Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಅಣ್ಣಾಬಾಂಡ್ ನಲ್ಲಿ ಅಣ್ಣಾ ಇಲ್ಲ ಬಾಂಡೂ ಇಲ್ಲ!

‘ಅಣ್ಣಾಬಾಂಡ್’ ಚಿತ್ರದ ಬಗ್ಗೆ ಗಾಂಧೀ ನಗರದಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ‘ಜಾಕಿ’ ಚಿತ್ರ ನೋಡಿದ್ದ ಪುನೀತ್ ಅಭಿಮಾನಿಗಳು ಸೂರಿ ನಿರ್ದೇಶನದ ‘ಅಣ್ಣಾಬಾಂಡ್’ ಚಿತ್ರದ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರ ನಿರೀಕ್ಷೆಗೆ ತಕ್ಕಂತೆ ಚಿತ್ರದುದ್ದಕ್ಕೂ ಪವರ್ ಸ್ಟಾರ್ ಡ್ಯಾನ್ಸು ಮತ್ತು ಫೈಟುಗಳಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಆದರೆ ಅದೇಕೋ ಸೂರಿ ಬಾಂಡ್‌ಗೆ ಕಥೆ ಹೆಣೆಯುವುದರಲ್ಲಿ ಎಡವಿದ್ದಾರೆ. ಆದ್ದರಿಂದಲೇ ಚಿತ್ರವು ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಈ ಎಲ್ಲಾ ನ್ಯೂನತೆಗಳ ನಡುವೆಯೂ ಬಾಂಡ್ ಗೆದ್ದಿರುವುದು ಪುನೀತ್ ಅಭಿನಯದಿಂದ ಎಂಬುದು ಸತ್ಯವೂ ಹೌದು.

“ಚೆನ್ನಾಗಿದೆ. ಇನ್ನೂ ಚೆನ್ನಾಗಿ ಮಾಡಬಹುದಿತ್ತು\"
“ಇದು ಅಣ್ಣಾವ್ರ ಬ್ಯಾನರ್‌ನಲ್ಲಿ ಬರುವ ಸಿನಿಮಾವೇ?\"
“ಹಾಡು, ಫೈಟು ಚೆನ್ನಾಗಿದೆ. ಕಥೆ ಸುಮಾರು.\"
“ಸೂರಿ ಕಥೆ ಹೇಳೋದು ಬಿಟ್ಟು ಮಿಕ್ಕೆಲ್ಲಾ ಹೇಳಿದ್ದಾರೆ\"
“ಆದರೆ ಪುನೀತ್ ಫ್ಯಾನ್ಸ್‌ಗೆ ಮೋಸ ಇಲ್ಲ\"

ಮೊದಲ ದಿನ ‘ಅಣ್ಣಾ ಬಾಂಡ್’ ಚಿತ್ರ ನೋಡಿ ಬರುವ ಅಭಿಮಾನಿಗಳು ಚಿತ್ರ ಸೂಪರ್ ಹಿಟ್, ಹಂಡ್ರೆಡ್ ಡೇಸ್ ಹೀಗೆ ಹೇಳುವುದರ ಜೊತೆಗೆ ಇಂಥ ನೂರೆಂಟು ವಿವರಣೆಗಳನ್ನು ಕೊಡುತ್ತಾರೆ. ಇದನ್ನು ಕೇಳುತ್ತಾ ಹೋದರೆ, ಚಿತ್ರ ಚೆನ್ನಾಗಿಲ್ಲ ಎಂದರ್ಥವಾ? ಎಂಬ ಪ್ರಶ್ನೆ ಬರೋದು ಸಹಜ. ‘ಅಣ್ಣಾ ಬಾಂಡ್’ ಚಿತ್ರವನ್ನು ನೋಡಿದವರು ಚಿತ್ರ ಚೆನ್ನಾಗಿಲ್ಲ ಎನ್ನುತ್ತಿಲ್ಲ. ಹಾಗಂತ ಚಿತ್ರ ತುಂಬ ಚೆನ್ನಾಗಿದೆ ಎಂದೂ ಒಪ್ಪುತ್ತಿಲ್ಲ!

ಬಹುಶಃ ಹೀಗಾಗುವುದಕ್ಕೆ ಮುಖ್ಯ ಕಾರಣ, ಚಿತ್ರದ ಮೇಲಿನ ಅತಿಯಾದ ನಿರೀಕ್ಷೆ ಮತ್ತು ಕುತೂಹಲ ಇರ ಬಹುದೇ. ಯಾವಾಗ ಪುನೀತ್ ತಮ್ಮ ಹೊಸ ಚಿತ್ರದ ಹೆಸರು ‘ಅಣ್ಣಾ ಬಾಂಡ್’ ಎಂದು ಘೋಷಿಸಿದರೋ, ಅಂದಿನಿಂದ ಚಿತ್ರದ ಬಗ್ಗೆ ಕ್ರಮೇಣ ವಿಚಿತ್ರವಾದ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತಾ ಹೋಗಿದೆ. ಕೊನೆಗೆ ಚಿತ್ರದ ಬಗ್ಗೆ ಯಾವ ರೀತಿ ನಿರೀಕ್ಷೆ ಮತ್ತು ಕುತೂಹಲ ಮಡುಗಟ್ಟಿತ್ತೆಂದರೆ, ಬಿಡುಗಡೆಯ ದಿನ ಕೆಲವು ಚಿತ್ರಮಂದಿರಗಳಲ್ಲಿ ಆರು-ಎಂಟು ಪ್ರದರ್ಶನಗಳು ಕಂಡಿವೆ. ಮಲ್ಟಿಪ್ಲೆಕ್ಸ್ಗಳಲ್ಲಿ ಹದಿನೈದಕ್ಕೂ ಹೆಚ್ಚು ಷೋಗಳು ನಡೆದಿವೆ.

ರಾಕ್‌ಲೈನ್ ಮಲ್ಟಿಪ್ಲೆಕ್ಸ್ ಒಂದರಲ್ಲೇ ಬೆಳಿಗ್ಗೆ ಏಳು ಮೂವತ್ತಕ್ಕೆ ಶುರುವಾದ ಪ್ರದರ್ಶನ ಮಧ್ಯ ರಾತ್ರಿಯವರೆಗೂ ನಡೆದಿದೆ. ಮೊದಲ ದಿನ ಮಾತ್ರ ಚಿತ್ರ ರಾಜ್ಯಾದ್ಯಂತ ನಾಲ್ಕು ಕೋಟಿಯವರೆಗಿನ ಕಲೆಕ್ಷನ್ ಕಂಡಿದೆ ಎನ್ನುವುದು ಕನ್ನಡ ಚಿತ್ರರಂಗದ ಹೊಸ ದಾಖಲೆ. ಈ ವಿಷಯಗಳು ಪ್ರೇಮ್‌ನಂಥ ನಿರ್ದೇಶಕರಿಗೆ ಸಿಕ್ಕಿದ್ದರೆ ಹಬ್ಬ ಮಾಡಿಬಿಡುತ್ತಿದ್ದರು. ಆದರೆ ‘ಅಣ್ಣಾ ಬಾಂಡ್’ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಇದನ್ನೆಲ್ಲಾ ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಲೇ ಇಲ್ಲ. ಏಕೆಂದರೆ, ಅವರು ಬೇಡಬೇಡವೆಂದರೂ ಚಿತ್ರಕ್ಕೆ ಸಾಕಷ್ಟು ಪ್ರಚಾರವಾಗಿತ್ತು. ದಿನಪತ್ರಿಕೆಗಳು, ಛಾನಲ್‌ಗಳು ಕಳೆದ ಆರು ತಿಂಗಳಿಂದ ನಿರಂತರವಾಗಿ ಚಿತ್ರದ ಬಗ್ಗೆ ಒಂದೇ ಒಂದು ಸಣ್ಣ ವಿಷಯ ಸಿಕ್ಕರೂ, ಅದನ್ನು ದೊಡ್ಡ ಸುದ್ದಿ ಮಾಡುತ್ತಿದ್ದರು. ಈ ಅತಿಯಾದ ಪ್ರಚಾರವೇ ಚಿತ್ರಕ್ಕೆ ಮುಳುವಾಗಬಹುದು ಎಂಬ ಸತ್ಯ ಮತ್ತು ಭಯ ಡಾ.ರಾಜ್ ಕ್ಯಾಂಪ್‌ಗೆ ಗೊತ್ತಾ ಗಲು ತಡವಾಗಲಿಲ್ಲ. ಹಾಗಾಗಿಯೇ ರಾಘವೇಂದ್ರ ರಾಜ್ ಕುಮಾರ್ ಅಥವಾ ಪುನೀತ್ ಚಿತ್ರದ ಬಗ್ಗೆ ಹೆಚ್ಚು ಮಾತನಾಡಿರಲಿಲ್ಲ. ಚಿತ್ರದ ಬಗ್ಗೆ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಬೇಡ, ಇದು ಮಿಕ್ಕೆಲ್ಲಾ ಚಿತ್ರಗಳಂತೆ ಒಂದು ಚಿತ್ರ ಎಂದು ಹೇಳಲು ಮರೆತಿರಲಿಲ್ಲ.

ಚಿತ್ರ ಹೀಗಾಗಬಹುದು, ಚಿತ್ರಕ್ಕೆ ಈ ರೀತಿಯ ಪ್ರತಿ ಕ್ರಿಯೆಗಳು ಬರಬಹುದು ಎಂದು ಅವರಿಗೆ ಗೊತ್ತಿತ್ತಾ? ಇದುವರೆಗಿನ ಎಪ್ಪತ್ತೊಂಬತ್ತು ಚಿತ್ರಗಳಲ್ಲಿ ಬೇರೆ ಯಾವ ಚಿತ್ರಕ್ಕೂ ಡಾ.ರಾಜ್ ಕ್ಯಾಂಪ್‌ನವರು ಇಷ್ಟೊಂದು ಸರ್ಕಸ್ ಮಾಡಿರಲಿಲ್ಲ, ಇಷ್ಟೊಂದು ತಲೆ ಕೆಡಿಸಿಕೊಂಡಿರ ಲಿಲ್ಲವಂತೆ. ಏಕೆಂದರೆ, ಚಿತ್ರದ ಹೆಸರು ಹೊರಕ್ಕೆ ಬಿಟ್ಟಾಗಲೇ, ಚಿತ್ರಕ್ಕೆ ಒಂದು ದೊಡ್ಡ ಗೆಲುವು ಸಿಕ್ಕಿಬಿಟ್ಟಿತ್ತು. ಇನ್ನು ‘ಜಾಕಿ’ ನಂತರ ಪುನೀತ್‌ರನ್ನು ಸೂರಿ ಎರಡನೆಯ ಬಾರಿಗೆ ನಿರ್ದೇಶಿಸುತ್ತಾರೆ ಎಂಬ ವಿಷಯ ಹೊರ ಬೀಳುತ್ತಿದ್ದಂತೆಯೇ ಚಿತ್ರ ದೊಡ್ಡ ಗೋಪುರವಾಗತೊಡಗಿತು. ಹಾಗಾಗಿ ಚಿತ್ರ ತಮ್ಮ ಕೈ ಮೀರಿ ದೊಡ್ಡದಾಗುತ್ತಿದೆ, ತಾವು ಮಾತಾಡದಿದ್ದರೂ ಚಿತ್ರದ ಪ್ರಚಾರ ಹೆಚ್ಚಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಪುನೀತ್ ಹಾಗೂ ರಾಘ ವೇಂದ್ರ ರಾಜ್‌ಕುಮಾರ್ ಚಿತ್ರದ ಬಗ್ಗೆ ಮಾತು ಕಡಿಮೆ ಮಾಡಿದ್ದರು.


ಸೂಪರ್ ಹಿಟ್ ಎನ್ನುವ ರೇಂಜಿನಲ್ಲಿದ್ದ ‘ಅಣ್ಣಾ ಬಾಂಡ್’ ಹೀಗೆ ಮಿಶ್ರ ಪ್ರತಿಕ್ರಿಯೆ ಕಾಣುವುದಕ್ಕೆ ಕಾರಣ ವೇನು? ಎಂಬ ಪ್ರಶ್ನೆಗೆ ಎಲ್ಲರೂ ಬೆರಳು ತೋರಿಸುವುದು ಚಿತ್ರದ ನಿರ್ದೇಶಕ ಸೂರಿಯತ್ತ. ಸೂರಿ ಇಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ಅಷ್ಟರಲ್ಲಿ ಅವರು ಗೆಲ್ಲುವುದು ಸಂಭಾಷಣೆಯಲ್ಲಿ ಮಾತ್ರ ಎಂಬುದು ಚಿತ್ರ ನೋಡಿದ ಪ್ರತಿಯೊಬ್ಬರೂ ಹೇಳುತ್ತಾರೆ. ರಿಸ್ಕ್ ತೆಗೆದುಕೊಳ್ಳುವ ಭಯವೋ? ಹೊಸದನ್ನು ಮಾಡುವ ಅಂಜಿಕೆಯೋ? ಮಾಡಿಕೊಂಡ ಕಥೆ ಚೆನ್ನಾಗಿದೆ ಎಂಬ ಆತ್ಮವಿಶ್ವಾಸವೋ? ಅಥವಾ ಮತ್ತೇನೋ... ಸೂರಿ ಈ ಚಿತ್ರಕ್ಕೆ ಹೆಚ್ಚು ಹೋಂ ವರ್ಕ್ ಮಾಡದೆ ಸುಮ್ಮನೆ ‘ಅಣ್ಣಾ ಬಾಂಡ್’ ಎಂಬ ಹೆಸರಿಟ್ಟುಕೊಂಡು ಯುದ್ಧಕ್ಕೆ ಹೊರಟುಬಿಟ್ಟರಾ ಅನ್ನಿಸು ತ್ತದೆ. ಚಿತ್ರದಲ್ಲಿ ಏನೇನೋ ಇರಬೇಕು ಎಂಬ ಕಲ್ಪನೆ ಯಿಂದ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕ, ಚಿತ್ರದಲ್ಲಿ ಹೆಚ್ಚೇನೂ ಇಲ್ಲದ್ದನ್ನು ನೋಡಿ ಗಾಬರಿಯಾಗಿದ್ದಾನೆ. ದ್ವಿತೀಯಾರ್ಧ ದಲ್ಲಿ ಯಾವುದೇ ಏರಿಳಿತಗಳಿಲ್ಲದೆ ಸಾಗುವ ಚಿತ್ರ ನೋಡಿ ಸುಸ್ತಾಗಿದ್ದಾನೆ. ‘ಜಾಕಿ’ ಚಿತ್ರದಲ್ಲಿ ಒಂದು ಸಣ್ಣ ಕಥೆಯಿತ್ತು. ಒಂದು ಹುಡುಕಾಟವಿತ್ತು. ಆ ಹುಡುಕಾ ಟದ ಸುತ್ತ ಒಂದಿಷ್ಟು ಕುತೂಹಲ, ಕೌತುಕ ಎಲ್ಲವೂ ಇತ್ತು. ಅದೇ ಕಾರಣಕ್ಕೆ ‘ಜಾಕಿ’ ಎಲ್ಲರ ಮನ ಗೆದ್ದಿತ್ತು. ‘ಅಣ್ಣಾ ಬಾಂಡ್’ನಲ್ಲೂ ಒಂದು ಹುಡುಕಾಟವಿದೆ. ಒಂದಿಷ್ಟು ಸಸ್ಪೆನ್ಸ್ ವಿಷಯಗಳಿವೆ. ಆದರೆ, ಕಥೆ ಸುತ್ತು ವುದು ಬಾಂಡ್ ರವಿ ಸುತ್ತ. ಆರಂಭದಲ್ಲಿ ಅಣ್ಣಾ ಬಾಂಡ್ ಎಂಬ ವ್ಯಕ್ತಿ ರೌಡಿಗಳನ್ನು, ರೇಪಿಸ್ಟ್‌ಗಳನ್ನು ಕಿಡ್ನಾಪ್ ಮಾಡಿ, ಅವರ ತಲೆ ಬೋಳಿಸಿ, ನರಗಳನ್ನು ಗಂಟು ಹಾಕಿ, ಅರೆಹುಚ್ಚರನ್ನಾಗಿ ಮಾಡಿ ಬೀದಿಗೆ ಬಿಸಾಕುತ್ತಿರು ತ್ತಾನೆ. ಅವನ್ಯಾರು ಎಂದು ಹುಡುಕಿದರೆ, ಅವನೇ ಬಾಂಡ್ ರವಿ ಎಂಬ ಸಣ್ಣ ಊರಿನ ಕರಾಟೆ ಮಾಸ್ಟರ್ ಎಂದು ಗೊತ್ತಾಗುತ್ತದೆ. ಅವನ್ಯಾಕೆ ಹಾಗೆ ಮಾಡುತ್ತಿರು ತ್ತಾನೆ ಎಂದರೆ ಅಲ್ಲೊಂದು ಫ್ಲಾಶ್‌ಬ್ಯಾಕ್ ಇದೆ. ಆ ಫ್ಲಾಶ್‌ಬ್ಯಾಕ್‌ನಲ್ಲಿ ಅವನೊಬ್ಬ ಹುಡುಗಿಯನ್ನು ಪ್ರೀತಿ ಸುತ್ತಾನೆ. ಅವರಿಬ್ಬರೂ ಹತ್ತಿರವಾಗಬೇಕು ಎನ್ನುವಷ್ಟ ರಲ್ಲಿ ಚಾರ್ಲಿ ಎಂಬ ವಿಲನ್ ಯಾವುದೋ ಕಾರಣಕ್ಕೆ ಹೊತ್ತೊಯ್ಯುತ್ತಾನೆ. ಅವರಿಬ್ಬರನ್ನು ಪತ್ತೆ ಮಾಡುವುದಕ್ಕೆ ಒಬ್ಬಬ್ಬೇ ರೌಡಿಯನ್ನು ವಿಚಾರಿಸಿ, ಹಾಫ್‌ಮೆಂಟಲ್ ಮಾಡಿ ಸಮಾಜ ಸೇವೆ ಮಾಡುತ್ತಿರುತ್ತಾನೆ.

ಹೀಗೆ ಚಿತ್ರ ಎಲ್ಲಿಂದಲೋ ಶುರುವಾಗಿ, ಎಲ್ಲಿಗೋ ಮುಟ್ಟುತ್ತದೆ. ಚಿತ್ರದಲ್ಲಿ ಒಂದಿಷ್ಟು ಗಮನಸೆಳೆಯುವ ಹಾಡುಗಳು, ಫೈಟುಗಳಿವೆ. ಜೊತೆಗೆ ಸೂರಿಯ ಎಂದಿನ ಹಾಟ್ ಅಂಡ್ ಸ್ಪೈಸಿ ಸಂಭಾಷಣೆಗಳಿವೆ. ಅವೆಲ್ಲಾ ಪ್ರೇಕ್ಷಕರಿಗೆ ಮಜಾ ಕೊಡುತ್ತವಾದರೂ, ಒಟ್ಟಾರೆ ಚಿತ್ರ ಮುಗಿಯುವ ಹೊತ್ತಿಗೆ ನೀರಸವಾಗಿ ಬಿಡುತ್ತದೆ. ತಮ್ಮ ನಿರೀಕ್ಷೆಗೆ ಸರಿಯಾಗಿ ಚಿತ್ರ ಯಾವಾಗ ಮೂಡಿ ಬಂದಿ ಲ್ಲವೋ, ಅದೇ ಕಾರಣಕ್ಕೆ ‘ಅಣ್ಣಾ ಬಾಂಡ್’ ನೋಡಿದವ ರೆಲ್ಲರೂ ಮಿಶ್ರವಾಗಿ ಮಾತನಾಡುತ್ತಿದ್ದಾರೆ. ಇನ್ನೂ ಚೆನ್ನಾ ಗಿರಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ಕಲೆಕ್ಷನ್ ಸದ್ಯಕ್ಕೆ ಚೆನ್ನಾಗಿದೆ. ರಾಘವೇಂದ್ರ ರಾಜ್ ಕುಮಾರ್ ಲಾಭದಲ್ಲಿದ್ದಾರೆ. ಅದೇ ಮಾತನ್ನು ಚಿತ್ರ ಕೊಂಡ ವಿತರಕರ ಬಗ್ಗೆ ಹೇಳುವುದು ಕಷ್ಟ. ಡಾ.ರಾಜ್ ಬ್ಯಾನರ್ ಚಿತ್ರವೆಂದರೆ ಅಲ್ಲಿ ಯಾವುದೇ ವಾದ- ವಿವಾದ ವಿಲ್ಲದೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ‘ಅಣ್ಣ ಬಾಂಡ್’ಗೆ ಮಾತ್ರ ರಾಘವೇಂದ್ರ ರಾಜ್‌ಕುಮಾರ್ ಸಾಕಷ್ಟು ತಿಣುಕಾಡಿದ್ದಾರೆ ಎಂಬ ಮಾತು ಎಲ್ಲೆಡೆಯಿಂದ ಕೇಳಿ ಬರುತ್ತಿದೆ.

ಚಿತ್ರದ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಮಧ್ಯದಲ್ಲಿ ಸೂರಿಗೂ-ರಾಘವೇಂದ್ರ ರಾಜ್‌ಕುಮಾರ್‌ಗೂ ಹೊಂದಣಿಕೆಯಾಗುತ್ತಿಲ್ಲ ಎಂಬ ಸುದ್ದಿ ಬಂತು. ಇನ್ನೊಂದು ಮೂಲದ ಪ್ರಕಾರ ಕೇಳಿ ಬಂದಿದ್ದೇನೆಂದರೆ ಪುನೀತ್ ಶೂಟಿಂಗ್‌ನ ಮಧ್ಯದಲ್ಲಿ ಒಮ್ಮೆ ಸೂರಿ ವಿರುದ್ಧ ತಿರುಗಿಬಿದ್ದು ಎದ್ದೇ ಹೋಗಿದ್ದ ರಂತೆ. ಸೂರಿ ಶೂಟಿಂಗ್ ಮಾಡು ತ್ತಿದ್ದ ಕಥೆಗೂ ಅವರು ಪೇಪರ್‌ನಲ್ಲಿ ಕೊಟ್ಟಿದ್ದ ಕಥೆಗೂ ಸಂಬಂಧವಿಲ್ಲ ದಂತೆ ಚಿತ್ರೀಕರಿಸುತ್ತಿದ್ದಾರೆ ಎನ್ನುವುದೇ ಕಾರಣವಾಗಿತ್ತು. ಮಾರನೇ ದಿನ ರಾಘವೇಂದ್ರ ರಾಜ್‌ಕುಮಾರ್ ಪುನೀತ್ ಮನವೊಲಿಸಿ ಶೂಟಿಂಗ್ ಮುಂದುವರಿಯುವಂತೆ ಮಾಡಿದ್ದರಂತೆ. ಸೂರಿ ನಿರ್ಮಾಪಕರ, ನಿರ್ದೇಶಕ ಎಂದು ಗುರುತಿಸಿಕೊಂಡು ಬಂದವರು. ಇದುವರೆಗೂ ಅವರ ಬಗ್ಗೆ ಗಾಂಧಿನಗರದಲ್ಲಿ ಒಂದೇ ಒಂದು ದೂರು ಇರಲಿಲ್ಲ. ಸೂರಿಗೆ ಮೊದಲು ‘ದುನಿಯಾ’ ಮಾಡುವುದಕ್ಕೆ ಅವಕಾಶ ಕೊಟ್ಟ ಟಿ.ಪಿ. ಸಿದ್ಧರಾಜು ಇಂದಿಗೂ ಸೂರಿಯನ್ನು ಕೊಂಡಾಡುತ್ತಾರೆ. ಸೂರಿ ಇಲ್ಲದಿದ್ದರೆ ತಾವು ಈ ಮಟ್ಟಕ್ಕೆ ಬೆಳೆಯುವುದು ಕಷ್ಟವಾಗುತಿತ್ತು ಎನ್ನುತ್ತಾರೆ. ಅದೇ ತರಹ ಬೇರೆ ನಿರ್ಮಾಪಕರಿಗೂ ಸೂರಿಯ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ, ಇಲ್ಲೇನಾಯಿತು? ಸೂರಿ ಹಾಗೂ ರಾಘವೇಂದ್ರ ಮಧ್ಯೆ ಚೆನ್ನಾಗಿಲ್ಲ ಎಂದು ಬಿಂಬಿತವಾಗಿದೆ.

ಆ ತರಹದ ಗೊಂದಲಗಳು ನಡೆಯುತ್ತಿರುವಾಗಲೇ ವಿತರಕ ಪ್ರಸಾದ್, ಚಿತ್ರದಿಂದ ಹೊರನಡೆದರು. ಅದಕ್ಕೂ ಮುನ್ನ ಹದಿನಾರು ಕೋಟಿ ಕೊಟ್ಟು ಚಿತ್ರವನ್ನು ಕರ್ನಾ ಟಕದಾದ್ಯಂತ ವಿತರಣೆ ಮಾಡುವುದಾಗಿ ಹೇಳಿಕೊಂಡಿದ್ದ ಪ್ರಸಾದ್, ಚಿತ್ರದಿಂದ ಹಿಂದೆ ಸರಿದಾಗ ರಾಘವೇಂದ್ರ ರಾಜ್‌ಕುಮಾರ್ ಕಂಗಾಲಾಗಿದ್ದು ನಿಜ. ಇದು ಸಾಲದೆಂಬಂತೆ, ‘ಅಣ್ಣಾ ಬಾಂಡ್’ ಬಿಡುಗಡೆಯ ದಿನವೇ ‘ಕಠಾರಿವೀರ ಸುರಸುಂದರಾಂಗಿ’ ಸಹ ಬಿಡುಗಡೆಯಾಗುತ್ತಿದೆ ಎಂದು ಸುದ್ದಿಯಾದಾಗ ರಾಘವೇಂದ್ರ ರಾಜ್‌ಕುಮಾರ್ ತತ್ತರಿಸಿ ಹೋದರು. ಕೊನೆಗೆ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಿಕೊಂಡು ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಇದುವರೆಗೂ ಯಾವತ್ತೂ ಡಾ.ರಾಜ್ ಬ್ಯಾನರ್‌ನ ಚಿತ್ರಗಳು ಬಿಡುಗಡೆಯಾದ ದಿನ ಹೀಗೆ ವಿಶೇಷ ಪೂಜೆ ನಡೆದಿರಲಿಲ್ಲ. ‘ಅಣ್ಣಾ ಬಾಂಡ್’ ಬಿಡುಗಡೆಯ ದಿನವಂತೂ ಪುನೀತ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಇಬ್ಬರೂ ದೇವಸ್ಥಾನಗಳಿಗೆ ತೆರಳಿ ಪೂಜೆ ಮಾಡಿಸಿದ್ದರು. ಅದು ಎಲ್ಲಾ ಛಾನಲ್‌ಗಳಲ್ಲಿ ಕಾಣಿಸಿತು. ಬಿಡುಗಡೆಯ ದಿನ ಯಾವತ್ತೂ ಮಾಡಿಸದ ಪೂಜೆ ಈ ಚಿತ್ರಕ್ಕೆ ಮಾತ್ರ ರಾಘವೇಂದ್ರ ಮಾಡಿಸಿದ್ದೇಕೆ ಎಂದು ಗಾಂಧಿನಗರ ಯೋಚಿಸುತ್ತಿದೆ.
______________________________________________


ಸೂರಿ ದಾರಿ ತಪ್ಪಿದ್ದಕ್ಕೆ ನೂರು ಕಾರಣ

ಡಾ.ರಾಜ್‌ಕುಮಾರ್ ಸಂಸ್ಥೆಯ, ಅದರಲ್ಲೂ ಕನ್ನಡದ ನಂ.ಒನ್ ಹೀರೋ ಪುನೀತ್ ರಾಜ್‌ಕುಮಾರ್ ಚಿತ್ರವೆಂದ ಮೇಲೆ ಅದು ಓಡುತ್ತದೆ ಎಂಬುದು ಎಲ್ಲರ ಮಾತು. ಒಂದು ಕಡೆ ಆ ಕುಟುಂಬದ ಬಗೆಗಿನ ಗೌರವ, ಇನ್ನೊಂದು ಕಡೆ ಅಭಿಮಾನಿಗಳ ಸಮೂಹ. ‘ಅಣ್ಣಾ ಬಾಂಡ್’ ಚಿತ್ರ ಮಾಡುವಾಗ ರಾಜ್ ಬ್ಯಾನರ್‌ನ ಸಿನೆಮಾ ಎಂಬ ಆತಂಕ ನಿರ್ದೇ ಶಕ ಸೂರಿಯವರನ್ನು ಕಾಡಿದ್ದಿರಬಹುದೇ? ಅದು ತೆರೆಮೇಲೂ ಕಾಣಿಸುತ್ತದೆ! ಆದರೆ ಪುನೀತ್ ನಟನೆ ಯಲ್ಲಿ ಅದೇ ಶ್ರದ್ಧೆ ಇದೆ. ‘ನಾನು ನಿರ್ದೇಶಕರ ನಟ’ ಎಂದು ತಮ್ಮನ್ನು ಸಮರ್ಪಿಸಿಕೊಳ್ಳುವಂತೆ ಇಲ್ಲಿಯೂ ಸೂರಿಗೆ ಸಂಪೂರ್ಣವಾಗಿ ಒಪ್ಪಿಸಿಕೊಂಡಿದ್ದಾರೆ. ಆದರೆ ಸೂರಿ ಎಲ್ಲೋ ಗುರಿ ತಪ್ಪಿದಂತಿದೆ. ಚಿತ್ರವನ್ನು ಪುನೀತ್‌ನ ರೆಗ್ಯುಲರ್ ಸಿನೆಮಾದಿಂದ ಬ್ರೇಕ್ ಮಾಡಲು ಹೋಗಿ ಕಲಾಕೃತಿಯೇ ಇಲ್ಲದ ಉತ್ತಮ ಚೌಕಟ್ಟನ್ನು ಕೊಟ್ಟಿದ್ದಾರೆ! ಚಿತ್ರದಲ್ಲಿ ಅಭಿಮಾನಿಗಳು ಸಿಳ್ಳೆ ಹಾಕಿ ಎಂಜಾಯ್ ಮಾಡುವಂಥ ಹೀರೋಯಿಸಂ ದೃಶ್ಯಗಳು ಕಡಿಮೆಯೇ. ‘ಅಣ್ಣಾ ಬಾಂಡ್’ ಕಡೇ ಪಕ್ಷ ಇಂಗ್ಲಿಷ್‌ನ ‘ಜೇಮ್ಸ್ ಬಾಂಡ್’ ಚಿತ್ರಗಳ ಮಾದರಿಯಲ್ಲಿ ಬಂದ ಡಾ.ರಾಜ್ ಚಿತ್ರಗಳಂತೆ ಕೊಟ್ಟಿದ್ದರೆ ಅಭಿಮಾನಿಗಳು ಹುಚ್ಚೆದ್ದು ಹೋಗಿರುತ್ತಿದ್ದರು. ಆ ಕಾಲಕ್ಕೆ ರಾಜ್ ಇಮೇಜ್ ಬದಲಾಯಿಸಲೆಂದೇ ನಿರ್ದೇಶಕರಾದ ದೊರೆ- ಭಗವಾನ್ ‘ಜೇಡರಬಲೆ’ಯಿಂದ ಆರಂಭಿಸಿ ಅಣ್ಣಾವ್ರ ಬಾಂಡ್ ಶೈಲಿಯ ಚಿತ್ರಗಳನ್ನು ಮಾಡಿ ಯಶಸ್ವಿಯಾದರು. ಆದರೆ ಇಲ್ಲಿ ಪುನೀತ್‌ಗೆ ಇರುವ ಇಮೇಜನ್ನೇ ಚಿತ್ರ ದಿಕ್ಕಾಪಾಲು ಮಾಡುತ್ತದೆ. ಕೊನೆಗೆ ಈ ಚಿತ್ರಕ್ಕೆ ಪುನೀತ್‌ರಂಥ ಹೀರೋ ಬೇಕಿತ್ತಾ ಅನ್ನಿಸಿದರೂ ಅಚ್ಚರಿ ಇಲ್ಲ. ಪಾತ್ರದಲ್ಲಿ ಪುನೀತ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದಕ್ಕಾಗಿ ದೇಹ ದಂಡಿಸಿ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ. ಈ ಕಾರಣ ಮತ್ತು ಮಧ್ಯದಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌ಗೆ ಹುಷಾರಿಲ್ಲದೆ ಚಿತ್ರ ಪೂರ್ಣವಾಗಲು ಬರೋಬ್ಬರಿ ಒಂದು ವರ್ಷವನ್ನೇ ತೆಗೆದುಕೊಂಡಿದೆ. ಇದಕ್ಕೆ ಸುಮಾರು ಹನ್ನೆರಡು ಕೋಟಿ ವೆಚ್ಚ ಮಾಡಲಾಗಿದೆ ಎನ್ನಲಾಗುತ್ತಿದೆ.

ಚಿತ್ರದಲ್ಲಿ ನಿಜವಾಗಿ ಗಿಟ್ಟುವುದು ಗ್ರಾಫಿಕ್ಸ್‌ನಲ್ಲೇ ಮಾಡಿರುವ ‘ಅಣ್ಣಾ ಬಾಂಡ್’ ಟೈಟಲ್ ಸಾಂಗ್. ಹೈದರಾಬಾದ್ ಮೂಲದ ಫಿಕ್ಸಲ್ ಲಾಯ್ಡ್ ಸಂಸ್ಥೆ ಇದನ್ನು ಮಾಡಿದೆ. ಟೀನೇಜರ‍್ಸ್ ಜೊತೆಯಲ್ಲಿ ವಿಶೇಷವಾಗಿ ಮಕ್ಕಳನ್ನೇ ದೃಷ್ಟಿಯಲ್ಲಿಟ್ಟು ಕೊಂಡು ಚಿತ್ರಿಸಲಾಗಿದೆ. ಎಲ್ಲಾ ಬಾಂಡ್‌ಗಳಿಗೂ ಅಣ್ಣಾ ಇವನು ಎನ್ನುವಂಥ ಹಾಡು ಪೂರ್ತಿಯಾಗಿ ಗ್ರಾಫಿಕ್ಸ್‌ನಲ್ಲೇ ಯೋಜಿಸಲಾಗಿದೆ. ಅದರಲ್ಲೂ ಲಾಯ್ಡ್ ಸಂಸ್ಥೆ ಸೊಗಸಾದ ಕೆಲಸ ಮಾಡಿದೆ. ಈಗಾಗಲೇ ಸಾಕಷ್ಟು ಖ್ಯಾತಿ ಈ ಸಂಸ್ಥೆಯ ಬಗಲಿಗಿದೆ.

‘ಪುನೀತ್ ಟೆಕ್ನೀಷಿಯನ್ಸ್ ಆಕ್ಟರ್. ಸೆಟ್‌ಗೆ ಬ್ಲಾಂಕ್ ಆಗಿ ಬರ‍್ತಾರೆ. ಬಂದವರೇ ‘ನಾನೇನ್ ಮಾಡ್ಬೇಕು ಹೇಳಿ’ ಅಂತಾರೆ. ಅವರೊಂದಿಗೆ ಕೆಲಸ ಮಾಡುವುದೇ ಖುಷಿ’ ಇದು ಕೊರಿಯೋಗ್ರಾಫರ್ ಇಮ್ರಾನ್ ಮಾತು. ಅವರ ಈ ಮಾತಿಗೆ ಪಕ್ಕಾ ಉದಾಹರಣೆ ಚಿತ್ರದಲ್ಲಿ ಮಾಸ್ ಫೀಲ್‌ನಲ್ಲಿ ಲವ್ ಹೇಳಲು ಮಾಡಿರುವ ಹಾಡು ‘ತುಂಬಾ ನೋಡ್ಬೇಡಿ ಲವ್ ಆಯ್ತದೆ... ’ ಇದು ಯೋಗರಾಜ್ ಭಟ್ ಬರೆದಿರುವ ಹಾಡು. ಇದರಲ್ಲಿ ನಾರ್ಮಲ್ ಸೈಕಲ್ ಮೇಲೆ ಏನೆಲ್ಲಾ ಕಂಟ್ರೋಲ್ ಮಾಡಬಹು ದೆಂದು ಪುನೀತ್ ತೋರಿಸಿದ್ದಾರೆ. ಸೈಕಲ್‌ನಲ್ಲಿ ಒಂದೊಂದೇ ಸ್ಟೆಪ್ಸ್ ಜಂಪ್ ಮಾಡ್ತಾರೆ. ಪುನೀತ್‌ನಂತಹ ಆಕ್ಟರ್‌ಗೆ ಮಾತ್ರ ಸೈಕಲ್ ಬ್ಯಾಲೆನ್ಸಿಂಗ್ ಸಾಧ್ಯ.

ಪುನೀತ್ ತುಂಬಾ ಚಿಕ್ಕವರಿದ್ದಾಗ ತಂದೆಯ ಜೊತೆಯಲ್ಲಿ ನಟಿಸಿ ಅದ್ಭುತವಾಗಿ ಹಾಡಿದ್ದ ‘ಚಲಿಸುವ ಮೋಡಗಳು’ ಚಿತ್ರದ ‘ಕಾಣದಂತೆ ಮಾಯವಾದನು ನಮ್ಮ ಶಿವ’ ಹಾಡನ್ನು ರೀಮಿಕ್ಸ್ ಮಾಡುವ ಆಲೋಚನೆ ಯಾಕೆ ಬಂತೆನ್ನುವುದೇ ಅಚ್ಚರಿ. ಇದನ್ನು ಚಿತ್ರದಲ್ಲಿ ‘ಸ್ಟಫ್’ ಕೊಡಲಾಗಿ ಗಿಮಿಕ್‌ಗಾಗಿ ಬಳಸಿದ್ದಾರಾ? ಇದನ್ನು ಸ್ಪೇನ್ ನಲ್ಲಿ ಚಿತ್ರಿಸಲಾಗಿದೆ. ಅಲ್ಲಿ ತುಂಬಾ ರಿಸ್ಕ್ ತೆಗೆದುಕೊಂಡು ಶೂಟಿಂಗ್ ಮಾಡಲಾಗಿದೆ. ಈಗಾಗಲೇ ಈ ಹಾಡು ಜನಪ್ರಿಯತೆ ಗಳಿಸಿದ್ದರಿಂದ ಈ ಕಲ್ಪನೆಯಿಂದ ಹೊರ ತರುವ ಸಲುವಾಗಿ ಅದನ್ನು ವಿದೇಶದಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಯಿತು! ನಿರ್ದೇಶಕರಿಗೆ ಎಲ್ಲೂ ಕೊರತೆ ಎನಿಸಬಾರದು ಎಂದು ರಾಘಣ್ಣ ಸಾಕಷ್ಟು ಯೋಚಿಸಿಯೇ ಇದಕ್ಕೆ ಒಪ್ಪಿಗೆ ಕೊಟ್ಟಿದ್ದಾರಂತೆ. ಲಿಂಕೇ ಇಲ್ಲದೆ ಸಾಗುವ ಚಿತ್ರ ರಾಜ್ ಅವರ ಬಾಂಡ್ ಶೈಲಿಯ ಚಿತ್ರಗಳಲ್ಲಿ ಜನ-ದೇಶ ರಕ್ಷಣೆಗಾಗಿ ತಾನಿದ್ದೇನೆ ಎನ್ನುವಂಥ ಸಂದೇಶ ವನ್ನೂ ಕೊಡುವುದಿಲ್ಲ. ಕಡೇ ಪಕ್ಷ ತಾನು ಪ್ರೀತಿಸುವ ಹುಡುಗಿಗಾಗಿ ಫೈಟ್ ಮಾಡುತ್ತಾನಾ? ಅದೂ ಕಾಣಿಸುವುದಿಲ್ಲ. ಪ್ರಿಯಾಮಣಿ ಮತ್ತು ನಿಧಿ ಸುಬ್ಬಯ್ಯನ ಪಾತ್ರಗಳನ್ನು ಬಿಂದಾಸ್ ಹುಡುಗಿಯರು ಎನ್ನುವ ರೀತಿಯಲ್ಲಿ ತೋರಿ ಸಲು ಹೋಗಿ ಅತಿರೇಕವೆನಿಸುತ್ತೆ.

ಸೂರಿ ಚಿತ್ರದಲ್ಲಿ ಅರ್ಥವೇ ಇಲ್ಲದೆ ಟೆಕ್ನಾಲಜಿಯನ್ನು ಬಳಸಿಕೊಳ್ಳಬೇಕೆಂಬ ಉಮೇದಿಗೆ ಬಿದ್ದಿದ್ದಾರೆ ಎನಿಸುತ್ತದೆ. ಅವರ ನಿಜವಾದ ಅಂತಃಸತ್ವ ಕಾಣಿಸುವುದು ‘ದುನಿಯಾ’ ಚಿತ್ರದಲ್ಲಿ. ಕೊಳಗೇರಿ, ಆನಂತರದ ಕೆಳ ಮಧ್ಯಮ ವರ್ಗಗಳ ಕಥೆಯನ್ನು ಅವರು ಉತ್ತಮವಾಗೇ ಮಾಡಬಲ್ಲರು.ಅದು ಈ ಚಿತ್ರದಲ್ಲೂ ಕಾಣಿಸುತ್ತದೆ.

ಪುನೀತ್ ಕರಾಟೆ ಹೇಳಿಕೊಡುತ್ತಾ ಮಸಾಜ್ ಮಾಡುವುದಕ್ಕೆ ನೆರವಾಗುತ್ತಾ ಮುಗ್ದನಾಗಿರುವ ತನಕ ಪರ ವಾಗಿಲ್ಲ. ಚಿತ್ರದ ಇಂಟರ್‌ವಲ್ ನಂತರ ಹಳ್ಳಿಯಿಂದ ಶಿಫ್ಟ್ ಆಗುವ ಕಥೆಗೆ ಸ್ವತಃ ಸೂರಿಯೇ ಹೊರಗಿನ ವ್ಯಕ್ತಿಯಾಗಿದ್ದಾರೆ. ಚಿತ್ರ ಅವರ ನಿಯಂತ್ರಣ ಮೀರಿದೆ. ಒಬ್ಬ ಕಥೆಗಾರ ತನ್ನೊಳಗಿನ ಕಥೆ ಹೇಳುವುದಕ್ಕೂ, ಕಥೆ ಕಟ್ಟಿ ಹೇಳುವುದಕ್ಕೂ ಇರುವ ವ್ಯತ್ಯಾಸವದು. ಜಾಕೀಶ್ರಾಫ್ ಎಂಟ್ರಿ ಆದ ಮೇಲಂತೂ ಬರೀ ಫೈಟ್ಸ್ ಇವೆ.

ಫೈಟ್ ಮಾಸ್ಟರ್ ರವಿ ವರ್ಮ ಅವರನ್ನು ಕರೆಸಿ ಮಾತಾಡುವಾಗ ರಾಘಣ್ಣ ‘ಜಾಕಿ’, ‘ಸಾರಥಿ’ ಚಿತ್ರಗಳನ್ನು ತುಂಬಾ ಚೆನ್ನಾಗಿ ಮಾಡಿದ್ದೀರ. ಜನ ಅದನ್ನು ಮರೆತು ಹೋಗಬೇಕು ಆ ರೀತಿಯ ಫೈಟ್ಸ್‌ನ ಇದರಲ್ಲಿ ಕೊಡಬೇಕು ಅಂತ ಹೇಳಿದ್ದರಂತೆ. ಆ ಪ್ರಕಾರ, ಸೂರಿ ಹೇಳಿದ ಸನ್ನಿವೇಶಕ್ಕೆ ತಕ್ಕಂತೆ ಸ್ಟೈಲಿಶ್ ಫೈಟ್ಸ್, ಕಿಕ್ ಬಾಕ್ಸಿಂಗ್ ಫೈಟ್, ಕಾಡು ಜನ ದಾಳಿ ಮಾಡುವ ಶೈಲಿಯ ಫೈಟ್ ಕೊಟ್ಟಿದ್ದಾರೆ. ಆದರೆ ಈ ಚಿತ್ರದಲ್ಲಿ ಪುನೀತ್ ಫೈಟ್ಸ್ ಮಾಡುವುದನ್ನೇ ಹೆಚ್ಚಾಗಿ ತೋರಿಸಬೇಕೆಂದು ಸೂರಿ ಚಿತ್ರದಲ್ಲಿ ಅರ್ಥವೇ ಇಲ್ಲದೆ ಕಿಕ್ ಬಾಕ್ಸಿಂಗ್‌ನ ಅತಿಯಾಗಿ ತಂದಿದ್ದಾರೆ. ಒಂದು ಸತ್ಯವೆಂದರೆ ಯಾವುದೇ ಒತ್ತಡಕ್ಕೆ ಸಿಕ್ಕು ಚಿತ್ರ ಮಾಡಲೇಬೇಕು ಎನ್ನುವಂಥ ಸ್ಥಿತಿಯಲ್ಲಿ ಸೂರಿ ಖಂಡಿತಾ ಇಲ್ಲ. ಇದರಲ್ಲಿ ರವಿವರ್ಮ ಯೋಜಿಸಿದ್ದು ಪಕ್ಕಾ ರಿಯಲಿಸ್ಟಿಕ್ ಫೈಟ್ಸ್‌ನ್ನು. ಇದಕ್ಕಾಗಿ ಪುನೀತ್ ‘ಸಿಕ್ಸ್ ಪ್ಯಾಕ್’ ಬರಿಸಿಕೊಂಡು ದೇಹವನ್ನು ಹುರಿಗೊಳಿಸಿಕೊಂಡರು. ಪ್ರತಿ ಫೈಟ್‌ಗೆ ಮೊದಲು ಸಣ್ಣಪುಟ್ಟ ಪೆಟ್ಟಾಗುತ್ತದೆ ಎಂದು ತಿಳಿಸಿದಾಗಲೂ ‘ಓಕೆ ಮಾಡ್ತೀನಿ’ ಎಂದೇ ಮಾಡಿದ್ದಾರೆ. ಕಷ್ಟವಾದರೂ ಇಷ್ಟಪಟ್ಟು ಡ್ಯೂಪ್ ಇಲ್ಲದೆ ಮಾಡಿದ್ದಾರೆ.

ರಾಜ್‌ಕುಮಾರ್ ಅವರಿದ್ದಾಗ ಸಿನೆಮಾಗಳಲ್ಲಿ ತರುತ್ತಿದ್ದ ಸಾಮಾಜಿಕ ಬದ್ಧತೆಯನ್ನು ಅವರದೇ ಸಂಸ್ಥೆ ಮರೆಯುತ್ತಿದೆಯಾ? ಆದರೆ ಆ ಕುಟುಂಬದವರಿಗೆ ಸಿನೆಮಾದೆಡೆಗಿರುವ ಶ್ರದ್ಧೆ, ಬದ್ಧತೆ ಒಂದಿನಿತೂ ಕಡಿಮೆಯಾಗಿಲ್ಲ. ಇಲ್ಲಿ ಹುಟ್ಟುವ ಮತ್ತೊಂದು ಪ್ರಶ್ನೆ ಎಂದರೆ ಚಿತ್ರದ ನಿರ್ದೇಶಕನಾದವನೇ ಕಥೆ, ಚಿತ್ರ ಕಥೆ, ಸಂಭಾಷಣೆ ಎಲ್ಲವನ್ನೂ ಬರೆ ಯಬೇಕಾ? ಒಬ್ಬ ಎಷ್ಟೂಂತ ನಿಭಾಯಿಸಬಲ್ಲ? ಸೂರಿ ಮುಗ್ಗರಿ ಸಿದ್ದು ಇಲ್ಲಿಯೇ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 08 May, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books