Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ದುಡ್ಡು ಎಂಬ ಮಾಯಾವಿ ಸಂಗತಿಯ ಸುತ್ತ ಮುತ್ತ

ದುಡ್ಡು: The cash.

ಅದನ್ನ ಜೋಪಾನವಾಗಿ ಇಟ್ಕೋ. ಪ್ರತಿ ಅಮ್ಮನೂ ಹೇಳಿದ ಹಾಗೆ ನನ್ನ ಅಮ್ಮನೂ ಹೇಳಿದ್ದಳು. ಅಷ್ಟೇ ಅಲ್ಲ; ತೀರ ಬಿ.ಎ.ಪಾಸಾಗಿದ್ದ ನನ್ನ ಪೈಜಾಮಾ ಜೇಬಿನಲ್ಲಿ ಹದಿನೈದೇ ರುಪಾಯಿ ಇಟ್ಟು ಪೈಜಾಮಾ ಜೇಬಿಗೆ ಒಂದು ಸೇಫ್ಟಿ ಪಿನ್ ಹಾಕಿ ಧಾರವಾಡಕ್ಕೆ ಕಳಿಸಿದ್ದಳು. ರೈಲ್ವೆ ಸ್ಟೇಷನ್ ತಲುಪುವ ಹೊತ್ತಿಗೆ ಪಿನ್ ಕಿತ್ತಿ ಹಾಕಿ, ಸ್ಟೇಷನ್ನಿನ ಅಂಗಡಿಯಲ್ಲಿ ಮೊದಲ ಪ್ಯಾಕೆಟ್ ಸಿಗರೇಟು ತೊಗೊಂಡೆ ಅನ್ನಿ: ಅದು ಬೇರೆ ವಿಷಯ.

ಏಕೆಂದರೆ, ಜಗತ್ತಿನಲ್ಲಿ ಇರುವ ಮೂರು ವರ್ಗಗಳ ಪೈಕಿ ಒಂದು ವರ್ಗಕ್ಕೆ ಸೇರಿದವನು ನಾನು.

ಮೊದಲನೇ ವರ್ಗ ಯಾವುದು ಗೊತ್ತಾ? ಅವರಿಗೆ ದುಡ್ಡು ಜೋಪಾನವಾಗಿಟ್ಟುಕೊಂಡೇ ಇರಬೇಕು. ತುಂಬುತ್ತಿರುವ ದುಡ್ಡಿನ ಚೀಲ, ಬೆಳೆಯುತ್ತಿರುವ ಬ್ಯಾಂಕ್ ಬ್ಯಾಲೆನ್ಸು, ಅದಕ್ಕೆ ಜೊತೆಯಾಗುವ ಬಡ್ಡಿ ಮುಂತಾದವುಗಳನ್ನು ನೋಡಿ ನೋಡಿ ಎಕ್ಸೈಟ್ ಆಗುತ್ತಿರುತ್ತಾರೆ. ಮನೆಯಲ್ಲಿ ಅವರು ತೆರೆದು ನೋಡಿದಾಗಲೆಲ್ಲ ಅಕ್ಕಿ ಡಬ್ಬಿ ತುಂಬಿಯೇ ಇರಬೇಕು. ಅದ್ಯಾವ ಪರಿಯ ಪಿಸನಾರಿತನವೆಂದರೆ ಅವರ ಬಗ್ಗೆ ಇಂಗ್ಲಿಷ್‌ನಲ್ಲಿ ಅದ್ಭುತವಾದ ಮಾತೊಂದಿದೆ: Miser dies rich! ಅರ್ಥವಿಷ್ಟೆ; ಜಿಪುಣನಾದವನು ಶ್ರೀಮಂತನಾಗಿ ಸಾಯುತ್ತಾನೆ.

ಎರಡನೇ ವರ್ಗವೆಂಬುದು ಬುದ್ಧಿವಂತ ವರ್ಗ. ಅವರು ಹಣ ಖರ್ಚು ಮಾಡುತ್ತಾರೆ. ಆದರೆ ಮಾಡಿದ ಖರ್ಚು ಉಪಯುಕ್ತವಾ? ಅದರಿಂದ ಲಾಭವಿದೆಯಾ? ಹೂಡಿದ ಹಣ ಬೆಳೆಯುತ್ತದಾ? ಕೊಂಡ ವಸ್ತು ವ್ಯವಹಾರಕ್ಕೆ ಸಹಾಯವಾಗುತ್ತದಾ? At least, ಮನಸ್ಸಿಗೆ ಸಂತೋಷ ಕೊಡುತ್ತದಾ?

ಮೂರನೆಯ ವರ್ಗವಿದೆ: ಅವರಿಗೆ ಹಣದ ಕಿಮ್ಮತ್ತು ಗೊತ್ತಿರುವುದಿಲ್ಲ. ಬೇಕಾಬಿಟ್ಟಿ ಖರ್ಚು. ನಾಳೆಗೆ ಏನು ಗತಿ ಎಂಬ ಯೋಚನೆಯೇ ಇರುವುದಿಲ್ಲ. ಎಂಥ ಬೇಜವಾಬ್ದಾರಿಯ ಜನ ಅಂದ್ರೆ, ಮನೆಯಲ್ಲಿ ಮಗುವಿನ ಆರೋಗ್ಯಕ್ಕಾಗಿ ಖರ್ಚು ಮಾಡುವ ಹಣವನ್ನು ಹೊಸ ಮಾಡೆಲ್‌ನ ಮೊಬೈಲ್ ಕೊಳ್ಳಲು ಬಳಸಿ ಖಾಲಿಯಾಗಿಬಿಡುತ್ತಾರೆ. ಇಂಥವರಿಗೆ ಹಣ ಮತ್ತೆಲ್ಲಿಂದಲೋ ಬರುತ್ತಿರುತ್ತದೆ. ಯಾರೋ ಕೊಡುತ್ತಿರುತ್ತಾರೆ. ದುಡಿದು ಗೊತ್ತಿರುವುದಿಲ್ಲ. ನೀವು ಕೆಲಸಕ್ಕೆ ಹೋಗದ ಹೆಣ್ಣು ಮಕ್ಕಳನ್ನು ಗಮನಿಸಿ.ಅವರಿಗೆ ಹಣದ ಕಿಮ್ಮತ್ತಿಗಿಂತ, ತಮ್ಮ ಷೋಕಿಯ ಚಿಂತೆ ಇರುತ್ತದೆ. ಒಂದ್ಸಲ ಕೊಡೈಕೆನಾಲ್‌ಗೆ ಹೋಗಿ ಬರೋಣವಾ? ಯೂರಪ್ ಟ್ರಿಪ್ ಮಾಡಿ ಬರದಿದ್ದರೆ ಹೇಗೆ? ಈ ಸಲ ನೀನು ದೀಪಾವಳಿಗೆ ಒಡವೆ ತೆಕ್ಕೊಡಬೇಕು. ಅಳಿಯನಿಗೆ ಪ್ರೆಸೆಂಟ್ ಕೊಡದಿದ್ದರೆ ಹೇಗೆ ಅಂತೆಲ್ಲ ಮಾತನಾಡುತ್ತಿರುತ್ತಾರೆ. ನಯಾ ಪೈಸೆಯ ಲಾಭ ಇರುವುದಿಲ್ಲ. ಆದರೆ ಮೊಬೈಲ್ ಇಟ್ಟುಕೊಂಡಿರುತ್ತಾರೆ. ದಿನವಿಡೀ ಮಾತು, ಕೆಲಸಕ್ಕೆ ಬಾರದ ಮೊಬೈಲ್ ಮೆಸೇಜ್ ಫಾರ್ವರ್ಡು. ಹಾಳು ಹರಟೆ. ಎಂದಿಗೂ ಮುಗಿಯದ, ಸಮಾಧಾನವಾಗದ ಸೀರೆಗಳ ಸಂಗ್ರಹ ಮತ್ತು ಕಂಡ ಪ್ರತಿ ಅಡ್ವರ್ಟೈಜ್‌ಮೆಂಟನ್ನೂ ಗಮನಿಸಿ, ಆ ಕೆಲಸಕ್ಕೆ ಬಾರದ ಪ್ರಾಡಕ್ಟ್ ಖರೀದಿಸುವ ಹಂಬಲ.

ನಾಲ್ಕನೆಯ ವರ್ಗವಿದೆ. ಹಣದ ನಿಜವಾದ ಅರ್ಥವೇ ಅದನ್ನು ಖರ್ಚು ಮಾಡುವುದು ಅಂತ ನಂಬಿರುವ ವರ್ಗ! ಅದು ನಿಜಕ್ಕೂ ಬುದ್ಧಿವಂತ ವರ್ಗ. ದುಡಿಯುವ, ಜವಾಬ್ದಾರಿಯುತವಾಗಿ, ನ್ಯಾಯಯುತವಾಗಿ ಹಣ ಗಳಿಸುವ ವರ್ಗ. ಮನೆಗೆಷ್ಟು ಬೇಕು? ಮಕ್ಕಳಿಗೆ ಎಷ್ಟು ಬೇಕು? ಭವಿಷ್ಯಕ್ಕೆ ಎಷ್ಟು? ಅನಿರೀಕ್ಷಿತವಾಗಿ ಬರುವ ಖಾಯಿಲೆ-ಕಸಾಲೆಯಂತಹವುಗಳಿಗೆ ತೆಗೆದಿಡಬೇಕಾದದ್ದು ಎಷ್ಟು? ಅದನ್ನೆಲ್ಲ ಲೆಕ್ಕ ಹಾಕಿ ಕೊಂಚವೂ ಸಾಲ ಮಾಡದೆ ತಮ್ಮ ಹಣವನ್ನು ಸಂತಸಕ್ಕಾಗಿ, ಅದರ ಮಿತಿ ಅರಿತು ಖರ್ಚು ಮಾಡುವ ಜನ.

ಈ ವರ್ಗಕ್ಕೆ ನಾನು ಸೇರುತ್ತೇನೆ.

ನನಗದು ಇಷ್ಟ ಕೂಡ. ಸಾಮಾನ್ಯವಾಗಿ ನನ್ನ ಹಣವನ್ನು ನಾನು ಇಟ್ಟುಕೊಳ್ಳುವುದಿಲ್ಲ. ಜೇಬಿನಲ್ಲಿ ಹತ್ತು ರುಪಾಯಿಯೂ ಇರುವುದಿಲ್ಲ. ಅದರ ನೆಸೆಟಿಟಿ ನನಗಿಲ್ಲ. ಕ್ರೆಡಿಟ್ ಕಾರ್ಡನ್ನು ಕೇವಲ ಕಂಪ್ಯೂಟರ್ ಮೂಲಕ ಪುಸ್ತಕ ತರಿಸಿಕೊಳ್ಳಲು ಬಳಸುವುದು ಬಿಟ್ಟರೆ ಅದನ್ನು ಎಲ್ಲಾದರೂ ಉಜ್ಜಿ, ಏನನ್ನಾದರೂ ಖರೀದಿಸಿದ್ದು ನನಗೆ ನೆನಪಿಲ್ಲ. ಹೊರಕ್ಕೆ ಹೋಗುವುದೇ ಕಡಿಮೆ. ಸಿಗರೇಟಿನಿಂದ ಹಿಡಿದು ಪ್ರತಿ ನಿತ್ಯ ನನಗೆ ಬೇಕಾದುದನ್ನು ಸೀನ, ನಿವೇದಿತಾ ತರಿಸಿಕೊಡುತ್ತಾರೆ. ’’ಒಂದು ಕೇಜಿ ಅಕ್ಕಿಯ ರೇಟೂ ನಿನಗೆ ಗೊತ್ತಿಲ್ಲ’’ ಅಂತ ಮೊನ್ನೆ ನಿವೇದಿತಾ ಛೇಡಿಸುತ್ತಿದ್ದಳು. ಕ್ರೆಡಿಟ್ ಕಾರ್ಡು, ಡೆಬಿಟ್ ಕಾರ್ಡಿನ ಹರಕತ್ತು ನನಗೆ ಯಾಕಿಲ್ಲ ಅಂದರೆ, ರಾಜ್ಯದಲ್ಲಿ ಎಲ್ಲೇ-ಯಾವ ಮೂಲೆಗೆ ಹೋದರೂ ಅಲ್ಲಿ ನನ್ನ ’ಪತ್ರಿಕೆ’ಯ ಏಜೆಂಟರಿದ್ದಾರೆ. ಐದೆಂಟು ಸಾವಿರ ಕೊಡಬಲ್ಲವರು. ಡ್ರೈವಿಂಗ್ ಲೈಸೆನ್ಸು ಇಟ್ಟುಕೊಂಡಿಲ್ಲ. ಏಕೆಂದರೆ ನಾನು ಡ್ರೈವ್ ಮಾಡುವುದಿಲ್ಲ.

ಆದರೆ ಖರ್ಚು ಮಾಡುವ ವಿಷಯ ಬಂದಾಗ ನಿರಂಬಳವಾಗಿ ಖರ್ಚು ಮಾಡುತ್ತೇನೆ. ಹೊಚ್ಚ ಹೊಸ ಕೆಮೆರಾ, ಅದ್ಭುತವಾದ ಪೆನ್ನು, ಪರಮ ದುಬಾರಿ ಪುಸ್ತಕ, ಅತ್ಯುತ್ತಮ music system, ಆಪಲ್ ಕಂಪೆನಿಯವರು ಮಾರುಕಟ್ಟೆಗೆ ಬಿಟ್ಟ ಪ್ರತೀ ಕಂಪ್ಯೂಟರು, ಟೀವಿ oeಟಡಿಗಳಿಗೆ ಬೇಕಾದ ಬಟ್ಟೆ, ಕೇವಲ airportಗಳಲ್ಲಿ ಸಿಗುವ ವಿಶೇಷ ಸಿಗರೇಟು, ಎಲ್ಲದಕ್ಕಿಂತ ಹೆಚ್ಚಾಗಿ ಈ ಮಧ್ಯೆ ಶುರುವಾಗಿರುವ ದೇಶ ದೇಶಗಳ ಪ್ರವಾಸ. Yes, ಧಾರಾಳವಾಗಿ ಖರ್ಚು ಮಾಡುತ್ತೇನೆ.

ನನ್ನ ಬಂಧುವೊಬ್ಬರಿದ್ದಾರೆ. ಅವರ ಮಕ್ಕಳು ಅಮೆರಿಕನ್ನರೇ ಆಗಿ ಹೋಗಿದ್ದಾರೆ. ಇವರಿಗೂ ಕೈತುಂಬ ಪೆನ್ಷನ್ ಬರುತ್ತದೆ. ಮನೆಯಲ್ಲಿ ಇರುವವರು ಗಂಡ-ಹೆಂಡತಿ ಮಾತ್ರ. ಆದರೆ ಅವರು ಅಡುಗೆ ಮಾಡುವುದು ವಾರಕ್ಕೆ ಒಂದೇ ದಿನ. ಮಾಡಿ ಫ್ರಿಜ್‌ನಲ್ಲಿಟ್ಟು ವಾರವಿಡೀ ತಿನ್ನುತ್ತಾರೆ. ಹಾಲು ಕೊಳ್ಳುವುದು ವಾರಕ್ಕೆ ಎರಡೇ ಸಲ. ಮೊಸರು ತಿಂದು ಅವರಿಗೆ ಮರೆತೇ ಹೋಗಿದೆ. ಮಜ್ಜಿಗೆ ಆಗೋಗ್ಯಕ್ಕೆ ಒಳ್ಳೆಯದು ಎಂಬ ನೆಪ. ಮನೆಗೆ ಯಾರಾದರೂ ಬಂದರೆ ’’ಊಟ ಆಗಿದೆ ತಾನೆ? ಬೇಗ ಹೋಗಿ ಮಾಡಿಕೊಂಡು ಬನ್ನಿ. ಹೊಟೇಲು ಮುಚ್ಚಿಬಿಡೋ ಸಮಯ’’ ಅಂತಾರೆ. ಪಂಚೆ ಉಟ್ಟರೆ ಅದು ಮಾಸುತ್ತೆ, ಒಗೆಯಬೇಕಾಗುತ್ತೆ, ಹಾಗಾದಾಗ ಪಂಚೆ ಸವೆಯುತ್ತೆ ಎಂಬ ಕಾರಣಕ್ಕೆ ದಿನವಿಡೀ ಒಂದು ಪಟ್ಟಾಪಟ್ಟಿ ಚಡ್ಡಿ ಹಾಕಿಕೊಂಡೇ ಇರುವ ಮನುಷ್ಯ ಅದೆಷ್ಟು ಜಿಪುಣ. ಸರಿ, ಅಷ್ಟು ಹಣ ಉಳಿಸಿ ಮಾಡುವುದಾದರೂ ಏನು?

ನಿಮಗೆ ಗೊತ್ತಿರಲಿ: ಬಾಯಿ ಕಟ್ಟಿ, ಬದುಕಿನಲ್ಲಿ ಏನೂ ಸಾಧಿಸದೆ ದೊಡ್ಡ ಸಿರಿವಂತನಾಗುವುದರಲ್ಲಿ ಅರ್ಥವಿಲ್ಲ. ಕಂಡವರ ದುಡ್ಡು ಹೊಡೆದು ದಾನಧರ್ಮ, ಅನ್ನ ಸಂತರ್ಪಣೆ ಮಾಡಿ ಕಡೆಗೆ ಜೈಲುಪಾಲಾದ ವಿನಿವಿಂಕ್ ಶಾಸ್ತ್ರಿಯಂತೆ ಬದುಕುವುದೂ ಅರ್ಥಹೀನ. ಹಣವಿರುವುದೇ ಖರ್ಚು ಮಾಡಲಿಕ್ಕೆ. ಅದು ನಾವು ದುಡಿದದ್ದು, ನ್ಯಾಯಯುತವಾಗಿ ದುಡಿದದ್ದು ಮತ್ತು ಅರ್ಥಹೀನ ಸಂಗತಿಗಳಿಗೆ, ವಸ್ತುಗಳಿಗೆ ಖರ್ಚಾಗದಂತಹುದು ಆಗಿರಬೇಕು.

Dont stay hungry and be happy.

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 11 May, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books