Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

ಗೆಳೆಯ ಮುನಿರತ್ನ ಹೇಳಿದ ಕಥೆ ಮತ್ತು ಇಡ್ಲಿ ವಡ ಅಂಡ್ ಮರ್ಡರ್!

ಮೊದಲಿಗೆ ಒಂದು ಸಂತಸದ ಸುದ್ದಿ ಹೇಳಿ ಬಿಡುತ್ತೇನೆ.

ಈ ಶೈಕ್ಷಣಿಕ ವರ್ಷಕ್ಕೆ \'ಪ್ರಾರ್ಥನಾ ಸ್ಕೂಲ್‌\'ಗೆ ಪ್ರವೇಶ ಪಡೆದಿರುವ ಮಕ್ಕಳ ಸಂಖ್ಯೆ 6920. ಇದು ಪ್ರೀ.ಕೇ.ಜಿ ಕ್ಲಾಸಿನಿಂದ ಹಿಡಿದು ಎಸ್.ಎಸ್.ಎಲ್.ಸಿ ವರೆಗಿನ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ. ಇದು ಹತ್ತು ವರ್ಷದಲ್ಲಿ ನನ್ನ \'ಪ್ರಾರ್ಥನಾ\' ಸಾಧಿಸಿದ್ದು. ಈ ಬಾರಿ ನಮ್ಮ ಶಾಲೆಯದು ದಶಮಾನೋತ್ಸವ. ಹತ್ತು ವರ್ಷದ ಹಿಂದೆ ಶಾಲೆ ಆರಂಭಿಸಿದಾಗ ಸೇರಿದ ಮಕ್ಕಳು ಕೇವಲ 350 ಜನ, ಒಂದೇ ಬಿಲ್ಡಿಂಗು. ಹಿಂಬದಿಯಲ್ಲಿ ಆಡಲಿಕ್ಕೆಂದು ಪುಟ್ಟ ಮೈದಾನ. ಈಗ ಸಿಬ್ಬಂದಿಯ ಸಂಖ್ಯೆಯೇ 400. ಬಿಲ್ಡಿಂಗುಗಳು ಎಂಟು. ನಾವು ಕೊಡುತ್ತಿರುವ ಉಚಿತ ವಿದ್ಯಾಭ್ಯಾಸದ ಮೊತ್ತ 36 ಲಕ್ಷ ರುಪಾಯಿ. ಯಾವತ್ತು ಯಾವ ಹೊತ್ತಿನಲ್ಲಿ ಒಬ್ಬ ಕಳ್ಳನಿಗೆ ಕೊಟ್ಟರೂ ನನ್ನ ಶಾಲೆ 200 ಕೋಟಿಗೆ ಬಾಳುತ್ತದೆ. ಆದರೆ ಯಾವ ಕಳ್ಳನಿಗಾದರೂ ಯಾಕೆ ಕೊಡಲಿ? ಶಾಲೆ ಕಟ್ಟಿದ್ದು ಕದ್ದ ಹಣದಿಂದಲ್ಲ. ಇದನ್ನು ಕಟ್ಟಿದವರು ಶೀಲಕ್ಕ, ಉಮೇಶ ಹೆಗಡೆ ಮತ್ತು ಕರ್ಣ ಬೆಳಗೆರೆ. ಅವನ ಪೂರ್ತಿ ಹೆಸರು ಆದಿತ್ಯೋದಯ ಕರ್ಣ. ಆರ್.ಬೆಳಗೆರೆ. ಅಂದ್ಹಾಗೆ ನಮ್ಮಲ್ಲಿ ಒಟ್ಟು ತರಗತಿಗಳ ಸಂಖ್ಯೆ 200. ಒಂದು ಕ್ಲಾಸಿನಲ್ಲಿ ಕೇವಲ 35 ವಿದ್ಯಾರ್ಥಿಗಳು. ಪ್ರೀ ನರ್ಸರಿ ತರಗತಿಗಳಲ್ಲಿ ಒಂದು ಕ್ಲಾಸಿಗೆ ಇಬ್ಬರು ಶಿಕ್ಷಕಿಯರು. ಅಂದರೆ 17 ಮಕ್ಕಳಿಗೆ ಒಬ್ಬ ಶಿಕ್ಷಕಿ ದೊರೆಯುತ್ತಾರೆ. ಹತ್ತು ಮಕ್ಕಳಿಗೆ ಒಬ್ಬ helper (ಆಯಾ) ದೊರೆಯುತ್ತಾರೆ. ಮೂವತ್ತು ಜನ ಸೆಕ್ಯುರಿಟಿ ಗಾರ್ಡ್‌ಗಳಿದ್ದಾರೆ. ಪ್ರತಿ ಕಟ್ಟಡಕ್ಕೂ, ಪ್ರತಿ ಅಂತಸ್ತಿಗೂ ಸೂಪರ್‌ವೈಸರ್‌ಗಳಿದ್ದಾರೆ. ಇಷ್ಟು ದೊಡ್ಡ ಸಂಸ್ಥೆಯ administration ನೋಡಿಕೊಳ್ಳಲು ಇರುವ Administrative ಕೇವಲ ಏಳು ಜನ. ನಮ್ಮ ಉಮೇಶ್ ಹೆಗಡೆಯ ನಾಯಕತ್ವಕ್ಕೆ, ಶೀಲಕ್ಕನ leadershipಗೆ, ಮೇಡಂ ಪ್ರಫುಲ್ಲಾ ಅವರ ಗಂಭೀರ ಹಿರಿತನಕ್ಕೆ, ಆದಿತ್ಯೋದಯ ಕರ್ಣನ ಶ್ರದ್ಧೆಗೆ, ಪ್ರತಿಯೊಬ್ಬ ಸಿಬ್ಬಂದಿಯ ಶ್ರಮಕ್ಕೆ ನನ್ನ ನಮಸ್ಕಾರ. ಈ ತನಕ ನಮ್ಮ ಶಾಲೆಯ ಒಂದೇ ಒಂದು ಮಗು ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾಗಿಲ್ಲ. ಕಳೆದ ಸಲ ನಮ್ಮ ಶಾಲೆಯ ಮಗು ಯೋಗಪ್ರಿಯ ಎಸ್.ಎಸ್.ಎಲ್.ಸಿಯಲ್ಲಿ ತೆಗೆದ ಒಟ್ಟು ಅಂಕ 98.4%. ಈ ಶಾಲೆಯ ಇಡೀ ಒಂದು ವರ್ಷದ ಆರ್ಥಿಕ ವಹಿವಾಟು ಹದಿಮೂರೂವರೆ ಕೋಟಿ. ಈ ತನಕ ನಾವು ಸರಕಾರದಿಂದ ಏನನ್ನೂ ಪಡೆದಿಲ್ಲ. ಯಾವುದೇ ಒಬ್ಬನೇ ಒಬ್ಬ ವ್ಯಕ್ತಿಯಿಂದ ಒಂದು ರುಪಾಯಿ ಡೊನೇಷನ್ ಪಡೆದಿಲ್ಲ. ನಮ್ಮ ಶಾಲೆ ಹೊಂದಿರುವ ಬಸ್ಸುಗಳ ಸಂಖ್ಯೆ ಹನ್ನೆರಡು. ಪ್ರತಿ ನಿತ್ಯ ಶಾಲೆಗೆ ಮಕ್ಕಳನ್ನು ತಂದು ಬಿಡುವ ಖಾಸಗಿ ಟ್ಯಾಕ್ಸಿಗಳ ಸಂಖ್ಯೆ 200. ಅಪ್ಪ-ಅಮ್ಮ ತಂದು ಬಿಡುವ-ಕರೆದೊಯ್ಯುವ ಮಕ್ಕಳ ಸಂಖ್ಯೆಯನ್ನು ಪತ್ತೆ ಮಾಡುವುದು ಕಷ್ಟ. ಕೆಲ ಮಕ್ಕಳು ಸೈಕಲ್ಲಿನಲ್ಲಿ ಬರುತ್ತಾರೆ. ಶಿಕ್ಷಕ-ಶಿಕ್ಷಕಿಯರ ಪೈಕಿ ಅಂದಾಜು ಅರವತ್ತು ಜನ ಟೂ ವೀಲರ್‌ಗಳ ಮೇಲೆ ಬರುತ್ತಾರೆ. ಅವರ ಒಂದು ಮಗುವಿಗೆ ನಮ್ಮಲ್ಲಿ ಉಚಿತ ಶಿಕ್ಷಣ ನೀಡಲಾಗುವುದು. ಪ್ರತಿ ಸಿಬ್ಬಂದಿಗೂ ವರ್ಷಕ್ಕೆ ಒಂದು ದಿರಿಸು (ಸೀರೆ ಅಥವಾ ಪ್ಯಾಂಟ್ ಷರ್ಟ್), ಒಂದು ಊಟ, ಒಂದು ಪಿಕ್‌ನಿಕ್-ಎಲ್ಲ ಉಚಿತ. ಯೂನಿಫಾರ‍್ಮ್ ಹಾಕಿ, ಊಟ ಕಟ್ಟಿಕೊಟ್ಟು ನೀವು ನಿಮ್ಮ ಮಗುವನ್ನು ಶಾಲೆಯ ಬಾಗಿಲಿಗೆ ತಲುಪಿಸಿದರೆ ಸಾಕು. ಅದರ ಪುಸ್ತಕ, ಬ್ಯಾಗು, ಪೆನ್ಸಿಲ್ಲು, ಕಂಪಾಸ್ ಬಾಕ್ಸು-ಎಲ್ಲವನ್ನೂ ನಾವೇ ಉಚಿತವಾಗಿ ಕೊಡುತ್ತೇವೆ. ಮಗು ಡಾನ್ಸ್ (ಉದಾಹರಣೆಗೆ)ಗೆ ಆಯ್ಕೆಯಾದರೆ, ಅದರ ದಿರಿಸು ನಾವೇ ಕೊಡುತ್ತೇವೆ. ಮಲ್ಲಕಂಬ, ಭಾಷಾ ಶುದ್ಧಿಗಾಗಿ ಅಮರ ಕೋಶ, ತುಂಬ ವಿಭಿನ್ನವಾದ rope ಮಲ್ಲಕಂಬ (ಹುಡುಗಿಯರಿಗಾಗಿ), ಕಂಸಾಳೆ, rope exercise, ಯೋಗ ಹಾಗೂ craft ಸೇರಿದಂತೆ ಪ್ರತಿಯೊಂದನ್ನೂ ನಮ್ಮ summer campನಲ್ಲಿ ಉಚಿತವಾಗಿ ಹೇಳಿಕೊಡಲಾಗುವುದು. ನಿಮಗೆ ನೆನಪಿರಬೇಕು, 2005ರಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಏಕೈಕ ಶಾಲೆಯನ್ನಾಗಿ \'ಪ್ರಾರ್ಥನಾ ಸ್ಕೂಲ್‌\'ನ ಆಯ್ಕೆ ಮಾಡಿ ನಮಗೆ computer excellency award ನೀಡಿತು. ಖುದ್ದಾಗಿ ರಾಷ್ಟ್ರಪತಿ ಅಬ್ದುಲ್ ಕಲಾಂರಿಂದ ನಾನು ಅವಾರ್ಡು ಪಡೆದೆ.

ಸಾಕಾ?

ಈ ಶಾಲೆಯಿಂದ ನಾನು ಲಾಭ ಪಡೆದಿಲ್ಲ. ನನ್ನ ಮಗ ಮತ್ತು ನಾನು ಸಂಬಳ ತೆಗೆದುಕೊಳ್ಳುತ್ತೇವೆ. ಅತಿ ಹೆಚ್ಚಿನ ಸಂಬಳ ಪ್ರಿನ್ಸಿಪಾಲ್ ಶೀಲಕ್ಕನಿಗೆ ಸಲ್ಲುತ್ತದೆ. ಆಕೆಗೆ ಓಡಾಡಲಿಕ್ಕೆ ಒಂದು ಪುಟ್ಟ ಕಾರು. ಶಾಲೆಯಿಂದ ಆಗಿರುವ ಏಕೈಕ ಸಮಸ್ಯೆಯೆಂದರೆ ಪದ್ಮನಾಭನಗರದಲ್ಲಿ ನಿಮಗೆ ಸುಲಭಕ್ಕೆ ಮನೆ ಬಾಡಿಗೆಗೆ ಸಿಕ್ಕುವುದಿಲ್ಲ. ಟ್ರಾಫಿಕ್ ಜಾಮ್ ಎಂಬುದು ನಿತ್ಯದ ಸರ್ಕಸ್.

ಇದನ್ನೆಲ್ಲ ನಾನು ನನ್ನ ಹೆಗ್ಗಳಿಕೆ ಅಂದುಕೊಂಡಿಲ್ಲ. ಅಂಥ ಬುದ್ಧಿವಂತನೇನೂ ಅಲ್ಲದ, ಆದರೆ ಹೃದಯವಂತನಾದ, ಬರೆಯುವ ಒಂದೇ ಒಂದು ಕಸುಬನ್ನ ಕೊಂಚ ಚೆನ್ನಾಗಿ ಕಲಿತಿರುವ ನನಗೆ ಕನ್ನಡದ ಜನ ಕೈ ತುಂಬ ನೀಡಿದ್ದಾರೆ. ನನ್ನ ಯೋಗ್ಯತೆಗೆ ಮೀರಿ ಕೊಟ್ಟಿದ್ದಾರೆ. ಅವರ ಒಂದು ಹೊತ್ತಿನ ತುತ್ತು ಉಳಿಸಿ ನನ್ನ \'ಪತ್ರಿಕೆ\' ಕೊಂಡು ನನ್ನನ್ನು ಪೋಷಿಸಿದ್ದಾರೆ. ಪೊರೆದಿದ್ದಾರೆ. \'Go ahead guroo\' ಎಂದು ಪತ್ರೀ ಸಲ ನುಡಿದು ನನ್ನ ಬೆನ್ನಿಗೆ ನಿಂತಿದ್ದಾರೆ. ಓದುಗರೊಂದಿಗಿನ ಅಕ್ಷರ ಮೈತ್ರಿಯೆಂಬುದು ನನ್ನ ಪಾಲಿಗೆ ಎಂದೂ ಬತ್ತದ ಸಮುದ್ರ. ನಾನು ಬೊಗಸೆ ತುಂಬಿಕೊಂಡವನು. ನನ್ನ ಊಟ ಮುಗಿದು, ದಾಹ ಇಂಗಿ, ಬೊಗಸೆಯಲ್ಲಿ ಉಳಿದ ಕೊಂಚ ನೀರನ್ನು ಸಮುದ್ರಕ್ಕೆ ಅರ್ಪಿಸಿದ್ದೇನೆ. ಆ ಅರ್ಪಣೆಯ ಹೆಸರು \'ಪ್ರಾರ್ಥನಾ ಸ್ಕೂಲ್‌\'. ಇಂಥ ಹತ್ತು ಶಾಲೆ ನಾಡ ತುಂಬ ಕಟ್ಟುವ ಕನಸಿದೆ. ಸಾಯುವ ಮುಂಚೆ ಸಾಕಾರಗೊಳಿಸಿಕೊಂಡಿಯೇನು. ಇರಿ, ನೀವು ಹೀಗೇ ಬೆನ್ನಿಗಿರಿ.

ವಿವಾದ, ಜಗಳ, ಭಿನ್ನಾಭಿಪ್ರಾಯ, ಯುದ್ಧ, ಇರಲಾರದೆ ಇರುವೆ ಬಿಟ್ಟುಕೊಳ್ಳೋದು ನನ್ನ ಜಾಯಮಾನ. ಇದ್ಯಾವುದನ್ನೂ ಮಾಡದೆಯೇ ಪತ್ರಿಕೋದ್ಯಮ ಮಾಡುವವರು ಯಾರಾದರೂ ಇದ್ದರೆ ಅವರು ತಿಳಿಸಾರು, ಕಾದು ಆರಿಸಿದ ನೀರು ಕುಡಿದು, ಎರಡು ಸಲ ಬೇಯಿಸಿದ ಸಣ್ಣಕ್ಕಿ ಅನ್ನ ತಿಂದು, ಚಾಪೆಯ ಮೇಲೆ ಮಲಗಿದ ಸಂತರಾಗಿರಬೇಕು. ಅವರ ನೆತ್ತಿ ಮತ್ತು ಇತರೆ ಕೂದಲು ಬೆಳೆಯುವ ಜಾಗೆಗಳು ತಣ್ಣಗಿರಲಿ.

\'\'ನೀನು ಭಯಂಕರ ಕುಡುಕನಂತೆ? Sex maniac ಅಂತೆ?\'\' ಎಂದು Facebookನಲ್ಲಿ ಕೇಳಿದ ಮಿತ್ರರೊಬ್ಬರಿಗೆ ನಯವಾಗಿಯೇ ಉತ್ತರಿಸಿದೆ.

\'\'ಒಬ್ಬ ಮನುಷ್ಯ ಐವತ್ನಾಲ್ಕು ವರ್ಷಗಳಲ್ಲಿ 70 ಪುಸ್ತಕ ಬರೆದು, ನೂರಾರು ಗಂಟೆ ಮಾತನಾಡಿ, ಪ್ರಾರ್ಥನಾ ಸ್ಕೂಲ್‌ನಂಥ ಸಂಸ್ಥೆ ಕಟ್ಟಿ, ಸ್ಕಾಲರ್‌ಷಿಪ್ ಕೊಟ್ಟು, ಭಯಾನಕ ರೋಗದಿಂದ ನರಳುತ್ತಿರುವವರಿಗೆ ಸಾಯುವ ತನಕ ಔಷಧಿಕೊಡಿಸಬಲ್ಲನೆಂದರೆ,my friend... ಅವನ ಕುಡಿತಕ್ಕೆ, ಅವನ sexಗೆ ಮತ್ತು ಅವನಲ್ಲಿನ maniacಗೆ thanks ಹೇಳಬೇಕಲ್ಲವೆ? ನಾನು ನೀನಂದುಕೊಂಡಷ್ಟು ಕೆಟ್ಟವನೂ ಅಲ್ಲ. ನಾನು ಭ್ರಮಿಸಿಕೊಂಡಷ್ಟು ಒಳ್ಳೆಯವನೂ ಅಲ್ಲ. Eh?\'\'

ಇದೆಲ್ಲ ಪ್ರವರ ಇರಲಿ.

ಈ ಮಧ್ಯೆ ನನ್ನ ಗೆಳೆಯ ಮುನಿರತ್ನಂ ಸಿಕ್ಕಿದ್ದರು. ಮುನಿ ಮತ್ತು ನಾನು ಅಜಮಾಸು ಇಪ್ಪತ್ತು ವರ್ಷಗಳ ಗೆಳೆಯರು. \'ಕರ್ಮವೀರ\'ಕ್ಕಾಗಿ ಸಂದರ್ಶಿಸಲೆಂದು ಮೊಟ್ಟ ಮೊದಲ ಬಾರಿಗೆ ಅವರನ್ನು ನಾನು ಭೇಟಿಯಾದದ್ದು ಸದಾಶಿವನಗರದ ಸ್ವಿಮಿಂಗ್ ಪೂಲ್ ಆವರಣದಲ್ಲಿ. ಅವತ್ತು ಅವರು ಪಿಂಕ್ ಅಂಗಿ ಮತ್ತು ಬೂದುಗಪ್ಪು ಪ್ಯಾಂಟ್ ಧರಿಸಿದ್ದರು. ಬಲವಾದ ಆಳು. ಮನಸಿನಲ್ಲಿ ಕಲ್ಮಶವಿಲ್ಲದ, ಮಿದುಳಿನಲ್ಲಿ ಯೋಚನಾಶಕ್ತಿಯಿರುವ ಸಹೃದಯಿ ಮನುಷ್ಯ. ಆಮೇಲೆ ಮುನಿ ಹಂತ ಹಂತವಾಗಿ ಬೆಳೆದದ್ದನ್ನು ನಾನು ಗಮನಿಸುತ್ತಲೇ ಬಂದೆ. ತೀರ ಬಡತನ ಕಂಡಿರುವ, ಹಸಿವನ್ನು ಅನುಭವಿಸಿ ಗೊತ್ತಿರುವ, ಬದುಕಿನ ಯಶಸ್ಸನ್ನು ಒಂದೊಂದೇ ಮೆಟ್ಟಿಲು ಹತ್ತಿ ಬಂದಿರುವ ಮುನಿ ಇವತ್ತು ನಿರ್ಮಾಪಕ, ರಾಜಕಾರಣಿ, ಇತ್ತೀಚೆಗಷ್ಟೆ ಕಾಂಟ್ರಾಕ್ಟ್ ಕೆಲಸ ಬಿಟ್ಟಿರುವ ಕೋಟ್ಯಧೀಶ. \'\'ಒಂದು ಪೋಲಿಯೋ ಡ್ರಾಪ್‌ನಷ್ಟೂ ಆಲ್ಕೋಹಾಲ್ ಕುಡಿದಿಲ್ಲ ಸರ್!\'\' ಅನ್ನುವ ಮುನಿಗೆ ನನ್ನ ಮೇಲೆ ಅದೇಕೆ ಆ ಪರಿಯ ಪ್ರೀತಿಯೋ ಗೊತ್ತಿಲ್ಲ. ಸಂತಸವೆಂದರೆ, ಮುನಿಯಷ್ಟೇ ಆತ್ಮೀಯರಾದ ರಾಕ್‌ಲೈನ್ ವೆಂಕಟೇಶ್ ಅವರ ಮಗ, ಮುನಿರತ್ನ ಅವರ ಮಗಳನ್ನು ಮದುವೆಯಾದದ್ದು. ಈಗ ಮುನಿ ಮತ್ತು ರಾಕ್-ಇಬ್ಬರೂ ಅಜ್ಜಂದಿರು. ಅವರಿಗೆ ಅವಳಿ ಮೊಮ್ಮಕ್ಕಳು.

ಇರಲಿ, ಹೀಗೇ ಮಾತಿನ ಮಧ್ಯೆ ಮುನಿ ಒಂದು ಕಥೆ ಹೇಳಿದರು. ಮಾಡಿದರೆ ಅದ್ಭುತವಾದ ಸಿನೆಮಾ ಆಗಬಲ್ಲ ಕಥೆ ಅದು. ಆದರೆ ಅವರು ಎದ್ದು ಹೋದ ಮೇಲೆ ಆ ಕಥಾವಸ್ತು ನನ್ನೊಳಗೆ ಮಿಸುಕತೊಡಗಿತು. ಒದೆಯತೊಡಗಿತು. ದೊಡ್ಡ ಕಾದಂಬರಿಯೇನಲ್ಲ. ಅದಕ್ಕೊಂದು ಹೆಸರು ತೋಚಿದಾಗ ನನಗೇ ಖುಷಿಯಾಯಿತು : \'\'ಇಡ್ಲಿ ವಡ ಮತ್ತು ಡೆಡ್ಲಿ ಮರ್ಡರ್!\'\' ಹಾಗಂತ ಒಂದು writing padನ ಮೊದಲ ಹಾಳೆಯ ಮೇಲೆ ಬರೆದಿಟ್ಟೆ. ಪಾತ್ರಗಳು ಕಣ್ಣ ಮುಂದೆ ಸುಳಿದಾಡತೊಡಗಿದವು. ಎಲ್ಲಿಂದಲೋ ಒಂದು ಪುಸ್ತಕ ತರಿಸಿಕೊಟ್ಟಳು ಚೇತನಾ. ಇತ್ತೀಚೆಗಷ್ಟೆ ಬಿ.ವಿ.ರಮೇಶ್ ಮೂಲಕ ಪರಿಚಿತರಾದ ಇನ್ನೊಬ್ಬ ಮಿತ್ರ ಸುರೇಶ್ ಅವರು ಒಂದು ಅದ್ಭುತವಾದ document ತರಿಸಿಕೊಟ್ಟರು.

ಆದರೆ ಅನುಭವ?

ನಾನು ಲಾಡ್ಜ್‌ಗಳಲ್ಲಿ ಕೆಲಸ ಮಾಡಿದ್ದೇನೆ, room by ಆಗಿ, ರಿಸೆಪ್ಷನಿಸ್ಟ್ ಆಗಿ. ಆದರೆ ಇಡ್ಲಿ-ವಡ ಮಾರುವ ಹೊಟೇಲಿನ ವಾತಾವರಣ, ಅದರ ಆಂತರ್ಯ, ಕಾರ್ಯವಿಧಾನ, ಚಟುವಟಿಕೆ, ಬೆಳಗಿನ ಜಾವದ ಸಿದ್ಧತೆ, ಬರುವ ಗಿರಾಕಿಗಳ ಅವಶ್ಯಕತೆ, ಅವರ ವರ್ತನೆ, ಮಾಣಿಗಳೆಂದು ಕರೆಯಲ್ಪಡುವ ಸಪ್ಲಯರ್‌ಗಳ ಬದುಕು, ಇದೆಲ್ಲಕ್ಕೂ ಮಿಕ್ಕಿ ಇಡ್ಲಿ-ವಡ ಹೊಟೇಲಿನ ಒಳ ಮನೆಯ ಘಮ, ಮಾಲೀಕನ ಫಜೀತಿ, ಮ್ಯಾನೇಜರುಗಳ ನಿಷ್ಠೆ, ಮಾಲೀಕ ಬೆಳೆಯುತ್ತ ಹೋಗುವ ರೀತಿ, ಚಿಕ್ಕದಾಗಿ ಪ್ರಾರಂಭವಾಗುವ ಒಂದು ಹೊಟೇಲೇ ಮುಂದೆ chain of hotels ಆಗಿ ಬಿಡೋ ಪವಾಡ, ಈ ಮಧ್ಯೆ ಶುರುವಾಗಿರುವ ready food packets, ಅವುಗಳಿಗೆ ಇರುವ ವಿದೇಶಿ ಮಾರುಕಟ್ಟೆ, ಒಂದು brand create ಮಾಡುವ ವಿಧಾನ-ಹೀಗೆ ಎಲ್ಲವನ್ನೂ ಕ್ರಮಬದ್ಧವಾಗಿ ಅಧ್ಯಯನ ಮಾಡಿ ಆನಂತರವೇ ಕಾದಂಬರಿ ಬರೆಯಲು ಕೂತರೆ ಸರಿ ಎಂದು ನಿರ್ಧರಿಸಿದ್ದೇನೆ.

ಭೇಟಿಯಾದರೆ ನಿಮಗೇ ಗೊತ್ತಾದೀತು : ನಾನು ತುಂಬ ತಮಾಷೆಯ ಮನುಷ್ಯ. ಸರಸ ಸಂಭಾಷಣೆ, ಹರಟೆ ನನಗೆ ತುಂಬ ಇಷ್ಟವಾದಂಥವು. ಮೊದಲೆಲ್ಲ ಇದು ಕಾಫಿ ಹೊಟೇಲುಗಳಲ್ಲಿ ಯಥೇಚ್ಛವಾಗಿ ನಡೆಯುತ್ತಿತ್ತು. ಬಳ್ಳಾರಿಯಲ್ಲಿ ಈ ತೆರನಾದ ಹರಟೆಗೆಂದೇ \'ಆದರ್ಶ ಕಾಫಿ ಬಾರ್‌\' ಇತ್ತು. ಬೆಳಿಗ್ಗೆ ಅಲ್ಲಿ ಕಾಫಿ ಹೀರಿ, ಅದರ ಎದುರಿಗಿನ ರಸ್ತೆ ಪಕ್ಕದ ಮೋಟು ಗೋಡೆಯ ಮೇಲೆ ಕುಳಿತು ಹರಟತೊಡಗಿದೆವೆಂದರೆ- ಯಾವನ ಹೆಂಡತಿ ಯಾರೊಂದಿಗೆ ಓಡಿ ಹೋದಳು ಎಂಬುದರಿಂದ ಹಿಡಿದು ಅಮೆರಿಕದ ಅಧ್ಯಕ್ಷ ಈ ಬಾರಿ ಯಾರಾಗಬಹುದು-ಎಂಬುದರ ತನಕ ಓಹೋ... ಮಾತೇ ಮಾತು. ಅದು ಬಿಟ್ಟರೆ, ನಾನು ಓದಿದ ವೀರಶೈವ ಕಾಲೇಜಿಗೆ ಹತ್ತಿರದಲ್ಲಿದ್ದ \'ಸುಧಾ ಹೊಟೇಲು\'. ಅಲ್ಲೂ ಅಷ್ಟೆ, ಗಂಟಾನುಗಟ್ಟಲೆ ಹರಟೆ. ಒಂದು ವ್ಯತ್ಯಾಸವೆಂದರೆ, ಅವತ್ತಿಗೆ ವೀರಶೈವ ಕಾಲೇಜಿನಲ್ಲಿ \'ಔಷಧಿ\'ಗಾಗುವಷ್ಟು ಎಂದು consider ಮಾಡಬಹುದಾದಷ್ಟು ಹುಡುಗಿಯರಿದ್ದು, ಅವರಲ್ಲೇ ಒಬ್ಬಿಬ್ಬರು ಧೈರ್ಯಸ್ಥೆಯರು ಜೊತೆಗೆ ಬರುತ್ತಿದ್ದರು. ಮಾತು ನೂರು ದಿಕ್ಕಿಗೆ ಹರಿಯುತ್ತಿತ್ತು. Still, ಕಾಫಿ ಹೊಟೇಲುಗಳು ನಮ್ಮ ಸ್ನೇಹದ, ಚರ್ಚೆಯ, ಪ್ರೀತಿಯ, ಪಾಸ್ ಟೈಮ್‌ನ, ಗಾಸಿಪ್‌ನ ಕೇಂದ್ರಗಳಾಗಿದ್ದವು.

ಈ ಮಧ್ಯೆ ನಾವು ಕೆಲವು ಗೆಳೆಯರು ಗಂಟು ಬಿದ್ದದ್ದು ಬಳ್ಳಾರಿಯ ವಾರ‍್ಡ್ಲಾ ಹೈಸ್ಕೂಲಿನ ಎದುರಿಗಿದ್ದ ಒಂದು ಅತಿ ಚಿಕ್ಕ ಅನಾಮಧೇಯ ಹೊಟೇಲಿಗೆ. ಅಲ್ಲಿಗೆ ಪ್ರತಿ ನಿತ್ಯ ಹೋಗುತ್ತಿದ್ದವರೆಂದರೆ ನಾನು, ಕೃಷ್ಣ, ಫಯಾಜ್, ಫಸೀ, ತಾರೋ ಮತ್ತು ಶರ್ಮ. ಕೆಲವೊಮ್ಮೆ ನಮ್ಮೆಲ್ಲರಿಗಿಂತ ಸ್ಫುರದ್ರೂಪಿಯಾಗಿದ್ದ ಮುಷ್ತಾಕ್ ಕೂಡ ಬರುತ್ತಿದ್ದ. ಅದೇ ಹೊಟೇಲಿಗೆ ಹೋಗಲು ನಮಗಿದ್ದ ಒಂದೇ ಕಾರಣವೆಂದರೆ, ಅದರ ಪಕ್ಕದಲ್ಲೇ ಶೋಭಾಳ ಮನೆಯಿತ್ತು ಎಂಬುದು. ಶುದ್ಧ ಉಡುಪಿ ಬ್ರಾಹ್ಮಣರ ಮನೆಯ ಶೋಭಾಳನ್ನು ಪಕ್ಕಾ ಮುಸಲ್ಮಾನನಾದ ಫಯಾಜ್ ಪ್ರೀತಿಸುತ್ತಿದ್ದ. ಆ ಹೊಟೇಲಿನಿಂದ ಶೋಭಾಳ ಮನೆಯ ಕಿಟಕಿ ಕಾಣಿಸುತ್ತಿತ್ತು. ಆದರೆ ಆರು ಜನ ಹೊಟೇಲಿಗೆ ಹೋದರೆ ಬಿಲ್ ಕೊಡುವವರ‍್ಯಾರು? ಎಲ್ಲರೂ ಭೂಕಾ ಫಕೀರರೇ.

\'\'ಏನು ಬೇಕು?\'\' ಹೊಟೇಲಿನ ಮಾಲೀಕ ಬಂದು ಕೇಳುತ್ತಿದ್ದ. ಮಾಲೀಕನೂ ಆತನೇ. ಸಪ್ಲೈಯರೂ ಆತನೇ.

\'\'ಸ್ವಾಮಿ, one by sex ಕಾಫಿ ಕೊಡಿ\'\' ಅನ್ನುತ್ತಿದ್ದೆವು. ಹಣೆ ಚಚ್ಚಿಕೊಂಡು ಹೋಗುತ್ತಿದ್ದ ಆತ ಒಂದು ಕಾಫಿ, ಐದು ಖಾಲಿ ಕಪ್ಪು ತಂದಿಡುತ್ತಿದ್ದ. ಸಮಸ್ಯೆಯೆಂದರೆ ಆ ಹೊಟೇಲಿಗೆ ಬೇರೆ ಒಂದು ನರಪಿಳ್ಳೆಯೂ ಗಿರಾಕಿಯಾಗಿ ಬರುತ್ತಿರಲಿಲ್ಲ. ನಾವು ದಿನವಿಡೀ one by sex ಕಾಫಿ ಕುಡಿದು ಕಾಫಿ ಕಪ್‌ಗಳಲ್ಲಿ ಸಿಗರೇಟಿನ ಬೂದಿ ಉದುರಿಸುತ್ತಾ ಫಯಾಜ್‌ನ ಪ್ರೇಮ ಫಲಿಸಲಿ ಅಂತ ಅಲ್ಲಾಹುವಿಗೆ \'ದುವಾ\' ಕೇಳುತ್ತ, ಕಾಡು ಹರಟೆ ಹೊಡೆಯುತ್ತ ಕೂಡುತ್ತಿದ್ದೆವು. ಕೊನೆಗೊಂದು ದಿನ ಆ ಮಾಲೀಕ ಕೈಯಲ್ಲೇ ಬರೆದ ಬೋರ್ಡು ಹಾಕಿದ. \'\'ಸಿಗರೇಟಿನ ಬೂದಿ ಕಾಫಿ ಕಪ್‌ನಲ್ಲಿ ಕೊಡವಿದರೆ, ash trayನಲ್ಲಿ ಕಾಫಿ ಕೊಡಲಾಗುವುದು!\'\' ಈ ಮಧ್ಯೆ ಫಯಾಜ್ ಶೋಭಾಳನ್ನು ಹಾರಿಸಿಕೊಂಡು ಹಗಿ ಮದುವೆಯಾಗಿ ಬಿಟ್ಟ. ಪೊಲೀಸರು ಆ ಪ್ರೇಮ ಪೂಜೆಗೆ ನೆರವಾದ ನಮ್ಮನ್ನೆಲ್ಲ ಹುಡುಕಾಡಿ ಬಡಿದರು. ಅದರ ಶೋಕ ಆಚರಿಸಲು ನಾವು ಮತ್ತದೇ ಹೊಟೇಲಿಗೆ ಹೋದರೆ ಅದರ ಮಾಲೀಕ ಐದು ಫುಲ್ ಕಾಫಿ ಕೊಟ್ಟು ಎಲ್ಲರ ಕೈಯಿಂದಲೂ ಬರೆಸಿಕೊಂಡ.

\'ನಾವು ಇನ್ನು ಮೇಲೆ ಈ ಹೊಟೇಲಿಗೆ ಬರುವುದಿಲ್ಲ!\'

ಎಷ್ಟೋ ವರ್ಷಗಳ ನಂತರ ಲೆಕ್ಚರರನಾಗಿದ್ದ ನಾನು ನನ್ನ ರಿಸರ್ಚ್ guide ಡಾ.ರಾಜಶೇಖರ್ ಅವರೊಂದಿಗೆ ಅಚಾನಕ್ಕಾಗಿ ಆ ಹೊಟೇಲಿಗೆ ಹೋದರೆ, ಮುದುಕ ಮಾಲೀಕ ಒಂದು ಫ್ರೇಮ್ ಹಾಕಿದ ಪ್ರಶಸ್ತಿ ಪತ್ರದಂತಹುದನ್ನು ತಂದು ಎದುರಿಗಿಟ್ಟ. ಅದು ನಾನು ಬರೆದು ಕೊಟ್ಟ ಪತ್ರ! ಅದಕ್ಕೆ ಆ ಪುಣ್ಯಾತ್ಮ frame ಹಾಕಿಸಿ ಇಟ್ಟಿದ್ದ. ಅಂದ ಮೇಲೆ ನಾನು ಯಾವ ಪರಿ ಹಾವಳಿ ಹಾಕಿರಬೇಕೋ ಊಹಿಸಿ!

ಬಿಡಿ, ಮುಂದೆ ಹೊಟೇಲುಗಳ ಸಹವಾಸ ಬಿಟ್ಟು ಬಾರ್‌ಗಳಿಗೆ ಗಂಟು ಬೀಳುವಂತಾಯಿತು. ಈಗ ಇತ್ತೀಚೆಗೆ ನಾವು ಆರು ಜನರ ಪೈಕಿ ಎಲ್ಲರಿಗಿಂತ fit ಆಗಿದ್ದ ಕೃಷ್ಣ ತೀರಿಕೊಂಡ : ಅದು ಗುಂಡಿಗೆ ಬಲಿ. ದುಬೈನಲ್ಲಿದ್ದ ತಾರೋಗೆ ಕುಷ್ಠರೋಗ ಬಂದು ಅವನೂ ಕಳೆದ ತಿಂಗಳು ತೀರಿಹೋದ. ಫಯಾಜ್-ಶೋಭಾ ಬೆಂಗಳೂರಿನಲ್ಲೇ ಇದ್ದಾರೆ. ಸುಂದರಾಂಗ ಮುಷ್ತಾಕ್ ಆಸ್ಟ್ರೇಲಿಯಾದಲ್ಲಿದ್ದಾನೆ. ಫಸೀ ಮತ್ತು ಶರ್ಮ ಎಲ್ಲಿದ್ದಾರೋ?

ನಾನೀಗ ಮತ್ತೆ ಹೊಟೇಲುಗಳನ್ನು ಹುಡುಕಿಕೊಂಡು ಹೋಗಬೇಕಿದೆ.

Just for \'ಇಡ್ಲಿ ವಡ ಅಂಡ್ ಡೆಡ್ಲಿ ಮರ್ಡರ್‌\'!

-ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 01 May, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books