Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಪಕ್ಷದ ಕಚೇರಿ ಬಿಟ್ಟ ರಾಜಕಾರಣವೆಂಬುದು ಮಠದ ಗದ್ದುಗೆಗಳ ಸುತ್ತ ತಿರುಗತೊಡಗಿತಲ್ಲ?

ಕೆಟ್ಟಿದ್ದಾಳೆ.

ಮಠ ಸೇರ‍್ತಿದಾಳೆ. ಕೆಟ್ಟು ಪಟ್ಟಣ ಸೇರು ಎಂಬ ಮಾತು \'ಕೆಟ್ಟು ಮಠ ಸೇರು\' ಎಂದು ಬದಲಾಗುತ್ತಿದೆ, ಸೋನಿಯಾ ಗಾಂಧಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಬರುತ್ತಿರುವುದರ ಹಿನ್ನೆಲೆಯಲ್ಲಿ.

In fact, ನಮ್ಮ ರಾಜಕಾರಣಿಗಳು ನುಗ್ಗಿ ಮಠಗಳನ್ನು ಹಾಳು ಮಾಡಿದರಾ? ಮಠಗಳೇ ಇವರನ್ನು ಒಳಕ್ಕೆ ಬಿಟ್ಟುಕೊಂಡು ಕುಲಗೆಟ್ಟುಹೋದವಾ? ನಿಶ್ಚಯಿಸುವುದು ಕಷ್ಟ. ಈ ಮುಂಚೆಯೂ ಮಠಗಳು ವಿಧಾನಸೌಧಕ್ಕೆ ಕಾವಿ ತೊಡಿಸುತ್ತಿದ್ದವು. ಹಿಂದೆ ಗುಂಡೂರಾಯರು, ವೀರೇಂದ್ರ ಪಾಟೀಲರು, ಮೊಯಿಲಿ, ಬಂಗಾರಪ್ಪ ಮುಂತಾದವರು ಮಠಗಳನ್ನು ಕೊಂಚ ದೂರವೇ ಇರಿಸಿದ್ದರು. ಎಸ್ಸೆಂ ಕೃಷ್ಣ ಕಾಲದಲ್ಲಿ ವಿದ್ಯಾಮಂತ್ರಿಯಾಗಿದ್ದ ಎಚ್.ವಿಶ್ವನಾಥ್ ಮಠಗಳ ವಿರುದ್ಧ ದೊಡ್ಡ ಗುಡುಗನ್ನೇ ಹಾಕಿದರು. ಈ ಮಧ್ಯೆ ದೇವೆಗೌಡರ ಕಾಲದಲ್ಲಿ ಕೊಂಚ ಮಟ್ಟಿಗೆ ಬಾಲಗಂಗಾಧರ ಸ್ವಾಮಿಗಳು ಸರ್ಕಾರದ ಕೆಲಸಗಳಲ್ಲಿ ಪ್ರಭಾವಿಯಾದರಾದರೂ, ಅದು ಅತಿರೇಕಕ್ಕೆ ಹೋಗಲಿಲ್ಲ. ಶೃಂಗೇರಿ ಮಠಕ್ಕೆ ಬಂದ ಇಂದಿರಾಗಾಂಧಿ ಅಲ್ಲಿ ಕೋಟ್ಯಂತರದ ಕಪ್ಪು ಹಣ ಇರಿಸಿದ್ದಾರೆ ಎಂಬ ಮಾತು ಕೇಳಿ ಬಂದಿತು. ಆದರೆ ಅದಕ್ಕೆ ಯಾವ ಸಾಕ್ಷ್ಯವೂ ಸಿಗಲಿಲ್ಲ. ಅಲ್ಲದೆ, ಶೃಂಗೇರಿಯ ಸ್ವಾಮಿಗಳು ಒಂದರ್ಥದಲ್ಲಿ ಲೌಕಿಕ ಪ್ರಪಂಚದವರೇ ಅಲ್ಲ. ಇನ್ನು ಕೋಡಿ ಮಠ. ಅದರ ಸ್ವಾಮಿ ಒಬ್ಬ ಹಸೀ ಸುಳ್ಳ, ಖದೀಮ. ಇವರೆಲ್ಲರಿಗೂ ಮುಂಚೆ ಅವನೊಬ್ಬನಿದ್ದ: ಉರವಕೊಂಡೆ ಸ್ವಾಮಿ ಅಂತ. ಮಹಾನ್ ಲೋಲುಪ, ಕುಡುಕ, ಅಕ್ಷರಶಃ ತಲೆ ಹಿಡುಕ. ಆದರೆ ಅವನಿಗೆ ರಾಜಕಾರಣಿಗಳ ಪೈಕಿ ಜೆ.ಎಚ್.ಪಟೇಲರನ್ನು ಬಿಟ್ಟರೆ ಉಳಿದಂತೆ ಸ್ನೇಹವಿದ್ದುದೆಲ್ಲ ಬೀಚಿ, ಅ.ನ.ಕೃ, ತ.ರಾ.ಸು, ಮಾಸ್ಟರ್ ಹಿರಣ್ಣಯ್ಯ ಮುಂತಾದವರೊಂದಿಗೆ. ತನ್ನೆಲ್ಲ ವಿಲಾಸಗಳ ನಡುವೆಯೇ ಉರವಕೊಂಡೆ ಸ್ವಾಮಿ ಜ್ಞಾನಿಯಾಗಿದ್ದ. ವಿಷಯ ತಿಳಿದುಕೊಂಡಿದ್ದ. ಅವನಿಗಿಂತ ಕೊಂಚ ಕಡಿಮೆ ಜ್ಞಾನಿಯಾಗಿದ್ದ, ಕಡಿಮೆ ಲೋಲುಪನಾಗಿದ್ದ ಹುಬ್ಬಳ್ಳಿಯ ಮೂರು ಸಾವಿರ ಮಠದ ಸ್ವಾಮಿ ಪಟ್ಟೇಗಾರರು-ಲಿಂಗಾಯತರ ಒಡ್ಡೋಲಗದಲ್ಲಿ ಕುಳಿತೆದ್ದನಾದರೂ ದೊಡ್ಡ ಮಟ್ಟದ ರಾಜಕಾರಣಕ್ಕೆ ಕೈ ಹಾಕಲಿಲ್ಲ.

ಕೈ ಹಾಕಿದ ಮೊದಲಿಗರೆಂದರೆ ಪೇಜಾವರ ಸ್ವಾಮಿ. ಅವರು ನೇರವಾಗಿ ದಿಲ್ಲಿ ಮಟ್ಟದ ಅರಸರ ಹೆಗಲಿಗೇ ಕೈ ಹಾಕಿದರು. ವಾಜಪೇಯಿ, ಅದ್ವಾನಿಯವರಿಂದ ಹಿಡಿದು ಎಲ್ಲರೊಂದಿಗೂ ಬೆರೆತು \'ರಾಜಕೀಯಾಧ್ಯಾತ್ಮ\' ಬೋಧಿಸಿದರು. ಇವತ್ತು ಬಿಜೆಪಿಯ ವಲಯದಲ್ಲಿ ಅವರ ಮಾತು ನಡೆಯುತ್ತದೆ. ಕೆಲವೊಮ್ಮೆ ಬಿಜೆಪಿ ವಕ್ತಾರರಂತೆಯೂ ಮಾತನಾಡುತ್ತಾರೆ. ಅದನ್ನು ಅವರ ಶಿಷ್ಯರೇ ಅನೇಕರು ಇಷ್ಟಪಡುವುದಿಲ್ಲ. ಇನ್ನು ಮಂತ್ರಾಲಯದವರು. ಅವರಿಗೆ ಆಂಧ್ರದ ಮುಜರಾಯಿ ಇಲಾಖೆ, ಉತ್ತರಾದಿ ಮಠಗಳೊಂದಿಗೆ ವ್ಯಾಜ್ಯ ಮಾಡುತ್ತಾ, ಮಂತ್ರಾಲಯಕ್ಕೆ ಬಂದ ವಿಐಪಿಗಳನ್ನು ಗುರುತಿಸಿ ವೃಂದಾವನದ ಮುಂದೆ ನಿಲ್ಲಿಸಿ ಫಲ ಮಂತ್ರಾಕ್ಷತೆ ಕೊಟ್ಟು ಕಳಿಸಿದರೆ-ಅಷ್ಟೇ ತೃಪ್ತಿ.
ಆದರೆ ಕೆಲವರಿದ್ದಾರೆ: ಗದುಗಿನ ಡಂಬಳ ಸ್ವಾಮಿಗಳು, ಬಿಜಾಪುರದ ಸಿದ್ಧೇಶ್ವರ ಸ್ವಾಮಿಗಳು, ಸಾಣೆಹಳ್ಳಿ ಗುರುಗಳು, ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮಿಗಳು-ಇವರು ರಾಜಕಾರಣದತ್ತ ಬಂದು ತಿರಸ್ಕೃತ, ಉಪೇಕ್ಷೆಯ ದೃಷ್ಟಿಯಿಟ್ಟುಕೊಂಡು ಸಮಾಜದ ಒಳಿತು-
ಅಧ್ಯಾತ್ಮದ ಬಗ್ಗೆ ಕಳಕಳಿ ಇಟ್ಟುಕೊಂಡು ಗೌರವಯುತ ಬಾಳುವೆ ಮಾಡುತ್ತಿದ್ದಾರೆ.

ಆ ಪುಣ್ಯಾತ್ಮ, ವೀರಭದ್ರ ಚನ್ನಮಲ್ಲ ಸ್ವಾಮಿ: ಆತ ಸ್ವಾಮಿಯಾ, ವಿರಾಗಿಯಾ, ದಗಾಕೋರನಾ, ಊಸರವಳ್ಳಿಯಾ, ಹರಟೆಕೋರನಾ, ಅಡ್ನಾಡಿ ಭಾಷಣಕೋರನಾ-ಬಲ್ಲವರೇ ಬಲ್ಲರು. ಆದರೆ ದೊಡ್ಡ ಮಟ್ಟದಲ್ಲಿ ರಾಜಕಾರಣದ ರಾಡಿಗೆ ಕಾರಣರಾದವರು ಸುತ್ತೂರು ಮತ್ತು ಸಿದ್ಧಗಂಗೆಯ ಡಾ.ಶಿವಕುಮಾರ ಸ್ವಾಮಿಗಳು. ಸುತ್ತೂರು ಸ್ವಾಮಿಗಳು ನನಗೆ ಪರಿಚಯವಿದ್ದಾರೆ. ಅವರಿಗೆ ವಿದ್ವತ್ತು ಇದೆ. ಅನೇಕ ವಿದ್ಯಾಸಂಸ್ಥೆಗಳನ್ನು ತುಂಬ ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ನನಗೆ ಗೊತ್ತಿದ್ದ ಮಟ್ಟಿಗೆ ಲೋಲುಪರಲ್ಲ: ದುರಭ್ಯಾಸಗಳೂ ಇಲ್ಲ. ಆದರೆ ಯಡಿಯೂರಪ್ಪನಿಗೆ ಹೇಳಿ ಮಾಡಿಸಿದ ಪಿಂಪ್ ಸಿದ್ಧಲಿಂಗಸ್ವಾಮಿಯನ್ನು ಕಾಣಿಕೆಯಾಗಿ ಕೊಟ್ಟು, ನಾಳೆ ಅವನನ್ನು ವರುಣಾ ಕ್ಷೇತ್ರದ ಶಾಸಕರನ್ನಾಗಿ ಮಾಡಿದ ಬಹುದೊಡ್ಡ ಪಾಪ ಸುತ್ತೂರು ಶ್ರೀಗಳ ಮೇಲಿದೆ. ಅವರಿಗೆ ಮೊದಲು ಸರ್ಕಾರಗಳ ಕೃಪೆ ಬೇಕಿತ್ತು, ಏಕೆಂದರೆ ಕೇವಲ ದುಡ್ಡು ಬಾಚುವುದಕ್ಕೆಂದೇ ಕಾಲೇಜುಗಳನ್ನು ಆರಂಭಿಸಿದ್ದರಿಂದ ಆ ದಂಧೆಯನ್ನು protect ಮಾಡಿಕೊಳ್ಳಲು ಮಂತ್ರಿ ಮಾಗಧರನ್ನು ಓಲೈಸಿದರು. ಆಮೇಲಾಮೇಲೆ ಒಂದು ಕಡೆ ದುಡ್ಡು ಬೆಳೆಯುವುದರೊಂದಿಗೆ ಸಮಾಜದಲ್ಲಿ ತಮ್ಮ ಖ್ಯಾತಿ ಮತ್ತು ಮತದಾರರ ಮೇಲೆ \'ಹಿಡಿತ\' ಬೆಳೆಯಿತೆಂಬ ಭ್ರಮೆ ಅವರಲ್ಲಿ ಬೆಳೆಯಿತು. ಅಂಥ ಭ್ರಮೆ ಹುಟ್ಟಲು ಕಾರಣರಾದವರೇ ಯಡಿಯೂರಪ್ಪ. ದಿನ ಬೆಳಗಾದರೆ ಮೈಸೂರಿಗೆ ಓಡಿ ಹೋಗಿ ಸ್ವಾಮಿಗಳ ಪಾದಕ್ಕೆ ಬಿದ್ದು ಬಿದ್ದೇ ಅವರನ್ನು ಪ್ರಮುಖರನ್ನಾಗಿ ಮಾಡಿದರು. ಈಗ ಶಾಶ್ವತವಾಗಿ ಇಪ್ಪತ್ತು ವರ್ಷ neglect ಮಾಡಿದರೆ ಮಾತ್ರ ಸುತ್ತೂರು ಮಠದ ರಾಜಕೀಯ ಪ್ರಭಾವ ಕಡಿಮೆಯಾಗಲು ಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಇದರಲ್ಲಿ ತಪ್ಪಿತಸ್ಥರು ಯಾರು? ಸುತ್ತೂರು ಶ್ರೀಗಳೋ-ಯಡಿಯೂರಪ್ಪನೋ?

ಇನ್ನು ಸಿದ್ಧಗಂಗೆಯ ಹಿರಿಯರು.
ಅವರ ಬಗ್ಗೆ ನಿಂದನೆಯ ಮಾತು ಬರೆಯಲು ಖೇದವಾಗುತ್ತದೆ. ಒಂದು ನೂರಾ ಐದು ವರ್ಷ ತುಂಬಿದ ಶ್ರೀಗಳು ಜೀವನದಲ್ಲಿ ಮಾಡಿದ ಬಹುದೊಡ್ಡ ಕೆಲಸವೆಂದರೆ ವಿದ್ಯಾದಾನ ಮಾಡಿದ್ದು. ಅವರಿಂದ ನಾನೂ ಉಪಕೃತನೇ. ಅವರದೇ ಶಾಲೆಯಲ್ಲಿ ಹೈಸ್ಕೂಲು ಕಲಿತಿದ್ದೇನೆ. ಚಿಕ್ಕಂದಿನಲ್ಲಿ ನಮಗೆ ಸಿದ್ಧಗಂಗಾ ಮಠಕ್ಕೇ ಹೋಗುವುದೇ ಒಂದು ಸಂಭ್ರಮವಾಗಿರುತ್ತಿತ್ತು. ಜಾತಿಯ ಪ್ರಸ್ತಾಪವೇ ಇಲ್ಲದೆ, ಊರೂರು ತಿರುಗಿ, ಕಂತಿ ಭಿಕ್ಷೆ ಮಾಡಿ ವಿದ್ಯಾಸಂಸ್ಥೆ ಕಟ್ಟಿ ಅನೇಕರ ಬದುಕು ಉದ್ಧಾರ ಮಾಡಿದ ಅವರನ್ನು ನಾನೊಬ್ಬ ಮೇಷ್ಟ್ರನ್ನು ಗೌರವಿಸಿದಂತೆ ಗೌರವಿಸುತ್ತೇನೆ.

ಆದರೆ ಅವರಿಗೆ ರಾಜಕಾರಣ ಬೇಕಿತ್ತಾ?

\'\'ಅವರಿಗೆ ನಿಜಕ್ಕೂ ಯಾವುದೂ ಅರ್ಥವಾಗುವುದಿಲ್ಲ. ಸುತ್ತಲಿನ ಶಿಷ್ಯರೇ ಏನಾದರೂ ಹೇಳಿ ಹಾದಿ ತಪ್ಪಿಸುತ್ತಾರೆ\'\' ಎಂದು ಸಮರ್ಥಿಸಿಕೊಳ್ಳುವವರಿದ್ದಾರೆ. ಇದು ಒಪ್ಪಲಾಗದ ಮಾತು. ಪರಮ ಅಸಹ್ಯದ ಮನುಷ್ಯ ರೇಣುಕಾಚಾರ್ಯನನ್ನು ಮಂತ್ರಿ ಮಾಡಿ ಎಂದು ಶ್ರೀಗಳು ಹಟ ಹಿಡಿದದ್ದು \'ಸುತ್ತಲಿನ\'ವರ ಒತ್ತಾಯದಿಂದಲಾ? ಸೋಮಣ್ಣನನ್ನು ರಕ್ಷಿಸಿದ್ದು? ಬಿಡಿ, ಯಡಿಯೂರಪ್ಪ ಜೈಲಿನಿಂದ \'ತಪ್ಪಿಸಿ\'ಕೊಂಡು ಬಂದು ಆಸ್ಪತ್ರೆಗೆ ಸೇರಿದರೆ, ತೀರ ಸಿದ್ಧಗಂಗೆಯಿಂದ ಬಂದು \'ನಿನಗೆ ಜಯ ದೊರಕಲಿ\' ಎಂದು ಆಶೀರ್ವದಿಸಿ, ಆಸ್ಪತ್ರೆಯಿಂದ ನಿರ್ಗಮಿಸುತ್ತಾರೆಂದರೆ, ಅದೂ \'ಸುತ್ತಲಿ\'ನವರ ಒತ್ತಡವಾ? ಅವರ ಆಶೀರ್ವಾದವೇ ಹುಸಿಯಾಗಿ ಹೋಯಿತು. ಆನಂತರವೂ ಯಡಿಯೂರಪ್ಪ ಇಪ್ಪತ್ತಾರು ದಿನ ಅಗ್ರಹಾರದ ಜೈಲಿನಲ್ಲಿ ಭಜನೆ ಹೊಡೆಯಬೇಕಾಯಿತು. ಅಲ್ಲಿಗೆ ಸಿದ್ಧಗಂಗೆಯ ಯತಿವರೇಣ್ಯರ, ನಡೆದಾಡುವ ಭಗವಂತನ ಆಶೀರ್ವಾದವೇ ಸುಳ್ಳಾಗಿ ಹೋಯಿತಲ್ಲ? ತುಂಬ ದೊಡ್ಡವರೆನ್ನಿಸಿಕೊಂಡವರ ಇಂಥ ಕ್ರಿಯೆಗಳು ಅವರೆಡೆಗೆ ಸಮಾಜಕ್ಕಿರುವ ಗೌರವವನ್ನು ಕಡಿಮೆ ಮಾಡಿ ಬಿಡುತ್ತದೆ. ಅಷ್ಟೇ ಅಲ್ಲ, \'ಸಿದ್ಧಗಂಗೆ ಶ್ರೀಗಳೇ ಆಸ್ಪತ್ರೆಗೆ ಬಂದು ನೋಡಿದರೆಂದರೆ, ಯಡಿಯೂರಪ್ಪ ನಿಜಕ್ಕೂ ದೊಡ್ಡವನಿರಬಹುದು, ಆತನ ವಿರುದ್ಧ ಹೂಡಿದ ಕೇಸೇ ಸುಳ್ಳಿರಬಹುದು\' ಎಂಬ ಕಲ್ಪನೆ ಅರಿವಿಲ್ಲದ ಅಮಾಯಕರಿಗೆ ಮೂಡಿ ಬಿಡುತ್ತದೆ. ಸಮಾಜಕ್ಕೆ ಇಂಥ ಸಂದೇಶವೇ ಅಪಾಯಕಾರಿಯಲ್ಲವೆ? ಇಂಥ ಯಾವ ಕೆಲಸಗಳಿಗೂ ಕೈ ಹಾಕದೆ ಬದುಕುತ್ತಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಲ್ಲವೆ? ಹಾಲಿ-ಮಾಜಿ ಮುಖ್ಯಮಂತ್ರಿಗಳಿಬ್ಬರೂ ಹೋಗಿ ಆಣೆ ಮಾಡಲು ನಿಂತಾಗ, \'\'ನ್ಯಾಯ-ಅನ್ಯಾಯವನ್ನ ಮಂಜುನಾಥ ನೋಡಿಕೊಳ್ಳಲಿ\'\' ಎಂದು ಎದ್ದು ಹೋದವರು ಅವರು. ಇಡೀ ಕೇಸನ್ನು ಧರ್ಮಸ್ಥಳದ ಮಂಜುನಾಥನ ಕೋರ್ಟಿಗೇ ಬಿಟ್ಟುಕೊಟ್ಟರು.

ಸುತ್ತೂರು ಹಾಗೂ ಸಿದ್ಧಗಂಗೆ ಶ್ರೀಗಳಿಗಿಂತ ದೊಡ್ಡ ಆಷಾಢಭೂತಿಯೆಂದರೆ, ಸಿರಿಗೆರೆ ಮಠದ ಸ್ವಾಮಿ. ಆ ಕಂಪ್ಯೂಟರ್ ಸ್ವಾಮಿಯ ಬಗ್ಗೆ ಬರೆಯದಿರುವುದೇ ಲೇಸು.

ಈಗ ಸಿದ್ಧಗಂಗೆಗೆ ಸೋನಿಯಾಗಾಂಧಿ ಬರುತ್ತಾಳೆ. ಇಟಲಿಯ ಕ್ಯಾಥೋಲಿಕ್ ಕ್ರೈಸ್ತೆಯೂ, ಫಾರಸೀ ತಂದೆಯ-ಕಾಶ್ಮೀರಿ ಬ್ರಾಹ್ಮಣ ತಾಯಿಯ ಮಗನೂ ಆದ ರಾಜೀವ್ ಗಾಂಧಿಯ ಪತ್ನಿಯೂ ಆದ, ಅಂತರಂಗದಲ್ಲಿ ಜಾತ್ಯತೀತಳೂ ಆಗಿರಬಹುದಾದ ಸೋನಿಯಾಗೆ ಎಲ್ಲ ಬಿಟ್ಟು ಸಿದ್ಧಗಂಗೆ ಶ್ರೀಗಳು ನೂರ ಐದನೇ ವರ್ಷಕ್ಕೆ ಕಾಲಿಟ್ಟಾಗ ಅವರ ಆಶೀರ್ವಾದ ಬೇಕು ಅಂತ ಏಕನ್ನಿಸಿದೆ?
ಏಕೆಂದರೆ, ಕರ್ನಾಟಕದಲ್ಲಿ ಸುಮಾರು 17% ಲಿಂಗಾಯತರಿದ್ದಾರೆ. ಅವರಲ್ಲಿ ಹೆಚ್ಚಿನವರು ಕಳೆದ ಬಾರಿ ಯಡಿಯೂರಪ್ಪನ ಕಾರಣಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿದ್ದರು. ಅದರರ್ಥ ಈಗಲೂ ಬೆಂಬಲಿಸುತ್ತಾರೆ ಅಂತ ಅಲ್ಲ. ಬಿಜೆಪಿಯಿಂದ ಹೊರಬಿದ್ದು ಹೊಸ ಪಕ್ಷ ಕಟ್ಟಿದರೆ ಅಥವಾ ಸಿಬಿಐ ಕುಣಿಕೆಗೆ ಬಿದ್ದು ವರ್ಷಗಟ್ಟಲೆ ಯಡಿಯೂರಪ್ಪ ಜೈಲು ಸೇರಿದರೆ ಒಂದು ಕಾಲಕ್ಕೆ ಕಾಂಗ್ರೆಸ್‌ನ ಬೆಂಬಲಿಗರೇ ಆಗಿದ್ದ ಲಿಂಗಾಯತರ ಮತಗಳನ್ನು ಮತ್ತೆ ಕಾಂಗ್ರೆಸ್ಸಿನೆಡೆಗೆ ತಂದುಕೊಳ್ಳಬಹುದು ಎಂಬ ಲೆಕ್ಕಾಚಾರ ಉತ್ತರ ದಿಕ್ಕಿನ ರಾಣಿಯದು. ಅಲ್ಲದೆ ಕರ್ನಾಟಕದಲ್ಲಿ ಮೂರು ವರ್ಷಗಳಿಂದ ಸರ್ಕಾರವಿಲ್ಲದೆ, ಅಧಿಕಾರವಿಲ್ಲದೆ ಎಕ್ಕುಟ್ಟಿ ಹೋಗಿರುವ, ಜಿಲ್ಲಾ ಮತ್ತು ಪಂಚಾಯ್ತಿ ಮಟ್ಟದಲ್ಲಿ ಕಾರ್ಯಕರ್ತರೇ ಇಲ್ಲದಂತಾಗಿರುವ ಕಾಂಗ್ರೆಸ್ಸಿಗೆ ಸೋನಿಯಾ ಜೀವ ತುಂಬಬೇಕಿದೆ.

ರಾಜ್ಯ ಕಾಂಗ್ರೆಸ್ ನಾಯಕತ್ವದ ವಿಷಯಕ್ಕೆ ಬಂದರೆ \'\' ಎತ್ತು ಏರಿಗೆಳೆಯಿತು: ಎಮ್ಮೆ ನೀರಿಗೆಳೆಯಿತು\'\' ಎಂಬಂತೆ ಸಿದ್ರಾಮಯ್ಯ ಮತ್ತು ಪರಮೇಶ್ವರ್ ವರ್ತಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ think tankನಂತೆ ವರ್ತಿಸಬಲ್ಲ ಜನರೇ ಇಲ್ಲ. ಇಲ್ಲಿ ಕಾಂಗ್ರೆಸ್ಸಿಗೆ ನಾಯಕರ ಕೊರತೆಯಿಲ್ಲ. ಆದರೆ ಪ್ರತಿ ನಾಯಕನಿಗೂ ಮುಖ್ಯಮಂತ್ರಿಯಾಗುವ ಆಸೆ. ಅದಕ್ಕಾಗಿ ಪಕ್ಷ ಕಟ್ಟಬೇಕು ಎಂಬ ನಿಜವಾದ ಚಡಪಡಿಕೆಯೂ ಇಲ್ಲ. ಮೂರೇ ವರ್ಷದ ಆಳ್ವಿಕೆಯಲ್ಲಿ ಬಿಜೆಪಿ ಮತ್ಯಾರೂ ಕೆಡಿಸಿಕೊಳ್ಳದಷ್ಟು ಹೆಸರು ಕೆಡಿಸಿಕೊಂಡಿದೆ. ಅತಿ ಹೆಚ್ಚು ಜೈಲು ಕಂಡ, ಸಿಕ್ಕು ಬಿದ್ದ, ಒದ್ದೋಡಿಸಲ್ಪಟ್ಟ ಮಂತ್ರಿಗಳು ಅಂತ ಯಾವುದಾದರೂ ರಾಜ್ಯದಲ್ಲಿದ್ದರೆ ಅದು ಕರ್ನಾಟಕದಲ್ಲಿ. ಹೀಗಿರುವಾಗ,ಜೆಡಿಎಸ್ ಒಂದು pocketಗಷ್ಟೆ ಸೀಮಿತವಾದ ಪಕ್ಷವಾಗಿ ಉಳಿದಿದೆ. ಮಂಡ್ಯ, ಹಾಸನ, ಮೈಸೂರಿನಂತಹ ಜಿಲ್ಲೆಗಳಲ್ಲಿ ನಿಜಕ್ಕೂ ಪ್ರಭಾವಿಯಾಗಿರುವ ದೇವೆಗೌಡರನ್ನು \'ಹುಲಿ ಹೊಡೆಯುವ\' ಶೂರನಾದ ಒಕ್ಕಲಿಗ ನಾಯಕನಿಲ್ಲ.

ಆದರೆ ಮತ್ತೆ ಅಧಿಕಾರಕ್ಕೆ ಬರಬೇಕು ಅಂದರೆ ದೊಡ್ಡದೊಂದು ಫೋರ್ಸ್ ಮತ್ತು ಛರಿಷ್ಮಾದೊಂದಿಗೆ ಒಬ್ಬ ನಾಯಕ ಕಾಂಗ್ರೆಸ್ಸಿನಲ್ಲಿ ಸಕ್ರಿಯನಾಗಿ ಕಾಣಿಸಿಕೊಳ್ಳಬೇಕು. ಕೇವಲ ಸಿದ್ಧಗಂಗೆ ವಿಭೂತಿ ಕಾಂಗ್ರೆಸ್ಸನ್ನು ಗೆಲ್ಲಿಸಲಾರದು. ರಾಜ್ಯಾದ್ಯಂತ ಇರುವ ಲಿಂಗಾಯತ ಮಠಗಳಲ್ಲೇ ಒಡಕಿದೆ. ಹೇಗೆ ಒಬ್ಬ ರಾಜಕಾರಣಿಗೊಬ್ಬ ಸ್ವಾಮಿ ಇದ್ದಾನೋ, ಹಾಗೆಯೇ ಪ್ರತಿ ಮಠಕ್ಕೂ ಒಂದು ರಾಜಕೀಯ ಪಕ್ಷದ ಕಡೆಗೆ ಒಲವು ನಿಲುವುಗಳಿವೆ. ವಯಸ್ಸಿನಲ್ಲಿ ಅತಿ ಹಿರಿಯರಾದ ಸಿದ್ಧಗಂಗೆಯವರನ್ನು ಒಲಿಸಿಕೊಂಡು ಅವರ ನೇತೃತ್ವದಲ್ಲಿ ಉಳಿದೆಲ್ಲ ಮಠಗಳನ್ನೂ ಸಂಘಟಿಸಿ, ಆ ಮೂಲಕ ಲಿಂಗಾಯತ ಜನಾಂಗವನ್ನು ಮತ್ತೆ ತನ್ನೆಡೆಗೆ ಒಲಿಸಿಕೊಳ್ಳುವ ಸೋನಿಯಾರ ಪ್ರಯತ್ನ ಯಾರಿಗಾದರೂ ಅರ್ಥವಾಗುವಂತಹುದೇ.

ಕೊನೆಯದಾಗಿ ಉಳಿಯುವ ಪ್ರಶ್ನೆಯೆಂದರೆ, ರಾಜಕೀಯವೆಂಬುದು ಪಕ್ಷದ ಕಚೇರಿಗಳಿಂದ ಮಠದ ಗದ್ದುಗೆಗಳ ಸುತ್ತ ಪ್ರದಕ್ಷಿಣೆ ಹಾಕತೊಡಗಿತಲ್ಲಾ? How bad.

ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 May, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books