯಲ್ಲಿ ಅವರು ಇರುವುದಿಲ್ಲ ಎಂಬುದೂ ಸ್ಪಷ್ಟವಾದಂತಾಯಿತು. ಅಂದಹಾಗೆ ದೇಶದ ರಾಜಕಾರಣದಲ್ಲಿ ತೃತೀಯ ರಂಗದ ಅಸ್ತಿತ್ವಕ್ಕೆ ಮೂಲ ಕಾರಣವಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧಿ ಮನಸ್ಥಿತಿ. ಎಪ್ಪತ್ತೈದರಲ್ಲಿ ಇಂದಿರಾ ಗಾಂಧಿ ಹೇರಿದ ತುರ್ತು ಸ್ಥಿತಿಯ ವಿರುದ್ಧ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಹೋರಾಡಿದ ಈ ಶಕ್ತಿಗಳು ಜನತಾಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿಯುವಂತೆ ಮಾಡಿದವು. ಆದರೆ ಈ ಶಕ್ತಿಯನ್ನು ಇಂದಿರಾಗಾಂಧಿ ಅಡ್ಡಡ್ಡ ಮಲಗಿಸಿಬಿಟ್ಟರು.

ಇದಾದ ನಂತರ ಕಾಂಗ್ರೆಸ್‌ನ ಆರ್ಥಿಕ ನೀತಿ ಹಾಗೂ ಬಿಜೆಪಿಯ ಕೋಮುವಾದದ ನಡುವೆ ಈ ದೇಶವನ್ನು ರಕ್ಷಿಸಲು ತಮ್ಮ ಅಗತ್ಯವಿದೆ ಎಂಬಂತೆ ಮೇಲೆದ್ದು ನಿಂತ ತೃತೀಯ ರಂಗ 1989ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಅಧಿಕಾರ ಹಿಡಿಯಿತು. ಆದರೆ ರಥಯಾತ್ರೆಗೆ ಮುನ್ನುಗ್ಗಿದ ಬಿಜೆಪಿಯ ನಾಯಕ ಅಡ್ವಾಣಿಯನ್ನು ಬಿಹಾರದಲ್ಲಿ ತೃತೀಯ ರಂಗದ ನಾಯಕ ಲಲ್ಲೂ ಪ್ರಸಾದ್ ಯಾದವ್ ತಡೆದರು. ಆಗ ಉರುಳಿ ಬಿತ್ತು ವಿ.ಪಿ.ಸಿಂಗ್ ನೇತೃತ್ವದ ಸರ್ಕಾರ. ಇದಾದ ನಂತರ ಮತ್ತೆ ತೃತೀಯ ರಂಗ ತಲೆ ಎತ್ತಿದ್ದು ತೊಂಬತ್ತಾರರಲ್ಲಿ. ಆಗ ಕಮ್ಯುನಿಸ್ಟ್ ನಾಯಕ ಜ್ಯೋತಿ ಬಸು, ಸಮಾಜವಾದಿ ನಾಯಕ ಮುಲಾಯಂಸಿಂಗ್ ಯಾದವ್, ಆರ್‌ಜೆಡಿ ನಾಯಕ ಲಲ್ಲೂ ಪ್ರಸಾದ್ ಯಾದವ್, ತೆಲುಗು ದೇಶಂ ನಾಯಕ ಚಂದ್ರಬಾಬು ನಾಯ್ಡು ಸೇರಿದಂತೆ ಯಾರೊಬ್ಬರೂ ಪ್ರಧಾನಿ ಹುದ್ದೆಗೇರಲು ಬಯಸಲಿಲ್ಲ.


ಯಾಕೆಂದರೆ ಈ ಹುದ್ದೆ ಎಷ್ಟು ದಿನಗಳ ಮಟ್ಟಿಗೆ ಗಟ್ಟಿ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಹಾಗೊಂದು ವೇಳೆ ಒಂದು ಸಲ ಪ್ರಧಾನಿಯಾದರೆ ಮತ್ತೆ ತಮ್ಮ ತಮ್ಮ ರಾಜ್ಯಗಳ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಹೀಗಾಗಿ ಮೊದಲು ತಮ್ಮ ರಾಜ್ಯದಲ್ಲಿ ನೆಲೆಯೂರೋಣ ಎಂಬ ಮನಸ್ಥಿತಿಯಿಂದಾಗಿ ಬಹುತೇಕ ನಾಯಕರು ಪ್ರಧಾನಿ ಗದ್ದುಗೆಯಿಂದ ದೂರ ಉಳಿದರು. ಇದ್ದುದರಲ್ಲಿ ಕಮ್ಯುನಿಸ್ಟ್ ನಾಯಕ ಜ್ಯೋತಿ ಬಸು ಅವರಿಗೆ ಪ್ರಧಾನಿಯಾಗುವ ಆಸೆ ಇತ್ತಾದರೂ, ಆ ಪಕ್ಷದ ಪಾಲಿಟ್ ಬ್ಯೂರೋ ಅದನ್ನು ಒಪ್ಪಲಿಲ್ಲ. ನಮ್ಮದೇ ಸ್ವಯಂಬಲದ ಮೇಲೆ ದೇಶದ ಅಧಿಕಾರ ಚುಕ್ಕಾಣಿ ಹಿಡಿದಾಗ ನಮ್ಮವರು ಪ್ರಧಾನಿಯಾಗಬೇಕು. ಇನ್ನೊಬ್ಬರ ಕೈಗೆ ಸಿಗುವ ಗೊಂಬೆ ಆಗಬಾರದು ಎಂದು ಅದು ಹೇಳಿದಾಗ ಬಸು ಸುಮ್ಮನಾದರು. ಆಗ ಪಟ್ಟ ಒಲಿದು ಬಂದಿದ್ದು ಕರ್ನಾಟಕದ ದೇವೆಗೌಡರಿಗೆ. ಮುಂದೆ ಹತ್ತು ತಿಂಗಳ ಕಾಲ ದೇಶದ ಪ್ರಧಾನಿ ಹುದ್ದೆಯ ಮೇಲೆ ಕುಳಿತ ದೇವೆಗೌಡ ಆನಂತರ ಕಾಂಗ್ರೆಸ್‌ನ್ನೇ ಹೋಳು ಮಾಡಲು ಹೋದ ಆಪಾದನೆಯ ಮೇಲೆ ಕೆಳಗೆ ಇಳಿಯಬೇಕಾಯಿತು.

ಅವತ್ತು ಕಾಂಗ್ರೆಸ್ ದಂಡನಾಯಕನಾಗಿದ್ದ ಸೀತಾರಾಂ ಕೇಸರಿ ಈ ವಿಷಯದಲ್ಲಿ ಎಷ್ಟು ವ್ಯಗ್ರರಾಗಿದ್ದರೆಂದರೆ, ನಮ್ಮ ಬೆಂಬಲ ಪಡೆದು, ನಮ್ಮನ್ನೇ ಹೋಳು ಮಾಡುವ ಈ ನಡವಳಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದವರೇ ತೃತೀಯ ರಂಗದ ನಾಯಕರ ಮೇಲೆ ಒತ್ತಡ ಹೇರಿದರು. ದೇವೆಗೌಡರನ್ನು ಪ್ರಧಾನಿ ಗದ್ದುಗೆಯಿಂದ ಕೆಳಗಿಳಿಸಿದರು. ಇದಾದ ನಂತರ ಇಂದ್ರಕುಮಾರ್ ಗುಜ್ರಾಲ್ ಆ ಜಾಗಕ್ಕೆ ಬಂದು ಕುಳಿತದ್ದು ಹಳೆಯ ಕತೆ. ಆದರೆ ಅವರೂ ತುಂಬ ದಿನಗಳ ಕಾಲ ಮುಂದುವರಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ತೊಂಬತ್ತೆಂಟರಲ್ಲಿ ಮತ್ತೆ ಪಾರ್ಲಿಮೆಂಟ್ ಚುನಾವಣೆ ಅನಿವಾರ್ಯವಾಯಿತು. ಆನಂತರ ತೃತೀಯ ರಂಗ ಮತ್ತೆ ತಲೆ ಎತ್ತಲಿಲ್ಲ. ಆದರೆ ಈಗ ತೃತೀಯ ರಂಗದ ರಚನೆಗೆ ಕಾಲ ಪಕ್ವವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ತೃತೀಯ ರಂಗ ಎಷ್ಟು ಫ್ಲೆಕ್ಸಿಬಲ್ ಆಗಿದೆ ಎಂದರೆ ಅದಕ್ಕೀಗ ಅಧಿಕಾರ ಹಿಡಿಯುವುದೇ ಮುಖ್ಯ. ಹೀಗಾಗಿ ಎನ್‌ಡಿಎ ಜತೆ ಇರಲಾಗದವರು, ಕಾಂಗ್ರೆಸ್ ಜತೆ ಸೇರಲಾಗದವರ ಒಂದು ಪಡೆಯನ್ನು ಕ್ರೋಢೀಕರಿಸಿಕೊಂಡು ಯುದ್ಧ ಮಾಡುವುದು ಅದಕ್ಕೆ ಸುಲಭ ಆಗಲಿದೆ.

ಈ ಯುದ್ಧದ ರಣತಂತ್ರ ಕೂಡ ಯಾವುದೇ ಒಬ್ಬ ನಾಯಕನ ಕೈಲಿ ಕೇಂದ್ರೀಕೃತವಾಗಿರುವುದಿಲ್ಲ. ತೃತೀಯ ರಂಗ ಎಂಬ ಸೈನ್ಯದ ದಂಡನಾಯಕ ಕೂಡ ಒಬ್ಬನೇ ಆಗಿರುವುದಿಲ್ಲ. ಉತ್ತರ ಪ್ರದೇಶದಲ್ಲಿ ಮುಲಾಯಂಸಿಂಗ್ ಯಾದವ್ ತಮ್ಮ ಸ್ವಂತ ಬಲದ ಮೇಲೆ ಹೋರಾಡಿ ನಲವತ್ತರಿಂದ ಐವತ್ತು ಸೀಟು ಗೆದ್ದುಕೊಂಡು ಬರಲು ಗಮನ ಕೇಂದ್ರೀಕರಿಸುತ್ತಾರೆ. ನಿತೀಶ್ ಕುಮಾರ್, ಲಾಲೂ ಅವರಂತಹವರು ತಮ್ಮ ತಮ್ಮ ಸೈನ್ಯದೊಂದಿಗೆ ಬಿಹಾರದ ನೆಲೆದಲ್ಲಿ ಬಡಿದಾಡಿ ಎಷ್ಟು ಸ್ಥಾನಗಳನ್ನು ಗೆದ್ದುಕೊಂಡು ಬರಬೇಕು, ಎಷ್ಟು ಸ್ಥಾನಗಳನ್ನು ಗೆದ್ದರೆ ತಮಗೆ ತೃತೀಯ ರಂಗದಲ್ಲಿ ಸಿಗುವ ಗೌರವ ಹೆಚ್ಚಾಗುತ್ತದೆ ಅಂತ ಮಾತ್ರ ಯೋಚಿಸುತ್ತಾರೆ. ಇದೇ ರೀತಿ ಕರ್ನಾಟಕದ ದೇವೆಗೌಡ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಒರಿಸ್ಸಾದ ನವೀನ್ ಪಾಟ್ನಾಯಕ್ ಸೇರಿದಂತೆ ಎಲ್ಲ ನಾಯಕರೂ ತಮ್ಮ ತಮ್ಮ ರಾಜ್ಯಗಳಲ್ಲಿ ಹೋರಾಟ ನಡೆಸಿ ತಮ್ಮಿಂದಾದಷ್ಟು ಸೀಟುಗಳನ್ನು ಗೆಲ್ಲಿಸಿಕೊಂಡು ಬರುತ್ತಾರೆ.

ಹೀಗಾಗಿ ತೃತೀಯ ರಂಗ ಎಂಬ ಸೈನ್ಯದ ಸಮಗ್ರ ನೇತೃತ್ವ ವಹಿಸಿಕೊಳ್ಳುವ ತಲೆ ನೋವು ಯಾವುದೇ ಒಬ್ಬ ನಾಯಕನ ಮೇಲಿರುವುದಿಲ್ಲ. ಬದಲಿಗೆ ಅವರವರ ಪಾಳೇಪಟ್ಟುಗಳಲ್ಲಿ ತಮ್ಮ ಕೈಲಾದಷ್ಟು ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುವ ಕೆಲಸ ಮಾಡಿ ತೃತೀಯ ರಂಗದ ಕನಸಿಗೆ ಶಕ್ತಿ ತುಂಬುತ್ತಾರೆ. ಅಂದಹಾಗೆ ಈ ಸಲ ಗಮನಿಸಬೇಕಾದ ಸಂಗತಿ ಎಂದರೆ ಕೋಮುವಾದ ಹಾಗೂ ಸೆಕ್ಯುಲರಿಸಂ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ತೃತೀಯ ರಂಗದ ಬಹುತೇಕ ಪಕ್ಷಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಬದಲಿಗೆ ಮೊದಲು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂಬುದನ್ನೇ ಮುಖ್ಯವಾಗಿಸಿಕೊಂಡಿವೆ. ಉದಾಹರಣೆಗೆ ಕರ್ನಾಟಕದ ಪಡಸಾಲೆಯನ್ನೇ ನೋಡಿ. ಮೊನ್ನೆ ಮೊನ್ನೆಯ ತನಕ ದೇವೆಗೌಡರ ನೇತೃತ್ವದ ಜೆಡಿಎಸ್ ಮಾತೆತ್ತಿದರೆ ಸೆಕ್ಯುಲರ್ ನೀತಿಯ ಕುರಿತು ಮಾತನಾಡುತ್ತಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅದರ ಈ ಘೋಷ ವಾಕ್ಯದಿಂದ ದೊಡ್ಡ ಲಾಭವೇನೂ ಆಗಲಿಲ್ಲ. ಈ ಘೋಷ ವಾಕ್ಯವನ್ನು ನೋಡಿದರೂ ಅಲ್ಪಸಂಖ್ಯಾತರು ದೊಡ್ಡ ಮಟ್ಟದಲ್ಲೇ ಕಾಂಗ್ರೆಸ್‌ಗೆ ಬೆಂಬಲ ನೀಡಿದರು. ಪರಿಣಾಮವಾಗಿ ಈಗ ದೇವೆಗೌಡರಿಗೆ ಸೆಕ್ಯುಲರಿಸಂ ಕುರಿತು ಒಲವಿದೆಯಾದರೂ ಕುಮಾರಸ್ವಾಮಿ ಅವರಿಗೆ ಹೇಳಿಕೊಳ್ಳುವಂತಹ ಒಲವಿಲ್ಲ.

ಜೆಡಿಎಸ್ ಪಾಲಿಗೆ ದೇವೆಗೌಡರೇ ರಾಜನಾದರೂ, ಯುದ್ಧದಲ್ಲಿ ಹೋರಾಡುವ ದಂಡನಾಯಕ ಕುಮಾರಸ್ವಾಮಿಯೇ ಅಲ್ಲವೇ? ಹೀಗಾಗಿ ರಂಗಕ್ಕಿಳಿಯುವ ದಂಡನಾಯಕನ ಮನಸ್ಥಿತಿ ಬದಲಾದಾಗ ಪಕ್ಷದ ಮನಸ್ಥಿತಿಯೂ ಬದಲಾಗುತ್ತದೆ. ಹೀಗಾಗಿ ಮುಂಬರುವ ಪಾರ್ಲಿಮೆಂಟ್ ಚುನಾವಣೆಯ ವೇಳೆಗೆ ಒಕ್ಕಲಿಗ, ಲಿಂಗಾಯತ ಮತಬ್ಯಾಂಕ್‌ನ್ನು ಕ್ರೋಢೀಕರಿಸಿ ಹೋರಾಡಬೇಕು ಎಂಬ ಆಕಾಂಕ್ಷೆ ಅವರಲ್ಲಿದೆ. ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಾಗೂ ವಿಧಾನಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕೆ ಇದೇ ಮುಖ್ಯ ಕಾರಣ. ಅರ್ಥಾತ್, ಇಲ್ಲಿರುವುದು ಸಿದ್ಧಾಂತದ ಪ್ರಶ್ನೆ ಅಲ್ಲ. ಉಳಿವಿನ ಪ್ರಶ್ನೆ. ದೇಶದ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ವಿರೋಧಿ ಶಕ್ತಿಗಳು ಈ ರೀತಿ ತಮ್ಮ ಅಸ್ತಿತ್ವದ ಉಳಿವಿಗಾಗಿ, ತಲೆ ಎತ್ತಿ ನಿಲ್ಲಲೇಬೇಕು ಎಂಬ ಹಂಬಲಕ್ಕಾಗಿ ರಣರಂಗಕ್ಕಿಳಿಯುವ ತಯಾರಿಯಲ್ಲಿವೆ. ಹೀಗಾಗಿ ಈ ಸಲ ರೂಪುಗೊಳ್ಳುವ ತೃತೀಯ ರಂಗ ಫೈನಲಿ, ಕಾಂಗ್ರೆಸ್ ಅಥವಾ ಬಿಜೆಪಿಯನ್ನು ತಾತ್ವಿಕ ಕಾರಣಗಳಿಗಾಗಿ ವಿರೋಧಿಸುವ ಕಡೆ ಹೆಚ್ಚಿನ ಗಮನ ನೀಡುವುದಿಲ್ಲ. ಬದಲಿಗೆ ಈ ಪೈಕಿ ಯಾವ ಶಕ್ತಿ ತನ್ನ ಅಸ್ತಿತ್ವವನ್ನು ಬಡಿದು ಹಾಕಲು ಹೊರಟಿದೆಯೋ ಅದರ ವಿರುದ್ಧ ಹೋರಾಡುವುದನ್ನೇ ಮುಖ್ಯವಾಗಿಸಿಕೊಂಡಿದೆ.

ಒಂದು ಸಲ ಹೋರಾಟ ಮುಗಿದ ಮೇಲೆ ತಮ್ಮ ಅಸ್ತಿತ್ವ ಉಳಿದುಕೊಂಡರೆ, ತೃತೀಯ ರಂಗ ಎಂಬುದು ಅಧಿಕಾರದ ಕೇಂದ್ರ ಸ್ಥಾನಕ್ಕೆ ಬಂದು ನಿಲ್ಲುವ ಸನ್ನಿವೇಶ ಸೃಷ್ಟಿಯಾದರೆ ಕಾಂಗ್ರೆಸ್ ಅಥವಾ ಬಿಜೆಪಿಯ ಬೆಂಬಲ ಪಡೆಯಲು ಹಿಂಜರಿಯುವುದಿಲ್ಲ. ಯಾಕೆಂದರೆ ಈಗ ತಲೆ ಎತ್ತುತ್ತಿರುವ ತೃತೀಯ ರಂಗದ ಪಾಲುದಾರ ಪಕ್ಷಗಳಿಗೆ ಅಸ್ತಿತ್ವ ಉಳಿಸಿಕೊಳ್ಳುವುದು ಮುಖ್ಯ. ಇವತ್ತು ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ತೊಂಬತ್ತಾರರಲ್ಲಿ ನರಸಿಂಹರಾಯರ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಜಾಗತೀಕರಣ ಎಂಬ ಬಿರುಗಾಳಿ ಭಾರತದ ಹೆಬ್ಬಾಗಿಲನ್ನು ತೆರೆದು ಒಳ ನುಗ್ಗಿತು. ಆದಾದ ನಂತರ ಅದರ ಹೊಡೆತ ಭಾರತವನ್ನು ತಲ್ಲಣಗೊಳಿಸುತ್ತಲೇ ಬಂದಿದೆ. ಒಂದು ಕಡೆಯಿಂದ ಅದು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಾ ಬಂದರೂ, ಮತ್ತೊಂದು ಕಡೆಯಿಂದ ಭಾರತದ ನೆಲ, ಜಲ, ಗಾಳಿ ಎಲ್ಲವನ್ನೂ ಆವರಿಸುತ್ತಾ, ಎಲ್ಲದರ ಮೇಲೂ ತನ್ನ ಹಚ್ಚೆ ಒತ್ತುತ್ತಾ ಬಂದಿದೆ. ಇದನ್ನು ಕಾಂಗ್ರೆಸ್ ಕೂಡ ಅನುಮೋದಿಸಿಕೊಂಡೇ ಬಂದಿದೆ.

ಹೋಗಲಿ, ಬಿಜೆಪಿಯಾದರೂ ಇದರ ವಿರುದ್ಧ ಇದೆಯೇ ಎಂದರೆ ಅದೂ ಇಲ್ಲ. ಯಥಾಪ್ರಕಾರ ಅದು ಕೂಡ ಈ ವಿಷಯದಲ್ಲಿ ರಾಜಿ ಮಾಡಿಕೊಂಡಿದೆ. ಹೀಗಾಗಿ ದೇಶದ ಆರ್ಥಿಕ ನೀತಿಯ ವಿಷಯ ಬಂದರೆ ಕಾಂಗ್ರೆಸ್ ಆಗಲೀ, ಬಿಜೆಪಿಯಾಗಲೀ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗಾಗಿ ಆರ್ಥಿಕ ನೀತಿಯ ವಿಷಯವನ್ನು ಮುಂದಿಟ್ಟುಕೊಂಡೋ, ಕೋಮುವಾದದ ವಿಷಯವನ್ನು ಮುಂದಿಟ್ಟುಕೊಂಡೋ ದೊಡ್ಡ ಮಟ್ಟದಲ್ಲಿ ಹೋರಾಡುವ ಮನಸ್ಥಿತಿಯಲ್ಲಿ ತೃತೀಯ ರಂಗದ ಪಕ್ಷಗಳಿಲ್ಲ. ಅವುಗಳದೇನಿದ್ದರೂ ಮೊದಲು ಉಳಿವಿನ ಪ್ರಶ್ನೆ. ಆನಂತರ ಕಾಂಗ್ರೆಸ್ ಹಾಗೂ ಬಿಜೆಪಿಯ ನೀತಿಗಳೇನಿವೆ ಅದರ ದಾರಿಯಲ್ಲೇ ಸಾಗುವ ಶಕ್ತಿಯಾಗಿ ಅದು ತಲೆ ಎತ್ತಿ ನಿಲ್ಲಬೇಕಾಗುತ್ತದೆ. ಹೀಗಾಗಿ ಕಾಂಗ್ರೆಸ್, ಬಿಜೆಪಿಯ ನೀತಿಗಳ ವಿರುದ್ಧ ಹೋರಾಡುವ ಉದ್ದೇಶದಿಂದ ಜನ್ಮ ತಾಳಿದ ತೃತೀಯ ರಂಗ ಮುಂಬರುವ ಪಾರ್ಲಿಮೆಂಟ್ ಚುನಾವಣೆಯ ನಂತರ ಅಧಿಕಾರಕ್ಕೆ ಬಂದರೆ ಅದು ಕೂಡ ಕಾಂಗ್ರೆಸ್ ಮತ್ತು ಬಿಜೆಪಿಯ ಪಡಿಯಚ್ಚಿನ ಥರ ಆಗಬಹುದೇ ಹೊರತು ಇನ್ನೇನೂ ಆಗುವುದಿಲ್ಲ. ಅದೇ ಇವತ್ತಿನ ವಾಸ್ತವ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 19 August, 2013
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books