Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಹೆಸರು ಅಮರಕೋಶವೇ ಆದರೂ ಅದನ್ನು ಕಲಿಯೋತನಕ ಅಮರ ಶೋಕವೇ!

ಸೂರಿ ಹೇಳಿದ್ದಿದು.
ಸೂರಿ ಅಂದ್ರೆ ಸುರೇಂದ್ರನಾಥ್ : ನಮ್ಮ ಭಾವನಾ ಪ್ರಕಾಶನ ಪ್ರಕಟಿಸಿದ ’ನಾತಲೀಲೆ’ ಕಥಾಸಂಕಲನದ ಕತೆಗಾರ, ಅತ್ಯುತ್ತಮ ನಾಟಕಕಾರ, ನಿರ್ದೇಶಕ, ’ಈ ಟೀವಿ’ ಕನ್ನಡ ಛಾನಲ್ ಕಟ್ಟಿ ಬೆಳೆಸಿದ ಸಾಹಸಿ ಮತ್ತು ಶಂಕರ್‌ನಾಗ್‌ಗೆ ಅತ್ಯಾಪ್ತರಾಗಿದ್ದವರು. ಹೀಗೇ ಮಾತನಾಡುತ್ತಾ ಕುಳಿತಾಗ ಅವರೊಂದು ಕಥೆ ಹೇಳಿದ್ದರು. ಅದು ಬಂಗಾಳಿ ಕಥೆಯಾ? ಬಾಂಗ್ಲಾ ದೇಶದ ಕತೆಗಾರನದಾ? ನೆನಪಿಲ್ಲ. ಅದೊಂದು ಪುಟ್ಟ ಕಥೆ-ಮತ್ತೇನಿಲ್ಲ.

’’They decided to have sex. ಅವರಿಬ್ಬರೂ ಮಿಲನ ಮಹೋತ್ಸವ ಆಚರಿಸಿಕೊಳ್ಳಲು ನಿರ್ಧರಿಸಿದರು. ಎಲ್ಲಿ? ನನ್ನ ಅಪಾರ್ಟ್‌ಮೆಂಟಿಗೇ ಹೋಗೋಣ ಅಂದಳು ಹುಡುಗಿ. ನಡೆಯುತ್ತ ಹೋಗಿ, ಎಲ್ಲೋ ಬಸ್ಸು ಹತ್ತಿ, ಬಸ್ಸಿಳಿದು ಒಂದು ವಿಶಾಲವಾದ ಅಪಾರ್ಟ್‌ಮೆಂಟ್ ತಲುಪಿದರು. ಅದರೊಳಗೆ ಅವಳದೊಂದು ಮನೆ. ಮನೆಯಲ್ಲಿ ಯಾರೂ ಇಲ್ಲ. ಸ್ವಲ್ಪ ಹೊತ್ತು ಪ್ರೀತಿಗೆ ಅಣಿಯಾದ ಮೇಲೆ ಅವರು ತಂತಮ್ಮ ಉಡುಪು ಬಿಚ್ಚಿದರು. ಇನ್ನೇನು ಮಿಲನಕ್ಕೆ ತೊಡಗಬೇಕು. ’ನಂಗೊಂದು ಟೀ ಮಾಡಿ ಕೊಡ್ತೀಯಾ?’ ಅಂತ ಆತ ಕೇಳಿದ. (ಕೆಲವರಿಗೆ ಮಿಲನಕ್ಕೆ ಮುನ್ನ ಅಥವಾ ನಂತರ ಟೀ-ಕಾಫಿ ಕುಡಿಯುವ ಅವಶ್ಯಕತೆ) ’ಅದಕ್ಕೇನಂತೆ, ಈಗ ಮಾಡಿ ತರುತ್ತೇನೆ’ ಅಂದವಳು ಎದ್ದು ಅಡುಗೆ ಮನೆಗೆ ಹೋದವಳು ಒಲೆಯ ಮುಂದೆ ಗಕ್ಕನೆ ನಿಂತಳು. ’ನೋಡು, ಹಾಲು ಮುಗಿದು ಹೋಗಿದೆ. ಅಪಾರ್ಟ್‌ಮೆಂಟ್‌ನಿಂದ ಹೊರಬಿದ್ದು ರಸ್ತೆಯಾಚೆಗಿನ ಅಂಗಡಿಯಿಂದ ಹಾಲು ತರುತ್ತೀಯಾ?’ ಅಂದಳು. ಅವನು ಎದ್ದು ಉಡುಪು ಧರಿಸಿಕೊಳ್ಳುವಾಗ ಆಕೆ ನಗ್ನಳಾಗೇ ಇದ್ದಳು.
ಅವನು ಅಪಾರ್ಟ್‌ಮೆಂಟಿನಿಂದ ಹೊರಬಿದ್ದ. ರಸ್ತೆ ದಾಟಿದ. ಒಂದು ಪಾಕೀಟು ಹಾಲು ಖರೀದಿಸಿದ. ಅಂಗಡಿಯವನಿಗೆ ಹಣ ಕೊಟ್ಟು ಹಿಂತಿರುಗಿ ನೋಡಿದವನು ಮುಂದೇನು ಮಾಡಬೇಕೋ ತೋಚದೆ ನಿಂತುಬಿಟ್ಟ. ಏಕೆಂದರೆ ಅದೊಂದು ದೊಡ್ಡ ಅಪಾರ್ಟ್‌ಮೆಂಟು. ಎಲ್ಲ ಮನೆಗಳೂ ಒಂದೇ ತೆರನಾಗಿವೆ. ಯಾವ ಫ್ಲೋರು? ಯಾವ ಮನೆ? ನಂಬರ್ ಏನು? ಯಾವುದೂ ಗೊತ್ತಿಲ್ಲ. ಅವನು ನಿಂತೇ ಇದ್ದ. (ಈ ಕಥೆಯ ಕೊನೆಯ ಸಾಲು ಏನು ಗೊತ್ತೆ?)

’’ರಾತ್ರಿಯಿಡೀ ಅವನಿಗಾಗಿ ಆ ಹುಡುಗಿ ನಗ್ನಳಾಗಿ ಕಾಯುತ್ತ ನಿಂತೇ ಇದ್ದಳು.’’

That\'s all. ಸೂರಿ ನನಗೆ ಈ ಕಥೆ ಹೇಳಿ ಎಷ್ಟೋ ತಿಂಗಳುಗಳಾದವು. ಅವರು, ನಾನು, ಜೋಗಿ, ಸೀತಾರಾಂ, ಮಾಳವಿಕಾ, ಅವಿನಾಶ್, ಪ್ರಕಾಶ್ ರೈ ಮುಂತಾದವರು ಸೇರಿದರೆ ಅದು ನಮ್ಮೆಲ್ಲರ ಪಾಲಿಗೆ ಹಬ್ಬದ ರಾತ್ರಿಯೂ ಹೌದು, ಶಿವರಾತ್ರಿಯೂ ಹೌದು. ಎರಡನೆಯ ಮದುವೆಯಾದ ನಂತರ ಪ್ರಕಾಶ್ ರೈಗೆ ಒಂಥರಾ ಮಧುಚಂದ್ರದ ರಜೆ ಕೊಟ್ಟಿದ್ದೇವೆ. ಮಾಳವಿಕಾಗೆ ಮಗನನ್ನು ಸಲುಹುವ ಸಂಭ್ರಮ. ಜೋಗಿ ಮತ್ತು ಸೂರಿ ಅದೇಕೋ ರಹಸ್ಯವಾಗಿ ಭೇಟಿಯಾಗುತ್ತಿದ್ದಾರೆ. ನಾನು ಮತ್ತು ಸೀತಾರಾಂ ಮಾತ್ರ ’ಮುಕ್ತ ಮುಕ್ತ’ ಷೂಟಿಂಗ್‌ನಲ್ಲೋ, ನನ್ನ ಆಫೀಸಿನಲ್ಲೋ ಭೇಟಿಯಾಗುತ್ತಲೇ ಇರುತ್ತೇವೆ. ಇಂಥದೊಂದು intellectual group ಆಗಾಗ ಸೇರದಿದ್ದರೆ ಅದು ಯಾರ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದಲ್ಲ.

ಮೊನ್ನೆ ನಾಗ್ತಿ ಬಂದಿದ್ದ. ಅವನನ್ನು ನಾನು ಸುಮ್ಮನೆ ಸ್ನೇಹಿತನಾಗಿ ಇಷ್ಟಪಡುವುದಕ್ಕಿಂತ ಒಬ್ಬ ನಿಜವಾದ ಕ್ರಿಯಾಶೀಲನಾಗಿ, ಮನುಷ್ಯತ್ವವುಳ್ಳವನಾಗಿ, ತನ್ನ ಮಕ್ಕಳ ಪಾಲಿನ ಅತ್ಯುತ್ತಮ ತಂದೆಯಾಗಿ, ವಿಪರೀತ ಶಿಸ್ತಿನ ವ್ಯವಹಾರಿಯಾಗಿ ಇಷ್ಟಪಡುತ್ತೇನೆ. ಕೆಲಸ ಏನೇ ಇರಲಿ, ಅವನು ಧಡ್ಡಂತ ನನ್ನ ಆಫೀಸಿಗೋ ಮನೆಗೋ ದಾಳಿ ಇಕ್ಕುವುದಿಲ್ಲ. ಮೊದಲು ಅಪಾಯಿಂಟ್‌ಮೆಂಟು. ಕೆಲಬಾರಿ ಬರುವಾಗಲೇ ವಿಪರೀತ ಸುಸ್ತಾಗಿ ಬರುತ್ತಾನೆ. ’ಸ್ವಲ್ಪ ಮಲಗ್ತೀನಿ ಕಣೋ’ ಅಂದವನೇ ನನ್ನ ಮಂಚದ ಮೇಲೆ ಉಲ್ಡಿಕೊಳ್ಳುತ್ತಾನೆ. ನನಗಿರುವುದಕ್ಕಿಂತ ಕೊಂಚ ಭಿನ್ನವಾದ ಮೊಳಕಾಲ ನೋವು ಅವನಿಗೆ. ಅಕ್ಕರೆಯಿಂದ ಕಾಫಿ ಕುಡಿಸಿ, ’’ಕಾಲು ಒತ್ತಿಕೊಡಲಾ?’’ ಎಂದು ಕೇಳುತ್ತೇನೆ. ಅಂಥದೊಂದು ಗಾಢ ಪ್ರೀತಿಗೆ ಅವನು ಅರ್ಹ. ನಾವಿಬ್ಬರೂ ಪರಿಚಯವಾಗಿ ಅಜಮಾಸು ಮೂವತ್ತು ವರ್ಷಗಳಿಗೆ ಮೇಲೆಯೇ ಆಯಿತೇನೋ? ಅವನ ಮನೆ ಮೊದಲು ವಿಜಯನಗರದಲ್ಲಿತ್ತು. ಬಳ್ಳಾರಿಯಿಂದ ಬಂದವನು, ಭೇಟಿಯಾಗಿ ಪರಿಚಯ ಮಾಡಿಕೊಳ್ಳೋಣ ಅಂತ ಹುಡುಕಿಕೊಂಡು ಹೋದೆ. ಬಾಗಿಲು ತೆಗೆದ ಶೋಭಕ್ಕ ಶುದ್ಧ ಇಸ್ರೇಲಿ ಪೊಲೀಸರಂತೆ ತಪಾಸಣೆ ಮಾಡಿ, ನಾನೂ ಕತೆ-ಪತೆ ಬರೆಯೋ ಜಾಯಮಾನದವನೇ ಅಂತ ಖಚಿತವಾದ ಮೇಲೆ,

’’ಅವ್ರು ಮನೆ ಮೇಲ್ಗಡೆ ಬರೀತಾ ಕೂತಿದಾರೆ. ಹೋಗಿ’’ ಅಂತ ಒಳ ಬಿಟ್ಟಿದ್ದಳು. ಇವನು ಟೆರೇಸಿನ ಬಟಾ ಬಯಲಲ್ಲಿ ಒಂದು ನೀರಿನ ಟ್ಯಾಂಕಿನಂಥದಕ್ಕೆ ಒರಗಿ ಕೂತು, ಒಂದು ಕ್ಲಿಪ್ ಇರುವ ರಟ್ಟಿಗೆ ಹಾಳೆ ಸಿಕ್ಕಿಸಿಕೊಂಡು ತನ್ನ ಎಂದಿನ ದುಂಡನೆಯ ಅಕ್ಷರಗಳಲ್ಲಿ ಕಥೆಯನ್ನೋ, ಮತ್ತೇನನ್ನೋ ಬರೆಯುತ್ತ ಕೂತಿದ್ದ. ಆಗೆಲ್ಲ ಕಥೆಗಳದೊಂದು ಜಮಾನಾ. ಅದನ್ನು ಹುಟ್ಟಿ ಹಾಕಿದವರು ಈಶ್ವರಯ್ಯ, ಎಂ.ಬಿ.ಸಿಂಗ್, ವೈಕುಂಠರಾಜು, ಎಸ್.ದಿವಾಕರ್ ಮುಂತಾದ ಹಿರಿಯ ಪತ್ರಕರ್ತರು. ಅವರಲ್ಲಿ ಹೆಚ್ಚಿನವರಿಗೆ ನಮ್ಮ ಪರಿಚಯವಿರಲಿಲ್ಲ. ಆದರೆ ಆಯ್ದು, ಆಯ್ದು ಕತೆಗಾರರಿಗೆ ಪತ್ರ ಬರೆಯುತ್ತಿದ್ದರು. ಬೊಳುವಾರು, ಕುಂ.ವೀ, ಎಂ.ವ್ಯಾಸ, ನಾಗತಿಹಳ್ಳಿ ಚಂದ್ರಶೇಖರ, ನಾನು, ಜಯಂತ ಕಾಯ್ಕಿಣಿ, ರಾಜಶೇಖರ ನೀರಮಾನ್ವಿ, ಬಿ.ಎಂ.ರಷೀದ್, ಗಂಗಾ ಪಾದೇಕಲ್ ಮುಂತಾದವರ ಕಥೆಗಳಿಲ್ಲದಿದ್ದರೆ ಅದು ’ತುಷಾರ’ವೇ ಅಲ್ಲ ಅಥವಾ ’ಮಯೂರ-ಸುಧಾ’ನೇ ಅಲ್ಲ ಎಂಬ ಕಾಲವಿತ್ತು. ಆಮೇಲಾಮೇಲೆ ನಾವೆಲ್ಲ ಛಿದ್ರಾ-ಪದ್ರ. ಒಬ್ಬೊಬ್ಬರು ಒಂದೊಂದು ಫೀಲ್ಡು ಹಿಡಿದುಕೊಂಡೆವು. ನೌಕರಿಯೋ, ವ್ಯಾಪಾರವೋ, ಹೊಟ್ಟೆಪಾಡೋ ಅಥವಾ ಕಥೆ ಬರೆಯುವುದಕ್ಕಿಂತ ಹೆಚ್ಚಿನ ದುಡ್ಡು ಇನ್ನೇನಾದರೂ ಬರೆದರೆ ಬಂದೀತು ಎಂಬ ದಿವ್ಯ ಜ್ಞಾನವೋ? ಗೊತ್ತಿಲ್ಲ. ಪುಣ್ಯವೆಂದರೆ ನಮ್ಮ ನಂತರ ಚಂದ್ರಕಾಂತ ವಡ್ಡು, ಕೇಶವ ಮಳಗಿ, ಅಮರೇಶ ನುಗಡೋಣಿ ಮುಂತಾದವರು ಕತೆ ಬರೆಯತೊಡಗಿದರು. ಈಗಲೂ ಕತೆಗಳಿಗೆ ನಿಷ್ಠರಾಗಿರುವ ಹಳಬರೆಂದರೆ ಎಸ್.ದಿವಾಕರ್‌ರಂಥವರೇ ಕೆಲವರು. ನೀವೇನೇ ಹೇಳಿ, ಒಂದು ಸಣ್ಣ ಕಥೆ ಕೊಡುವ ಆನಂದ, ತೃಪ್ತಿ, ಮಜಾಗಳನ್ನು ಯಾವ ಮಹಾಕಾವ್ಯವೂ ಕೊಡುವುದಿಲ್ಲ. ನನಗೆ ನಾಟಕಗಳನ್ನು ಓದುವುದೆಂದರೆ ಕೊಂಚ ಕಷ್ಟವೇ. ಪದ್ಯಗಳನ್ನು ಮಾತ್ರ ತೆಲುಗು, ಉರ್ದು, ಕನ್ನಡದಲ್ಲಿ ಕೆಲವು selected ಕವಿಗಳು ಬರೆದದ್ದನ್ನು ಆಯ್ದುಕೊಂಡು ಓದುತ್ತೇನೆ. ಆ ಪೈಕಿ ಅಡಿಗರು, ಕಂಬಾರರು ನನ್ನ ಪ್ರೀತಿ ಪಾತ್ರರು. ಶ್ರೀ ಶ್ರೀ ಬಿಡಿ : ಅದು ನನ್ನ ಪಾಲಿಗೆ ವೇದಪಾಠ. ಶ್ರೀ ಶ್ರೀ, ಆತ್ರೇಯ ಸಿ.ನಾರಾಯಣರೆಡ್ಡಿ, ವೇಟೂರಿ ಮುಂತಾದವರು ದೊಡ್ಡ ವಿದ್ವಾಂಸರು. ಅವರ ಮೂಲವಿದ್ದುದೇ ಸಂಸ್ಕೃತದಲ್ಲಿ. ಹೀಗಾಗಿ ಅವರು ತೆಲುಗು ಸಿನೆಮಾ ಹಾಡುಗಳನ್ನು ಬರೆದರೂ ಅವು ಸಂಸ್ಕೃತ ಭೂಷಿತವಾಗಿರುತ್ತಿದ್ದವು. ’ಗೀತಾಂಜಲಿ’ ಚಿತ್ರದಲ್ಲಿ ’ಅಸ್ತ್ರಾಯ ಫಟ್‌ಫಟ್‌ಫಟ್‌’ ಎಂಬ ಸಾಲು ಬರುತ್ತದೆ. ಅದರ ಅರ್ಥವೇನು ಅಂತ ನಿನ್ನೆ ಮೊನ್ನೆಯವರೆಗೆ ಗೊತ್ತಿರಲಿಲ್ಲ. ಮೊನ್ನೆ ಅವರದೊಂದು selected ಸಂದರ್ಶನ ನೋಡುತ್ತಿದ್ದೆ. ’’ಅದು ಮತ್ತೇನಲ್ಲ. ಸಂಧ್ಯಾವಂದನೆ ಮಾಡುವಾಗ ’ಅಸ್ತಾಯ ಫಟ್‌’ ಎಂಬ ಮಂತ್ರ ಹೇಳುತ್ತೇವೆ. ಹಿಂದೆ ಅದನ್ನು ’ಪಾತಾಳ ಭೈರವಿ’ ಚಿತ್ರದಲ್ಲಿ ಕ್ಷುದ್ರ ಮಾಂತ್ರಿಕನ ಬಾಯಲ್ಲಿ ಡೈಲಾಗ್ ಆಗಿ ನುಡಿಸಿದ್ದರು. ನಾನು ಅದನ್ನೇ ಮೂರು ಸಲ ಹಾಡಿಸಿ, ಮಾಮೂಲಿ ಸಂಧ್ಯಾವಂದನಾ ಮಂತ್ರಕ್ಕೆ ಒಂದು ಮಾಂತ್ರಿಕತೆಯ-ಹಾಸ್ಯಮಯ horrorನಂತಹ touch ಕೊಟ್ಟೆ’’ ಅಂತ ವಿವರಿಸಿದ್ದರು ವೇಟೂರಿ ಸುಂದರರಾಮ ಮೂರ್ತಿ.

’’ಹಾಗಾದರೆ, ಸಾಗರ ಸಂಗಮಂ ಚಿತ್ರದಲ್ಲಿ ’ಶಿವುನಿ ತ್ರಯ ಲಾಸ್ಯಂ’ ಎಂಬ ಸಾಲು ಬರೆಯುತ್ತೀರಲ್ಲ? ಅದರ ಅರ್ಥವೇನು’’ ಅಂತ ಕೇಳಿದಳು ಸಂದರ್ಶಕಿ.
’’ಅದೂ ವಿಶೇಷವಲ್ಲ. ನಮ್ಮ ಎಡಗಣ್ಣು ಭೂತಕಾಲವನ್ನೂ, ಬಲಗಣ್ಣು ವರ್ತಮಾನ ಕಾಲವನ್ನೂ ನೋಡುತ್ತಿರುತ್ತದೆ. ಭವಿಷ್ಯವನ್ನು ನೋಡಬಲ್ಲ ತಾಕತ್ತು ಶಿವನ ತ್ರಯ, ಅಂದರೆ ಅವನ ಹಣೆಯ ಮೇಲಿನ ಕಣ್ಣಿಗೆ ಮಾತ್ರ ಇರುತ್ತದೆ. ಸಮಯ (time)ವನ್ನ ಅಳೆಯಲು ಮನುಷ್ಯ ಮೊದಲು ಆರಂಭಿಸಿದ್ದೇ ಕಣ್ರೆಪ್ಪೆಯ ಬಡಿತದಿಂದಾಗಿ. ಒಂದು ರೆಪ್ಪೆ ಬಡಿಯುವುದರೊಳಗಾಗಿ ಅಂತೀವಲ್ಲ? Count ಶುರುವಾದದ್ದೇ ಹಾಗೆ. ಶಿವನ ಆ ಮೂರನೆಯ ಕಣ್ಣು ಪಿಳುಕಿಸುವುದೇ ಒಂದು ಲಾಸ್ಯ. ಅದಕ್ಕಾಗಿಯೇ ಹಾಗೆ ಬಳಸಿದೆ... ಶಿವುನಿ ತ್ರಯ ಲಾಸ್ಯಂ...’’ ಅಂದರು ವೇಟೂರಿ.

ನನಗೆ ಇದೆಲ್ಲ ಗೊತ್ತೇ ಇಲ್ಲ ಅಲ್ಲವೇ ಅನ್ನಿಸಿತು. ನಿಜ ಹೇಳುವುದಾದರೆ ನಾನು ಸಂಸ್ಕೃತ ಓದಿದವನಲ್ಲ. ಎಲಿಮೆಂಟರಿಯಲ್ಲಿ ತೆಲುಗು ಓದಿದೆನಾದರೂ ತೆಲುಗು ಸಾಹಿತ್ಯ ಅಷ್ಟಕ್ಕಷ್ಟೆ ಗೊತ್ತು. ಕನ್ನಡವನ್ನಂತೂ ಯಾವತ್ತೂ, ಯಾವ ಕ್ಲಾಸಿನಲ್ಲೂ ಒಂದು oಚ್ಜಿಛ್ಚಿಠಿ ಆಗಿ ಅಥವಾ ಐಚ್ಛಿಕವಾಗಿ ನಾನು ಓದಲೇ ಇಲ್ಲ. ಪಾಸಾಗಲಿಕ್ಕೆ ಎಷ್ಟು ಬೇಕೋ ಅಷ್ಟರ ಮಟ್ಟಿಗೆ ಹಿಂದಿ. ಇನ್ನು ಇಂಗ್ಲಿಷೋ: ಅದು ಟಸ್-ದಿಸ್ ಇಂಗ್ಲಿಷ್ಷು. ಮತ್ತೆ ನನ್ನ ಹಣೆಬರಹ?

Be Sure, ಮಾತಿಗೆ ನಿಂತರೆ ನಾನು ಚೂರೇ ಚೂರು ಅಪಭ್ರಂಶವಿಲ್ಲದೆ ಕನ್ನಡ, ತೆಲುಗು, ಹಿಂದಿ ಮಾತನಾಡಬಲ್ಲೆ. ಕಾರಣ ನನ್ನ ಓದುವಿಕೆಯಲ್ಲ. ಈ ಬಗ್ಗೆ ನಾನು ಸಾಕಷ್ಟು ಸಲ ಬರೆದಿದ್ದೇನೆ. ಭಾಷಣ ಮಾಡಿದ್ದೇನೆ. ಯಾರಾದರೂ ಅಪಸ್ವರ ಹಾಡಿದರೆ ಅಥವಾ ’ಅ’ಕಾರ ’ಹ’ಕಾರಗಳ ವಿಷಯದಲ್ಲಿ ತಪ್ಪು ಮಾಡಿದರೆ ಅಸಹ್ಯವಾಗುತ್ತದೆ: ಬೆಳ್ಳುಳ್ಳಿ ತಿಂದವಳಿಗೆ ಮುತ್ತು ಕೊಟ್ಟಷ್ಟು. ಟೀವಿಯಲ್ಲಿ ಆಂಕರ್‌ಗಳು ಈ ತಪ್ಪು ಮಾಡಿದಾಗ ಸ್ಟುಡಿಯೋ ತನಕ ಹೋಗಿ ಬೈದು ಬರಬೇಕೆನ್ನಿಸುತ್ತದೆ. ಆಂಕರ್‌ಗಳಿಗೆ ಬರಗಾಲವಿದ್ದಾಗ ತೇಜಸ್ವಿನಿಯಂಥವರೇ ಟೀವಿಗಳ ಪಾಲಿನ ಮೆಗಾಸ್ಟಾರ್‌ಗಳಾದರು. ಆಕೆಯ ಭಾಷೆಯಂತೂ ಶನಿ ಮಹಾತ್ಮನಿಗೇ ಪ್ರೀತಿ.

’’ನಿಮ್ಮ ಮಗು ಅಪಭ್ರಂಶ ಮಾತಾಡಲೇ ಕೂಡದು ಜೀವನ ಪರ್ಯಂತ ಎಂಬುದು ನಿಮ್ಮ ಆಸೆಯಾದರೆ ನೀವು ಅದಕ್ಕೆ ಬಾಲ್ಯದಲ್ಲೇ, ಐದನೆಯ ವರ್ಷದಿಂದ ಅಮರಕೋಶ ಕಲಿಸಿ’’ ಅಂತ ನಾನು ಸಾವಿರ ಸಲ ಹೇಳಿದ್ದೇನೆ.

’ಅಮರಕೋಶ’ ಎಂಬುದು ಸಂಸ್ಕೃತವೇ ಆದರೂ ಅದು ಬ್ರಾಹ್ಮಣಿಕೆಗೆ, ಬ್ರಾಹ್ಮಣ್ಯಕ್ಕೆ, ದೇವರ ಮೇಲಿನ ನಂಬಿಕೆ-ಅಪನಂಬಿಕೆಗೆ ಸಂಬಂಧಿಸಿದ್ದಲ್ಲ. ಸಂಸ್ಕೃತವನ್ನು ಕಲಿಯಲಾರಂಭಿಸುವ ಮುನ್ನ ಮೂಲಪಾಠವಾಗಿ, ಬಾಲ ಬೋಧೆಯಾಗಿ ಕಲಿಸಲ್ಪಡುವ ಒಂದು ಪುಟ್ಟ ಶ್ಲೋಕ ವಿಧಾನ. ಅದನ್ನು ಬರೆದಾತ ಬಹುಶಃ ಅಮರಸಿಂಹ. ಒಂದೇ ಮಾತಿನಲ್ಲಿ ಹೇಳುವುದಾದರೆ, ಅದೊಂದು ಸರಳ(?)ವಾದ tongue twister. ದೊಡ್ಡ ಗ್ರಂಥವೇನಲ್ಲ. ಎಲ್ಲ ಸೇರಿದರೆ ಶ್ಲೋಕ. ಪೂರ್ತಿ ಕಲಿತ ಮೇಲೆ ಮಗುವಿನ ಭಾಷೆ ಪೂರ್ತಿ ಶುದ್ಧಿಯಾಗಿ ಬಿಡುತ್ತದೆಂಬುದೇನೋ ನಿಜ. ಆದರೆ ’ಅಮರಕೋಶ’ವೆಂಬುದು ಪೂರ್ತಿ ಕಲಿಯುವ ತನಕ ’ಅಮರಶೋಕ’ವೇ.

ಅದನ್ನು ಕಲಿಯುವುದಕ್ಕಾಗಿ ಮತ್ತು ಗಣಿತ ಪಾಸು ಮಾಡುವುದಕ್ಕಾಗಿ ನಾನು ತಿಂದಷ್ಟು ಒದೆಯನ್ನು ಯಾವ ಹುಡುಗನೂ ತಿಂದಿರಲಾರ. ಆದರೆ ಅದರ ಫಲ ಈಗ ಉಣ್ಣುತ್ತಿದ್ದೇನೆ. ನನ್ನ ಭಾಷೆ, ಉಚ್ಚಾರ, ಹೃಸ್ವ-ದೀರ್ಘ-ಉಹುಂ ತಪ್ಪಲು ಸಾಧ್ಯವೇ ಇಲ್ಲ. ನೀವು ಹಳಗನ್ನಡವನ್ನು ಇಷ್ಟೇ ಶಾಸ್ತ್ರೀಯವಾಗಿ ಕಲಿತರೂ ಈ ಭಾಷಾ ಸ್ವಚ್ಛತೆ ಲಭ್ಯವಾಗುತ್ತದೆ. ಏಕೆಂದರೆ ಅದರ base ಇರುವುದೂ ಸಂಸ್ಕೃತದಲ್ಲೇ.

ಕೆಲವು ಪ್ರದೇಶಗಳಿರುತ್ತವೆ. ಅಲ್ಲಿ ಕನ್ನಡ ಬೇರೆಯದೇ ರೀತಿಯಲ್ಲಿ ಮಾತನಾಡಲಾಗುತ್ತದೆ. ಬೆಳಗಾವಿ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ’ಣ’ಕಾರ ಇಲ್ಲ. ಕಣ್ಣು ಅನ್ನಲು ಅವರು ’ಕನ್ನು’ ಅನ್ನುತ್ತಾರೆ. ಮಂಡ್ಯದ ಕಡೆಗೆ ’ಹ’ಕಾರ ’ಅ’ಕಾರ ಅದಲು ಬದಲಾಗುತ್ತದೆ. Fine. ಅದನ್ನು ಪ್ರಾದೇಶಿಕ ದೃಷ್ಟಿಯಿಂದ ಗೌರವಿಸೋಣ. ಆದರೆ ಭಾಷಣ, ಟೀವಿಗೆ ಆಡುವ ಮಾತು, ಮಕ್ಕಳಿಗೆ ಕಲಿಸುವ ವಿಧಾನ, ಪತ್ರಿಕೆಗೆ ಬರೆಯುವ ಕೆಲಸ-ಇವುಗಳಲ್ಲಿ ಭಾಷೆಯೆಂಬುದು ನಿಜಕ್ಕೂ ಶುದ್ಧವಾಗಿರಬೇಕು.

ನಮ್ಮ ಮಕ್ಕಳು ಸ್ವಚ್ಛ ಕನ್ನಡ ಮಾತನಾಡಬೇಕು ಎಂಬುದು ನನ್ನ ಆಸೆ. ನನ್ನ ವಿದ್ಯಾರ್ಥಿನಿ, ಈಗ ಇಂಗ್ಲಿಷ್ ಲೆಕ್ಚರರ್ ಆಗಿರುವ ಶಕೀಲಾ ಹೇಳುತ್ತಿದ್ದಳು, ’’ನೋಡಿ, ಮುಸ್ಲಿಮರಿಗೆ ಆರಂಭ ಹೇಳಿಕೊಡುವುದು ಕಷ್ಟ. ಅವರು ಪ್ರತಿಯೊಂದಕ್ಕೂ ’ಇ’ ಸೇರಿಸುತ್ತಾರೆ. ಇಸ್ಕೂಲು, ಇಸ್ಕ್ರೂ, ಇಸ್ಕ್ರೀಜ್ ಹೀಗೆ. ಹಿಂದೂಗಳು ಪ್ರತಿಯೊಂದಕ್ಕೂ ’ಉ’ ಸೇರಿಸುತ್ತಾರೆ. ಕಾರು, ಬಸ್ಸು, ಬುಕ್ಕು - ಹೀಗೆ. ಇಂಗ್ಲಿಷಿನಲ್ಲಿ ಎರಡೂ ತಪ್ಪು. ಏಕೆಂದರೆ ಇಂಗ್ಲಿಷ್ ಹೇಳಿಕೊಡುವವರಿಗೇ ಈ ತಪ್ಪು-ಇದು ತಪ್ಪೆಂಬುದು-ಗೊತ್ತಿರುವುದಿಲ್ಲ. ಮೊದಲು ಟೀಚರುಗಳಿಗೆ ಇದನ್ನು ಕಲಿಸಬೇಕು’’.

ಆ ಕೆಲಸವನ್ನು ’ಪ್ರಾರ್ಥನಾ’ದ ಇಂಗ್ಲಿಷ್ ಶಿಕ್ಷಕರಿಗೆ ನಾಗತಿಹಳ್ಳಿ ಶೋಭಕ್ಕ ಮಾಡುತ್ತಿದ್ದಾರೆ. ಅವರು ’ಇಂಡಿಯಾ ಕ್ಯಾನ್‌’ ಎಂಬ ಸಂಸ್ಥೆ ಆರಂಭಿಸಿದ್ದಾರೆ. ಶೋಭಕ್ಕ ತುಂಬ ಶ್ರದ್ಧೆಯಿರುವ ಹೆಣ್ಣು ಮಗಳು. ನಮ್ಮ ಪ್ರಿನ್ಸಿಪಾಲ್ ಶೀಲಕ್ಕನನ್ನು ಒಂದಲ್ಲ ಹತ್ತು ಸಲ ಕಂಡು, ವಿವರಿಸಿ, ಶಿಕ್ಷಕರಿಗಾಗಿಯೇ ರೂಪುಗೊಂಡಿರುವ ಈ ಕೋರ್ಸಿಗೆ ನಿಮ್ಮ ಸಿಬ್ಬಂದಿಯನ್ನು ಕಳಿಸಿ ಎಂದು ಕೇಳಿದರು. ಕೆಲವರನ್ನು ನಾವೂ ಕಳಿಸಿದೆವು. ನಿಜಕ್ಕೂ ಕೆಲವೇ ದಿನಗಳಲ್ಲಿ, ಒಂದು short term courseನಂಥದರಲ್ಲಿ ಅವರೆಲ್ಲರ ಇಂಗ್ಲಿಷು ಸ್ವಚ್ಛವಾಗಿದೆ. ಸ್ಪಷ್ಟವಾಗಿದೆ. ಇದರ ಪರಿಣಾಮ ನಾಳೆ ಮಕ್ಕಳ ಮೇಲಾಗಲಿದೆ.

ಅಂಥದೇ ಪ್ರಯತ್ನವನ್ನು ನಾನು ’ಅಮರಕೋಶ’ಕ್ಕೆ ಸಂಬಂಧಿಸಿದಂತೆ ಮಾಡಬೇಕಿದೆ. ಬ್ರಾಹ್ಮಣ್ಯ ಕಳೆದುಕೊಂಡಿದ್ದೇನೆ, ನಿಜ. ಆದರೆ ಭಾಷೆ, ಪ್ರಾವೀಣ್ಯತೆ ಯಾಕೆ ಕಳೆದುಕೊಳ್ಳಬೇಕು? ಎಂದೋ ಕಲಿತು ಮರೆತಿರುವ ಅಮರಕೋಶವನ್ನು ಮತ್ತೆ ಕಲಿಯತೊಡಗಿದ್ದೇನೆ. ಅದನ್ನು ಯಾವ ಮೂಲಕವಾದರೂ ಮಕ್ಕಳಿಗೆ ತಲುಪಿಸೋಣ ಎಂಬ ಹಪಹಪಿ. ಇದನ್ನು ಬ್ರಾಹ್ಮಣರಷ್ಟೇ ಕಲಿಯಬೇಕು ಎಂಬ ತಪ್ಪು ಕಲ್ಪನೆ ಹೋಗಲಾಡಿಸಿ, ಎಲ್ಲ ಜಾತಿಯವರಿಗೂ ಕಲಿಯುವಂಥ ಅವಕಾಶ ಕಲ್ಪಿಸಬೇಕಿದೆ.

Wish me the best.

-ನಿಮ್ಮವನು
ಆರ್.ಬಿ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 09 May, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books