Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಸುಖವೆಂಬುದು ಹಿಮ್ಮಡಿಯ ಅಡಿಗೇ ಇರುವಾಗ ಅಲ್ಲಿ ಇಲ್ಲಿ ಹುಡುಕೋದೇ?

ಸುಖವೆಂಬುದು ಹಿಮ್ಮಡಿಯ ಅಡಿಗೇ ಇರುವಾಗ ಅಲ್ಲಿ ಇಲ್ಲಿ ಹುಡುಕೋದೇ?

\'\'A pleasure tuip?\'\'
ಜರ್ಮನಿಯ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದ ಕಸ್ಟಮ್ಸ್
ಅಧಿಕಾರಿ ನಿಲ್ಲಿಸಿ ಕೇಳಿದ. ಇಲ್ಲ ಮಹರಾಯಾ, ನಿಮ್ಮ ದೇಶದ ಒಂದು ಸರೋವರ ಅದರ ಎದುರಿಗಿನ ಕಾಡು ಮತ್ತು ಅದರಾಚೆಯ ಹಿಮ ಪರ್ವತ ನನಗೆ ಹುಚ್ಚು ಹಿಡಿಸಿ ಬಿಟ್ಟಿವೆ. ಅಲ್ಲಿ ಅಲೆಯಲು ಹೊರಟಿದ್ದೇನೆ ಅಂದೆ. ಅವನಿಗೆ ವಿಚಿತ್ರವೆನ್ನಿಸಿತು.

\'\'ಎಷ್ಟು ಹಣ ತಂದಿದ್ದೀಯಾ?\'\' ಕೇಳಿದ.

\'\'Not much\'\' ಅಂದೆ.

\'\'How much is not much?\'\' ಅಂದವನು ನಕ್ಕ.

ಕಿಸೆಯಲ್ಲಿದ್ದ ಯೂರೋಗಳನ್ನು ಎಣಿಸಿ ತೋರಿಸಿದೆ. ಪರವಾಗಿಲ್ಲ ಹೊರಡು ಅಂದ. ನಿಜ ಹೇಳಬೇಕೆಂದರೆ ನನ್ನ ಅಷ್ಟೂ ಖರ್ಚು ವೆಚ್ಚ, ಕೋಣೆಯ ಬಾಡಿಗೆ, ಊಟ ಇತ್ಯಾದಿಗಳ ವ್ಯವಸ್ಥೆಯನ್ನೆಲ್ಲ ದತ್ತಾ ಹೆಗಡೆ ಮಾಡಿದ್ದರು. ವಿಮಾನವಿಳಿಯುತ್ತಿದ್ದಂತೆಯೇ ಅವರ ಮಿತ್ರ ನರಸಿಂಹ ಹೆಬ್ಬಾರ್ ನನ್ನನ್ನು ಕಪ್ಪಗೆ ಮಿರುಗುಡುವ ಮರ್ಸಿಡಿಸ್‌ನಲ್ಲಿ ಕೂಡಿಸಿ ನೇರವಾಗಿ ಗಾರ್ಮಿಷ್‌ಗೆ ಕಳಿಸಿದರು. ನನ್ನ ಅತಿ ಪ್ರೀತಿಯ ಐಬ್‌ಸೀ ಸರೋವರದ ಪಕ್ಕದ, ಐಬ್‌ಸೀ ಹೊಟೇಲಿನ ಅದ್ಭುತ ಕೋಣೆ. ಮೊನ್ನೆ ಮೊನ್ನೆಯ ತನಕ ಹೆಪ್ಪುಗಟ್ಟಿದ್ದ ಸರೋವರ ಈಗೀಗ ಕರಗುತ್ತಿದೆ. ಅದರಲ್ಲಿ ಅಲ್ಲೊಂದು ಇಲ್ಲೊಂದು ನಾವೆ ಓಡಾಡುತ್ತಿವೆ. ಹೀಗಾಗಿ ನೀರಿನಲ್ಲಿ ಅಲೆಯ ಉಂಗುರ. ಎದುರಿಗೆ ಕಾಣುವ ಜಿಗ್‌ಸುಚ್‌ಪೇ ಪರ್ವತದ ಮೇಲೆ ಹಿಮವಿನ್ನೂ ಬೀಳುತ್ತಲೇ ಇದೆ. ಅಲ್ಲಿ ಟೆಂಪರೇಚರು ಮೈನಸ್ three. ಒಂದು ಸಲ ಕಣ್ಣೆತ್ತಿ ನೋಡಿದರೆ ಸರೋವರ, ಕಾಡು ಮತ್ತು ಮಂಜು ಬೆಟ್ಟ ನೋಡಲು ಸಿಕ್ಕುವುದು ಅಪರೂಪ. ಐಬ್‌ಸೀ ಸರೋವರದ ಸುತ್ತ ಒಮ್ಮೆ ನಡೆದರೆ ಬರೋಬ್ಬರಿ ಏಳು ಕಿಲೋಮೀಟರಾಗುತ್ತದೆ. ಒಂದು poinನಿಂದ ಧುಮುಕಿ ಈಜಬಹುದು. ಆ ಚಳಿಯಲ್ಲಿ ಧುಮುಕಿ ಈಜಿ ಈಚೆಗೆ ಬರುವುದುಂಟೆ?

Well, ಈ ನಿಸರ್ಗ, ಕಣಿವೆ, ಕಾಡು, ಪರ್ವತ, ಮಂಜು, ಪಯಣ ಎಲ್ಲವೂ ಸಂತಸ ಕೊಡುತ್ತವೆ ನಿಜ. ಮನುಷ್ಯ ಒಂದು ವರ್ಷವಿಡೀ ಚೆನ್ನಾಗಿ ದುಡಿಯಬೇಕು. ದಿನನಿತ್ಯಕ್ಕೆ ಬೇಕಾದ ಖರ್ಚು ಮಾಡಿಯೂ ಒಂದಷ್ಟು ಹಣ ಎತ್ತಿಡಬೇಕು. ಹಾಗೆ ಎತ್ತಿಟ್ಟ ಹಣದ ಗೋಲಕ ತುಂಬಿದ ಕೂಡಲೆ rough ಆಗಿ ಒಂದು road map ಮಾಡಿಕೊಂಡು ಜಗತ್ತಿನ ಅಥವಾ ನಮ್ಮದೇ ದೇಶದ ಯಾವುದಾದರೂ ಒಂದು ಜಾಗಕ್ಕೆ ಹೊರಟು ಬಿಡಬೇಕು. ಕೂಡಿಟ್ಟ ಹಣ ಖರ್ಚಾಗುತ್ತದೆ ನಿಜ. ಆದರೆ ಖರ್ಚು ಮಾಡದಿದ್ದರೆ ಅಷ್ಟೆಲ್ಲ ಹಣ ಕೂಡಿಟ್ಟು ಮಾಡುವುದಾದರೂ ಏನು? ಹೊಸ ಜಾಗ, ಹೊಸ ಜನ, ಹೊಸ ಸಂಸ್ಕೃತಿ, ಹವೆ, ಹವೆಯಲ್ಲಿನ ಘಮ, ವಿಚಿತ್ರವೆನಿಸುವ ಬೆಳಕು, ಮಧ್ಯಾಹ್ನ ಮೂರಕ್ಕೇ ಆಗುವ ಕತ್ತಲು-ಇವೆಲ್ಲ ದಿವ್ಯ ಅನುಭವಗಳೇ.

ಆದರೆ ಇದನ್ನು pleasure trip ಅಂತೀರಾ?

Sorry.

ನೀವು ಸಾವಿರಾರು ಯೂರೋ-ಡಾಲರು-ಲಕ್ಷಾಂತರ ರುಪಾಯಿ ಖರ್ಚು ಮಾಡಿಕೊಂಡು pleasure ಹುಡುಕಲು ಹೊರಟದ್ದೇ ಆದರೆ ಖಂಡಿತವಾಗ್ಯೂ ನೀವು ದಡ್ಡರು. ಜಗತ್ತಿನ ಯಾವ ಮೂಲೆಯಲ್ಲೂ pleasure ಎಂಬ ವಸ್ತು ಇಲ್ಲ. ಅದು ಇರುವುದು ನಿಮ್ಮದೇ ಕಾಲಿನ ಹಿಮ್ಮಡಿಯ ಕೆಳಗೆ. ಈ ಮಾತನ್ನು ನಾನು ಸುಮ್ಮನೆ ಹೇಳುತ್ತಿಲ್ಲ. ಭಾರತದಲ್ಲೇ ಚಿತ್ರವಿಚಿತ್ರದ ಊರು, ಜಾಗೆ, ಕಾಡು, ನದಿ, ನದಾರಿ ನೋಡಿದ್ದೇನೆ. ಮೂವತ್ತಕ್ಕೂ ಹೆಚ್ಚು ದೇಶ ತಿರುಗಿದ್ದೇನೆ. ಹಳಸಲು ಚಿತ್ರಾನ್ನದಿಂದ ಹಿಡಿದು ಬಿಸ್ಸಿ ಬಿಸಿ ಬಿರಿಯಾನಿ ತನಕ, ಲಗೇಜ್ ಗಾಡಿಯಿಂದ ಹಿಡಿದು ಲುಫ್ತಾನ್ಸಾ ವಿಮಾನದ ತನಕ, ಕಳ್ಳಬಟ್ಟಿ ಸಾರಾಯಿಯಿಂದ ಹಿಡಿದು ಸ್ಕಾಟ್‌ಲ್ಯಾಂಡ್‌ನ ಶುದ್ಧ ಸ್ಕಾಚ್‌ನ ತನಕ-yes, ಎಲ್ಲ ಅನುಭವಿಸಿದ್ದೇನೆ. ಹೊಗಳಿಕೆ, ತೆಗಳಿಕೆ, ಸೋಲು, ಗೆಲುವು, ಯುದ್ಧ, ಕದನ ಯಾವುದೂ ನನಗೆ ಅಪರಿಚಿತವಲ್ಲ. ಮೈಥುನದಲ್ಲಿ ಮೈ ಮರೆತಂತೆಯೇ ಕೆಲಸಕ್ಕೆ ಕುಳಿತಾಗಿನ ಚಿರತೆಯೆಚ್ಚರವೂ ಸರಿಯೇ. ಆದರೆ ಅಂತಿಮವಾಗಿ ನನಗೆ ಮನವರಿಕೆಯಾದದ್ದೆಂದರೆ,; pleasure ಅಥವಾ ಸಂತಸ ಇರುವುದು ನನ್ನದೇ ಹಿಮ್ಮಡಿಯ ಅಡಿಯಲ್ಲಿ.

ನೀವು ಪರೀಕ್ಷಿಸಿ ನೋಡಿ. \'ಊರೂರು ತಿರುಗಿ ಬಂದರೂ ನಮ್ಮೂರೇ ವಾಸಿ\' ಅಂತ ಖಂಡಿತ ಹಿಂತಿರುಗಿದ ಮೇಲೆ ಅನ್ನಿಸದೆ ಇರದು. ನನಗಂತೂ, ನನ್ನ ಕಾರು ಪದ್ಮನಾಭನಗರದೊಳಕ್ಕೆ ತಿರುಗಿದ ಮೇಲೆಯೇ ಆನಂದದ ಅನುಭವವಾಗೋದು. ಇದೇನೂ ನನ್ನ ಸಾಮ್ರಾಜ್ಯವಲ್ಲ. ಜಹಗೀರಲ್ಲ. ಆದರೆ ಇಲ್ಲಿ ಕುಳಿತು ನಾನು small little things ಮಾಡುತ್ತಿರುತ್ತೇನೆ. ನಮ್ಮ ನಿವೇದಿತಾ ತನ್ನ ಮಗುವೇನೋ ಎಂಬಂತೆ ಸಾಕುತ್ತಿರುವ ಸಣ್ಣದೊಂದು ಮನೋವೈಕಲ್ಯವಿರುವ ಹುಡುಗಿ ಪ್ರತಿನಿತ್ಯ ಬರುತ್ತಾಳೆ. Good morning boss ಅನ್ನುತ್ತಾಳೆ. ಅವಳೊಂದಿಗೆ ಕೂತು ಸುಮ್ಮನೆ ಎರಡು ನಿಮಿಷ ಮಾತಾಡುತ್ತೇನೆ. ಚಳಿಗೆ ನಡುಗುತ್ತ ನಿಂತಿದ್ದ ಸೆಕ್ಯುರಿಟಿ ಗಾರ್ಡ್‌ನ ನೋಡಿ, ಉಮೇಶನನ್ನು ಕರೆದು ಎಲ್ಲ ಗಾರ್ಡುಗಳಿಗೂ jocket ಕೊಡಿಸುವಂತೆ ಹೇಳುತ್ತೇನೆ. ಬಹಳ ದೊಡ್ಡ ಉಪಕಾರಗಳೇನಲ್ಲ. ಪ್ರತಿನಿತ್ಯ ನನ್ನ toilet ಸ್ವಚ್ಛಗೊಳಿಸುವ ಆಯಾಳ ಹೆಸರೇನು ಅಂತ ಕೂಡ ನನಗೆ ಗೊತ್ತಿಲ್ಲ. ಆದರೆ ಮೊಮ್ಮಗುವಿಗೆ \'ಪ್ರಾರ್ಥನಾ\'ದಲ್ಲಿ ಫ್ರೀ ಸೀಟು ಕೊಡುತ್ತೇನೆ.

ಮೊನ್ನೆ ಹಾಗೇ ಆಯಿತು : ನಾನು ಮತ್ತು ದತ್ತಾ ಪರ್ವತದಿಂದ ಇಳಿಯುವಾಗ ಲಿಫ್ಟ್‌ನಲ್ಲಿ ಹುಡುಗಿಯೊಬ್ಬಳು ಯಮಗಾತ್ರದ tray ಇರುವ ತಳ್ಳುಗಾಡಿಯೊಂದನ್ನು ಲಿಫ್ಟ್‌ನಿಂದ ಹೊರತರಲು ಹೆಣಗುತ್ತಿದ್ದಳು. ಅವಳ ಪಾಡಿಗೆ ಅವಳನ್ನು ಬಿಟ್ಟು ಬರಬಹುದಾಗಿತ್ತು. ಆದರೆ ದತ್ತಾ, ಶತಪ್ರಯತ್ನ ಮಾಡಿ ಆ ತಳ್ಳುಗಾಡಿ ಈಚೆಗೆ ತಂದು danke (thank you) ಅಂತ ಹೇಳಿ ಬಂದ.

\'\'ನೋಡಿ ರವೀ, ಯಾರೋ ಅಪರಿಚಿತರಿಗೆ ಕಾರಣವೇ ಇಲ್ಲದೆ ಚಿಕ್ಕದೊಂದು ಉಪಕಾರ ಮಾಡ್ತೀವಲ್ಲ? ಅದು ಕೊಡುವ ಆನಂದವೇ ಬೇರೆ\'\' ಅಂದ.

\'\'ಅಂಥ ಸಾವಿರಾರು, ಕೋಟ್ಯಂತರ ಚಿಕ್ಕ ಚಿಕ್ಕ ಉಪಕಾರಗಳನ್ನು ಪಡೆದಿರುವವನು ನಾನು. ಅಂಥ ಉಪಕಾರ ಪಡೆದಾಗ ಆಗುವ ಆನಂದ, ರಿಲೀಫ್ ಮತ್ತು ಕೃತಜ್ಞತಾ ಭಾವವೇ ಬೇರೆ. ಅದರ ರುಚಿ ನನಗೆ ಗೊತ್ತು\'\' ಅಂದೆ.

ಹಾಗಂತ, pleasure ಇರುವುದು ಕೇವಲ ಉಪಕಾರ ಮಾಡುವ ಅಥವಾ ಪಡೆಯುವುದರಲ್ಲಿ ಅಲ್ಲ. ಕೆಲವೊಮ್ಮೆ ಏನೂ ಮಾಡದೇ ಇರುವುದೂ ಸಂತಸ ನೀಡುತ್ತದೆ. ಪ್ರವೀಣ ಗೋಡಖಿಂಡಿಯ ಕೊಳಲು, \'ಮುಕ್ತ ಮುಕ್ತ\'ದಲ್ಲಿ ಟಿ.ಎನ್.ಸೀತಾರಾಂ ನಟನೆ, ಹಚ್ಚ ಹಳೆಯ \'ಆಕಲಿರಾಜ್ಯಂ\' ಎಂಬ ತೆಲುಗು ಸಿನೆಮಾದಲ್ಲಿ ಕಮಲಹಾಸನ್ ತನ್ನ ಪ್ರೇಯಸಿಗಾಗಿ ದುಃಖಿಸುತ್ತಾ ಹಾಡುವ \'ಓ ಮಹಾತ್ಮಾ ಓ ಮಹರ್ಷೀ\' ಹಾಡನ್ನು ಯು-ಟ್ಯೂಬ್‌ನಲ್ಲಿ ನೋಡುವುದು, ಗತಿಸಿ ಹದ ಗೆಳೆಯನ ಕುಟುಂಬದವರು ಹೇಗಿದ್ದಾರೆಂದು ವಿಚಾರಿಸುವುದು, ಓದಬೇಕೆಂದು ಎತ್ತಿಟ್ಟುಕೊಂಡ ಹಳೇ ಪುಸ್ತಕ ಓದಲಾರಂಭಿಸುವುದು, ಅಮ್ಮ ಕಲೆಸಿಡುತ್ತಿದ್ದ ತಂಗಳು ಚಿತ್ರಾನ್ನ ನೆನಪಿಸಿಕೊಳ್ಳುವುದು-ಎಲ್ಲವೂ ಸುಖಗಳೇ ಅಲ್ಲವೇ?

ಇಷ್ಟೆಲ್ಲ ಗೊತ್ತಿದ್ದೂ ಮನುಷ್ಯ ಸುಖಗಳನ್ನು ಯಾಕೆ ಹುಡುಕಿಕೊಂಡು ಲಕ್ಷಾಂತರ ಖರ್ಚು ಮಾಡಿ ಎಲ್ಲಿಗಾದರೂ ಯಾಕೆ ಹೊರಡುತ್ತಾನೆ? ಹಿಮ್ಮಡಿ ಕೆಳಗಿನ ಸುಖವ ಮರೆತು?

ಅದೂ ಒಂಥರಾ ಸುಖವೋ ಏನೋ?

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 June, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books